ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಸಾವರ್ಕರ್ ಗೆ ಭಾರತ ರತ್ನಕೊಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದೇ ವಿಷಯ ಈಗ ಪರ-ವಿರೋಧದ ಚರ್ಚೆಯ ಪ್ರಮುಖ ವಿಷಯವಾಗಿದೆ. ಬಿಜೆಪಿಯ ನಿಲುವನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅಲ್ಲದೇ ಸಾವರ್ಕರ್ ಗೆ ಭಾರತ ರತ್ನ ಕೊಡುವ ವಿಚಾರವನ್ನು ಖಂಡಿಸಿದ್ದರು. ಇದೇ ವಿಷಯದಲ್ಲಿ ಈಗ ಸಚಿವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮತ್ತು ಸಿದ್ದರಾಮಯ್ಯ ಮಧ್ಯೆ ಟ್ವೀಟ್ ವಾರ್ ಶುರುವಾಗಿದೆ.

ಹೋದಲ್ಲಿ ಬಂದಲ್ಲಿ ಪರ-ವಿರೋಧ ಹೇಳಿಕೆ ನೀಡಿದ್ದ ನಾಯಕರ ಆರೋಪ-ಪ್ರತ್ಯಾರೋಪ ಈಗ ಸಾಮಾಜಿಕ ಜಾಲತಾಣದಲ್ಲಿಯೂ ಜೋರಾಗಿದೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವಾದ-ಪ್ರತಿವಾದದ ಸದ್ದು ಕೇಳಿ ಬರುತ್ತಿದೆ.

ಸಿದ್ದರಾಮಯ್ಯಅವರ ವಿರೋಧಕ್ಕೆ ಟ್ವೀಟ್ ಮಾಡಿ ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯ ಸಂಚುಕೋರ ಎಂದು ರಾಷ್ಟ್ರವಾದಿ ಸಾವರ್ಕರ್ ಅವರನ್ನು ಅವಮಾನಿಸಿದ್ದೀರಿ. ಸಿಎಂ ಹುದ್ದೆ ಕಳೆದುಕೊಂಡ ಮೇಲೆ ನೀವು ಮಾನಸಿಕ ವೈಕಲ್ಯಕ್ಕೆ ತುತ್ತಾಗಿದ್ದೀರಾ..? ಇತಿಹಾಸದ ಬಗ್ಗೆ ನಿಮಗೆ ಗೊತ್ತಿದೆಯಾ..? ಸೆಲ್ಯುಲರ್ ಜೈಲಿಗೆ ನೀವು ಭೇಟಿ ನೀಡಿ, ಪ್ರವಾಸಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿಯವರ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರನ್ನು ಸಾಯಿಸಿದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ. ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು, ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ.  ನಮ್ಮಂತವರು ರಾಜಕೀಯದ ಮಧ್ಯೆ, ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತನಾಡುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇದಕ್ಕೆ ಸಿ.ಟಿ.ರವಿ ಪ್ರತಿ ಟ್ವೀಟ್ ಮಾಡಿ, ಹಿಂದೂ ವಿರೋಧಿ ಟಿಪ್ಪು ಜಯಂತಿ ಆಚರಿಸಿ ಅಮಾಯಕರನ್ನು ಕೊಂದವರಿಗೆ ದೇಶಭಕ್ತನೊಬ್ಬ ಗಾಂಧೀಜಿಯವರ ಹತ್ಯೆಯ ಆರಫಿಯಾಗಿ ಕಾಣುವುದು ಸಹಜ. ತಮ್ಮ ಅಧಿಕಾರ ಅವಧಿಯಲ್ಲಿ ಹಲವು ಅಧಿಕಾರಿಗಳು, ಮುಗ್ಧರು ನಿಗೂಢವಾಗಿ ಸಾವನ್ನಪ್ಪಿದಾಗ ರಾಜ್ಯವನ್ನಾಳುತ್ತಿದ್ದವರು ಕುಡಿಯುತ್ತಿದ್ದರೋ..? ಎಂದು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಇತ್ತ ಫೇಸ್ ಬುಕ್ ನಲ್ಲಿ ಸಿದ್ದರಾಮಯ್ಯ, ‘ಸಾವರ್ಕರ್ ಹಿಂದೂ ಮಹಾಸಭಾದಲ್ಲಿದ್ದರು ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಅವರಿಗೆ ಭಾರತ ರತ್ನ ಕೊಡುತ್ತಿದ್ದಾರೆ‌. ಗಾಂಧಿ ಹತ್ಯೆ ಆರೋಪಿಗೆ ಭಾರತ ರತ್ನ ಬೇಡ ಅಂತ ಹೇಳಿದ್ದೇನೆ. ಹಿಂದೂಗಳಿಗೆ ಕೊಡಬೇಡಿ ಎಂದು ಹೇಳಿಲ್ಲ. ಗಾಂಧೀಜಿ ಕೂಡಾ ಹಿಂದೂ, ನಾನು ಕೂಡ ಹಿಂದೂ. ನಮ್ಮ ಸರ್ಕಾರ ರಾಜ್ಯದಲ್ಲಿ ನಡೆಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿರದಿದ್ದ ಕಾರಣದಿಂದಾಗಿ ವರದಿ ಜಾರಿಗೊಳಿಸಲು ಆಗಿರಲಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಈಗಿನ ಸರ್ಕಾರಕ್ಕೆ ಸಮೀಕ್ಷೆಯ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಬಿಜೆಪಿ ತಿರಸ್ಕರಿಸಲು ಹುನ್ನಾರ ನಡೆಸುತ್ತಿದೆ. ಈ ಸಮೀಕ್ಷೆ ಯಾವುದೋ ಒಂದು ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ, ರಾಜ್ಯದ ಪ್ರತಿ ಕುಟುಂಬವನ್ನು ಸಂಪರ್ಕಿಸಿ ತಲೆ ಎಣಿಕೆ ಮೂಲಕ ವೈಜ್ಞಾನಿಕವಾಗಿ ನಡೆಸಿದ್ದ ಸಮೀಕ್ಷೆ. ಈ ವರದಿಯನ್ನು ಒಪ್ಪಿಕೊಂಡರೆ ಸರ್ವಜನಾಂಗಕ್ಕೂ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ವಿರೋಧಿಯಾಗಿರುವ ಬಿಜೆಪಿಗೆ ಇದು ಇಷ್ಟ ಆಗುತ್ತಿಲ್ಲ’ ಎಂದು ಕುಟುಕಿದ್ದಾರೆ.

1 COMMENT

  1. ಈಗ ಸಾವರ್ಕರ್ ಗೆ ಭಾರತ ರತ್ನ ಕೊಡುತ್ತೇವೆ. ಎನ್ನುತ್ತಿರುವವರು ಮುಂದೆ ಗೋಡ್ಸೆಗೂ ಕೊಡುತ್ತೇವೆ ಎನ್ನಬಹುದು. ಕೊಡಲಿ ಬಿಡಿ. ಮನುವಾದಿಗಳಿಗೆ ಅಪಾರವಾದ ಬಹುಮತವನ್ನು ಕೊಟ್ಟಿರುವ ನಮಗೆ ಇಂತಹದ್ದನ್ನೆಲ್ಲ ನೊಡುವ ಸೌಭಾಗ್ಯ ದೊರಕಿದೆ.

LEAVE A REPLY

Please enter your comment!
Please enter your name here