ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ ಬೈಕ್ ರ್ಯಾಲಿ ತಾಲೂಕು ಕೇಂದ್ರ ತಲುಪಿತು. ನಗರದ ಗಾಂಧಿ ಚೌಕದಲ್ಲಿ ಪ್ರಗತಿಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳು ಬಹಿರಂಗ ಸಭೆ ಆಯೋಜಿಸಿದ್ದವು.
ಸಭೆಯನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕಿನ ಹಿರಿಯ ಹೋರಾಟಗಾರ ನಗರಗೆರೆ ರಮೇಶ್, “ಪಶ್ಚಿಮ ಬಂಗಾಳದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ಅವರ ಹೆಸರನ್ನೇ ಬಿಡಲಿಲ್ಲ. ಅವರು ತಮಗೆ ಮತ ನೀಡುವುದಿಲ್ಲ ಎಂಬುದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಗೊತ್ತಿತ್ತು. ಅಂತವರ ಹೆಸರನ್ನೇ ಮತದಾರರ ಪಟ್ಟಿಯಿಂದ ತೆಗೆದವರು ನಮ್ಮ ಹೆಸರನ್ನು ಬಿಡುತ್ತಾರೆಯೇ” ಎಂದು ಪ್ರಶ್ನಿಸಿದರು.

“ನಿಮ್ಮ ಮನೆಗೆ ಬರುವ ಬಿಎಲ್‌ಒಗಳು ನಿಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ಅದಕ್ಕೆ ಆಸ್ಪದ ಕೊಡಬೇಡಿ ಎಚ್ಚರಿಕೆಯಿಂದಿರಿ. ಬಿಜೆಪಿಗೆ ಮತ ನೀಡದವರ ಹಕ್ಕು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ, ಅದಕ್ಕೆ ಅವಕಾಶ ಮಾಡಿಕೊಡಬಾರದು” ಎಂದು ಜನರನ್ನು ಎಚ್ಚರಿಸಿದರು.
ನಂತರ, ಜಾಥಾ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ತಲುಪಿ ಅಲ್ಲಿಯೂ ಸಹ ಬಹಿರಂಗ ಸಭೆ ಮೂಲಕ ಎಸ್‌ಐಆರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ನಂತರ ಜಾಥಾ ಜಿಲ್ಲೆಯ ಗುಡಿಬಂಡೆ ಪಟ್ಟಣ ತಲುಪಿತು. ಜಾಥಾದಲ್ಲಿ ಸ್ಥಳೀಯ ಜನಪರ ಸಂಘನೆಗಳ ಮುಖಂಡರು ಭಾಗವಹಿಸಿ ಬೆಂಬಲ ನೀಡಿ ಎಸ್‌ಐಆರ್ ವಿರೋಧಿಸಿ ಘೋಷಣೆ ಕೂಗಿದರು.

ಜಾಥಾ ಬಾಗೇಪಲ್ಲಿ ತಲುಪಿದಾಗ ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳು ಅದ್ದೂರಿಯಾಗಿ ಸ್ವಾಗತ ಕೋರಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲಾಯಿತು. ಬಳಿಕ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಮಾನವ ಸರಪಳಿ ರಚಿಸುವ ಮೂಲಕ ಎಸ್‌ಐಆರ್ ಅನ್ನು ವಿರೋಧಿಸಲಾಯಿತು.
ಚಿಕ್ಕಬಳ್ಳಾಪುರದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಎಸ್‌ಐಆರ್ ವಿರೋಧಿ ಮೂರನೇ ದಿನದ ಜಾಥಾ ಶಿಡ್ಲಘಟ್ಟದಲ್ಲಿ ಕೊನೆಗೊಂಡಿತು.


