Homeಮುಖಪುಟನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ.

- Advertisement -
- Advertisement -

ಭಾರತ ಬಹುಸಂಸ್ಕೃತಿಯ ರಾಷ್ಟ್ರ. ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು ರಾಷ್ಟ್ರಕವಿ ಕುವೆಂಪು ಹಾಡಿಹೊಗಳಿದ ವಿವಿಧ ಧರ್ಮ, ಜನಾಂಗ, ಜಾತಿ -ಪಂಥಗಳ, ಭಾಷೆ, ಉಡುಗೆ- ತೊಡುಗೆ, ಆಹಾರ ಪದ್ಧತಿಗಳನ್ನು ತಲೆತಲಾಂತರದಿಂದ ಗೌರವಿಸಿಕೊಂಡು ಸಹಬಾಳ್ವೆ ಮತ್ತು ಸೌಹಾರ್ದತೆಗೆ ಜಗತ್ತಿಗೆ ಮಾದರಿಯಾದ ದೇಶ. ಮಾದರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ ದೇಶ. ನಾನು ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರು ನನಗೆ ಭಾರತೀಯಳು ಎನ್ನುವುದಕ್ಕೆ ಹೆಮ್ಮೆ .ಏಕೆಂದರೆ ಈ ನೆಲದ ಸಂಸ್ಕೃತಿ ಎಲ್ಲವನ್ನೂ ಒಳಗೊಂಡು ಜೀವಿಸುವ ವಿಶಾಲ ಹೃದಯವನ್ನು ನೀಡಿದೆ.

ಈ ಹೊಗಳಿಕೆ ಅತಿಯಾಯಿತು ಎಂದು ಅನಿಸುವ ವಿಭಾಗಕ್ಕೆ ನೀವು ಸೇರಿದ್ದರೆ ಅದು ನಿಮ್ಮ ದೃಷ್ಟಿಕೋನ. ಈ ಬಹುಸಂಸ್ಕೃತಿ, ಬಹುಧರ್ಮೀಯತಿಯನ್ನು ಒಪ್ಪಿಕೊಂಡು ಬಾಳುವುದನ್ನು ಕಲಿಸುವ ಪ್ರಥಮ ಮೆಟ್ಟಿಲು ಶಿಕ್ಷಣ ಸಂಸ್ಥೆಗಳು. ಅದರಲ್ಲೂ ಸರಕಾರಿ ಶಿಕ್ಷಣ ಸಂಸ್ಥೆಗಳು. ಇಂದಿನಂತೆ ಮಧ್ಯಮ, ಮೇಲುವರ್ಗದ ಜನರೆಲ್ಲರೂ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಸೇರಿಸುವ ವ್ಯವಸ್ಥೆ ಅಂದಿರಲಿಲ್ಲ. ಹೆಚ್ಚಿನ ಎಲ್ಲರೂ ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದರು ಮತ್ತು ಅದು ನಮಗೆ ಕೀಳರಿಮೆಯ ವಿಚಾರವಾಗಿರಲಿಲ್ಲ. ನನ್ನ ಸರಕಾರಿ ಶಾಲೆ ಹಾಗಿತ್ತು. ಮಾನವೀಯತೆಯನ್ನು, ವಿಶ್ವ ಭ್ರಾತೃತ್ವವನ್ನು ಕಲಿಸುವ, ಹಿರಿಯರನ್ನು ಹೇಗೆ ಗೌರವಿಸಬೇಕು? ಒಡನಾಡಿಗಳನ್ನು ಹೇಗೆ ಸ್ನೇಹದೊಂದಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಕಿರಿಯರನ್ನು ಯಾವ ರೀತಿ ಪ್ರೀತಿಸಬೇಕು? ಎಂಬುದನ್ನು ಕಲಿಸಿಕೊಟ್ಟ ಶಾಲೆಗಳು ನಮ್ಮವು. ಅಂದಿನ ಬಾಲ್ಯದ ಗೆಳತಿ ರಶ್ಮಿ ಇಂದು ಸಿಕ್ಕರು ಅದೇ ಪ್ರೀತಿಯಿಂದ ಬಾಲ್ಯದ ಮುಗ್ಧತೆಯೊಂದಿಗೆ ಮಾತನಾಡಿಸುತ್ತಾಳೆ. ಸಹಪಾಠಿಗಳಾಗಿದ್ದ ಜೋಕಿಮ್, ರಮೇಶ್ ಈಗ ಎಲ್ಲಿರಬಹುದು ಅವರ ಸಂಸಾರ ಹೇಗಿರಬಹುದು? ಎಂಬ ಕುತೂಹಲ ಈಗಲೂ ನನಗಿದೆ  ಹೈಸ್ಕೂಲು ಕಾಲೇಜು ಗೆಳತಿಯರಾದ ದೀಪ ಕಲಾ, ರೂಪ, ಪ್ರಫುಲ್ಲ, ಚೇತನ, ಮಮತಾ, ಸುನೀತಾ, ಪ್ರೆಸಿಲ್ಲಾ, ಪ್ರಿಯಾ, ಮೀನಾ, ತಾವ್ರೋ ಹೀಗೆ ಪಟ್ಟಿ ಬೆಳೆಯುತ್ತದೆ. ನಮಗ್ಯಾರಿಗೂ ನಾವು ಒಂದೇ ತಂದೆ ತಾಯಿಯ ಮಕ್ಕಳಲ್ಲ ಎಂದು ಎಂದಿಗೂ ಅನಿಸಿದ್ದೇ ಇಲ್ಲ. ಅನೇಕ ಬಾರಿ ಅವರ ಮನೆಗೆ ಹೋಗಿದ್ದೆ, ಉಂಡಿದ್ದೆ. ಅವರ ಅಕ್ಕರೆಯಲ್ಲಿ ಮಿಂದು ಎದ್ದಿದ್ದೆ. ನನ್ನ ಧರ್ಮ ಅದ್ಯಾವುದಕ್ಕೂ ನನಗೆ ತಡೆಯಾಗಲಿಲ್ಲ. ನಾನು ಧರಿಸಿದ್ದ ಹಿಜಾಬ್ ಅವರಿಗೆ ಸಮಸ್ಯೆಯಾಗಿರಲಿಲ್ಲ.

ಇಂದು ಹಿಜಾಬ್ ಕಟಕಟೆಯಲ್ಲಿ ನಿಂತಿರುವುದಕ್ಕೆ, ಬೀದಿ ವಿಷಯವಾಗಿ ಮಾರ್ಪಟ್ಟಿರುವುದಕ್ಕೆ ವಿಷಾದವಿದೆ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಕುಳಿತು ತರಲೆ ಮಾತುಗಳನ್ನಾಡುತ್ತಿದ್ದ, ವಿಮರ್ಶಿಸುತ್ತ, ಟೀಕಿಸುತ್ತಿದ್ದ ಅದರಾಚೆಗೆ ಅಷ್ಟೇ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ಸಹಪಾಠಿಗಳು ದಿನಬೆಳಗಾದರೆ ಅನ್ಯ ಧರ್ಮದವರಾಗಿ ಹೇಗೆ ಮಾರ್ಪಟ್ಟರು?

ನಿಜ ಹಿಜಾಬ್ ಒಂದು ಧರ್ಮದ ಸಹೋದರಿಯರು ಅನುಸರಿಸುತ್ತಿರುವ ವಸ್ತ್ರ ಪದ್ಧತಿ. ಅದನ್ನು ಬೇರೆ ಯಾವುದೋ ವಸ್ತ್ರದೊಂದಿಗೆ ಪ್ರತಿಸ್ಪರ್ಧಿಯಾಗಿಸಿದ್ದು ಯಾರು? ನಾವು ಇಂದಿಗೂ ಹಿಂದೂ-ಮುಸ್ಲಿಂ ಸಹೋದರಿಯರು ಪರಸ್ಪರ ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದೇವೆ. ಹಬ್ಬಗಳಲ್ಲಿ, ಸಂತೋಷ ಮತ್ತು ದುಃಖದ ಸಂದರ್ಭಗಳಲ್ಲಿ ಪರಸ್ಪರ ಜೊತೆಗಿದ್ದೇವೆ. ಈ ರೀತಿ ಹಿಜಾಬ್ ಅನ್ನು ಚರ್ಚಾ ವಿಷಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ದಾಳಕ್ಕೆ ನಾವೆಂದೂ ಬಲಿ ಬೀಳಬಾರದು.

ನಮಗೆ ಶಿಕ್ಷಣ ಮುಖ್ಯ. ಅದಕ್ಕಿಂತಲೂ ಮುಖ್ಯವಾಗಿ ಈ ದೇಶದ ಅಖಂಡತೆ ಸಾಮರಸ್ಯದ ಜೀವನ ಬಹಳ ಮುಖ್ಯ. ಅಲ್ಪಸಂಖ್ಯಾತರ ಎಲ್ಲ ಗುರುತುಗಳನ್ನು ಒಂದೊಂದಾಗಿ ಅಳಿಸಿ ಬಯಸುವ ಸಂವೇದನ ಶೂನ್ಯತೆ ಯುವಜನತೆಯನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ, ಎಂಬುದರ ಬಗ್ಗೆ ದಿಗಿಲು ಆಗುತ್ತಿದೆ.

ಸಿಖ್ ಧರ್ಮೀಯ ಸಹೋದರರ ಶಿರವಸ್ತ್ರಕ್ಕಿಲ್ಲದ, ಕ್ರೈಸ್ತ ಸನ್ಯಾಸಿ ಭಗಿನಿಯರ ವಸ್ತ್ರಧಾರಣೆಗೆ ಇಲ್ಲದ ವಿರೋಧ ಹಿಜಾಬಿಗೆ ಯಾಕೆ? ತಲೆಯಮೇಲೆ ಹಾಕಿಕೊಳ್ಳುವ ಒಂದು ತುಂಡು ಬಟ್ಟೆಯ ಬಗ್ಗೆ ಇಷ್ಟು ಗೊಂದಲವೇಕೆ?

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ನಾಲಾಯಕ್ ಆದವರು, ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ. ನಮ್ಮ ಮಕ್ಕಳು ವಿವಿಧ ಸಂಸ್ಕೃತಿಯನ್ನು ಪರಿಚಯಿಸಿಕೊಂಡು ಜೀವಿಸುವ ಹಕ್ಕನ್ನು ಅವರಿಂದ ಕಿತ್ತುಕೊಳ್ಳಬೇಡಿ. ರಾಜಕೀಯದವರ ಹಿತಾಸಕ್ತಿಗೆ ನೀವು ಬಲಿಯಾಗಬೇಡಿ. ಚೆನ್ನಾಗಿ ಕಲಿತು, ಬೆಳೆದು ನಮ್ಮ ಸಾಮರ್ಥ್ಯವನ್ನು ಅವರಿಗೆ ಗೊತ್ತುಪಡಿಸುವ. ಹೆಣ್ಣು ಮಕ್ಕಳ ಉಡುಪು ಅವರ ಹಕ್ಕು. ಹಾಗಾಗಿ ಹಿಜಾಬ್ ಸೇರಿದಂತೆ ಎಲ್ಲರ ವಸ್ತ್ರಗಳ ಪರವಾಗಿ ನಿಲ್ಲೋಣ. ನನ್ನ ವಸ್ತ್ರಧಾರಣೆ ನನ್ನ ಮೂಲಭೂತ ಹಕ್ಕು. ಅದು ನಿಮಗೆ ತೊಂದರೆಯನ್ನುಂಟು ಮಾಡುವುದಾದರೆ ಅದು ನನ್ನ ಅಥವಾ ಹಿಜಾಬಿನ ತಪ್ಪಲ್ಲ. ನಿಮ್ಮ ಮಾನಸಿಕತೆ, ಅದನ್ನು ಸ್ವಲ್ಪ ಶುದ್ಧವಾಗಿಟ್ಟುಕೊಳ್ಳಿ. ಸಮಸ್ಯೆಗೆ ಪರಿಹಾರ ನಿಮ್ಮಲ್ಲೇ ಇದೆ.

  • ಸಬೀಹ ಫಾತಿಮ

ಇದನ್ನೂ ಓದಿ: ಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...