ಬೆಂಗಳೂರು, ಅ.10: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಎಐಡಿಎಸ್‌ಒ, ಕೆವಿಎಸ್, ಎಐಎಸ್‌ಎಫ್, ಎಸ್‌ಎಫ್‌ಐ, ಎಐಎಸ್‌ಎ ಸೇರಿದಂತೆ ಇನ್ನಿತರೆ ಎಡ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ವೇಳೆ ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆವಿಎಸ್ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೆರೆ, ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿರುವುದೇ ಯುವಜನರ ಹೋರಾಟದ ಯಶಸ್ಸಿನ ಸಂಕೇತವಾಗಿದೆ. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸುವುದಕ್ಕೆ ಸೀಮಿತವಾದ ವ್ಯವಸ್ಥೆಯಲ್ಲ. ಜನರು ಪ್ರತಿದಿನವೂ ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು, ಆಡಳಿತದ ನಡೆಗಳನ್ನು ಪ್ರಶ್ನಿಸುವುದು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಪ್ರಮುಖ ಭಾಗಗಳಾಗಿವೆ ಎಂದರು.
ಪ್ರತಿಭಟನೆ ನಡೆಸುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ತಮ್ಮ ಬೇಡಿಕೆಗಳಿಗಾಗಿ ಸಂಘಟಿತವಾಗಿ ಹೋರಾಡುವುದು ಪ್ರಜಾಪ್ರಭುತ್ವದ ಹಕ್ಕುಗಳಾಗಿವೆ. ಇಂತಹ ಹೋರಾಟಗಳನ್ನು ಪೊಲೀಸ್ ಕ್ರಮಗಳ ಮೂಲಕ ಹತ್ತಿಕ್ಕಲು ಪ್ರಯತ್ನಿಸುವುದರಿಂದ ಜನರ ಪ್ರಶ್ನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೋದಿ ಮತ್ತು ಶಾ ಎಷ್ಟೇ ಬಲಿಷ್ಠರಾಗಿದ್ದರೂ ತಮ್ಮ ಹೋರಾಟವನ್ನು ಮುಂದುವರಿಸಲು ಹಿಂಜರಿಯುವುದಿಲ್ಲ. ಹೋರಾಟಗಳನ್ನು ಹತ್ತಿಕ್ಕುವ ಯಾವುದೇ ಸರಕಾರ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ ಎಂದು ಸರೋವರ್ ಬೆಂಕಿಕೆರೆ ತಿಳಿಸಿದರು.
ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ ಮಾತನಾಡಿ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ದೇಶದಲ್ಲಿ ಹುಟ್ಟಿರುವ ನಾವು ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸುವುದಿಲ್ಲ. ಸರಕಾರ ಹಾಗೂ ವ್ಯವಸ್ಥೆ ಮಾಡಿರುವ ಎಲ್ಲ ಅಪರಾಧಗಳಿಗೂ ತಕ್ಕ ಪಾಠ ಕಲಿಸುತ್ತೇವೆ ಎಂಬ ಸಂದೇಶವನ್ನು ಸಾರಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೇವೆ ಎಂದು ತಿಳಿಸಿದರು.
ಶಿವಸುಂದರ್ ಮಾತನಾಡಿ, ನಮ್ಮ ಹೋರಾಟ ಜ್ಞಾನೇಶ್ ಕುಮಾರ್ ರಾಜೀನಾಮೆ ಅಥವಾ ಎಸ್‌ಐಆರ್ ರದ್ದಾದ ಮಾತ್ರಕ್ಕೆ ನಿಲ್ಲಬಾರದು. ಇಂದು ಸರಕಾರ ಸಂವಿಧಾನವನ್ನು ಆಟದ ಗೊಂಬೆಯನ್ನಾಗಿ ಮಾಡಿಕೊಂಡು ಪ್ಯಾಸಿವಾದವನ್ನು ಹೇರುತ್ತಿದೆ. ಪ್ಯಾಸಿಸಂ ಅಂದರೆ ಆರೆಸ್ಸೆಸ್ ಹಾಗೂ ಬಿಜೆಪಿ ಅಷ್ಟೇ ಅಲ್ಲ. ಅದು ಆಳುವ ವರ್ಗದ ಸಿದ್ಧಾಂತದ ಆಳ್ವಿಕೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಧಮನಕಾರಿಯೇ. ಇವರ ವಿರುದ್ಧ ಕೇವಲ ಚುನಾವಣೆಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷರಾದ ಬಸವರಾಜ್, ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್, ಎಐಡಿಎಸ್‌ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆಎಸ್, ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜು, ಕೆವಿಎಸ್‌ನ ದುರ್ಗೇಶ್, ಎಐಎಸ್‌ಎನ ಗಂಗಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


