ರಾಜ್ಯಕ್ಕೆ ನೂತನ ಮುಖ್ಯಮಂತ್ರಿ; ಗಣ್ಯರು ಹೇಳಿದ್ದೇನು? | Naanu gauri

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಾಲಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ 11.00 ಕ್ಕೆ ರಾಜ್ಯದ 20 ನೇ ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಂಗಳವಾರ ರಾತ್ರಿ 8 ಗಂಡೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟ ಸರ್ಕಾರದ ಸಚಿವ ಧರ್ಮೇಂದ್ರ ಪ್ರಧಾನ್‌ ಅಧೀಕೃತವಾಗಿ ನೂತನ ಮುಖ್ಯಮಂತ್ರಿಯ ಆಯ್ಕೆಯನ್ನು ಘೋಷಿಸಿದ್ದಾರೆ.

ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವುಗೊಂಡ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತೇ ಲಿಂಗಾಯತ ಶಾಸಕರನ್ನೇ ಬಿಜೆಪಿ ಆಯ್ಕೆ ಮಾಡಲಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಈ ಹಿಂದೆಯೆ ವರದಿ ಮಾಡಿದ್ದವು.

ಇದನ್ನೂ ಓದಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ!

ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆಗೆ ಹಲವಾರು ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌‌, “ಕರ್ನಾಟದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ್‌ ಬೊಮ್ಮಾಯಿ ಅವರಿಗೆ ಅಭಿನಂದನೆ. ಈಗ ಮತ್ತೆ ಆಡಳಿತದತ್ತ ಗಮನ ಹರಿಸಲಾಗುವ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಆಶಿಸುತ್ತಿದೆ” ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, “ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ನೀವು ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತೀರಿ ಮತ್ತು ರಾಜ್ಯದ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ಖ್ಯಾತ ನಟ ಚೇತನ್ ಅವರು, “ಬೊಮ್ಮಾಯಿ ಕೇಂದ್ರ ಸರ್ಕಾರದ ಕೈಗೊಂಬೆಯಾಗುವ ಬದಲು, ಫೆಡರಲಿಸ್ಟ್ ಆಗಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತಾಗಲಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುಪಿ: ಸಹೋದರನ ಮುಂದೆಯೆ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ, “ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ಪರಿಹಾರಾತ್ಮಕವಾಗಿ ಕೆಲಸ ಮಾಡುವಿರೆಂದು ನಿರೀಕ್ಷಿಸುವೆ. ನೀರಾವರಿ ವಿಚಾರಗಳಲ್ಲಿ ತಮಗೆ ಜ್ಞಾನವುಂಟು. ಅಣೆಕಟ್ಟು ನಿರ್ಮಾಣದಂಥ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳತ್ತ ತಾವು ಗಮನಹರಿಸುವಿರೆಂದು ಭಾವಿಸುವೆ” ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಡಾ. ಸುಧಾಕರ್‌ ಕೆ ಅವರು, “ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಕೋರುತ್ತೇನೆ. ನಾಡಿನ ಸಮಸ್ತ ಜನರ ಆಶೋತ್ತರಗಳನ್ನು ಸಾಕಾರಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ” ಎಂದು ಹೇಳಿದ್ದಾರೆ.

 

ಇದನ್ನೂ ಓದಿ: ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಆ‌‌ರ್‌‌. ಅಶೋಕ್, ಶ್ರೀರಾಮುಲು?

LEAVE A REPLY

Please enter your comment!
Please enter your name here