Homeಮುಖಪುಟನೆಲದ ವಿವೇಕ ಮರೆತು ಪುರಾಣಕ್ಕೆ ಸಂದ ಸುಪ್ರೀಂ ತೀರ್ಪು

ನೆಲದ ವಿವೇಕ ಮರೆತು ಪುರಾಣಕ್ಕೆ ಸಂದ ಸುಪ್ರೀಂ ತೀರ್ಪು

- Advertisement -
- Advertisement -

| ನಟರಾಜು. ವಿ |

ಪುರಾಣಪುರುಷ, ಆದರ್ಶಪುರುಷ ರಾಮನಿಗೆ ಗಾಂಧಿಯ ಸೌಹಾರ್ದಯುತ ನಾಡಲ್ಲಿ ವಿರಾಜಮಾನನಾಗಲು, ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಲು ಆಸಕ್ತಿ ಇದೆಯೇ ಹೊರತು ಇತಿಹಾಸದ ಗಾಯಗಳಲ್ಲಿ, ಕೋಮುವಾದಿ ಘೋಷಣೆಗಳಲ್ಲಿ, ಹಿಂಸೆಯ ನೆತ್ತರಲ್ಲಿ ಆತ ಎಂದಿಗೂ ನೆಲೆಸಲಾರ.

ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದಕ್ಕೆ ಅಂತ್ಯ ಹಾಡಲು ಉತ್ಸುಕವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ನ್ಯಾಯಾಲಯಗಳು ಎದುರಿಸುತ್ತಿರುವ ಇಕ್ಕಟ್ಟು, ಬಿಕ್ಕಟ್ಟುಗಳನ್ನು ಜಗಜ್ಜಾಹೀರು ಮಾಡಿದೆಯೇ ಎನ್ನುವ ಅನುಮಾನ ಮೂಡುವಂತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಗೌರವ ನೀಡುತ್ತಾ, ಅದಕ್ಕೆ ಬದ್ಧರಾಗಿರಬೇಕಾದ್ದು ದೇಶದ ಎಲ್ಲ ನಾಗರಿಕರ ಕರ್ತವ್ಯ. ಈ ಕರ್ತವ್ಯವನ್ನು ಪಾಲಿಸುತ್ತಲೇ ದೇಶದ ಸಂವಿಧಾನವು ನಮಗೆಲ್ಲರಿಗೂ ನೀಡಿರುವ ಹಕ್ಕುಗಳು, ಪ್ರಖರ ಆಲೋಚನೆ, ಚಿಂತನೆಗಳಿಗೆ ಕೊಡಮಾಡಿರುವ ಸ್ವಾತಂತ್ರ್ಯವನ್ನು ನಾವು ಬಳಸಬೇಕಿದೆ. ಆ ಮೂಲಕ ಬಹುತ್ವದ ನೆಲೆಗಟ್ಟಿನ ಮೇಲೆ ನಿಂತಿರುವ ಈ ದೇಶದ ಸಂವಿಧಾನವು ಬಹುಸಂಖ್ಯಾತರ ಪಾಲಿಗಷ್ಟೇ ಸಿಹಿಯಾಗಿಬಿಡುವ ಅಪಾಯವನ್ನು ಈ ತೀರ್ಪು ತಂದೊಡ್ಡಿದೆಯೇ ಎನ್ನುವ ಕುರಿತು ದಿಟ್ಟವಾಗಿ ಚರ್ಚಿಸಬೇಕಿದೆ.

ಈ ಹಿನ್ನೆಲೆಯಲ್ಲಿ, ಈ ಚರ್ಚೆಯ ಆರಂಭದಲ್ಲಿ ಮೊದಲಿಗೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತಾದ ತೀರ್ಪು ಇನ್ನೂ ಬಾಕಿ ಇದೆ ಎನ್ನುವ ವಿಷಯವನ್ನು ನಾವು ಗಮನಿಸಬೇಕು. ಇಡೀ ದೇಶವನ್ನು ಕೋಮುಧ್ರುವೀಕರಣಗೊಳಿಸಿದ, ವಿಘಟಿಸಿದ ಪ್ರಕರಣ ಇದಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪ್ರಸ್ತುತ ಲಖನೌನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ, 2020ರ ಏಪ್ರಿಲ್‍ನೊಳಗೆ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2017ರಲ್ಲಿ ಮಧ್ಯಪ್ರವೇಶಿಸಿ ತನಗಿರುವ ವಿಶೇಷ ಅಧಿಕಾರ ಬಳಸದೆ ಹೋಗಿದ್ದಲ್ಲಿ ಪ್ರಕರಣದ ಪ್ರಮುಖ ರೂವಾರಿಗಳು, ಬಿಜೆಪಿಯ ಹಿರಿಯ ನಾಯಕರುಗಳಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾಭಾರತಿ ಅವರ ವಿರುದ್ಧದ ಕ್ರಿಮಿನಲ್ ಸಂಚಿನ ಆರೋಪಗಳು ಬಿದ್ದೇ ಹೋಗಿರುತ್ತಿದ್ದವು. ಏಕೆಂದರೆ, ಈ ಸಂಬಂಧ 2001ರಲ್ಲಿಯೇ ಸಿಬಿಐ ವಿಶೇಷ ನ್ಯಾಯಾಲಯವು ಇವರ ಮೇಲಿನ ಆರೋಪಗಳನ್ನು ಕೈಬಿಟ್ಟಿತ್ತು. ಇದನ್ನು 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ 2017ರ ಮೇನಲ್ಲಿ ಈ ನಾಯಕರ ಮೇಲೆ ಕ್ರಿಮಿನಲ್ ಸಂಚಿನಡಿ ಆರೋಪ ಪಟ್ಟಿಯನ್ನು ಮತ್ತೆ ಸಿಬಿಐ ಸಿದ್ಧಪಡಿಸಿತು. ಇದೀಗ ಪ್ರಕರಣದ ಸಂಬಂಧ ಸಾಕ್ಷ್ಯಗಳ ವಿಚಾರಣೆ ನಡೆದಿದೆ.

ವಿಪರ್ಯಾಸವೆಂದರೆ, ಈ ಪ್ರಕರಣದಲ್ಲಿ ಆರೋಪಿತರಾದವರೆಲ್ಲರೂ ಸುದೀರ್ಘವಾದ ಸ್ಥಾನಮಾನಗಳನ್ನು, ಸಂವಿಧಾನಬದ್ಧವಾದ ಶಾಸನಾತ್ಮಕವಾದ ಪದವಿಗಳನ್ನು ಸಾರ್ವಜನಿಕವಾಗಿ ಅನುಭವಿಸಿದ್ದಾರೆ. ಮಸೀದಿ ಕೆಡವಿದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‍ಸಿಂಗ್ ಅವರ ಮೇಲಂತೂ 2017ರವರೆಗೂ ಸಿಬಿಐ ಆರೋಪ ಪಟ್ಟಿಯನ್ನೇ ದಾಖಲಿಸಿರಲಿಲ್ಲ. ಏಕೆಂದರೆ, ರಾಜ್ಯಪಾಲರಾಗಿದ್ದ ಅವರಿಗೆ ಸಾಂವಿಧಾನಿಕ ರಕ್ಷಣೆಯಿತ್ತು! ಇದು ನಮ್ಮ ನ್ಯಾಯವ್ಯವಸ್ಥೆಯ ಅವಸ್ಥೆ!! ಬಾಬರಿ ಮಸೀದಿ ಧ್ವಂಸ ಪ್ರಕರಣ ಹಾಗೂ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಈ ಎರಡು ಪ್ರಕರಣಗಳಲ್ಲಿ ಯಾವುದು ಗಂಭೀರವಾದದ್ದು? ದೇಶದ ಬಹುಸಂಖ್ಯಾತ ಹಿಂದೂಗಳ ನಂಬಿಕೆಯ ಕುರಿತಾದ ಪ್ರಕರಣ ಹೆಚ್ಚು ಗಂಭೀರವಾದದ್ದೋ ಅಥವಾ ದೇಶದ ಅಡಿಪಾಯವನ್ನೇ ಬುಡಮೇಲು ಮಾಡಲು ಮುಂದಾದ, ದೇಶದ ಸಂವಿಧಾನಕ್ಕೇ ಸವಾಲು ಹಾಕಿದ, ದೇಶದ ಐಕ್ಯತೆ, ಸೌಹಾರ್ದತೆಯನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದ ಪ್ರಕರಣ ಮುಖ್ಯವಾದದ್ದೋ? ಈ ಪ್ರಶ್ನೆ ನಿಜಕ್ಕೂ ನ್ಯಾಯದಾನ ಮಾಡುವ ಉನ್ನತ ಸಂಸ್ಥೆಗೆ ಮುಖ್ಯವಾಗಬೇಕಿತ್ತು.

ಅಷ್ಟಕ್ಕೂ, ಸುಪ್ರೀಂಕೋರ್ಟ್ ವಿವಾದದ ಕುರಿತಾದ ತನ್ನ ತೀರ್ಪಿನಲ್ಲಿ 1949ರಲ್ಲಿ ಮಸೀದಿಯೊಳಗೆ ರಾಮಲಲ್ಲಾನ ವಿಗ್ರಹವನ್ನು ಬಲವಂತವಾಗಿ ಇರಿಸಿ, ಮುಸಲ್ಮಾನರು ಆ ಸ್ಥಳದಲ್ಲಿ ಪ್ರಾರ್ಥನೆ ಮಾಡದಂತೆ ತಡೆದದ್ದನ್ನು ಹಾಗೂ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದನ್ನೂ ಅನ್ಯಾಯ ಹಾಗೂ ಗಂಭೀರ ಸ್ವರೂಪದ ಅಪರಾಧವೆಂದೇ ತೀರ್ಮಾನಿಸಿದೆ. ಆ ಮೂಲಕ ತನ್ನ ಮುಂದಿರುವ ಭೂಮಿಯ ಕುರಿತಾದ ಸಿವಿಲ್ ವ್ಯಾಜ್ಯದ ಪ್ರಕರಣವು ಗಂಭೀರವಾದ ಕ್ರಿಮಿನಲ್ ಪ್ರಕರಣದೊಟ್ಟಿಗೆ ತಳಕು ಹಾಕಿಕೊಂಡಿರುವುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ಒಪ್ಪಿಕೊಂಡಂತಾಗಿದೆ. ಹೀಗೆ ಒಂದಕ್ಕೊಂದು ಗಂಭೀರವಾಗಿ ತಳಕು ಹಾಕಿಕೊಂಡಿರುವ, ದೇಶದ ಜಾತ್ಯತೀತ ಸಂರಚನೆಯನ್ನು ಘಾಸಿಗೊಳಿಸಿರುವಂತಹ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುತ್ತಿರುವಾಗ, ಅವುಗಳಲ್ಲಿ ಅತಿ ಗಂಭೀರವಾದ ಅಪರಾಧದ ಪ್ರಕರಣದ ತೀರ್ಮಾನಕ್ಕೂ ಮುನ್ನವೇ ಸಿವಿಲ್ ವ್ಯಾಜ್ಯವನ್ನು ಬಗೆಹರಿಸಿದರೆ ಅದು ರವಾನಿಸಬಹುದಾದ ಸಂದೇಶವೇನು ಎನ್ನುವುದನ್ನು ಸುಪ್ರೀಂಕೋರ್ಟ್ ಒಂದು ಕ್ಷಣವೂ ಯೋಚಿಸಲಿಲ್ಲವೇ? ಕಾನೂನಿನಲ್ಲಿ ಹೀಗೆ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ, ನಿಜ. ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ, ವಿವಿಧ ಹಂತದ ಎರಡು ಪ್ರತ್ಯೇಕ ಕೋರ್ಟ್‍ಗಳಲ್ಲಿ ನಡೆಯುತ್ತಿದ್ದು, ಅವುಗಳದ್ದೇ ಆದ ಕಾಲಾನುಕ್ರಮದ ಅನುಸಾರವಾಗಿ ತೀರ್ಪು ಬರುತ್ತದೆ ಎಂದು ಹೇಳಿ ಮೇಲಿನ ಈ ಪ್ರಶ್ನೆಯನ್ನು ಸುಲಭವಾಗಿ ತಳ್ಳಿಹಾಕಿಬಿಡಬಹುದು. ಹಾಗಾದರೆ, ಅದೇ ಕಾನೂನಿನ ಪುಸ್ತಕದ ಅನುಸಾರವೇ ನಡೆದುಕೊಳ್ಳುವುದಾದರೆ, ಕಾನೂನಿನಲ್ಲಿ ಧಾರ್ಮಿಕ ನಂಬಿಕೆಗಳನ್ನು, ಸಮುದಾಯಗಳ ಆಸ್ಥೆಯನ್ನು ಗೌರವಿಸಿ ಎಂದು ಹೇಳಿದೆಯೇ ಹೊರತು ಅದನ್ನೇ ಸಾಕ್ಷ್ಯವೆಂದು ಪುರಸ್ಕರಿಸಿ ಎಂದು ಹೇಳಲಾಗಿದೆಯೇ? ಸುಪ್ರೀಂಕೋರ್ಟ್ ಎರಡನೆಯ ವಿಚಾರದಲ್ಲಿ ಉದಾರಿಯಾಗುವುದಾದರೆ, ಮೊದಲನೆಯ ವಿಚಾರದಲ್ಲಿಯೂ ಉದಾರಿಯಾಗಬೇಕಿತ್ತಲ್ಲವೇ? ದೇಶದ ಜಾತ್ಯತೀತ ಸಂರಚನೆಯನ್ನು ಗಮನದಲ್ಲಿರಿಸಿಕೊಂಡು ಮಸೀದಿ ಧ್ವಂಸ ಪ್ರಕರಣದ ತೀರ್ಪು ಕೆಳಹಂತದ ನ್ಯಾಯಾಲಯದಲ್ಲಿ ಪ್ರಕಟವಾಗುವವರೆಗೆ ತಾನು ವಿವಾದಿತ ಭೂಮಿಯ ಕುರಿತಾದ ಅಂತಿಮ ತೀರ್ಪನ್ನು ಪ್ರಕಟಿಸುವುದಿಲ್ಲ ಎನ್ನುವ ನಿರ್ಧಾರ ಅದು ಕೈಗೊಂಡಿದ್ದರೆ ಹೆಚ್ಚು ಸ್ವಾಗತಾರ್ಹವಾಗುತ್ತಿತ್ತು ಅಲ್ಲವೇ? ಆ ಮೂಲಕ ಏಕಕಾಲಕ್ಕೇ ಸಾಂವಿಧಾನಿಕವೂ, ನ್ಯಾಯಿಕವೂ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ವಿವೇಕಯುತವೂ ಹಾಗೂ ನೈತಿಕವೂ ಆದಂತಹ ಎಚ್ಚರವೊಂದನ್ನು ದೇಶದುದ್ದಕ್ಕೂ ಅದು ರವಾನಿಸಬಹುದಿತ್ತು. ಅದರೆ, ಹಾಗಾಗಲಿಲ್ಲ.

ಇನ್ನು, ರಾಮಜನ್ಮಭೂಮಿಯನ್ನು ರಾಮಲಲ್ಲಾನಿಗೆ ಮರಳಿಸುವ ಮೂಲಕ ಏಕಕಾಲಕ್ಕೇ ‘ಪೌರಾಣಿಕವೂ’, ‘ಐತಿಹಾಸಿಕವೂ’ ಆದ ಪ್ರಮಾದವೊಂದನ್ನು ಸುಪ್ರೀಂಕೋರ್ಟ್ ಸರಿಪಡಿಸಿಬಿಟ್ಟಿದೆ ಎಂದು ಬೀಗುವವರು ದೇಶದ ತುಂಬ ತುಂಬಿದ್ದಾರೆ. ಸರಿ, ಮುಂದೇನಾದರೂ ಸಿಬಿಐ ನ್ಯಾಯಾಲಯವು ಮೇಲೆ ಹೇಳಿದ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದರೆ ಅವರು ಈವರೆಗೆ ಸಾಂವಿಧಾನಿಕವಾಗಿಯೂ, ಶಾಸನಾತ್ಮಕವಾಗಿಯೂ ಅನುಭವಿಸಿದ ಅಧಿಕಾರವನ್ನು ಕಾಲಚಕ್ರದಲ್ಲಿ ಹಿಂದೆ ಸರಿದು ಕಿತ್ತುಕೊಳ್ಳುವ ಮೂಲಕ ಆಗಿಹೋದ ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಈ ದೇಶದ ನ್ಯಾಯಾಂಗಕ್ಕೆ ಸಾಧ್ಯವಿದೆಯೇ ಎನ್ನುವುದನ್ನು ಈ ಮಂದಿ ವಿವರಿಸಬೇಕು. ನ್ಯಾಯಾಲಯಗಳಿಗೆ ನ್ಯಾಯತೀರ್ಮಾನವಷ್ಟೇ ಮುಖ್ಯವಾಗಬೇಕೆ ಹೊರತು ‘ಐತಿಹಾಸಿಕ ಪ್ರಮಾದಗಳನ್ನು’ ಸರಿಪಡಿಸುವ ಹುಚ್ಚು ಜವಾಬ್ದಾರಿ ಹೆಗಲೇರಬಾರದು. ಈ ದೇಶದಲ್ಲಿ ಹಲವಾರು ಆದಿವಾಸಿ ಸಮುದಾಯಗಳು ತಮ್ಮ ಸುತ್ತಲಿನ ಅರಣ್ಯ, ಪರಿಸರವನ್ನೇ ದೇವರೆಂದು ನಂಬಿಕೊಂಡು, ಪೂಜಿಸಿಕೊಂಡು ಬಂದಿದ್ದವರು. ಇಂತಹ ಅನೇಕ ಸಮುದಾಯಗಳನ್ನು ದೇಶದ ಅಭಿವೃದ್ಧಿಯ ನೆಪವೊಡ್ಡಿ, ಗಣಿಗಾರಿಕೆಯನ್ನು ನಡೆಸಲೆಂದೋ, ಅಣೆಕಟ್ಟುಗಳನ್ನು ನಿರ್ಮಿಸಲೆಂದೋ ಒಕ್ಕಲೆಬ್ಬಿಸಲಾಗಿದೆ. ಅಂತಹ ಸಂದರ್ಭಗಳಲ್ಲೆಲ್ಲಾ ಇವರ ನಂಬಿಕೆಗಳನ್ನು, ಆಚರಣೆಗಳನ್ನು, ಐತಿಹ್ಯಗಳನ್ನು ಯಾವ ನ್ಯಾಯಾಲಯಗಳು ಪುರಸ್ಕರಿಸಿದವು? ಬಹುಸಂಖ್ಯಾತರ ಭಾವನೆಗಳಿಗೆ ಘಾಸಿಯಾಗದಂತೆ ಮಿಡಿಯುವ ಸರ್ಕಾರಗಳು, ನ್ಯಾಯಾಲಯಗಳು, ದನಿಯೇ ಇಲ್ಲದ ಇಂತಹ ಆದಿವಾಸಿಗಳ ಪರವಾಗಿ ಮಿಡಿದಿದ್ದೆಷ್ಟು ಬಾರಿ?

ಸುಪ್ರೀಂ ತೀರ್ಪನ್ನು ಅವಲೋಕಿಸುತ್ತಾ ಹೋದರೆ, ಪುರಾಣ ಪುರುಷನಾದ ಶ್ರೀರಾಮನು, ಇತಿಹಾಸ ಪುರುಷನಾಗಿ ಬದಲಾದಾಗ ನ್ಯಾಯದಾನದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಅದು ಹೆಚ್ಚು ವಿಚಾರ ಮಾಡಿದಂತೆ ಕಾಣುವುದಿಲ್ಲ. ನಂಬಿಕೆಗಳನ್ನು ಗೌರವಿಸುವುದಕ್ಕೂ, ಅದೇ ನಂಬಿಕೆಗಳನ್ನು ಸಾಕ್ಷ್ಯಗಳಾಗಿ ಪುರಸ್ಕರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಾಮಾನ್ಯವಾಗಿ ಅಪರಾಧ ಪ್ರಕರಣಗಳನ್ನು ತೀರ್ಮಾನಿಸುವಾಗ ನ್ಯಾಯಾಲಯಗಳು ತಮ್ಮ ಮುಂದಿರುವ ಸಾಕ್ಷ್ಯಗಳು “Beyond Reasonable Doubt”, ಅನುಮಾನಕ್ಕೆ ಆಸ್ಪದವಿಲ್ಲದ ಹಾಗೆ ಇರುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಅದೇ ರೀತಿ, ಸಿವಿಲ್ ಪ್ರಕರಣಗಳ ವಿಚಾರಣೆಯಲ್ಲಿ, “Preponderance of Probability” ಆಧಾರದಲ್ಲಿ, ಅಂದರೆ ತಮ್ಮೆದುರಿಗಿರುವ ವಾದಿ, ಪ್ರತಿವಾದಿಗಳು ಒದಗಿಸಿರುವ ಸಾಕ್ಷ್ಯಗಳಲ್ಲಿ ಹೆಚ್ಚು ಬಲವಾಗಿದೆ ಎನಿಸುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ನ್ಯಾಯದಾನಕ್ಕೆ ಮುಂದಾಗುತ್ತವೆ. ಮೇಲಿನ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ಅಂತಿಮ ತೀರ್ಪು, “Preponderance of Probability” ಅನ್ನು ಹೆಚ್ಚು ಆಧರಿಸಿದೆ. ಈ ‘‘ಪ್ರಿಪಾಂಡರೆನ್ಸ್ ಆಫ್ ಪ್ರಾಬಬಿಲಿಟಿ’’ಗೆ ಆಧಾರವಾಗಿರುವುದು ಸ್ಕಂದ ಪುರಾಣ, ಧಾರ್ಮಿಕ ನಂಬಿಕೆಗಳು ಹಾಗೂ ಮಸೀದಿಯ ಸ್ಥಳದಲ್ಲಿ ದೊರೆತಿರುವ ಇಸ್ಲಾಂಗೆ ಹೊರತಾದ ಧಾರ್ಮಿಕ ಗುರುತುಗಳು. ಹೀಗೆ, ಯಾವ ನಂಬಿಕೆಗಳು, ಪುರಾಣಗಳು, ಐತಿಹ್ಯಗಳು ಸುಪ್ರೀಂಕೋರ್ಟ್ ತೀರ್ಪಿಗೆ ಕಾರಣವಾಗಿವೆಯೋ ಅದೇ ನಂಬಿಕೆಗಳ ಆಧಾರದಲ್ಲಿಯೇ ಅಲ್ಲಿದ್ದ ಮಸೀದಿಯನ್ನು ಮತೀಯವಾದಿ, ಉದ್ರೇಕಿತ ಗುಂಪು ಧ್ವಂಸಗೊಳಿಸಿತ್ತು. ದೇಶದ ಇತಿಹಾಸ ಕಂಡಿರುವ ಗುರುತರವಾದ, ಗಂಭೀರವಾದ ಅಪರಾಧ ಪ್ರಕರಣವೊಂದು ಘಟಿಸಲು ಈ ನಂಬಿಕೆಗಳ ಹಿನ್ನೆಲೆಯಲ್ಲಿ ಅಲ್ಲಿ ನೆರೆದಿದ್ದ ಸಮೂಹವನ್ನು ಉದ್ರೇಕಿಸಿದ್ದು ಕಾರಣ ಎನ್ನುವುದನ್ನು ನಾವು ಮರೆಯುವಂತಿಲ್ಲ. ಹೀಗಿರುವಾಗ, ನಂಬಿಕೆಗಳನ್ನು ಗೌರವಿಸುವುದಕ್ಕೂ ಅವುಗಳನ್ನು ಗುರುತರ ಸಾಕ್ಷ್ಯಗಳೆಂದು ಪರಿಗಣಿಸುವುದಕ್ಕೂ ಇರುವ ವ್ಯತ್ಯಾಸ ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ, ಸುಪ್ರೀಂಕೋರ್ಟ್ ಈ ಭೂವಿವಾದವನ್ನು ಒಂದು ಸಿವಿಲ್ ವ್ಯಾಜ್ಯವಾಗಿ ಮಾತ್ರವೇ ಪರಿಗಣಿಸದೆ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವ ರಾಜಕೀಯ ಸಂಚಿನ ಭಾಗವಾಗಿಯೇ ಸಮಗ್ರವಾಗಿ ಗ್ರಹಿಸಿದ್ದರೆ ಹೆಚ್ಚು ಸೂಕ್ತವಿತ್ತು. ಆಗ ಮೇಲೆ ಹೇಳಿದ ನಂಬಿಕೆಗಳನ್ನು ಗೌರವಿಸಿಯೂ ಸಹ ಅಲ್ಲಿ ಮಂದಿರ, ಮಸೀದಿಗಳ ಆಚೆಗೆ ನಿಂತು ಅವಲೋಕಿಸುವುದು, ನ್ಯಾಯದಾನದ ಸಾಧ್ಯತೆಗಳನ್ನು ವಿಸ್ತರಿಸುವುದು ಸಾಧ್ಯವಿತ್ತು. ಯಾವ ಕ್ಷಣದಲ್ಲಿ ಸುಪ್ರೀಂಕೋರ್ಟ್ ಪುರಾಣ, ನಂಬಿಕೆಗಳ ಜಗತ್ತನ್ನು ಪ್ರವೇಶಿಸಿ ನ್ಯಾಯದಾನಕ್ಕೆ ಮುಂದಾಯಿತೋ ಅದೇ ಕ್ಷಣದಲ್ಲಿಯೇ ಅದು ಬಹುಜನರ ನಂಬಿಕೆಗಳ ಸುತ್ತ ಹೆಣೆಯಲಾಗುವ ರಾಜಕೀಯ ಕಾರ್ಯಸೂಚಿಯ ಬಲೆಯಲ್ಲಿ ತನಗೆ ಅರಿವಿದ್ದೋ, ಇಲ್ಲದೆಯೋ ಸಿಲುಕಿತು.

ಇದೇ ಕಾರಣಕ್ಕೆ, ಸುಪ್ರೀಂಕೋರ್ಟ್ ತೀರ್ಪನ್ನು ಗಮನಿಸಿದರೆ ಅಲ್ಲಿ ಕೋಮು ಹಿಂಸೆಗಳಿಗೆ, ದಂಗೆಗಳಿಗೆ ಕಾರಣವಾಗದ ರೀತಿಯಲ್ಲಿ, ದೇಶದಲ್ಲಿನ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಅತಿ ಕಡಿಮೆ ಅಪಾಯದ ತೀರ್ಪನ್ನು ನೀಡುವೆಡೆಗೆ ವಾಲಿದಂತೆ ಕಾಣುತ್ತದೆ. ಇದೇ ವೇಳೆ, ಅಯೋಧ್ಯೆಯಲ್ಲಿ ಆದಂತಹ ಘಟನೆಗಳು ದೇಶದಲ್ಲೆಲ್ಲೂ ಮರುಕಳಿಸದಂತೆ ಎಚ್ಚರಿಕೆಯ ಕ್ರಮವಾಗಿ 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರ್ಕಾರ ಜಾರಿಗೆ ತಂದ 1991ರ ಪೂಜಾಸ್ಥಳಗಳ (ವಿಶೇಷ ಉಪಬಂಧಗಳ) ಅಧಿನಿಯಮ – The Places of Worship (Special Provisions) Act, 1991 ಬಗ್ಗೆ ಅದು ಹೆಚ್ಚು ವಿಶ್ವಾಸವನ್ನಿರಿಸುವಂತೆ ಕಾಣುತ್ತದೆ. ಈ ಕಾಯಿದೆಯ ಅನುಸಾರ ಯಾವುದೇ ಪೂಜಾಸ್ಥಳಗಳನ್ನು ಆಗಸ್ಟ್ 15, 1947ರಂತೆ ಯಥಾಸ್ಥಿತಿ ಆಚರಣೆಗಳಲ್ಲಿ ಮುಂದುವರೆಸಬೇಕು. ಅಂದರೆ, ಅಲ್ಲಿ ನಡೆಯುತ್ತಿರುವ ಪೂಜಾ ವಿಧಿಗಳ ಆಚರಣೆಗಳೇನಿವೆ ಅದನ್ನೇ ಕಾಯ್ದುಕೊಂಡು ಹೋಗಬೇಕು ಎನ್ನುವುದಾಗಿದೆ. ವಿಪರ್ಯಾಸವೆಂದರೆ, ಅಯೋಧ್ಯೆ ವಿವಾದದ ತೀರ್ಪು ಬಂದು ದಿನಗಳುರುಳುವ ಮೊದಲೇ ಮೇಲೆ ಹೇಳಿದ ಕಾಯಿದೆಯನ್ನು ಹಿಂಪಡೆಯುವಂತೆ ಪಿಐಎಲ್ ಅರ್ಜಿ ಸಲ್ಲಿಸುವ ಬಗ್ಗೆ ಸಂಘ ಪರಿವಾರದ ಅನುಯಾಯಿಗಳು ಚರ್ಚಿಸುತ್ತಿರುವುದು ಸುದ್ದಿಯಾಗಿದೆ. ಇದರರ್ಥ, ಕಾಶಿ, ಮಥುರಾದ ದೇವಾಲಯಗಳ ಜೊತೆಜೊತೆಗೇ, ವಿದಿಶಾದ ವಿಜಯ ಮಂದಿರ, ಗುಜರಾತ್ ಬಾಟ್ನಾದ ರುದ್ರ ಮಹಾಲಯ, ಭದ್ರಕಾಳಿ ದೇಗುಲ, ಧರ್ ಪ್ರಾಂತ್ಯದ ರಾಜ ಭೋಜ-ಬೋಜಶಾಲಾ ಮುಂತಾದ ಹತ್ತುಹಲವು ವಿವಾದಗಳಿಗೆ ಜೀವ ತುಂಬಲು ಸಂಘ ಪರಿವಾರ ಉತ್ಸುಕವಾಗಿದೆ ಎಂದಾಯಿತು. ಈವರೆಗೆ ಎಲ್ಲವೂ ಸಂಘ ಪರಿವಾರದ ಕಾರ್ಯಸೂಚಿಯಂತೆಯೇ ನಡೆದಿದೆ ಎನ್ನುವುದನ್ನು ಇಲ್ಲಿ ಮರೆಯಬಾರದು.

ಇನ್ನು ಕಾನೂನು ಕಟ್ಟಳೆಗಳಾಚೆಗೆ, ಪುರಾಣ ಇತಿಹಾಸಗಳಾಚೆಗೆ ನಿಂತು ಎಲ್ಲ ಧರ್ಮಗಳ ಮೂಲಭೂತವಾದವನ್ನು, ಡಾಂಭಿಕತೆಯನ್ನು ಖಂಡಿಸಿದ, ಪುರಾಣವೆನ್ನುವುದು ಪುಂಡರಗೋಷ್ಠಿಯೆಂದು ಖಂಡಿಸಿದ ಈ ನೆಲದ ವಿವೇಕದಿಂದ, ಇಲ್ಲಿನ ಸಾಧುಸಂತರ, ಸೂಫಿಗಳ ತಿಳಿವಿನಿಂದ ಇಡೀ ಪ್ರಕರಣವನ್ನು ಗಮನಿಸಬಹುದಿತ್ತೇನೋ… ಹಾಗಾಗಿದ್ದಲ್ಲಿ, ಬಹುಶಃ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಹೆಚ್ಚಿನ ಲಾಭವಾಗುತ್ತಿತ್ತು. ಪುರಾಣ ಪುರುಷ ನಿಜ ರಾಮನಿಗೆ ಬೇಕಿರುವುದು ಸದಾಚಾರದ ರಾಮರಾಜ್ಯವೇ ಹೊರತು, ತನ್ನದೇ ದೇಶವಾಸಿಗಳು ರಾಮರಹೀಮರ ಹೆಸರಿನಲ್ಲಿ ಬಡಿದಾಡಿಕೊಳ್ಳುವುದನ್ನು ತಪ್ಪಿಸಲಿಕ್ಕಾಗಿ ತನಗೆ ನೀಡುವ ತುಂಡು ನೆಲವಲ್ಲ ಎನ್ನುವುದು ಅರಿವಾಗುತ್ತಿತ್ತು. ಪುರಾಣಪುರುಷ, ಆದರ್ಶಪುರುಷ ರಾಮನಿಗೆ ಗಾಂಧಿಯ ಸೌಹಾರ್ದಯುತ ನಾಡಲ್ಲಿ ವಿರಾಜಮಾನನಾಗಲು, ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಲು ಆಸಕ್ತಿ ಇದೆಯೇ ಹೊರತು ಇತಿಹಾಸದ ಗಾಯಗಳಲ್ಲಿ, ಕೋಮುವಾದಿ ಘೋಷಣೆಗಳಲ್ಲಿ, ಹಿಂಸೆಯ ನೆತ್ತರಲ್ಲಿ ಆತ ಎಂದಿಗೂ ನೆಲೆಸಲಾರ. ಕಾನೂನು, ಕಟ್ಟಳೆಗಳು ಹೇಳುವ ನ್ಯಾಯಗಳೇ ದೊಡ್ಡದಾಗಿದ್ದರೆ ಈ ಜಗತ್ತಿನಲ್ಲಿ ಮಹಾಮಹಿಮರ ಹೆಸರುಗಳ ಜಾಗದಲ್ಲಿ ನ್ಯಾಯಮೂರ್ತಿಗಳಿರುತ್ತಿದ್ದರು. ನಮ್ಮ ನ್ಯಾಯಾಲಯಗಳು ಈ ನೆಲದ ಕಾನೂನಿನಿಂದ ಶಕ್ತಿಯನ್ನು ಪಡೆಯುವಂತೆಯೇ, ಈ ನೆಲದ ವಿವೇಕದಿಂದ ತಿಳಿವನ್ನೂ, ಸತ್ವವನ್ನೂ ಪಡೆಯಬೇಕಿದೆ. ಆಗಷ್ಟೇ ಈ ನೆಲದ ಬಹುತ್ವವನ್ನು ದಿಟ್ಟವಾಗಿ ಕಾಯಲು ಸಾಧ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...