“ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಇತ್ತೀಚೆಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿರುವ ಈ ಮಾತುಗಳು ಕೇವಲ ರಾಜಕೀಯ ಹೇಳಿಕೆಯಲ್ಲ. ಬದಲಿಗೆ, ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿರುವ ಒಂದು ವ್ಯವಸ್ಥಿತ ಪಿತೂರಿಯ ವಿರುದ್ಧದ ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು.
ದೇಶದಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರದ ಆಡಳಿತಾರೂಢ ಶಕ್ತಿಗಳು ತರುತ್ತಿರುವ ಅಡ್ಡದಾರಿಗಳ ಪರಿಣಾಮವಾಗಿ ಸಾಮಾನ್ಯ ನಾಗರಿಕರು, ಅದರಲ್ಲೂ ಮುಖ್ಯವಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಬಡವರು ತಮ್ಮ ಅತ್ಯುನ್ನತ ಸಂವಿಧಾನಿಕ ಹಕ್ಕಾದ ‘ಮತದಾನದ ಹಕ್ಕು’ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಆತಂಕಕ್ಕೆ ಕಾರಣವಾಗಿರುವುದು ವಿಶೇಷ ತೀವ್ರ ಪರಿಷ್ಕರಣೆ ಅಥವಾ ‘ಎಸ್ಐಆರ್’ (Special Intensive Revision) ಎಂಬ ಪ್ರಕ್ರಿಯೆ.
ರಾಜ್ಯದಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣಾ ಸಿದ್ಧತೆಗಳು ನಡೆಯುತ್ತಿವೆ, ಈ ನಡುವೆ ಮತದಾರರ ಜಾಗೃತಿಗಾಗಿ ಬಿಎಲ್ಎ (BLA) ಮತ್ತು ಶಾಸಕರ ಮಟ್ಟದಲ್ಲಿ ಸಭೆಗಳು ಆರಂಭವಾಗಿವೆ. ಒಂದು ವೇಳೆ ಕರ್ನಾಟಕದಲ್ಲೂ ಎಸ್ಐಆರ್ ಪ್ರಕ್ರಿಯೆಯು ಪಾರದರ್ಶಕತೆ ಇಲ್ಲದೆ ಜಾರಿಯಾದರೆ ನಾಡಿನ ಬಡ ಮತದಾರರು ಎಂತಹ ಭೀಕರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ? ಎಂಬುದಕ್ಕೆ ಬಿಹಾರ ಮತ್ತು ಪಶ್ಚಿಮ ಬಂಗಾಳ ನಮಗೆ ಸ್ಪಷ್ಟ ಉದಾಹರಣೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತರೆದಿಟ್ಟಿದೆ.
ಏನಿದು ಎಸ್ಐಆರ್ (SIR) ಆಪರೇಷನ್?
ಸಾಮಾನ್ಯವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಎಂದರೆ ಮನೆ ಮನೆಗೆ ಬಂದು ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಮಾಡುವುದು ಎಂದರ್ಥ. ಆದರೆ, ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಡೇಟಾ ಅನಾಲಿಟಿಕ್ಸ್, ಆಧಾರ್ ಲಿಂಕಿಂಗ್ ಗೊಂದಲಗಳು ಮತ್ತು ಸ್ಥಳೀಯ ಅಧಿಕಾರಿಗಳ ಮೂಲಕ ಮತದಾರರ ಪಟ್ಟಿಯನ್ನು ಅತಿಯಾದ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು “ನಕಲಿ ಮತದಾರರನ್ನು ತೆಗೆಯುವ ಪ್ರಕ್ರಿಯೆ” ಎಂದು ಬಿಂಬಿತವಾದರೂ, ಬಿಜೆಪಿಯನ್ನು ವಿರೋಧಿಸುವ ಮತದಾರರು, ವಲಸೆ ಕಾರ್ಮಿಕರ ಮತ್ತು ಬಡವರ ಮತಗಳನ್ನು ಪಟ್ಟಿಯಿಂದ ಸದ್ದಿಲ್ಲದೆ ಡಿಲೀಟ್ ಮಾಡಲು ಇದನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ, “ಬೇರೆ ರಾಜ್ಯಗಳಲ್ಲಿ ಇದೇ ರೀತಿ ಆಗಿದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ.” ಆ ರಾಜ್ಯಗಳ ಉದಾಹರಣೆಗಳನ್ನು ನೋಡಿದ ಮೇಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ.
ದೇಶದ 13 ರಾಜ್ಯಗಳ ಎಸ್ಐಆರ್ ಆಪರೇಷನ್: ಮರೆಯಾದ 5.18 ಕೋಟಿ ಮತದಾರರು!
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು “ಶುದ್ಧೀಕರಣ” ಮಾಡುವ ನೆಪದಲ್ಲಿ ಜಾರಿಗೆ ತಂದ ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಆಪರೇಷನ್ನ ಮೊದಲ ಎರಡು ಹಂತಗಳು ಈಗಾಗಲೇ ಮುಕ್ತಾಯಗೊಂಡಿವೆ. ಈ ಪ್ರಕ್ರಿಯೆಯಲ್ಲಿ ದೇಶದ 13 ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಂತ್ರಜ್ಞಾನದ ಲೋಪ ಹಾಗೂ ಲಾಜಿಕಲ್ ಡಿಸ್ಕ್ರಿಪ್ರೆನ್ಸಿ (ಕಟ್ಟುನಿಟ್ಟಿನ ನಿಯಮಗಳು ಎನ್ನುತ್ತಾರೆ) ಯಿಂದಾಗಿ ಬರೋಬ್ಬರಿ ಶೇಕಡಾ 10.2 ರಷ್ಟು ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ.
ಎಸ್ಐಆರ್ ಜಾರಿಗೆ ಬರುವ ಮುನ್ನ ಈ 13 ರಾಜ್ಯಗಳಲ್ಲಿ ಒಟ್ಟು 50.99 ಕೋಟಿ ಮತದಾರರಿದ್ದರು. ಆದರೆ ಅಂತಿಮ ಪಟ್ಟಿ ಪ್ರಕಟವಾಗುವಷ್ಟರಲ್ಲಿ ಈ ಸಂಖ್ಯೆ 45.81 ಕೋಟಿಗೆ ಕುಸಿದಿದೆ. ಅಂದರೆ, ಬರೋಬ್ಬರಿ 5 ಕೋಟಿಗೂ ಅಧಿಕ (5,18,00,000) ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಒಂದೇ ಕಡತದಲ್ಲಿ ಸಾರಾಸಗಟಾಗಿ ತೆಗೆದುಹಾಕಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಮತ ಎನ್ನುವುದು ಬಡವನಿಗೆ ಸಂವಿಧಾನ ನೀಡಿರುವ ಅತಿ ದೊಡ್ಡ ಬ್ರಹ್ಮಾಸ್ತ್ರ. ಆ ಅಸ್ತ್ರವನ್ನೇ ಕಸಿದುಕೊಂಡು ಬಡವರನ್ನು ಮೂಲೆಗುಂಪು ಮಾಡಲು ಹೊರಟಿರುವ ಎಸ್ಐಆರ್ ಎಂಬ ಸಂಚಿನ ವಿರುದ್ಧ ಇಡೀ ನಾಡು ಎಚ್ಚರಗೊಳ್ಳಬೇಕಿದೆ. ಮತದಾನದ ಹಕ್ಕು ಹೋದರೆ ನಮ್ಮ ಅಸ್ತಿತ್ವವೇ ಹೋದಂತೆ.
ಕೆಳಗಿನ ಅಧಿಕೃತ ಅಂಕಿ-ಅಂಶಗಳ ಸಮಗ್ರ ಪಟ್ಟಿಯನ್ನು ನೋಡಿದರೆ ಈ ಸಂಚಿನ ಆಳ ನಮಗೆ ಅರ್ಥವಾಗುತ್ತದೆ
| ರಾಜ್ಯ / ಕೇಂದ್ರಾಡಳಿತ ಪ್ರದೇಶ | ಎಸ್ಐಆರ್ ಮುನ್ನ ಇದ್ದ ಒಟ್ಟು ಮತದಾರರು | ಎಸ್ಐಆರ್ ನಂತರ ಉಳಿದ ಮತದಾರರು | ಪಟ್ಟಿಯಿಂದ ಕಡಿತಗೊಂಡ ಅಸಲಿ ಮತಗಳು (Absolute Deletion) | ಕಡಿತಗೊಂಡ ಶೇಕಡಾವಾರು (%) |
| ಉತ್ತರ ಪ್ರದೇಶ | 15.44 ಕೋಟಿ | 13.39 ಕೋಟಿ | 2.05 ಕೋಟಿ | 13.21% |
| ಪಶ್ಚಿಮ ಬಂಗಾಳ | 7.69 ಕೋಟಿ | 6.86 ಕೋಟಿ | 83.86 ಲಕ್ಷ | 10.90% |
| ತಮಿಳುನಾಡು | 6.41 ಕೋಟಿ | 5.67 ಕೋಟಿ | 74.00 ಲಕ್ಷ | 11.50% |
| ಗುಜರಾತ್ | 5.08 ಕೋಟಿ | 4.40 ಕೋಟಿ | 68.00 ಲಕ್ಷ | 14.50% |
| ಮಧ್ಯಪ್ರದೇಶ | 5.74 ಕೋಟಿ | 5.39 ಕೋಟಿ | 34.25 ಲಕ್ಷ | 5.96% |
| ರಾಜಸ್ಥಾನ | 5.46 ಕೋಟಿ | 5.15 ಕೋಟಿ | 31.00 ಲಕ್ಷ | 5.70% |
| ಛತ್ತೀಸ್ಗಢ | 2.12 ಕೋಟಿ | 1.87 ಕೋಟಿ | 25.00 ಲಕ್ಷ | 11.80% |
| ಕೇರಳ | 2.78 ಕೋಟಿ | 2.69 ಕೋಟಿ | 9.00 ಲಕ್ಷ | 3.24% |
| ಗೋವಾ | 11.85 ಲಕ್ಷ | 10.57 ಲಕ್ಷ | 1.28 ಲಕ್ಷ | 10.80% |
| ಪುದುಚೇರಿ | 10.21 ಲಕ್ಷ | 9.44 ಲಕ್ಷ | 77,000 | 7.54% |
| ಅಂಡಮಾನ್ ನಿಕೋಬಾರ್ | 3.10 ಲಕ್ಷ | 2.58 ಲಕ್ಷ | 52,000 | 16.60% |
| ಲಕ್ಷದ್ವೀಪ | 57,000 | 57,000 | 181 | 0.35% |
| ಬಿಹಾರ (ಪೈಲಟ್ ಹಂತ) | — | — | 65.00 ಲಕ್ಷಕ್ಕೂ ಹೆಚ್ಚು | — |
| ಒಟ್ಟು (TOTAL) | 50.99 ಕೋಟಿ | 45.81 ಕೋಟಿ | 5.18 ಕೋಟಿಗೂ ಹೆಚ್ಚು | 10.16% (ಸರಾಸರಿ) |
ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಆಪರೇಷನ್: ಇಡೀ ದೇಶದಲ್ಲೇ ಅತಿ ಹೆಚ್ಚು ಅಂದರೆ ಬರೋಬ್ಬರಿ 2.05 ಕೋಟಿ ಮತದಾರರನ್ನು ಉತ್ತರ ಪ್ರದೇಶವೊಂದರಲ್ಲೇ ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ ಬಹುತೇಕರು ಗ್ರಾಮೀಣ ಭಾಗದ ದಲಿತರು, ಹಿಂದುಳಿದ ವರ್ಗದವರು ಮತ್ತು ಕೂಲಿ ಕಾರ್ಮಿಕರು ಎಂಬುದು ತಳಮಟ್ಟದ ವರದಿಗಳಿಂದ ಸಾಬೀತಾಗಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಟಾರ್ಗೆಟ್:
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದಲ್ಲಿ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಕ್ರಮವಾಗಿ ಪ ಬಂ 83.86 ಲಕ್ಷ ಮತ್ತು ತಮಿಳುನಾಡಿನಲ್ಲಿ 74 ಲಕ್ಷ ಮತದಾರರನ್ನು ಡಿಲೀಟ್ ಮಾಡಲಾಗಿದೆ. ಬಂಗಾಳದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ‘ಇರೋನೆಟ್’ (ERONET) ಸಾಫ್ಟ್ವೇರ್ ಬಳಸಿ, ಬಂಗಾಳಿ ಹೆಸರುಗಳ ಸ್ಪೆಲ್ಲಿಂಗ್ನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದ ನೆಪ ಒಡ್ಡಿ ಲಕ್ಷಾಂತರ ಬಡ ಮುಸ್ಲಿಮರು ಮತ್ತು ಗ್ರಾಮೀಣ ಜನರನ್ನು ಮತದಾನದಿಂದ ವಂಚಿತಗೊಳಿಸಲಾಗಿದೆ. ಎಷ್ಟು ಭೀಕರ ಎಂದರೆ, ಭಾರತದ ಹೆಮ್ಮೆಯ ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಹೆಸರೇ ಪರಿಶೀಲನೆಯ ಗೊಂದಲಕ್ಕೆ ಸಿಲುಕಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಸಣ್ಣ ಪ್ರದೇಶದಲ್ಲೂ ಬರೋಬ್ಬರಿ ಶೇಕಡಾ 16.6 ರಷ್ಟು ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ.
ಪ.ಬಂಗಾಳ ಮತ್ತು ಬಿಹಾರದಲ್ಲಿ ಮತ ಹಕ್ಕು ಹೋಯ್ತು, ಈಗ ಸರ್ಕಾರಿ ಸೌಲಭ್ಯದ ಸರದಿ!
ಎಸ್ಐಆರ್ ಸಂಚಿನ ಬಗ್ಗೆ ಮಾತನಾಡುವಾಗ ಕೆಲವರು ಹೀಗೆಲ್ಲಾ ನಿಜವಾಗ್ಲೂ ಆಗತ್ತಾ? ಇದೆಲ್ಲ ಕೆಲವರ ಊಹೇ ಎಂದು ಹೇಳುವವರು ಇದ್ದಾರೆ. ಆದರೆ ಇದರ ಕಟು ಸತ್ಯವನ್ನು ತಿಳಿದುಕೊಳ್ಳಬೇಕೆಂದರೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಂಡರೆ ಸಾಕು ಕರ್ನಾಟಕದಲ್ಲಿ ಏನು ನಡೆಯಬಹುದು ಎಂದು ಅಂದಾಜಿಸಲು ರಾಕೇಟ್ ಸೈನ್ಸ್ ಬೇಕಿಲ್ಲ.
ಎಸ್ಐಆರ್ನಿಂದ ವಿವಿಧ ರಾಜ್ಯಗಳ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಈಗ ಸರ್ಕಾರಿ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಬಿಹಾರ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ಅಧಿಕೃತವಾಗಿ ಹೇಳಿವೆ. ಹಾಗಾಗಿ, ಮುಂದೆ ಭಾರತದ ನಾಗರಿಕತ್ವ ಕೂಡ ಕಳೆದುಕೊಳ್ಳುವ ಆತಂಕ ಜನ ಸಾಮಾನ್ಯರಿಗೆ ಎದುರಾಗಿದೆ.

ಎಸ್ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲ್ಪಟ್ಟವರು ಪಡಿತರ ಮತ್ತು ಇತರ ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ. ಮುಂದಿನ ಹಂತದಲ್ಲಿ ಇಂತಹ ವ್ಯಕ್ತಿಗಳ ಬ್ಯಾಂಕ್ ಪಾಸ್ಬುಕ್ಗಳನ್ನು ಸಹ ರದ್ದುಗೊಳಿಸಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿಯೂ ಸಹ ಎಸ್ಐಆರ್ ಮೂಲಕ ಮತದಾರರ ಪಟ್ಟಿಯಿಂದ ಹೊರಬಿದ್ದ ಮಹಿಳೆಯರಿಗೆ ಅಲ್ಲಿನ ‘ಅನ್ನಪೂರ್ಣ ಭಂಡಾರ್’ ಯೋಜನೆಯ ಸೌಲಭ್ಯವನ್ನು ನಿಲ್ಲಿಸುವುದಾಗಿ ಅಲ್ಲಿನ ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಾಮಾಜಿಕ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಘೋಷಿಸಿದ್ದಾರೆ.
ಜೂನ್ 1 ರಿಂದ ಯೋಜನೆ ಜಾರಿಗೂ ಮುನ್ನ ಕಡ್ಡಾಯವಾಗಿ ಫಲಾನುಭವಿಗಳ ಪಟ್ಟಿಯ ವಿಶ್ಲೇಷಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಸಂಪೂರ್ಣವಾಗಿ ಡಿಲೀಟ್ ಆದವರಿಗೆ ಮತ್ತು ಪ್ರಸ್ತುತ ತಮ್ಮ ಹೆಸರು ಕೈಬಿಟ್ಟಿರುವ ಕುರಿತು ಟ್ರಿಬ್ಯುನಲ್ಗಳಲ್ಲಿ ಮೇಲ್ಮನವಿ ಸಲ್ಲಿಸಿ ವಿಚಾರಣೆ ಬಾಕಿ ಇರುವ ಮಹಿಳೆಯರಿಗೂ ಸದ್ಯದ ಮಟ್ಟಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕಕ್ಕೆ ಎಚ್ಚರಿಕೆ:
ಪ್ರಸ್ತುತ ದೇಶಾದ್ಯಂತ ಮೂರನೇ ಹಂತದ ಎಸ್ಐಆರ್ ಆಪರೇಷನ್ ಚಾಲ್ತಿಯಲ್ಲಿದ್ದು, ಇದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳನ್ನು ಸೇರಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ ಮಾಡಿದಂತೆಯೇ ಇಲ್ಲಿ ಮಾಡುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಆದೇ ತಪ್ಪುಗಳೇ ಇಲ್ಲೂ ಮರುಕಳಿಸಿದರೆ, ಕರ್ನಾಟಕದಲ್ಲೂ ಲಕ್ಷಾಂತರ ಬಡವರು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮತದಾನದ ಹಕ್ಕಿನ ಜೊತೆಗೆ ತಮ್ಮ ಸಾಮಾಜಿಕ ಭದ್ರತೆಯನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.
ಮತ ಹೋದರೆ ‘ಗ್ಯಾರಂಟಿ’ ಯೋಜನೆಗಳೂ ಬಂದ್.
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ, ಇಲ್ಲಿ ಪಾರದರ್ಶಕತೆ ಇಲ್ಲದ ಎಸ್ಐಆರ್ ಜಾರಿಯಾದರೆ ಮತದಾನದ ಹಕ್ಕು ಮತ್ತು ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗುವುದು ನಿಶ್ಚಿತ.
ಇಂದಿನ ದಿನಗಳಲ್ಲಿ ಪಡಿತರ ಚೀಟಿ (Ration Card), ಆಧಾರ್ ಮತ್ತು ವೋಟರ್ ಐಡಿಯನ್ನು ಸರ್ಕಾರದ ಎಲ್ಲಾ ಜನಕಲ್ಯಾಣ ಯೋಜನೆಗಳಿಗೆ ಲಿಂಕ್ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿರುವಂತೆ, ಒಂದು ವೇಳೆ ಎಸ್ಐಆರ್ ಗೊಂದಲದಿಂದ ನಿಮ್ಮ ವೋಟರ್ ಐಡಿ ರದ್ದಾದರೆ ಅಥವಾ ಡಿಲೀಟ್ ಆದರೆ, ಅದರ ಬೆನ್ನಲ್ಲೇ ನಿಮ್ಮ ಪಡಿತರ ಚೀಟಿಗೂ ಕುತ್ತು ಬರಬಹುದು. ಪರಿಣಾಮವಾಗಿ ಬಡ ಮಹಿಳೆಯರ ಆಸರೆಯಾಗಿರುವ ‘ಶಕ್ತಿ‘ ಮತ್ತು‘ಗೃಹಲಕ್ಷ್ಮಿ’ ಯೋಜನೆ, ವೃದ್ಧಾಪ್ಯ ಪಿಂಚಣಿ, ವಿಧವಾ ವೇತನ ಮತ್ತು ಉಚಿತ ರೇಷನ್ ಸೌಲಭ್ಯಗಳಿಂದ ಬಡ ನಾಗರಿಕರು ವಂಚಿತರಾಗಬೇಕಾಗುತ್ತದೆ. ಮತದಾನದ ಹಕ್ಕು ಎಂಬುದು ಕೇವಲ ಸರ್ಕಾರವನ್ನು ಆರಿಸುವುದಕ್ಕಷ್ಟೇ ಅಲ್ಲ, ಅದು ಬಡವನ ಬದುಕಿನ ಭದ್ರತೆಯೂ ಹೌದು.
ಪ್ರಜಾಪ್ರಭುತ್ವದಲ್ಲಿ ಮತ ಎನ್ನುವುದು ಬಡವನಿಗೆ ಸಂವಿಧಾನ ನೀಡಿರುವ ಅತಿ ದೊಡ್ಡ ಬ್ರಹ್ಮಾಸ್ತ್ರ. ಆ ಅಸ್ತ್ರವನ್ನೇ ಕಸಿದುಕೊಂಡು ಬಡವರನ್ನು ಮೂಲೆಗುಂಪು ಮಾಡಲು ಹೊರಟಿರುವ ಎಸ್ಐಆರ್ ಎಂಬ ಸಂಚಿನ ವಿರುದ್ಧ ಇಡೀ ನಾಡು ಎಚ್ಚರಗೊಳ್ಳಬೇಕಿದೆ. ಮತದಾನದ ಹಕ್ಕು ಹೋದರೆ ನಮ್ಮ ಅಸ್ತಿತ್ವವೇ ಹೋದಂತೆ.
ಮತ ಹಕ್ಕು ನಿರಾಕರಣೆ ಮತ್ತು ಎರಡನೇ ದರ್ಜೆ ಪ್ರಜೆ:
ಎಸ್ಐಆರ್ ಮೂಲಕ ಲಕ್ಷಾಂತರ ಅರ್ಹ ಮತದಾರರನ್ನು ಹೊರಗಿಟ್ಟು ಚುನಾವಣೆ ನಡೆಸಿರುವುದೇ ಸಂವಿಧಾನದ ಆಶಯಗಳಿಗೆ ವಿರುದ್ದ. ಕಾನೂನು ಹೋರಾಟದಲ್ಲೂ ಜನರಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಹಾಗಾದರೆ, ಜನರು ಯಾರಲ್ಲಿ ನ್ಯಾಯ ಕೇಳಬೇಕು? ತಮ್ಮ ನಾಗರಿಕತ್ವನ್ನು ಕಳೆದುಕೊಂಡು ಈ ದೇಶದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಇರಬೇಕಾ? ವಿದೇಶಿಗರು, ಅಕ್ರಮ ವಲಸಿಗರು ಎಂದು ಹೊರದಬ್ಬಿದರೆ ದೇಶ ಬಿಟ್ಟು ಹೋಗಲು ಸಿದ್ದರಾಗಿರಬೇಕಾ? ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
ಎಸ್ಐಆರ್ ಕೇವಲ ಮತದಾರರ ಪಟ್ಟಿಯ ಶುದ್ದೀಕರಣ ಎಂದು ಹೇಳುತ್ತಾ ಲಕ್ಷಾಂತರ ಜನರ ಮತದಾನದ ಹಕ್ಕು ಕಿತ್ತುಕೊಂಡ ಬಳಿಕ, ಈಗ ಸರ್ಕಾರಿ ಸೌಲಭ್ಯವನ್ನು ಕೊಡುವುದಿಲ್ಲ ಎಂದು ಘೋಷಣೆ ಮಾಡಿಯಾಗಿದೆ. ನಾಳೆ ಹಠಾತ್ ಆಗಿ ಎಸ್ಐಆರ್ನಲ್ಲಿ ಹೊರಬಿದ್ದವರು ಭಾರತದ ನಾಗರಿಕರಲ್ಲ ಎಂದರೆ ಏನು ಮಾಡಬೇಕು?
ಹೀಗೆ ಎಸ್ಐಆರ್ ಕಾರಣಕ್ಕೆ ಮತದಾನದ ಹಕ್ಕು ಕಳೆದುಕೊಂಡರೆ, ತಮ್ಮದೇ ದೇಶದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿ ಹೆಚ್ಚಿನ ಶೋಷಣೆ ಅನುಭವಿಸುವ ಹಂತೆಕ್ಕೆ ತಲುಪಬೇಕಾಗುತ್ತದೆ ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮ್ಯಾನ್ಮಾರ್ನ ರೋಹಿಂಗ್ಯಾ ಮುಸ್ಲಿಮರು:
1982 ರವರೆಗೆ ರೋಹಿಂಗ್ಯಾಗಳಿಗೆ ಮ್ಯಾನ್ಮಾರ್ನಲ್ಲಿ ಮತದಾನದ ಹಕ್ಕಿತ್ತು, ಅವರ ಪ್ರತಿನಿಧಿಗಳು ಸಂಸತ್ತಿನಲ್ಲಿದ್ದರು. ಆದರೆ 1982 ರ ಹೊಸ ಪೌರತ್ವ ಕಾಯ್ದೆಯ ಮೂಲಕ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಮತದಾನದ ಹಕ್ಕು ಮತ್ತು ಪೌರತ್ವವನ್ನು ಕಸಿದುಕೊಂಡರೆ ಒಂದು ಸಮುದಾಯ ಎಂತಹ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ರೋಹಿಂಗ್ಯಾಗಳೇ ಜೀವಂತ ಸಾಕ್ಷಿ.
ಇದರಿಂದಾಗಿ ತಾಯ್ನಾಡಿನಲ್ಲೇ ಅವರನ್ನು “ಅಕ್ರಮ ವಲಸಿಗರು” ಎಂದು ಘೋಷಿಸಲಾಯಿತು. ಮತದ ಹಕ್ಕು ಇಲ್ಲದ ಕಾರಣ ಅವರ ಪರವಾಗಿ ಧ್ವನಿ ಎತ್ತಲು ಯಾವುದೇ ರಾಜಕಾರಣಿ ಅಥವಾ ನ್ಯಾಯಾಲಯ ಮುಂದೆ ಬರಲಿಲ್ಲ. ಇದರ ಪರಿಣಾಮವಾಗಿ ಸೇನಾ ದೌರ್ಜನ್ಯ, ಹತ್ಯಾಕಾಂಡ ನಡೆದು ಲಕ್ಷಾಂತರ ಜನ ನೆರೆಯ ದೇಶಗಳಿಗೆ ನಿರಾಶ್ರಿತರಾಗಿ ಓಡಿಹೋಗಬೇಕಾಯಿತು. ಇಂದು ಅವರಿಗೆ ಶಿಕ್ಷಣ, ಆರೋಗ್ಯ, ಮತ್ತು ಸ್ವಂತ ಆಸ್ತಿ ಹೊಂದುವ ಯಾವುದೇ ಹಕ್ಕಿಲ್ಲ.
ಕುವೈತ್ನ ‘ಬೆದೂನ್’ (Bidoon) ಸಮುದಾಯ
1961 ರಲ್ಲಿ ಕುವೈತ್ ಸ್ವತಂತ್ರವಾದಾಗ ಅಲ್ಲಿನ ಅಲೆಮಾರಿ ಮತ್ತು ಗ್ರಾಮೀಣ ಭಾಗದ ‘ಬೆದೂನ್’ ಸಮುದಾಯದ ಜನ ಸರಿಯಾದ ದಾಖಲೆಗಳನ್ನು ಸಲ್ಲಿಸದ ಕಾರಣ ಅವರಿಗೆ ಪೌರತ್ವ ಮತ್ತು ಮತದ ಹಕ್ಕನ್ನು ನಿರಾಕರಿಸಲಾಯಿತು. ಶ್ರೀಮಂತ ಗಲ್ಫ್ ದೇಶವಾದ ಕುವೈತ್ನಲ್ಲಿ ತಲೆಮಾರುಗಳಿಂದ ಬದುಕುತ್ತಿದ್ದರೂ ಲಕ್ಷಾಂತರ ಜನ ಇಂದಿಗೂ ಎರಡನೇ ದರ್ಜೆ ಪ್ರಜೆಗಳಾಗಿಯೇ ಉಳಿದಿದ್ದಾರೆ.
ಕುವೈತ್ ಸರ್ಕಾರ ಇವರನ್ನು “ಕಾನೂನುಬಾಹಿರ ನಿವಾಸಿಗಳು” ಎಂದು ಕರೆಯುತ್ತದೆ. ಇವರಿಗೆ ಉಚಿತ ಶಿಕ್ಷಣವಿಲ್ಲ, ಸರ್ಕಾರಿ ಕೆಲಸಗಳಿಲ್ಲ, ಬ್ಯಾಂಕ್ ಖಾತೆ ತೆರೆಯಲು ಅಥವಾ ಚಾಲನಾ ಪರವಾನಗಿ (Driving License) ಪಡೆಯಲು ಸಹ ಹಕ್ಕಿಲ್ಲ. ಕಡು ಬಡತನದಲ್ಲಿ ಬದುಕುತ್ತಿರುವ ಇವರು ಅತ್ಯಂತ ಕಡಿಮೆ ಸಂಬಳಕ್ಕೆ ಖಾಸಗಿ ವಲಯದಲ್ಲಿ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ.
ಹೀಗೆ ಜಗತ್ತಿನ ಹಲವು ದೇಶಗಳಲ್ಲಿ ಮತ ಹಕ್ಕಿನಿಂದ ವಂಚಿತರಾದ ಲಕ್ಷಾಂತರ ಜನ ತನ್ನದೇ ತಾಯಿ ನೆಲದಲ್ಲಿ ಎರಡನೇ ದರ್ಜೆ ಪ್ರಜೆಯಾಗಿ, ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಎಲ್ಲದರಿಂದ ವಂಚಿತರಾಗಿ ಶೋಷಣೆ ಅನುಭವಿತ್ತಿರುವಂತೆ, ಮುಂದಿನ ದಿನಗಳಲ್ಲಿ ಭಾರತವೂ ಇದಕ್ಕೆ ಸಾಕ್ಷಿಯಾಗದಿರಲಿ ಎಂದು ಯೋಚಿಸಬೇಕಾಗಿದೆ.
ಈ ಹಿನ್ನಲೆಯಲ್ಲಿ ಕರ್ನಾಟದಲ್ಲಿ ಜೂನ್ನಿಂದ ಆರಂಭವಾಗಲಿರುವ ಎಸ್ಐಆರ್ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ರಾಜ್ಯದ ಸುಮಾರು 2ಕೋಟಿ ಮತದಾರರಲ್ಲಿ ವ್ಯತ್ಯಸಗಳಿವೆ ಎಂದು ಆಯೋಗ ಹೇಳಿರುವುದು ಆತಂಕ ಮೂಡಿಸಿದೆ. ಎಸ್ಐಆರ್ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸೃಷ್ಟಿಸಿದ ಅವಾಂತರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ರಾಜ್ಯದಲ್ಲಿ ಅದೆಷ್ಟು ವಿವಾದಗಳನ್ನು ಸೃಷ್ಟಿಸುತ್ತೊ ಕಾದು ನೋಡಬೇಕಿದೆ.


