Homeಮುಖಪುಟಕರ್ನಾಟಕದಲ್ಲಿ ಬಿಜೆಪಿ ಹೆಬ್ಬಾಗಿಲು ಪೂರ್ತಿ ತೆರೆದಿಲ್ಲ, ಕಳ್ಳಕಿಂಡಿಗಳು ಇನ್ನೂ ಮುಚ್ಚಿಲ್ಲ

ಕರ್ನಾಟಕದಲ್ಲಿ ಬಿಜೆಪಿ ಹೆಬ್ಬಾಗಿಲು ಪೂರ್ತಿ ತೆರೆದಿಲ್ಲ, ಕಳ್ಳಕಿಂಡಿಗಳು ಇನ್ನೂ ಮುಚ್ಚಿಲ್ಲ

ಸತತ ನಲುವತ್ತು ವರ್ಷಗಳ ಪ್ರಯತ್ನದ ನಂತರವೂ ಬಿಜೆಪಿಗೆ ಕರ್ನಾಟಕದಲ್ಲಿ ಸರಳ ಬಹುಮತ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಅದು ಆಪರೇಷನ್ ಕಮಲ ನಡೆಸಿಯೆ ಸರಕಾರ ರಚಿಸಬೇಕಾಯಿತು.

- Advertisement -
- Advertisement -

ಕರ್ನಾಟಕದಲ್ಲಿ ಬಿಜೆಪಿ ಒಂದಷ್ಟು ಮಟ್ಟಿಗೆ ಸಹಜವಾಗಿ ಬೆಳೆದಿದೆ. ಇತ್ತೀಚಿನವರೆಗೆ ಈ ಸಹಜ ಬೆಳವಣಿಗೆಯ ಗತಿ ತೀರಾ ನಿಧಾನವಾಗಿತ್ತು. ಈಗ ಸ್ವಲ್ಪ ವೇಗ ಕೂಡಿದಂತೆ ಕಂಡುಬರುತ್ತದೆ. ಎರಡನೆಯದಾಗಿ, ಬಿಜೆಪಿ ಕರ್ನಾಟಕದಲ್ಲಿ ಇತರ ಪಕ್ಷಗಳ ಅಳಿವಿನಿಂದಾಗಿ ಬೆಳೆದಿದೆ. ಜನತಾ ದಳ ನಿಧಾನವಾಗಿ ತೆರೆಮರೆಗೆ ಸರಿದಂತೆ, ಅದರ ಕಟ್ಟಾಳುಗಳೆಲ್ಲಾ ಬಿಜೆಪಿಗೆ ವಲಸೆ ಬಂದ ಕಾರಣ ಅದರ ಹರವು ವಿಸ್ತಾರವಾಯಿತು. ಇದು ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯ ಇನ್ನೊಂದು ಮುಖ. ಮೂರನೆಯದಾಗಿ ಇತರ ಪಕ್ಷಗಳ ಶಾಸಕರನ್ನು ಖರೀದಿಸಿ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಬಿಜೆಪಿ ಬೆಳೆದಿದೆ. ಹಾಗಾಗಿ ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಒಂದೇ ಮರದ ಹಲಗೆಯಿಂದ ಕಡೆದು ನಿರ್ಮಿಸಿದ ಸೃಷ್ಟಿಯಲ್ಲ. ಅದು ಕೆಳತುದಿಯಿಂದ ಮೇಲ್ತುದಿಯ ತನಕ ಏಕರೂಪವನ್ನು, ಏಕಗುಣವನ್ನೂ ಹೊಂದಿಲ್ಲ. ಅದು ಒಡ್ಡುಒಡ್ಡಾಗಿ ಜೋಡಿಸಲ್ಪಟ್ಟ ಒಂದು ನಿರ್ಮಾಣ. ಅಷ್ಟು ಮಾತ್ರವಲ್ಲ, ಕರ್ನಾಟಕದಲ್ಲಿ ಬಿಜೆಪಿಯ ಕತೆ ಕೇವಲ ಹೆಬ್ಬಾಗಿಲು ತೆರೆದ ಕತೆಯಲ್ಲ. ಅದು ಹೆಬ್ಬಾಗಿಲಿನ ಸುತ್ತ ಕಳ್ಳಕಿಂಡಿಗಳನ್ನೂ ನಿರ್ಮಿಸಿಕೊಂಡ ಕತೆ. ಅಧಿಕಾರ ಹೆಬ್ಬಾಗಿಲಿನ ಮೂಲಕ ಬಂದರೆಷ್ಟು, ಹಿಂಬಾಗಿಲಿನಿಂದ ಬಂದರೆಷ್ಟು, ಅಧಿಕಾರ ಅಧಿಕಾರವೇ. ಅದೂ ಇಡೀ ದಕ್ಷಿಣ ಭಾರತದಲ್ಲೇ ಬೇರೆಲ್ಲೂ ನೆಲೆಯಿಲ್ಲದ ಕಾಲಘಟ್ಟದಲ್ಲಿ.

ಪ್ರಾಯಶಃ ರಾಜಕೀಯದಲ್ಲಿ ಹೀಗಾಗುವುದುಂಟು. ಹೇಗೆ ಅಂದರೆ ಒಂದು ರಾಜ್ಯದಲ್ಲಿ ಒಂದು ರಾಜಕೀಯ ಪಕ್ಷ ಎಷ್ಟೇ ದುರ್ಬಲವಾಗಿರಲಿ, ಅದು ಸುದೀರ್ಘವಾಗಿ ಅಲ್ಲಿ ನೆಲೆ ನಿಂತದ್ದೇ ಆದರೆ, ಅಧಿಕಾರ ಹಿಡಿಯುವತ್ತ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದರೆ, ಒಂದಲ್ಲ ಒಂದು ದಿನ ಅದಕ್ಕೆ ಅಧಿಕಾರದ ಬಾಗಿಲು ತೆರೆದೇ ತೆರೆಯುತ್ತದೆ. ಯಾಕೆಂದರೆ, ಸದಾ ಅಧಿಕಾರದಲ್ಲೇ ಇರುವ ಅಥವಾ ಮತ್ತೆ ಮತ್ತೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳ ಬಗ್ಗೆ ಒಂದು ಹಂತದ ನಂತರ ಜನರಿಗೆ ಜಿಗುಪ್ಸೆ ಮೂಡಲಾರಂಭಿಸುತ್ತದೆ. ಆಗ ಅವರು ಹೊಸ ಪಕ್ಷಗಳನ್ನು ಅರಸುತ್ತಾರೆ. ಆ ವೇಳೆಗೆ ಯಾವ ಪಕ್ಷ ತಯಾರಾಗಿ ಇರುತ್ತದೋ ಅದಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. ಬಿಜೆಪಿಯ ಪಾಲಿಗೆ ಇಂತಹದ್ದೊಂದು ವಿದ್ಯಮಾನ ನಡೆದುಹೋಗಿದೆ. ಉಳಿದ ದಕ್ಷಿಣ ರಾಜ್ಯಗಳಲ್ಲಿ ಕೂಡಾ ಬಿಜೆಪಿಗೆ ಹೀಗೊಂದು ಅವಕಾಶ ಸಿಗುವ ಸೂಚನೆಗಳು ದೂರದಲ್ಲೆಲ್ಲೂ ಗೋಚರಿಸಲಾರಂಭಿಸುತ್ತಿವೆ.

ಬಿಜೆಪಿ ಇನ್ನೂ ಜನಸಂಘವಾಗಿದ್ದಾಗ, ಕರ್ನಾಟಕದಲ್ಲಿ ಹೆಚ್ಚುಕಡಿಮೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಿಂದ ಆಚೆ ಬರುವುದಕ್ಕೆ ಅದಕ್ಕೆ ಸಾಧ್ಯವಾಗಿರಲಿಲ್ಲ. ಜನಸಂಘ 1980ರಲ್ಲಿ ಬಿಜೆಪಿಯಾಗಿ ಮರುಹುಟ್ಟು ಪಡೆದ ನಂತರ 1983ರ ಚುನಾವಣೆಯಲ್ಲಿ 18 ಸೀಟುಗಳನ್ನು ಗೆದ್ದದ್ದು ಈಗ ಒಂದು ಅಪಭ್ರಂಶದಂತೆ ತೋರುತ್ತದೆ. ಯಾಕೆಂದರೆ, ಇನ್ನೂ ಹುಟ್ಟಿಲ್ಲ, ಬೆಳೆದಿಲ್ಲ ಎನ್ನುವ ಹಂತದಲ್ಲೇ ಖುಲಾಯಿಸಿದ ಆ ಅದೃಷ್ಟ ಎರಡೇ ವರ್ಷದಲ್ಲಿ ಕೊನೆಗೊಂಡಿತು. 1985ರಲ್ಲಿ ಚುನಾವಣೆ ನಡೆದಾಗ ಬಿಜೆಪಿ ಮತ್ತೆ ಗೆದ್ದದ್ದು ಎರಡೇ ಎರಡು ಸ್ಥಾನಗಳನ್ನು. ಒಂದು ದಶಕವಿಡೀ ಒಂದಂಕಿಯ ಸ್ಥಾನಗಳನ್ನು ಮಾತ್ರ ಹೊಂದಿದ್ದ ಪಕ್ಷ 1994ರ ವೇಳೆಗೆ ಮತ್ತೆ ಚಿಗುರಿತು. ಆ ಚುನಾವಣೆಯಲ್ಲಿ 40 ಸ್ಥಾನಗಳನ್ನು ಬಾಚಿ ಅಧಿಕೃತ ವಿರೋಧಪಕ್ಷವಾಗಿ ಹೊಮ್ಮಿದಾಗ ಬಿಜೆಪಿಯ ದಕ್ಷಿಣ ಹೆಬ್ಬಾಗಿಲಿನ ಚೌಕಟ್ಟು ಸಿದ್ಧವಾಗಿತ್ತು. ಮತ್ತೊಂದು ದಶಕದ ಅವಧಿ ಆ ಚೌಕಟ್ಟಿನ ಚಂದ ನೋಡುವುದರಲ್ಲೇ ಕಳೆದುಹೋಯಿತು. ಆ ವೇಳೆಗಾಗಲೇ ಅಯೋಧ್ಯೆಯಲ್ಲಿ ಅಷ್ಟೆಲ್ಲಾ ಧೂಳೆಬ್ಬಿಸಿದರೂ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಧಿಪತ್ಯ ಸ್ಥಾಪಿಸಿದರೂ, ದಕ್ಷಿಣದ ಏಕೈಕ ನೆಲೆಯಲ್ಲಿಯೂ ಮಾತ್ರ ಕೇಸರಿ ಪಕ್ಷ ಆರಕ್ಕೇಳಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಕಸರತ್ತು, ಚಿಕ್ಕಮಗಳೂರಿನ ದತ್ತಪೀಠವನ್ನು ದಕ್ಷಿಣದ ಅಯೋಧ್ಯೆ ಮಾಡಲು ಹೂಡಿದ ಮಸಲತ್ತು, ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿ ನಡೆಸಿದ ಮತೀಯ ಗಲಭೆಗಳ ಕರಾಮತ್ತು ಇತ್ಯಾದಿ ಯಾವುದೂ ಕೂಡಾ ರಾಜ್ಯದ ಉದ್ದಗಲಕ್ಕೆ ಹಿಂದುತ್ವದ ಬೆಳೆ ಬೆಳೆಯುವಲ್ಲಿ ಸಫಲವಾಗಲೇ ಇಲ್ಲ. 1999ರ ಚುನಾವಣೆಯಲ್ಲಿ ಮತ್ತೆ ಬಂದದ್ದು 44 ಸ್ಥಾನಗಳು.

ಹೀಗೆ ಮತ್ತೆ ಒಂದು ದಶಕದ ಕಾಲ ಸ್ಥಗಿತ ಸ್ಥಿತಿಯಲ್ಲಿದ್ದ ಬಿಜೆಪಿಯ ಬೆಳವಣಿಗೆ ಮರುಹುಟ್ಟು ಪಡೆದದ್ದು ಜನತಾ ಪರಿವಾರದ ರಾಜಕೀಯ ಘೋರಿಯ ಮೇಲೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜನತಾ ಪರಿವಾರ ಛಿದ್ರಛಿದ್ರವಾಗಿ ಹೋಗಿತ್ತು. ಅದರಲ್ಲಿ ನೆಲೆ ಕಳೆದುಕೊಂಡ ಕಟ್ಟಾಳುಗಳೆಲ್ಲಾ ಬಿಜೆಪಿಯ ಬಾಗಿಲು ತಟ್ಟಿದರು. ಬೆಳೆಯುವ ಹುಮ್ಮಸ್ಸಿದ್ದರೂ ಚುನಾವಣೆಯ ವೇಳೆಗೆ ಕನಿಷ್ಟ ಠೇವಣಿ ಉಳಿಸಿಕೊಳ್ಳುವ ಅಭ್ಯರ್ಥಿಗಳಿಗಾಗಿ ಪರದಾಡುತ್ತಿರುವ ಪಕ್ಷವೊಂದು ಒಂದು ಕಾಲದ ಆಳುವ ಪಕ್ಷದ ಘಟಾನುಘಟಿಗಳು ಬಂದಾಗ ಬೇಡವೆಂದೀತೇ? ಬಿಜೆಪಿ ಬಂದವರಿಗೆಲ್ಲಾ ಆಶ್ರಯ ನೀಡಿತು. ಬಿಜೆಪಿ ಅವರ ಕೈ ಹಿಡಿಯಿತು. ಅವರು ಬಿಜೆಪಿಯ ಕೈ ಹಿಡಿದರು. ಹಾಗೆ ಜತೆಜತೆಯಲ್ಲಿ ನಡೆದ ಫಲವಾಗಿ 2004ರ ಚುನಾವಣೆಯಲ್ಲಿ ಬಂತು ನೋಡಿ ಬರೋಬ್ಬರಿ 79 ಸ್ಥಾನಗಳಲ್ಲಿ ಗೆಲುವು. ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅಧಿಕಾರ ಹಿಡಿಯಲು ಬೇಕಾದ 113 ಸ್ಥಾನಗಳ ಗುರಿ ಬಹು ದೂರವಿತ್ತು.

ಮತ್ತೆರಡು ವರ್ಷಗಳ ಕಾಲ ವಿರೋಧಪಕ್ಷವಾಗಿಯೇ ಉಳಿದಿದ್ದ ಬಿಜೆಪಿಗೆ ಅಧಿಕಾರದ ಯೋಗ ಬಂದದ್ದು ಅಚಾನಕ್ ಆಗಿ. ನಾಯಕನಾಗುವ ಮೊದಲೇ ಮುಖ್ಯಮಂತ್ರಿಯಾಗುವ ಅವಸರದಲ್ಲಿದ್ದ ಜಾತ್ಯತೀತ ಜನತಾ ದಳದ ಕುಮಾರಸ್ವಾಮಿ 2004ರ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರಕಾರ ಉರುಳಿಸಿದರು-ಬಿಜೆಪಿಯ ಜತೆ ಕೈಜೋಡಿಸಿ ಹೊಸ ಸಮ್ಮಿಶ್ರ ಸರಕಾರ ನಡೆಸಿದರು. ಅಧಿಕಾರದಲ್ಲಿ ಪಾಲುಪಡೆಯುವುದರೊಂದಿಗೆ ಕೊನೆಗೂ ಬಿಜೆಪಿ ಆಳುವ ಪಕ್ಷವಾಯಿತು. ಬಿಜೆಪಿ ಅಸ್ತಿತ್ವಕ್ಕೆ ಬಂದು ಇಪ್ಪತ್ತೈದು ವರ್ಷಗಳಾಗಿದ್ದವು. ಅಂತೂ ಕಾಲು ಶತಮಾನದ ತಾಳ್ಮೆ ಫಲ ನೀಡಿತು. ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು.

PC : www.daijiworld

ಪಕ್ಷವೊಂದು ಅಧಿಕಾರದ ಹೊರಗಿದ್ದು ಬೆಳೆಯುವುದು ಒಂದು ರೀತಿ, ಅಧಿಕಾರ ಅನುಭವಿಸುತ್ತಾ ಬೆಳೆಯುವುದು ಇನ್ನೊಂದು ರೀತಿ. ಅಲ್ಲಿಯವರೆಗೆ ಅಧಿಕಾರದ ಹೊರಗಿದ್ದೆ ಬೆಳೆಯುತ್ತಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು ಬೆಳೆಯುವ ಹೊಸ ಪರ್ವ ಪ್ರಾರಂಭವಾಯಿತು. ಈ ಪರ್ವ ಹಾಗೆಯೇ ಮುಂದುವರೆದಿದ್ದರೆ ಏನಾಗುತ್ತಿತ್ತೋ ಹೇಳಲಾಗದು. ಆದರೆ ಆದದ್ದೇ ಬೇರೆ. ಇಪ್ಪತ್ತು ತಿಂಗಳಲ್ಲಿ ಜನತಾ ದಳದಿಂದ ಬಿಜೆಪಿಗೆ ಅಧಿಕಾರ ಹಸ್ತಾಂತರವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕಿತ್ತು. ಅದೇನಾಯಿತೋ. ಕುಮಾರಸ್ವಾಮಿ ಮಾತು ತಪ್ಪಿದರು. ಸರಕಾರ ಉರುಳಿತು. ಕುಮಾರಸ್ವಾಮಿಯ ವಚನಭ್ರಷ್ಟತೆ ಬಿಜೆಪಿಗೆ ವರವಾಯಿತು. ಒಕ್ಕಲಿಗ ನಾಯಕ ಕುಮಾರಸ್ವಾಮಿ ಲಿಂಗಾಯತ ನಾಯಕ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೆ ವಂಚಿಸಿದ ಪ್ರಕರಣ ಯಡಿಯೂರಪ್ಪನವರನ್ನು ಲಿಂಗಾಯತರ ರಾಜಕೀಯ ನಾಯಕನನ್ನಾಗಿ ಕಾಯಂಆಗಿ ಪ್ರತಿಷ್ಠಾಪಿಸಿತು. ಬಿಜೆಪಿಗೆ ಲಿಂಗಾಯತರ ಬೆಂಬಲ ಹೆಚ್ಚುಕಡಿಮೆ ಇಡಿಯಾಗಿ ಬಂತು. ಅಲ್ಲಿನವರೆಗೆ ಬಿಜೆಪಿಯನ್ನು ಅವಲಂಬಿಸಿ ಯಡಿಯೂರಪ್ಪ ಬೆಳೆದಿದ್ದರೆ, ಅಲ್ಲಿಂದಾಚೆಗೆ ಯಡಿಯೂರಪ್ಪನವರನ್ನು ಅವಲಂಬಿಸಿ ಬಿಜೆಪಿ ಬೆಳೆಯಲಾರಂಭಿಸಿತು. 2008ರಲ್ಲಿ ಮತ್ತೆ ಚುನಾವಣೆ ನಡೆದಾಗ ಬಿಜೆಪಿ 110 ಸ್ಥಾನಗಳಲ್ಲಿ ಗೆದ್ದಿತು. ಅಧಿಕಾರ ಹಿಡಿಯಲು ಮೂರೇ ಸ್ಥಾನಗಳ ಕೊರತೆ. ಅದನ್ನು ಹೇಗೋ ತುಂಬಿಸಿದ್ದಾಯಿತು. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದದ್ದಾಯಿತು. ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ತೆರೆದದ್ದೂ ಆಯಿತು.

2008ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ನಡೆಸಿದ ಬಿಜೆಪಿಯ ಸರಕಾರದ ಅವಧಿಯುದ್ದಕ್ಕೂ ಆದದ್ದು ಪಕ್ಷವೊಂದು ಅಸಹಜವಾಗಿ ಬೆಳೆದರೆ ಅದರ ಪರಿಣಾಮ ಆಡಳಿತದ ಮೇಲೆ ಹೇಗಿರುತ್ತದೆ ಎನ್ನುವ ಪ್ರದರ್ಶನ. ಆ ಐದು ವರ್ಷಗಳಲ್ಲಿ ರಾಜ್ಯ ಕಂಡ ರಾಜಕೀಯ ವಿಕಾರಗಳ ಬಗ್ಗೆ ಸರಿಯಾದ ದಾಖಲಾತಿ ನಡೆದರೆ ಅದು ಹಲವಾರು ಪ್ರೌಢ ಪ್ರಬಂಧಗಳಿಗೆ ವಸ್ತುವಾಗಬಲ್ಲದು. ವಾಸ್ತವದಲ್ಲಿ ಕರ್ನಾಟಕದಲ್ಲಿ ಅಧಿಕಾರ ಪಡೆದ ಆ ಮೊದಲ ಬಿಜೆಪಿ ಸರಕಾರ ಒಂದು ಪಕ್ಷದ ಸರಕಾರ ಆಗಿರಲಿಲ್ಲ ಅದು ಒಂದು ಪಕ್ಷದ ಸರಕಾರದ ರೂಪದಲ್ಲಿದ್ದ ಸಮ್ಮಿಶ್ರ ಸರಕಾರವಾಗಿತ್ತು. ಅದರಲ್ಲಿ ಮೂಲ ಬಿಜೆಪಿಯದ್ದು ಒಂದು ಬಣ. ಆ ಬಣದಲ್ಲಿ ಆರ್‌ಎಸ್‌ಎಸ್‌ಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದವರದ್ದೊಂದು ಉಪಬಣ. ಆರ್‌ಎಸ್‌ಎಸ್‌ಅನ್ನು ಅಷ್ಟೊಂದು ಹಚ್ಚಿಕೊಳ್ಳದೆ ಮೊದಲಿನಿಂದಲೂ ಪಕ್ಷದಲ್ಲಿದ್ದವರದ್ದು ಇನ್ನೊಂದು ಉಪಬಣ. ಜನತಾ ಪರಿವಾರದಿಂದ ಬಂದವರದ್ದು ಮಗುದೊಂದು ಬಣ. ಅಷ್ಟೊತ್ತಿಗೆ ಬಿಜೆಪಿ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಹಲವಾರು ಕಾಂಗ್ರೆಸ್ ಮತ್ತು ಜನತಾ ದಳದ ಶಾಸಕರನ್ನು ಖರೀದಿಸಿ ತಂದಿತ್ತು.

ಆಪರೇಷನ್ ಕಮಲ ಎಂಬ ಕುಖ್ಯಾತ ಕಾರ್ಯಾಚರಣೆಯ ಮೂಲಕ ಕರೆತಂದ ಈ ಶಾಸಕರದ್ದು ಸರಕಾರದಲ್ಲಿ ಇನ್ನೊಂದು ಬಣ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅಲ್ಲಿ ಮತ್ತೂ ಕುತೂಹಲಕಾರಿಯಾದ ಬಣವೊಂದಿತ್ತು. ಅದು ಬಳ್ಳಾರಿಯ ಗಣಿದೊರೆಗಳ ಬಣ. ಅಧಿಕಾರಕ್ಕೆ ಬರಲು, ಆಪರೇಷನ್ ಕಮಲದಲ್ಲಿ ಶಾಸಕರ ಖರೀದಿಗೆ ಗುಟ್ಟಾಗಿ ದೊಡ್ಡ ಗಂಟು ಒದಗಿಸಿದ್ದ ಈ ಬಣ, ಸರ್ಕಾರದೊಳಗೆ ಹೊರಗೆ ನಡೆಸಿದ ಕರಾಮತ್ತು-ಕಾರುಬಾರು ಅಷ್ಟಿಷ್ಟಲ್ಲ. ಬಣರಾಜಕೀಯದ ಬಣವೆಯಾಗಿದ್ದ ಆ ಮೊದಲ ಬಿಜೆಪಿ ಸರಕಾರವನ್ನು ನಿಯಂತ್ರಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ರಾಷ್ಟ್ರಮಟ್ಟದಲ್ಲಿ ಆ ಹೊತ್ತಿಗೆ ಬಿಜೆಪಿ ಕೃಶವಾಗಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಎರಡನೆಯ ಬಾರಿಗೆ ಸತತವಾಗಿ ಸೋತಿದ್ದ ಬಿಜೆಪಿಯಲ್ಲಿ ಅಡ್ವಾಣಿ ಮತ್ತು ವಾಜಪೇಯಿ ಅವರ ಸುದೀರ್ಘ ಅವಧಿ ಮುಕ್ತಾಯದ ಹಂತದಲ್ಲಿತ್ತು. ಅತ್ತ ಹೈಕಮಾಂಡ್‌ನ ನಿಯಂತ್ರಣವಿಲ್ಲ. ಇತ್ತ ಒಂದೊಂದು ಬಣ ಪಕ್ಷವನ್ನು ಒಂದೊಂದು ಕಡೆಗೆ ಎಳೆದಾಡಿತು. ಅತ್ಯಂತ ಅನನುಭವಿಯೂ, ಅತ್ಯಂತ ಅತಂತ್ರವೂ ಆಗಿದ್ದ ಆ ಸರಕಾರಕ್ಕೆ ಬಹುಬೇಗ ಭ್ರಷ್ಟಾಚಾರದ ಕಳಂಕ ತಟ್ಟಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಜೈಲು ಸೇರಿದ್ದು ಎಲ್ಲವೂ ನಡೆಯಿತು. ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಿದ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ವೇಳೆಗೆ ಮೂರು ಹೋಳಾಗಿಹೋಗಿತ್ತು. ದಕ್ಷಿಣದಲ್ಲಿ ಬಿಜೆಪಿಗೆ ತೆರೆದುಕೊಂಡದ್ದು ನಿಜಕ್ಕೂ ಒಂದು ಹೆಬ್ಬಾಗಿಲೊ ಅಥವಾ ನೂರಾರು ಕಳ್ಳಕಿಂಡಿಗಳೋ ಅಂತ ಯಾರಿಗೂ ಸ್ಪಷ್ಟವಾಗದ ರೀತಿಯಲ್ಲಿ ಬಿಜೆಪಿಯ ಮೊದಲ ಸರಕಾರದ ಅವಧಿ ಮುಗಿದುಹೋಯಿತು.

PC : Wikipedia

ಈ ಹಂತದ ನಂತರ ಬಿಜೆಪಿ ಕರ್ನಾಟಕದಲ್ಲಿ ಸವೆಸುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿಯೂ, ಸೂಕ್ತವಾಗಿಯೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಮೊದಲ ಅವಧಿಯಲ್ಲಿ ತನ್ನ ಅಸಹಜ ಬೆಳವಣಿಗೆಗಳಿಂದಾಗಿ ಅನುಭವಿಸಿದ ಎಲ್ಲಾ ಸಂಕಷ್ಟಗಳನ್ನು ಅರಿತ ಬಿಜೆಪಿ ಇನ್ನು ಹೇಗಾದರೂ ಮಾಡಿ ಕರ್ನಾಟಕದಲ್ಲಿ ಸಹಜವಾಗಿಯೇ ಬೆಳೆದು ಅಧಿಕಾರದ ಬೆಳೆ ತೆಗೆಯಬೇಕೆಂದು ಹೊರಟಂತಿತ್ತು ನಂತರದ ಅದರ ನೀತಿ. ಸಹಜವಾಗಿ ಬೆಳೆಯಲು ಅದಕ್ಕಿದ್ದ ಒಂದೇ ಒಂದು ಶಸ್ತ್ರ ಅಂದರೆ ಹಿಂದುತ್ವ. ಆ ಶಸ್ತ್ರ ವ್ಯಾಪಾರದಲ್ಲಿ ಅದು ಆ ತನಕ ಕರ್ನಾಟಕದಲ್ಲಿ ದೊಡ್ಡ ಮಟ್ಟಿನ ಯಶಸ್ಸು ಪಡೆದಿರಲಿಲ್ಲ. ಈಗ ಅದು ಆ ಹಳೆಯ ಶಸ್ತ್ರ ವ್ಯಾಪಾರವನ್ನು ದೊಡ್ಡ ಮಟ್ಟಿಗೆ ಪುನರಾರಂಭಿಸಿತು. 2013-2018ರ ಅಧಿಕಾರರಹಿತ ಅವಧಿಯುದ್ದಕ್ಕೂ ಅದು ಮಾಡಿದ ಒಂದು ಕೆಲಸ ಅಂದರೆ ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಹಿಂದೂ ವಿರೋಧಿ ಎನ್ನುವಂತೆ ಜನರನ್ನು ನಂಬಿಸುವ ಕೆಲಸ. ಕರಾವಳಿ ಕರ್ನಾಟಕದ ಕೆಲ ಮತೀಯ ಬೆಳವಣಿಗೆಗಳು, ಉರುಳಿದ ಹೆಣಗಳು, ಹರಿದ ರಕ್ತ, ಅದರ ಕುರಿತ ಸಿದ್ದರಾಮಯ್ಯ ಸರಕಾರದ ಅಸಡ್ಡೆ ಇತ್ಯಾದಿಗಳನ್ನೆಲ್ಲಾ ಸಮರ್ಪಕವಾಗಿ ಬಳಸಿಕೊಂಡ ಬಿಜೆಪಿಯು ತನ್ನನ್ನು ಬಿಟ್ಟು ಉಳಿದೆಲ್ಲಾ ಪಕ್ಷಗಳೂ ಹಿಂದೂ ವಿರೋಧಿ, ದೇಶ ವಿರೋಧಿ, ಅಭಿವೃದ್ಧಿ ವಿರೋಧಿ ಎನ್ನುವ ಸಂಕಥನವೊಂದನ್ನು ಬಹುಮಟ್ಟಿಗೆ ಯಶಸ್ವಿಯಾಗಿಯೇ ಕಟ್ಟಿತು.

ಅದಕ್ಕೆ ಇಂಬು ನೀಡಲೆಂಬಂತೆ ಅದೇ ವೇಳೆಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯಲ್ಲಿ ನರೇಂದ್ರ ಮೋದಿಯ ಪರ್ವ ಪ್ರಾರಂಭವಾಗಿ ಹೊಸ ಕಾರ್ಯತಂತ್ರಕ್ಕೆ ಹೊಸ ನಾಯಕತ್ವದ ಒತ್ತಾಸೆ ಬೇರೆ ಲಭ್ಯವಾಯಿತು. ರಾಷ್ಟ್ರ ಮಟ್ಟದಲ್ಲೂ ಬಳಕೆಯಾದದ್ದು ಇದೇ ತಂತ್ರ. ಸುಳ್ಳುಗಳನ್ನು ಮತ್ತು ಅರ್ಧ ಸತ್ಯಗಳನ್ನು ಹದವಾಗಿ ಬೆರೆಸಿ, ಬಿಜೆಪಿ ಅಧಿಕಾರಕ್ಕೆ ಬಾರದೆ ಹೋದರೆ ದೇಶಕ್ಕೆ ಮತ್ತು ಧರ್ಮಕ್ಕೆ ಅಪಾಯವಿದೆ ಅಂತ ನಯವಾಗಿ ನಂಬಿಸುವ ಬಿಜೆಪಿಯ ಹೊಸ ತಂತ್ರ ಮುಖ್ಯವಾಗಿ ಗುರಿಯಾಗಿಸಿಕೊಂಡದ್ದು ದೊಡ್ಡ ಸಂಖ್ಯೆಯಲ್ಲಿದ್ದ ಯುವಜನತೆಯನ್ನು. ಯುವ ಸಮುದಾಯವನ್ನು ಒಲಿಸಿಕೊಳ್ಳುವ ಮೂಲಕ ಹೊಸ ಜಾತಿ-ವರ್ಗಗಳ ನೆರವು ಮತ್ತು ಒಲವನ್ನು ಸಂಪಾದಿಸುವುದು ಈ ಹಂತದಲ್ಲಿ ಬಿಜೆಪಿಗೆ ಸಾಧ್ಯವಾಯಿತು. ಒಕ್ಕಲಿಗರ ಮೇಲಿನ ಜನತಾ ದಳದ ಹಿಡಿತ ಸಡಿಲಗೊಂಡದ್ದು, ಅಹಿಂದ ವರ್ಗಗಳ ಮೇಲೆ ಕಾಂಗ್ರೆಸ್ಸಿನ ಹಿಡಿತ ದುರ್ಬಲಗೊಂಡದ್ದು ಇತ್ಯಾದಿ ಬೆಳವಣಿಗೆಗಲ್ಲೆಲ್ಲಾ ಈ ಹಂತದಲ್ಲೇ ನಡೆದವು. ಲಿಂಗಾಯತರ ಬೆಂಬಲ ಬಿಜೆಪಿಗೆ ಹೇಗೂ ಮುಂದುವರೆದರೆ, ಇನ್ನೊಂದೆಡೆ ಹೊಸ ಲಿಂಗಾಯತ ಧರ್ಮದ ಬೇಡಿಕೆಗೆ ಸಿದ್ದರಾಮಯ್ಯ ಸರಕಾರ ಬೆಂಬಲ ನೀಡಿದ್ದು ಬಿಜೆಪಿಗೆ ಎರಡು ರೀತಿಯಲ್ಲಿ ನೆರವಾಯಿತು.

ಈ ಬೇಡಿಕೆಗೆ ಸ್ಪಂದಿಸದೆ ಹೊರಗುಳಿದ ಲಿಂಗಾಯತ-ವೀರಶೈವ ಸಮುದಾಯದವರ ದೃಷ್ಟಿಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ವಿಲನ್‌ಗಳಾದರು. ಅಷ್ಟು ಮಾತ್ರವಲ್ಲ. ಇದು ಕೂಡಾ ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ ಹುನ್ನಾರದ ಭಾಗ ಎಂಬುದಾಗಿ ಹೇಳಿ ಲಿಂಗಾಯತೇತರ ಹಿಂದೂ ಮತದಾರರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಈ ವಿವಾದ ನೆರವಾಯಿತು. ಬಿಜೆಪಿ ತನ್ನ ನೆಲೆಗಳನ್ನು ಸಹಜವಾಗಿ ವಿಸ್ತರಿಸುವ ವಿಚಾರದಲ್ಲಿ ಒಂದು ಮಟ್ಟಿಗೆ ಯಶಸ್ವಿಯಾದದ್ದು ಈ ಹಂತದಲ್ಲಿ ಅನ್ನಿಸುತ್ತದೆ. ಇಷ್ಟೆಲ್ಲಾ ಆಗಿಯೂ, 2018ರ ಚುನಾವಣೆಯಲ್ಲಿ ಬಿಜೆಪಿಗೆ ಬಂದದ್ದು 104 ಸ್ಥಾನಗಳು. ಮತ್ತೊಮ್ಮೆ ಕಾಂಗ್ರೆಸ್- ಜೆಡಿ(ಎಸ್) ಸಮ್ಮಿಶ್ರ ಸರಕಾರ ರಚಿಸಿದರೆ, ಬಿಜೆಪಿ ಮತ್ತೊಮ್ಮೆ ಶಾಸಕರನ್ನು ಖರೀದಿಸಿ ಸರಕಾರ ರಚಿಸುವ ಯೋಜನೆ ಹಾಕಿ ಕೊಂಡು 2019ರ ಮಧ್ಯದ ವೇಳೆಗೆ ಕರ್ನಾಟಕದಲ್ಲಿ ಎರಡನೆಯ ಬಾರಿಗೆ ಸರಕಾರ ರಚಿಸಿತು. ಮತ್ತೆ ಅರ್ಧ ಚುನಾಯಿತ-ಅರ್ಧ ಖರೀದಿತ ಸರಕಾರ.

PC : Twitter

ಒಂದು ಅರ್ಥದಲ್ಲಿ ನೋಡಿದರೆ, ಬಿಜೆಪಿ ಕರ್ನಾಟಕದಲ್ಲಿ ಎರಡು ಬಾರಿ ಸರಕಾರ ರಚಿಸಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ, ಸತತ ನಲುವತ್ತು ವರ್ಷಗಳ ಪ್ರಯತ್ನದ ನಂತರವೂ ಬಿಜೆಪಿಗೆ ಕರ್ನಾಟಕದಲ್ಲಿ ಸರಳ ಬಹುಮತವನ್ನು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಎರಡೂ ಬಾರಿಯೂ ಅದು ಬೆಂಬಲವನ್ನು ಬಾಹ್ಯ ರಾಜಕೀಯ ಮಾರುಕಟ್ಟೆಯಿಂದ ಖರೀದಿಸಿ ಸರಕಾರ ರಚಿಸಬೇಕಾಯಿತು. ಲೋಕಸಭಾ ಚುನಾವಣೆಗಳಲ್ಲಿ ಮಾತ್ರ 1996ರ ನಂತರ ಸತತವಾಗಿ ಅದು ರಾಜ್ಯದ ಬಹುತೇಕ ಸ್ಥಾನಗಳನ್ನು ಬಾಚಿಕೊಳ್ಳುತಿದ್ದರೂ, ರಾಜ್ಯದಲ್ಲಿ ಅಧಿಕಾರ ಪಡೆಯುವ ವಿಚಾರಕ್ಕೆ ಬಂದರೆ ಅದಕ್ಕೆ ಇನ್ನೂ ಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಮತ್ತದೇ ಪ್ರಶ್ನೆ. ಬಿಜೆಪಿಯ ಪಾಲಿಗೆ ದಕ್ಷಿಣದಲ್ಲಿ ತೆರೆದುಕೊಂಡದ್ದು ಹೆಬ್ಬಾಗಿಲೊ ಅರ್ಥವಾ ಕಳ್ಳಕಿಂಡಿಗಳೋ? ಇರಲಿ. ಮುಂದೇನು?

ರಾಜ್ಯದಲ್ಲಿ ಬಿಜೆಪಿಯ ಮುಂದಿನ ಹಾದಿಯ ಬಗ್ಗೆ ಕೂಡಾ ಯಾರೂ ಸ್ಪಷ್ಟವಾಗಿ ಏನನ್ನೂ ಊಹಿಸಲಾಗದ ಸ್ಥಿತಿ ಇದೆ. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತೀರಾ ಜೀರ್ಣಾವಸ್ಥೆಯಲ್ಲಿರುವುದು ಮತ್ತು ಅದರ ಅಹಿತಕರ ಪರಿಣಾಮ ರಾಜ್ಯ ಕಾಂಗ್ರೆಸ್‌ನ ಪುನರುಜ್ಜೀವನದ ಮೇಲೆಯೂ ಆಗಬಹುದಾದ ಸಾಧ್ಯತೆ ಬಿಜೆಪಿಯ ಮುಂದಿನ ಬೆಳವಣಿಗೆಗೆ ನೆರವಾಗಬಹುದು. ಅಂದರೆ ಈ ಶತಮಾನದ ಮೊದಲ ದಶಕದಲ್ಲಿ ಜನತಾ ಪರಿವಾರದ ರಾಜಕೀಯ ಪತನದ ಲಾಭ ಪಡೆದು ಎದ್ದ ಬಿಜೆಪಿ ಮುಂದಿನ ದಶಕದಲ್ಲಿ ಕಾಂಗ್ರೆಸ್‌ನ ಅವನತಿಯಲ್ಲಿ ತನ್ನ ವಿಸ್ತರಣೆಯನ್ನು ಕಂಡುಕೊಳ್ಳಬಹುದಾದ ಸಾಧ್ಯತೆ ಇದೆ. ಅಷ್ಟರ ವೇಳೆಗೆ ರಾಜ್ಯ ಮಟ್ಟದಲ್ಲಾದರೂ ಕಾಂಗ್ರೆಸ್ ಪವಾಡವಶಾತ್ ಚಿಗುತುಕೊಂಡರೆ, ಅಥವಾ ಕರ್ನಾಟಕದಲ್ಲಿ ಏನಕೇನ ಪ್ರಕಾರೇಣ ಹೊಸ ಪ್ರಾದೇಶಿಕ ರಾಜಕೀಯ ಶಕ್ತಿಯೊಂದು ಹುಟ್ಟಿಕೊಂಡರೆ ಮತ್ತೆ ಯಥಾಪ್ರಕಾರ ಬಿಜೆಪಿಯ ದಿಗ್ವಿಜಯ ಕುಂಟುತ್ತಾ ಸಾಗಲಿದೆ. ಯಡಿಯೂರಪ್ಪರ ನಂತರ ಯಾರು ಎನ್ನುವ ಪ್ರಶ್ನೆಗೆ ಬಿಜೆಪಿ ಉತ್ತರ ಕಂಡುಕೊಂಡಿಲ್ಲ. ಯಡಿಯೂರಪ್ಪ ತೆರೆಮರೆಗೆ ಸರಿದ ಮೇಲೆ ಲಿಂಗಾಯತರ ಬೆಂಬಲ ಬಿಜೆಪಿಗೆ ಹೇಗೆ ಮುಂದುವರಿದೀತು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಬಿಜೆಪಿಯ ಹೊಸ ತಲೆಮಾರಿನ ರಾಜ್ಯ ನಾಯಕತ್ವದಲ್ಲಿ ಬರೀ ಬಾಯಿಬಡುಕತನವೇ ಕಾಣಿಸುತ್ತಿದೆ ಹೊರತು ಸತ್ವವೇನೂ ಗೋಚರಿಸುತ್ತಿಲ್ಲ. ಹಾಗಾಗಿ, ರಾಜ್ಯದಲ್ಲಿ ಬಿಜೆಪಿಯೇತರ ರಾಜಕೀಯದ ಶೂನ್ಯ ಎಷ್ಟರ ಮಟ್ಟಿಗೆ ಆವರಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಬಿಜೆಪಿಯ ಮುಂದಿನ ಬೆಳೆವಣಿಗೆ ಅವಲಂಬಿಸಿದೆ.

* ಎ ನಾರಾಯಣ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಪೆರಿಯಾರ್ ನೆಲದಲ್ಲಿ ನಡೆಯದ ಬಿಜೆಪಿ ಪ್ರಯೋಗ; ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...