34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಶುಕ್ರವಾರ ಪಂಜಾಬ್‌ನ ಪಟಿಯಾಲಾ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಅನಾರೋಗ್ಯದ ಕಾರಣ ನೀಡಿದ ಅವರು ಶರಣಾಗಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದರು.
ಸಮಯಾವಕಾಶಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ನವಜೋತ್ ಸಿಧು ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ಸಂಪರ್ಕಿಸಲು ಹೇಳಿದರು. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿಯ ಮುಂದೆ ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದು ಸಿದ್ದು ಅವರ ತಂಡ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸುಪ್ರೀಂ ಆದೇಶದ ನಂತರ ಸಿಧು ಅವರು, ‘ಕಾನೂನಿಗೆ ತಲೆ ಬಾಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಗುರುವಾರದಂದು ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷದ ‘ಕಠಿಣ ಜೈಲು ಶಿಕ್ಷೆ’ ವಿಧಿಸಿದೆ.
ಸಿಧು ಅವರ ಸಮಯ ಕೋರಿಕೆಯನ್ನು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ವಿರೋಧಿಸಿದ್ದರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಧು ಪರ ವಕೀಲ ಅಭಿಷೇಕ್ ಸಿಂಘ್ವಿ, “ನಾನು ಶರಣಾಗುತ್ತೇನೆ ಎಂದು ಹೇಳುತ್ತಿದ್ದೇನೆ. ಸಮಯಾವಕಾಶ ನೀಡುವ ಮನವಿಯನ್ನು ಪರಿಗಣಿಸುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಷಯವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ: ಪೊಲೀಸರ ಎದುರೇ ಬಜರಂಗದಳ ಕಾರ್ಯಕರ್ತರ ಘೋಷಣೆ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖಾನ್ವಿಲ್ಕರ್, “ಔಪಚಾರಿಕ ಅರ್ಜಿಯನ್ನು ಇರಿಸಿ. ಈ ಬಗ್ಗೆ ನಾವು ನೋಡುತ್ತೇವೆ. ಅರ್ಜಿಯನ್ನು ಸಲ್ಲಿಸಿ ಮುಖ್ಯ ನ್ಯಾಯಮೂರ್ತಿಯ ಮುಂದೆ ಅದನ್ನು ನಮೂದಿಸಿ, ನಂತರ ನಾವು ನೋಡೋಣ” ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
1988ರಲ್ಲಿ ನಡೆದ ರಸ್ತೆ ಗಲಾಟೆಯೊಂದರಲ್ಲಿ ಗುರುನಾಮ್ ಸಿಂಗ್ ಅವರನ್ನು ಮಾಜಿ ಕ್ರಿಕೆಟಿಗ ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಥಳಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಗುರುನಾಮ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವಿಗೀಡಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಸಿಧು ಅವರನ್ನು ಅಪರಾಧಿ ಎಂದು ತೀರ್ಪು ನೀಡಿ, 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ಪ್ರಮಾಣ ಮರು ಪರಿಶೀಲಿಸುವಂತೆ ಕೋರಿ ಸಿಧು ಅವರು ಸುಪ್ರೀಂ ಮೆಟ್ಟಿಲೇರಿದ್ದರು.
ಸಿಧು ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡಿದ ಪ್ರಕರಣ ಎಂದು ಪರಿಗಣಿಸಿ ಸಿಧು ಅವರಿಗೆ 3 ವರ್ಷಗಳ ಜೈಲು ಶಿಕ್ಷೆಯ ಬದಲಾಗಿ 1000 ರೂ. ದಂಡ ವಿಧಿಸಿ ಮೇ 2018ರಲ್ಲಿ ತೀರ್ಪು ನೀಡಿತ್ತು.
ಇದನ್ನೂ ಓದಿ: ‘ಕರ್ನಾಟಕ ಹೈಕೋರ್ಟ್‌ನಲ್ಲೇ ನಮಾಜ್’ ಎಂಬ ದ್ವೇಷ ಹರಡುವ ವಿಡಿಯೋ ಪ್ರಸಾರ: ಬಲಪಂಥೀಯ ಸಂವಾದ ಯೂಟ್ಯೂಬ್ ಚಾನೆಲ್ ಮೇಲೆ FIR
ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ವಿರುದ್ಧ ಮೃತ ಗುರುನಾಮ್ ಸಿಂಗ್ ಅವರ ಪುತ್ರ ಸೆಪ್ಟೆಂಬರ್ 2018ರಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮರುಪರಿಶೀಲೀಸಿದ ಸುಪ್ರೀಂ ಕೋರ್ಟ್, 1 ವರ್ಷದ ಜೈಲು ಶಿಕ್ಷೆ ವಿಧಿಸಿ ಗುರುವಾರು ತೀರ್ಪು ನೀಡಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ನಂತರ ಸಿಧು ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.