ದೇಶಾದ್ಯಂತ ಜಾರಿಗೆ ತರಲಾದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಟ್ಟಿರುವುದರ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗವು (ECI) ತೀವ್ರ ಹಿನ್ನಡೆ ಅನುಭವಿಸಿದೆ. ಈ ಅಕ್ರಮಗಳ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಎಸ್‌ಐಆರ್ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಲು ‘ವಿಶೇಷ ಅಭಿಯಾನ’ ನಡೆಸುವಂತೆ ರಾಜ್ಯ ಚುನಾವಣಾಧಿಕಾರಿಗಳಿಗೆ (CEO) ಆಯೋಗವು ತುರ್ತು ನಿರ್ದೇಶನ ನೀಡಿದೆ.
‘ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ಸ್ಫೋಟಕ ತನಿಖಾ ವರದಿಯ ಪ್ರಕಾರ, ದೇಶದ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಕಡಿತಗೊಳಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಆಯೋಗದ ಆಂತರಿಕ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯ ತಂತ್ರಾಂಶವಾದ ‘ECINet’ ಅನ್ನು ಕೇಂದ್ರೀಕರಿಸಲಾಗಿದೆ ಎಂದು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ 14 ಬಾರಿ ಬರೆದ ಸಾಲು ಸಾಲು ಆಕ್ಷೇಪಣಾ ಪತ್ರಗಳು ಬಹಿರಂಗಗೊಂಡು ಆಯೋಗದ ಬಣ್ಣ ಬಯಲಾಗಿತ್ತು.
ಈ ಒತ್ತಡಕ್ಕೆ ಮಣಿದಿರುವ ಆಯೋಗದ ಕಾರ್ಯದರ್ಶಿ ಸೆಪ್ಟೆಂಬರ್ 29 ರಂದು ಎಲ್ಲಾ ಸಿಇಒಗಳಿಗೆ ಲಿಖಿತ ಸೂಚನೆ ಕಳುಹಿಸಿದ್ದು, ಗುರುವಾರ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಇದ್ದ ಮತದಾರರ ಪಟ್ಟಿ ಹಾಗೂ ನಂತರದ ಪಟ್ಟಿಯನ್ನು ತಾಳೆ ಮಾಡಿ, ಅನ್ಯಾಯವಾಗಿ ಹೊರಗುಳಿದಿರುವ, ಮೃತಪಟ್ಟಿರದ ಹಾಗೂ ನಕಲಿ ಅಲ್ಲದ ಅರ್ಹ ಮತದಾರರ ಮನೆಗಳಿಗೆ ಬಿಎಲ್‌ಒ (BLO) ಸಿಬ್ಬಂದಿ ನೇರವಾಗಿ ಭೇಟಿ ನೀಡಿ ಅವರಿಂದ ಹೊಸದಾಗಿ ಫಾರಂ-6 ಭರ್ತಿ ಮಾಡಿಸಿಕೊಂಡು ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ ನೆರವು ಪಡೆಯುವಂತೆಯೂ ತಿಳಿಸಲಾಗಿದೆ.
ಅಲ್ಲದೆ, ಹೊಸ ಮತದಾರರ ನೋಂದಣಿಗೆ ತರಲಾಗಿದ್ದ ಹಾಗೂ ಆಯುಕ್ತ ಸುಖ್ಬೀರ್ ಸಿಂಗ್ ಸಂಧು ಅವರಿಂದ ‘ಕಾನೂನುಬಾಹಿರ’ ಎಂದು ಕರೆಸಿಕೊಂಡಿದ್ದ ‘ಫಾರಂ-6’ ನಲ್ಲಿದ್ದ ವಿವಾದಾತ್ಮಕ ಹೆಚ್ಚುವರಿ ಷರತ್ತನ್ನು ಈಗ ಹಿಂಪಡೆಯಲಾಗಿದೆ. ಕೇವಲ ಎಸ್‌ಐಆರ್ ಹಂತಕ್ಕೆ ಮಾತ್ರ ಆ ಷರತ್ತು ಸೀಮಿತವಾಗಿದ್ದು, ಇನ್ಮುಂದೆ ಸಾಮಾನ್ಯ 1960ರ ನಿಯಮಾವಳಿಯಂತೆಯೇ ಸರಳ ಫಾರಂ-6 ಬಳಕೆಯಾಗಲಿದೆ. ಇನ್ನೊಂದೆಡೆ, ಎಸ್‌ಐಆರ್ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿರುವ ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಆತುರವಾಗಿ ಡಿಲೀಟ್ ಮಾಡದಂತೆ, ಪ್ರತಿಯೊಬ್ಬರಿಗೂ ದಾಖಲೆ ಸಲ್ಲಿಸಲು ಸೂಕ್ತ ಅವಕಾಶ ಮತ್ತು ವಿಚಾರಣೆ ನಡೆಸಿಯೇ ನಿರ್ಧಾರ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.


