| ಬಿ. ಚಂದ್ರೇಗೌಡ |
ಚುನಾವಣೆ ನಂತರ ಅಭ್ಯರ್ಥಿಗಳು ಸತತ ಒಂದು ತಿಂಗಳು ಮತಪೆಟ್ಟಿಗೆಯೊಳಗೆ ಸಿಕ್ಕಿ ನರಳಿದ್ದು ಇದೇ ಮೊದಲಿರಬೇಕು. ಸಹಜವಾಗಿ, ಮತ ನೀಡಿದ ಕೆಲ ಮದ್ಯ ವ್ಯಸನಿ ಮತದಾರರು, ನಿದ್ರೆ ಬಾರದ ಕಾರಣ ನೀಡಿ ಸರಿಯಾಗಿ ಗುಂಡೇರಿಸತೊಡಗಿದರು. ಜೊತೆಯಲ್ಲಿದ್ದ ಮಂಜೇಗೌಡ ಒಳಗಿನ ಎಣ್ಣೆ ವ್ಯಯವಾದಂತೆ ಹೋಗಿ ಹೋಗಿ ತುಂಬಿಸಿಕೊಂಡು ಬರುತ್ತಿದ್ದ. ಹಾಗಾಗಿ ಕಣ್ಣು ಸದಾ ಕೆಂಪಗೆ ಉರಿಯತೊಡಗಿದ್ದವು. ಕೆಲವರಂತೂ ಇವುಳೆಲ್ಲಿದ್ದಳಯ್ಯ ಸುಮಲತ ಬಂದು ಯಲಕ್ಷನ್ನಿಗೆ ನಿಂತು ನಮ್ಮ ಸರೀಳನೆ ಹಾಳಾಗೋಯ್ತು ಎಂದು ಗೊಣಗಿದ್ದರು.”
ಈ ನಡುವೆ ಸುಮಲತ ಗೆಲ್ಲುವ ಬಗ್ಗೆ ಗೆಳೆಯನೊಬ್ಬ ಒಂದು ಲಕ್ಷ ಬೆಟ್ ಕಟ್ಟುವುದಾಗಿ ಘೋಷಣೆ ಮಾಡಿದ, ಯಾರೂ ಬರಲಿಲ್ಲ. ಅದನ್ನು ಐವತ್ತು ಸಾವಿರಕ್ಕೆ ಇಳಿಸಿದ ನಂತರ ಒಬ್ಬ ಬಂದ. ಆತ ಬರಲು ಕಾರಣವೇನೆಂದರೆ, ಈ ಮನೆ ಮುರುಕ ಟಿವಿಗಳು ಮತ್ತೆ ಸುಮಲತ ವಿಷಯ ತೆಗೆದುಕೊಂಡು ಕಾದಿದೆ ಮಂಡ್ಯಕ್ಕೆ ಅಚ್ಚರಿ ಫಲಿತಾಂಶ ಎಂದು ಬೊಗಳತೊಡಗಿದ್ದವು. ಕೊನೆಗೆ ನೆಕ್ ಟು ನೆಕ್ ಎಂದು ಬಿಕ್ಕ ತೊಡಗಿದವು. ಇದರಿಂದ ಸ್ಫೂರ್ತಿಗೊಂಡ ಜೂಜುಗಾರರು ಆತ್ಮವಿಶ್ವಾಸದಿಂದಲೇ ಐವತ್ತು ಸಾವಿರ ತಂದರು. ಅದೈವತ್ತು ಇದೈವತ್ತು ಒಟ್ಟು ಒಂದು ಲಕ್ಷವನ್ನು ಮೂರನೆ ವ್ಯಕ್ತಿ ಕೈಗಿತ್ತು, ಫಲಿತಾಂಶದ ದಿನ ಪಾರ್ಟಿ ಮಾಡಲು ಒಂದು ಸಾವಿರ ತೆಗೆದಿರಿಸಿ, ಆದಿನ ಮದ್ಯದಂಗಡಿ ಬಂದ್ ಆಗುವ ಅಪಾಯವನ್ನ ಗ್ರಹಿಸಿ ಕೂಡಲೇ ಒಂದು ಸಾವಿರಕ್ಕೆ ಎಂಸಿ ಬ್ರಾಂಡಿ ತಂದಿರಿಸಲು ಹೇಳಿದೆವು. ನಿಖಿಲ್ ಗೆಲ್ಲುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವವರನ್ನು ಕಂಡು ದಿಗಿಲಾಯ್ತು, ಅವರ ಪ್ರಕಾರ ನೂರಾರು ಬೂತಿನಲ್ಲಿ ನಮ್ಮ ಏಜೆಂಟರೇ ಇರಲಿಲ್ಲ. ಜೊತೆಗೆ ಕುಮಾರಣ್ಣ ಕೆ.ಆರ್.ಎಸ್‍ನಲ್ಲಿ ಬೀಡುಬಿಟ್ಟು ಪುಡಿ ಜಾತಿ ಲೀಡರುಗಳನ್ನೆಲ್ಲಾ ಕೊಂಡಿದ್ದಾರಂತೆ, ಈ ಪೈಕಿ ಕುರುಬರ ಮತಗಳನ್ನ ಅಟ್ಟಿಕೊಂಡು ಬಂದು ಬೂತನ್ನ ತುಂಬಿಸುತ್ತೇನೆಂದು ಹೇಳಿದವನೊಬ್ಬನಿಗೆ ಕುಮಾರಣ್ಣ ಹತ್ತು ಲಕ್ಷ ಕೊಟ್ಟನೆಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸಾಕ್ಷಿಯೊದಗಿಸುವಂತೆ ಇಪ್ಪತೈದು ಲಕ್ಷದ ಕಾರಿನಲ್ಲಿ ಬಂದ ಆತ ನಿಖಿಲ್‍ಗೆ ಓಟು ಮಾಡಿ ಎಂದು ಬೈಸಿಕೊಂಡು ಹೋಗಿದ್ದ.
ಇದೆಲ್ಲಕ್ಕಿಂತ ನಮಗೆ ಇನ್ನ ದಿಗಿಲು ಹುಟ್ಟಿಸಿದ್ದು, ಸುಮಲತ ಗೆದ್ದು ಬಿಜೆಪಿ ಸೇರುತ್ತಾಳೆಂದು ಭಾವಿಸಿರುವ ಮುಸ್ಲಿಮರು ನಿಖಿಲನಿಗೆ ಓಟು ಮಾಡಿದ್ದಾರೆಂಬುದು, ಅಂತೂ ದಶದಿಕ್ಕಿನಿಂದ ನಮಗೆ ಅಶುಭ ಸುದ್ದಿಗಳೇ ಬರತೊಡಗಿದವು. ಇಂತಹ ಸಮಯದಲ್ಲಿ ನಾನು ಕೇವಲ ಐದು ಸಾವಿರ ಬೆಟ್ ಕಟ್ಟಿದ್ದೆ. ಚುನಾವಣೆ ಫಲಿತಾಂಶದ ವರೆಗೂ ನಾನು ಊರಲ್ಲೇ ಇದ್ದುಬಿಟ್ಟೆ. ಇಲ್ಲಿಗೆ ಪತ್ರಿಕೆಗಳು ಬರುವುದಿಲ್ಲ, ಹಾಗೆ ಟಿವಿ ನೋಡಿ ತಿಂಗಳ ಮೇಲಾಯ್ತು. ಹಳ್ಳಿಗಳು ಇನ್ನ ಉಳಿಸಿಕೊಂಡಿರುವ ಶಕ್ತಿಯಲ್ಲಿ ಪೇಪರ್, ಟಿವಿ ಬೇಕೆನಿಸುವುದಿಲ್ಲ. ಆದರೆ ಜನ ಸಮೂಹದ ಜೊತೆ ಮಾತನಾಡಲು ಸಾಧ್ಯವೇ ಇಲ್ಲ. ಬಾಯಿ ಬಿಟ್ಟರೆ ಸಾಕು ಮೊರೆಯುತ್ತಾರೆ. ಯಾರು ಏನನ್ನ ಕೇಳಿಸಿಕೊಳ್ಳುವುದಿಲ್ಲ. ನಮ್ಮ ಮನೆಯಲ್ಲೇ ಹೆಬ್ಬೆಟ್ಟಿನ ಸಹೋದರನೊಬ್ಬ ರಾಜಕಾರಣದ ಬಗ್ಗೆ ನನಗೇ ಹೇಳಲು ಬರುತ್ತಾನೆ. ಅವನ ಲೆಕ್ಕದಲ್ಲಿ ನಾನು ಕಿರಿಯ ಅವನು ಹಿರಿಯ ಅದಕ್ಕಾಗಿ ಕೇಳಿಸಿಕೊಳ್ಳಬೇಕಂತೆ!
ಅಂತೂ ಚುನಾವಣೆ ಫಲಿತಾಂಶದ ದಿನ ಬಂತು. ಆ ದಿನ ಊರಿನ ಊರ ಭದ್ರದೇವರ ಪೂಜೆಯಿತ್ತು. ಇದರಲ್ಲೂ ಕೂಡ ಸುಮಲತಾ ನಿಖಿಲ್ ಪ್ರವೇಶ ಪಡೆದು, ಭಕ್ತಿಯು ರೋಷದಿಂದ ಪ್ರಕಟವಾಗುತ್ತಿತ್ತು. ಒಂಚೂರು ನಿಖಿಲ್ ಮುಂದೆ ಹೋದ ಸುದ್ದಿಯಿಂದ ಅವನ ಅಭಿಮಾನಿಗಳು ಅವನಂತೆಯೇ ಆಡತೊಡಗಿದರು. ಒಂದಿಷ್ಟು ಆತಂಕವಾಯ್ತು, ನಮ್ಮ ನಾಗಮಂಗಲ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ನಲವತ್ತೇಳು ಸಾವಿರ ಲೀಡು ಬಂದಿತ್ತು ಅದನ್ನ ಹತ್ತಿಕ್ಕಿ ಕನಿಷ್ಟ ಹತ್ತು ಸಾವಿರ ನಿಖಿಲ್ ಲೀಡ್ ಬರಬಹುದೆಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಅದು ನಿಜವಾಯ್ತು. ಇದು ಬಿಟ್ಟರೆ ಜಿಲ್ಲೆಯ ಇನ್ನಾವ ತಾಲ್ಲೂಕು ಜೆಡಿಎಸ್‍ಗೆ ಲೀಡ್ ಕೊಡಲಿಲ್ಲ. ನಮ್ಮೂರಿಗೆ ಸುಮಲತ ಲಕ್ಷ ಲೀಡ್‍ನಲ್ಲಿ ಗೆದ್ದಳು ಎಂಬ ಸುದ್ದಿ ತಲುಪಿದಾಗ, ಜನ ಊರ ಮುಂದಿದ್ದರು. ಅದೇ ಸಮಯಕ್ಕೆ ಮಳೆ ಆರಂಭವಾಯ್ತು, ಜನ ಮಳೆಯಲ್ಲೇ ಕುಣಿಯತೊಡಗಿದರು. ಅದು ರಂಗದ ಕುಣಿತ, ತಮ್ಮಟೆ ಚಿಕ್ಕಣ್ಣ ಮಾಯಪ್ಪ ಇವರೆಲ್ಲಾ ತಮಟೆ ಬಡಿಯತೊಡಗಿದಂತೆ ಒಂದು ಗಂಟೆ ಸುರಿದ ಮಳೆಯಲ್ಲಿ ಹೊಸ ತಲೆಮಾರಿನ ಹುಡುಗರು ಕುಣಿಯತೊಡಗಿದರು. ಆಶ್ಚರ್ಯವೆಂದರೆ, ಈ ಕುಣಿತದ ಸಂಭ್ರಮ ನೋಡಲಾಗದ ನಿಖಿಲ್ ಕಡೆಯವರೂ ಬಂದು ಕುಣಿಯತೊಡಗಿದರು. ಈ ಸಮ್ಮಿಲನಕ್ಕೆ ಜನ ಹರ್ಷೋದ್ಘಾರ ಮಾಡಿ ಸೀಟಿ ಹೊಡೆದರು. ವಾಸ್ತವವಾಗಿ ದೇವೇಗೌಡ ಮತ್ತು ಕುಮಾರಸ್ವಮಿಯನ್ನು ಬೆಂಬಲಿಸಿದ್ದವರು ಸ್ವಾಭಿಮಾನ ಕಳೆದುಕೊಂಡವರಂತೆ ಮುಖರಹಿತರಾಗಿದ್ದರು. ಈಗ ಅವರ ಸಂಭ್ರಮ ನೋಡಿದರೆ ಅವರಿಗೂ ಸುಮಲತ ಗೆಲ್ಲಬೇಕಿತ್ತೇನೋ ಅನ್ನಿಸುತ್ತದೆ.
ಇದೇನೆ ಆದರು ಸುಮಲತ ಮೂರು ದಾಖಲೆ ಮಾಡಿದ್ದಾರೆ. ಅದೇನೆಂದರೆ 1. ಮಂಡ್ಯದಿಂದ ಆಯ್ಕೆಯಾದ ಮೊದಲ ಪಕ್ಷೇತರ ಅಭ್ಯರ್ಥಿ. 2. ರಾಜ್ಯದ ಕಳೆದ 52 ವರ್ಷದಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಆಯ್ಕೆಯಾದ ಮಹಿಳಾ ಅಭ್ಯರ್ಥಿ. 3. ದೇಶದ ಮಹಿಳಾ ಪಕ್ಷೇತರ ಸದಸ್ಯೆ. ಇರಲಿ ನನ್ನ ಜೊತೆ ಬೆಟ್ ಕಟ್ಟಿದ್ದವನು ಪತ್ತೆಯಿಲ್ಲ. ನಾನು ಊರಿಂದ ಬಂದ ಮೇಲೆ ಊರಿಗೆ ಬಂದಿರಬಹುದು. ನಮ್ಮ ಸ್ವಾಭಿಮಾನ ಗೆದ್ದಿತಲ್ಲ ಅಷ್ಟೇ ಸಾಕು.
ಇದನ್ನು ಓದಿರಿ ಮಂಡ್ಯದಲ್ಲಿ ನಾ ಕಂಡದ್ದು