ಮಾದರಿ ಪಿಡಿಓ ಡಾ. ಶೋಭಾರಾಣಿ : ಅರುಣ್ ಜೋಳದ ಕೂಡ್ಲಿಗಿ

0

ಪಿರಿಯಾಪಟ್ಟಣ ತಾಲೂಕಿನ ಮಾಲಂಗಿಗೆ ಹೋದಾಗ, ಮೊದಲು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದೆ. ಆ ಸುಸಜ್ಜಿತ ಕಚೇರಿ ಕಂಡು ಅಚ್ಚರಿಯಾಯಿತು. ಗ್ರಾಮ ಪಂಚಾಯ್ತಿಯ ಪ್ರತಿಯೊಂದು ದಾಖಲೆ, ಪ್ರತಿ ಪೈಸೆಯ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಪರಿಶೀಲಿಸುವಷ್ಟು ಕ್ರಮಬದ್ಧವಾಗಿತ್ತು. ಕಚೇರಿ ವೀಕ್ಷಿಸುತ್ತಿದ್ದಾಗ, ಶೋಭಾರಾಣಿ ಪಂಚಾಯ್ತಿಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಿದ್ದರು. ಗ್ರಾಮಸಭೆ, ಜನರ ಸಮ್ಮುಖದಲ್ಲೇ ಫಲಾನುಭವಿಗಳ ಆಯ್ಕೆ, ಯೋಜನೆಯ ಹಂಚಿಕೆ, ಪ್ರತಿ ಹಂತದಲ್ಲೂ ಸಮುದಾಯದ ಸಹಭಾಗಿತ್ವದಲ್ಲೇ ಗ್ರಾಮದ ಅಭಿವೃದ್ಧಿ ಕಾರ್ಯಕೈಗೊಂಡಿರುವುದನ್ನು ಅವರು ಉದಾಹರಣೆ ಸಹಿತ ಮಾಹಿತಿ ನೀಡುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಿದ್ದಾಗ, ಅಧಿಕಾರ ವಿಕೇಂದ್ರೀಕರಣದ ಫಲ ನಿಜಾರ್ಥದಲ್ಲಿ ಜನಸಾಮಾನ್ಯರ ಮಧ್ಯೆ ಹಂಚಿಕೆಯಾದ ಅನುಭವವಾಯಿತು.

ತಾನು ಸಂಗ್ರಹಿಸಿದ ತೆರಿಗೆ ಹಣದಲ್ಲಿ ಪಂಚಾಯ್ತಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಮಾಲಂಗಿ ಗ್ರಾಮಪಂಚಾಯ್ತಿಯ ಶಕ್ತಿ ಅಡಗಿರುವುದು ಇಲ್ಲಿಯೇ. ಈ ಪಂಚಾಯ್ತಿ, ಮೊದಲು ಒತ್ತುವರಿಯಾಗಿದ್ದ 22 ಎಕರೆ ಸರಕಾರಿ ಜಾಗವನ್ನು ಜೇನುಕುರುಬ ಸಮುದಾಯದ ಹೋರಾಟಗಾರ್ತಿ ಜಾನಕಮ್ಮನ ನೆರವಿನೊಂದಿಗೆ ತೆರವುಗೊಳಿಸಲಾಯಿತು. ಈ ಜಾಗದಲ್ಲಿ ಇದೀಗ ಕಿತ್ತೂರು ರಾಣಿ ಮತ್ತು ಇಂದಿರಾಗಾಂಧಿ ವಸತಿಶಾಲೆಗಳಿವೆ. ಉಳಿದ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ. ರೂ 1.25 ಲಕ್ಷದಷ್ಟಿದ್ದ ಪಂಚಾಯ್ತಿಯ ವಾರ್ಷಿಕ ಆದಾಯವನ್ನು ರೂ 15 ಲಕ್ಷಕ್ಕೆ ಏರಿಸಿದೆ. ಈ ಹಣವನ್ನು ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ.

ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದರೆ, ಹಣ ಬೇಕೇಬೇಕು. ಆದರೆ, ಈ ಪಂಚಾಯ್ತಿ ಹಣವಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಬಹುದು ಎಂಬುದಕ್ಕೆ ಮಾದರಿಯನ್ನೇ ರೂಪಿಸಿದೆ. ಮೊದಲ ಹಂತದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಗಳ ಸರ್ವೆ ಮಾಡಿಸಿ, ಸರ್ಕಾರದಿಂದ ಏನೇನು ಸೌಲಭ್ಯಗಳಿವೆ ಎಂಬುದನ್ನು ಅರಿವು ಮೂಡಿಸುವ ಕೆಲಸವಾಯಿತು. ನಂತರದಲ್ಲಿ ಆ ಊರಿಗೆ ಏನೇನು ಕಾರ್ಯಗಳು ನಡೆಯಬೇಕೆಂಬ ಪಟ್ಟಿಯೂ ಸಿದ್ಧವಾಯಿತು.

ಈ ಮಧ್ಯೆ ಸ್ವಯಂಸೇವಾಸಂಸ್ಥೆಗಳ ಸಹಕಾರದಲ್ಲಿ ಆರೋಗ್ಯ ಶಿಬಿರ ನಡೆಸಿ, ಶೇ 100ರಷ್ಟು ಲಸಿಕೆ ಹಾಕಿಸುವ ಕಾರ್ಯವೂ ಪೂರ್ಣಗೊಂಡಿತು. ಕಾನೂನು ಅರಿವು ಶಿಬಿರಗಳು ನಡೆದವು. ದಾನಿಗಳನ್ನು ಹುಡುಕಿ, ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಬೇಕಾಗುವ ಮೂಲಸೌಲಭ್ಯಗಳನ್ನು ಕೊಡಿಸಲಾಯಿತು.

ಬೋರನಕಟ್ಟೆ ಹಾಡಿಯಲ್ಲಿ ಕಾಡಾನೆ ಹಾವಳಿ ತಡೆಗೆ ಸ್ವಯಂಸೇವಾಸಂಸ್ಥೆಯಿಂದ ಸೋಲಾರ್ ಬೀದಿದೀಪಗಳನ್ನು ಅಳವಡಿಸಲಾಗಿದೆ. ಈ ಭಾಗದ ತಂಬಾಕು ಬೆಳೆಗಳನ್ನು ಕೊಳ್ಳುವ ಐಟಿಸಿ ಕಂಪನಿಯಿಂದ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಕೆರೆಗಳ ಹೂಳೆತ್ತಿಸಲಾಗಿದೆ. ಮೆಂಡಾ ಫೌಂಡೇಷನ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಜತೆಗೆ, ಗ್ರಾಮ ಪಂಚಾಯ್ತಿಯಿಂದ ರೂ 30 ಸಾವಿರ ನೀಡಿ, 5 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕೊಡಿಸಲಾಗಿದೆ. ಇದೀಗ ಮಾಲಂಗಿ ಸಂಪೂರ್ಣ ಸೋಲಾರ್ ಗ್ರಾಮ.
‘ಶಿಕ್ಷಣಕ್ಕಾಗಿ ಬೆಳಕು’ ಯೋಜನೆಯಡಿ ಹಾಡಿಯ ಗುಡಿಸಲುಗಳಿಗೆ ಸೆಲ್ಕೊ ಸೋಲಾರ್ ಕಂಪನಿಯ ಸಹಯೋಗದೊಂದಿಗೆ ರೂ 1 ಲಕ್ಷ ವೆಚ್ಚದಲ್ಲಿ ಸೋಲಾರ್ ಲೈಟ್‍ಗಳನ್ನು ವಿತರಿಸಲಾಗಿದೆ. ಈ ಮೂಲಕ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪಂಚಾಯ್ತಿ ಶ್ರಮಿಸಿದೆ. ಒಂಬತ್ತು ಶಾಲೆಗಳಿಗೆ ಅಗತ್ಯ ಕ್ರೀಡಾ ಸಾಮಗ್ರಿಗಳು, ಊಟದ ತಟ್ಟೆಗಳನ್ನು ವಿತರಿಸಲಾಗಿದೆ.

ಪಂಚಾಯ್ತಿಯಿಂದಲೇ ವಿಧವಾ, ವೃದ್ಧಾಪ್ಯ ವೇತನಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸಿಕೊಡಲಾಗಿದೆ.

ರೂ 19 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ, `ರಾಜೀವ ಗಾಂಧಿ ಸೇವಾಕೇಂದ್ರ’ ನಿರ್ಮಾಣ. ಜಿಲ್ಲಾ ಪಂಚಾಯ್ತಿಯ ಅನುದಾನದಿಂದ ಅಂಗನವಾಡಿ ಮಕ್ಕಳಿಗೆ ಕಲಿಕೆಗೆ ಅನುವಾಗುವ ಆಟದ ಪರಿಕರಗಳು, ಪೀಠೋಪಕರಣಗಳ ಪೂರೈಕೆ. ಗ್ರಾಮೀಣ ಕ್ರೀಡೆಗಳ ಆಯೋಜನೆ.. ಇವೆಲ್ಲ ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿವೆ ಎನ್ನುತ್ತಾರೆ ಶೋಭಾರಾಣಿ.

ಇತ್ತೀಚೆಗೆ ಕಾನನ ಕೃಷಿಕ ಸಂಘದ ಮಹಿಳೆಯರು ‘ಕಾನನ ಸಮುದಾಯ ಬೀಜ ಬ್ಯಾಂಕ್’ ಆರಂಭಿಸಿದ್ದಾರೆ. ಮಾಲಂಗಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಈ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಚ್ಚುಗೆ ಸೂಚಿಸಿವೆ. ಮಾತ್ರವಲ್ಲ, ರಾಜ್ಯ ಸರ್ಕಾರದಿಂದ ಎರಡು ಬಾರಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ. ಅಲ್ಲದೆ ಬಯಲು ಶೌಚಮುಕ್ತ ಗ್ರಾಮಪಂಚಾಯ್ತಿ ಪುರಸ್ಕಾರವನ್ನೂ ಪಡೆದಿದೆ.
ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದಿಂದ ಕೊಡಮಾಡುವ `ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ -2018’ ರ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಏಕೈಕ ಪಂಚಾಯ್ತಿ ಮಾಲಂಗಿ. ಕಳೆದ ವರ್ಷ ಏಪ್ರಿಲ್ 24 ರಂದು ಮಧ್ಯಪ್ರದೇಶದ ಜಬಲ್‍ಪುರ್‍ನಲ್ಲಿ ಆಯೋಜಿಸಿದ `ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’ ಆಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಶೋಭಾರಾಣಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇಡೀ ಮಾಲಂಗಿ ಗ್ರಾಮಪಂಚಾಯ್ತಿಯಲ್ಲಿ ಇಂಥದ್ದೊಂದು ಬದಲಾವಣೆ ತರಲು ಕಾರಣರಾಗಿದ್ದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರ ಪರಿಶ್ರಮ ಎಂದು ಗ್ರಾಮಸ್ಥರು ಮತ್ತು ಪಂಚಾಯ್ತಿಯ ಪದಾಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಶೋಭಾ ಅವರು ಎಂಎಸ್ಸಿ ಪದವೀಧರೆ, 2010 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದಿಂದ ಪಿಎಚ್‍ಡಿ ಪಡೆದಿದ್ದಾರೆ. ಜಾರ್ಖಂಡ್ ವಿಶ್ವವಿದ್ಯಾಲಯದ ರಾಧೇಶ್ಯಾಮ್ ಪ್ರತಿಷ್ಠಾನದಿಂದ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಥ ಹಿನ್ನೆಲೆ ಮತ್ತು ತನ್ನ ಜ್ಞಾನ ಸಂಶೋಧನಾ ತಿಳಿವಳಿಕೆಯನ್ನು ಗ್ರಾಮಮಟ್ಟದಲ್ಲಿ ವಿಸ್ತರಿಸುವುದಕ್ಕಾಗಿ ಅವರು ಪಂಚಾಯ್ತಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ಉನ್ನತ ಶಿಕ್ಷಣದ ಅರಿವು ಗ್ರಾಮಮಟ್ಟದಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ಮಾಲಂಗಿಯನ್ನು ಮಾದರಿ ಗ್ರಾಮವನ್ನಾಗಿ ರೂಪಿಸಿದ ಶೋಭಾರಾಣಿ ಅವರು ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯ್ತಿಗೆ ವರ್ಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಹೊಸ ಗ್ರಾಮಪಂಚಾಯ್ತಿಯಲ್ಲೂ ಇಂಥದ್ದೇ ಹೊಸ ಮಾದರಿಗಳು ರೂಪುಗೊಳ್ಳಲಿ. ಅವರು ಈಗ ರೂಪಿಸಿರುವ ಮಾದರಿಯನ್ನು ಅರಿಯುವ ಪ್ರಯತ್ನವಾಗಲಿ.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here