ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಂತರ ಸುಮಾರು 1,500 ಜನರು ಕಾಣೆಯಾಗಿದ್ದಾರೆ. ಈ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖಾನಾಲ್ ಗುರುವಾರ ತಿಳಿಸಿದ್ದಾರೆ. ಗಡಿ ಸಮೀಪದ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಅಪ್ಪಳಿಸಿದ ಪರಿಣಾಮ ಕನಿಷ್ಠ 162 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಟಿಬೆಟ್‌ನಲ್ಲಿ ಹಿಮನದಿ ಕುಸಿತದಿಂದ ಉಂಟಾದ ಮಣ್ಣಿನ ಕುಸಿತದ ನಂತರ 558 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಮೂವರು ಸಾವನ್ನಪ್ಪಿದ್ದು, ನಾಪತ್ತೆಯಾದವರಲ್ಲಿ 260 ಮಂದಿ ವಿದೇಶಿಗರು ಸೇರಿದ್ದಾರೆ ಎಂದು ಚೀನಾ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
ಚೀನಾ ಗಡಿಗೆ ಸಮೀಪವಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಬೃಹತ್ ಮಣ್ಣಿನ ಕುಸಿತದ ನಂತರ ನೂರಾರು ಜನರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ. ಭೂಕಂಪದ ಕಂಪನದಿಂದಾಗಿ ಹಿಮನದಿಯ ಮಂಜುಗಡ್ಡೆ ಮತ್ತು ಬಂಡೆಗಳು ಕುಸಿದು ಬಿದ್ದಿದ್ದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಚೀನಾ ಗಡಿಯತ್ತ ಪ್ರಯಾಣಿಸುತ್ತಿದ್ದ ಪ್ರವಾಸಿಗರು, ಕೈಲಾಸ ಮಾನಸಸರೋವರ ಯಾತ್ರಿಕರು ಹಾಗೂ ಜಲವಿದ್ಯುತ್ ಯೋಜನೆಯ ಕಾರ್ಮಿಕರು ಸೇರಿದಂತೆ ನೇಪಾಳದಲ್ಲಿ 403 ಜನರು ಕಾಣೆಯಾಗಿದ್ದು, ಇದರಲ್ಲಿ 341 ಮಂದಿ ವಿದೇಶಿಗರಾಗಿದ್ದಾರೆ. ನಾಪತ್ತೆಯಾದ ವಿದೇಶಿಗರಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ರಷ್ಯಾದ ಪ್ರಜೆಗಳು ಸೇರಿದ್ದಾರೆ. ಇದಲ್ಲದೆ ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 265 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾ ಪ್ರತ್ಯೇಕವಾಗಿ ವರದಿ ಮಾಡಿದೆ.
ಈ ದುರಂತದಲ್ಲಿ ಭಾರತೀಯರ ಸಂಖ್ಯೆಯೂ ಹೆಚ್ಚಿದ್ದು, ನೇಪಾಳ ಪ್ರವಾಸೋದ್ಯಮ ಇಲಾಖೆಯ ಪ್ರಕಾರ 105 ಭಾರತೀಯ ಪ್ರಜೆಗಳು ಮತ್ತು 37 ಅನಿವಾಸಿ ಭಾರತೀಯರು (NRI) ನಾಪತ್ತೆಯಾಗಿದ್ದಾರೆ. ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದು, ಭಾರತದಿಂದ ಸಂಪೂರ್ಣ ಮಾನವೀಯ ನೆರವಿನ ಭರವಸೆ ನೀಡಿದ್ದಾರೆ. ಪ್ರವಾಹ ಪೀಡಿತ ನೇಪಾಳಕ್ಕೆ ಭಾರತವು ಈಗಾಗಲೇ 10 ಟನ್ ಪರಿಹಾರ ಸಾಮಗ್ರಿಗಳು ಮತ್ತು ಅಗತ್ಯ ಔಷಧಗಳನ್ನು ರವಾನಿಸಿದೆ. ಹಿಮಾಲಯದ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಬಿಹಾರದಲ್ಲೂ ಪ್ರವಾಹದ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯವಾಣಿ ಸಂಖ್ಯೆಗಳನ್ನು (+977 985 131 6807, +977 970 910 7500, +977 981 032 6117) ಬಿಡುಗಡೆ ಮಾಡಿದ್ದು, ಇವು ವಾಟ್ಸಾಪ್‌ನಲ್ಲೂ ಲಭ್ಯವಿವೆ. ದುರಂತಕ್ಕೂ ಮುನ್ನ ನೇಪಾಳ-ಟಿಬೆಟ್ ಗಡಿಯಲ್ಲಿ 4.4 ತೀವ್ರತೆಯ ಭೂಕಂಪ ದಾಖಲಾಗಿತ್ತು. ಹಿಮಾಲಯ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದು ಇಂತಹ ಹಿಮನದಿ ಕುಸಿತ ಹಾಗೂ ಪ್ರವಾಹಕ್ಕೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯ ದುರ್ಗಮ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭೋಟೇಕೋಶಿ, ತ್ರಿಶೂಲಿ ಮತ್ತು ನಾರಾಯಣಿ ನದಿ ದಂಡೆಯ ಜನರಿಗೆ ಸುರಕ್ಷಿತವಾಗಿರಲು ಸೂಚಿಸಲಾಗಿದೆ.


