Homeಮುಖಪುಟಟೈಟಾನಿಕ್ ಹಡಗಿನ ದುರಂತದ ಅವಶೇಷ ನೋಡಹೋದ ಸಬ್‌ಮೆರಿನ್ ಅವಘಡ

ಟೈಟಾನಿಕ್ ಹಡಗಿನ ದುರಂತದ ಅವಶೇಷ ನೋಡಹೋದ ಸಬ್‌ಮೆರಿನ್ ಅವಘಡ

- Advertisement -
- Advertisement -

ವಿಶ್ವವಿಖ್ಯಾತ ಟೈಟಾನಿಕ್ ಹಡಗಿನ ದುರಂತದ ಪ್ರಸಿದ್ಧಿಯನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಹೊರಟ ವ್ಯಕ್ತಿಯೊಬ್ಬನ ಧೂರ್ತ ಆಲೋಚನೆ ಇದೀಗ ಐದು ಜನರ ಸಾವಿಗೆ ಕಾರಣವಾಗಿದೆ. ಟೈಟಾನಿಕ್ ಅವಶೇಷಗಳನ್ನು ಸಬ್‌ಮೆರಿನ್‌ಲ್ಲಿ ವೀಕ್ಷಿಸಲು ಹೊರಟು ಹೃದಯವಿದ್ರಾವಕವಾಗಿ ಸಾವಿಗೀಡಾದವರ ದುರಂತದ ಬಗ್ಗೆ ಜಗತ್ತಿನೆಲ್ಲೆಡೆ ಚರ್ಚೆಯಾಗುತ್ತಿದೆ. ಟೈಟಾನಿಕ್ ಹಡಗಿನಷ್ಟೇ ಈ ಅವಘಡವೂ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.

ಏನಿದು ಟೈಟಾನಿಕ್ ಸಬ್‌ಮೆರಿನ್ ಅವಘಡ?

ಜೇಮ್ಸ್ ಕ್ಯಾಮರೂನ್ ಎಂಬ ಸಿನಿಮಾಂತ್ರಿಕನ ನಿರ್ದೇಶನದಲ್ಲಿ ಮೂಡಿಬಂದ ಟೈಟಾನಿಕ್ ಎಂಬ ಸಿನಿಮಾ ಬಿಡುಗಡೆಯಾಗುವವರೆಗೂ ಈ ಹಡಗಿನ ಬಗ್ಗೆ ವಿಶ್ವದಲ್ಲಿ ಬಹುತೇಕರಿಗೆ ಪರಿಚಯವೇ ಇರಲಿಲ್ಲ. ಇಷ್ಟೇ ಏಕೆ ಭಾರತದಲ್ಲೇ ಎಷ್ಟೋ ಜನರಿಗೆ ಈ ಬಗ್ಗೆ ಮಾಹಿತಿಯೂ ಇರಲಿಲ್ಲ. ಆದರೆ, ಈ ಸಿನಿಮಾ ಬಿಡುಗಡೆಯಾದ ನಂತರ ಈ ಹಡಗು ಮತ್ತದು ಎದುರಿಸಿದ ಅವಘಡದ ಇತಿಹಾಸ ಗಳಿಸಿದ ಪ್ರಸಿದ್ಧಿ ಅಷ್ಟಿಷ್ಟಲ್ಲ. ಇಂದಿಗೂ ಕಡಿಮೆಯಾಗದ ಟೈಟಾನಿಕ್ ಪ್ರಸಿದ್ಧಿಗೆ ಇತ್ತೀಚಿಗೆ ಐದು ಜೀವಗಳ ಬಲಿಯಾಗಿರುವುದು ದುರಂತ.

ಇಂದಿಗೆ ಸರಿಸುಮಾರು ಒಂದು ಶತಮಾನಗಳ ಹಿಂದೆ, ಎಂದೂ ಮುಳುಗದ ಹಡಗು ಎಂದೇ ಟೈಟಾನಿಕ್ ಪ್ರಚಾರ ಗಿಟ್ಟಿಸಿಕೊಂಡಿತ್ತು. ಈ ಪ್ರಚಾರದೊಂದಿಗೆ 1912ರಂದು ಲಂಡನ್‌ನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಶ್ವವಿಖ್ಯಾತ ಟೈಟಾನಿಕ್ ತನ್ನ ಮೊದಲ ಪ್ರಯಾಣದಲ್ಲೇ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತ್ತು. ಈ ಅವಘಡದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಸಮುದ್ರದ ಆಳದಲ್ಲಿನ ಈ ಹಡಗಿನ ಅವಶೇಷಗಳನ್ನು ನೋಡಲು ಈಗಲೂ ದೊಡ್ಡ ಮಟ್ಟದ ಕ್ರೇಜ್ ಇದೆ. ಈ ಕ್ರೇಜ್ ಸಬ್‌ಮೆರಿನ್ ಟೂರಿಸಂ ಎಂಬ ಶತಕೋಟಿಗಳ ವ್ಯವಹಾರಕ್ಕೂ ನಾಂದಿ ಹಾಡಿದ್ದು ಇಂದು ಇತಿಹಾಸ.

ಹೀಗೆ ಟೈಟಾನಿಕ್ ಅವಶೇಷಗಳನ್ನು ಸಬ್‌ಮೆರಿನ್ ಪ್ರಯಾಣದಲ್ಲಿ ತೋರಿಸುವ ನೆಪದಲ್ಲಿ ಹಣ ಮಾಡಲು ಹುಟ್ಟಿದ ಕಂಪೆನಿಯೇ “ಓಶಿಯನ್ ಗೇಟ್”. ಈ ಕಂಪೆನಿ ಟೈಟಾನ್ ಹೆಸರಿನಲ್ಲೇ ಸಬ್‌ಮೆರಿನ್ ನಿರ್ಮಾಣ ಮಾಡಿದ್ದು, ಅದೇ ಹೆಸರಿನಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿತ್ತು. ಆ ಮೂಲಕ ಸಬ್‌ಮೆರಿನ್ ಟೂರಿಸಂಗೆ ಜನರನ್ನೂ ಆಹ್ವಾನಿಸಿತ್ತು.

ಪ್ರಯಾಣಿಸಿದವರೆಲ್ಲರೂ ಶತಕೋಟಿ ಒಡೆಯರೇ!

ಓಶಿಯನ್ ಗೇಟ್ ಕಂಪೆನಿಯ ಪ್ರಚಾರದ ತಂತ್ರಕ್ಕೆ ಮರುಳಾಗಿ ಅನೇಕರು ಸಬ್‌ಮೆರಿನ್ ಪ್ರಯಾಣಕ್ಕೆ ಮುಂದಾಗಿದ್ದರು. ಈ ಪೈಕಿ ಪಾಕಿಸ್ತಾನದ ಶ್ರೀಮಂತ ಉದ್ಯಮಿ ಶಹಜಾದ್ ದಾವೂದ್ ಮೊದಲಿಗರಾಗಿ ಆಯ್ಕೆಯಾಗಿದ್ದರು. ಟೈಟಾನಿಕ್ ಅವಶೇಷಗಳನ್ನು ನೋಡಲು ಭಾರತೀಯ ಹಣದ ಮೌಲ್ಯದಲ್ಲಿ 2 ಕೋಟಿ ರೂ. ನೀಡಿ ಟಿಕೆಟ್ ಪಡೆದಿದ್ದರು. ಅಲ್ಲದೆ, ತಮ್ಮ 19 ವರ್ಷದ ಮಗ ಸುಲೇಮಾನ್ ದಾವೂದ್‌ನನ್ನೂ ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದರು. ಸುಲೇಮಾನ್‌ಗೆ ಸಬ್‌ಮೆರಿನ್‌ನಲ್ಲಿ ಬರಲು ಭಯವಿದ್ದರೂ ತಂದೆಯ ಒತ್ತಾಯಕ್ಕೆ ಮಣಿದು ಪ್ರಯಾಣಕ್ಕೆ ಹೊರಟಿದ್ದ.

ಇವರ ಜೊತೆಗೆ ಹಲವು ಸಾಹಸಗಳನ್ನು ಕೈಗೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಲಂಡನ್‌ನ ಮತ್ತೋರ್ವ ಉದ್ಯಮಿ ಹ್ಯಾಮಿಶ್ ಹಾರ್ಡಿಂಗ್ ಸಹ 2 ಕೋಟಿ ರೂ ನೀಡಿ ಪ್ರಯಾಣಕ್ಕೆ ಟಿಕೆಟ್ ಖರೀದಿಸಿದ್ದರು. ಈ ಮೂರು ಜನ ಪ್ರಯಾಣಿಕರ ಜೊತೆಗೆ ಸಬ್‌ಮೆರಿನ್ ಕ್ಷೇತ್ರದ ಲೆಜೆಂಡರಿ ಗೈಡ್ ಪೌಲ್ ಹೆನ್ಸಿ ನಾರ್ಜೆಲೆಟ್ ಹಾಗೂ ಓಶಿಯನ್ ಗೇಟ್ ಕಂಪೆನಿಯ ಸಿಇಓ ಸ್ಟಾಕ್ಟನ್ ರಷ್ ಪ್ರಯಾಣ ಬೆಳೆಸಿದ್ದರು.

ಆಗೇಬಿಟ್ಟಿತ್ತು ಅತಿದೊಡ್ಡ ಅವಘಡ

ಜೂನ್ 16ರಂದು ಕೆನಡಾದ ನ್ಯೂಫೌಂಡ್ ಲ್ಯಾಂಡ್‌ನಿಂದ ಹೊರಟಿದ್ದ ಪ್ರಯಾಣಿಕರು ಹಾಗೂ ಸಬ್‌ಮೆರಿನ್‌ಅನ್ನು ಹೊತ್ತ ಹಡಗು ಜೂನ್ 17ಕ್ಕೆ ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳಕ್ಕೆ ಬಂದು ಸೇರಿತ್ತು. ಜೂನ್ 18ರ ಬೆಳಗ್ಗೆ 9 ಗಂಟೆಗೆ ಈ ಐದು ಜನ ಟೈಟಾನಿಕ್ ಅವಶೇಷಗಳನ್ನು ವೀಕ್ಷಿಸಲು ಸಬ್‌ಮೆರಿನ್‌ನಲ್ಲಿ ಹೊರಟು ಸಂಜೆ 4.50ರ ಸುಮಾರಿಗೆ ಹಿಂತಿರುಗಬೇಕು ಎಂಬುದು ಪ್ಲಾನ್ ಆಗಿತ್ತು. ಅದಕ್ಕೆ ತಕ್ಕಂತೆ ಸಬ್‌ಮೆರಿನ್‌ನಲ್ಲಿ ಪ್ರೋಗ್ರಾಂ ಮಾಡಲಾಗಿತ್ತು.

ನಿಗದಿಯಂತೆ ಟೈಟಾನಿಕ್ ಸಬ್‌ಮೆರಿನ್ ಬೆಳಗ್ಗೆ 9 ಗಂಟೆಗೆ 12,000 ಅಡಿ ಆಳದಲ್ಲಿರುವ ಅವಶೇಷಗಳ ಕಡೆಗೆ ತನ್ನ ಪ್ರಯಾಣವನ್ನು ಬೆಳೆಸಿತ್ತು. ಆದರೆ, 11.15ಕ್ಕೆ ಸಬ್‌ಮೆರಿನ್ ಸಿಗ್ನಲ್ ಕಡಿತಗೊಂಡಿದೆ. ನಿಗದಿಯಂತೆ 4.50ಕ್ಕೆ ಸಬ್‌ಮೆರಿನ್ ಮತ್ತೆ ಸಮುದ್ರದ ಮೇಲ್ಮೆಗೆ ಆಗಮಿಸಬೇಕಿತ್ತು. ಆದರೆ, ಅದು ಆಗಮಿಸದ ಕಾರಣ ಎಚ್ಚೆತ್ತ ತಂಡ ಕೂಡಲೇ ಅಮೆರಿಕ ಮತ್ತು ಕೆನಡಾ ದೇಶದ ನೌಕಾಪಡೆಗಳಿಗೆ ಮಾಹಿತಿ ನೀಡಿದೆ. ಕೂಡಲೇ ಅಪಘಾತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಎರಡೂ ದೇಶದ ನೌಕಾಪಡೆ ಟೈಟಾನಿಕ್ ಹಡಗಿನ ಅವಶೇಷದ ಪಕ್ಕದಲ್ಲೇ ಸಬ್‌ಮೆರಿನ್ ಅವಶೇಷಗಳೂ ಬಿದ್ದಿರುವುದನ್ನು ಪತ್ತೆಹಚ್ಚಿದ್ದರು. ಅಲ್ಲಿಗೆ ಐದೂ ಜನರ ಸಾವು ಖಚಿತವಾಗಿತ್ತು.

ಟೈಟಾನಿಕ್ ಅವಶೇಷಗಳನ್ನು ವೀಕ್ಷಿಸಲೆಂದು ಕುತೂಹಲದಿಂದ ತೆರಳಿದ್ದ ಪ್ರಯಾಣಿಕರ ತಂಡವೊಂದು ಅದೇ ಜಾಗದಲ್ಲಿ ಮೃತಪಟ್ಟು ಅವಶೇಷಗಳಾಗಿ ಪತ್ತೆಯಾಗಿದ್ದು ದುರಂತವೇ ಸರಿ!

ಅತಿಯಾಸೆಯ ಕಾರಣಕ್ಕೆ ಅವಘಡ

ಓಶಿಯನ್ ಗೇಟ್ ಕಂಪೆನಿಯ ಸುರಕ್ಷತಾ ತಂತ್ರಜ್ಞಾನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಆರೋಪಗಳಿವೆ. ಈ ಕಂಪೆನಿಯ ಸುರಕ್ಷತಾ ಅಧಿಕಾರಿಯಾಗಿದ್ದ ಡೇವಿಡ್ ಲಾಕ್ರಿಡ್ಜ್ ಎಂಬ ವ್ಯಕ್ತಿ 2018ರಲ್ಲೇ ಕಂಪೆನಿಗೆ ಪತ್ರ ಬರೆದು ಎಚ್ಚರಿಸಿದ್ದ. ಕಂಪೆನಿಯ ಸಬ್‌ಮೆರಿನ್‌ನಲ್ಲಿ ಸಮುದ್ರದ ಆಳದಲ್ಲಿ 4200 ಅಡಿಯವರೆಗೆ ಮಾತ್ರ ಪ್ರಯಾಣಿಸಲು ಸಾಧ್ಯ; ಅದಕ್ಕಿಂತ ಆಳಕ್ಕೆ ಇಳಿಯಲು ಈ ಸಬ್‌ಮೆರಿನ್ ಬಲಿಷ್ಟವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದ.

ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಂಪೆನಿಯ ಸಿಇಓ ಸ್ಟಾಕ್ಟನ್ ರಷ್, ಡೇವಿಡ್ ಲಾಕ್ರಿಡ್ಜ್‌ನನ್ನು ಕೆಲಸದಿಂದ ತೆಗೆದುಹಾಕಿದ್ದ. ಮರು ವರ್ಷವೇ ಡೇವಿಡ್ ಸ್ಥಳೀಯ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಓಶಿಯನ್ ಗೇಟ್ ಸಂಸ್ಥೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ದೂರಿದ್ದರು. ಅಲ್ಲದೆ, “12,000 ಅಡಿ ಆಳದಲ್ಲಿರುವ ಟೈಟಾನಿಕ್ ಅವಶೇಷಗಳ ಬಳಿಗೆ ಈ ಸಬ್‌ಮೆರಿನ್‌ನಲ್ಲಿ ತೆರಳುವುದು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದರು. ಈ ಸಂದರ್ಶನ ಸಾಕಷ್ಟು ಸದ್ದು ಮಾಡುತ್ತಿದ್ದಂತೆ, ಕಂಪೆನಿಯ ರಹಸ್ಯವನ್ನು ಬಯಲು ಮಾಡಿದ ಆರೋಪದ ಮೇಲೆ ಡೇವಿಡ್ ಮೇಲೆ ದೂರು ದಾಖಲು ಮಾಡಲಾಯ್ತು. ಕೊನೆಗೆ ಈ ವ್ಯಾಜ್ಯವನ್ನು ಕೋರ್ಟ್ ಹೊರಗಡೆ ರಾಜೀ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು.

ಈ ಪ್ರಕರಣದ ಬೆನ್ನಿಗೆ “ಅಂತಾರಾಷ್ಟ್ರೀಯ ಮೆರೀನ್ ಟೆಕ್ನಾಲಜಿ ಸೊಸೈಟಿ” ಸ್ಟಾಕ್ಟನ್ ರಷ್ ಅವರಿಗೆ ಪತ್ರ ಬರೆದು ಸೇಫ್ಟಿ ಸ್ಟಾಂಡರ್ಡ್ ಬಗ್ಗೆ ಎಚ್ಚರ ವಹಿಸುವಂತೆ ಒತ್ತಾಯಿಸಿತ್ತು. ಅಲ್ಲದೆ, “ಹಣ ಖರ್ಚು ಮಾಡಿ ಗುಣಮಟ್ಟದ ಸಬ್‌ಮೆರಿನ್ ತಯಾರಿಸಿ ಅದಕ್ಕೆ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯಿರಿ” ಎಂದು ಒತ್ತಾಯಿಸಿತ್ತು. ಆದರೆ, ಈ ಪತ್ರಕ್ಕೆ ಪ್ರತ್ಯುತ್ತರ ಬರೆದಿದ್ದ ಸ್ಟಾಕ್ಟನ್ ರಷ್, “ನಿಮ್ಮ ಸೆಕ್ಯೂರಿಟಿ ಪ್ರೊಟೋಕಾಲ್‌ಗಳು ಹೊಸಹೊಸ ಆವಿಷ್ಕಾರಕ್ಕೆ ತಡೆಯಾಗಿವೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಸ್ಟಾಕ್ಟನ್ ರಷ್ ಈ ಎರಡೂ ಪ್ರಕರಣವನ್ನು ಹೇಗೋ ನಿಭಾಯಿಸಿದ್ದರೂ ಕೂಡ, ಈ ಆರೋಪಗಳಿಂದ “ಓಶಿಯನ್ ಗೇಟ್” ಕಂಪೆನಿಗೆ ಟೂರಿಸಂ ಕ್ಷೇತ್ರದಲ್ಲಿ ಮುಖಭಂಗವಂತೂ ಆಗಿತ್ತು. ಹೀಗಾಗಿ ಪ್ರಚಾರದ ಮೊರೆ ಹೋಗಿದ್ದ ಆತ ಖ್ಯಾತ ಬಿಬಿಸಿ ವಾಹಿನಿಯ ಪತ್ರಕರ್ತನನ್ನು ತನ್ನ ಕಂಪೆನಿಯ ಸಬ್‌ಮೆರಿನ್ ಪ್ರಯಾಣಕ್ಕೆ ಆಹ್ವಾನಿಸಿದ್ದ.

ಆದರೆ, ಓಶಿಯನ್ ಗೇಟ್ ಕಂಪೆನಿಯ ಸಬ್‌ಮೆರಿನ್‌ನಲ್ಲಿನ ತನ್ನ ಮೊದಲ ಪ್ರಯಾಣದಲ್ಲೇ ಕಹಿ ಅನುಭವಿಸಿದ್ದ ಆ ಪತ್ರಕರ್ತ, “ಕಳಪೆ ವಸ್ತುಗಳನ್ನು ಬಳಸಿ ಈ ಸಬ್‌ಮೆರಿನ್‌ಅನ್ನು ನಿರ್ಮಿಸಲಾಗಿದೆ. ಪ್ರಯಾಣ ಬೆಳೆಸಿದ 10 ನಿಮಿಷದಲ್ಲಿ ಇದರ ಸಿಗ್ನಲ್ ಕಡಿತವಾಗಿತ್ತು. ಅಲ್ಲದೆ ಪ್ರಯಾಣ ಬೆಳೆಸುವ ಮುನ್ನವೇ ನಮ್ಮ ಜೀವಕ್ಕೆ ನಾವೇ ಹೊಣೆ ಎಂಬ ಕರಾರುಪತ್ರದಲ್ಲಿ ಸಹಿ ಪಡೆಯಲಾಗಿತ್ತು. ಹೀಗಾಗಿ ಈ ಕಂಪೆನಿಯಲ್ಲಿ ಸಬ್‌ಮೆರಿನ್ ಟೂರಿಸಂ ಸುರಕ್ಷಿತವಲ್ಲ” ಎಂದು ಆತ ತನ್ನ ವರದಿಯಲ್ಲಿ ನಮೂದಿಸಿದ್ದ. ಆದರೂ, ಓಶಿಯನ್ ಗೇಟ್ ಸಂಸ್ಥೆಯ ಸಿಇಓ ಎಚ್ಚೆತ್ತುಕೊಳ್ಳಲಿಲ್ಲ.

ಹಣದಾಸೆಗೆ ಹೋಯ್ತು ಜೀವ

ಟೈಟಾನಿಕ್ ಹಡಗು ಮುಳುಗಿದ್ದ ಅಟ್ಲಾಂಟಿಕ್ ಸಾಗರ ಅಂತಾರಾಷ್ಟ್ರೀಯ ಗಡಿ ಪ್ರದೇಶ. ಈ ಪ್ರದೇಶದಲ್ಲಿ ಯಾರು ಯಾವುದೇ ಪ್ರಯೋಗ ಮಾಡಿದರೂ ಸಹ ಅದಕ್ಕೆ ಯಾವ ದೇಶದ ಸುರಕ್ಷತಾ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಯಾವ ದೇಶದಿಂದಲೂ ಸುರಕ್ಷತಾ ಪ್ರಮಾಣ ಪತ್ರ ಅಗತ್ಯವಿಲ್ಲ. ಈ ವಿಚಾರವನ್ನು ಸ್ಟಾಕ್ಟನ್ ರಷ್ ತನ್ನ ಕಂಪೆನಿಯ ಬೆಳೆವಣಿಗೆ ಬಳಸಿಕೊಳ್ಳಲು ಮುಂದಾದರು.

ಸ್ಟಾಕ್ಟನ್ ರಷ್

ಹೀಗಾಗಿ 2009ರಲ್ಲಿ ಕಡಿಮೆ ಖರ್ಚಿನಲ್ಲಿ ಹಳೆ ಸಬ್‌ಮೆರಿನ್‌ಗಳನ್ನು ಖರೀದಿಸಿ ಅವನ್ನೇ ನವೀಕರಣಗೊಳಿಸಿ ಕಡಿಮೆ ಹಣದಲ್ಲಿ ಹೆಚ್ಚು ಲಾಭ ಮಾಡಲು ಹೊರಟಿದ್ದ ಸ್ಟಾಕ್ಟನ್ ರಷ್ ಸಹ ಇಂದು ಪ್ರಯಾಣಿಕರ ಜೊತೆಗೆ ಮೃತಪಟ್ಟಿದ್ದಾನೆ. ಓರ್ವ ವ್ಯಕ್ತಿಯ ಅತಿಯಾದ ದುರಾಸೆ ಐವರ ಸಾವಿಗೆ ಕಾರಣವಾಗಿದೆ.

ಟೈಟಾನಿಕ್‌ನ ಎರಡೂ ಅವಘಡಕ್ಕೆ ಸಾಮ್ಯತೆ ಇದೆ

ಸಾವಿರಾರು ಜನರನ್ನು ಹೊತ್ತು ಸಾಗಿದ್ದ ಟೈಟಾನಿಕ್ ಹಡಗು ಅಟ್ಲಾಂಟಿಕ್ ಸಾಗರದಲ್ಲಿ ಮಂಜುಗಡ್ಡೆಯ ಪರ್ವತಕ್ಕೆ ಢಿಕ್ಕಿ ಹೊಡೆದು ಅಪಘಾತಕ್ಕೆ ಈಡಾಗಿತ್ತು. ಆದರೆ, ಅಪಘಾತಕ್ಕೂ ಮುನ್ನ ಹಲವರು ಹಡಗಿನ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಅವರನ್ನು ಎಚ್ಚರಿಸಿದ್ದರು. ಆ ಮಂಜುಗಡ್ಡೆಯ ಪರ್ವತಕ್ಕೆ ಢಿಕ್ಕಿ ಹೊಡೆಯುವುದು ಸೂಕ್ತವಲ್ಲ ಎಂದು ಸೂಚಿಸಿದ್ದರು. ಆದರೆ ಕ್ಯಾಪ್ಟನ್ ಸ್ಮಿತ್ ಅವರ ಎಚ್ಚರಿಕೆಗೆ ಕಿವಿಗೊಡದ ಕಾರಣ ಟೈಟಾನಿಕ್ ಸಮುದ್ರದಲ್ಲಿ ಮುಳುಗಿತ್ತು. ಅದೇ ರೀತಿ ಓಶಿಯನ್ ಗೇಟ್ ಕಂಪೆನಿಯ ಸಿಇಓ ಸ್ಟಾಕ್ಟನ್ ರಷ್ ಅವರಿಗೂ ಕಳೆದ ಐದು ವರ್ಷಗಳಿಂದ ಹಲವರು ಎಚ್ಚರಿಸಿದ್ದರು. ಆದರೆ, ಯಾರ ಎಚ್ಚರಿಕೆಯ ಮಾತುಗಳಿಗೂ ಕಿವಿಗೊಡದ ಸ್ಟಾಕ್ಟನ್ ಟೈಟಾನಿಕ್ ಮಾದರಿಯಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಕಿತ್ತುಹಾಕುತ್ತದೆ: ರಾಹುಲ್ ಗಾಂಧಿ

0
"ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಬಡವರು, ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳಿಗೆ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಒಡೆದು, ಎಸೆದುಬಿಡುತ್ತದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ...