ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. “ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ” ಎಂಬ ದೃಢ ಸಂಕಲ್ಪದೊಂದಿಗೆ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಮತ್ತು ‘ಎದ್ದೇಳು ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಜಾಥಾ ಆರಂಭಗೊಂಡಿದೆ. ಒಟ್ಟು 5 ಪ್ರಮುಖ ಮಾರ್ಗಗಳಲ್ಲಿ ಸಾಗುತ್ತಿರುವ ಈ ಕ್ರಾಂತಿಕಾರಿ ಜಾಥಾದಲ್ಲಿ, ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ‘ಮಾರ್ಗ 3’ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಶಿವಮೊಗ್ಗದ ಅಂಬೇಡ್ಕರ್ ಪ್ರತಿಮೆ ಬಳಿ ಅದ್ಧೂರಿ ಚಾಲನೆ
ಇಂದು ಬೆಳಿಗ್ಗೆ 8:30ಕ್ಕೆ ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಎದುರು ಜಾಥಾಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ ಅವರು ಜಾಥಾವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಬಸವರಾಜಪ್ಪ ಅವರು, “ಇಡೀ ದೇಶಾದ್ಯಂತ ಎಸ್‌ಐಆರ್ ಎಂಬ ಅಸ್ತ್ರವನ್ನು ಬಳಸಿಕೊಂಡು ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳಲು ಮತ್ತು ಜನರ ಅಸ್ತಿತ್ವವನ್ನೇ ಪ್ರಶ್ನಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಪ್ರತಿ 10 ವರ್ಷಕ್ಕೊಮ್ಮೆ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತದೆಯಾದರೂ, ಈಗ ಬದುಕಿರುವವರ ಮತಗಳನ್ನೇ ಡಿಲೀಟ್ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು. ನಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಪ್ರಬಲ ಪ್ರತಿರೋಧ ಅನಿವಾರ್ಯವಾಗಿದೆ” ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
“ಪ್ರಜಾಪ್ರಭುತ್ವದ ಅಡಿಪಾಯದ ಕಲ್ಲುಗಳನ್ನೇ ತೆಗೆಯುವ ಕೆಲಸ”
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಹಾಗೂ ವಕೀಲರಾದ ಕೆ.ಪಿ. ಶ್ರೀಪಾಲ್ ಅವರು, ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಮಾತುಗಳನ್ನು ಸ್ಮರಿಸಿದರು. “ಪ್ರಜಾಪ್ರಭುತ್ವದ ತಳಪಾಯವೇ ಮತದಾನದ ಹಕ್ಕು. ಆದರೆ ಸರ್ಕಾರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯದ ಕಲ್ಲುಗಳನ್ನೇ ಕಿತ್ತೆಸೆಯುವ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಐಆರ್‌ನಿಂದ ದೇಶದ ಜನಸಾಮಾನ್ಯರಿಗೆ ಎದುರಾಗಲಿರುವ ಭೀಕರ ಅನಾಹುತಗಳ ಬಗ್ಗೆ ಜನ ಈಗಲೇ ಎಚ್ಚೆತ್ತು, ಪಟ್ಟಿಯಿಂದ ಹೆಸರುಗಳು ಹೊರಗುಳಿಯದಂತೆ ನೋಡಿಕೊಳ್ಳಬೇಕು. BLA ಮೂಲಕ ಪಟ್ಟಿಗಳನ್ನು ಪರಿಶೀಲಿಸಿ ತಿದ್ದುಪಡಿಗಳಿದ್ದರೆ ಮಾಡಿಸಿಕೊಳ್ಳಬೇಕು ಎಂದರು.

ಶಿವಮೊಗ್ಗದಲ್ಲಿ ಉದ್ಘಾಟನೆಹೊಂಡಿರುವ ಈ ಜಾಥಾವು ಒಟ್ಟು 5 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಪ್ರಮುಖವಾಗಿ ಮಾರ್ಗ 3ರ ಅಡಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗವನ್ನು ಬೆಸೆಯಲಿದೆ.
ಶಿವಮೊಗ್ಗದಿಂದ ಹೊರಡುವ ಜಾಥಾವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರಗಳಾದ ಶಿರಸಿ ಮತ್ತು ಭಟ್ಕಳವನ್ನು ಪ್ರವೇಶಿಸಿ ಜನಜಾಗೃತಿ ಮೂಡಿಸಲಿದೆ ಅಲ್ಲಿಂದ ಮುಂದುವರಿದು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೃಹತ್ ರ‍್ಯಾಲಿಗಳ ಮೂಲಕ ಸಾಗಲಿದೆ.
ಎಲ್ಲಾ 5 ಮಾರ್ಗಗಳ ಜಾಥಾಗಳು ಜೂನ್ 20ರಂದು ಬೆಂಗಳೂರನ್ನು ತಲುಪಲಿದ್ದು, ಅಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ.
ದೇಶದ ಮತ್ತು ಸಂವಿಧಾನದ ಭವಿಷ್ಯವನ್ನು ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಜೂನ್ 20ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಮುಖಂಡರು ಕರೆ ನೀಡಿದ್ದಾರೆ.
ಈ ಐತಿಹಾಸಿಕ ಜನಜಾಗೃತಿ ಚಾಲನಾ ಕಾರ್ಯಕ್ರಮದಲ್ಲಿ ಎದ್ದೇಳು ಕರ್ನಾಟಕದ ರಾಜ್ಯ ಮುಖಂಡರಾದ ಕೆ.ಎಲ್. ಅಶೋಕ್, ದಲಿತ ಸಂಘರ್ಷ ಸಮಿತಿಯ (DSS) ಮುಖಂಡರಾದ ಬಸವಲಿಂಗಪ್ಪ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ, ಸುರೇಶ್ ಗಡಿಕಲ್, ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ವಾಹಬ್, ಆಪ್ತಾಪ್ ಪರ್ವೀಜ್, ಮುನ್ನ ಕಡೂರು ಸೇರಿದಂತೆ ಪ್ರಮುಖ ಹೋರಾಟಗಾರರು, ವಕೀಲರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಧ್ವನಿ ಎತ್ತಿದರು. ಕೆ ಎಲ್ ಅಶೋಕ್, ಸುರೇಶ್ ನಾಯಕ್ ಮತ್ತು ಮುನ್ನ ಕಡೂರು ರವರು ಜಾಥಾ ಮಾರ್ಗ- 3ರ ನೇತೃತ್ವವನ್ನು ವಹಿಸಿದ್ದಾರೆ


