Homeಅಂಕಣಗಳುಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

ಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

- Advertisement -
- Advertisement -

ಆಧಾರ್ ಕುರಿತ ಬಹುನಿರೀಕ್ಷಿತ ಸುಪ್ರೀಂಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಸಾವಿರಕ್ಕೂ ಹೆಚ್ಚು ಪುಟಗಳ ತೀರ್ಪಿನ ವಿವರ ನಾಳೆಯ ಹೊತ್ತಿಗೆ ಸಂಪೂರ್ಣವಾಗಿ ಲಭ್ಯವಾಗಲಿದೆ. ಈ ಸದ್ಯ ಮಾಧ್ಯಮಗಳು ಹೇಳುತ್ತಿರುವುದು – ಬ್ಯಾಂಕ್ ಖಾತೆಗೆ ಮತ್ತು ಮೊಬೈಲ್ ಫೋನ್‍ಗೆ ಇದನ್ನು ಲಿಂಕ್ ಮಾಡಬೇಕೆಂದೇನಿಲ್ಲವೆಂದು. ಆದರೆ, ಮೇಲ್ಮಧ್ಯಮ ವರ್ಗ ಮತ್ತು ಮೇಲ್ವರ್ಗದವರು ಮಾಡಬೇಕಾದ ಆದಾಯ ತೆರಿಗೆ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್‍ಗೆ ಆಧಾರ್ ಕಡ್ಡಾಯ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಧ್ಯಮ ವರ್ಗ (ಕನಿಷ್ಠ ಗ್ಯಾಸ್ ಸಬ್ಸಿಡಿಗೆ ಆಧಾರ್ ಕಾರ್ಡ್ ಬೇಕು) ಹಾಗೂ ಅದಕ್ಕಿಂತ ಕೆಳಗಿನ ಸಮುದಾಯಗಳಿಗೆ ತಲುಪುತ್ತಿರುವ ಸರ್ಕಾರೀ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ ಮಾಡುವುದನ್ನೂ ಎತ್ತಿ ಹಿಡಿದಿದೆ. ಮಕ್ಕಳನ್ನು ಹೊರತುಪಡಿಸಿ, ದೇಶದ ಎಲ್ಲಾ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆಧಾರ್ ಕಡ್ಡಾಯವೇ ಆಗಿರುತ್ತದೆ. ಇದನ್ನು ಖಾಸಗಿ ಕಂಪೆನಿಗಳು ಕೇಳುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಈಗಾಗಲೇ ಪ್ರತಿಯೊಬ್ಬ ವ್ಯಕ್ತಿಯ ಆನ್‍ಲೈನ್ ವ್ಯವಹಾರಗಳ ಮೂಲಕ ಅವರ ಇಷ್ಟಾನಿಷ್ಟಗಳನ್ನು, ವ್ಯವಹಾರಗಳ ಮೇಲೆ ನಿಗಾ ಇಟ್ಟು ಅವರ ವಿವರಗಳನ್ನು ಖಾಸಗಿಯವರು ಪಡೆದುಕೊಂಡಾಗಿದೆ. ಸರ್ಕಾರವು ಬಯಸಿದಲ್ಲಿ ಎಲ್ಲರ ಮೇಲೆ ನಿಗಾ ಇಡಲು ಸಾಧ್ಯವಾಗುವಂತೆ ಆಧಾರ್ ಕಡ್ಡಾಯವೂ ಆಗಿರುತ್ತದೆ. ನಿಗಾ ಇಡಲು ಆಧಾರ್ ಸಹಾ ಬೇಕಿಲ್ಲ; ಮೊಬೈಲ್ ಫೋನೇ ಸಾಕಾಗುತ್ತದೆ. ಆ ಅರ್ಥದಲ್ಲಿ ಈ ತೀರ್ಪಿನಿಂದ ಮಹತ್ತರವಾದುದೇನೋ ಸಾಧನೆಯಾದಂತೆ ಕಾಣುತ್ತಿಲ್ಲ. ಇದಕ್ಕೂ ಹಿಂದೆ ಸುಪ್ರೀಂಕೋರ್ಟ್ ಖಾಸಗಿತನದ ರಕ್ಷಣೆಯ ಕುರಿತು ನೀಡಿದ ತೀರ್ಪನ್ನು ಇದರಿಂದ ಆಧಾರ್ ವಿಚಾರದಲ್ಲಿ ಭಾಗಶಃ (ಖಾಸಗಿ ವ್ಯಕ್ತಿಗಳ ಕೈಗೆ ಆಧಾರ್ ವಿವರಗಳು ಹೋಗದಂತೆ ತಡೆಯುವ ಮೂಲಕ) ಅಷ್ಟೇ ಅನುಷ್ಠಾನ ಮಾಡಿದಂತಾಗುತ್ತದೆ.
ಈಗಾಗಲೇ ಖಾಸಗಿ ಕಂಪೆನಿಗಳು ಸಂಗ್ರಹಿಸಿಟ್ಟುಕೊಂಡಿರುವ ಆಧಾರ್ ಮಾಹಿತಿಯನ್ನು ನಾಶ ಮಾಡಬೇಕೆಂದು ಹೇಳಿದಾಗ್ಗ್ಯೂ ಆ ಪ್ರಕ್ರಿಯೆಯನ್ನು ಯಾರು, ಹೇಗೆ ಖಾತರಿಗೊಳಿಸುತ್ತಾರೆಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.
ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಅಶೋಕ್ ಭೂಷಣ್‍ರಿದ್ದ ನ್ಯಾಯಪೀಠದಲ್ಲಿ ನ್ಯಾ.ಚಂದ್ರಚೂಡ್‍ರು ಮಾತ್ರ ತುಂಬಾ ಕಠಿಣ ಮಾತುಗಳಲ್ಲಿ ಕೆಲವು ಅಂಶಗಳನ್ನು ತೆರೆದಿಟ್ಟಿದ್ದಾರೆ. ಅವರೂ ಸಹಾ ಆಧಾರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಹೇಳಿರದಿದ್ದರೂ, ಆಧಾರ್ ಕಡ್ಡಾಯವಾಗುವುದರಿಂದ ಆಗುವ ಸಮಸ್ಯೆಗಳನ್ನು ಎತ್ತಿ ಹೇಳಿದ್ದಾರೆ. ಇದನ್ನು ಜಾರಿಗೆ ತಂದ ಪ್ರಕ್ರಿಯೆಯು ಅಸಾಂವಿಧಾನಿಕ ಎಂದೂ ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ. ಈ ರೀತಿಯ ಅಲ್ಪಸಂಖ್ಯಾತ ತೀರ್ಪು ಬಂದಾಗ ಅದನ್ನು ಹಿಡಿದು, ಇನ್ನೂ ದೊಡ್ಡ ಪೀಠ ರಚನೆಗೆ ಕೇಳಬಹುದಾಗಿದೆ. ಅದನ್ನೇ ಮಾಡುತ್ತೇವೆಂದು ಕಾಂಗ್ರೆಸ್‍ನ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಈಗಾಗಲೇ ಘೋಷಿಸಿದ್ದಾರೆ.
ಇಲ್ಲಿ ಆಶ್ಚರ್ಯವೆಂದರೆ, ಸದರಿ ಆಧಾರ್‍ಅನ್ನು ಮೊದಲು ತರಲು ಹೊರಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಇಂದು ರಾಹುಲ್‍ಗಾಂಧಿಯಾದಿಯಾಗಿ ಎಲ್ಲಾ ಕಾಂಗ್ರೆಸ್ಸಿಗರೂ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಅವರ ಪ್ರಕಾರ ಇದು ಯುಪಿಎ ತರಲು ಹೊರಟಿದ್ದ ಆಧಾರ್ ಪ್ರಕ್ರಿಯೆಗೆ ಸಂದ ಜಯ. ವಾಸ್ತವದಲ್ಲಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಇದರ ಪರಿಕಲ್ಪನೆ ರೂಪುಗೊಂಡಾಗಲೇ ಇಂದು ಎನ್‍ಡಿಎ ಯಾವ ರೀತಿಯಲ್ಲಿ ಜಾರಿ ಮಾಡುತ್ತಿದೆಯೋ ಆ ಎಲ್ಲಾ ಸಾಧ್ಯತೆಗಳು/ಅಪಾಯಗಳು ಇದ್ದೇ ಇತ್ತು. ಜಾರಿಗೆ ತರುವ ಪ್ರಕ್ರಿಯೆಯನ್ನು ಸಂಸತ್ತಿನೊಳಗೆ ಇನ್ನೂ ‘ಪ್ರಜಾತಾಂತ್ರಿಕ’ಗೊಳಿಸುವ ಕೆಲಸವನ್ನಷ್ಟೇ ಕಾಂಗ್ರೆಸ್ ಮಾಡಬಯಸಿತ್ತು ಮತ್ತು ಹಂತಹಂತವಾಗಿ ಅದನ್ನು ಹೇರಲಾಗುತ್ತಿತ್ತು. ಆದರೆ, ಇಂದು ತನ್ನ ರೀತಿಯೇ ಬೇರೆ ಎಂದು ಅದು ಹೇಳುತ್ತಿದೆ. ಇದು ಕಾಂಗ್ರೆಸ್‍ನ ಆಷಾಢಭೂತಿತನಕ್ಕೆ ಸಾಕ್ಷಿ.
ಅದೇ ಹೊತ್ತಿನಲ್ಲಿ ಬಿಜೆಪಿಯಂತೂ ಈ ವಿಚಾರದಲ್ಲಿ ಭಾರೀ ದೊಡ್ಡ ಯುಟರ್ನ್ ಮಾಡಿದೆ. ಆಧಾರ್ ತರುವುದಕ್ಕೇ ಅದು ವಿರೋಧ ವ್ಯಕ್ತಪಡಿಸಿತ್ತು. ಆಧಾರ್ ಜನಕ ನಿಲೇಕಣಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದಾಗ, ಅವರನ್ನು ವಿರೋಧಿಸಲೂ ಇದನ್ನೊಂದು ಅಸ್ತ್ರವಾಗಿ ಮಾಡಿಕೊಂಡಿತ್ತು. ನಂತರ ಸುಲಭವಾಗಿ ಖಾಸಗಿಯವರ ಕೈಗೂ ಆಧಾರ್ ಸಿಗುವ ರೀತಿ ಮಾಡಿ ಜಾರಿ ಮಾಡಲು ಹೊರಟಿದ್ದು ಇದೇ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ.
ಇದೀಗ ಒಂದೆರಡು ಅಂಶಗಳನ್ನು ಹೊರತುಪಡಿಸಿ, ಉಳಿದಂತೆ ಆಧಾರ್‍ಅನ್ನು ಕೋರ್ಟ್ ಎತ್ತಿಹಿಡಿದಿದ್ದರೂ, ಒಟ್ಟಾರೆ ಇದರಲ್ಲಿ ಹಲವು ಅಪಾಯಕಾರಿ ಸಂಗತಿಗಳಿವೆ ಎಂಬುದನ್ನು ಕೋರ್ಟ್ ಗುರುತಿಸಿದೆ. ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳಂತೂ ಇದರ ಮಾನ್ಯತೆಯನ್ನು ಪ್ರಶ್ನಿಸಿದೆ. ಆದರೂ, ಇದೊಂದು ‘ಐತಿಹಾಸಿಕ’ ತೀರ್ಪು ಎಂದು ಬಿಜೆಪಿ ಹೇಳುತ್ತಿದೆ.
ಭಾರತವೆಂಬ ದೇಶದಲ್ಲಿ ‘ಸ್ಟ್ರೀಮ್‍ಲೈನ್’ ಮಾಡಬೇಕಾದ್ದು ಬಡವರಿಗೆ ಸಿಗುವ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನಷ್ಟೇ ಎಂದು ಸರ್ಕಾರವು ತಿಳಿದಿದೆ. ಯಾವ ಕಲ್ಯಾಣ ಕಾರ್ಯಕ್ರಮಗಳು ಸಂವಿಧಾನದ ಕಲಂ 21ರ ‘ಘನತೆಯಿಂದ ಬದುಕುವ ಹಕ್ಕ’ನ್ನು ಖಾತರಿಗೊಳಿಸಲು ಕಡ್ಡಾಯವೋ, ರಾಜ್ಯ ನಿರ್ದೇಶನ ತತ್ವಗಳ ಹಲವು ಕಲಂಗಳನ್ನು ಖಾತರಿಗೊಳಿಸಲು ಕಡ್ಡಾಯವೋ, ಅವು ಸಾಧ್ಯವಾದಷ್ಟೂ ಎಲ್ಲರಿಗೂ ಸಿಗದಂತೆ ಮಾಡುವುದರಲ್ಲಿ ಅಧಿಕಾರಶಾಹಿಗೆ ಎಲ್ಲಿಲ್ಲದ ಮುತುವರ್ಜಿ. ದೇಶದ ಇಡೀ ಬೊಕ್ಕಸವೇ ಜನಸಾಮಾನ್ಯರಿಗೆ ನೀಡುವ ಸಬ್ಸಿಡಿಗಳಿಗೆ ಹೋಗುತ್ತಿದೆ ಎಂಬುದು ಅವರ ಅಳಲು. ವಾಸ್ತವದಲ್ಲಿ ಕನಿಷ್ಠ ಮಟ್ಟಕ್ಕಾದರೂ ಬದುಕಿ ದುಡಿಯಲು ಈ ಸಮುದಾಯಗಳಿಗೆ ಸರ್ಕಾರವು ಕೆಲವು ಸಬ್ಸಿಡಿಗಳನ್ನು ನೀಡುತ್ತಿದೆ. ಅದರ ಮೂಲಕ ಕಡಿಮೆ ಕೂಲಿಯಲ್ಲಿ ಉಳ್ಳವರ ಉತ್ಪಾದನಾ ಘಟಕಗಳಲ್ಲಿ ಈ ಜನರು ದುಡಿಯುತ್ತಿದ್ದಾರೆ. ಆ ಅರ್ಥದಲ್ಲಿ ಅಗ್ಗದ ಕೂಲಿಗಳನ್ನು ಸರಬರಾಜು ಮಾಡಲು ಬೇಕಾದಷ್ಟು ಸಬ್ಸಿಡಿಯಷ್ಟೇ ಜನರಿಗೆ ಸಿಗುತ್ತಿದೆ. ಘನತೆಯಿಂದ ಬದುಕಲು ಬೇಕಾದಷ್ಟು ಕಲ್ಯಾಣ ಕಾರ್ಯಕ್ರಮಗಳು ಈ ದೇಶದಲ್ಲಿ ಜಾರಿಯಾಗಿಯೇ ಇಲ್ಲ.
ಹೀಗಿರುವಾಗ, ಸರ್ಕಾರದ ಸವಲತ್ತುಗಳು ‘ಸೋರಿಕೆ’ಯಾಗಿ ಕಡುಬಡವರಿಗೆ ಮಾತ್ರ ಸಿಗಬೇಕಾದವು ‘ಅನರ್ಹ’ರಿಗೆ ಸಿಕ್ಕಿಬಿಡುತ್ತಿದೆಯೆಂದು ಇಂತಹವರು ವಾದಿಸುತ್ತಿದ್ದರು. ಅವರ ಕೈಗೆ ಅಸ್ತ್ರವಾಗಿ ಸಿಕ್ಕಿದ್ದು ತಂತ್ರಜ್ಞಾನ. ಅದನ್ನು ಬಳಸಿಕೊಂಡು ಸೃಷ್ಟಿಸಲಾದ ಆಧಾರ್ ಈಗ ಬಡವರ ಅನ್ನಕ್ಕೆ ಕತ್ತರಿ ಹಾಕುವುದಷ್ಟೇ ಅಲ್ಲದೇ, ದೇಶದ ಎಲ್ಲಾ ಜನರ ಮೇಲೂ ನಿಗಾ ಇಡುವ ‘ನಿಗಾ ಪ್ರಭುತ್ವ’ವನ್ನು ಆಧಾರ್ ಸೃಷ್ಟಿ ಮಾಡಲು ಹೊರಟಿತ್ತು. ಅದರ ಕುರಿತು ಎದ್ದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಗಮನಿಸಿದೆ ಮತ್ತು ಆ ಆತಂಕವನ್ನು ಒಂದಷ್ಟು ಮಟ್ಟಿಗೆ ಒಪ್ಪಿಕೊಂಡಿದೆ.
ಆದರೆ, ಆಧಾರ್‍ನ ಸಮಸ್ಯೆಯನ್ನು ನಿಜಕ್ಕೂ ಇಲ್ಲವಾಗಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯು ಮುಂದುವರೆಯುತ್ತದೆಯಾ? ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳ ಕುರಿತಾಗಿ ಯಾರಾದರೂ ಇನ್ನೂ ದೊಡ್ಡ ಪೀಠಕ್ಕೆ ಕೊಂಡೊಯ್ದರೆ ಆಗೇನಾದರೂ ಉಳಿದ ವಿಚಾರಗಳಿಗೂ ಒಂದು ಪರಿಹಾರ ಕಾಣಿಸುತ್ತದೆಯಾ? ಖಾಸಗಿತನವೂ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದ ಕಲಂ 21ರ ಭಾಗ ಎಂದು ಹೇಳಿದ್ದರ ಸೂಕ್ತವಾದ ವ್ಯಾಖ್ಯಾನ ಮತ್ತು ಆಧಾರ್ ಹಾಗೂ ಡಿಜಿಟಲ್ ಗೌಪ್ಯತೆ ವಿಚಾರಕ್ಕೂ ಅನ್ವಯವಾಗುತ್ತದೆಯಾ ನೋಡಬೇಕು.
ಆದರೆ, ಒಂದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳಿಂದ ಈ ವಿಚಾರದಲ್ಲಿ ಸೂಕ್ತ ಪರಿಹಾರ ನಿರೀಕ್ಷಿಸುವುದು ಮೂರ್ಖತನ. ಮೋದಿ ಜೇಟ್ಲಿಯವರ ಧೋರಣೆಯಂತೂ ಅಪಾಯಕಾರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...