Homeಮುಖಪುಟನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

ನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

ಅತಿ ದೊಡ್ಡ ಅಂತರಿಕ್ಷ ದೂರದರ್ಶಕ ಚಿನ್ನದ ಕಣ್ಣಿನ ಜೇಮ್ಸ್ ವೆಬ್ ಉಡಾವಣೆಗೆ ಸಜ್ಜು!

- Advertisement -
- Advertisement -

1609 ವೆನ್ನಿಸ್‌ನಲ್ಲಿ ನಡೆದ ಎಕ್ಸ್ಪೋಸಿಶನ್‌ನಲ್ಲಿ ಒಂದು ಆಪ್ಟಿಕಲ್ ಟ್ಯೂಬ್‌ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಆಪ್ಟಿಕಲ್ ಟ್ಯೂಬ್ ಅಂದರೆ, ಈಗಿನ ಬೈನಾಕ್ಯುಲರ್‌ನ ಒಂದು ಭಾಗ. ಈಗ ಇಂತಹ ಆಪ್ಟಿಕಲ್ ಟ್ಯೂಬ್‌ಅನ್ನು ಮೋನಾಕ್ಯುಲರ್ ಎಂದು ಕರೆಯುತ್ತಾರೆ. ಆಪ್ಟಿಕಲ್ ಟ್ಯೂಬ್‌ನ ಪ್ರದರ್ಶನದ ವಿಷಯ ಅಂದಿನ ಒಬ್ಬ ಗಣಿತಜ್ಞನ ಗಮನಕ್ಕೆ ಬಂದಾಗ, ಅದನ್ನು ನೋಡಲು ವೆನ್ನಿಸ್ ಎಕ್ಸ್ಪೋಸಿಶನ್‌ಗೆ ಹೊಗಲೇಬೇಕು ಎಂದುಕೊಂಡರು. ಆ ವಿಚಾರದ ಪ್ರದರ್ಶನದಲ್ಲಿ ಆಪ್ಟಿಕಲ್ ಟ್ಯೂಬ್‌ಅನ್ನು ವಿನ್ಯಾಸ ಮಾಡಿದ್ದು ಕನ್ನಡಕ ತಯಾರಕ. ಅವನ ಹೆಸರು ಹ್ಯಾನ್ಸ್ ಲಿಪರ್ಶೆ. ಈತನೇ ಈ ಆಪ್ಟಿಕಲ್ ಟ್ಯೂಬ್‌ನ ಸಂಶೋಧಕ ಎಂದೂ ಕರೆಯಲಾಗಿದೆ. ದೂರದಲ್ಲಿ ಕಾಣುವ ವಸ್ತುವನ್ನು ಎರಡು ಲೆನ್ಸ್‌ಗಳಿರುವ ಆಪ್ಟಿಕಲ್ ಟ್ಯೂಬ್‌ನ ಸಹಾಯದಿಂದ ಹತ್ತಿರದಲ್ಲಿರುವಂತೆ ನೋಡಬಹುದು ಎಂದು ಆ ಎಕ್ಸ್ಪೋಸಿಶನ್‌ನಲ್ಲಿ ಆತ ವಾದಿಸುತ್ತಿದ್ದ ಮತ್ತು ಎಲ್ಲರಿಗೂ ತೋರಿಸುತ್ತಿದ್ದ. ಇದನ್ನು ನೋಡಲು ಹೊದ ಗಣಿತಜ್ಞನ ಹೆಸರು ಗೆಲಿಲಿಯೋ ಗೆಲಿಲಿ!

ಮೊದಲ ಬಾರಿಗೆ ಗೆಲಿಲಿಯೋ ಈ ಆಪ್ಟಿಕಲ್ ಟ್ಯೂಬ್‌ಅನ್ನು ಕಂಡಾಗ ಇದನ್ನು ಇನ್ನಷ್ಟು ಸುಧಾರಿಸಿ ವಿನ್ಯಾಸ ಮಾಡಿದರೆ ವಸ್ತುಗಳು ಸ್ಪಷ್ಟವಾಗಿ ಕಾಣಬಹುದು ಎಂದು ತಿಳಿದು, ತನ್ನ ಯೋಚನೆಯ ಅನುಸಾರ ಹೊಸದಾಗಿ ಈ ಆಪ್ಟಿಕಲ್ ಟ್ಯೂಬ್‌ಅನ್ನು ವಿನ್ಯಾಸ ಮಾಡಿದ. ತದನಂತರ ಇದು ಸ್ಪೈ ಗ್ಲಾಸ್ (Spy Glass- ಪತ್ತೇದಾರಿ ಕನ್ನಡಕ) ಎಂದೇ ಪರಿಚಯವಾಯಿತು. ಸಮುದ್ರದಲ್ಲಿ ದೂರದಲ್ಲಿ ಬರುವ ಮತ್ತು ಹೋಗುತ್ತಿರುವ ಹಡಗುಗಳನ್ನು ನೋಡಲು ಇದನ್ನು ಉಪಯೋಗಿಸಲಾಗುತ್ತಿತ್ತು. ಗೆಲಿಲಿಯೋ ಕೂಡ ಈ ಸ್ಪೈ ಗ್ಲಾಸ್‌ಅನ್ನು ಅಂದಿನ ವೆನ್ನಿಸ್ ನಗರದ ಮ್ಯಾಜಿಸ್ಟ್ರೇಟರ್‌ಗೆ ನೀಡಿದ್ದ. ಈ ಸ್ಪೈ ಗ್ಲಾಸ್ ಜನಪ್ರಿಯವಾದಂತೆ ಗೆಲಿಲಿಯೋನ ಜನಪ್ರಿಯತೆಯೂ ಹೆಚ್ಚಿತು. ತದನಂತರ, ಗೆಲಿಲಿಯೋ ಈ ಸ್ಪೈ ಗ್ಲಾಸ್ ಮೇಲೆ ಅನೇಕ ವಿಧದ ಪ್ರಯೋಗಗಳನ್ನು ನಡೆಸಿದ ಮತ್ತು ಅದು ಇತರೆ ಕೆಲಸಗಳಿಗೂ ಉಪಯೋಗವಾಗಬಹುದಾ ಎಂದು ಯೋಚಿಸುತ್ತಿದ್ದ. ಹೀಗೆ ಯೋಚಿಸಿ, ಅನೇಕ ಪ್ರಯೋಗಗಳನ್ನು ನಡೆಸಿ ತನ್ನ ಸ್ಪೈ ಗ್ಲಾಸ್‌ಅನ್ನು ಇನ್ನಷ್ಟು ಸುಧಾರಿಸಿ, ಆಕಾಶದ ಕಡೆಗೆ ತಿರುಗಿಸಿದ!

ಮನುಷ್ಯನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಚಂದ್ರನನ್ನು ಗೆಲಿಲಿಯೋ ತಾನೇ ಮಾಡಿದ ಸ್ಪೈ ಗ್ಲಾಸ್ (ದೂರದರ್ಶಕ)ನಿಂದ ಬಹಳ ಹತ್ತಿರದಲ್ಲಿ ಕಂಡಿದ್ದ. ಚಂದ್ರನ ಮೇಲೆ ಕುಳಿಗಳಿರುವುದನ್ನು (Crater), ಬೆಟ್ಟಗುಡ್ಡಗಳಿರುವುದನ್ನು ಮೊದಲ ಬಾರಿಗೆ ಕಂಡದ್ದು ಗೆಲಿಲಿಯೋ. ಇದಾದನಂತರ, ಅಂದಿಗೆ ತಿಳಿದಿದ್ದ ಆಕಾಶದಲ್ಲಿ ಚುಕ್ಕಿಗಳಂತೆ ಹೊಳೆಯುತ್ತಿದ್ದ ಆಕಾಶದ ಅಲೆಮಾರಿಗಳಾದ ಗ್ರಹಗಳ ಕಡೆಗೆ ತನ್ನ ಸ್ಪೈ ಗ್ಲಾಸ್‌ಅನ್ನು ತಿರುಗಿಸಿದ. ಇದು ಗೆಲಿಲಿಯೋನಾ ಕಲ್ಪನೆಗೂ ನಿಲುಕದ ಕ್ಷಣವಾಗಿತ್ತು!

ಅಲ್ಲಿಯವರೆಗೂ ಆಗಸದಲ್ಲಿ ಚುಕ್ಕಿಯಾಗಿ ಒಂದು ನಕ್ಷತ್ರ ಪುಂಜದಿಂದ ಮತ್ತೊಂದು ನಕ್ಷತ್ರ ಪುಂಜಕ್ಕೆ ಚಲಿಸುತ್ತಿದ್ದ ಗ್ರಹಗಳನ್ನು ಮೊದಲ ಬಾರಿಗೆ ಗ್ರಹಗಳನ್ನು ಡಿಸ್ಕ್ ರೂಪದಲ್ಲಿ (ಗ್ರಹಗಳ ಅಸ್ಪಷ್ಟವಾದ ವಿವರಗಳು) ಕಂಡಿದ್ದ ಗೆಲಿಲಿಯೋ, ನಂತರ ನಕ್ಷತ್ರಗಳ ಕಡೆಗೆ ಸ್ಪೈ ಗ್ಲಾಸ್‌ಅನ್ನು ತಿರುಗಿಸಿದಾಗ, ಅವುಗಳು ಚುಕ್ಕಿಯಾಗಿಯೇ ಕಂಡವು. ಇದನ್ನು ಗಮನಿಸಿದ ಗೆಲಿಲಿಯೋ ನಕ್ಷತ್ರಗಳು ಗ್ರಹಗಳಿಗಿಂತಲೂ ಅತೀ ಹೆಚ್ಚು ದೂರದಲ್ಲಿವೆ ಎಂಬುದನ್ನು ಗ್ರಹಿಸಿದ. ಗುರು ಗ್ರಹವನ್ನು ತನ್ನ ಸ್ಪೈ ಗ್ಲಾಸ್‌ನಲ್ಲಿ ಕಂಡಾಗ, ಅದರ ಸುತ್ತ ನಾಲ್ಕು ಚುಕ್ಕಿಗಳು, ಚಂದ್ರ ಹೇಗೆ ಭೂಮಿಯ ಸುತ್ತ ಸುತ್ತುತ್ತಿದ್ದಾನೋ, ಹಾಗೆಯೇ ಅವುಗಳು ಗುರು ಗ್ರಹದ ಸುತ್ತ ಸುತ್ತುತ್ತಿವೆ ಎಂಬುದನ್ನು ಗ್ರಹಿಸಿದ. ಇದು ಅಂದಿನ ಸಾಂಪ್ರದಾಯಾದಿಗಳು ಮತ್ತು ಮೂಲಭೂತವಾದಿಗಳಿಗೆ ಕೋಪ ತರಿಸಿತು. ಭೂಮಿ, ಭೂಮಿಯ ಸುತ್ತ ಚಂದ್ರ ಸುತ್ತುವುದು; ಹೀಗಿರುವ ಏಕಮಾತ್ರ ವ್ಯವಸ್ಥೆಯನ್ನು ದೇವರು ಸೃಷ್ಟಿಸಿದ್ದಾನೆ ಎಂದು ಅವರೆಲ್ಲಾ ನಂಬಿದ್ದರು. ಆದರೆ, ಈ ನಂಬಿಕೆಗಳನ್ನೆಲ್ಲಾ ಗೆಲಿಲಿಯೋನ ಆಕಾಶ ವೀಕ್ಷಣೆ ನೆಲಸಮ ಮಾಡಿತ್ತು. ಗುರು ಗ್ರಹದ ಉಪಗ್ರಹಗಳನ್ನು ಇಂದಿಗೂ ಗೆಲಿಲಿಯೋ ಮೂನ್ಸ್ (ಗೆಲಿಲಿಯೋ ಉಪಗ್ರಹಗಳು) ಎಂದು ಕರೆಯುತ್ತಾರೆ. ಗೆಲಿಲಿಯೋ ವಿನ್ಯಾಸ ಮಾಡಿದ ಸ್ಪೈ ಗ್ಲಾಸ್‌ಅನ್ನು ಗೆಲಿಲಿಯೋ ದೂರದರ್ಶಕ ಎಂದು ಕರೆಯಲಾಗಿದೆ. ಈ ದೂರದರ್ಶಕ ಮನುಷ್ಯನು ನಿರ್ಮಿಸಿಕೊಂಡಿರುವ ಒಂದು ಅಪರೂಪದ ಕಣ್ಣು. ಇದು ಸಾಂಪ್ರದಾಯಿಕತೆ ಮತ್ತು ಮೂಲಭೂತವಾದಿಗಳ ಜೊಳ್ಳುಗಟ್ಟಿದ ಚಿಂತನೆಗಳನ್ನು ಒಡೆದು ಹಾಕಿ ವಿಶ್ವದ (ಪ್ರಕೃತಿಯ) ವಾಸ್ತವತೆ, ವಿಶಾಲತೆ ಮತ್ತು ನಿಗೂಢತೆಯನ್ನು ನಮ್ಮ ಕಣ್ಣೆದುರಿಗಿರಿಸಿತು. 1609ರ ಹಿಂದಿನ ಮನುಷ್ಯನಿಗಿದ್ದ ಖಗೋಳದ ಅರಿವು, ದೂರದರ್ಶಕ ಬಂದ ನಂತರದ ಮನುಷ್ಯನಿಗಿರುವ ಖಗೋಳದ ತಿಳಿವು ಹೋಲಿಸಲಸಾಧ್ಯ. ನಭೋಮಂಡಲದ ವಿಸ್ಮಯವನ್ನು ಬೇಧಿಸುವಲ್ಲಿ, ವಿಶ್ವದ ಉಗಮ, ಪ್ರಸ್ತುತತೆ, ಅಂತ್ಯ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಾರಿಯಲ್ಲಿ ದೂರದರ್ಶಕವು ಒಂದು ಕ್ರಾಂತಿಕಾರಿಕ ಬದಲಾವಣೆಯನ್ನೇ ಮಾಡಿದೆ. ದೂರದರ್ಶಕವನ್ನು ಮೊದಲ ಬಾರಿಗೆ ವಿನ್ಯಾಸ ಮಾಡಿ ಆಕಾಶಕ್ಕೆ ತಿರುಗಿಸಿದ್ದ ವಿದ್ಯಮಾನಕ್ಕೆ ಇಂದಿಗೆ ಸುಮಾರು 412 ವರ್ಷಗಳಾಗಿವೆ!

Don’t Know Much About ಸರಣಿಯ ಪುಸ್ತಕಗಳ ಲೇಖಕ ಮತ್ತು ಇತಿಹಾಸಕಾರರಾದ ಕೆನ್ನಿತ್ ಸಿ ಡೆವಿಸ್ ತನ್ನ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ. “Necessity is the mother of invention ಎಂಬ ಇಂಗ್ಲಿಷ್ ನಾಣ್ಣುಡಿಯನ್ನು ಕೇಳಿರಬೇಕು. ಗೆಲಿಲಿಯೋ ಕಾಲದಲ್ಲೂ, ಅಲ್ಲಿಂದ ಈಗಲೂ ಹಲವು ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ತೀವ್ರಗತಿಯಲ್ಲಿ ನಡೆದಿರುವ ಕಾಲಘಟ್ಟಗಳನ್ನು ಅವಲೋಕಿಸಿದರೆ, ಅವೆಲ್ಲವೂ ನಡೆದಿರುವುದು ಯುದ್ಧದ ಸಮಯದಲ್ಲಿಯೇ ಅಥವಾ ಯುದ್ಧಕ್ಕೋಸ್ಕರವೇ. ‘May be war is the inventor’s father’” ಎಂದು ಬಣ್ಣಿಸುತ್ತಾನೆ. ಹೌದು, ಅತಿ ಹೆಚ್ಚು ಸಂಶೋಧನೆಗಳು ನಡೆದಿರುವುದು ಯುದ್ಧದ ಸಮಯದಲ್ಲಿ ಅಥವಾ ಯುದ್ಧ ಮಾಡುವುದಕ್ಕಾಗಿಯೇ. ಎರಡನೇ ಮಹಾಯುದ್ಧ ಅಂತ್ಯಗೊಂಡ ನಂತರ, 1960ರ ದಶಕದಲ್ಲಿ ಪ್ರಾರಂಭವಾಗಿದ್ದು ಸ್ಪೇಸ್ ರೇಸ್ (Space Race) ಎಂಬ ಶೀತಲ ಸಮರ. ಅಮೆರಿಕದವರು ಹಿಟ್ಲರ್ ಸಾಮ್ರಾಜ್ಯದಲ್ಲಿ ರಾಕೆಟ್ ಇಂಜಿನಿಯರ್ ಆಗಿದ್ದ ವಾರ್ನರ್ ವಾನ್ ಬ್ರೌನ್‌ಅನ್ನು ಸಾಯಿಸದೇ ಹಿಡಿದುಕೊಂಡು ಹೋಗುತ್ತಾರೆ. ಈತ ವಿನ್ಯಾಸ ಮಾಡಿದ V-2 ರಾಕೆಟ್ ಎರಡನೇ ಮಹಾಯುದ್ಧದಲ್ಲಿ ಲಂಡನ್‌ಅನ್ನು ಧ್ವಂಸ ಮಾಡಿತ್ತು. ಈ ರಾಕೆಟ್ ಇಂಜಿನಿಯರ್ ಅಮೆರಿಕನ್ ಆಗಿ, ನಾಸಾ ಸೇರಿದ ನಂತರ, 1969ರಲ್ಲಿ V-2 ರಾಕೆಟ್ ಅನುಭವದಿಂದಲೇ ತಯಾರಿಸಿದ
Saturn V ರಾಕೆಟ್‌ನಲ್ಲಿ ಹೊರಟ ಅಪೋಲೋ-11 ಗಗನಯಾತ್ರಿಗಳು ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟರು. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಇಳಿದದ್ದು, ನಂತರ ಬಸ್ ಆಲ್ಡ್ರಿನ್ ಇಳಿಯುತ್ತಾರೆ. ಮೈಕ್ ಕಾಲಿನ್ಸ್ ಗಗನನೌಕೆಯಲ್ಲಿ ಚಂದ್ರನನ್ನು ಸುತ್ತುತ್ತಿರುತ್ತಾರೆ. ಭೂಮಿಯನ್ನು ಬಿಟ್ಟು ಸೌರಮಂಡಲದ ಇನ್ನೊಂದು ಆಕಾಶಕಾಯದಲ್ಲಿ ಕಾಲಿಟ್ಟ ಮೊದಲ ಮಾನವನ ಹೆಜ್ಜೆಗಳು ಅಪೋಲೋ-11 ಗಗನ ಯಾತ್ರಿಗಳದ್ದಾಗಿತ್ತು! ಇದು ಸಾಧ್ಯವಾದದ್ದು V-2 ರಾಕೆಟ್‌ನಿಂದ ಎರವಲಾಗಿ ಪಡೆದಿದ್ದ ತಂತ್ರಜ್ಞಾನದಿಂದ. ಅಂದಿನ ಸಂವಹನ ಮಾಧ್ಯಮದಲ್ಲಿ ಲೈವ್ ಆಗಿ ಪ್ರಪಂಚದಾದ್ಯಂತ ಜನರು ನೋಡಿದ, ಕೇಳಿದ ಘಟನೆ ಇದಾಗಿತ್ತು. ಅಪೋಲೋ ಯೋಜನೆಯು ಕೂಡ ಅಮೆರಿಕ ಮತ್ತು ರಷ್ಯಾದ ಸ್ಪೇಸ್ ರೇಸ್ ಶೀತಲ ಸಮರದ ಒಂದು ಭಾಗವಾಗಿತ್ತು. ಅದೇನೇ ಇರಲಿ, 1903ರಲ್ಲಿ ರೈಟ್ ಬ್ರದರ್ಸ್ ಪ್ರಥಮವಾಗಿ ವೈಮಾನಿಕ ಸಂಚಾರವನ್ನು ನಡೆಸುವಲ್ಲಿ ಸಫಲವಾಗುತ್ತಾರೆ. ಇದಾದ 56 ವರ್ಷಗಳಲ್ಲಿ ಚಂದ್ರನ ಮೇಲೆ ಮಾನವ ನಡೆಯು ಚಾರಿತ್ರಿಕ ಸಂದರ್ಭಕ್ಕೆ 1969ರ ಅಪೋಲೋ ಸಹಕರಿಸಿತ್ತು.

ಖಗೋಳ ವಿಜ್ಞಾನದ ಕುತೂಹಲ ಹೆಚ್ಚಾದಂತೆ, ಅನೇಕ ಉಪಗ್ರಹಗಳು, ಗಗನನೌಕೆಗಳು, ಬಾಹ್ಯಾಕಾಶ ನಿಲ್ದಾಣಗಳು ಭೂಮಿಯ ಕಕ್ಷೆಗೆ ಹಾರತೊಡಗಿದವು. ಖಗೋಳದ ಕೌತುಕಗಳನ್ನು ಕಂಡುಹಿಡಿಯಲು ಬೇಕಾಗುವ ಥಿಯರಿಗಳು, ಚರ್ಚೆಗಳು ಮತ್ತು ಸಾಧನಗಳು ಸಹ ಅಭಿವೃದ್ಧಿಗೊಂಡವು. ವಿಶ್ವದ ನಿಗೂಢತೆ, ವಿಶ್ವದ ಉಗಮವನ್ನು ಭೇದಿಸಲೇಬೇಕು ಎನ್ನುವ ಮಾನವನ ಛಲವು ಹೆಚ್ಚುತ್ತಾ ಹೋದಂತೆ, ಅದರ ಸವಾಲುಗಳು ಕೂಡ ಹೆಚ್ಚತೊಡಗಿದವು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೋ ವಿನ್ಯಾಸಗೊಳಿಸಿದ್ದ ದೂರದರ್ಶಕಕ್ಕಿಂತಲೂ 300-400 ಪಟ್ಟು ಹೆಚ್ಚು ಸಾಮರ್ಥ್ಯವಿರುವ ದೂರದರ್ಶಕದ ವೀಕ್ಷಣಾಲಯಗಳನ್ನು ಭೂಮಿಯ ಮೇಲೆ ನಿರ್ಮಿಸಿ ಆಕಾಶದ ಒಂದಿಂಚು ಬಿಡದೆ ವೀಕ್ಷಣೆ ಮತ್ತು ಅಧ್ಯಯನವನ್ನು ಮನುಷ್ಯನು ಇಂದಿಗೆ ಕೈಗೊಳ್ಳುತ್ತಿರುವುದು ವಿಶೇಷ.

ಆದರೆ, ಈ ಭೂ ವೀಕ್ಷಣಾಲಯದಲ್ಲಿಯೂ ಒಂದು ಸಮಸ್ಯೆ ಇದೆ. ಭೂಮಿಯ ವಾತಾವರಣವೇ ಒಂದು ದೊಡ್ಡ ಸಮಸ್ಯೆ. ಬಿಲಿಯನ್ ಜ್ಯೋತಿರ್ವರ್ಷಗಳ ದೂರದಲ್ಲಿರುವ ಗ್ಯಾಲಾಕ್ಸಿ, ನೆಬುಲ್ಲಾಗಳ ಮಸುಕಾದ ಬೆಳಕು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಬರಬೇಕು. ಭೂವಾತವರಣದಲ್ಲಿನ ಹಲವು ಅನಿಲಗಳು, ಕಣಗಳು ಈ ಬೆಳಕಿನ ಜೊತೆ ಸಂವಹನಗೊಳ್ಳುತ್ತವೆ. ಈ ಬೆಳಕನ್ನು ಭೂಮಿಯ ವಿಕ್ಷಣಾಲಯಗಳು ಅಧ್ಯಯನ ಮಾಡುವಾಗ ಆಕಾಶ ಕಾಯಗಳ ಹಲವು ಮಾಹಿತಿಗಳು ನಾಶವಾಗುತ್ತದೆ ಅಥವಾ ಅಸ್ಟಷ್ಟವಾಗುತ್ತವೆ. ಹಾಗಾಗಿ ಭೂವೀಕ್ಷಣಾಲಯಗಳಿಗೆ ಕೆಲವೊಂದು ಮಿತಿ ಇದೆ. ಇದನ್ನು ಸರಿಪಡಿಸುವುದು ಹೇಗೆ ಎಂದರೆ, ವೀಕ್ಷಣಾಲಯಗಳನ್ನು ಭೂಮಿಯಿಂದ ಹೊರಗೆ ಅಂದರೆ, ಭೂವಾತವರಣದಿಂದ ಹೊರಗೆ ನಿರ್ಮಿಸುವುದರಿಂದ ಮಾತ್ರ!

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ, ವೀಕ್ಷಣಾಲಯಗಳನ್ನು ಉಪಗ್ರಹಗಳ ಮಾದರಿಯಲ್ಲಿ ರಾಕೆಟ್ ಮೂಲಕ ಹಾರಿಸಿ ಭೂಕಕ್ಷೆಯಲ್ಲಿ ಸುತ್ತುವಂತೆ ಮಾಡುವುದು ಕಷ್ಟವೇನಾಗಲಿಲ್ಲ. ಹೀಗೆ ಹಾರಿದ ಅನೇಕ ದೂರದರ್ಶಕಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಹಬಲ್ ದೂರದರ್ಶಕ. ನಾಸಾ ಸಂಸ್ಥೆಯು ವಿನ್ಯಾಸ ಮಾಡಿದ ಹಬಲ್ ದೂರದರ್ಶಕ 1990ರಲ್ಲಿ ನಭಕ್ಕೆ ಚಿಮ್ಮಿತು. ಇದು ಭೂಮಿಯಿಂದ ಸುಮಾರು 500 ಕಿಲೋಮೀಟರ್ ದೂರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿದೆ. ಈ ದೂರದರ್ಶಕದಲ್ಲಿ ಸುಮಾರು 2.4 ಮೀಟರ್ ಅಳತೆಯುಳ್ಳ ದರ್ಪಣ ಇದೆ. ಭೂಮಿಯಲ್ಲಿ 10 ಮೀಟರ್ ದರ್ಪಣ ಇರುವ ವೀಕ್ಷಣಾಲಯಗಳಿದ್ದರೂ, ಅವಕ್ಕಿಂತ ಹಬಲ್ ದೂರದರ್ಶಕದ 2.4 ಮೀಟರ್ ದರ್ಪಣ ಅತ್ಯಂತ ಶಕ್ತಿಯುತ. ಏಕೆಂದರೆ, ಹಬಲ್ ದೂರದರ್ಶಕಕ್ಕೆ ಭೂಮಿಯ ವಾತಾವರಣದ ಸಮಸ್ಯೆ ಕಾಡುವುದಿಲ್ಲ. ಈ ಕಾರಣದಿಂದ ಹಬಲ್ ನಭೋಮಂಡಲವನ್ನು ಅತ್ಯಂತ ನಿಖರವಾಗಿ, ಸೂಕ್ಷ್ಮವಾಗಿ ಗಮನಿಸಿ, ನಮಗೆ ಮಾಹಿತಿಯನ್ನು ನೀಡುವಲ್ಲಿ ಸಫಲವಾಯಿತು. ಈ ದೂರದರ್ಶಕದ ಸಹಾಯದಿಂದ ಸೌರಮಂಡಲದ ಗ್ರಹಗಳು, ಗ್ಯಾಲಾಕ್ಸಿಗಳು, ಸೂಪರ್ನೋವಾ ಮತ್ತು ನೆಬುಲ್ಲಾಗಳ ಬಗ್ಗೆ ಮನುಷ್ಯನಿಗೆ ಇದ್ದ ಅರಿವು ಇನ್ನಷ್ಟು ವಿಸ್ತಾರವಾಯಿತು. ಒಂದು ಕಾಲದಲ್ಲಿ ಗ್ರಹದ ಪಟ್ಟಿಯಲ್ಲಿದ್ದ ಪ್ಲೂಟೋ (ಈಗ ಕುಬ್ಜ ಗ್ರಹದ ಪಟ್ಟಿಯಲ್ಲಿದೆ) ಚಿತ್ರವನ್ನು ಪ್ರಥಮ ಬಾರಿಗೆ ನಮಗೆ ಹಬಲ್ ತೋರಿಸಿತು.

ಹಬಲ್‌ಅನ್ನು ನಭೋಮಂಡಲಕ್ಕೆ ಕಳುಹಿಸಿದಾಗ ಅದರ ಆಯಸ್ಸು ಸುಮಾರು 15 ವರ್ಷಗಳು ಎಂದು
ಅಂದಾಜಿಸಲಾಗಿತ್ತು. ಆದರೆ, 30 ವರ್ಷ ಕಳೆದರೂ ಇಂದಿಗೂ ಚಾಲ್ತಿಯಲ್ಲಿದೆ. ಈಗೀಗ ಹಬಲ್‌ನ ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇನ್ನು ಎಷ್ಟು ತಿಂಗಳು ವರ್ಷ ಉಪಯೋಗಿಸಬಹುದು ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ. ಆದರೂ, ಹಬಲ್ ದೂರದರ್ಶಕ ಮನುಷ್ಯನ ಕಣ್ಣನ್ನು ಹೆಚ್ಚು ತೀಕ್ಷ್ಣಗೊಳಿಸಿ, ವಿಶ್ವದ ಭೂತಕಾಲದ ಇತಿಹಾಸವನ್ನು-ಪೂರ್ವೇತಿಹಾಸವನ್ನು ನೋಡಲು ಸಹಾಯ ಮಾಡಿತು.

ಈ ವರ್ಷದ ಕ್ರಿಸ್‌ಮಸ್ ಈವ್ (24ನೇ ಡಿಸೆಂಬರ್) ದಿನದಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ, ಗಯಾನ ಸ್ಟೇಸ್ ಸೆಂಟರ್‌ನಿಂದ ಏರಿಯನ್ 5 ರಾಕೆಟ್‌ನಲ್ಲಿ ಉಡಾವಣೆಗೊಳ್ಳಲಿದೆ ಪ್ರಪಂಚದ ಅತ್ಯಂತ ದೊಡ್ಡದಾದ ಅಂತರಿಕ್ಷ ದೂರದರ್ಶಕ. ಇದರ ಹೆಸರು ಜೇಮ್ಸ್ ವೆಬ್ ದೂರದರ್ಶಕ (James Webb Telescope). ನಾಸಾ ಸಂಸ್ಥೆಯ ದಶಕಗಳ ಕಾಲದ ಮಹತ್ವಾಕಾಂಷ ಯೋಜನೆ ಇದಾಗಿದೆ. ಇದು, ಅಮೆರಿಕ, ಯೂರೋಪ್ ಮತ್ತು ಕೆನಡಾ ದೇಶಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಒಂದು ಅಂತಾರಾಷ್ಟ್ರೀಯ ಯೋಜನೆ.

ಹಬಲ್ ದೂರದರ್ಶಕದ ದರ್ಪಣಕ್ಕಿಂತಲೂ ಸುಮಾರು 6 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಹೊಂದಿದೆ. ಈ ದೂರದರ್ಶಕವು ಅಂತರಿಕ್ಷದಲ್ಲಿ ಸಂಪೂರ್ಣವಾಗಿ ತೆರೆದುಕೊಂಡರೆ ಸುಮಾರು ಒಂದು ಟೆನ್ನಿಸ್ ಅಂಗಳದ ಅಳತೆಯಷ್ಟಿರುತ್ತದೆ. ಭೂಮಿಯಿಂದ ಇದು ಚಲಿಸುವ ದೂರ ಮತ್ತು ತಲುಪುವ ಸ್ಥಳವೂ ವಿಶೇಷವಾದದ್ದು. ಇದನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮಿಟರ್ ದೂರದ ಕಕ್ಷೆಗೆ ಕಳುಹಿಸಲಾಗುತ್ತಿದೆ (ಚಂದ್ರ ಭೂಮಿಯಿಂದ 3 ಲಕ್ಷ ಕಿಲೋಮೀಟರ್ ದೂರದಲ್ಲಿದ್ದರೆ, ಹಬಲ್ ದೂರದರ್ಶಕ ಸುಮಾರು 500 ಕಿಲೋಮೀಟರ್ ದೂರದಲ್ಲಿದೆ). ಭೌತ ವಿಜ್ಞಾನದ ಪ್ರಕಾರ, ಸೂರ್ಯ, ಭೂಮಿ ಮತ್ತು ಚಂದ್ರನ ಗುರುತ್ವ ಬಲದ ಸಂವಹನದಲ್ಲಿ ಉಂಟಾಗಿರುವ ಲ್ಯಾಗ್ರಾಂಜಿಯನ್ ಐ2 ಬಿಂದುವಿನಲ್ಲಿ ಈ ದೂರದರ್ಶಕವನ್ನು ಇಡಲಾಗುತ್ತಿದೆ. ಈ ಬಿಂದುವಿನ ವಿಶೇಷವೆಂದರೆ, ಸೂರ್ಯ, ಭೂಮಿ ಮತ್ತು ಚಂದ್ರನ ಗುರುತ್ವ ಬಲದಿಂದಲೇ ಈ ಬಿಂದುವಿನಲ್ಲಿರುವ ವಸ್ತುವು ಸೂರ್ಯನ ಸುತ್ತ ಸುತ್ತುತ್ತದೆ. ಇದೇ ಕಕ್ಷೆಯಲ್ಲಿ ಯಾವುದೇ ವಸ್ತುವನ್ನು/ಉಪಗ್ರಹವನ್ನು ಉಳಿಸಿಕೊಳ್ಳಲು ಅತ್ಯಂತ ಕಡಿಮೆ ಇಂಧನದ ಅಗತ್ಯ ಇರುತ್ತದೆ. ಅಲ್ಲದೆ, ಯಾವಾಗಲೂ ಭೂಮಿಯ ನೆರಳಲ್ಲೇ ಇರುವುದರಿಂದ, ಸೂರ್ಯನ ಬೆಳಕು ಈ ದೂರದರ್ಶಕಕ್ಕೆ ಬೀಳುವುದು ಕಡಿಮೆ. ಈ ಎಲ್ಲಾ ಕಾರಣಗಳಿಂದ, ಕಳೆದ ಒಂದು ದಶಕದಿಂದಲೂ 14 ದೇಶದ ವಿಜ್ಞಾನಿಗಳು, ಇಂಜಿನಿಯರ್‌ಗಳು, ವಿನ್ಯಾಸಕಾರರು ಅತ್ಯಂತ ಸಂಕೀರ್ಣವಾದ ಇಂಜಿನಿಯರಿಂಗ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸಿರುವ ಈ ಜೇಮ್ಸ್ ವೆಬ್ ದೂರದರ್ಶಕದ ಉಡಾವಣೆ 1969ರ ಅಪೋಲೋ-11ರ ಉಡಾವಣೆಯ ಸಂದರ್ಭದಂತೆ ಎಂದು ಹಲವು ಖಗೋಳ ವಿಜ್ಞಾನಿಗಳು, ವಿಜ್ಞಾನ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಈ ದೂರದರ್ಶಕ ಅವೆಗೆಂಪು (Infrared Radiation) ಕಿರಣಗಳಲ್ಲಿ ಕೆಲಸ ಮಾಡುತ್ತದೆ. ಈ ದೂರದರ್ಶಕದ ಪ್ರಮುಖ ಉದ್ದೇಶ 13.5 ಬಿಲಿಯನ್ ವರ್ಷಗಳ ಹಿಂದೆ ನಡೆದ ಬಿಗ್‌ಬ್ಯಾಂಗ್‌ನ (ಮಹಾ ಸ್ಫೋಟದ) ಯೌವ್ವನದ ಸ್ಥಿತಿಯನ್ನು ನೋಡುವುದು. ಬಿಗ್‌ಬ್ಯಾಂಗ್ ಆದ ನಂತರ ಪ್ರಥಮ ಗ್ಯಾಲಾಕ್ಸಿಗಳು ಹೇಗೆ ಉಗಮವಾದವು ಎಂಬ ವಿಷಯವನ್ನು ತಿಳಿಯುವುದು. ಅರೆ ಅಷ್ಟು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಈಗ ಹೇಗೆ ತಿಳಿಯುವುದು ಎಂದು ಯೋಚಿಸುತ್ತಿರುವಿರಾ? ನಭೋಮಂಡಲದ ವಿಸ್ಮಯವೇ ಹಾಗಿದೆ. ನಾವು ವಿಶ್ವದಲ್ಲಿ ಅತ್ಯಂತ ದೂರದಲ್ಲಿರುವ ಗ್ಯಾಲಾಕ್ಸಿ, ನೆಬುಲ್ಲಾಗಳನ್ನು ನೋಡುತ್ತಿದ್ದರೆ, ನಾವು ಆ ಗ್ಯಾಲಾಕ್ಸಿಗಳು ಎಷ್ಟು ಜೋತಿರ್ವರ್ಷ ದೂರದಲ್ಲಿವೆಯೋ ಅಷ್ಟು ವರ್ಷದ ಹಿಂದಿನ ಸ್ಥಿತಿಯನ್ನು ಈಗ ನೋಡುತ್ತಿರುತ್ತೇವೆ. ಉದಾಹರಣೆಗೆ, ಒಂದು ಗ್ಯಾಲಾಕ್ಸಿಯು 10 ಲಕ್ಷ ಜೋತಿರ್ವರ್ಷ ದೂರದಲ್ಲಿದೆ ಅಂದುಕೊಳ್ಳೋಣ. ಆ ಗ್ಯಾಲಾಕ್ಸಿಯನ್ನು ದೂರದರ್ಶಕದ ಮುಖಾಂತರ ಈಗ ನೋಡಿದಾಗ ನಮಗೆ ತಿಳಿಯುವ ಮಾಹಿತಿಯು ಆ ಗ್ಯಾಲಕ್ಸಿಯ 10 ಲಕ್ಷ ವರ್ಷದ ಹಿಂದಿನ ಚಿತ್ರಣ. ಇದು ಭೂಮಿಗೂ ಅನ್ವಯವಾಗುತ್ತದೆ. ಅಂದರೆ, ನಮ್ಮಿಂದ ಮಿಲಿಯನ್ ಜೋತಿ ವರ್ಷ ದೂರವಿರುವ ಗ್ಯಾಲಾಕ್ಸಿಯಿಂದ ಯಾರಾದರೂ ಭೂಮಿಯ ಕಡೆಗೆ ಈಗ ನಮ್ಮನ್ನು ದೂರದರ್ಶಕದಿಂದಲೋ ಅಥವಾ ಇನ್ಯಾವುದೋ ತಂತ್ರಜ್ಞಾನದಿಂದಲೋ ನೋಡುತ್ತಿದ್ದರೆ, ಅವರಿಗೆ ಭೂಮಿಯ ಮೇಲೆ ಮನುಷ್ಯರ ಬದಲು, ಭೂಮಿಯ ಡೈನೋಸರಸ್‌ಗಳು ಮಾತ್ರ ಕಾಣುತ್ತಿರುತ್ತವೆ. ಇನ್ನೂ ದೂರದಿಂದ ನೋಡಿದವರು, ಭೂಮಿಯ ಪ್ರಾರಂಭದ ಸ್ಥಿತಿಯನ್ನು ಮಾತ್ರ ಗ್ರಹಿಸುತ್ತಾರೆ. ಹಾಗಾಗಿ, ನಭೋಮಂಡಲದಲ್ಲಿ ಹೆಚ್ಚು ದೂರದಲ್ಲಿರುವ ಆಕಾಶಕಾಯವನ್ನು ವೀಕ್ಷಣೆ ಮಾಡಿದಾಗ, ಅಷ್ಟೇ ಹಿಂದಕ್ಕೆ ಅಂದರೆ ಭೂತಕಾಲಕ್ಕೆ ತೆರಳುತ್ತಿರುತ್ತೇವೆ. ಈ ಕಾರಣದಿಂದ ಜೇಮ್ಸ್ ವೆಬ್ ಅಂತರಿಕ್ಷ ದೂರದರ್ಶಕ ಬಿಗ್‌ಬ್ಯಾಂಗ್ ನಂತರದ ಮೊದಲ ಗ್ಯಾಲಾಕ್ಸಿಯನ್ನು ಪತ್ತೆ ಹಚ್ಚಬಹುದಾದ ಸಾಮರ್ಥ್ಯವಿದೆ ಎಂದು ಲೆಕ್ಕ ಹಾಕಲಾಗಿದೆ. ಇದಲ್ಲದೆ ಇನ್ನಿತರ ಹಲವು ಖಗೋಳದ ಅನ್ವೇಷಣೆಗಳನ್ನು ಈ ದೂರದರ್ಶಕದಲ್ಲಿನ ಉಪಕರಣಗಳ ಸಹಾಯದಿಂದ ಕೈಗೊಳ್ಳಬಹುದು.

ಈ ದೂರದರ್ಶಕದಲ್ಲಿ ಇದುವರೆಗೂ ಯಾವ ದೂರದರ್ಶಕದಲ್ಲಿರದ ಅತ್ಯಾಧುನಿಕ ಉಪಕರಣಗಳಾದ Near-Infrared Camera, Near-Infrared Spectrograph, Mid-Infrared Instruments ಮತ್ತು Near-Infrared Slitless Spectrograph ಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಅಳವಡಿಸಲಾಗಿದೆ. ಇದೊಂದು ರೀತಿ Future-ready ದೂರದರ್ಶಕ. ಅಂದರೆ, ಮುಂದೆ ಜನಸಾಮಾನ್ಯರಿಗೆ ದೊರಕಬಹುದಾದ ತಂತ್ರಜ್ಞಾನವೆಲ್ಲವನ್ನು ಈ ದೂರದರ್ಶಕದಲ್ಲಿ ಆಗಲೇ ಜೋಡಿಸಲಾಗಿದೆ. ಇದೆಲ್ಲದರ ಜೊತೆಗೆ, ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಲ್ಯಾಂಗ್ರಾಂಜಿಯನ್ ಐ2 ಬಿಂದುವಿನ ಕಡೆಗೆ ಚಲಿಸುವ ಇದರ ಪ್ರಯಾಣ ಅತ್ಯಂತ ಕಠಿಣವಾದದ್ದು. ರಾಕೆಟ್‌ನಲ್ಲಿ ಮಡಚಿದ ರೂಪದಲ್ಲಿರುವ ಈ ದೂರದರ್ಶಕ, ನಭೋ ಮಂಡಲದಲ್ಲಿ ಒಂದೊಂದಾಗಿ ಬಿಡಿಸಿಕೊಳ್ಳುತ್ತಾ ಅಷ್ಟು ದೂರ ಕ್ರಮಿಸಬೇಕು. ಈ ಬಿಡಿಸಿಕೊಳ್ಳುವ ಸಮಯದಲ್ಲಿ ಸಣ್ಣದೊಂದು ಪ್ರಮಾದವಾದರೂ ಈ ದೂರದರ್ಶಕ ಅನುಪಯುಕ್ತವಾಗಬಹುದು. ಕಳೆದ ಒಂದು ದಶಕದಿಂದ ವಿಜ್ಞಾನಿಗಳು, ಇಂಜಿನಿಯರ್‌ಗಳು, ವಿನ್ಯಾಸಕಾರರು ಈ ಸಮಸ್ಯೆಗಳನ್ನೆಲ್ಲ ಗ್ರಹಿಸಿ ಅಷ್ಟೇ ಜಾಗರೂಕವಾಗಿ, ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಪ್ರಯೋಗಗಳನ್ನು ನಡೆಸಿ, ಎಲ್ಲವೂ ಸರಿ ಇದೆ ಎಂದು ಸ್ಪಷ್ಟಪಡಿಸಿಕೊಂಡು ರಾಕೆಟ್ ಒಳಗೆ ಇದನ್ನು ಕೂರಿಸಿದ್ದಾರೆ. ಒಮ್ಮೆ ರಾಕೆಟ್ ಹೊರಟರೆ, ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ಕಂಪ್ಯೂಟರ್ ಪರದೆಯ ಮೂಲಕವೇ ನಿಯಂತ್ರಿಸಬೇಕು!

ಏನೇ ಇರಲಿ, ಜೇಮ್ಸ್ ವೆಬ್ ದೂರದರ್ಶಕವನ್ನು ಮನುಷ್ಯನ ಚಿನ್ನದ ಕಣ್ಣು (Golden Eye) ಎಂದೇ ಬಿಂಬಿಸಲಾಗುತ್ತಿದೆ. ದೂರದರ್ಶಕದ ದರ್ಪಣದ ಮೇಲ್ಮೈಯನ್ನು ಚಿನ್ನದಿಂದ ಲೇಪನ ಮಾಡಲಾಗಿದೆ. ಚಿನ್ನವೇ ಏಕೆಂದರೆ, ಚಿನ್ನ ಬೆಳಕನ್ನು (ಅವೆಗೆಂಪು ಕಿರಣಗಳನ್ನು) ಅತಿಹೆಚ್ಚು ಪ್ರತಿಫಲಿಸುತ್ತದೆ. ಈ ಕಾರಣದಿಂದಲೂ ಈ ದೂರದರ್ಶಕ ಚಿನ್ನದ ಕಣ್ಣು. ಈ ದೂರದರ್ಶಕ ಮುಂದಿನ ದಿನಗಳಲ್ಲಿ ವಿಶ್ವದ ಬಗ್ಗೆ ನಮಗೆ ನೀಡುವ ಅರಿವು ಚಿನ್ನದಷ್ಟೇ ಮೌಲ್ಯವಾದದ್ದು ಎಂದು ತಿಳಿಯಲಾಗಿದೆ. ಅಂದಹಾಗೆ ಜೇಮ್ಸ್ ವೆಬ್ ದೂರದರ್ಶಕ ಯಶಸ್ವಿಯಾಗಿ ಉಡಾವಣೆಯಾದ ಮೇಲೆ ತನ್ನ ವೈಜ್ಞಾನಿಕ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು ಸುಮಾರು ಆರು ತಿಂಗಳು ಬೇಕು. ತದನಂತರ ಈ ದೂರದರ್ಶಕದ ಕಾಲಾವಧಿ ಐದು ವರ್ಷಗಳಿದ್ದು, 10 ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ. ಜೇಮ್ಸ್ ವೆಬ್ ದೂರದರ್ಶಕದ ಮೊದಲ ಬೆಳಕಿನ ಚುಂಬನ ಹೇಗಿರುತ್ತದೆ ಎಂದು ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಗೆಲಿಲಿಯೋನ ಸ್ಪೈ ಗ್ಲಾಸ್‌ನಿಂದ ಬಹಳ ದೂರ ಬಂದಿರುವ ಮನುಷ್ಯನಿಗೆ, ಬಿಲಿಯನ್ ವರ್ಷಗಳ ಹಿಂದೆ ವಿಶ್ವವು ಹೇಗಿತ್ತು ಎನ್ನುವ ಕುತೂಹಲ ಮಾತ್ರ ಇನ್ನೂ ಬತ್ತಿಲ್ಲ.

ಬಾಹ್ಯಾಕಾಶದ ವಿಷಯ ಬಂದಾಗ, ಬಾಹ್ಯಾಕಾಶದ ವಿಸ್ಮಯ, ಕೌತುಕಗಳ ಬದಲು ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವುದು ಆಗರ್ಭ ಶ್ರೀಮಂತರ ಹೆಸರುಗಳು ಮತ್ತು ಅವರ ಕಂಪನಿಗಳು. ಕಳೆದ ಎರಡು ದಶಕಗಳಲ್ಲಿ ಬಾಹ್ಯಾಕಾಶಕ್ಕೆ ಸರ್ಕಾರೇತರ ಖಾಸಗಿ ಸಂಸ್ಥೆಗಳು ಪ್ರವೇಶ ಪಡೆದಿರುವುದು ಹೊಸ ವಿಷಯವಾಗಿ ಉಳಿದಿಲ್ಲ. ಹೇಗೆ ಭೂಮಿಯು ಇಡೀ ಜೀವಸಂಕುಲಕ್ಕೆ ಸೇರಿದ್ದೋ ಹಾಗೆಯೇ ಬಾಹ್ಯಾಕಾಶವು ಎಲ್ಲಾ ದೇಶಗಳಿಗೂ, ಎಲ್ಲಾ ನಾಗರಿಕರಿಗೂ ಸೇರಿದ್ದು. ಒಂದು ದೇಶದವರು ಅಥವಾ ಸರ್ಕಾರವು ಬಾಹ್ಯಾಕಾಶ ತನಗೆ ಸಂಬಂಧಿಸಿದ್ದು ಎಂದು ಹಕ್ಕು ಸ್ಥಾಪಿಸುವ ಪ್ರಶ್ನೆ ಇರುವುದಿಲ್ಲ ಮತ್ತು ಅಂತಹ ಪ್ರತಿಪಾದನೆಗೆ ಅವಕಾಶವೂ ಇರಬಾರದು. ಆದರೆ, ಬಾಹ್ಯಾಕಾಶ ಸಂಶೋಧನೆ, ಅಂತರಿಕ್ಷಯಾನ ಕೈಗೊಳ್ಳಲು ದೇಶಗಳಿಗೆ ಆರ್ಥಿಕ ಶಕ್ತಿ ಇರಬೇಕು ಅಥವ ಇತರ ಶಕ್ತಿಯುತ ದೇಶಗಳು ಸಹಾಯಹಸ್ತ ಚಾಚಬೇಕು. ಶಕ್ತಿಯುತ ದೇಶಗಳಲ್ಲಿ ಖಾಸಗಿ ಸಂಸ್ಥೆಗಳಿಗೂ ಬಾಹ್ಯಾಕಾಶ ಯಾನ ಮತ್ತು ಅದರ ಲಾಭಗಳಿಗೆ ಸರ್ಕಾರಗಳು ಅನುಮತಿ ನೀಡುತ್ತಿವೆ. ಅವರು ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದರೆ, ಚರ್ಚೆ ಹುಟ್ಟುಹಾಕಿರುವುದು, ಕಳೆದ ಒಂದು ದಶಕದಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಂದ ನಡೆಯುತ್ತಿರುವ ಕ್ಷಿಪ್ರಗತಿಯ ಅತ್ಯಾಧುನಿಕ ತಾಂತ್ರಿಕತೆ, ರಾಕೆಟ್ ಅಥವಾ ಸ್ಪೇಸ್ ವೆಹಿಕಲ್‌ಗಳ ಉಗಮ ಮತ್ತು ಅದರ ಮೂಲಕ ಪ್ರಪಂಚಕ್ಕೆ ಅವರು ಪ್ರಸ್ತುತಪಡಿಸುತ್ತಿರುವ ಪ್ರಯೋಗಗಳು.

ಇಂದಿಗೆ ಜಗತ್ತಿನ ದೈತ್ಯ ಶ್ರೀಮಂತರೆಲ್ಲಾ ಒಂದೊಂದು ಬಾಹ್ಯಾಕಾಶ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅವರೆಲ್ಲರೂ ಬಾಹ್ಯಾಕಾಶ ಸಂಶೋಧನೆ ಮತ್ತು ಅಲ್ಲಿನ ಅಭಿವೃದ್ಧಿಯಲ್ಲಿ ಅತ್ಯಂತ ಹೆಚ್ಚು ಹಣವನ್ನು ಹೂಡಿಕೆ ಮಾಡಿ, ರಾಕೆಟ್‌ಗಳನ್ನು ಸೃಷ್ಟಿಸಿ, ತಮ್ಮ ಮೂಗಿನ ನೇರಕ್ಕೆ, ಲಾಭಕ್ಕೆ ಅಗತ್ಯವಿರುವಷ್ಟೇ ಯೋಚಿಸಿ, ಅದೇ ಸರಿಯೆಂದು ತಿಳಿದು, ಹೆಚ್ಚು ಲಾಭ ಗಳಿಸುವ ದೃಷ್ಟಿಯಿಂದ ಮುನ್ನುಗ್ಗಿದ್ದಾರೆ. ಶ್ರೀಮಂತರಿಗೆ ಬಾಹ್ಯಾಕಾಶವನ್ನು ಕೈಗೆಟುಕವಂತೆ ಮಾಡಿ, ಮನುಕುಲಕ್ಕೆ ಉಪಕಾರವಾಗುತ್ತಿದೆ ಎಂದು ಬೀಗುತ್ತಿದ್ದಾರೆ ಎನ್ನುವ ಚರ್ಚೆ ಒಂದು ಕಡೆಯಿದ್ದರೆ, ಈ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಮುನ್ನೆಲೆಗೆ ಬಂದನಂತರ, ಇವರಿಂದ ಅತೀ ಕಡಿಮೆ ವೆಚ್ಚದಲ್ಲಿ ಹಲವು ದೇಶಗಳಿಗೆ ಅಗತ್ಯವಿರುವ ಬಾಹ್ಯಾಕಾಶ ಸೇವೆಗಳು ಮತ್ತು ಸೌಲಭ್ಯಗಳು ಸಿಗುವಂತೆ ಆಗಿದೆ ಎಂದು ಹೇಳುವ ಚರ್ಚೆಯೂ ಕೇಳಿಬರುತ್ತಿದೆ. ನಮ್ಮಲ್ಲಿ ಹಣವಿದೆ, ತಂತ್ರಜ್ಞಾನವಿದೆ, ಅನುಮತಿ ಇದೆ ಎಂದಮಾತ್ರಕ್ಕೆ ತಾವು ಏನೇ ಮಾಡಿದರು ಅದು ಸಾಮಾಜಿಕವಾಗಿ ಸರಿಯಾಗಿಯೇ ಇರುತ್ತದೆ ಎನ್ನುವ ಹಠ ಈ ಆಗರ್ಭ ಶ್ರಿಮಂತರಿಗಿದೆ.

ಮನುಷ್ಯನು ತಾನು ಇರುವ ಗ್ರಹವನ್ನು ಬಿಟ್ಟು, ಇನ್ನೊಂದು ಗ್ರಹದಲ್ಲಿ ವಾಸಿಸಬೇಕು, ಅಲ್ಲಿರುವ ಸಂಪನ್ಮೂಲಗಳನ್ನು ಮನುಷ್ಯನ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂಬ ಅಚಲ ನಿರ್ಧಾರವನ್ನು ಇವರುಗಳಾಗಲೇ ಮಾಡಿದ್ದಾರೆ. ಒಬ್ಬರು ಚಂದ್ರ ನನ್ನದು ಎಂದರೆ, ಮತ್ತೊಬ್ಬರು ಮಂಗಳ ಗ್ರಹ ನನ್ನದು ಎನ್ನುವಂತಾಗಿದೆ. ಟಿಕೆಟ್‌ಗಳನ್ನು ಕೂಡ ಆಗಲೇ ಸೇಲ್ ಮಾಡಿದ್ದಾರೆ. ಇದಕ್ಕೆಲ್ಲಾ ಈ ಶಕ್ತಿಯುತ ಮುಂದುವರಿದ ದೇಶಗಳ ಸರ್ಕಾರದ ಬೆಂಬಲಗಳೂ ಇರುವುದು ರಹಸ್ಯ ವಿಷಯವೇನಲ್ಲ. ಇವರೆಲ್ಲಾ ಏನೇ ಕೊಚ್ಚಿಕೊಳ್ಳಲಿ, ಮಾನವನ ಪ್ರಗತಿಯ ದಾರಿಗೆ ಸರಿಯಾದ ಅಧ್ಯಯನಗಳಿಲ್ಲದೆ, ಅಗತ್ಯಗಳ ಬಗ್ಗೆ ವಿಸ್ತೃತಮಟ್ಟದಲ್ಲಿ ಸಂವಾದ ನಡೆಸದೆ, ಲಾಭಕ್ಕಾಗಿ ಮಾತ್ರ ಮಾಡುವ ಕೆಲಸಗಳು (ಇತ್ತೀಚೆಗೆ ಸ್ಪೇಸ್‌ಗೆ ಹೋಗಿ ಬಂದ ಶ್ರೀಮಂತರುನ್ನು ನೆನಪಿಸಿಕೊಳ್ಳಬಹುದು, ಆಕಾಶದಲ್ಲಿ ಸಾಲುಗಳಾಗಿ ಉಪಗ್ರಹಗಳು ಚಲಿಸುವುದನ್ನು ಕಂಡಿರಬಹುದು) ಮತ್ತು ಈ ಬಂಡವಾಳಶಾಹಿ ಶ್ರೀಮಂತರು ಏನು ಮಾಡಿದರೂ ಅದನ್ನು ಕಿಂಚಿತ್ತೂ ಅವಲೋಕಿಸದೆ ವಿಜೃಂಭಿಸಿ ತೋರಿಸುವ ಮೆದುಳಿಲ್ಲದ ಮಾಧ್ಯಮಗಳು ಬಾಹ್ಯಾಕಾಶದ ವಿಸ್ಮಯವನ್ನು ಅರಿಯುವ ಮಾನವನ ಚಿಂತನೆಗಳನ್ನು, ಕಲ್ಪನೆಗಳನ್ನು ಹೊಸಕಿ ಹಾಕುತ್ತಿರುವುದಂತೂ ಸತ್ಯ ಎನ್ನಿಸುವಂತಾಗಿದೆ. ಮುಂದೊಂದು ದಿನ, ಬಾಹ್ಯಾಕಾಶ ಎಂದರೆ, ಆಗರ್ಭ ಶ್ರೀಮಂತರು, ಅವರ ಕಂಪನಿಗಳು, ಅವರ ರಾಕೆಟ್‌ಗಳು ಅವರ ಲಾಭ-ನಷ್ಟ ಮಾತ್ರ ಎಂದು ಅವಲೋಕಿಸುವ ಕಾಲ ಬಹಳ ದೂರದಲ್ಲಿಲ್ಲ. ಇದರ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸುವುದು ಅತ್ಯವಶ್ಯಕ.

ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ


ಇದನ್ನೂ ಓದಿ: ವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಿಶ್ವ ಪರ್ಯಟನೆ ಮಾಡಿದ…. ನೋಡಿದ ಅನುಭವ ಈ ಲೇಖನದಿಂದ ಆಯಿತು. ಇದನ್ನು ಬರೆದ ವಿಶ್ವಕೀರ್ತಿ ಅವರಿಗೆ ಮತ್ತು ಗೌರಿ ಮೀಡಿಯಾ ಗೆ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕಾರಣಕ್ಕೆ ಬಿಜೆಪಿ...