Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಸ್ವಾತಂತ್ರ್ಯ, ಸಮಾನತೆ : ಪ್ರೊ. ಜಿ.ಎಚ್.ನಾಯಕರ ಲೇಖನ

ಮೀಸಲಾತಿ ಸ್ವಾತಂತ್ರ್ಯ, ಸಮಾನತೆ : ಪ್ರೊ. ಜಿ.ಎಚ್.ನಾಯಕರ ಲೇಖನ

- Advertisement -
ಕಣ್ಣಗಾಯಕ್ಕೊಂದು ಕನ್ನಡಿ
ಸರಣಿ ಸಂಪಾದಕರು: ವಿಕಾಸ್ ಆರ್.ಮೌರ್ಯ
- Advertisement -

1980ರಲ್ಲಿ ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಹೋರಾಟವು ಉಗ್ರಸ್ವರೂಪ ತಾಳಿದಾಗ ಬೆಂಗಳೂರಿನ ಲಾಲ್‍ಬಾಗ್ ಗಾಜಿನ ಮನೆಯಂಗಳದಲ್ಲಿ ದಲಿತ ಸಂಘರ್ಷ ಸಮಿತಿಯವರು ಮೀಸಲಾತಿ ಪರವಾಗಿ ಅಖಿಲ ಭಾರತ ಮಟ್ಟದ ಸಮ್ಮೇಳನವನ್ನು 1981ರ ಏಪ್ರಿಲ್ 18,19 ರಂದು ಹಮ್ಮಿಕೊಂಡಿದ್ದರು. ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಾಡಿನ ಖ್ಯಾತ ಚಿಂತಕರಾದ ಪ್ರೊ. ಜಿ.ಎಚ್.ನಾಯಕರವರು ಆಡಿದ ಅಧ್ಯಕ್ಷೀಯ ಭಾಷಣದ ಕೆಲವು ಮುಖ್ಯಾಂಶಗಳೇ ಈ ಲೇಖನ. ಮೀಸಲಾತಿಯನ್ನು ಅರ್ಹತೆ ಮತ್ತು ಪ್ರತಿಭೆಯೆಂಬ ಭ್ರಮೆಗಳಿಂದ ವಿರೋಧಿಸುವವರಿಗೆ ಪ್ರೊಫೆಸರ್‍ರವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಜೊತೆಗೆ ಹಿಂದುಳಿದ ಜಾತಿಗಳಿಗೊಂದು ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಪ್ರಜಾಪ್ರಭುತ್ವ ರಾಜ್ಯ ಪದ್ಧತಿ ಜಾರಿಗೆ ಬಂದಾಗ ಒಂದು ಬಗೆಯ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಜಾಪ್ರಭುತ್ವ ಹುಟ್ಟಿಸಿದ ಆಸೆಗಳಿಗೂ ನಮ್ಮ ದೇಶದ ಚರಿತ್ರೆ ಬೆಳೆದುಬಂದ ರೀತಿಗೂ ತಕ್ಕ ಹೊಂದಾಣಿಕೆ ಇರಲಿಲ್ಲ. ಅಗತ್ಯವಾದ ಹೊಂದಾಣಿಕೆ ಉಂಟಾಗುವಂತೆ ಮಾಡುವುದಕ್ಕೆ ಬೇಕಾದ ಪ್ರಾಮಾಣಿಕ ಪ್ರಯತ್ನವಾಗಲಿ, ವಿವೇಕಯುತವಾದ ನಡವಳಿಕೆಯಾಗಲಿ ನಮ್ಮ ಸರಕಾರದಲ್ಲಾಗಲಿ ಅದನ್ನು ನಡೆಸುವ ರಾಜಕಾರಣಿಗಳಲ್ಲಾಗಲಿ ಇಷ್ಟು ಕಾಲವಾದರೂ ಕಂಡುಬಂದಿಲ್ಲ. ಹಾಗಾಗಿ ದೇಶದಲ್ಲಿ ವಿಷಮ ಸ್ಥಿತಿ ಬಹುತೇಕ ಎಲ್ಲ ರಂಗಗಳಲ್ಲಿಯೂ ನಿರ್ಮಾಣವಾಗಿದೆ.

ಕೆಲವು ಅಸಂಬದ್ಧಗಳು ಇನ್ನೂ ಉಳಿದುಕೊಂಡಿವೆಯಾದರೂ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಗಳ ಮೌಲ್ಯಗಳನ್ನು ಆಧರಿಸಿಯೇ ನಮ್ಮ ಸಂವಿಧಾನ, ಕಾನೂನುಗಳು ಬಹುಪಾಲು ರೂಪಿತವಾದವು. ಆದರೆ ಈ ಮೌಲ್ಯಗಳು ಜನತೆಯ ದಿನನಿತ್ಯದ ಬದುಕಿನಲ್ಲಿ ಎಷ್ಟರಮಟ್ಟಿಗೆ, ಹೇಗೆ ಅನುಷ್ಠಾನಕ್ಕೆ ಬಂದವು? ಆ ಮೌಲ್ಯಗಳೆಲ್ಲ ಬಹುಪಾಲು ಜನಕ್ಕೆ ಅದರಲ್ಲೂ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಶತಶತಮಾನಗಳಿಂದ ಮನುಷ್ಯಮಾತ್ರರೆಂಬ ಗಣನೆ ಗೌರವಕ್ಕೂ ಪಾತ್ರರಾಗದಂತೆ ಈ ದೇಶದಲ್ಲಿ ಬದುಕಬೇಕಾಗಿ ಬಂದ, ನಿತ್ಯನರಕಗಳೆಂಬಂತೆ ಮೇಲುಜಾತಿಯವರ ಅಮಾನುಷ ದಬ್ಬಾಳಿಕೆಗೆ ಬಲಿಪಶುಗಳಾಗಿ ನೊಂದು ಬೆಂದು ಬಸವಳಿದಿದ್ದ, ಈಗಲೂ ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವ ನಿಮ್ನವರ್ಗ, ನಿಮ್ನ ಜಾತಿಗಳವರಿಗೆ ಕನಸಾಗಿಯೇ ಉಳಿದಿದೆ ಎಂಬುದು ಕಣ್ಣಿದ್ದವರಿಗೆ ಕಾಣಿಸುವಂತಿದೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ- ಇವು ಈ ದಲಿತರಿಗೆ ಚೆಂದದ ಮಾತುಗಳಾಗಿ ಕಾಣಿಸುತ್ತಲಿವೆಯೇ ಹೊರತು ಅನುಭವದ ಸಂಗತಿಗಳಾಗಿಲ್ಲ.

ಸಂವಿಧಾನ ರಚಿಸುವವರಿಗೆ, ಕಾನೂನು ಮಾಡುವವರಿಗೆ ಈ ಪರಿಸ್ಥಿತಿಯ ತಿಳಿವಳಿಕೆ ಇದ್ದದ್ದರಿಂದಲೇ ನಿಮ್ನವರ್ಗ, ನಿಮ್ನ ಜಾತಿಯವರೂ ಇತರ ಮೇಲುವರ್ಗ, ಮೇಲುಜಾತಿಯವರ ಸರಿಸಮಕ್ಕೆ ಬರುವುದಕ್ಕೆ ಅನುಕೂಲವಾಗಬಹುದಾದಂಥ ಕಾನೂನುಗಳನ್ನು ಮಾಡಿದರು. ಮೀಸಲಾತಿಯ ಸೌಲಭ್ಯವೂ ಅಂಥ ಉದ್ದೇಶದಿಂದಲೇ ದಲಿತರಿಗೆ ದೊರೆಯುವಂತಾಯಿತು. ಇಂಥ ಸೌಲಭ್ಯ ಇಂತಿಷ್ಟು ವರ್ಷಗಳವರೆಗೆ ಇರಬೇಕು ಎಂದು ನಮೂದಿಸಲಾಗಿತ್ತು ಎಂಬುದೂ ನಿಜ. ಆ ನಿಗದಿಯಾದ ಕಾಲಾವಧಿ ಮುಗಿದರೂ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ನಿರೀಕ್ಷಿತ ಬದಲಾವಣೆ ಕಾಣದೇ ಇರುವುದರಿಂದ ಈ ಸೌಲಭ್ಯವನ್ನು ಇನ್ನೂ ಕೆಲವು ಕಾಲ ಮುಂದುವರೆಸುವುದು ಸೂಕ್ತ ಎಂದು ಸರಕಾರ ಮತ್ತು ಜನತೆಯ ಪ್ರತಿನಿಧಿಗಳು ಭಾವಿಸಿ ಅದಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಂಡರು.

ನಿಮ್ನ ಜಾತಿ, ನಿಮ್ನ ವರ್ಗಗಳವರಿಗೆ ಇರುವ ಮೀಸಲಾತಿಯನ್ನು ವಿರೋಧಿಸುವವರು ಮುಂದಿಡುವ ವಾದದ ವೈಖರಿ ಹೀಗಿದೆ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯ ಹಕ್ಕನ್ನು ನಮ್ಮ ಸಂವಿಧಾನ ಎಲ್ಲ ಜಾತಿಮತಗಳವರಿಗೂ ಕೊಟ್ಟಿದೆ. ಅದಕ್ಕೆ ಅನುಗುಣವಾಗಿ ಕಾನೂನುಗಳನ್ನು ಮಾಡಿದ್ದಾಗಿದೆ. ಆದ್ದರಿಂದ ವ್ಯಕ್ತಿ ಸ್ವಾತಂತ್ರ್ಯ ಸಮಾನತೆಗೆ ಚ್ಯುತಿ ಬಾರದಂತೆ ದೇಶದ ಪ್ರಜೆಗಳನ್ನೆಲ್ಲ ನಡೆಸಿಕೊಳ್ಳಬೇಕಾದದ್ದು ರಾಷ್ಟ್ರಧರ್ಮವಾಗಬೇಕು. ಇರುವ ಅವಕಾಶಗಳನ್ನು ಸಮಾನವಾದ ನೆಲೆಯಲ್ಲಿ ನಿಂತು ಸ್ಪರ್ಧಿಸಿ ಪಡೆದುಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರಬೇಕು. ಅದರಲ್ಲಿ ಮೀಸಲಾತಿ ಗೀಸಲಾತಿ ಎಂವ ತಾರತಮ್ಯ ತೋರಿಸಬಾರದು. ಅದರಿಂದ ಹೆಚ್ಚಿನ ಅರ್ಹತೆ, ಪ್ರತಿಭೆ ಇರುವವರಿಗೆ ಅನ್ಯಾಯವಾಗುತ್ತದೆ. ಜಾತಿಜಾತಿಗಳಲ್ಲಿ ತಾರತಮ್ಯ ಉಳಿಸಿದಂತಾಗುತ್ತದೆ. ಜಾತ್ಯತೀತ ತತ್ವಕ್ಕೆ ಪೆಟ್ಟು ಬೀಳುತ್ತದೆ ಇತ್ಯಾದಿ..

ಇಂಥಾ ವಾದ ಮೇಲುನೋಟಕ್ಕೆ ಸರಿ ಎಂದು ಅನಿಸಿಬಿಡುತ್ತದೆ. ತತ್ವದ ನೆಲೆಯಲ್ಲಿಯೇ ನೋಡೋವಾಗ ಅದಕ್ಕೆ ಹೊಂದಿಕೊಳ್ಳುವಂತಹ ತರ್ಕದ ನೆಲೆಯಲ್ಲಿಯೇ ನೋಡಿದಾಗ ಅವರ ವಾದ ಸರಿಯಾಗಿಯೇ ಇದೆ ಎಂಬ ಭ್ರಮೆ ಹುಟ್ಟಿಸಿಬಿಡುವಂತಿದೆ. ಆದರೆ, ಈ ತತ್ವ ಈ ತರ್ಕದ ಹಿಂದೆ ಸ್ವಾರ್ಥಪರ ದೃಷ್ಟಿಯಿದೆ, ಕುತಂತ್ರದ ಮನೋವೃತ್ತಿ ಇದೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಗುಣಮಟ್ಟ, ಪ್ರತಿಬೆ ಮುಂತಾದವುಗಳ ಬಗ್ಗೆ ಅವರಿಗೆ ನಿಜವಾದ ಕಳಕಳಿ ಇಲ್ಲ, ತಮ್ಮ ಹಿತಾಸಕ್ತಿ, ತಮ್ಮ ಜಾತಿ ಮತಗಳ ಹಿತಾಸಕ್ತಿಗಳಿಗಿಂತ ದೇಶದ ಒಗ್ಗಟ್ಟಿನ ಹಿತದ ಬಗ್ಗೆ ನಮ್ಮಲ್ಲಿ ಯೋಚಿಸುವವರೇ ಕಡಿಮೆ ಎಂದು ಡಾ. ಲೋಹಿಯಾರವರು ಹೇಳುತ್ತಿದ್ದ ಮಾತು ಇವರಿಗೆ ಚನ್ನಾಗಿ ಅನ್ವಯಿಸುತ್ತದೆ.

ಮೀಸಲಾತಿಯಿಂದ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಗುಣಮಟ್ಟ, ಪ್ರತಿಭೆ ಕಡಿಮೆಯಾಗಿಬಿಡುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಗುಣಮಟ್ಟದ ಪ್ರಶ್ನೆಯನ್ನು ಬೇರೆ ರೀತಿಯಿಂದ ನೋಡಬೇಕು. ದೇಶದ ಜನಸಂಖ್ಯೆಯ ಸುಮಾರು ಐದರಲ್ಲಿ ಒಂದು ಭಾಗದಷ್ಟಿರುವ ದಲಿತರಿಗೆ ಶತಶತಮಾನಗಳ ಕಾಲದಿಂದ ವಿದ್ಯಾಭ್ಯಾಸದ ಸೌಲಭ್ಯವನ್ನು ಅಲ್ಲಗಳೆಯುತ್ತ ಬಂದ ಚರಿತ್ರೆ ನಮ್ಮದು. ಅವರು ಇರುವ ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಮಕ್ಕಳಿಗೆ ತಾವಾಗಿ ವಿದ್ಯಾಭ್ಯಾಸ ಸಾಧ್ಯತೆ ಇಲ್ಲವೇ ಇಲ್ಲ. ಸರಕಾರವೇ ವಿಶೇಷ ಸೌಲಭ್ಯ, ವಿದ್ಯಾರ್ಥಿವೇತನ ಕೊಟ್ಟರೆ ಮಾತ್ರ ಅವರ ಮಕ್ಕಳು ವಿದ್ಯಾಭ್ಯಾಸ ಮಾಡುವುದಕ್ಕೆ ಸಾಧ್ಯ. ಇಲ್ಲವಾದರೆ ದಿನನಿತ್ಯದ ಹಿಟ್ಟಿಗೆ ದಿನವಿಡೀ ದುಡಿದರೂ ಹೊಟ್ಟೆ ತುಂಬಿಸಿಕೊಳ್ಳಲಾರದ ಇವರು, ಎಂದೆಂದೂ ವಿದ್ಯಾಭ್ಯಾಸದ ಅವಕಾಶವನ್ನೇ ಪಡೆದಿರದ, ಆ ಮೂಲಕ ವಿದ್ಯಾಭ್ಯಾಸದ ಮಹತ್ವವನ್ನೇ ಅರಿಯದ ಇವರು, ತಾವಾಗಿ ತಮ್ಮ ಮಕ್ಕಳನ್ನು ಓದಿಸುವ ಸ್ಥಿತಿ ಇಲ್ಲ. ಸರಕಾರ ವಿಶೇಷ ಸೌಲಭ್ಯ ಅವಕಾಶಗಳನ್ನು ನೀಡದಿದ್ದಲ್ಲಿ ಆ ಜನ ಅವಿದ್ಯಾವಂತರಾಗಿ ಆರ್ಥಿಕವಾಗಿ ಬಡವರಾಗಿ ಸಾಮಾಜಿಕವಾಗಿ ನಿಕೃಷ್ಟರಾಗಿಯೇ ಉಳಿಯುವಂತಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳೆಂದು ಹೇಳುವ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಗಳು ಈ ದೇಶದಲ್ಲಿ ಯಾವ ಕಾಲಕ್ಕೂ ಅವರಿಗೆ ದಕ್ಕದಂತಾಗುತ್ತದೆ. ಸ್ವಾತಂತ್ರ್ಯ ಸಮಾನತೆಗಳ ಹೆಸರಿನಲ್ಲಿ ಮೀಸಲಾತಿಗಳನ್ನು ವಿರೋಧಿಸುವವರು ಇದಕ್ಕೇನನ್ನುತ್ತಾರೆ? ದಲಿತರಿಗೆ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಬೇಕಾಗಿಯೇ ಇಲ್ಲ. ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಉಳಿದ ಜಾತಿ ಮತಗಳವರ ಮಟ್ಟಕ್ಕೆ ಬರುವ ಅಗತ್ಯವೇ ಇಲ್ಲವೆಂಬಂತೆ ಅಮಾನುಷವಾದವನ್ನು ಅವರು ಮುಂದಿಡುತ್ತಾರೆಯೇ? ದೇಶದಲ್ಲಿ ಐದರಲ್ಲಿ ಒಂದರಷ್ಟು ಜನಸಂಖ್ಯೆ ಇರುವ ದಲಿತರು ಅಜ್ಞಾನದಲ್ಲಿ ದಾರಿದ್ರ್ಯದಲ್ಲಿ ಉಳಿಯುವುದಾದರೆ ವಿದ್ಯಾಭ್ಯಾಸ, ಸರಕಾರಿ ನೌಕರಿಗಳಲ್ಲಿ ಗುಣಮಟ್ಟಕ್ಕೆ ಧಕ್ಕೆಯಾಗಲಾರದೆಂದು ವಾದಿಸುವವರು ಇಡೀ ದೇಶವನ್ನೇ ಒಂದು ಘಟಕವನ್ನಾಗಿಟ್ಟುಕೊಂಡು ನೋಡಬೇಕು. ಆಗ ನಮ್ಮ ದೇಶದ ಗುಣಮಟ್ಟ, ಪ್ರಜಾಪ್ರಭುತ್ವ ರಾಷ್ಟ್ರದ ಒಟ್ಟು ಜನತೆಯ ಗುಣಮಟ್ಟ ತೀರ ಕೆಳದರ್ಜೆಯದಾಗಿಯೇ ಉಳಿಯುತ್ತದೆ ಎಂಬುದು ಗೊತ್ತಾಗುತ್ತದೆ. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸಮಾನಾವಕಾಶಗಳನ್ನು ಪಡೆಯುವ ಅವಕಾಶ ಎಂದಾದರೂ ಇದ್ದಿರಬಹುದಾದ ಪ್ರಜಾಪ್ರಭುತ್ವ ರಾಜ್ಯ ಪದ್ಧತಿಯೇ ಅರ್ಥಹೀನವಾಗಿಯೋ ಇಲ್ಲವೆ ಸಂಪೂರ್ಣವಾಗಿ ಇಲ್ಲವಾಗಿಯೋ ಹೋಗಬಹುದು. ಇದನ್ನು ಮೀಸಲಾತಿ ವಿರೋಧಿಗಳು ಅರಿಯಬೇಕು.

ಇನ್ನು ಪ್ರತಿಭೆಯ ಮಾತು. ದಲಿತರಿಗಿರುವ ಮೀಸಲಾತಿ ಪ್ರಮಾಣ ಶೇ. 18 ಇದೆ. ಅವರ ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಅಷ್ಟು ಪ್ರಮಾಣ ಅವರಿಗೆ ಹೆಚ್ಚಿನದ್ದಲ್ಲ. ಅವರಿಗೆ ಹಾಗೆ ಮೀಸಲಾತಿ ಸೌಲಭ್ಯವಿಲ್ಲದೆ ಇದ್ದರೆ ಏನಾಗುತ್ತಿತ್ತು ಎಂಬುದು ಪ್ರಶ್ನೆ. ದಲಿತರಿಗಿರುವ ಮೀಸಲಾತಿಯನ್ನು ಕಳೆದರೆ ಉಳಿದಂತೆ ಶೇ.80ರಷ್ಟು ಅವಕಾಶಗಳು ಶಾಲಾ ಕಾಲೇಜುಗಳ ಪ್ರವೇಶಕ್ಕೆ ಸರಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಇವೆ. ಅಲ್ಲಿ ನಿಜವಾದ ಪ್ರತಿಭೆ ಒಂದನ್ನೇ ಪ್ರಮಾಣವಾಗಿಟ್ಟುಕೊಂಡು ಸೀಟುಗಳನ್ನು ನೀಡಲಾಗುತ್ತಿದೆಯೇ? ಹಾಗೆ ನೀಡಿದ್ದಾದರೆ ಶೇ. 80ರಷ್ಟು ಪ್ರತಿಭಾಶಾಲಿಗಳಿಗೆ ಅವಕಾಶ ಸಿಕ್ಕಿಯೇ ಸಿಕ್ಕಂತಾಗುತ್ತದೆ. ಮೀಸಲಾತಿ ಸೌಲಭ್ಯದಿಂದಾಗಿ ಸೀಟುಗಳನ್ನು ನೌಕರಿಗಳನ್ನು ಪಡೆದು ಬರುವವರೆಲ್ಲ ಈ ಶೇ.80 ಜನರಿಗಿಂತ ಕಡಿಮೆ ಪ್ರತಿಭಾವಂತರೆ ಎಂದು ಹೇಳುವಂತಿಲ್ಲ. ಈ ಪ್ರತಿಭೆಯ ವಾದವನ್ನು ಮುಂದಿಡುವವರಿಗೆ ನಿಜವಾಗಿ ಪ್ರತಿಭೆಯ ಬಗ್ಗೆ ಕಳಕಳಿ ಇದ್ದದ್ದಾದರೆ ಅವರು ಮೊದಲು ಚಳವಳಿ ಹೂಡಬೇಕಾದದ್ದು ದಲಿತರಿಗಿರುವ ಮೀಸಲಾತಿ ಸೌಲಭ್ಯದ ವಿರುದ್ಧವಾಗಿಯಲ್ಲ. ಉಳಿದ ಶೇ. 80ರಲ್ಲಿ ಪ್ರತಿಭೆಗೆ ಪ್ರಾಮುಖ್ಯ ದೊರೆಯುವಂತೆ ಆಂದೋಲನ ಸಂಘಟಿಸಬೇಕು. ಈಗ ಮೀಸಲಾತಿಯ ಸೌಲಭ್ಯ ದಲಿತರಿಗೆ ಮಾತ್ರವಿಲ್ಲ. ಹಿಂದುಳಿದ ಜಾತಿ, ಮತ, ಪಂಗಡಗಳಿಗೂ ಅಂದರೆ ಕೆಲವು ಸವರ್ಣೀಯ ಪಂಗಡಗಳಿಗು ಕೆಲ ಪ್ರಮಾಣದ ಮೀಸಲಾತಿ ಸೌಲಭ್ಯವಿದೆ. ದಲಿತರ ಮೀಸಲಾತಿ ಸೌಲಭ್ಯವನ್ನು ವಿರೋಧಿಸಿ ಚಳವಳಿ ಮಾಡುತ್ತಿರುವವರು ಸವರ್ಣಿಯರು, ಹಿಂದುಳಿದ ಜಾತಿ, ಮತ, ಪಂಗಡಗಳಿಂದು ಘೋಷಿತವಾದ ಜನರಿಗೆ ಇರುವ ಮೀಸಲಾತಿ ಸೌಲಭ್ಯವನ್ನು ಏಕೆ ಈಗಲೇ ವಿರೋಧಿಸುತ್ತಿಲ್ಲ?

ಇಲ್ಲಿ ಕುತಂತ್ರವಿದೆ. ಮೊದಲ ಹಂತದಲ್ಲಿ ಇತರೆ ಹಿಂದುಳಿದ ಜಾತಿ, ಮತ, ಪಂಗಡಗಳವರ ಬೆಂಬಲವನ್ನು ದೊರಕಿಸಿಕೊಂಡು ದಲಿತರಿಗಿರುವ ಮೀಸಲಾತಿಯನ್ನು ವಿರೋಧಿಸಿ ಗೆದ್ದರೆ ಎರಡನೆಯ ಹಂತದಲ್ಲಿ ದಲಿತರ ಮೀಸಲಾತಿ ರದ್ಧತಿಯ ಪೂರ್ವನಿದರ್ಶನವನ್ನು ಮುಂದೆ ಮಾಡಿ ಹಿಂದುಳಿದ ಜಾತಿಗಳವರಿಗಿರುವ ಮೀಸಲಾತಿ ಸೌಲಭ್ಯವನ್ನು ಪ್ರಶ್ನಿಸಬಹುದು. ಅದರ ವಿರುದ್ಧವೂ ಚಳವಳಿ ಹೂಡಬಹುದು. ಆಗ ದಲಿತರ ಮೀಸಲಾತಿ ಸೌಲಭ್ಯದ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ ಹಿಂದುಳಿದ ಜಾತಿ ಪಂಗಡಗಳವರಿಗೆ ತಮ್ಮ ವಿರುದ್ಧ ನಡೆಯಬಹುದಾದ ಚಳವಳಿಯನ್ನು ವಿರೋಧಿಸುವ ನೈತಿಕ ಹಕ್ಕು ಇಲ್ಲದಂತಾಗಿ ಇಂಗು ತಿಂದ ಮಂಗನಂತಾಗಬೇಕಾದೀತು. ಆದ್ದರಿಂದ ಹಿಂದುಳಿದ ಜಾತಿ ಪಂಗಡಗಳಿಗೆ ಸೇರಿದ್ದು ಕೆಲವು ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿರುವ ದಲಿತೇತರ ಸವರ್ಣಿಯರು ದಲಿತರ ಮೀಸಲಾತಿ ವಿರುದ್ಧ ಗುಣಮಟ್ಟ, ಪ್ರತಿಭೆ ಹೆಸರಿನಲ್ಲಿ ನಡೆಯುತ್ತಿರುವ ವಾದ, ಆ ವಾದದಿಂದ ಪ್ರೇರಿತವಾದ ಚಳವಳಿ ತಮ್ಮ ವಿರುದ್ಧವೂ ತಿರುಗೀತು ಎಂಬ ಕಟುಸತ್ಯವನ್ನು ಮುಂದಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...