ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್. ರವಿಕುಮಾರ್ ವಿರುದ್ಧ ಶುಕ್ರವಾರ (ಆ.7) ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
barandbench.com ವರದಿಯ ಪ್ರಕಾರ, ಪ್ರಕರಣ ರದ್ದತಿ ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಾಗರಿಕ ಸೇವೆಯಲ್ಲಿರುವ ಅಧಿಕಾರಿಯು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾರೆ ಎಂದು ಹೇಳಿಕೆ ನೀಡುವುದನ್ನು ಸಹಿಸಲಾಗದು ಎಂದಿದೆ.
“ಫೌಝಿಯಾ ಅವರು ಕರ್ನಾಟಕದ ಐಎಎಸ್ ಅಧಿಕಾರಿ. ಇದನ್ನು ಒಪ್ಪಲಾಗದು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಇದು ಅತಿಯಾಯಿತು. ಇದನ್ನು ಕ್ಷಮಿಸಲಾಗದು. ನೀವು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದೀರಾ? ಇದಕ್ಕೆ ಅವಕಾಶ ನೀಡಲ್ಲ” ಎಂದು ನ್ಯಾಯಾಲಯ ಹೇಳಿದೆ.
“ನಿಮ್ಮ ನಾಲಿಗೆಯ ಮೇಲೆ ಎಚ್ಚರಿಕೆ ಇರಲಿ. ಇಂಥ ಕ್ಷುಲ್ಲಕ ಪ್ರಕರಣಗಳಿಂದಾಗಿ ಕೊಲೆ ಮತ್ತು ಸುಲಿಗೆಯಂಥ ಪ್ರಕರಣಗಳು ಹತ್ತು ವರ್ಷಗಳಿಂದ ಬಾಕಿ ಉಳಿದಿವೆ. ನಿಮ್ಮ ನಾಲಿಗೆಯ ಮೇಲೆ ಎಚ್ಚರಿಕೆ ಇಲ್ಲದೇ ಇರುವುದರಿಂದ ಪ್ರಕರಣಗಳು ಏರುಗತಿಯಲ್ಲಿವೆ” ಎಂದು ಹೈಕೋರ್ಟ್ ಛೀಮಾರಿ ಹಾಕಿರುವುದಾಗಿ ವರದಿ ಉಲ್ಲೇಖಿಸಿದೆ.
“ಯಾವುದೇ ಪಕ್ಷವಾಗಿರಲಿ, ನೀವೆಲ್ಲರೂ ಇದೆಲ್ಲವನ್ನೂ ನಿಲ್ಲಿಸಬೇಕು. ಬರೀ ಕೆಸರೆರಚುವುದೇ ಆಗಿದ್ದು, ಯಾರೂ ನೀತಿ-ನಿರೂಪಣೆಗಳ ಬಗ್ಗೆ ಮಾತನಾಡುತ್ತಿಲ್ಲ. ನೀವೇನು ಮಾತನಾಡುತ್ತಿದ್ದೀರಿ ಎಂಬುದರ ಮೇಲೆ ಜನರಿಗೆ ಆಸಕ್ತಿ ಇಲ್ಲ. ಬದಲಿಗೆ ಅವರ ಕಲ್ಯಾಣದ ಮೇಲೆ ಅವರಿಗೆ ಆಸಕ್ತಿ” ಎಂದು ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.
2025ರ ಮೇ ತಿಂಗಳಲ್ಲಿ ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಎನ್. ರವಿಕುಮಾರ್ ಅವರು ಫೌಝಿಯಾ ಅವರನ್ನು ಕುರಿತು ಜಿಲ್ಲಾಧಿಕಾರಿ ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದರು. ಇದರ ಬೆನ್ನಿಗೇ ರವಿಕುಮಾರ್ ಕ್ಷಮೆ ಕೋರಿದ್ದರು.


