Homeಕರ್ನಾಟಕಭೂಮಿ-ವಸತಿ ಹಕ್ಕಿಗಾಗಿ 'ಬೆಂಗಳೂರು ಚಲೋ'; ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

ಭೂಮಿ-ವಸತಿ ಹಕ್ಕಿಗಾಗಿ ‘ಬೆಂಗಳೂರು ಚಲೋ’; ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

- Advertisement -
- Advertisement -

ಭೂಮಿ ಹಕ್ಕು, ನಿವೇಶನ ಹಾಗೂ ವಸತಿಗಾಗಿ ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದು, ನೆನೆಗುದಿಗೆ ಬಿದ್ದಿರುವ ಭೂ ವಿವಾದವನ್ನು ಪರಿಹರಿಸಿ ಬಡವರಿಗೆ ಹಕ್ಕುಪತ್ರ ನೀಡಬೇಕು ಎಂದು “ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ” ನೇತೃತ್ವದಲ್ಲಿ ಇಂದು ಬೆಂಗಳೂರು ಚಲೋ ಸಮಾವೇಶ ನಡೆಯಿತು.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಅರ್ಜಿದಾರರು ಹಾಗೂ ಭೂಮಿ ಹೋರಾಟಗಾರರು ಭಾಗಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡರಾದ ಕುಮಾರ್ ಸಮತಳ, “ವಸತಿ ಮತ್ತು ಭೂಮಿ ಹಕ್ಕಿಗಾಗಿ ನಾವು 2016ರಿಂದ ಹಲವು ಸುತ್ತಿನ ಹೋರಾಟ ಮಾಡಿದ್ದೇವೆ; ಭೂಮಿ ಹಕ್ಕಿಗಾಗಿ ರಾಜ್ಯದಲ್ಲಿ 34 ಲಕ್ಷ ಅರ್ಜಿ ಹಾಕಿದ್ದು, ಸರ್ಕಾರಿ ಕಚೇರಿಗಳಿಗೆ ಜನ ಅಲೆದಾಡಿ ಬಸವಳಿದಿದ್ದಾರೆ. ಬಡವರು ಸ್ವತಂತ್ರವಾಗಿ ಬದುಕಬೇಕು ಎಂಬ ಕಾಳಜಿ ಸರ್ಕಾರಕ್ಕೆ ಇಲ್ಲವಾಗಿದೆ. ಆದ್ದರಿಂದ, ನಾವೆಲ್ಲಾ ಸಮಾನ ಮನಸ್ಕ ಸಂಘಟನೆ ಸೇರಿಕೊಂಡು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದರು.

“ಭೂಮಿ ಹಾಗೂ ವಸತಿಗಾಗಿ ರಾಜ್ಯದಲ್ಲಿ 57 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ; ಕೋಟ್ಯಾಂತರ ಜನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದು, ಅವರಿಗೆ ಈಗ ಭೂಮಿ ಸಿಗುವ ಭರವಸೆ ಸಿಕ್ಕಿದೆ. ಆದರೆ, 10 ವರ್ಷಗಳ ಹಿಂದೆ ಈ ಭರವಸೆ ಇರಲಿಲ್ಲ. ಅರ್ಜಿದಾರರಲ್ಲಿ ಭರವಸೆ ಹುಟ್ಟಿಸುವ ಕೆಲಸವನ್ನು ಕಳೆದ ಎಂಟು ವರ್ಷದಿಂದ ನಮ್ಮ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮಾಡಿದೆ” ಎಂದರು.

“ಫಾರ್ಮ್‌ 53, 57 ರಲ್ಲಿ ಹಲವರು ಅರ್ಜಿ ಹಾಕಿದ್ದಾರೆ. ಆದರೆ, ತಹಶೀಲ್ದಾರ್ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶೇ.95 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಸರ್ಕಾರ ಭೂಮಿ ಕೊಡಲ್ಲ ಎಂದು ಹೇಳಿದರೆ ನಾವು ಸುಮ್ಮನಾಗಬೇಕಾ? ಇದಕ್ಕೆ ಪರಿಹಾರ ಏನು ಎಂದು ನಾವು ಸರ್ಕಾರಕ್ಕೆ ಹೇಳಿದ್ದೇವೆ. ಹೇಗೆ ಭೂಮಿ ಹಂಚಿಕೆ ಮಾಡಬೇಕು ಎಂಬದನ್ನೂ ನಾವು ಹೇಳುತ್ತಿದ್ದೇವೆ. ಮುಖ್ಯವಾಗಿ, ನಮ್ಮ ಜನರು ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಅವರ ಹೆಸರಿಗೆ ಪರಭಾರೆ ಮಾಡಿ. ಅಲ್ಲಿ ಜನ ಉಳುಮೆ ಮಾಡುತ್ತಿದ್ದಾರೆ, ಅದಕ್ಕೆ ನಮ್ಮ ಬಳಿ ಸಾಕ್ಷಿ ಇದೆ” ಎಂದು ಹೇಳಿದರು.

“ಭೂಮಿ ಕೊಡುವುದಕ್ಕೆ ಹಲವಾರು ಕಾನೂನುಗಳು ಅಡ್ಡಿ ಬರುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಾನೂನನ್ನು ಬದಲಾವಣೆ ಮಾಡಿ ಜನರಿಗೆ ಭೂಮಿ ಕೊಡಿ ಎಂದು ಒತ್ತಾಯಿಸುತ್ತೇವೆ. ಅರ್ಜಿ ಸಲ್ಲಿಸಿರುವವರಿಗೆ ‘ಒನ್‌ ಟೈಮ್‌ ಸೆಟಲ್‌ಮೆಂಟ್’ ಮಾಡಿ, ನಂತರ ಕಾನೂನು ಪಾಲನೆ ಮಾಡಿ. ಬೇರೆಯವರಿಂದ ಭೂಮಿ ಖರೀದಿಸಿ ಎಂದು ನಾವು ಹೇಳುತ್ತಿಲ್ಲ; ಬಂಡವಾಳಶಾಹಿಗಳಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡುತ್ತಿದೆ. ಅದಕ್ಕಾಗಿ ಕಾನೂನನ್ನೂ ಬದಲಿಸಿದೆ. ಎಲ್ಲ ಜಾತಿಯ ಭೂರಹಿತರಿಗೆ ಭೂಮಿ ನೀಡಿ ಸಾಮಾಜಿಕ ನ್ಯಾಯ ಪಾಲಿಸಬೇಕು” ಎಂದು ಕುಮಾರ್ ಒತ್ತಾಯಿಸಿದರು.

ಜನಶಕ್ತಿ ಸಂಘಟನೆ ಅಧ್ಯಕ್ಷರಾದ ಸಿರಿಮನೆ ನಾಗರಾಜ್ ಮಾತನಾಡಿ, “ರಾಜ್ಯದಾದ್ಯಂತ 37 ಲಕ್ಷ ಜನ ಬಗರ್ ಹುಕುಂ ಅಡಿ ಅರ್ಜಿ ಹಾಕಿದ್ದಾರೆ; ವಸತಿಗಾಗಿ 27 ಲಕ್ಷ ಜನ ಅರ್ಜಿ ಹಾಕಿದ್ದಾರೆ. ಇವರ ಕುಟುಂಬದವರೆಲ್ಲಾ ಸೇರಿದರೆ ಕನಿಷ್ಠ ಮೂರು ಕೋಟಿ ಜನ ತಮ್ಮ ಹಕ್ಕಿಗಾಗಿ ಕಾಯುತ್ತಿದ್ದಾರೆ. ಸರ್ಕಾರ ಒಂದಲ್ಲ ಒಂದು ದಿನ ಹಕ್ಕುಪತ್ರ ನೀಡುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ ಹೋರಾಟಕ್ಕೆ ಜನ ಬಂದಿದ್ದಾರೆ; ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು. ವರ್ಷದಲ್ಲಿ ಮೂರು ಭಾರಿ ರಾಜಧಾನಿ ಬೆಂಗಳೂರಿಗೆ ಬಂದು ಹೋರಾಟ ಮಾಡುತ್ತಿದ್ದಾರೆ” ಎಂದರು.

“ಕಟ್ಟಕಡೆಯ ಮನುಷ್ಯನಿಗೂ ಭೂಮಿ ಮತ್ತು ವಸತಿ ಸಿಗಬೇಕು, ಬಡತನದಿಂದ ಜನರು ಹೊರಬರಬೇಕು ಎಂಬ ಮಹಾತ್ಮ ಗಾಂಧಿ ಮಾತನ್ನು ಎಚ್‌.ಎಸ್‌. ದೊರೆಸ್ವಾಮಿ ಹೇಳುತ್ತಿದ್ದರು. ಅವರು ಸಾಯುವ ಹಿಂದಿನ ದಿನ ಕೂಡ ಈ ಬಗ್ಗೆ ಮಾತನಾಡಿ, ಹೋರಾಟ ಮುಂದುವರಿಸುವಂತೆ ಹೇಳಿದ್ದರು. ಕೊಡಗಿನ ಕುಶಾಲನಗರದಲ್ಲಿ ನಾವು ನಡೆಸಿದ ದಿಡ್ಡಹಳ್ಳಿ ಹೋರಾಟದಿಂದ 600 ಮನೆಗಳು ನಿರ್ಮಾಣ ಆಗಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ಹೋರಾಟ ನಡೆಯುತ್ತಿದೆ; ಹಲವಾರು ಕಡೆ ಅಲೆಮಾರಿಗಳಿಗೆ ವಸತಿ ಸಿಕ್ಕಿದೆ” ಎಂದು ಹೇಳಿದರು.

“ಸರ್ಕಾರಿ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ, ಬಡ ಜನರಿಗೆ ಭೂಮಿ ಸಿಗುತ್ತಿಲ್ಲ. ಶ್ರೀಮಂತರಿಗೆ ಗುತ್ತಿಗೆ ನೀಡುವುದಕ್ಕೆ ಮಾತ್ರ ಸರ್ಕಾರ ಕಾನೂನು ಬದಲಾವಣೆ ಮಾಡುತ್ತೆ; ಬಳ್ಳಾರಿಯಲ್ಲಿ 3 ಸಾವಿರ ಎಕರೆ ಭೂಮಿ ಗುತ್ತಿಗೆ ನೀಡಲು ಕಾನೂನೂನಿಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಬಡವರಿಗೆ ಮನೆ ಕೊಡಲು ಕಾನೂನು ತಿದ್ದುಪಡಿ ಮಾಡಲು ಸಾಧ್ಯವಿಲ್ಲವಾ? 40 ಸಾವಿರ ಎಕರೆ ಭೂಮಿಯನ್ನು ಬೆಂಗಳೂರಿನ ಸುತ್ತಮುತ್ತ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ; ಬಡವರಿಗೆ ಭೂಮಿ ಮತ್ತು ಮನೆ ಕೊಡುವುದಕ್ಕೆ ಕಾನೂನು ಅಡ್ಡಿ ಎನ್ನುತ್ತಾರೆ. ಕಾನೂನಿಗೆ ತಿದ್ದುಪಡಿ ಮಾಡಬೇಕು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಬೇಕು” ಎಂದು ಅವರು ಒತ್ತಾಯಿಸಿದರು.

ಮಡಿಕೇರಿಯ ರೈತಸಂಘ ಮುಖಂಡರಾದ ನಿರ್ವಾಣಪ್ಪ ಮಾತನಾಡಿ, “ಭೂಮಿ ಮತ್ತು ವಸತಿಗಾಗಿ ನಾವು ಹಲವು ಸುತ್ತಿನ ಹೋರಾಟ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಎಂದು ಹೇಳುತ್ತಿರುವ ಸರ್ಕಾರ ಅದನ್ನು ಎಲ್ಲರಿಗೂ ತಲುಪಿಸುತ್ತಿಲ್ಲ. ಗ್ಯಾರಂಟಿ ಶಾಶ್ವತವಲ್ಲ ಎಂಬುದು ನಮಗೆಲ್ಲಾ ಗೊತ್ತಿದೆ, ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿದ ಕೂಡಲೇ ಎಲ್ಲವೂ ಬದಲಾಗುತ್ತದೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಬಡವರ ಪರ ಕಾಳಜಿ ಇಲ್ಲ. ನಮಗೆ ಶಾಶ್ವತ ಪರಿಹಾರವಾಗಿ ಮನೆ, ಭೂಮಿ, ಉದ್ಯೋಗ ಹಾಗೂ ಆರೋಗ್ಯದ ರಕ್ಷಣೆ ಬೇಕು” ಎಂದು ಆಗ್ರಹಿಸಿದರು.

“ಕಾಂಗ್ರೆಸ್ ಸರ್ಕಾರ ಬಡವರಿಗೆ ಭೂಮಿ ಕೊಡಬೇಕು; ಭೂಮಿ ವಿಷಯದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯವಿದೆ. ಹಲವು ಹಳ್ಳಿಗಳಲ್ಲಿ ಜನರು ಸತ್ತರೆ ಹೆಣ ಹೂಳಲು ಜಾಗವಿಲ್ಲ. ಕೊಡಗಿನ ಹಲವು ಆದಿವಾಸಿಗಳು ಪ್ಲಾಸ್ಟಿಕ್ ಶೆಡ್‌ನಲ್ಲಿ ವಾಸ ಮಾಡುತ್ತಿದ್ದಾರೆ; ಅಲ್ಲಿ ಬಡತನ ಹೆಚ್ಚಾಗಿದೆ. ಆದಿವಾಸಿ, ಬಡವರು ಹಾಗೂ ದಲಿತರನ್ನು ಎಲ್ಲ ಪಕ್ಷದ ನಾಯಕರು ಒಟ್ಟಾಗಿ ಶೋಷಣೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೂತು ಚರ್ಚೆ ಮಾಡಿ, ಬಡವರಿಗೆ ಎಷ್ಟು ಕೂಲಿ ಕೊಡಬೇಕು ಎಂದು ನಿರ್ಧರಿಸುತ್ತಾರೆ” ಎಂದರು.

ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “78 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಈಗಲೂ ವಸತಿ ಬೇಕು ಎಂದು ಕೇಳುತ್ತಿರುವುದು ನಾಚಿಕೆಗೇಡಿನ ವಿಚಾರ. ಪ್ರಾಕೃತಿಕವಾಗಿ ಬಂದಿರುವ ಭೂಮಿಯುನ್ನು ಬಡವರಿಗೆ ಯಾಕೆ ಕೊಡುತ್ತಿಲ್ಲ? ಇಷ್ಟು ವರ್ಷ ನಾವು ವೋಟ್ ಹಾಕಿದ್ದು ಇದಕ್ಕಾಗಿಯೇ? ಯಾವಾಗಲೂ ನಾವು ಬೀದಿಯಲ್ಲೇ ಇರಬೇಕಾ” ಎಂದು ಅವರು ಆಕ್ರೋಶ ಹೊರಹಾಕಿದರು.

“ರಾಜಕಾರಣಿಗಳ ಇಡೀ ಕುಟುಂಬ ಉದ್ದಾರ ಆಗಲಿ ಎಂಬ ಕಾರಣಕ್ಕೆ ನಾವು ವೋಟ್ ಹಾಕಿದ್ದಾ? ನಾವೇನು ನೂರಾರು ಎಕರೆ ಕೇಳುತ್ತಿಲ್ಲ; ಒಂದು ಮನೆ ಕೇಳುತ್ತಿದ್ದೇವೆ. ನಮಗೆ ಭೂಮಿ ಕೊಟ್ಟರೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಅಗತ್ಯವಿಲ್ಲ. ಸಂವಿಧಾನವೇ ಪ್ರತಿಯೊಂದು ಕುಟುಂಬಕ್ಕೆ ಭೂಮಿ ಇರಬೇಕು ಎಂದು ಹೇಳುತ್ತದೆ. ಆದರೆ, 78 ವರ್ಷ ಕಳೆದರೂ ಈವರೆಗೆ ಭೂಮಿ ಸಿಕ್ಕಿಲ್ಲ, ಸರ್ಕಾರದ ಭೂಮಿಯನ್ನು ಸುಗ್ರೀವಾಜ್ಞೆ ಮೂಲಕ ಬಡವರಿಗೆ ಹಂಚಿಕೆ ಮಾಡಬೇಕು” ಎಂದು ಅಂಬಣ್ಣ ಆಗ್ರಹಿಸಿದರು.

ಜನಶಕ್ತಿ ಮುಖಂಡರಾದ ನೂರ್ ಶ್ರೀಧರ್ ಮಾತನಾಡಿ, “ಭೂಮಿ ಮತ್ತು ವಸತಿ ಹಕ್ಕು ಸಮಿತಿ ಅಡಿಯಲ್ಲಿ ಎಂಟು ವರ್ಷಗಳ ಹೋರಾಟದ ಪ್ರತಿಫಲವಾಗಿ ದೊಡ್ಡಮಟ್ಟದ ವಿಜಯ ಕೊನೆಯ ಹಂತಕ್ಕೆ ಬಂದಿದೆ. ಸುಮಾರು ಮೂರು ಲಕ್ಷ ಕುಟುಂಬಕ್ಕೆ ಹಕ್ಕು ಪತ್ರ ಸಿಗುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ದೇಶದ ಯಾವುದೇ ರಾಜ್ಯದಲ್ಲಿ ಈ ಬೆಳವಣಿಗೆ ನಡೆದಿಲ್ಲ” ಎಂದರು.

“ಎಚ್‌.ಎಸ್‌. ದೊರೆಸ್ವಾಮಿ ಅವರು ಭೂಮಿ ಹೋರಾಟ ಮಾಡುವಂತೆ ನಮ್ಮನ್ನು ಜಾಗೃತಗೊಳಿಸಿದರು. ಆದ್ದರಿಂದ, ಅವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ನಮ್ಮ ಹೋರಾಟ ಇಂದು ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, 2018 ರಿಂದ ಸತತ ಹೋರಾಟ ಮಾಡಿದ ಸಮಿತಿಯ ಎಲ್ಲ ನಾಯಕರೂ ಈ ಹಂತದವರೆಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೂ ಇದರ ಶ್ರೇಯಸ್ಸು ಸಿಗಬೇಕು” ಎಂದು ಹೇಳಿದರು.

“ನಮ್ಮ ಹೋರಾಟದ ಅರಿವಿರುವ ಇಬ್ಬರೂ ನಾಯಕರು ಅರ್ಜಿಗಳ ವಿಲೇವಾರಿಗೆ ಒಪ್ಪಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುತ್ತೇವೆ ಎಂದು ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೂರು ಲಕ್ಷ ಜನರಿಗೆ ಈಗ ಹಕ್ಕುಪತ್ರ ಸಿಗುತ್ತಿದೆ. ಆದರೆ, 12 ಲಕ್ಷ ಅರ್ಜಿಗಳು ತಿರಸ್ಕಾರದ ಪಟ್ಟಿಯಲ್ಲಿವೆ; ಇಲ್ಲಿರುವ ಬಹುಪಾಲು ಜನ ಇದೇ ಪಟ್ಟಿಯಲ್ಲಿ ಇದ್ದಾರೆ. ಈಗ ನಾವು ಹೋರಾಟ ಮಾಡದೇ ಇದ್ದರೆ, ಮುಂದೆ ಭೂಮಿ ಹಕ್ಕು ಪಡೆದುಕೊಳ್ಳಲು ಸಾಧ್ಯವಿಲ್ಲ! ಈ ಡಿಸೆಂಬರ್ ಒಳಗೆ ಆಗದೇ ಇದ್ದರೆ.. ನಮಗೆ ಮುಂದೆ ಭೂಮಿ ಸಿಗುವುದಿಲ್ಲ. ಆದ್ದರಿಂದ, ಡಿಸೆಂಬರ್‌ವರೆಗೂ ನಿರಂತರ ಹೋರಾಟ ನಡೆಯಬೇಕು” ಎಂದರು.

ಸರ್ಕಾರದ ಪರವಾಗಿ ಆಗಮಿಸಿ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್, “ಸುಮಾರು ವರ್ಷಗಳಿಂದ ಭೂಮಿ ವಿವಾದ ಇದೆ, ಕಾಗೋಡು ತಿಮ್ಮಪ್ಪನವರು ಹಲವು ಭಾರಿ ಸದನದಲ್ಲಿ ಮಾತನಾಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನ ಕ್ರಮ ತೆಗೆದುಕೊಳ್ಳಲು ಅಡ್ಡಬರುತ್ತಿದೆ. ಅರಣ್ಯ ಒತ್ತುವರಿ ಮಾಡಬಾರದು ಎಂದು ಕೋರ್ಟ್‌ ಹೇಳಿದೆ. ಭೂಮಿ ಹಂಚಿಕೆ ಕೇವಲ ಸಾಮಾಜಿಕ ನ್ಯಾಯವಲ್ಲ, ಮಾನವೀಯ ಹಕ್ಕು. ಆದ್ದರಿಂದ, ಕಾನೂನು ಬದಲಾಗಬೇಕು. ಮುಖ್ಯಮಂತ್ರಿಗಳ ಮೇಲೆ ನನಗೆ ನಂಬಿಕೆ ಇದೆ.. ಅವರ ಜೊತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ” ಎಂದು ಅವರು ಭರವಸೆ ನೀಡಿದರು.

ಕೆಂಪು ಮೆಣಸಿನಕಾಯಿ ಬೆಲೆ ಕುಸಿತ | ಮಧ್ಯಪ್ರವೇಶಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...