Homeವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

- Advertisement -
- Advertisement -

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಬರೊಬ್ಬರಿ 108 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿದೆ. ಈ ಐತಿಹಾಸಿಕ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ.

ತಮಿಳುನಾಡು 2026ರ ಚುನಾವಣಾ ಫಲಿತಾಂಶ ಬಹುತೇಕರಲ್ಲಿ ಅಚ್ಚರಿ ಮೂಡಿಸಿರುವುದು ನಿಜ. ಏಕೆಂದರೆ ಆಕ್ಸೀಸ್ ಮೈ ಇಂಡಿಯಾ ಸಮೀಕ್ಷೆ ಹೊರತುಪಡಿಸಿ ಬಹುತೇಕ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆ ಅಥವಾ ಟಿವಿಕೆ ಕೇವಲ ಕೆಲವೇ ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಟಿವಿಕೆ ಪಕ್ಷವು ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿಗಳಂತೆಯೇ, ತಮಿಳುನಾಡಿನಲ್ಲೂ ಈ ಬಾರಿ ವ್ಯವಸ್ಥಿತ ಬದಲಾವಣೆ ಕಂಡುಬಂದಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭೂತಪೂರ್ವ ಗೆಲುವಿನ ಹಿಂದೆ ಕೇವಲ ವಿಜಯ್ ಅವರ ವರ್ಚಸ್ಸು ಮಾತ್ರವಲ್ಲದೆ, ದ್ರಾವಿಡ ಪಕ್ಷಗಳ ಅನುಭವೀ ನಾಯಕರನ್ನು ತನ್ನತ್ತ ಸೆಳೆದುಕೊಂಡ ಚಾಣಾಕ್ಷತನವೂ ಅಡಗಿದೆ. ಇದು ಈ ಹಿಂದೆ ತಮಿಳುನಾಡಿನ ಎಂ.ಜಿ.ಆರ್ ಅಥವಾ ಅವಿಭಜಿತ ಆಂಧ್ರಪ್ರದೇಶದ ಎನ್.ಟಿ.ಆರ್ ಅವರಿಗೆ ಸಿಕ್ಕ ಬೆಂಬಲಕ್ಕಿಂತಲೂ ಭಿನ್ನವಾಗಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಇಳಂಗೋವನ್ ರಾಜಶೇಖರನ್.

ಡಿಎಂಕೆ ಮತ್ತು ಎಐಎಡಿಎಂಕೆ ವಲಸೆ ನಾಯಕರಿಗೆ ಟಿಕೆಟ್:

ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭೂತಪೂರ್ವ ಗೆಲುವಿಗೆ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯಿಂದ ಬಂದ ಅನುಭವೀ ನಾಯಕರ ವಲಸೆಯು ಅತ್ಯಂತ ಪ್ರಮುಖ ಕಾರಣವಾಗಿದೆ.

ಟಿವಿಕೆ ಪಕ್ಷವು 108 ಕ್ಷೇತ್ರಗಳಲ್ಲಿ ಜಯಗಳಿಸಲು ಸಾಮಾಜಿಕ ಮಾಧ್ಯಮಗಳ ಪ್ರಚಾರ, ಮಹಿಳಾ ಮತ್ತು ಯುವ ಮತದಾರರನ್ನು ಸೆಳೆದದ್ದು ಒಂದು ಕಾರಣವಾದರೆ, ಈ ಬಾರಿಯ ಚುನಾವಣೆಯಲ್ಲಿ ವಿಜಯ್ ಅವರು ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರೂ, ಕ್ಷೇತ್ರ ಮಟ್ಟದ ಸಮೀಕರಣಗಳನ್ನು ಸರಿದೂಗಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಮಾಜಿ ನಾಯಕರಿಗೆ ಗಮನಾರ್ಹ ಪ್ರಮಾಣದಲ್ಲಿ ಟಿಕೆಟ್ ನೀಡಿದ್ದು ಮತ್ತೊಂದು ಕಾರಣ.

ಡಿಎಂಕೆ ಪಕ್ಷದಲ್ಲಿ ಮುನಿಸಿಕೊಂಡಿದ್ದ ಸುಮಾರು 25ಕ್ಕೂ ಹೆಚ್ಚು ಪ್ರಮುಖ ನಾಯಕರು ಮತ್ತು ಮಾಜಿ ಪದಾಧಿಕಾರಿಗಳಿಗೆ ಟಿವಿಕೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಹಾಗೆಯೇ ಎಡಪ್ಪಾಡಿ ಪಳನಿಸ್ವಾಮಿ ಅವರ ನಾಯಕತ್ವದ ಮೇಲೆ ಅಸಮಾಧಾನ ಹೊಂದಿದ್ದ ಎಐಎಡಿಎಂಕೆ ಪಕ್ಷದ 30ಕ್ಕೂ ಹೆಚ್ಚು ಎರಡನೇ ಹಂತದ ನಾಯಕರು ವಿಜಯ್ ಅವರ ಪಕ್ಷ ಸೇರಿ ಸ್ಪರ್ಧಿಸಿದ್ದರು.

ಹೊಸದಾಗಿ ಸ್ಥಾಪನೆಯಾದ ಟಿವಿಕೆಗೆ ಪ್ರಬಲವಾದ ತಳಮಟ್ಟದ ಸಂಘಟನೆ (Ground level organization) ಇರಲಿಲ್ಲ. ಡಿಎಂಕೆ ಮತ್ತು ಎಐಎಡಿಎಂಕೆಯಿಂದ ಬಂದ ನಾಯಕರು ತಮ್ಮ ಜೊತೆಗೆ ಕಾರ್ಯಕರ್ತರ ಪಡೆ ಮತ್ತು ಬೂತ್ ಮಟ್ಟದ ಅನುಭವವನ್ನು ತಂದಿದ್ದು ವಿಜಯ್ ಅವರಿಗೆ ದೊಡ್ಡ ಬಲವಾಯಿತು. ದ್ರಾವಿಡ ಪಕ್ಷಗಳ ಮೂಲ ನಾಯಕರನ್ನೇ ಕಣಕ್ಕಿಳಿಸಿದ್ದರಿಂದ ಆ ಪಕ್ಷಗಳ ಸಾಂಪ್ರದಾಯಿಕ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಟಿವಿಕೆ ಯಶಸ್ವಿಯಾಯಿತು.

ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸುವ ಉದ್ದೇಶದಿಂದ ವಿಜಯ್ ಅವರು ಹಳೆಯ ಪಕ್ಷಗಳ ಅನುಭವೀ ನಾಯಕರಿಗೆ ಮಣೆ ಹಾಕಿದ್ದರು. ಡಿಎಂಕೆ (DMK) ಪಕ್ಷದಿಂದ ಹೊರಬಂದು ಟಿವಿಕೆ ಸೇರಿದ್ದ 25ಕ್ಕೂ ಹೆಚ್ಚು ಪ್ರಮುಖ ನಾಯಕರಲ್ಲಿ 18 ಜನ ಭರ್ಜರಿ ಜಯ ಸಾಧಿಸಿದ್ದಾರೆ. ಡಿಎಂಕೆ ಹಿನ್ನೆಲೆಯಿಂದ ಬಂದವರ ಪೈಕಿ ಸುಮಾರು ಶೇ. 70 ಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದು ಟಿವಿಕೆ ಪಕ್ಷದ ಒಟ್ಟಾರೆ ಗೆಲುವಿನ ಸರಾಸರಿಗಿಂತಲೂ ಹೆಚ್ಚಿದೆ.

ಡಿಎಂಕೆ ಯಿಂದ ಹೊರಬಂದು ಟಿವಿಕೆ ಪಕ್ಷ ಸೇರಿ ಗೆದ್ದ ಪ್ರಮುಖ ಕ್ಷೇತ್ರಗಳು:

ವಿಶೇಷವಾಗಿ ಉತ್ತರ ತಮಿಳುನಾಡು ಮತ್ತು ಡೆಲ್ಟಾ ಭಾಗದ ಕ್ಷೇತ್ರಗಳಲ್ಲಿ ಡಿಎಂಕೆಯಿಂದ ಬಂದ ಈ ನಾಯಕರು ಆ ಪಕ್ಷದ ಸಾಂಪ್ರದಾಯಿಕ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನೈ ಭಾಗ:

ವಿ.ಎಸ್. ಬಾಬು (ಕೊಳಗತ್ತೂರು ಕ್ಷೇತ್ರ): ಇವರು ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನೇ ಸೋಲಿಸುವ ಮೂಲಕ ಈ ಚುನಾವಣೆಯ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿದ್ದಾರೆ.

ಪಿ.ಕೆ. ಶೇಖರ್ ಬಾಬು (ಹಳೆ ರಾಯಪುರಂ): ಡಿಎಂಕೆಯ ಪ್ರಭಾವಿ ನಾಯಕರಾಗಿದ್ದ ಇವರು ಟಿವಿಕೆ ಸೇರಿ ಜಯಭೇರಿ ಬಾರಿಸಿದ್ದಾರೆ.

ಡೆಲ್ಟಾ ಮತ್ತು ಉತ್ತರ ತಮಿಳುನಾಡು:

ಎಸ್. ಆರ್. ರಾಜಾ (ತಾಂಬರಂ): ಚೆನ್ನೈನ ಉಪನಗರ ಭಾಗದಲ್ಲಿ ಡಿಎಂಕೆಯ ಸಾಂಪ್ರದಾಯಿಕ ಮತಗಳನ್ನು ಟಿವಿಕೆ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂಭಕೋಣಂ ಮತ್ತು ತಂಜಾವೂರು ಭಾಗ: ಇಲ್ಲಿನ 3 ಕ್ಷೇತ್ರಗಳಲ್ಲಿ ಡಿಎಂಕೆ ಮಾಜಿ ಪದಾಧಿಕಾರಿಗಳು ಟಿವಿಕೆ ಚಿಹ್ನೆಯಡಿ ಗೆಲುವು ಸಾಧಿಸಿದ್ದಾರೆ. ಈ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಇದ್ದ ವೈಯಕ್ತಿಕ ವರ್ಚಸ್ಸು ಮತ್ತು ವಿಜಯ್ ಅವರ ಮೇಲಿದ್ದ ಯುವಜನತೆಯ ಕ್ರೇಜ್ ಒಟ್ಟಾದಾಗ, ಡಿಎಂಕೆ ಪಕ್ಷವನ್ನು ಸೋಲಿಸುವುದು ಸುಲಭವಾಯಿತು.

ಎಐಎಡಿಎಂಕೆಯಿಂದ ಬಂದು ಟಿವಿಕೆ ಪರ ಜಯಗಳಿಸಿದ ಪ್ರಮುಖರು

ಎಐಎಡಿಎಂಕೆಯಿಂದ ಬಂದ 30ಕ್ಕೂ ಹೆಚ್ಚು ನಾಯಕರಲ್ಲಿ 22 ಜನರು ಗೆಲುವು ಸಾಧಿಸಿದ್ದು, ಇವರು ಪ್ರಮುಖವಾಗಿ ‘ಕೊಂಗು ಬೆಲ್ಟ್’ನಲ್ಲಿ ಪಕ್ಷಕ್ಕೆ ಶಕ್ತಿ ನೀಡಿದ್ದಾರೆ:

ಕೊಂಗು ನಾಡು (ಪಶ್ಚಿಮ ತಮಿಳುನಾಡು):

ಸಿ.ವಿ. ಷಣ್ಮುಗಂ (ವಿಲ್ಲುಪುರಂ ಭಾಗ): ಎಐಎಡಿಎಂಕೆಯ ಗಟ್ಟಿಯಾಳಾಗಿದ್ದ ಇವರು ಉತ್ತರ ತಮಿಳುನಾಡಿನಲ್ಲಿ ಟಿವಿಕೆಗೆ ದೊಡ್ಡ ಬಲ ತಂದುಕೊಟ್ಟಿದ್ದಾರೆ.

ಪೊಲ್ಲಾಚಿ ಮತ್ತು ಈರೋಡ್ ಭಾಗ: ಇಲ್ಲಿನ 5 ಕ್ಷೇತ್ರಗಳಲ್ಲಿ ಎಐಎಡಿಎಂಕೆಯ ಮಾಜಿ ಶಾಸಕರು ಟಿವಿಕೆ ಅಭ್ಯರ್ಥಿಗಳಾಗಿ ಜಯಗಳಿಸಿದ್ದಾರೆ.

ದಕ್ಷಿಣ ತಮಿಳುನಾಡು:

ವಿ.ವಿ. ರಾಜನ್ ಚೆಲ್ಲಪ್ಪ (ಮಧುರೈ ಭಾಗ): ದಕ್ಷಿಣದ ಜಿಲ್ಲೆಗಳಲ್ಲಿ ಎಐಎಡಿಎಂಕೆಯ ವೋಟ್ ಬ್ಯಾಂಕ್‌ಗೆ ಕನ್ನ ಹಾಕಿ ಟಿವಿಕೆ ಬಾವುಟ ಹಾರಿಸಿದ್ದಾರೆ.

ತಿರುನಲ್ವೇಲಿ: ಇಲ್ಲಿನ 2 ಕ್ಷೇತ್ರಗಳಲ್ಲಿ ಎಐಎಡಿಎಂಕೆಯ ಪ್ರಮುಖ ನಾಯಕರು ಜಯ ಸಾಧಿಸಿದ್ದಾರೆ.

ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಬಾರದೇ ಇರುವುದರಿಂದ, ತಮಿಳುನಾಡಿನಲ್ಲಿ ಮುಂದೆ ಏನಾಗಬಹುದು ಎಂಬ ಕುತೂಹಲ ಮೂಡುವುದು ಸಹಜ. 1967ರ ನಂತರ ಡಿಎಂಕೆ ಅಥವಾ ಎಐಎಡಿಎಂಕೆ ಅಲ್ಲದ ಮೊದಲ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರಕ್ಕೇರಲು ಅವರು ಯಾರ ಜೊತೆ ಕೈಜೋಡಿಸಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ.

ಸಣ್ಣ ಪಕ್ಷಗಳ ಜೊತೆ ಟಿವಿಕೆ ಮೈತ್ರಿ

ಸರ್ಕಾರ ರಚಿಸಲು ವಿಜಯ್ ಅವರಿಗೆ ಕೇವಲ 10 ಶಾಸಕರ ಬೆಂಬಲ ಬೇಕಿದೆ. ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಸೇರಿದಂತೆ ಸಣ್ಣ ಪಕ್ಷಗಳು ಒಟ್ಟು 14 ಸ್ಥಾನಗಳನ್ನು ಹೊಂದಿವೆ. ಒಂದು ವೇಳೆ ವಿಜಯ್ ಈ ಸಣ್ಣ ಪಕ್ಷಗಳನ್ನು ತಮ್ಮತ್ತ ಸೆಳೆದುಕೊಂಡರೆ ಸರ್ಕಾರ ರಚಿಸಬಹುದು. ಕಾಂಗ್ರೆಸ್‌ನ ಒಂದು ವರ್ಗವು ಮೊದಲೇ ಟಿವಿಕೆ ಜೊತೆ ಮೈತ್ರಿ ಬಯಸಿತ್ತು, ಹಾಗಾಗಿ ತನ್ನ 5 ಸದಸ್ಯರ ಬೆಂಬಲವನ್ನು ನೀಡುವ ಸಾಧ್ಯತೆಯಿದೆ. ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಇವರೂ ವಿಜಯ್ ಜೊತೆ ಹೋದರೆ, ಸರ್ಕಾರ ರಚಿಸಲು ವಿಜಯ್‌ಗೆ ಕೇವಲ ಒಬ್ಬ ಶಾಸಕರ ಬೆಂಬಲ ಬೇಕಾಗುತ್ತದೆ, ಅದನ್ನು ದಲಿತ ಪರವಾದ ವಿಡುತಲೈ ಚಿರುತ್ತೈಗಳ್ ಕಚ್ಚಿ (VCK) ನೀಡಬಲ್ಲದು.

ಆದರೆ, ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಕ್ಕೂಟದ (INDIA bloc) ಮೇಲೆ ಇದು ಬೀರುವ ಪ್ರಭಾವ. ಒಂದು ವೇಳೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರಾಜ್ಯದಲ್ಲಿ ಡಿಎಂಕೆಯನ್ನು ಕೈಬಿಟ್ಟರೆ, ರಾಷ್ಟ್ರ ಮಟ್ಟದಲ್ಲಿ ಡಿಎಂಕೆ ಆ ಮೈತ್ರಿಕೂಟದಲ್ಲಿ ಮುಂದುವರಿಯುತ್ತದೆಯೇ ಎಂಬುದು ಸಧ್ಯದ ಪ್ರಶ್ನೆ? ಆದರೆ ರಾಜಕೀಯದಲ್ಲಿ ಯಾವುದು ಸಾಧ್ಯವಿಲ್ಲವೆಂದು ಹೇಳಲಾಗದು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...