HomeUncategorizedಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

ಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

- Advertisement -
- Advertisement -

ಯಾಹೂ |

ನಮ್ಮ ಸಾಣೆಹಳ್ಳಿ ರಂಗಭೂಮಿ ದೇಶದಲ್ಲೇ ಹೆಸರುವಾಸಿಯಾದ ರಂಗ ಪ್ರದೇಶ. ಏಕೆಂದರೆ, ಅಲ್ಲಿನ ಜಗದ್ಗುರುವಾದ ಪಂಡಿತಾರಾಧ್ಯರು ತಮ್ಮ ವಂಶವನ್ನು ನಾಟಕದ ಚಟುವಟಿಕೆಗೆ ಮೀಸಲಾಗಿರಿಸಿದ್ದಾರೆ. ಇಂತಹ ಸಾಹಸವನ್ನು ಯಾರೂ ಮಾಡಿಲ್ಲ. ಹೆಗ್ಗೋಡನ್ನು ಬಿಟ್ಟರೆ ರಾಜ್ಯಾದ್ಯಂತ ರಂಗಸಂಚಾರ ಆರಂಭಿಸಿದ ಸಾಣೆಹಳ್ಳಿ ಮಠ, ಹೆಗ್ಗೋಡನ್ನು ಸೈಡಿಗೆ ಸರಿಸಿದ್ದು ಈಗ ಇತಿಹಾಸ. ಏಕೆಂದರೆ ಹೆಗ್ಗೋಡು ಬರುಬರುತ್ತಾ ಹೆಗ್ಗೋಳಾಗಿ ಕಾಟಾಚಾರಕ್ಕೆ ತಿರುಗಾಟ ಶುರುವಿಟ್ಟುಕೊಂಡಾಗ ನಮ್ಮ ಪ್ರೇಕ್ಷಕರು ಅತ್ತ ತಾತ್ಸಾರ ತೋರಿದ್ದು, ಇದಕ್ಕೆ ಉತ್ತರವಾಗಿ ಹೆಗ್ಗೋಡಿನ ಹವ್ಯಕರು ಆಪ್ತರಂಗಭೂಮಿ ಮಾಡಿಕೊಂಡು ತಾವೇ ಎಂಟತ್ತು ಜನ ಸುತ್ತ ಕುಳಿತು ಎಲೆಯಡಿಕೆ ಜಗಿದು ನಾಟಕ ಅಂತ ನೋಡಿದ್ದು ಈಗ ಇತಿಹಾಸ. ಇದಕ್ಕೆ ಉತ್ತರವೆಂಬಂತೆ ಸಾಣೆಹಳ್ಳಿಯ ರಂಗಭೂಮಿ, ಏಕಕಾಲಕ್ಕೆ ನಾಲ್ಕೈದು ಸಾವಿರ ಜನ ಒಮ್ಮೆಲೆ ನಾಟಕ ನೋಡುವಂತೆ ಮಾಡಿದ್ದು, ಆಡಿದ್ದೂ ಒಂದು ದಾಖಲೆ. ಇಂತಿರುವಾಗ ಈಚೆಗೆ ನಾಟಕೋತ್ಸವ ಮಾಡಿದ ಸಾಣೆಹಳ್ಳಿ ಶ್ರೀಗಳು ಉತ್ಸವಕ್ಕೆ ಕರೆಸಿದ ಗೆಸ್ಟುಗಳ ಲಿಸ್ಟು ನೋಡಿದಾಗ ಬಿಜೆಪಿ ಲೀಡರ್‌ಗಳ ಪರಿಷೆಯೇ ನೆರೆದಂತಿತ್ತಲ್ಲಾ! ಈ ಬಗ್ಗೆ ಪೂರ್ವಗ್ರಹಪೀಡಿತ ಪ್ರಶ್ನೆ ಕೇಳಿದಾಗ, ಸಾಣೆಹಳ್ಳಿ ಅಂಗಳದಿಂದ ಬಂದ ಉತ್ತರ ದಂಗುಬಡಿಸುವಂತಿತ್ತು. ಜಾತ್ಯತೀತ ಮನೋಭಾವ, ಭಾರತೀಯ ಸಹಿಷ್ಣು ಚಿಂತನೆಯ ಸಾರ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ತಾವೂ ಒಂದು ಗಿಡವಾಗಿ, ಮರವಾಗಿ, ಕಡೆಗೆ ಹುಲ್ಲಾಗುವ ಜ್ಞಾನ ಬೇಕಿರುವುದು ಈ ಬಿಜೆಪಿಯ ಜನಕ್ಕೆ. ಅದಕ್ಕೆ ಸಾಣೆಹಳ್ಳಿ ಗುರುಗಳು ಬಿಜೆಪಿಯ ಹೆಚ್ಚು ಜನರನ್ನ ಕರೆಸಿದ್ದಾರಂತಲ್ಲಾ, ಥೂತ್ತೇರಿ!

* * * *

ಸಾಣೆಹಳ್ಳಿಯ ರಂಗಭೂಮಿಗೆ ಉಪಮುಖ್ಯಮಂತ್ರಿ ಪರಮೇಶ್ವರರೂ ಬಂದಿದ್ದರು. ಅಪರೂಪದ ಜೀವಿಯಾದ ಪರಮೇಶ್ವರರ ಭೋಜನವನ್ನು ಜೀವರಕ್ಷಕರಾದ ವೈದ್ಯರು ಕಡ್ಡಿಯಲ್ಲಿ ಕೆದಕಿ, ಪರೀಕ್ಷಿಸಿ ಪರಮೇಶ್ವರ್‌ಗೆ ತಿನ್ನಿಸಬಹುದೆಂದು ಪರವಾನಗಿ ಕೊಟ್ಟದ್ದು ಜಗದ್ಗುರುಗಳ ಕೋಪಾಗ್ನಿಗೆ ಕಾರಣವಾಯ್ತಂತಲ್ಲಾ. ಸಾವಿರಾರು ಜನ ಪ್ರಸಾದ ಸ್ವೀಕರಿಸುವ ಜಾಗಕ್ಕೆ ಬಂದು ಅತಿಥಿಯೊಬ್ಬನ ಭೋಜನಕ್ಕೆ ಕಡ್ಡಿ ಎಟ್ಟಿ ಪರಿಶೀಲಿಸುವುದು ಎಷ್ಟು ಸರಿ. ಸಾವಿರಾರು ಜನರ ಪ್ರಾಣ ಮುಖ್ಯವೋ ಅಥವಾ ಒಬ್ಬನ ಪ್ರಾಣ ಮುಖ್ಯವೋ. ಒಂದು ಜೀವ ಹೋದರೆ ನಷ್ಟವೇನು ಎಂದರಂತಲ್ಲಾ. ಶ್ರೀಗಳು ತಮ್ಮ ನಿಷ್ಠುರ ಮಾತಿನ ಸಾಣೆಯನ್ನು ಹರಿತಗೊಳಿಸಿಕೊಳ್ಳಲು ಆಡಿದ ಮಾತು, ನಾಡಿನ ಪರಮ ಶಿಷ್ಯರನ್ನು ಕೆಣಕಿದೆಯಂತಲ್ಲಾ. ಪರಮೇಶ್ವರರ ಜೀವದ ಬಗ್ಗೆ ಹೀಗೆ ಹಗುರವಾಗಿ ಮಾತಾಡಿರುವ ಶ್ರೀಗಳು ಎಡೂರಪ್ಪನ ಹೀಗೆ ಮಾತಾಡಬಲ್ಲರೆ, ಇಲ್ಲ ಸಿದ್ದರಾಮಯ್ಯನ ಬಗ್ಗೆ ಹೀಗೆ ಹೇಳಬಲ್ಲರೆ. ಅಗ್ಗವಾಗಿ ಸಿಕ್ಕಿದ ನಮ್ಮ ಪರಮಣ್ಣನಿಗೆ ಹೀಗಂದಿರುವುದು ಸರಿಯಲ್ಲ ಎಂದು ಸಣ್ಣದಾಗಿ ಗೊಣಗಿದರಲ್ಲಾ. ನಮ್ಮ ಪರಮಣ್ಣನ ಜೀವ ಸದ್ಯಕ್ಕೆ ಅಮೂಲ್ಯವಾದುದೇ ಸರಿ. ಇಷ್ಟು ವರ್ಷಗಳ ನಂತರ ಮುಖ್ಯಮಂತ್ರಿ ಪದವಿ ಸನಿಹಕ್ಕೆ ತೆವಳಿದ್ದಾರೆ. ಅದೂ ಶಿಕ್ಷಣ ಸಂಸ್ಥೆ ಮಾಡಿಕೊಂಡು ಶಾಮನೂರರ ತಮ್ಮನಂತಾದ ಕಾರಣಕ್ಕೆ. ದೇವೇಗೌಡರ ಮಗ ಎಂಬ ಕಾರಣಕ್ಕೆ ಅನಾಯಾಸವಾಗಿ ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಣ್ಣನವರಿಗೆ ಹೋಲಿಸಿದರೆ ಪರಮಣ್ಣನ ಜೀವ ಬಹು ಬೆಲೆಯದ್ದು ಎಂದು ಡಿಎಸ್‌ಎಸ್ ವೈರಿ ವೆಂಕಟಸ್ವಾಮಿಯ ವ್ಯಾಖ್ಯಾನವಾಗಿದೆಯಲ್ಲಾ, ಥೂತ್ತೇರಿ!

* * * *

ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲದ ಸಮಸ್ಯೆಯನ್ನು ಚಿಟಕಿ ಹೊಡೆದಂತೆ ಬಗೆಹರಿಸುತ್ತೇನೆಂದು ಅಧಿಕಾರಕ್ಕೆ ಬಂದ ಕುಮಾರಣ್ಣನನ್ನು ಬೆಳಗಾವಿಯ ಕಬ್ಬಿನ ಬೆಳೆ ರೈತರು ಗಾಣಕ್ಕೆ ಹಾಕಿ ಹರೆಯತೊಡಗಿದ್ದಾರಂತಲ್ಲಾ. ಇದಕ್ಕೆ ಕಾರಣ ಕುಮಾರಣ್ಣನ ನುಡಿಮುತ್ತುಗಳೇ ಹೊರತು ರೈತರಲ್ಲಾ ಎಂಬುದು ರೈತ ಸಂಘದ ದೂರಾಗಿದೆಯಲ್ಲಾ. ಬೆಳಗಾವಿ ಕಡೆ ರೈತರು ಕಬ್ಬು ಬೆಳೆಗಾರರು ಕಬ್ಬು ಬೆಳೆಯಷ್ಟು ರಗಳೆ ಬೆಳೆಯಲ್ಲ. ನೆಟ್ಟು, ನೀರು ಗೊಬ್ಬರ ಕೊಟ್ಟರಾಯ್ತು ಕಟಾವಿಗೆ ಬರುವವರೆಗೆ ಬೆಳಗಾವಿಯಲ್ಲಿ ಅಡ್ಡಾಡಬಹುದು ಅಥವಾ ಆರಾಮವಾಗಿರಬಹುದು. ಇದನ್ನು ಗ್ರಹಿಸಿಯೋ ಏನೋ ಕುಮಾರಣ್ಣ ರೈತ ಮಹಿಳೆಯೊಬ್ಬರಿಗೆ `ಯಾವುದೋ ಕಂಪನಿಯಿಂದ ಬರಬೇಕಾದ ಸಾಲಕ್ಕೆ ನನ್ನನ್ನು ದೂರುವ ನೀನು ಇಷ್ಟು ದಿನ ಎಲ್ಲಿ ಮಲಗಿದ್ದೆವ್ವ’ ಎಂದು ಬುಟ್ಟಿದ್ದಾರಲ್ಲಾ. ಈ ಸಮಯದಲ್ಲಿ ಲಂಕೇಶರ ಹಾಡಾದ ‘ಎಲ್ಲಿದ್ದೆ ಇಲ್ಲಿತಂಕ ಎಲ್ಲಿಂದ ಬಂದ್ಯವ್ವ’ ಎಂಬ ಹಾಡು ನೆನಪಾಗುವುದರ ಜೊತೆಗೆ ಮುಖ್ಯಮಂತ್ರಿಯಾದವನು ಮಾತನ್ನು ಬಂಗಾರದಂತೆ ತೂಗಿ ಆಡಬೇಕು, ಎಲ್ಲಿ ಮಲಗಿದ್ದೆ ಎಂದರೆ ಏನರ್ಥ, ನಿನ್ನಂತೆ ಎಲ್ಲೆಲ್ಲೋ ಮಲಗಿ ಉಪಸಂಸಾರ ಮಾಡಿಕೊಂಡಿಲ್ಲ, ನನ್ನ ಜಮೀನಿನಲ್ಲಿ ಕಬ್ಬು ಬೆಳೆದು, ಅ ಬೆಳೆಯೊಳಗೆ ಮಲಗಿದ್ದೆ, ಇಂತಹ ಮಾತನಾಡುವ ನೀನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಬೆಳಗಾವಿಯ ಭೂದೇವಿ ಅಬ್ಬರಿಸಿದ್ದಾಳಲ್ಲ. ಬೆಳಗಾವಿ ಅಧಿವೇಶನದ ವೇಳೆ ರೈತರನ್ನು ಎತ್ತಿಕಟ್ಟಿ ಸಿದ್ದುಗೆ ಸಮಸ್ಯೆಯೊಡ್ಡಿದ್ದ ಕುಮಾರಣ್ಣನ ಕತೆಯೀಗ ಮಾಡಿದ್ದುಣ್ಣೋ ಮಾರಾಯನಂತಾಯ್ತಲ್ಲಾ, ಥೂತ್ತೇರಿ!

* * * *

ಮೀಟು ಪ್ರಖರಣಗಳ ಕಾವು ಕಡಿಮೆಯಗುತ್ತಿರುವ ಈ ಹೊತ್ತಿನಲ್ಲಿ, ಡಾಬಸ್‌ಪೇಟೆಯ ಕನ್ನಡದ ಪ್ರಖರ ವಿಮರ್ಶಕರು ಎಚ್ಚೆತ್ತುಕೊಂಡು ಮೀಟೂ ಕಡೆ ಬ್ಯಾಟರಿ ಹಚ್ಚಿ ನೋಡ ತೊಡಗಿದ್ದಾರಂತಲ್ಲಾ. ವಯೋಮಾನದ ಕಾರಣಕ್ಕೆ ಮೀಟು ಪ್ರಕರಣ ಮಬ್ಬಾಗಿ ಕಂಡದ್ದರಿಂದಲೋ ಏನೋ, ಸಿಟ್ಟಾಗಿರುವ ವಿಮರ್ಶಕರು ಮೀಟುಗೆ ತುತ್ತಾದ ನಟಿ ಇಷ್ಟು ದಿನ ಎಲ್ಲಿದ್ದಳು? ಆ ಸಮಯದಲ್ಲೇಕೆ ಸುಮ್ಮನಿದ್ದಳು? ಕೇಳಿದಕೂಡಲೆ ಅಂಗಾತ ಮಲಗಲು ಆಕೆಯೇನು ಹಳ್ಳಿಯವಳೆ? ಪ್ರತಿಷ್ಠಿತ ಶಿಕ್ಷಿತ ಸಮಾಜದವಳಾದ ಆಕೆ ಸುಮ್ಮನಿದ್ದುದ್ದೇಕೆ? ಅಮೆರಿಕಾದಿಂದ ಆಮದಾದ ಆ ಮೀಟುವನ್ನು ಇಲ್ಲಿ ಒಪ್ಪಲು ಸಾಧ್ಯವೆ? ಇತ್ಯಾದಿ ಪ್ರಶ್ನಿಸಿ ನಟಿಯ ನಡವಳಿಕೆ ಮೇಲೆ ಹರಿಹಾಯ್ದಿದ್ದಾರಂತಲ್ಲಾ. ಹರಿತವಾದ ಆಯುಧ ಹೊಂದಿರುವ ಸದರಿ ವಿಮರ್ಶಕರು. ಯಾರ ಮೇಲಾದರೂ ಹರಿಹಾಯಲೇಬೇಕಾಗುತ್ತದೆ. ವಿಮರ್ಶಕರ ಈ ಮಾನದಂಡವಿಡಿದು ಮಾತನಾಡುವುದಾದರೆ ನಮ್ಮ ರಾಮಚಂದ್ರಾಪುರ ಮಠದ ಕೆಂದು ಹೋರಿ ಇನ್ನು ಕಡಸುಗಳ ಮೇಲೆ ಹಾರುತ್ತ ಹಾಯಾಗಿರುತ್ತಿತ್ತು. ವಿಮರ್ಶಕರೇ ಹೇಳುವಂತೆ ನಮ್ಮ ಸಂಸ್ಕೃತಿಯೇ ನಮ್ಮ ಕಾಮವನ್ನು ನಿಯಂತ್ರಿಸುವುದಾಗಿದ್ದರೆ, ರಾಘವ ರೂಢಿಸಿಕೊಂಡ ಸಂಸ್ಕೃತಿ ಯಾವುದು. ಹೆಂಡತಿಯಿಂದ ಸುಕ್ಷೇಮ ದೂರ ಕಾಪಾಡಿಕೊಂಡು ಬದುಕುವ ಸಾಹಿತಿಗಳ ಸಮಸ್ಯೆ ಸಾರ್ವತ್ರಿಕವಾಗಲು ಸಾಧ್ಯವಿಲ್ಲವಂತಲ್ಲಾ, ಥೂತ್ತೇರಿ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...