Homeಮುಖಪುಟಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

ಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

- Advertisement -
- Advertisement -

“ಪ್ರಶ್ನೆ ಭವನದ್ದಲ್ಲ, ಭಾವನೆಯದ್ದು”. ನನಗೆ ಸಂಸತ್ತಿನ ಹೊಸ ಭವನದ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಕೇಳಿದಾಗ, ನನ್ನ ಗಂಟಲಿನಿಂದ ಹೊರಬಂದದ್ದು ಇದೊಂದೇ ಮಾತು.

ಭಾರತೀಯ ಸಂಸತ್ತಿಗೆ ಹೊಸದೊಂದು ಕಟ್ಟಡ ಬೇಕಿತ್ತೋ ಇಲ್ಲವೋ ಎಂಬುದು ಪ್ರಶ್ನೆ ಅಲ್ಲ. ಹಳೆಯ ಕಟ್ಟಡವು ಈಗ ಕಾರ್ಯ ನಿರ್ವಹಿಸಲು ಸೂಕ್ತವಾಗಿಲ್ಲ ಹಾಗೂ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿಲ್ಲ ಎಂದು ಹಲವಾರು ಸಂಸದರು ಹೇಳಿದ್ದರು. ನಾನಾದರೋ, ಈಗಲೂ ಮಿತವ್ಯಯಿ ಮನೋಭಾವದವನು, ಯಾವಾಗಲೂ ದುಂದುಗಾರಿಕೆ ತಪ್ಪಿಸಲು ಪ್ರಯತ್ನಿಸುತ್ತಿರುತ್ತೇನೆ. ಹಳೆಯ ಕಟ್ಟಡ ರಿಪೇರಿ ಮಾಡಿ ನವೀಕರಿಸಬಹುದಿತ್ತು ಎಂದು ನನಗೆ ಅನಿಸುತ್ತಿತ್ತು. ಹೇಗೂ ಬಡಜನರ ಈ ಪ್ರಜಾಪ್ರಭುತ್ವದ ಪ್ರತೀಕವಾಗಿ ಯಾವುದೇ ಒಂದು ಅತ್ಯಂತ ಭವ್ಯವಾದ ಕಟ್ಟಡ ಇರುವ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟವೇ. ಆದರೆ ನಾನು ಎಂದೂ ಈ ಕಟ್ಟಡವನ್ನು ಬಳಸಿದವನಲ್ಲವಾದ್ದರಿಂದ, ಅಲ್ಲಿ ಪ್ರತಿದಿನ ಹೋಗುವ ಸಂಸದರ ಮಾತು ಸರಿ ಇರಬಹುದು. ಹೊಸದೊಂದು ಭವನವೊಂದೇ ಪರ್ಯಾಯವಾಗಿರಬಹುದು. ಮೊದಲಿನ ಭವನಕ್ಕಿಂತ ಈ ಹೊಸ ಭವನವೇ ಚೆನ್ನಾಗಿರಬಹುದು. ಇದು ನಿಸ್ಸಂಶಯವಾಗಿಯೂ ಸೌಲಭ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಸಜ್ಜಾಗಿರುತ್ತದೆ. ಆದರೆ ಇದು ಅಸಲಿ ಪ್ರಶ್ನೆಯಲ್ಲ. ಪ್ರಶ್ನೆ ಇರುವುದು, ಈ ಹೊಸ ಭವನ ಯಾವ ಭಾವನೆಯನ್ನು ಪ್ರತಿನಿಧಿಸುತ್ತಿದೆ ಎಂಬುದು.

ಸರಕಾರಿ ಮತ್ತು ಭಟ್ಟಂಗಿ ಜನರ ಮಾತು ಕೇಳಿದರೆ, ಸಂಸತ್ತಿನ ಈ ಹೊಸ ಭವನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಶಕ್ತಿಯ ಭವ್ಯ ಪ್ರತೀಕವಾಗಿದೆ. ಸ್ವಾಭಾವಿಕವಾಗಿಯೇ ವಿರೋಧ ಪಕ್ಷಗಳು ಈ ಹೇಳಿಕೆಗಳನ್ನು ಒಪ್ಪುತ್ತಿಲ್ಲ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳು ಏನೇ ಇದ್ದರೂ, ಅವರ ಸಮರ್ಥಕರು ಕೂಡ ಮೋದಿಯವರು ಪ್ರಜಾಸತ್ತಾತ್ಮಕ ಪ್ರತಿಷ್ಠೆ ಮತ್ತು ಸಂಸದೀಯ ಪರಂಪರೆಗಳಿಗೆ ಗೌರವ ನೀಡಿದ್ದಾರೆ ಎಂದು ಹೇಳಲು ಸಂಕೋಚಪಟ್ಟುಕೊಳ್ಳುತ್ತಾರೆ. ಅವರ ಕಾರ್ಯಾವಧಿಯಲ್ಲಿ ಸಂಸತ್ತಿನ ಕಲಾಪಗಳ ಅವಧಿ ಕಿರಿದಾದವು, ಯಾವುದೇ ಚರ್ಚೆಯಿಲ್ಲದೇ ಜಾರಿಗೊಳಿಸಲಾದ ಕಾನೂನುಗಳ ಸಂಖ್ಯೆ ಹೆಚ್ಚಿತು. ಮೊದಲ ಬಾರಿ ರಾಜ್ಯಸಭೆಯಲ್ಲಿ ಮತದಾನ ಮಾಡದೇ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಮೊದಲ ಬಾರಿ ಬಜೆಟ್ ಮತ್ತು ವಿತ್ತೀಯ ಮಸೂದೆಗಳ ನೆಪದಲ್ಲಿ ಸಾಮಾನ್ಯ ಕಾನೂನುಗಳನ್ನು ಮೇಲ್ಮನೆಯಿಂದ ಬೈಪಾಸ್ ಮಾಡಲಾಯಿತು. ಮೊದಲ ಬಾರಿ ವಿರೋಧ ಪಕ್ಷದ ನಾಯಕರು ಮಾತನಾಡುವ ಸಮಯದಲ್ಲಿ ಕ್ಯಾಮರಾಗಳನ್ನು ಬಂದ್ ಮಾಡಿಸಲಾಯಿತು, ಅವರ ಮೈಕ್‌ಗಳೂ ಬಂದ್ ಆದವು. ಮೊದಲ ಬಾರಿ ಆಡಳಿತಾರೂಢ ಪಕ್ಷವೇ ಹುಯಿಲೆಬ್ಬಿಸಿ ಸಂಸತ್ತಿನ ಕಾರ್ಯಕಲಾಪವನ್ನು ಬಂದ್ ಮಾಡಿಸಿತು. ಮೊದಲ ಬಾರಿ ವಿರೋಧ ಪಕ್ಷದ ಪ್ರಮುಖ ಸಂಸದನ ಸದಸ್ಯತ್ವ ರದ್ದುಪಡಿಸುವ ಆಟ ಆಡಲಾಯಿತು. ಹಾಗಾಗಿ, ಯಾವ ಸಂಸತ್ತಿನ ಹಿರಿಮೆ ಕುಸಿಯುತ್ತಿದೆಯೋ, ಅದಕ್ಕಾಗಿ ಭವ್ಯ ಭವನದ ನಿರ್ಮಾಣವು ಪ್ರಶ್ನೆಗಳನ್ನು ಹುಟ್ಟುಹಾಕುವುದು ಸ್ವಾಭಾವಿಕವಾಗಿದೆ.

ಭವನದ ಉದ್ಘಾಟನೆಯೊಂದಿಗೆ ಸಂಬಂಧಿಸಿದ ವಿವಾದವನ್ನು ಇದೇ ಬೆಳಕಿನಲ್ಲಿ ನೋಡಬೇಕಿದೆ. ಹಾಗೆ ನೋಡಿದರೆ, ಉದ್ಘಾಟನೆಯು ರಾಷ್ಟ್ರಪತಿಯ ಕೈಯಿಂದಲೇ ಆಗಬೇಕು ಎಂಬ ಕಡ್ಡಾಯವೇನಿಲ್ಲ. ಹಾಗೆಯೇ, 26ನೆಯ ಜನವರಿಯಂದು ನಡೆಯುವ ಪರೇಡ್‌ನ ಸಲಾಮಿ/ಗೌರವವಂದನೆ ರಾಷ್ಟ್ರಪತಿಗಳೇ ಸ್ವೀಕರಿಸಬೇಕು ಎಂತಲೂ ಎಲ್ಲಿಯೂ ಬರೆದಿಲ್ಲ. ಇವೆಲ್ಲ ಪ್ರಜಾಪ್ರಭುತ್ವದ ಸಂಪ್ರದಾಯಗಳು ಹಾಗೂ ನಿಸ್ಸಂದೇಹವಾಗಿ ಈ ಬಾರಿ ಆ ಗೌರವದ ಉಲ್ಲಂಘನೆಯಾಗಿದೆ. ವಿರೋಧ ಪಕ್ಷಗಳು ಈ ಉದ್ಘಾಟನಾ ಸಮಾರಂಭವನ್ನು ಬಾಯ್ಕಾಟ್ ಮಾಡುವ ನಿರ್ಧಾರವನ್ನು ಮುಂಚೆಯೇ ತೆಗೆದುಕೊಂಡಿರುವ ಸಾಧ್ಯತೆಯೂ ಇದೆ ಹಾಗೂ ಈ ತಾಂತ್ರಿಕ ಆಕ್ಷೇಪಣೆಯನ್ನೂ ಮಾಡಿರಬಹುದು; ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನೂತನ ಸಂಸತ್ತಿನಲ್ಲಿ ನಡೆಯಲಿದ್ದ ಆಚರಣೆಗಳನ್ನು ತಮ್ಮ ವ್ಯಕ್ತಿಗತ ಇಮೇಜ್ ಕಟ್ಟಿಕೊಳ್ಳಲು ಬಳಸಲು ಬಯಸಿದ್ದರು ಹಾಗೂ ಆ ಫೋಟೋದಲ್ಲಿ ಅಥವಾ ಚಿತ್ರಣದಲ್ಲಿ ಬೇರೆ ಯಾರೂ, ಅವರು ಮಹಾಮಹಿಮ ರಾಷ್ಟ್ರಪತಿಯೇ ಆಗಿರಲಿ, ಯಾರೂ ಅಡ್ಡಬರುವುದು ಅವರಿಗೆ ಇಷ್ಟವಿರಲಿಲ್ಲ ಎಂಬುದೂ ನಿಚ್ಚಳ ಸತ್ಯ. ನಿನ್ನೆಯ ತನಕ ಯಾವ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಇಡೀ ದೇಶದ ಹೆಮ್ಮೆಯ ಪ್ರತೀಕ ಎಂದು ಬಿಂಬಿಸಲಾಗುತ್ತಿತ್ತೋ, ಅವರನ್ನು ಈ ಐತಿಹಾಸಿಕ ಸಂದರ್ಭದಲ್ಲಿ ಮೂಲೆಗುಂಪು ಮಾಡುವ ಈ ಕೆಲಸವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಈ ಸರಕಾರಕ್ಕೆ ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಿಂದ ಏನಾದರೂ ತೊಂದರೆ ಇದೆಯೇ?

ಇದನ್ನೂ ಓದಿ: ‘ಹಳೆಯ’ ಸಂಸತ್ ಭವನದ ಗತವೈಭವದ ಕುರಿತು ಒಂದಿಷ್ಟು

ಈ ಸಮಾರಂಭಕ್ಕೆ ಸಂಬಂಧಿಸಿದ ಅನೇಕ ಪ್ರತೀಕಗಳು ಸರಕಾರದ ನಿಯತ್ತಿನ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇದನ್ನು ವಿನಾಯಕ ದಾಮೋದರ ಸಾವರ್ಕರ್‌ನ ಜನ್ಮದಿನ ಮೇ, 26ರಂದು ಆಯೋಜಿಸಿರುವುದು ಒಂದು ಆಳವಾದ ಸೂಚಕವಾಗಿದೆ. ನೆನಪಿಡಿ ಸಾವರ್ಕರ್ ಪ್ರಜಾಪ್ರಭುತ್ವದ ಬೆಂಬಲಿಗರಾಗಿದ್ದಿಲ್ಲ, ಅವರು ಹಿಟ್ಲರ್ ಮತ್ತು ಮುಸೊಲಿನಿಯ ಪ್ರಶಂಸಕರಾಗಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳ ಉಪಸ್ಥಿತಿ ಹಾಗೂ ಸ್ವಯಂ ಒಂದು ಧಾರ್ಮಿಕ ಸಮುದಾಯದ ಆಚರಣೆಯನ್ನು ಬಳಸಿರುವುದು ಭಾರತದ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಸೆಂಗೋಲ್ ರೂಪದಲ್ಲಿರುವ ರಾಜದಂಡವನ್ನು ವಸ್ತುಸಂಗ್ರಹಾಲಯದಿಂದ ಹೊರತಂದು ಅದಕ್ಕೆ ಪೌರಾಣಿಕ ಮಹತ್ವ ನೀಡಿ, ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೈಗೆ ಅರ್ಪಿಸುವುದು, ಇವೆಲ್ಲ ಈ ಸಮಾರಂಭಕ್ಕೆ ರಾಜ್ಯಾಭಿಷೇಕದ ಸ್ವರೂಪ ನೀಡುತ್ತವೆ, ಪ್ರಜಾಪ್ರಭುತ್ವದ ಬದಲಿಗೆ ರಾಜತಂತ್ರದ ಇಮೇಜ್ ಸೃಷ್ಟಿಸುತ್ತವೆ.

ಒಂದು ವೇಳೆ ಮೇ 28ರಂದು ಘಟಿಸಿದ ಈ ಅಪೂರ್ವ ಘಟನೆಯ ಭಾವನೆಯನ್ನು ತಿಳಿದುಕೊಳ್ಳುವಲ್ಲಿ ಇನ್ನೂ ಯಾವುದೇ ಸಂದೇಹ ಬಾಕಿ ಇದ್ದರೆ, ಅದನ್ನು ಮಹಿಳಾ ಕುಸ್ತಿಪಟುಗಳೊಂದಿಗೆ ಆದ ಅನುಚಿತ ವರ್ತನೆಯು ಪೂರ್ಣಗೊಳಿಸಿತು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಜೀವವಿದ್ದಂತೆ. ಪ್ರಜಾಪ್ರಭುತ್ವದ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಆ ಮಂದಿರವನ್ನು ಮೈಲಿಗೆ ಮಾಡಿದಂತೆ. ಇಂತಹ ಅನುಚಿತ ವರ್ತನೆ ಯಾವ ಪ್ರಜೆಯೊಂದಿಗೂ ಆಗಬಾರದಿತ್ತು, ಆದರೆ ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾದ ಇಂತಹ ಒಲಿಂಪಿಕ್ ಆಟಗಾರರೊಂದಿಗೆ ಹೀಗೆ ಮಾಡುವುದು ಅಧಿಕಾರದ ನಿರಂಕುಶತೆಯನ್ನು ಪರಿಚಯಿಸುತ್ತದೆ. ಅದೂ ಕೂಡ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಒಬ್ಬ ನಾಯಕನನ್ನು ಉಳಿಸಲು. ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ಚಿತ್ರಣಗಳು ವಿಶ್ವದಾದ್ಯಂತ ಭಾರತೀಯ ಪ್ರಜಾಪ್ರಭುತ್ವದ ಹೆಸರನ್ನು ಕಳಂಕಿತಗೊಳಿಸಿವೆ.

ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬ್ಬರ್ ಸ್ಟಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ. ಆದರೆ ಇತಿಹಾಸ ಮತ್ತೊಂದನ್ನೂ ನೆನಪಿಸುತ್ತದೆ, ಕೊನೆಯಲ್ಲಿ ಜನರ ಭಾವನೆಗಳು ಆಡಳಿತದಲ್ಲಿರುವವರ ಭಾವನೆಗಳಿಗಿಂತಲೂ ಪ್ರಬಲವೆಂದು ಸಾಬೀತಾಗಿದೆ ಎಂದು. ಒಂದು ವೇಳೆ ಭಾರತೀಯ ಪ್ರಜಾಪ್ರಭುತ್ವವು ಬ್ರಿಟಿಷರಿಂದ ನಿರ್ಮಿಸಲಾದ ಸಂಸತ್ತಿನ ಭವನವನ್ನು ಪ್ರಜಾಸತ್ತಾತ್ಮಕ ಭಾವನೆಗಳಿಂದ ತುಂಬಿಸಲು ಸಾಧ್ಯವಾಗಿದೆಯೆಂದರೆ, ಸಂಸತ್ತಿನ ಹೊಸ ಭವನದ ಮೇಲೆ ಸ್ಥಾಪಿಸಲಾಗಿರುವ ಇಂದಿನ ಆಡಳಿತಗಾರರ ಭಾವನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದರ ಮೇಲೆಯೂ ಭರವಸೆ ಇರಿಸಬೇಕಾಗುತ್ತದೆ. ನಿರಂಕುಶ ಆಡಳಿತದ ಉದ್ದೇಶಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಲಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...