PC: [email protected]

ಪಶ್ಚಿಮ ಬಂಗಾಳದ ರಾಯ್‌ಗಂಜ್‌ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಬುಧವಾರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಪಶ್ಚಿಮ ಬಂಗಾಳದ ಐದನೇ ಬಿಜೆಪಿ ಶಾಸಕರಾಗಿದ್ದಾರೆ ಕೃಷ್ಣ ಕಲ್ಯಾಣಿ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಜನ ಗಳಿಸಿದ ನಂತರ ಇದುವರೆಗೆ ಟಿಎಂಸಿಗೆ ಐವರು ಬಿಜೆಪಿ ಶಾಸಕರು ಸೇರ್ಪಡೆಗೊಂಡಿದ್ದಾರೆ. ಇದು ವಿರೋಧ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಕೃಷ್ಣ ಕಲ್ಯಾಣಿ ಅಕ್ಟೋಬರ್ 1 ರಂದು ಅವರು ಬಿಜೆಪಿ ತೊರೆದಿದ್ದರು. ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಈ ಹಿಂದೆ ಟಿಎಂಸಿಯಲ್ಲಿದ್ದ ಕೃಷ್ಣ ಕಲ್ಯಾಣಿ ಉತ್ತರ ದಿನಾಜ್‌ಪುರ ಜಿಲ್ಲಾ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡು ರಾಯಗಂಜ್‌ನಿಂದ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದ ಬಿಜೆಪಿ ಸಂಸದ ಬಾಬುಲ್ ಟಿಎಂಸಿ ಸೇರ್ಪಡೆ

 

“ಅವರು ಬಿಜೆಪಿ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ಆದ್ದರಿಂದ, ಅವರು ಟಿಎಂಸಿಯ ಭಾಗವಾಗಲು ನಿರ್ಧರಿಸಿದ್ದಾರೆ. ಇಂದು ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ” ಎಂದು ಪಾರ್ಥ ಚಟರ್ಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಟಿಎಂಸಿಗೆ ಸೇರ್ಪಡೆಯಾದ ನಂತರ ಮಾತನಾಡಿರುವ ಕೃಷ್ಣ ಕಲ್ಯಾಣಿ, “ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಿಜೆಪಿಯಲ್ಲಿ ಷಡ್ಯಂತ್ರ ನಡೆದಿತ್ತು. ಜನಪರ ಕೆಲಸ ಮಾಡಿದರೂ ಪಕ್ಷದಿಂದ ನನ್ನನ್ನು ಗುರುತಿಸಲಿಲ್ಲ. ನಾನು ಬಿಜೆಪಿ ಪಕ್ಷವನ್ನು ತೊರೆಯಲು ನಿರ್ಧರಿಸಿದ ನಂತರ ನನಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇಂದು ನನ್ನ ತಪ್ಪನ್ನು ತಿದ್ದಿಕೊಂಡಿದ್ದೇನೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜೂಂದಾರ್,” ಇದು ಅವರ ವೈಯಕ್ತಿಕ ನಿರ್ಧಾರ. ಅವರು ಬಹಳ ದಿನಗಳಿಂದ ಪಕ್ಷದ ಸಂಪರ್ಕದಲ್ಲಿ ಇರಲಿಲ್ಲ. ಪಕ್ಷದ ಕಾರ್ಯಕ್ರಮಗಳಿಗೂ ಹಾಜರಾಗುತ್ತಿರಲಿಲ್ಲ. ಅವರ ಕೆಲಸಕ್ಕೆ ಭವಿಷ್ಯದಲ್ಲಿ ರಾಯಗಂಜ್‌ನ ಜನರಿಂದ ತಕ್ಕ ಉತ್ತರವನ್ನು ಪಡೆಯುತ್ತಾರೆ” ಎಂದು ಕಿಡಿಕಾರಿದ್ದಾರೆ.

ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಒಟ್ಟು ಐವರು ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಕೃಷ್ಣ ಕಲ್ಯಾಣಿ ಇನ್ನೂ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಬಲ 70 ಕ್ಕೆ ಇಳಿದಿದೆ.


ಇದನ್ನೂ ಓದಿ: ಜೇಮ್ಸ್‌ ಬಾಂಡ್‌‌ನ ‘007’ ಬಳಸಿ ಮೋದಿಯನ್ನು ಟ್ರೋಲ್‌ ಮಾಡಿದ ಟಿಎಂಸಿ

LEAVE A REPLY

Please enter your comment!
Please enter your name here