ಸಾಹಿತ್ಯ ಸಮ್ಮೇಳನದಲ್ಲಿ ರವೀಂದ್ರನಾಥ ದಂಪತಿಗೆ ಗೌರವ

ಈ ಎಲ್ಲದರ ನಡುವೆಯೂ ಕಾಫಿ ವಲಯದ ಸಾಂಸ್ಕೃತಿಕ ಲೋಕ ಹೇಗಿತ್ತು. ಆ ಕಾಲದ ಈ ಎಲ್ಲ ವ್ಯಕ್ತಿಗಳು ಹೇಗೆ ಬದುಕಿದರು. ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.

ಅಂದಿನ ರಾಜಕಾರಣ ಮತ್ತು ರಾಜಕಾರಣಿಗಳ ವಿಚಾರ ಬಂದಾಗ ಅವರಲ್ಲಿ ಎಲ್ಲರೂ ಒಂದೇ ರೀತಿ ಇರಲಿಲ್ಲ ನಿಜ. ಇಂದಿನ ರಾಜಕಾರಣದ ಮೊಳಕೆಗಳನ್ನು ಅಲ್ಲಿಯೂ ಕಾಣಬಹುದು. ಆದರೆ ಕನಿಷ್ಟ ಸಾರ್ವಜನಿಕವಾಗಿ ಕೆಲವು ಸಭ್ಯತೆ, ಶಿಸ್ತುಗಳನ್ನಾದರೂ ಇಟ್ಟುಕೊಂಡಿದ್ದರು. ತಪ್ಪು ಮಾಡಿದಾಗ ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಭ್ರಷ್ಟಾಚಾರವನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುವ ಸ್ಥಿತಿಯಂತೂ ಇರಲಿಲ್ಲ.

ಅದರ ನಡುವೆಯೇ ಬರಹಗಳಲ್ಲಿ ಉಲ್ಲೇಖಿಸಲಾದ ಹಲವರಂತೂ, ನಿಜವಾದ ಪ್ರಜಾಪ್ರಭುತ್ವದ ಮಾದರಿ ಎಂಬಂತೆ ಇದ್ದರು. ಅವರ ಸಿದ್ಧಾಂತ, ನಿಲುವುಗಳ ಬೇರೆ ಬೇರೆ ಇದ್ದರೂ ಮನುಷ್ಯ ದ್ವೇಷಿಗಳಂತೂ ಆಗಿರಲಿಲ್ಲ. ರಾಜಕಾರಣದಲ್ಲಿ ಹಲವು ಎತ್ತರಗಳನ್ನು ಏರಿದ ಅನೇಕರು ವೈಯಕ್ತಿಕವಾಗಿ ನೈತಿಕತೆಯನ್ನು ಉಳಿಸಿಕೊಂಡಿದ್ದರು.

ಸಾಮಾಜಿಕ ಸೇವೆಗಳಲ್ಲಿ ತೊಡಗಿದವರು ಅದೊಂದು ತಮ್ಮ ಕರ್ತವ್ಯವೆಂದೋ, ಸೇವೆಯೆಂದೋ ತಿಳಿದರಲ್ಲದೆ, ಅದರಿಂದ ಯಾವುದೇ ಪ್ರಚಾರವನ್ನಾಗಲೀ, ಪ್ರಶಸ್ತಿ ಪುರಸ್ಕಾರಗಳನ್ನಾಗಲೀ ಬಯಸಲಿಲ್ಲ. ಎಷ್ಟೋ ಜನಪರ ಕೆಲಸಗಳನ್ನು ಸದ್ದಿಲ್ಲದೆ ಮಾಡಿದರು. ಕೆಲವರು ಉನ್ನತ ಹುದ್ದೆಗಳಿಗೇ ತಲುಪಿದರು, ಅದು ಅವರ ನಿರಂತರ ದುಡಿಮೆಯಿಂದ.

ಈ ಬರಹಗಳಲ್ಲಿ ಪ್ರಸ್ತಾಪವಾದ ಹಲವಾರು ಜನರುಗಳಲ್ಲಿ, ವೆಂಕಟಸುಬ್ಬಯ್ಯ, ಬೇಳೂರು ಗುರಪ್ಪ, ಮಹಮದ್ ಬಾಕರ್, ಶಾಫ್ ಸಿದ್ದೇಗೌಡ, ಹಾದಿಗೆ ಶಾಂತಪ್ಪ, ಗಣಪಯ್ಯ, ಸೈಯದ್ ಹಫೀಝ್, ರವೀಂದ್ರನಾಥ ಮುಂತಾದವರು ಯಾವುದೇ ರೀತಿಯ ಸಾಮಾಜಿಕ ಮನ್ನಣೆಯನ್ನಾಗಲೀ ಪ್ರಶಸ್ತಿಗಳೂ ಬರಲಿಲ್ಲ. ಆದರೆ ಇವರು ಅದನ್ನೆಲ್ಲ ಮೀರಿ ಕೆಲಸ ಮಾಡಿದವರು.

ತೀರ ಇತ್ತೀಚಿನ ಅಂದರೆ ಎಂಬತ್ತರ ದಶಕದಲ್ಲಿ ಶಾಸಕರಾಗಿದ್ದ ಬಿ.ಡಿ.ಬಸವರಾಜ್ ಅವರ ಕಾಲದ ಸಂಗತಿಯಿದು. ನಮ್ಮ ಗೆಳೆಯರ ಕೂಟದಲ್ಲಿ ಹೆಚ್ಚಿನವರು ಬಸವರಾಜ್ ಅವರ ಬೆಂಬಲಿಗರಾಗಿದ್ದೆವು. ಅವರಿಗೂ ನಮ್ಮಲ್ಲಿ ಏಕವಚನದ ಸಲುಗೆ. ಸುಳ್ಯ ತಾಲ್ಲೂಕಿನ ನನ್ನ ಹತ್ತಿರದ ಸಂಬಂಧಿಯೊಬ್ಬನಿಗೆ ಸರ್ಕಾರದ ಮಟ್ಟದಲ್ಲಿ ಒಂದು ಕೆಲಸವಾಗಬೇಕಾಗಿತ್ತು.ನನ್ನ ಮೂಲಕ ಬಸವರಾಜ್ ಅವರನ್ನು ಸಂಪರ್ಕಿಸಿದ. ಕೆಲವೇ ದಿನಗಳಲ್ಲಿ ಆತನೂ ಬಿ.ಡಿ.ಬಸವರಾಜ್ ಅವರಿಗೆ ಏಕವಚನದ ಶಿಷ್ಯನಾದ.

ಒಮ್ಮೆ ಸಕಲೇಶಪುರದಲ್ಲಿ ಬಿ.ಜೆ.ಪಿ ಯವರಿಂದ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆ. ಸ್ಥಳೀಯ ಬಿ.ಜೆ.ಪಿ ನಾಯಕರೊಬ್ಬರು ವೀರಾವೇಷದಿಂದ ಮಾತನಾಡುತ್ತಿದ್ದರು. ಜೊತೆಗೆ ಶಾಸಕ ಬಿ.ಡಿ ಬಸವರಾಜ್ ಅವರನ್ನು ಘನ ಘೋರವಾಗಿ ಟೀಕಿಸಿದರು. ಸಭೆ ಮುಗಿಯಿತು. ಆ ಸಭೆ ನಡೆಯುವಾಗ ನಾವಿಬ್ಬರೂ ಅಲ್ಲಿದ್ದೆವು.

ಮಾರನೆಯ ದಿನ ನನ್ನ ಸಂಬಂಧಿ ಬಸವರಾಜ್ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೋಗಿ ವಿಧಾನ ಸೌಧದ ಶಾಸಕರ ಭವನದಲ್ಲಿ ಬಿ.ಡಿ ಬಸವರಾಜ್ ಅವರ ಕೊಠಡಿಗೆ ಹೋದರು. ಶಾಸಕರು ಅಲ್ಲೇ ಇದ್ದರು.  ಪಕ್ಕದ ಮಂಚದಲ್ಲಿ ಒಬ್ಬರು ಮೈತುಂಬ ಹೊದ್ದು ಮಲಗಿದ್ದರು.

ನನ್ನ ಸಂಬಂಧಿ ಹೋಗಿ ಅವರೊಡನೆ ಮಾತಾನಾಡುತ್ತ, ಸಕಲೇಶಪುರದಿಂದ ಬಂದೆ, ನಿನ್ನೆ ಬಿಜೆಪಿ ಯವರದ್ದು ಸಭೆ ಇತ್ತು, ಎಂದರು.

ಆಗ ಬಸವರಾಜ್ ನೀನೂ ಅಲ್ಲಿ ಇದ್ಯಾ? ಎಂದು ಹಿಂದಿನ ದಿನ ವೀರಾವೇಷದ ಭಾಷಣ ಮಾಡಿದವರ ಹೆಸರನ್ನು ಹೇಳಿ, ಅವನು ನನಗೆ ಬಾರೀ ಬೈದನಂತೆ? ಎಂದರು.

ಆಗ ನನ್ನ ಸಂಬಂಧಿ “ಅದು ಬಿಡಿ ಸರ್, ಹೋಗಲಿ” ಎಂದರು.

“ಹೇಳೋ ಪರವಾಗಿಲ್ಲ” ಎಂದರು ಬಸವರಾಜ್.

ನನ್ನ ಸಂಬಂಧಿ ಮಾತಾಡಲಿಲ್ಲ. ಆಗ ಬಸವರಾಜ್ “ನೋಡು ಬೇಕೂಫ ಇಲ್ಲೇ ಬಂದು ಮಲ್ಲಕ್ಕಂಡಿದಾನೆ” ಎಂದರು.

ಮುಸುಕು ಹೊದ್ದು ಮಲಗಿದ್ದ ಗಿರಾಕಿ ಮುಸುಕು ತೆಗೆದು “ಸುಮ್ನಿರಿ ಸ್ವಲ್ಪ ನಿದ್ದೆ ಮಾಡಕ್ಕಾದ್ರೂ ಬಿಡಿ” ಎಂದು ಮತ್ತೆ ಮುಸುಕು ಹೊದ್ದು ಮಲಗಿದರು.

ನನ್ನ ಸಂಬಂಧಿಗೆ ಆಶ್ಚರ್ಯವೂ, ಗಾಭರಿಯೂ ಆಯಿತು. ಅಲ್ಲಿ ಮಲಗಿದ್ದವರು ಹಿಂದಿನ ದಿನ ಸಕಲೇಶಪುದಲ್ಲಿ ವೇದಿಕೆ ಮೇಲೆ ಬಸವರಾಜ್ ಅವರನ್ನು ವೀರಾವೇಷದಿಂದ ಬೈದ ವ್ಯಕ್ತಿಯಾಗಿದ್ದರು!!

ಬಸವರಾಜ್ ಅವರು ಇದ್ದುದೇ ಹಾಗೆ, ಯಾರನ್ನೂ ದ್ವೇಷಿಸುವ ವ್ಯಕ್ತಿಯಾಗಿರಲಿಲ್ಲ. ಅದರೆ ತಮ್ಮ ನೇರ ಮಾತಿನಿಂದ ಕೆಲವು ಸಲ ಅಪಾರ್ಥಕ್ಕೂ ಎಡೆಯಾದರು. ಹಲವರ ನಿಷ್ಟೂರಕ್ಕೂ ಭಾಗಿಯಾದರು.

ಸಕಲೇಶಪುರ ತಾಲ್ಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ. ಸಮ್ಮೇಳನದಲ್ಲಿ ಸನ್ಮಾನದ ಗೌರವಕ್ಕೆ ಆಯ್ಕೆ ನಡೆದಾಗ ಆಯ್ಕೆ ಸಮಿತಿಯ ಎಲ್ಲರಿಂದ ಸೂಚಿತವಾದ ಹೆಸರು. ರವೀಂದ್ರನಾಥರದು.

ಆದರೆ ಅವರು ಸನ್ಮಾನಕ್ಕೆ ಒಪ್ಪುವವರಲ್ಲವೆಂದು ಕೂಡಾ ಎಲ್ಲರಿಗೂ ತಿಳಿದಿತ್ತು. ಆ ಜವಾಬ್ದಾರಿಯನ್ನು ನನಗೆ ಒಪ್ಪಿಸಲಾಯಿತು. ಆಗ ನಾನು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೆ.

ರವೀಂದ್ರನಾಥರಿಗೆ ಈ ವಿಚಾರವನ್ನು ತಿಳಿಸಿದೆ. ಆಗ ಅವರು “ಸಾಹಿತ್ಯಕ್ಕೂ ನನಗೂ ಸಂಬಂಧ ಇಲ್ಲ. ನೀನು ನನ್ನನ್ನು ಆಯ್ಕೆ ಮಾಡಿ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀಯೆ ಅಷ್ಟೆ. ನೀನು ನನಗೆ ಏನೋ ಲಾಭ ಮಾಡಿಕೊಡುತ್ತಿದ್ದೀಯೆಂದು ಜನರು ಹೇಳುತ್ತಾರೆ. ನಾನಿದಕ್ಕೆ ಒಪ್ಪುವ ಪ್ರಶ್ನೆಯೇ ಇಲ್ಲ” ಎಂದರು,

ನಾನು ಅವರಿಗೆ ಸಾಹಿತ್ಯ ಪರಿಷತ್ತು ಎಂದರೇನು? ಕೃಷ್ಣರಾಜ ಒಡೆಯರು ಅದನ್ನು ಸ್ಥಾಪಿಸಿದ ಉದ್ದೇಶವೇನು ಮುಂತಾದವನ್ನೆಲ್ಲ ವಿವರಿಸಿ, ಇದು ಬರಿಯ ಸಾಹಿತ್ಯ ಅಂದರೆ ಬರಹದ ಸಾಹಿತ್ಯಕ್ಕೆ ಮಾತ್ರವಲ್ಲ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಇದರ ಅಧ್ಯಕ್ಷರು ಕನ್ನಡ ಬಲ್ಲವರ ಮತಗಳ ಮೂಲಕ ಆಯ್ಕೆಯಾದವರು. ಸಾಹಿತ್ಯ ಸಮ್ಮೇಳನವೆಂದರೆ ಕನ್ನಡ ನಾಡು ನುಡಿಯ ಜಾತ್ರೆ, ಆಗ ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸುವುದು ಕ್ರಮ ಹಾಗಾಗಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೊಂದು ಸಮಿತಿ ಇದೆ. ನಿಮಗೆ ಮಾತ್ರವಲ್ಲ ಸಾಹಿತ್ಯ, ಕೃಷಿ ರಂಗಭೂಮಿ, ಸಮಾಜಸೇವೆ, ವೈದ್ಯಕೀಯ, ಕ್ರೀಡೆ ಹೀಗೆ ನಾನಾ ಕ್ಷೇತ್ರಗಳ ನಾವು ಹನ್ನೆರಡು ಜನರನ್ನು ಗೌರವಿಸುತ್ತಿದ್ದೇವೆ ಎಂದು ಹೇಳಿದೆ.

ಆಗಲೂ ನಾನೇನು ಸಮಾಜ ಸೇವೆ ಮಾಡಿದ್ದೇನೆ? ಎಂದರು.

“ಅದನ್ನು ಜನರು, ಆಯ್ಕೆ ಸಮಿತಿಯವರು ನಿರ್ಧಾರ ಮಾಡುತ್ತಾರೆ, ನೀವು ಅದನ್ನು ತೀರ್ಮಾನ ಮಾಡುವವರಲ್ಲ ಎಂದೆ!”

ಹೀಗೆ ಚರ್ಚೆ ಮುಂದುವರೆಯಿತು. ನನಗೆ ಅವರನ್ನು ಒಪ್ಪಿಸುವ ದಾರಿ ಕಾಣಲಿಲ್ಲ.

ಕೊನೆಗೆ “ನೀವು ಬಾರದಿದ್ದರೆ ಆಯ್ಕೆ ಸಮಿತಿಯವರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಹಿರಿಯರು ಇಲ್ಲಿಗೇ ಬರುತ್ತಾರೆ. ನೀವು ಅವರಿಗೇ ಉತ್ತರಕೊಡಿ” ಎಂದೆ.

“ನೀನು ಸುಮ್ಮನೆ ಹಠ ಮಾಡುತ್ತಿದ್ದೀಯೆ, ಸರಿ, ಯಾರು ಯಾರಿಗೆ ಸನ್ಮಾನ ಇದೆ? ಎಂದರು.

ಆಗ ನಾನು ಕೆಲವರ ಹೆಸರು ಹೇಳಿದೆ, ನಂತರ ಇಲ್ಲೇ ಹಾರ್ಲೆಯಲ್ಲೇ ದನ ಕಾಯುತ್ತಿದ್ದ ಉಗ್ಗಪ್ಪ ಎಂದೆ.

ಉಗ್ಗಪ್ಪ ಸ್ವಾಧ್ಯಾಯಿಯಾಗಿ ವಿದ್ಯೆ ಕಲಿತು, ತುರ್ತು ಪರಿಸ್ಥಿಯಲ್ಲಿ ಹೋರಾಟದಲ್ಲಿ ಜೈಲುವಾಸವನ್ನೂ ಮಾಡಿ, ನಮ್ಮ ತಂಡದ ಪ್ರಮುಖ ನಟನೂ ಆದವರು.

ನಂತರ ನಮ್ಮಲ್ಲಿ ಎಲ್ಲಾ ಬೋರ್ಡು ಬರೆಯುತ್ತಿರುವ ಮಂಜು ಎಂದೆ.

ಇವರು ಕಲಾಪ್ರಿಯ ಮಂಜು. ಗಾಯಕ, ರಂಗನಟ, ಕಲಾವಿದ, ಸಾಮಾಜಿಕ ಹೋರಾಟಗಾರ ಎಲ್ಲವೂ ಆಗಿರುವ ಕಲಾಪ್ರಿಯ ಮಂಜು ಹಾರ್ಲೆಯ ಹಲವಾರು ಕಾರ್ಯಕ್ರಮಗಳಿಗೆ ಕುಂಚದ ಮೆರುಗು ನೀಡಿದವರು. ಈಗ ಕಲಾವಿದರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ಇನ್ನೊಬ್ಬ ಪೋಸ್ಟ್ ಮ್ಯಾನ್ ಆಗಿ ಎಪ್ಪತ್ತರ ದಶಕದಲ್ಲಿ ಹಾರ್ಲೆಗೆ ಪೋಸ್ಟ್ ತರುತ್ತಿದ್ದ ಜಗದೀಶ ಎಂದೆ. ಇವರು ಎಸ್.ಆರ್. ಜಗದೀಶ್, ರಸ್ತೆ ಕೆಲಸ ಮಾಡುತ್ತ ಗಾರೆ ಕೆಲಸಮಾಡುತ್ತ. ಅಂಚೆ ಪೇದೆಯೂ ಆಗಿ ವಿದ್ಯೆ ಕಲಿತು ಶಿಕ್ಷಕರಾಗಿ ಅನೇಕ ವರ್ಷಗಳ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುತ್ತ ತಾವು ಕೆಲಸ ಮಾಡಿದ ಊರುಗಳಲ್ಲಿ ಅಪಾರ ಜನ ಪ್ರೀತಿಗಳಿಸಿ ಮುಂದೆ ರಂಗ ನಟನೂ ಆದವರು.

ಇವರು ಮೂವರ ಹೆಸರು ಕೇಳಿದ ನಂತರ ಸರಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ನಾನು ಬರುತ್ತೇನೆ ಎಂದರು!

ಒಂದೇ ವೇದಿಕೆಯಲ್ಲಿ ಇವರೆಲ್ಲರಿಗೆ ಸನ್ಮಾನವಿತ್ತು.

ಎಸ್.ಆರ್. ಜಗದೀಶ್, ಕಲಾಪ್ರಿಯ ಮಂಜು ಹಾಗೂ ಉಗ್ಗಪ್ಪನವರಿಗೆ ಗೌರವ
ಎಸ್.ಆರ್. ಜಗದೀಶ್, ಕಲಾಪ್ರಿಯ ಮಂಜು ಹಾಗೂ ಉಗ್ಗಪ್ಪನವರಿಗೆ ಗೌರವ
ಎಸ್.ಆರ್. ಜಗದೀಶ್, ಕಲಾಪ್ರಿಯ ಮಂಜು ಹಾಗೂ ಉಗ್ಗಪ್ಪನವರಿಗೆ ಗೌರವ 1

ಅಂದು ವೇದಿಕೆಯಲ್ಲಿ ಇವರೆಲ್ಲರನ್ನು ಸನ್ಮಾನಿಸಿದವರು. ಶಾಸಕ ಹೆಚ್.ಕೆ ಕುಮಾರಸ್ವಾಮಿ, ಹಿರಿಯ ನಾಯಕರುಗಳಾದ ಬಿ.ಬಿ.ಶಿವಪ್ಪ, ಹೆಚ್.ಎಂ ವಿಶ್ವನಾಥ್. ಅಂದಿನ ಸಕಲೇಶಪುರದ  ಪುರಸಭಾಧ್ಯಕ್ಷರಾದ  ಯಾದಗಾರ್ ಇಬ್ರಾಹಿಂ ಅವರು. ಮತ್ತು ಕವಿ ಸುಬ್ಬು ಹೊಲೆಯಾರ್, ಇಂದು ಸಕಲೇಶಪುರ ಪುರಸಭಾದ್ಯಕ್ಷರಾಗಿರುವ ದಲಿತ ನಾಯಕ ಕಾಡಪ್ಪ ಇದ್ದರು.

ಸನ್ಮಾನಕ್ಕೆ ಮೊದಲು ರವೀಂದ್ರನಾಥರು, “ಉಗ್ಗಪ್ಪ ನಾನು ನಿನ್ನ ಜೊತೆಗಿದ್ದೇನೆ, ಎಂದು ಹೇಳಿ ಮುಂದೆ ತಮ್ಮ ಸನ್ಮಾನಕ್ಕೆ ಉತ್ತರಿಸುತ್ತಾ ಈ ಸನ್ಮಾನ ನಿಜಕ್ಕೂ ನನಗೆ ಸಂತಸ ತಂದಿದೆ ಇದು ಪ್ರಜಾಪ್ರಭುತ್ವದ ಸೌಂದರ್ಯ ಎಂದರು”.

ಅಂದು ವೇದಿಕೆಯಲ್ಲಿದ್ದ ಯಾದಗಾರ್ ಇಬ್ರಾಹಿಂ ಅವರ ಬಗ್ಗೆ ಒಂದು ವಿಶೇಷವಾದ ಸಂಗತಿಯಿದೆ.

ಯಾದ್‌ಗಾರ್ ಹೋಟೆಲ್

ಸಕಲೇಶಪುರದ ಆಝಾದ್ ರಸ್ತೆಯಲ್ಲಿರುವ ಹೋಟೆಲ್ “ಯಾದ್‌ಗಾರ್” ಗೆ ಸುಮಾರು ಎಪ್ಪತ್ತು ವರ್ಷಗಳ ಇತಿಹಾಸವಿದೆ. ಮಹಮದ್ ಹುಸೇನ್ ಎನ್ನುವವರು ಪ್ರಾರಂಭಿಸಿದ ಈ ಹೋಟೆಲ್ ಸಕಲೇಶಪುದ ಲ್ಯಾಂಡ್ ಮಾರ್ಕ್ ಗಳಲ್ಲಿ ಒಂದು. ಇದು ಸಕಲೇಶಪುರದ ಖ್ಯಾತ ಲಾಬಾ ಬಿನ್ ಮಸೀದಿಯ ಪಕ್ಕದಲ್ಲೇ ಇದೆ. ಈ ಮಸೀದಿಗೂ ಶಾಫ್ ಸಿದ್ದೇಗೌಡರ ಕುಟುಂಬಕ್ಕೂ ಇರುವ ಸಂಬಂದವನ್ನು ಈ ಹಿಂದೆಯೇ ಬರೆದಿದ್ದೇನೆ. ನಂತರದ ವರ್ಷಗಳನ್ನು ಯಾದ್‌ಗಾರ್ ಹೋಟೆಲನ್ನು ಅಹಮದ್ ಬಾವಾ ಎಂಬವರು ಖರೀದಿಸಿದರು. ಕನ್ನಡಾಭಿಮಾನಿ ಹಾಗೂ ಕನ್ನಡ ಸಾಹಿತ್ಯದ  ಪರಿಚಾರಕರೂ ಆಗಿದ್ದ ಅಹಮದ್ ಭಾವಾರನ್ನು ಹಿಂದೊಮ್ಮೆ ಸಾಹಿತ್ಯ ಪರಿಷತ್ತು ಗೌರವಿಸಿತ್ತು.

ಯಾದಗಾರ್ ಹೋಟೆಲ್ ಮುಂಭಾಗದಲ್ಲಿ ಟಿಪ್ಪು ಜಯಂತಿ ಮತ್ತು ದಿನೇಶ್ ಕುಮಾರ್ ಸ.ಚಂ. ಅವರ ಡಾ.ರಾಜ್ ಕುಮಾರ್ ಅವರ ಬಗೆಗಿನ ಪುಸ್ತಕ ಬಿಡುಗಡೆ

ಇದೇ ಯಾದ್‌ಗಾರ್ ಹೋಟೆಲಿನ ಮುಂಭಾಗಲ್ಲಿ ರಸ್ತೆಯಲ್ಲಿ ನಿಂತು ನಾವು ಇಂದು ಕರವೇಯಲ್ಲಿ ಕೆಲಸ ಮಾಡುತ್ತಿರುವ ದಿನೇಶ್ ಕುಮಾರ್ ದಿನೂ (ಕರವೇ ನಲ್ನುಡಿ ಸಂಪಾದಕರು) ರಾಜ್ ಕುಮಾರ್ ಅವರ ಬಗ್ಗೆ ರಚಿಸಿದ ಪುಸ್ತಕವನ್ನು ಬಿಡುಗಡೆ ಮಾಡಿದ್ದೆವು. ಅದೇ ಸ್ಥಳದಲ್ಲಿ ನಾನು ನಿಂತು ಟಿಪ್ಪುವಿನ ಬಗ್ಗೆ ಭಾಷಣ ಮಾಡಿದ್ದೆ. ಇದರಲ್ಲೆಲ್ಲ ಅಹಮದ್ ಭಾವಾ ರವರ ಸಹಕಾರವಿತ್ತು.

ಯಾದ್‌ಗಾರ್ ಇಬ್ರಾಹಿಂ ಅಹಮದ್ ಭಾವಾ ರವರ ಮಗ.

ಇಂದು ದಕ್ಷಿಣ ಕನ್ನಡದಲ್ಲಿ ಎಡಪಂಥೀಯ ನಾಯಕರಾಗಿರುವ ಮುನೀರ್ ಕಾಟಿಪಳ್ಳ ಕೆಲಕಾಲ ಸಕಲೇಶಪುರದಲ್ಲಿ ಇದೇ ಯಾದ್‌ಗಾರ್ ಹೋಟೆಲಿನಲ್ಲಿದ್ದು ವ್ಯಾಪಾರ -ವ್ಯವಹಾರ ಮಾಡುತ್ತಿದ್ದರು.

ಅಂದು ಹಾನುಬಾಳಿನ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆಯಲ್ಲಿದ್ದ ಇನ್ನೊಬ್ಬ ಹಿರಿಯರು ತಮ್ಮನ್ನು ಕನ್ನಡದ ಕಟ್ಟಾಳುವೆಂದೇ ಕರೆದುಕೊಳ್ಳುತ್ತಿದ್ದ ಬಾವು ಬ್ಯಾರಿಗಳು. ಅವರು ಅಂದು ತಮ್ಮ ಎರಡು ಕವಿತೆಗಳನ್ನು ಓದಿದರು. ಬಾವು ಬ್ಯಾರಿಗಳು ಇತ್ತೀಚೆಗೆ ನಿಧನರಾದರು.

ಕನ್ನಡದ ಕಟ್ಟಾಳುವೆಂದು ಕರೆದುಕೊಳ್ಳುತ್ತಿದ್ದ ಹಾನುಬಾಳಿನ ಬಾವು ಬ್ಯಾರಿಗಳಿಂದ ಕವನ ವಾಚನ

ತೊಂಬತ್ತರ ದಶಕದ ನಂತರ ದೇಶದ ರಾಜಕಾರಣದಲ್ಲಿ ಪ್ರಾರಂಭವಾದ ಸ್ಥಿತ್ಯಂತರಗಳು, ಕಾಫಿ ವಲಯವನ್ನು ಬಾಧಿಸದೆ ಇರಲು ಸಾಧ್ಯವಿರಲಿಲ್ಲ. ಬೇರೆ ಕಡೆಗಳಲ್ಲಿ ಆದಷ್ಟು ಬೇಗ ಇಲ್ಲಿ ಅದರ ಪರಿಣಾಮಗಳು ಗೋಚರಿಸದೆ ಇದ್ದರೂ. ನಿಧಾನವಾಗಿ ಸಮಾಜದಲ್ಲಿ ಲಂಬವಾದ ವಿಭಜನೆಗಳು ಮತ್ತು ಪರಸ್ಪರ ಅಪನಂಬಿಕೆಯ ವಾತಾವರಣ ಇಲ್ಲೂ ವ್ಯಾಪಿಸಿದೆ. ಸ್ಥಳೀಯವಾದ ರಾಜಕೀಯ ಗೆಲುವುಗಳು ಸೋಲುಗಳು ಏನೇ ಇದ್ದರೂ ನಾವು ಕಾಫಿ ವಲಯದ ಹಳ್ಳಿಗಳನ್ನು ತಿರುಗಾಡಿ ಬಂದರೆ ರಾಜಕಾರಣಿಗಳು ಮತ್ತು ಇತರ ಸಂಘಟನೆಗಳ ಜನರು ಏನು ಹೇಳಿದರೂ ಸ್ಥಳಿಯವಾಗಿ ಇನ್ನೂ ಒಂದಷ್ಟು ಸಾಮರಸ್ಯವನ್ನು ಉಳಿಸಿಕೊಂಡಿರುವುದು ಕಂಡು ಬರುತ್ತದೆ. ಇದೇ ನಮಗೆ ಭರವಸೆಯ ಸಂಗತಿಯಾಗಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

LEAVE A REPLY

Please enter your comment!
Please enter your name here