Homeಮುಖಪುಟಚಿಕ್ಕಬಳ್ಳಾಪುರ ಡಾ.ಸುಧಾಕರ್ ಗೆಲುವಿಗೆ ಕಾರಣವಾದ ಆ `ಮೂರು'!

ಚಿಕ್ಕಬಳ್ಳಾಪುರ ಡಾ.ಸುಧಾಕರ್ ಗೆಲುವಿಗೆ ಕಾರಣವಾದ ಆ `ಮೂರು’!

- Advertisement -
- Advertisement -

ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದೆ. ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರು 34 ಸಾವಿರ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ತಳಮಟ್ಟದ ಕಾರ್ಯಕರ್ತರೇ ಇಲ್ಲದ ಕಡೆ ಹೆಚ್ಚು ಮತಗಳಿಂದ ಗೆದ್ದು ಬಂದಿರುವುದು ಜನರು ಹುಬ್ಬೇರಿಸುವಂತೆ ಮಾಡಿದೆ. ಈ ಚುನಾವಣೆಯ ಮತ ಎಣಿಕೆಯಲ್ಲಿ ಅಂಚೆಮತಗಳಿಂದ ಹಿಡಿದು ಕೊನೆಯ ಸುತ್ತಿನ ಮತ ಎಣಿಕೆಯವರೆಗೂ ಸುಧಾಕರ್ ಮೊದಲ ಸ್ಥಾನದಿಂದ ಹಿಂದೆ ಸರಿಯಲೇ ಇಲ್ಲ. ಸುಧಾಕರ್ ನಾಗಾಲೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಂದ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಕಡಿಮೆ ಅಂತರದಲ್ಲಿ ಸುಧಾಕರ್ ಗೆಲ್ಲಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಸಭಾಧ್ಯಕ್ಷರು ಮತ್ತು ಸುಪ್ರೀಂಕೋರ್ಟ್‍ನಿಂದ ಅನರ್ಹರಾಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಮತದಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮಹಾರಾಷ್ಟ್ರ, ಹರ್ಯಾಣದಲ್ಲಿ ಪಕ್ಷಾಂತರಿಗಳನ್ನು ಸೋಲಿಸಿದ್ದಾರೆ. ಅದೇರೀತಿ ಕರ್ನಾಟಕದಲ್ಲಿ ಆಗಲಿದೆ ಎಂಬ ಲೆಕ್ಕಾಚಾರಗಳನ್ನು ಮತದಾರ ತಲೆಕೆಳಗು ಮಾಡಿದ್ದಾರೆ. ಹಾಗಾದರೆ ಸುಧಾಕರ್ ಗೆಲುವಿಗೆ ಕಾರಣವಾದ ಅಂಶಗಳು ಯಾವುವು ಎಂಬುದನ್ನು ನೋಡೋಣ.

ಉಪಚುನಾವಣೆಯಲ್ಲಿ ಬಿಜೆಪಿಯ ಡಾ.ಸುಧಾಕರ್-84381 ಅಂದರೆ ಶೇಕಡ 48.53ರಷ್ಟ ಮತ ಪಡೆದು ಕಳೆದ ಬಾರಿಗಿಂತ 4 ಸಾವಿರ ಮತಗಳಿಂದ ಆರಿಸಿ ಬಂದಿದ್ದಾರೆ.. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ಆಂಜನಪ್ಪ, 49,588 ಅಂದರೆ ಶೇಕಡ 28.52ರಷ್ಟು ಮತ ಗಳಿಸಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ 35,869 ಅಂದರೆ ಶೇಕಡ 20.65ರಷ್ಟು ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ 50 ಸಾವಿರ ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿ ಜೆಡಿಎಸ್ ಮತ ಗಳಿಕೆಯ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಡಾ. ಸುಧಾಕರ್ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾಗ ಎಷ್ಟು ಮತಗಳನ್ನು ಪಡೆದಿದ್ದರೋ ಅದಕ್ಕಿಂತ ಈ ಬಾರಿ ನಾಲ್ಕು ಸಾವಿರ ಹೆಚ್ಚು ಮತಗಳು ಬಿದ್ದಿವೆ. ಇದು ಹೇಗೆ ಸಾಧ್ಯವಾಯಿತು. ವಾಸ್ತವಾಂಶಗಳೇನು? ಮತದಾರರ ನಾಡಿಮಿಡಿತಗಳು ತಿಳಿಯಬೇಕಾಗಿದೆ..

ಡಾ.ಸುಧಾಕರ್ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಹಣ ತಂದು ಜನರಿಗೆ ಕಾಣುವಂತಹ ರಸ್ತೆ ಮೊದಲಾದ ಕೆಲಸಗಳನ್ನು ಮಾಡಿರುವುದು ಜನ ಅವರಿಗೆ ಮತ ಹಾಕಲು ಕಾರಣವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ದೌರ್ಬಲ್ಯಗಳು ಕೂಡ ಸುಧಾಕರ್ ಗೆಲುವಿಗೆ ಪ್ಲೆಸ್ ಪಾಯಿಂಟ್ ಆಗಿದೆ. ಅಂದರೆ ಸುಧಾಕರ್ ಸಾಕಷ್ಟು ‘ಗಟ್ಟಿಕುಳ’ ಎಂಬ ನಂಬಿಕೆ ಜನರಲ್ಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕ್ಷೇತ್ರದ ಸುತ್ತಾಟ ನಡೆಸಲಿಲ್ಲ. ಜನರನ್ನು ಸಂಪರ್ಕಿಸುವಲ್ಲಿ ಹಿಂದೆ ಬಿದ್ದರು. ಮತದಾರರಿಗೂ ‘ಒಂದಷ್ಟು’ ನೋಡಿಕೊಂಡಿದ್ದರೆ ಕಾಂಗ್ರೆಸ್ ಗೆಲುವು ಸಾಧಿಸುತ್ತಿತ್ತು. ಇಲ್ಲವೇ ಮೈತ್ರಿ ಸರ್ಕಾರದಲ್ಲಿ ಒಂದಾಗಿದ್ದಂತೆ ಈ ಕ್ಷೇತ್ರದಲ್ಲಿ ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದರೆ ಅನಾಯಾಸವಾಗಿ ಗೆಲ್ಲಬಹುದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಮತಗಳ ಉಭಯ ಪಕ್ಷಗಳ ನಡುವೆ ಹಂಚಿಕೆಯಾಗಿವೆ. ಇವು ಹರಿದು ಹಂಚಿಹೋಗದಂತೆ ನೋಡಿಕೊಂಡಿದ್ದರೆ ಗೆಲುವಿಗೆ ಗೇಣು ದೂರವಿತ್ತು. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ಇದ್ದ ‘ಮುನಿಸು’ ಮತಗಳು ಸುಧಾಕರ್‍ಗೆ ಬಿದ್ದಿವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಪರ ಮತ ಹಾಕುವಂತೆ ಮಾಡಿದ ಮನವಿಗೆ ಮತದಾರ ಕಿವಿಗೊಟ್ಟಿಲ್ಲ. ಅಂತೆಯೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ಆಂಜನಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ ಅವರಿಗೆ ವಹಿಸಲಾಗಿತ್ತು. ಕಾಂಗ್ರೆಸ್ ತಂತ್ರಗಳು ಕೂಡ ಇಲ್ಲಿ ವರ್ಕೌಟ್ ಆಗಿಲ್ಲ. ಆದರೆ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದಷ್ಟು ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಆದರೆ ‘ಬಾಯಿ ಮಾತಿಗೆ’ ಯಾರು ಕರಗುತ್ತಾರೆ. ನೋಡ್ಕೋಬೇಕು ಇಲ್ಲದಿದ್ದರೆ ಏನೂ ಗಿಟ್ಟಲ್ಲ. ಅದೇ ಈ ಚುನಾವಣೆಯಲ್ಲಿ ಆಗಿದೆ. ಅಂದಹಾಗೆ ಜೆಡಿಎಸ್-ಕಾಂಗ್ರೆಸ್ ಜನರ ಮನಸ್ಸು ಮುಟ್ಟುವಲ್ಲಿ ವಿಫಲವಾಗಿದೆ ಎಂಬುದು ಸೋತವರ ಕಡೆಯ ಕಾರ್ಯಕರ್ತರ ಮಾತುಗಳು.

ಡಾ.ಸುಧಾಕರ್ ಅವರು ಮತದಾರರನ್ನು ತಲುಪಲು ಟೀಮ್ ಮಾಡಿದ್ದರು. ಆ ಗುಂಪುಗಳಿಗೆ ವಹಿಸಿದ್ದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಪ್ರತಿಯೊಂದು ಮನೆಗೂ ಹೋಗಿ ಆ ‘ಗುಂಪು’ ಮತದಾರರನ್ನು ಸಂಪರ್ಕಿಸಿ ಆ ‘ಮೂರು’ ಮಾತು ಹೇಳಿ ಮನವಿ ಮಾಡಿಕೊಂಡಿದೆ. ಹೋಬಳಿವಾರು ಕೆಲಸ ಹಂಚಿಕೆ ಮಾಡಿಕೊಂಡು ದುಡಿದಿರುವುದು ಕೂಡ ಗೆಲುವಿಗೆ ಪೂರಕವಾಗಿದೆ. ಫಲತಾಂಬೂಲವೂ ಕೈಹಿಡಿದಿದೆ.

ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದ ಮೇಲೆ ಸುಧಾಕರ್ ಮಂಚೇನಹಳ್ಳಿ ಕೇಂದ್ರವನ್ನು ತಾಲೂಕು ಮಾಡುವ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕ್ಷೇತ್ರಕ್ಕೆ ಕರೆಸಿ ವೆರೆಸಂದ್ರದಲ್ಲಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ನೆರವೇರಿಸಲಾಯಿತು. ಅದೇ ಕಾರ್ಯಕ್ರಮದಲ್ಲಿ ಮಂಚೇನಹಳ್ಳಿ ತಾಲೂಕು ಕೇಂದ್ರವನ್ನಾಗಿ ಮಾಡುವ ಘೋಷಣೆಯನ್ನೂ ಮುಖ್ಯಮಂತ್ರಿಯ ಕಡೆಯಿಂದ ಮಾಡಿಸಿದರು. ಪ್ರಮುಖವಾಗಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಕೊಡಿಸಿದ್ದು ಕೆಲಸ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಸ್ತ್ರೀಶಕ್ತಿ ಸಂಘಗಳಿದ್ದು, ಸ್ತ್ರೀಶಕ್ತಿ ಸಂಘವೊಂದಕ್ಕೆ ತಲಾ 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದಾರೆ. ಹೀಗಾಗಿ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಕನಿಷ್ಠ 50 ಸಾವಿರ ರೂಪಾಯಿ ಸಾಲ ದೊರೆತಂತಾಗಿದೆ. ಹೀಗಾಗಿ ಬಹುತೇಕ ಮಹಿಳಾ ಮತದಾರರು ಸುಧಾಕರ್ ಅವರಿಗೆ ಮತ ಚಲಾಯಿಸಿದ್ದು ಗೆಲುವು ನಿರಾಯಾಸವಾಗಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ.

ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ವೆರೆಸಂದ್ರ ಹೀಗೆ ಕ್ಷೇತ್ರದ ಹಲವು ಭಾಗದಲ್ಲಿ ಡಾ.ಸುಧಾಕರ್ ಅವರಿಗೆ ಮತಗಳು ಬಿದ್ದಿವೆ. ಮತ್ತೊಂದು ಸಂಗತಿಯೆಂದರೆ ಕಾಂಗ್ರೆಸ್ ಬೆಂಬಲಿತ ಯುವ ಮತದಾರರೂ ಕೂಡ ಸುಧಾಕರ್‍ಗೆ ಜೈ ಅಂದಿರುವುದು ಗೆಲುವಿನ ಓಟಕ್ಕೆ ಕಾರಣವಾಗಿದೆ. ಯುವಕರನ್ನು ಸೆಳೆದಿರುವ ಸುಧಾಕರ್ ಅವರನ್ನು ಚನ್ನಾಗಿಯೇ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಕ್ಷೇತ್ರವ್ಯಾಪಿ ಕೇಳಿಬಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...