ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು ‘ಮ್ಯಾಂಡೇಟ್ ಅನಾಲಿಟಿಕ್ಸ್ ಅಂಡ್ ಕನ್ಸಲ್ಟಿಂಗ್’ (MAC) ಸಂಸ್ಥೆಯ ದತ್ತಾಂಶ ವಿಶ್ಲೇಷಣೆಯಿಂದ ಬಯಲಾಗಿದೆ.
ಖಾಸಗಿ ಸಂಶೋಧನಾ ಸಂಸ್ಥೆಯಾದ ಎಂಎಸಿ ತನ್ನ ‘ಮ್ಯಾಕ್ ಇನ್‌ಸೈಟ್ಸ್’ ವೇದಿಕೆಯಲ್ಲಿ ಈ ಸತ್ಯಾಸತ್ಯತೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಿದೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಂತಿ ಚಿಲ್ಡ್ರನ್ ಸ್ಕೂಲ್ ಮತಗಟ್ಟೆಯಲ್ಲಿ ವಾಸಿಸುತ್ತಿರುವ ಬಹುತೇಕ ಎಲ್ಲ ನಾಗರಿಕರನ್ನು ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಹೊರಹಾಕಲು ಆಯೋಗ ಮುಂದಾಗಿದೆ.
ವರದಿಯ ಪ್ರಕಾರ, ಶಾಂತಿ ಚಿಲ್ಡ್ರನ್ ಸ್ಕೂಲ್ ಬೂತ್‌ನಲ್ಲಿ 2023ರ ವಿಧಾನಸಭಾ ಚುನಾವಣೆ ವೇಳೆಗೆ ಒಟ್ಟು 1,129 ನೋಂದಾಯಿತ ಮತದಾರರಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇವರ ಪೈಕಿ ಬರೋಬ್ಬರಿ 1,058 (ಶೇ. 93.71) ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ.
ಅದರಲ್ಲೂ ವಿಚಿತ್ರವೆಂದರೆ, ಈ 1,058 ಜನರ ಪೈಕಿ 1,057 ಮಂದಿ ‘ಸ್ಥಳಾಂತರಗೊಂಡಿದ್ದಾರೆ’ (Shifted) ಎಂದು ನಮೂದಿಸಲಾಗಿದೆ. ಅಂದರೆ ಒಂದು ಇಡೀ ಬೂತ್‌ನ ಶೇ. 93ಕ್ಕಿಂತ ಹೆಚ್ಚು ನಾಗರಿಕರು ಒಂದೇ ಬಾರಿಗೆ ಮನೆ ಖಾಲಿ ಮಾಡಿ ಹೋಗಿದ್ದಾರೆ ಎಂಬ ಅಸಂಬದ್ಧ ಕಾರಣ ನೀಡಿ ಅವರ ಮತಹಕ್ಕನ್ನು ಕಸಿಯಲು ಆಯೋಗ ಸಂಚು ರೂಪಿಸಿದೆ ಎಂಬುದು ಸಂಸ್ಥೆಯ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.
ಈ ಅಕ್ರಮ ಅಥವಾ ಪ್ರಮಾದ ಕೇವಲ ಸರ್ವಜ್ಞನಗರಕ್ಕಷ್ಟೇ ಸೀಮಿತವಾಗಿಲ್ಲ. ಎಂಎಸಿ ಸಂಸ್ಥೆಯ ಆಳವಾದ ದತ್ತಾಂಶ ವಿಶ್ಲೇಷಣೆಯ ಪ್ರಕಾರ, ಕರ್ನಾಟಕದಾದ್ಯಂತ ಒಟ್ಟು 3,372 ಮತಗಟ್ಟೆಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ ಅಡಿಯಲ್ಲಿ ಸೇರಿಸಿ ಡಿಲೀಟ್ ಮಾಡಲು ಗುರುತಿಸಲಾಗಿದೆ! ಇದು ವ್ಯವಸ್ಥಿತವಾಗಿ ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರವೇ ಎಂಬ ಪ್ರಶ್ನೆ ಮೂಡಿಸಿದೆ.
ಇಷ್ಟೆಲ್ಲಾ ಆಘಾತಕಾರಿ ದತ್ತಾಂಶಗಳು ಹೊರಬರುತ್ತಿದ್ದಂತೆಯೇ, ಚುನಾವಣಾ ಆಯೋಗವು ತನ್ನ ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲಿಗೆ ಸಾಕ್ಷಿ ಮುಚ್ಚಿಹಾಕುವ ಹಾದಿ ಹಿಡಿದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಎಂಎಸಿ ಸಂಸ್ಥೆಯ ವರದಿ ಬಹಿರಂಗವಾಗುತ್ತಿದ್ದಂತೆಯೇ, ಚುನಾವಣಾ ಆಯೋಗವು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಎಸ್‌ಡಿಡಿಒ ಪಟ್ಟಿಯನ್ನೇ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಏಕಾಏಕಿ ತೆಗೆದುಹಾಕಿರುವುದು ಈ ಅನುಮಾನಕ್ಕೆ ಇನ್ನಷ್ಟು ಬಲ ತುಂಬಿದೆ.
ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಪ್ರಜೆಗಳ ಅಸ್ತಿತ್ವ ಮತ್ತು ಮೂಲಭೂತ ಮತಾಧಿಕಾರವನ್ನೇ ಕಸಿಯುತ್ತಿರುವ ಈ SIR ಪ್ರಕ್ರಿಯೆಯ ವಿರುದ್ಧ ನಾಗರಿಕ ಸಮಾಜ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಗವು ತಕ್ಷಣವೇ ಪಾರದರ್ಶಕ ವಿವರ ನೀಡಬೇಕೆಂದು ಆಗ್ರಹಿಸಿವೆ.


