Homeಕರ್ನಾಟಕಪ್ರತಿಪಕ್ಷ ನಾಯಕರನ್ನು ಹೀಗಳೆದಾಗ ದೇಶದ ಗೌರವಕ್ಕೆ ಧಕ್ಕೆ ಆಗಲಿಲ್ಲವೇ?: ಬಿಬಿಸಿ ಸಾಕ್ಷ್ಯಚಿತ್ರ ಹಿನ್ನೆಲೆ ಸಿದ್ದರಾಮಯ್ಯ ಪ್ರಶ್ನೆ

ಪ್ರತಿಪಕ್ಷ ನಾಯಕರನ್ನು ಹೀಗಳೆದಾಗ ದೇಶದ ಗೌರವಕ್ಕೆ ಧಕ್ಕೆ ಆಗಲಿಲ್ಲವೇ?: ಬಿಬಿಸಿ ಸಾಕ್ಷ್ಯಚಿತ್ರ ಹಿನ್ನೆಲೆ ಸಿದ್ದರಾಮಯ್ಯ ಪ್ರಶ್ನೆ

- Advertisement -
- Advertisement -

“ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿ ನಾಯಕರು ದೇಶಾದ್ಯಂತ ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ?” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಕೋಮು ದಳ್ಳುರಿ ಮತ್ತು ಅವರು ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಇಟ್ಟ ಹೆಜ್ಜೆಗಳನ್ನು ಮುಖ್ಯವಾಗಿಟ್ಟುಕೊಂಡು ಬಿಬಿಸಿ ರೂಪಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ ಸಾಕ್ಷ್ಯಚಿತ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಧಾನಿ ನರೇಂದ್ರಮೋದಿಯವರ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದೇ ರೀತಿ ಪ್ರತಿಪಕ್ಷದ ನಾಯಕರ ಚಾರಿತ್ರ್ಯಹನನ ಮಾಡದಂತೆಯೂ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕಲ್ಲವೇ?” ಎಂದು ಕೇಳಿದ್ದಾರೆ.

“ಕಳೆದ ಎಂಟು ವರ್ಷಗಳಿಂದ ಬಿಜೆಪಿ ನಾಯಕರು ನನ್ನ ವಿರುದ್ದ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ, ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?” ಎಂದಿದ್ದಾರೆ.

“ನನ್ನ ವಿರುದ್ದ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ, ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲು ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ-ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ?” ಎಂದು ಕಟುಕಿದ್ದಾರೆ.

ನಿರ್ಬಂಧಕ್ಕೆ ದೇಶದ ವಿವಿಧೆಡೆ ಆಕ್ರೋಶ

ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಬಿಬಿಸಿ ತಯಾರಿಸಿರುವ, ‘ಇಂಡಿಯಾ – ದಿ ಮೋದಿ ಕ್ವಶ್ಚನ್‌’ ಸಾಕ್ಷ್ಯಚಿತ್ರದ ವಿರುದ್ಧ ವಿಧಿಸಿದ ಸೆನ್ಸಾರ್ಶಿಪ್ ಅನ್ನು ವಿರೋಧಿಸಿ, ಹಲವಾರು ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗಳನ್ನು ಆಯೋಜಿಸುತ್ತಿವೆ.

ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ (EFLU) ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ (UoH) ವಿದ್ಯಾರ್ಥಿ ಸಂಘಟನೆಗಳು ತಮ್ಮ ಕ್ಯಾಂಪಸ್ ಆವರಣದಲ್ಲಿ ನಿಷೇಧಿತ ಸಾಕ್ಷ್ಯಚಿತ್ರವನ್ನು ವೀಕ್ಷಿಸಿವೆ.

ಸುಮಾರು 60-70 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಜಮಾಯಿಸಿ ತಮ್ಮ ಸೆಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು ಎಂದು EFLU ನ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಕಾರ್ಯಕ್ರಮವನ್ನು  ಪೂರ್ವಸಿದ್ಧತೆಯಿಲ್ಲದೆ ಯೋಜಿಸಲಾಗಿದ್ದು, ವಿಶ್ವವಿದ್ಯಾಲಯದ ಆಡಳಿತವು ತಡೆಯಬಹುದಾಗಿದ್ದರಿಂದ ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಅದೇ ರೀತಿ, ಹೈದರಾಬಾದ್ ವಿಶ್ವವಿದ್ಯಾನಿಲಯದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಘಟಕವು ಗುರುವಾರ ಕ್ಯಾಂಪಸ್‌ನ ಲೇಡಿಸ್ ಹಾಸ್ಟೆಲ್‌ನಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿತ್ತು. ಇದಕ್ಕೆ ಪ್ರತೀಕಾರವಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರು ಕ್ಯಾಂಪಸ್‌ನ ಬೇರೆ ಸ್ಥಳದಲ್ಲಿ ದಿ ಕಾಶ್ಮೀರ ಫೈಲ್ಸ್ ಅನ್ನು ಪ್ರದರ್ಶಿಸಿದರು. ಎರಡು ಪ್ರದರ್ಶನಗಳೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿವೆ.

ಇದಕ್ಕೂ ಮೊದಲು, ಫ್ರಟರ್ನಿಟಿ ಮೂವ್‌ಮೆಂಟ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದರು. ಹೀಗಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಚಾರಣೆಯನ್ನು ಪ್ರಾರಂಭಿಸಿತ್ತು.

ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC)ನ ತೆನಾಂಪೇಟೆಯ ಕೌನ್ಸಿಲರ್ ಎ. ಪ್ರಿಯದರ್ಶಿನಿ ಅವರನ್ನು ಗುರುವಾರ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷ್ಯಚಿತ್ರಗಳ ಲಿಂಕನ್ನು ಒಕ್ಕೂಟ ಸರ್ಕಾರದ ತಡೆ ಹಿಡಿದಿದ್ದನ್ನು ವಿರೋಧಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ದೇಶದಾದ್ಯಂತ ಹೋರಾಟಗಾರರು ಮತ್ತು ವಿಪಕ್ಷಗಳು ನಡೆಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...