ಜಾರ್ಖಂಡ್ ವಿದ್ಯಾರ್ಥಿ ಹೋರಾಟವನ್ನು ಬೆಂಬಲಿಸಲು ಹೋಗಿದ್ದ ವೇಳೆ ತನ್ನ ಮೇಲೆ ಶಾಯಿ ಎರಚಿರುವುದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಆರ್‌ಎಸ್‌ಎಸ್ ಗೂಂಡಾಗಳಿಗೆ ಶಾಯಿಯ ಕೆಲಸ ಬರೆಯುವುದೇ ಹೊರತು, ಎರಚುವುದಲ್ಲ ಎಂಬುದು ಸಹ ತಿಳಿದಿಲ್ಲ. ನಿಮಗೆ ಈ ವ್ಯತ್ಯಾಸವೇ ತಿಳಿಯದಿದ್ದಾಗ, ನೀವು ಹೇಗೆ ತಾನೆ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುತ್ತೀರಿ?. ಶಾಯಿ ಎರಚುವ ಮೂಲಕ ನೀವು ನನ್ನನ್ನು ಅಥವಾ ನನ್ನ ಸುತ್ತಲೂ ನಿಂತು ತಮ್ಮ ರಾಜಕೀಯವನ್ನು ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಮಾತುಗಳಲ್ಲಿ ವ್ಯಕ್ತಪಡಿಸುತ್ತಿದ್ದ ಮತ್ತು ತಮ್ಮ ಉತ್ತಮ ಭವಿಷ್ಯ ಹಾಗೂ ಶಿಕ್ಷಣ ವ್ಯವಸ್ಥೆಗಾಗಿ ಹೋರಾಡುತ್ತಿದ್ದ ಆ ಮಹಿಳೆಯರನ್ನು ಹೆದರಿಸಬಹುದು ಎಂದು ನೀವು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು. ಹೋರಾಟದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಯಾವುದೇ ಗಡಿಗಳಿಲ್ಲ” ಎಂದು ಹೇಳಿದ್ದಾರೆ.
ಶುಕ್ರವಾರ (ಆ.7) ಜಾರ್ಖಂಡ್‌ನ ರಾಂಚಿಯಲ್ಲಿ ಜೆಪಿಎಸ್‌ಸಿ ಪರೀಕ್ಷಾ ಅಕ್ರಮ ಖಂಡಿಸಿ ವಿಧಾನಸಭೆ ಚಲೋ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಬಿರ್ಸಾ ಚೌಕ್ ಬಳಿ ನೇಹಾ ಬೋರಾ ಅವರ ಮೇಲೆ ಶಾಯಿ ದಾಳಿ ನಡೆಸಲಾಗಿದೆ. ತಕ್ಷಣವೇ ಅಲ್ಲಿದ್ದ ಪ್ರತಿಭಟನಾಕಾರರು ಶಾಯಿ ಎರಚಿದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಾಯಿ ಎರಚಿದವನನ್ನು ಹಜಾರಿಬಾಗ್ ನಿವಾಸಿಯಾಗಿರುವ 26 ವರ್ಷದ ಅಮರನಾಥ್ ಪಾಂಡೆ ಎಂದು ಗುರುತಿಸಲಾಗಿದೆ. ಈತ ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ಹಿಂದಿ ಆನರ್ಸ್ ವ್ಯಾಸಂಗ ಮಾಡುತ್ತಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರ ವಶದಲ್ಲಿರುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಂಡೆ, ನೇಹಾ ಬೋರಾ ಅವರು “ಉಮರ್ ಖಾಲಿದ್ ಅವರ ಬೆಂಬಲಿಗರು” ಹಾಗೂ “ದೇಶವಿರೋಧಿ” ಎಂಬ ಕಾರಣಕ್ಕೆ ತನಗೆ ಇಷ್ಟವಿಲ್ಲ, ಅದಕ್ಕಾಗಿಯೇ ಶಾಯಿ ಎರಚಿದ್ದಾಗಿ ಹೇಳಿಕೆ ನೀಡಿದ್ದಾನೆ.
ಶಾಯಿ ದಾಳಿ ನಡೆಸಿದಾತ ಆರ್‌ಎಸ್‌ಎಸ್ ಕಾರ್ಯಕರ್ತ ಎಂದು ನೇಹಾ ಆರೋಪಿಸಿದ್ದಾರೆ. ದಾಳಿ ನಡೆಸುವ ಮುನ್ನ ಈತ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾಗಿ ಪ್ರತ್ಯಕ್ಷದರ್ಶಿಗಳು ಹಾಗೂ ಸಂಘಟನೆಯವರು ತಿಳಿಸಿದ್ದಾರೆ.


