Homeಕರ್ನಾಟಕಉತ್ತರ ಕನ್ನಡ: "ಹಸ್ತಾಂತರ"ಕ್ಕೆ ಹವಣಿಸುತ್ತಿರುವ ಹೆಬ್ಬಾರ್ ಹಕೀಕತ್!

ಉತ್ತರ ಕನ್ನಡ: “ಹಸ್ತಾಂತರ”ಕ್ಕೆ ಹವಣಿಸುತ್ತಿರುವ ಹೆಬ್ಬಾರ್ ಹಕೀಕತ್!

- Advertisement -
- Advertisement -

ರಾಜ್ಯ ರಾಜಕಾರಣದ ಚಕ್ರ ಮೇಲು-ಕೆಳಗಾಗಿದೆ; ರಿವರ್ಸ್ ಆಪರೇಷನ್ ಸದ್ದು-ಸುದ್ದಿ ಜೋರಾಗುತ್ತಿದೆ. ಆಪರೇಷನ್ ಕಮಲದ ಕಲಿಗಳು, ತಮ್ಮವರೇ ಹಸ್ತಾಂತರಕ್ಕೆ ಅಣಿಯಾಗಿರುವುದು ಕಂಡು ಕಂಗಾಲಾಗಿ ಕೂತಿದ್ದಾರೆ. ಮೂರು ತಿಂಗಳ ಹಿಂದೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಾದ ಸೋಲಿನ ಹೊಡೆತಕ್ಕೆ ತತ್ತರಿಸಿರುವ ಬಿಜೆಪಿ ನಾವಿಕನಿಲ್ಲದ ನಾವೆಯಂತಾಗಿದೆ. ಮುಳುಗುತ್ತಿರುವ ದೋಣಿಯಿಂದ ಒಬ್ಬೊಬ್ಬರೆ ಹಾರಿ ಸುರಕ್ಷಿತ ತೀರ ಅರಸಿ ಹೊರಡುತ್ತಿದ್ದಾರೆ! ಕೇಸರಿ ಪಾರ್ಟಿಯ ಗರ್ಭಗುಡಿ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ ಪೂರ್ವಾಶ್ರಮದತ್ತ ಮುಖಮಾಡಿರುವ ಶಾಸಕರ ದಂಡಿನಲ್ಲಿ ಕರಾವಳಿಯವರೊಬ್ಬರಿದ್ದಾರೆಂಬ ಸಮಾಚಾರ ಉತ್ತರ ಕನ್ನಡದ ರಾಜಕಾರಣದ ಪಡಸಾಲೆಯಲ್ಲಿ ನಾನಾ ನಮೂನೆಯ ಚರ್ಚೆಗಳನ್ನು ಹುಟ್ಟುಹಾಕಿದೆ.

ಕರಾವಳಿಯ ಈ ಶಾಸಕ ಬೇರೆ ಯಾರೂ ಅಲ್ಲ; ಬಾಂಬೈ ಬಾಯ್ಸ್ “ಪ್ರಖ್ಯಾತಿ”ಯ 17 ಶಾಸಕರ ಗುಂಪಿನಲ್ಲಿದ್ದ ಯಲ್ಲಾಪುರ-ಮುಂಡಗೋಡ ಎಮ್ಮೆಲ್ಲೆ ಅರೆಬೈಲ್ ಶಿವರಾಮ್ ಹೆಬ್ಬಾರ್. ಪಕ್ಷ ನಿಷ್ಠೆ, ಸಿದ್ಧಾಂತ ಅಥವಾ ಜನಪರ ಬದ್ಧತೆಗಳಿಗಿಂತ ಅಧಿಕಾರವೇ ದೊಡ್ಡದೆಂದು ನಂಬಿರುವ ಹೆಬ್ಬಾರ್‌ಗೆ ಅತ್ತಿಂದಿತ್ತ ನೆಗೆಯುವ ಮಿಡತೆಯಾಟವೇನು ಹೊಸತಲ್ಲ ಎಂಬುದು ಜಿಲ್ಲೆಯಲ್ಲಿರುವ ಸಾಮಾನ್ಯ ಅಭಿಪ್ರಾಯ. ಯಲ್ಲಾಪುರದ ಜನತಾ ಪರಿವಾರದಲ್ಲಿ ಎಪಿಎಂಸಿ ಮಟ್ಟದ ರಾಜಕಾರಣ ಮಾಡಿಕೊಂಡಿದ್ದ ಲಾರಿ ಡ್ರೈವರ್ ಮೂಲವೃತ್ತಿಯ ಹೆಬ್ಬಾರ್ ಆಗ ಜಿಲ್ಲೆಯ ಸರ್ವಾಧಿಕಾರಿಯಂತಿದ್ದ ಆರ್.ವಿ.ದೇಶಪಾಂಡೆ ಜತೆ ಹೊಂದಾಣಿಕೆಯಾಗದೆ ಬಿಜೆಪಿ ಸೇರಿದ್ದರು; 1990ರ ದಶಕದಲ್ಲಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದರು. ಹವ್ಯಕ ಬ್ರಾಹ್ಮಣ ಸಮುದಾಯದ ಹೆಬ್ಬಾರ್‌ಗೆ ಸ್ವಜಾತಿ ಪ್ರಾಬಲ್ಯದ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗುವುದಕ್ಕೆ ತ್ರಾಸವೇನೂ ಆಗಲಿಲ್ಲ. ಅತ್ಯುಗ್ರ ಹಿಂದುತ್ವದ ಬೆಂಕಿ ಚೆಂಡು ಅನಂತ್ ಕುಮಾರ್ ಹೆಗಡೆ ಸಂಸದನಾಗಿ ಅವತರಿಸಿದ್ದ ದಿನಗಳವು. ಹೆಬ್ಬಾರ್ ಕಂಡರೆ ಅನಂತ್ ಹೆಗಡೆ ಅದ್ಯಾಕೋ ಉರಿದುಬೀಳುತ್ತಿದ್ದರು. ವೈಮನಸ್ಯ ಹೆಚ್ಚಾಗುತ್ತ ಎಲ್ಲಿಗೆ ತಲುಪಿತೆಂದರೆ, ಎಂಪಿ ಅನಂತ್ ಹೆಗಡೆ ಸ್ವಪಕ್ಷದ ಜಿಲ್ಲಾಧ್ಯಕ್ಷ ಹೆಬ್ಬಾರ್‌ಗೆ ಅಕ್ಷರಶಃ ಕೆನ್ಕೆನ್ನೆಗೆ ಬಾರಿಸಿದ್ದರು ಎಂದು ಈಗಲೂ ಹಳೆ ಬಿಜೆಪಿಗರು ನೆನಪು ಮಾಡಿಕೊಳ್ಳುತ್ತಾರೆ. ಇದು ನಿಜವೋ ಅಲ್ಲವೋ ಬಲ್ಲವರೇ ಬಲ್ಲರು. ಆದರೆ ಮಾತಂತೂ ಚಾಲ್ತಿಯಲ್ಲಿದೆ.

ದೇಶಪಾಂಡೆ

ಈ “ನೋವು” ತಾಳಲಾಗದೆ, ಬಿಜೆಪಿಯಲ್ಲಿ ಇರಲಾಗದೆ ಹೆಬ್ಬಾರ್ ಕಾಂಗ್ರೆಸ್ ಸೇರಿಕೊಂಡಿದ್ದರು. ಅಲ್ಲೂ ಹೆಬ್ಬಾರ್ ದೇಶಪಾಂಡೆಯವರನ್ನು ಎದುರುಹಾಕಿಕೊಂಡರು. ದೇಶಪಾಂಡೆ ವಿರೋಧಿ ಮಾರ್ಗರೆಟ್ ಆಳ್ವರ ಪಾಳೆಯ ಸೇರಿಕೊಂಡರು. ಆಳ್ವ ಮೇಡಮ್ ದೇಶಪಾಂಡೆ ವಿರೋಧದ ನಡುವೆಯೂ ತನ್ನ ನಿಷ್ಠಾವಂತ ’ಅನುಯಾಯಿ’ಯಾಗಿ ಅವತರಿಸಿದ್ದ ಹೆಬ್ಬಾರ್‌ಗೆ 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಆದರೆ ಸೋತ ಹೆಬ್ಬಾರ್ 2013ರಲ್ಲಿ ಚುನಾಯಿತರಾದರು. ದಿಲ್ಲಿಯ ಕಾಂಗ್ರೆಸ್ ದರ್ಬಾರಿನಲ್ಲಿ ಪ್ರಭಾವಿಯಾಗಿದ್ದ ಆಳ್ವರ ಬಲದಿಂದ ಹಳೆ ಹುಲಿ ದೇಶಪಾಂಡೆಯನ್ನೇ ಬದಿಗೆ ಸರಿಸಿ ಮಂತ್ರಿಯಾಗಲು ಪ್ರಯತ್ನಿಸಿದರು. ಆದರೆ ಆಳ್ವರನ್ನೂ ಮೀರಿಸುವ ಹೈಕಮಾಂಡ್ ದಿಗ್ಗಜ ಅಹಮ್ಮದ್ ಪಟೇಲ್‌ರಂಥವರ ಕೃಪಾಶ್ರಯ ಪಡೆದಿದ್ದ ದೇಶಪಾಂಡೆ ಮಂತ್ರಿಯಾದರು. ಹತಾಶರಾದ ಹೆಬ್ಬಾರ್ ಅಂದು ಶಾಸಕರಾಗಿದ್ದ ಇಂದಿನ ಮಂತ್ರಿ ಭಟ್ಕಳದ ಮಂಕಾಳು ವೈದ್ಯ, ಕಾರವಾರದ ಸತೀಶ್ ಸೈಲ್ ಮತ್ತು ಎಮ್ಮೆಲ್ಸಿಯಾಗಿದ್ದ ಹಳಿಯಾಳದ ಶ್ರೀಕಾಂತ್ ಘೋಟನೇಕರ್ ಕಟ್ಟಿಕೊಂಡು ದೇಶಪಾಂಡೆ ವಿರುದ್ಧವೇ “ಸಿಂಡಿಕೇಟ್” ರಚಿಸಿ ಅವರ ಬೆನ್ನಿಗೆಬಿದ್ದರು. ಎರಡೂವರೆ ದಶಕ ಅಸೆಂಬ್ಲಿಯಲ್ಲಿದ್ದ, ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿದ್ದ ದೇಶಪಾಂಡೆ ತಮ್ಮ ಅನುಭವಗಳ ತಂತ್ರಗಾರಿಕೆಯಿಂದ ಹೆಬ್ಬಾರ್ ಪಡೆಯನ್ನು ಕೇರ್ ಮಾಡದೆ ಆನೆ ನಡೆದದ್ದೇ ಹಾದಿ ಎಂಬಂತೆ ಸಾಗಿದರು. ಹೆಬ್ಬಾರ್‌ಗೆ ಆಳ್ವರ ಪ್ರಭಾವಳಿಯಿದ್ದರೂ ಏನೂ ಮಾಡಲಾಗಲಿಲ್ಲ.

2018ರ ಚುನಾವಣೆಯಲ್ಲಿ ಉತ್ತರ ಕನ್ನಡ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದು ದೇಶಪಾಂಡೆ ಮತ್ತು ಹೆಬ್ಬಾರ್ ಇಬ್ಬರೆ. ಆಗ ಅಸ್ತಿತ್ವಕ್ಕೆ ಬಂದಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯಾಗಲು ಇಬ್ಬರೂ ಲಾಬಿ ಮಾಡಿದರು. ಆದರೆ ದೇಶಪಾಂಡೆ ಹಿರಿತನದ “ಹಿಡಿತ” ತಪ್ಪಿಸಲು ಹೆಬ್ಬಾರ್‌ಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಬೆಂಬಲಿತ ಕುಮಾರಸ್ವಾಮಿ ಸರಕಾರ ಉರುಳಿಸಲು ಹೊಂಚುಹಾಕಿದ್ದ ಆಪರೇಷನ್ ಕಮಲ ತಂಡದ “ಡಾಕ್ಟರ್”ಗಳು ಅಸಮಧಾನಿತ ಹೆಬ್ಬಾರ್‌ರನ್ನು ಸೆಳೆದರು. ಬಳ್ಳಾರಿಯ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ ಮತ್ತು ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ರಪ್ತು ಮಾಡಿದ ಆರೋಪದ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಒಳಗಾಗಿ ವರ್ಷಾನುಗಟ್ಟಲೆ ಜೈಲಲ್ಲಿ ಕಳೆದಿದ್ದ ತನ್ನ ಮಗ ವಿವೇಕ್‌ನನ್ನು ಬಚಾಯಿಸಲು ಹೆಬ್ಬಾರ್‌ಗೆ ಬಿಜೆಪಿ ಸಖ್ಯ ಅನಿವಾರ್ಯವಾಗಿತ್ತು. ಆಪರೇಷನ್ ಸಕ್ಸಸ್ ಆಗಬೇಕೆಂದರೆ ತನ್ನ ಪುತ್ರನಿಗೆ ಅದಿರು ಪ್ರಕರಣದಿಂದ ಪಾರುಮಾಡಬೇಕು ಮತ್ತು ಪತಿಗೆ ಮಂತ್ರಿ ಮಾಡಬೇಕೆಂದು ಹೆಬ್ಬಾರ್ ಹೆಂಡತಿ ಬೇಡಿಕೆಯಿಟ್ಟು ಯಡಿಯೂರಪ್ಪರ ಮಗ ವಿಜಯೇಂದ್ರರೊಂದಿಗೆ ಮಾತಾಡಿದ್ದಾರೆನ್ನಲಾದ ಆಡಿಯೋ ಸಹ ಆಗ ಹರಿದಾಡಿತ್ತು.

ಅಂತೂ ಹೆಬ್ಬಾರ್ 2019ರಲ್ಲಿ ಆಪರೇಷನ್ ಮಾಡಿಸಿಕೊಂಡು ಯಡಿಯೂರಪ್ಪರ ಹಿಂಬಾಗಿಲ ಸರಕಾರದಲ್ಲಿ ಕಾರ್ಮಿಕ ಮಂತ್ರಿಯೂ ಆದರು. ಆದರೆ ಸ್ವಕ್ಷೇತ್ರ ಯಲ್ಲಾಪುರ ಮತ್ತು ಉತ್ತರ ಕನ್ನಡದ ಮೂಲ ಬಿಜೆಪಿಗರು ಹೆಬ್ಬಾರ್‌ರನ್ನು ಹತ್ತಿರ ಸೇರಿಸಿಕೊಳ್ಳಲಿಲ್ಲ; ತಮ್ಮವನೆಂದು ನಂಬಲಿಲ್ಲ. ಮುಸುಕಿನ ಗುದ್ದಾಟ ಮಂತ್ರಿಯಾಗಿರುವವರೆಗೂ ನಡೆದೇ ಇತ್ತು. ಬಿಜೆಪಿಯಲ್ಲಿ ಬಾಳ್ವೆ ನಡೆಸುವುದು ಕಷ್ಟವೆಂದು ಹೆಬ್ಬಾರ್ ಕಳೆದ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಮತ್ತೆ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು. ಇದಕ್ಕೆ ಸಮಾನಾಂತರವಾಗಿ ಹೆಬ್ಬಾರ್‌ಗೆ ಕೇಸರಿ ಟಿಕೆಟ್ ತಪ್ಪಿಸಲು ಕಟ್ಟರ್ ಸಂಘಿಗಳು ಕಾರ್ಯಾಚರಣೆ ನಡೆಸಿದ್ದರು. ಹೆಬ್ಬಾರ್ ಕಾಂಗ್ರೆಸ್ ಸೇರಲು ಇನ್ನೇನು ಒಂದು ಹೆಜ್ಜೆಯಷ್ಟೇ ಬಾಕಿ ಎನ್ನುವ ಹೊತ್ತಿಗೆ ಅದಿರು ಕಳ್ಳ ಸಾಗಾಣಿಕೆ ಪ್ರಕರಣದ ಭೂತ ಬಡಿದೆಬ್ಬಿಸುವ ಮತ್ತು ಐಟಿ ರೇಡು ಹಾಕಿಸುವ ಬೆದರಿಕೆ ಅಸ್ತ್ರ ಪ್ರಯೋಗಿಸಿ ಬಿಜೆಪಿಯ ದೊಡ್ಡವರು ಹಿಂದಡಿಯಿಡುವಂತೆ ಮಾಡಿದರೆಂಬ ಚರ್ಚೆಗಳು ಆಗ ಆಗಿತ್ತು.

ಮಾರ್ಗರೆಟ್ ಆಳ್ವ

ಅಂತಿಮವಾಗಿ ಹೆಬ್ಬಾರ್ ಒಲ್ಲದ ಮನಸ್ಸಿನಿಂದ ಬಿಜೆಪಿ ಹುರಿಯಾಳಾಗಬೇಕಾಯಿತು. ಹೆಬ್ಬಾರ್ ಬಿಜೆಪಿ ಸೇರುವ ಮೊದಲಿನಿಂದಲೂ ಹಿಂದುತ್ವದ ಆಧಾರದಲ್ಲಿ ಕೇಸರಿ ಕೋಟೆ ಕಟ್ಟುತ್ತ ಶಾಸಕನಾಗುವ ಕನಸು ಕಾಣುತ್ತಿದ್ದ ನರಸಿಂಹ ಕೋಣೆಮನೆಯಂಥ ಸಂಘಪರಿವಾರದ ಮುಂದಾಳುಗಳ ಬಟಾಲಿಯನ್ ಹೆಬ್ಬಾರ್‌ರನ್ನು ಸೋಲಿಸಿ ಮೂಲೆಗುಂಪು ಮಾಡಲು ಕಾಂಗ್ರೆಸ್ ಕ್ಯಾಂಡಿಡೇಟ್ ವಿ.ಎಸ್.ಪಾಟೀಲ್‌ಗೆ ಒಳಗೊಳಗೆ ಸಹಾಯ ಮಾಡಿತು. ಸ್ವಜಾತಿ ಹವ್ಯಕರ ಮತವೂ ಸಾರಾಸಗಟಾಗಿ ಸಿಗದಂತೆ ಆರೆಸ್ಸೆಸ್‌ನ ಬ್ರಾಹ್ಮಣ ಬಣ ತಂತ್ರಗಾರಿಕೆ ಮಾಡಿತು. ಕೇಸರಿ ಸಿದ್ಧಾಂತಕ್ಕೆ ಬದ್ಧನಲ್ಲದ ವಲಸಿಗ ಹೆಬ್ಬಾರ್ ಮತ್ತೆ ಶಾಸಕನಾದರೆ ಅಸಲಿ ಬಿಜೆಪಿಗರನ್ನು ಆಪೋಷನ ಪಡೆಯುತ್ತ ಪಾರ್ಟಿಯನ್ನು ಕಬ್ಜಾ ಮಾಡಿಕೊಳ್ಳುತ್ತಾರೆಂಬ ದೂರಾಲೋಚನೆ ಸಂಘ ಪರಿವಾರಿಗಳದಾಗಿತ್ತು. ಈ ಮೂಲ ಬಿಜೆಪಿಗರು ಹೆಬ್ಬಾರ್‌ರನ್ನು ಹಣಿಯಲು ಸಾಧ್ಯವಾದುದನ್ನೆಲ್ಲ ಮಾಡಿದರು. ಒಂದು ಹಂತದಲ್ಲಿ ಹೆಬ್ಬಾರ್ ಮತ್ತವರ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಗ ವಿವೇಕ್ ಕಂಗಾಲಾಗಿಹೋದರು. ಯಲ್ಲಾಪುರ ಮತ್ತು ಮುಂಡಗೋಡಲ್ಲಿ ನಿರೀಕ್ಷಿತ ಮತ ಪಡೆಯಲಾಗದೆ ಸೋಲಿನ ದವಡೆಗೆ ಸಿಲುಕಿದ್ದ ಹೆಬ್ಬಾರ್ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿನ ಶೂದ್ರಾದಿಗಳ ಮತಗಳಿಂದ ಬಚಾವಾದರು!

ಕೇವಲ 3,759 ಮತದಂತರದಿಂದ ಅಷ್ಟೇನು ಸಮಾಧಾನಕರವಲ್ಲದ ಗೆಲುವು ಕಂಡ ಕ್ಷಣದಿಂದ ಹೆಬ್ಬಾರ್ ಹತಾಶೆಯಿಂದ ಬುಸುಗುಡುತ್ತಲೇ ಇದ್ದಾರೆ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ತಾನು ಸೋತು ಮನೆಸೇರುತ್ತಿದ್ದೆ; ಇದಕ್ಕೆ ಸ್ವಪಕ್ಷದವರ ಒಳಸಂಚೇ ಕಾರಣವೆಂಬ ಸಿಟ್ಟು ಹೆಬ್ಬಾರರಲ್ಲಿದೆ. ಚುನಾವಣಾ ಫಲಿತಾಂಶಬಂದ ಮರುದಿನ ಜರುಗಿದ ವಿಜಯೋತ್ಸವದಲ್ಲಿ ತನ್ನನ್ನು ಸೋಲಿಸಲು ಷಡ್ಯಂತ್ರಮಾಡಿದ ಹಿತ ಶತ್ರುಗಳ ಹುಟ್ಟಡಗಿಸುವ ಶಪಥವನ್ನೂ ಮಾಡಿದ್ದರು. ಚುನಾವಣಾ ಆಖಾಡದಲ್ಲಿ ಕಾಡಿದವರ ಪಟ್ಟಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಮತ್ತು ರಾಜ್ಯ ಶಿಸ್ತು ಪಾಲನಾ ಕಮಿಟಿಗೆ ಕೊಟ್ಟರು. ಹೆಬ್ಬಾರ್ ದೂರು ಕೊಟ್ಟು ಮೂರು ತಿಂಗಳಾದರೂ ಬಿಜೆಪಿ ಹೈಕಮಾಂಡ್ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹೆಬ್ಬಾರ್ ಯಾರ್‍ಯಾರ ಮೇಲೆ ಪಕ್ಷ ದ್ರೋಹದ ಆರೋಪ ಮಾಡಿದ್ದಾರೋ ಅವರೆಲ್ಲ ಕೇಶವ ಕೃಪಾದ ಕೃಪಾಕಟಾಕ್ಷವಿರುವ ಹಾರ್ಡ್‌ಕೋರ್ ಸಂಘಿಗಳು. ಹೀಗಾಗಿ ಬಿಜೆಪಿ ಶಿಸ್ತು ಸಮಿತಿ ಹೆಬ್ಬಾರ್ ದೂರನ್ನು ಕಡೆಗಣಿಸಿಬಿಟ್ಟಿದೆ. ಇತ್ತ ಹೆಬ್ಬಾರ್ ಸ್ಥಳೀಯ ಬಿಜೆಪಿಯಿಂದ ದೂರವಾಗುತ್ತಾ ಸಾಗಿದರು. ಯಲ್ಲಾಪುರ-ಮುಂಡಗೋಡದ ಬಿಜೆಪಿ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡರು. ಹೆಬ್ಬಾರ್ ಬಿಜೆಪಿಯಲ್ಲಿ ಇದ್ದೂ ಇಲ್ಲದಂತಾದರು!

ಇದನ್ನೂ ಓದಿ: ಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ

ಹೆಬ್ಬಾರ್ ಮಹತ್ವಾಕಾಂಕ್ಷಿ ರಾಜಕಾರಣಿ; ಗಣಿ ದುಡ್ಡಿನ ಧಣಿ. ಮಗ ವಿವೇಕ್ ಹೆಬ್ಬಾರ್‌ನನ್ನು ಲೋಕಸಭೆಗೆ ಕಳಿಸುವ ದೂರಾಲೋಚನೆ ಅವರದಾಗಿತ್ತು. ಹಾಲಿ ಸಂಸದ ಅನಂತ್ ಹೆಗಡೆಗೆ ಮತ್ತೆ ಎಂಪಿಯಾಗುವ ಮನಸ್ಸಿಲ್ಲ; ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಾತ್ಸಾರಕ್ಕೀಡಾಗಿದ್ದಾರೆ; ಹೀಗಾಗಿ ಕೇಸರಿ ಚಟುವಟಿಕೆಯಿಂದ ಅನಂತ್ ಬುದ್ಧಿಪೂರ್ವಕವಾಗೇ ದೂರಾಗಿದ್ದಾರೆ. ಖುದ್ದು ಪ್ರಧಾನಿ ಮೋದಿಯೇ ಚುನಾವಣಾ ಪ್ರಚಾರಕ್ಕೆಂದು ಜಿಲ್ಲೆಯ ಅಂಕೋಲೆಗೆ ಬಂದಾಗ ಚಕ್ಕರ್ ಹೊಡೆದು ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ಸಿಟ್ಟಾಗಿರುವ ಹೈಕಮಾಂಡ್ ಅನಂತ್ ಹೆಗಡೆಗೆ ಈ ಬಾರಿ ಕೇಸರಿ ಟಿಕೆಟ್ ಕಟ್ ಮಾಡುತ್ತದೆ ಎಂಬಿತ್ಯಾದಿ ತರ್ಕಗಳು ಹೆಬ್ಬಾರ್‌ರ ಮಗನ ಪಟ್ಟಾಭೀಷೇಕದ ಕನಸಿಗೆ ರೆಕ್ಕೆ-ಪುಕ್ಕ ಕಟ್ಟಿದ್ದವು.

ಆದರೆ ತಾನೇ ಬಿಜೆಪಿ-ಆರೆಸ್ಸೆಸ್‌ನಿಂದ ಕಡೆಗಣಿಸಲ್ಪಡುತ್ತಿದ್ದೇನೆ ಎಂಬುದು ಅರಿವಿಗೆ ಬಂದಾಗ ಬಿಜೆಪಿಯಲ್ಲಿ ತನ್ನ ಮಗನಿಗೆ ಎಂಪಿ ಮಾಡೋದು ಸುಲಭವಲ್ಲ; ಟಿಕೆಟ್ ತಂದರೂ ಕಾಲೆಳೆಯುತ್ತಾರೆ. 71ರ ಗಡಿಯಲ್ಲಿರುವ ತನಗೆ ಬಿಜೆಪಿಯಲ್ಲಿ ಮತ್ತೆ ಎಮ್ಮೆಲ್ಲೆ ಟಿಕೆಟ್ ಸಹ ಸಿಗಲಾರದು; ಮಗನಿಗೂ ಮೂಲ ಬಿಜೆಪಿಗರು ಅವಕಾಶ ತಪ್ಪಿಸುತ್ತಾರೆ. ಹಾಗಾಗಿ ಬಿಜೆಪಿಯಲ್ಲಿದ್ದು ಪ್ರಯೋಜನವಿಲ್ಲ ಎಂಬುದು ಹೆಬ್ಬಾರ್‌ಗೆ ಮನದಟ್ಟಾಯಿತು. ಆಗವರ ಚಿತ್ತ ಸಹಜವಾಗೆ ಪೂರ್ವಾಶ್ರಮದತ್ತ ಹರಿಯಿತು .ಬಾಂಬೈ ಬಾಯ್ಸ್‌ನಲ್ಲಿ ಕೆಲವರು ಕಾಂಗ್ರೆಸ್ ಕಡೆ ವಾಲುತ್ತಿರುವ ವಿದ್ಯಮಾನವೂ ಹೆಬ್ಬಾರ್ ತುಡಿತಕ್ಕೆ ಪೂರಕವಾಗಿತ್ತು. ಈ ನಡುವೆ ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ನೆಪ ಮಾಡಿಕೊಂಡು ಡಿಸಿಎಂ-ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿಯಾಗಿ ಮನದಿಂಗಿತ ನಿವೇದಿಸಿ ಬಂದರು!

ಅನಂತ್ ಕುಮಾರ್ ಹೆಗಡೆ

ರಾಜಧಾನಿ ಬೆಂಗಳೂರಿನ ವಿವಿಧ ಕ್ಷೇತ್ರಗಳ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಮತ್ತು ಮುನಿರತ್ನ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆಂಬ ಸುದ್ದಿಗಳು ಹಾರಾಡತೊಡಗಿದಾಗ ಅದಕ್ಕೆ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಹೆಸರೂ ಥಳಕುಹಾಕಿಕೊಂಡಿತು. ಇದರ ಬೆನ್ನಿಗೆ ಹೆಬ್ಬಾರ್, ’ತನಗೆ ಬಿಜೆಪಿಯಲ್ಲಿ ಆಘಾತವಾಗಿದೆ; ಕಳೆದ ಚುನಾವಣೆಯಲ್ಲಿ ತನ್ನನ್ನು ಮಣಿಸಲು ಹವಣಿಸಿದ ವಿದ್ರೋಹಿಗಳ ಮೇಲೆ ಲಿಖಿತ ದೂರು ಕೊಟ್ಟರೂ ಪಾರ್ಟಿ ಹಿರಿಯರು ಸುಮ್ಮನಿದ್ದಾರೆ. ಬೆಂಗಳೂರಿಗೊಮ್ಮೆ ಹೋಗಿ ಬಂದು ಕಾಂಗ್ರೆಸ್ ಸೇರುತ್ತೇನೋ, ಇಲ್ಲವೋ ಎಂದು ಹೇಳುತ್ತೇನೆ’ ಎಂದು ತಾನು ಕಾಂಗ್ರೆಸಿನ ದಾರಿಯಲ್ಲಿದ್ದೇನೆ ಎಂಬರ್ಥದ ಮಾತುಗಳನ್ನಾಡಿದರು. ಹೆಬ್ಬಾರರ ನಿಷ್ಠಾಂತರ-ಪಕ್ಷಾಂತರವೆಂದರೆ ಶುದ್ಧ ಕೊಡು-ಕೊಳ್ಳುವ ವ್ಯಾವಹಾರಿಕ ರಾಜಕಾರಣ. ವಿಧಾನಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರೆ ಮತ್ತೆ ಗೆಲ್ಲುತ್ತೇನೆಂಬ ಧೈರ್ಯ ಹೆಬ್ಬಾರ್‌ಗೆ ಇಲ್ಲ. ಪದೇಪದೇ ಪಕ್ಷಾಂತರ, ಉಪಚುನಾವಣೆ ಎಂದರೆ ಜನರು ರೋಸತ್ತು ತಿರುಗಿಬೀಳಬಹುದೆಂಬ ಆತಂಕ ಹೆಬ್ಬಾರ್‌ಗಿದೆ. ಹೀಗಾಗಿ ಹೆಬ್ಬಾರ್ ತನಗೆ ಮತ್ತು ತನ್ನ ಮಗನಿಗೆ ಅನುಕೂಲಕರವಾದ ಯೋಜನೆಯೊಂದನ್ನು ಕಾಂಗ್ರೆಸ್ ಯಜಮಾನರ ಮುಂದಿಟ್ಟಿದ್ದಾರೆನ್ನಲಾಗುತ್ತಿದೆ.

ಕಾಂಗ್ರೆಸ್ ಸೇರುವ ತಯಾರಿಲ್ಲಿರುವ ಬಿಜೆಪಿ ಶಾಸಕ ಸೋಮಶೇಖರ್ ಮೂಲಕ ಹೆಬ್ಬಾರ್ ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ಮುಂದಿಟ್ಟಿರುವ ಪ್ರಸ್ತಾಪದಲ್ಲಿ ಮೊನ್ನಿನ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಅಭ್ಯರ್ಥಿ-ಮಾಜಿ ಶಾಸಕ ವಿ.ಎಸ್.ಪಾಟೀಲರಿಗೂ ಆಶಾದಾಯಕವಾದ ಅಂಶವಿದೆಯಂತೆ. ಹೆಬ್ಬಾರ್‌ರಿಂದ ತೆರವಾಗುವ ಯಲ್ಲಾಪುರ ಶಾಸಕ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಪಾಟೀಲರಿಗೆ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡುವುದು; ಇದಕ್ಕೆ ಪ್ರತ್ಯುಪಕಾರವಾಗಿ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಟೀಲ್ ಕ್ಷೇತ್ರವನ್ನು ಹೆಬ್ಬಾರ್ ಪುತ್ರ ರತ್ನ ವಿವೇಕ್ ಹಬ್ಬಾರ್‌ಗೆ ಬಿಟ್ಟುಕೊಡುವುದು. 2014ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್‌ಗೆ ಉತ್ತರ ಕನ್ನಡದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಕಣಕ್ಕಳಿಸುವುದು. ಈ ಚೌಕಾಶಿ ಈಗ ನಡೆಯುತ್ತಿದೆ ಎನ್ನಲಾಗುತ್ತಿದೆ.

ಕಳೆದ ಆ.17ರಂದು ಬೆಂಗಳೂರಲ್ಲಿ ಸಿಎಂ, ಡಿಸಿಎಂ ಉತ್ತರ ಕನ್ನಡದ ಕಾಂಗ್ರೆಸ್ ಎಮ್ಮೆಲ್ಲೆಗಳೊಂದಿಗೆ ಅಭಿವೃದ್ಧಿ ಮತ್ತು ಲೋಕಸಭಾ ಚುನಾವಣೆ ಸ್ಟ್ರಾಟಜಿ ಬಗ್ಗೆ ಚರ್ಚೆ ನಡೆಸಿದಾಗಲೂ ಹೆಬ್ಬಾರ್ ಆಗಮನದ ಲಾಭನಷ್ಟದ ಪರಾಮರ್ಶೆಯೂ ಆಗಿದೆ ಎನ್ನಲಾಗಿದೆ. ಜಿಲ್ಲೆಯ ನಾಲ್ಕು ಕಾಂಗ್ರೆಸ್ ಶಾಸಕರಲ್ಲಿ ಹೆಬ್ಬಾರ್ ವಿರುದ್ಧ ದೇಶಪಾಂಡೆ, ಶಿರಸಿಯ ಭೀಮಣ್ಣ ನಾಯ್ಕ್ ಮತ್ತು ಪರವಾಗಿ ಮಂತ್ರಿ ಮಂಕಾಳ್ ವೈದ್ಯ, ಕಾರವಾರದ ಸತೀಶ್ ಸೈಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ; ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು; ಲೋಕಸಭೆಗೆ ಹೆಚ್ಚು ಸದಸ್ಯರನ್ನು ಕಳಿಸಿಕೊಡುವುದೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಡಿಕೆಶಿ, ದೇಶಪಾಂಡೆ ಮತ್ತು ಭೀಮಣ್ಣ ನಾಯ್ಕರಿಗೆ ಕಿವಿ ಮಾತು ಹೇಳಿಕಳಿಸಿದ್ದಾರೆ ಎಂಬ ಮಾತು ಜಿಲ್ಲಾ ಕಾಂಗ್ರೆಸ್ ಬಿಡಾರದಲ್ಲಿ ಕೇಳಿಬರುತ್ತಿದೆ.

ಸದ್ರಿ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಬ್ಬಾರ್ ಹಾರುವುದಕ್ಕೆ ವೇದಿಕೆ ನಿಧಾನಕ್ಕೆ ಸಜ್ಜಾಗುತ್ತಿದೆ ಅನ್ನಿಸುತ್ತದೆ; ಹೆಬ್ಬಾರ್ ಕಾಂಗ್ರೆಸ್‌ನಿಂದ ಆಖಾಡಕ್ಕಿಳಿದರೆ ಗಟ್ಟಿ ಉಮೇದುದಾರರಾಗಬಲ್ಲರು. ಅವರಲ್ಲಿ ಭರಪೂರ ಕಾಸಿದೆ; ನಿರ್ಣಾಯಕರಾದ ಸ್ವಜಾತಿ ಹವ್ಯಕ ಬ್ರಾಹ್ಮಣರ ಬಲ ಸಿಗುತ್ತದೆ. ಬಿಜೆಪಿಯಿಂದ ಹಾಲಿ ಸಂಸದ ಅನಂತ್ ಹೆಗಡೆ ಕಣಕ್ಕಿಳಿದರೂ ಹೈಗರು ಹೆಬ್ಬಾರತ್ತಲೇ ಹೆಚ್ಚು ಒಲಿವ ಸಾಧ್ಯತೆಯಿದೆ. ಆರು ಬಾರಿ ಗೆಲ್ಲಿಸಿದರೂ ಮೂರು ಬಿಲ್ಲಿಯ ಪ್ರಯೋಜನಕ್ಕೆ ಬಾರದ, ಕ್ಷೇತ್ರವಾಸಿಗಳಿಗೆ ಸದಾ ನಾಟ್ ರೀಚೆಬಲ್ ಆಗಿರುವ ಅನಂತ್ ಹೆಗಡೆ ವಿರುದ್ಧವಾಗಿ ಪ್ರಬಲ ಎಂಟಿ ಇನ್‌ಕಂಬೆನ್ಸ್ ಇದೆ. ತೀರಾ ಅಲ್ಪಸಂಖ್ಯಾತ ಕೊಂಕಣಿ ಬ್ರಾಹ್ಮಣ(ಜಿಎಸ್ಬಿ) ಸಮುದಾಯದ ದೇಶಪಾಂಡೆ ಮಗ ಪ್ರಶಾಂತ್ ಮತ್ತು ಖಾನಾಪುರದ ಮರಾಠ ಜಾತಿಗೆ ಸೇರಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್‌ಗಿಂತ ಹೆಬ್ಬಾರ್‌ಗೆ ಗೆಲ್ಲುವ ಸಾಮರ್ಥ್ಯ ಹೆಚ್ಚು; ದೇಶಪಾಂಡೆ ಜಿಲ್ಲೆಯ ಎರಡು ಪ್ರಬಲ ಜಾತಿಗಳಾದ ದೀವರು ಮತ್ತು ಹೈಗರ ಅಸಮಾಧಾನ ಎದುರಿಸುತ್ತಿದ್ದಾರೆ ಎಂದು ಜಿಲ್ಲೆಯ ಪೊಲಿಟಿಕಲ್ ಮತ್ತು ಸೋಷಿಯಲ್ ಇಂಜಿನಿಯರಿಂಗ್ ಬಲ್ಲವರು ವಿಶ್ಲೇಷಿಸುತ್ತಾರೆ.

ವಿವೇಕ್ ಹೆಬ್ಬಾರ್‌

ಹೆಬ್ಬಾರ್ ಕಾಂಗ್ರೆಸ್ ಸೇರುವ ಕಾರ್ಯಾಚರಣೆಗೆ ಇಳಿದಿದ್ದಾರೆ ಎನ್ನಲಾದ ಬೃಹತ್ ನಾಟಕದ ಸನ್ನಿವೇಷಗಳು ಸೃಷ್ಟಿಯಾಗುತ್ತಿದ್ದಂತೆಯೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜಿಗೆ ಪ್ರಯತ್ನಮಾಡಿದರೆಂದು ಬಿಜೆಪಿ ಮೂಲಗಳು ಪಿಸುಗುಡುತ್ತಿವೆ. ಹೆಬ್ಬಾರ್-ಬೊಮ್ಮಾಯಿ ಮಧ್ಯೆ ರಾಜಕೀಯಕ್ಕೆ ಮೀರಿದ ವ್ಯಾವಹಾರಿಕ ನಂಟಿದೆ ಎನ್ನಲಾಗುತ್ತಿದೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಅವರ ಅದೃಶ್ಯ ಸಹಕಾರ-ಸಹಭಾಗಿತ್ವದಲ್ಲಿ ಹೆಬ್ಬಾರ್ ಪುತ್ರ ವಿವೇಕ್ ಶಿಗ್ಗಾವಿಯಲ್ಲಿ ಸಕ್ಕರೆ ಫ್ಯಾಕ್ಟರಿ ಆರಂಭಿಸಿದ್ದಾರೆ. ಬೊಮ್ಮಾಯಿ ಫೋನಾಯಿಸಿದ ನಂತರ ಒಂಚೂರು ಮೆತ್ತಗಾದಂತೆ ಕಂಡ ಹೆಬ್ಬಾರ್ “ನಾನು ಬಿಜೆಪಿಯಿಂದ ಗೆದ್ದು ಶಾಸಕನಾದವನು; ಬಿಜೆಪಿಯಲ್ಲೇ ಇದ್ದೇನೆ. ಸ್ಥಳೀಯ ಬಿಜೆಪಿಯ ವಾತಾವರಣದ ಬಗ್ಗೆ ಬೇಸರವಿದೆ ನಿಜ. ಆದರೆ ಕಾಂಗ್ರೆಸ್ ಸೇರುತ್ತೇನೆಂಬುದು ಮಾಧ್ಯಮಗಳು ಹುಟ್ಟುಹಾಕಿದ್ದು” ಎಂದು ಕಾಟಾಚಾರಕ್ಕೆಂಬಂತೆ ಮಾತಾಡಿದ್ದಾರೆ. ಹೆಬ್ಬಾರ್ ಹೊರನೋಟಕ್ಕೆ ಏನೇ ಹೇಳಲಿ; ಬಿಜೆಪಿ ಸಹವಾಸವಂತೂ ಅವರಿಗೆ ಸಾಕಾಗಿದೆ ಎಂದು ಅವರ ಕಷ್ಟ-ಸುಖದ ನಿಷ್ಠ ಆಪ್ತರು ಹೇಳುತ್ತಾರೆ.

ಇಲ್ಲಿರುವುದು ಸುಮ್ಮನೆ; ಅಲ್ಲಿರುವುದು ನಮ್ಮ ಮನೆ ಎಂಬ ನಿರ್ಧಾರಕ್ಕೆ ಬಂದಿರುವ ಹೆಬ್ಬಾರ್ ಕಾಂಗ್ರೆಸ್ ಸೇರಲು ಸುಮುಹೂರ್ತ ಹುಡುಕುತ್ತಿದ್ದಾರೆಂಬ ಚರ್ಚೆ ಬಿಜೆಪಿ-ಕಾಂಗ್ರೆಸ್ ವಲಯದಲ್ಲಾಗುತ್ತಿದೆ. ಶಾಸಕ ಸೋಮಶೇಖರ್ ಯಶವಂತಪುರದಲ್ಲಿ ತನ್ನ ಕಟ್ಟಾ ಅನುಯಾಯಿಗಳನ್ನು ಕಾಂಗ್ರೆಸ್ಸಿಗೆ ಕಳಿಸಿದಂತೆಯೇ ಹೆಬ್ಬಾರ್ ಯಲ್ಲಾಪುರ, ಮುಂಡಗೋಡ ಮತ್ತು ಬನವಾಸಿ ಭಾಗದ ಆಯ್ದ ನಿಷ್ಠಾವಂತ ಹಿಂಬಾಲಕರನ್ನು ಸದ್ಯದಲ್ಲೇ ಕಾಂಗ್ರೆಸ್ ಗೂಡು ಸೇರಿಸುವ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಅವರ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ನ ಮಾಜಿ ಶಾಸಕ ವಿ.ಎಸ್.ಪಾಟೀಲ್ “ಹೆಬ್ಬಾರ್ ಕಾಂಗ್ರೆಸಿಗೆ ಬರುವುದಾದರೆ ನನ್ನದೇನು ತಕರಾರಿಲ್ಲ” ಎಂದಿದ್ದಾರೆ. ಈಗಿನ ಅಂದಾಜಿನಂತೆ ಎಲ್ಲವೂ ನಡೆದರೆ ಹೆಬ್ಬಾರ್ ನವೆಂಬರ್ ಹೊತ್ತಿಗೆ ಬಿಜೆಪಿಗೆ ಬೈಬೈ ಹೇಳಿ ಪೂರ್ವಾಶ್ರಮಕ್ಕೆ ಮರಳಿ ಲೋಕಸಭೆ ಅಖಾಡಕ್ಕೆ ಧುಮುಕುತ್ತಾರೆ.

ಉತ್ತರ ಕನ್ನಡದ ದಿಗ್ಗಜ ರಾಜಕಾರಣಿಗಳಲ್ಲಿ ದೇಶಪಾಂಡೆ ಮತ್ತು ಹೆಬ್ಬಾರ್ ಇಬ್ಬರಿಗಷ್ಟೇ ತಂತಮ್ಮ ಕುಲಕಂಠೀರವರನ್ನು ಎಂಪಿ-ಎಮ್ಮೆಲ್ಲೆ ಮಾಡಿ ರಾಜಕೀಯ ರಂಗಸಾಲೆಯಲ್ಲಿ ಮೆರೆಸುವ ಹಂಬಲವಿದೆ. ದೇಶಪಾಂಡೆ-ಹೆಬ್ಬಾರ್ ಯಾವಾಗಲೂ ಹಾವು-ಮುಂಗುಸಿ. ಇಂಥ ಸನ್ನಿವೇಶದಲ್ಲಿ ದೇಶಪಾಂಡೆ ತಮ್ಮ ಹಿತಶತ್ರು ಹೆಬ್ಬಾರ್ ಮರಳಿ ಕಾಂಗ್ರೆಸ್ ಸೇರಿ ಮಗ್ಗಲುಮುಳ್ಳಾಗುವುದನ್ನು ಅದು ಹೇಗೆ ಸಹಿಸುತ್ತಾರೆ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಬ್ಬಾರರ ಘರ್ ವಾಪಸಿ ಹೇಗೆ ನಿಭಾಯಿಸುತ್ತಾರೆ? ಹೆಬ್ಬಾರ್ ಕಾಂಗ್ರೆಸ್ಸಿನ ಪಾರ್ಲಿಮೆಂಟ್ ಕ್ಯಾಂಡಿಡೇಟಾದರೆ ದೇಶಪಾಂಡೆ ಏನು ಮಾಡುತ್ತಾರೆ? 2014ರಲ್ಲಿ ಮಗನನ್ನೇ ಎಂಪಿ ಮಾಡಿಕೊಳ್ಳಲಾಗದ ದೇಶಪಾಂಡೆಯವರಿಗೆ ಹೆಬ್ಬಾರ್‌ರನ್ನು ಯಾಮಾರಿಸಲು ಸಾಧ್ಯವಿದೆಯೇ? ಎಂಬಿತ್ಯಾದಿ ಕುತೂಹಲದ ಚರ್ಚೆಗಳು ಈಗ ಜಿಲ್ಲೆಯಲ್ಲಿ ಜೋರಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...