ಮುಂದಿನ ಚುನಾವಣೆ ತನಕವೂ ಅವಿರತ ಹೋರಾಟಕ್ಕೆ ದೊರೆಸ್ವಾಮಿಯವರ ಸಂಕಲ್ಪ..

ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಸ್ವಾತಂತ್ರ‍್ಯದ ಮಹತ್ವದ ಅರಿವಿದೆ. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವದ ಅರಿವಿದೆ.

  • ಕವಿತಾ ರೆಡ್ಡಿ

ಅನುವಾದ: ನಿಖಿಲ್ ಕೋಲ್ಪೆ

ಇಂದು ಇಡೀ ದೇಶವೇ ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಚ್ಚೊತ್ತಿರುವ ಗುರುತು ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳುವ ವಿಷಮ ಹಾದಿಯಲ್ಲಿರುವ ಹೊತ್ತಿನಲ್ಲಿ, 102 ವರ್ಷ ಪ್ರಾಯದ ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಗಾಂಧೀವಾದಿ ಡಾ. ಎಚ್.ಎಸ್. ದೊರೆಸ್ವಾಮಿ ಅವರು 2024ರ ಚುನಾವಣೆಯತನಕ ಪ್ರತೀ ತಿಂಗಳೂ ಪ್ರತಿಭಟನೆ ನಡೆಸಿ, ದೇಶದ ಮೇಲೆ ಪರಿಣಾಮ ಬೀರುತ್ತಿರುವ ಪ್ರಶ್ನೆಗಳನ್ನು ಎತ್ತುವ ಮೂಲಕ, ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವುದು ಮಾತ್ರವಲ್ಲದೆ, ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿಯಂತಹ ವಿಭಜನಕಾರಿ ಧೋರಣೆಗಳನ್ನು ತರುತ್ತಿರುವ ಫ್ಯಾಸಿಸ್ಟ್ ಸರಕಾರವನ್ನು ಕೊನೆಗೊಳಿಸುವ ಸಲುವಾಗಿ ಹೋರಾಟ ನಡೆಸುವುದಾಗಿ ಶಪಥ ಮಾಡಿದ್ದಾರೆ.

ಮೋದಿ ಸರಕಾರವು ಸಂವಿಧಾನದ ಮೂಲ ಅಡಿಪಾಯವನ್ನೇ ವ್ಯವಸ್ಥಿತವಾಗಿ ಶಿಥಿಲಗೊಳಿಸುತ್ತಿದ್ದು, ಕಳೆದ ಆರು ವರ್ಷಗಳ ಸರಕಾರದ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ. ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟು, 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ನಿರುದ್ಯೋಗ ದರ, ಕೃಷಿ ಬಿಕ್ಕಟ್ಟು, ಆಡಳಿತಾತ್ಮಕ ಅಧಿಕಾರಗಳ ದುರುಪಯೋಗ, ಮೂಲಭೂತ ಹಕ್ಕುಗಳ ಉಲ್ಲಂಘನೆ, ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸಿರುವುದು, ಹೆಚ್ಚುತ್ತಿರುವ ಭ್ರಷ್ಟಾಚಾರ ಇವುಗಳು ಡಾ. ಎಚ್. ಎಸ್. ದೊರೆಸ್ವಾಮಿಯವರು ಫೆಬ್ರುವರಿ 6ರಿಂದ 9ರ ತನಕ ನಡೆಸಿದ ನಾಲ್ಕು ದಿನಗಳ ಪ್ರತಿಭಟನೆಯ ವೇಳೆ ಎತ್ತಿದ ಗಂಭೀರ ಪ್ರಶ್ನೆಗಳಲ್ಲಿ ಕೆಲವು.

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ವಿರೋಧಿಸಿ ದೇಶದಾದ್ಯಂತ ಸಾವಿರಾರು ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಹೆಜ್ಜೆಹೆಜ್ಜೆಗೂ ದೇಶ ಮತ್ತು ಜನರನ್ನು ಬಾಧಿಸುತ್ತಿರುವ ಎಲ್ಲಾ ಪ್ರಶ್ನೆಗಳನ್ನು ಎತ್ತುವ ಅಗತ್ಯವಿದೆ ಎಂದು ದೊರೆಸ್ವಾಮಿಯವರು ಬಲವಾಗಿ ಪ್ರತಿಪಾದಿಸಿದರು. ಮೋದಿ, ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಕಳೆದ ಆರು ವರ್ಷಗಳಲ್ಲಿ ದೇಶವು ಅನುಭವಿಸುತ್ತಿರುವ ದ್ವೇಷ ಮತ್ತು ವಿಭಜನೆಯನ್ನು ನೋಡಿದರೆ, ಅವು ಕೇವಲ ಪೊಳ್ಳು ಘೋಷಣೆಗಳೇ ಹೊರತು ಬೇರೇನಲ್ಲ.

‘ಸಿಟಿಜನ್ಸ್ ರೈಟ್ಸ್ ಏಕ್ಷನ್ ಕಮಿಟಿ’ (ನಾಗರಿಕ ಹಕ್ಕುಗಳ ಕಾರ್ಯ ಸಮಿತಿ) ಹೆಸರಿನಡಿಯಲ್ಲಿ, ವಿವಿಧ ವಿಷಯಗಳ ಕುರಿತು ಕೆಲಸ ಮಾಡುತ್ತಿರುವ ಹಲವಾರು ಸಂಘಟನೆಗಳು ಈ ಹೋರಾಟವನ್ನು ಬಲಗೊಳಿಸಲು ಜೊತೆ ಸೇರಿದ್ದು, ವಿಭಜನಕಾರಿ ಕಾನೂನು/ ಧೋರಣೆಗಳನ್ನು ಹಿಂತೆಗೆದುಕೊಳ್ಳುವ ತನಕ ರಾಜ್ಯ ಮತ್ತು ದೇಶದಲ್ಲಿ ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರಿಯಬೇಕು ಮತ್ತು ಸಮಿತಿಯು ಮೋದಿ ಸರಕಾರದ ವೈಫಲ್ಯಗಳನ್ನು ಬಯಲುಗೊಳಿಸುವ ಮೂಲಕ ಪ್ರತಿಭಟನೆಯ ನೇತೃತ್ವ ವಹಿಸಲಿದೆ ಎಂದು ದೊರೆಸ್ವಾಮಿಯವರು ಹೇಳಿದ್ದಾರೆ.

ದೇಶದಲ್ಲಿನ ವಾತಾವರಣವು 102 ವರ್ಷ ಪ್ರಾಯದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮತ್ತೆ ಬೀದಿಗಿಳಿದು ಪ್ರತಿಭಟಿಸುವಂತೆ ಪ್ರೇರೇಪಿಸಿರುವುದು ನಿಜಕ್ಕೂ ದುರದೃಷ್ಟಕರ. ಆದರೆ, ಅದು ದೇಶಕ್ಕಾಗಿ ಹೋರಾಡಲು ಏನು ಮಾಡಬೇಕು ಎಂಬುದನ್ನು ಕಲಿಯುವಂತೆ ಯುವಜನರನ್ನು ಪ್ರೇರೇಪಿಸುತ್ತಿದೆ. ಪೊಲೀಸ್ ಅನುಮತಿ ನಿರಾಕರಿಸುವ ಮೂಲಕ ರಾಜ್ಯ ಸರಕಾರವು ಮೊದಲಿಗೆ ದೊರೆಸ್ವಾಮಿಯವರ ಹೋರಾಟದ ಸಂಕಲ್ಪಕ್ಕೆ ಅಡ್ಡಗಾಲು ಹಾಕಲು ಯತ್ನಿಸಿತು. ಆದರೆ, ಅವರು ಫೆಬ್ರವರಿ 6ರಂದು ಟೌನ್‌ಹಾಲ್‌ನಲ್ಲಿ ತನ್ನ ಪ್ರತಿಭಟನೆ ಆರಂಭಿಸಿ, ಬಂಧನಕ್ಕೆ ಒಳಗಾದ ಬಳಿಕ ಅವರು ಪ್ರತಿಭಟಿಸಲು ಅವಕಾಶ ನೀಡುವುದು ಪೊಲೀಸ್ ಮತ್ತು ಆಡಳಿತಕ್ಕೆ ಅನಿವಾರ್ಯವಾಯಿತು. ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಡಚಣೆಯಾಗದಂತೆ, ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಎಲ್ಲಾ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಗಣ್ಯ ಪ್ರಜೆಗಳಿಗೆ ಕರೆ ನೀಡಲಾಗಿತ್ತು. ರಾಮಚಂದ್ರ ಗುಹಾ, ವಿದ್ಯಾರ್ಥಿ ನಾಯಕ ರಾಜೀವ ಗೌಡ ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಪ್ರತಿಭಟನೆಯಲ್ಲಿ ಕೈಜೋಡಿಸಿದರು.

ಮುಂದಿನ ನಾಲ್ಕು ವರ್ಷಗಳವರೆಗೆ ಅವಿರತ ಹೋರಾಟವೇ ಫ್ಯಾಸಿಸ್ಟ್ ಯುಗವನ್ನು ಕೊನೆಗೊಳಿಸುವ ಹಾದಿಯಾಗಿದ್ದು, ಫ್ಯಾಸಿಸ್ಟ್ ಶಕ್ತಿಗಳನ್ನು ತಡೆದು, ಎಲ್ಲಾ ರಂಗಗಳಲ್ಲಿ ಸೋಲಿಸುವುದರ ಮೂಲಕ, ಮಾನವ ಹಕ್ಕು, ರಾಜಕೀಯ ಹಕ್ಕು, ಆರ್ಥಿಕ ಹಕ್ಕು, ಸಾಮಾಜಿಕ ಹಕ್ಕು, ನಾಗರಿಕ ಹಕ್ಕುಗಳ ಮರುಸ್ಥಾಪನೆ ಮಾಡದಿದ್ದರೆ, ದೇಶಕ್ಕೆ ಸ್ಪಷ್ಟವಾದ ಅಪಾಯವಿದೆ. ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಪ್ರಚೋದಿಸಿದ್ದರೂ, ದೇಶವು ಇಂದು ಎದುರಿಸುತ್ತಿರುವ ಎಲ್ಲಾ ವಿಷಯಗಳ ಬಗ್ಗೆ ಹಲವರು ಅಷ್ಟೇ ಆತಂಕಿತರಾಗಿದ್ದು, ಅವುಗಳನ್ನು ಕುರಿತು ಸರಕಾರವನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗುತ್ತದೆ.

ಸುಮಾರು 130 ಕೋಟಿ ಜನರಿರುವ ದೇಶದಲ್ಲಿ 90 ಕೋಟಿ ಮತದಾರರಿದ್ದು, 22 ಕೋಟಿಗಿಂತಲೂ ಕಡಿಮೆ ಮತದಾರರು ಮೋದಿಗೆ ಮತ ಚಲಾಯಿಸಿರುವಾಗ, ಸಂಸತ್ತಿನಲ್ಲಿ ಭಾರೀ ಬಹುಮತದ ಶಕ್ತಿಯಷ್ಟೇ ಸರಕಾರಕ್ಕೆ ನಾಗರಿಕರ ಹಕ್ಕುಗಳನ್ನು ದಮನಿಸಿ, ಪ್ರತಿಯೊಬ್ಬ ಸಂಸದರು ಪ್ರತಿಜ್ಞೆ ಸ್ವೀಕರಿಸಿರುವ ಸಂವಿಧಾನವನ್ನೇ ಉಲ್ಲಂಘಿಸುವ ಅಧಿಕಾರ ನೀಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here