Homeಅಂಕಣಗಳುಪರಿಘ 2: ಕಾಲಕ್ಕೆ ತಕ್ಕಂತೆ ನೆಡೆಯಬೇಕು; ಬಿಡುವಿನ ಸಮಯ ಸದ್ಬಳಕೆಯಾಗಬೇಕು

ಪರಿಘ 2: ಕಾಲಕ್ಕೆ ತಕ್ಕಂತೆ ನೆಡೆಯಬೇಕು; ಬಿಡುವಿನ ಸಮಯ ಸದ್ಬಳಕೆಯಾಗಬೇಕು

- Advertisement -
- Advertisement -

ಕಾಲದ ಆರಂಭ ಬಿಂದು ಹಾಗೂ ಕಾಲದ ಅಂತಿಮ ಕ್ಷಣ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಕ್ರಿಸ್ತ ಪೂರ್ವದ ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಕಥೆಯನ್ನು ನಾವು ಮಹಾಭಾರತ, ರಾಮಾಯಣ ಇತ್ಯಾದಿ ಗ್ರಂಥಗಳ ಮೂಲಕ ಊಹಿಸಿದ್ದೇವೆ. ಇನ್ನು ಡಾರ್ವಿನ್ ಆದಿಯಾಗಿ ವಿಜ್ಞಾನಿಗಳು ಭೂಮಿಯ ಮೇಲೆ ದೊರೆತ ಪ್ರಾಚೀನ ಪಳಿಯುಳಿಕೆಗಳ ಅಧ್ಯಯನ ಮಾಡಿ ಲಕ್ಷಾವಧಿ ವರ್ಷಗಳ ಹಿಂದಿನ ಕಾಲದ ಕಥೆಯನ್ನು ಊಹಿಸಿದ್ದಾರೆ ಹಾಗೂ ಗ್ರಂಥಗಳ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ. ಇಷ್ಟಾಗಿಯೂ ಇದೆಲ್ಲ ಮಾನವನ ವಿಕಾಸದ ಸುತ್ತ ಹೆಣೆದ ಕಥೆಯೇ ಆಗಿದೆ, ಹೊರತಾಗಿ ಕಾಲದ ಆರಂಭ ಬಿಂದುವನ್ನು ತಿಳಿಸುವ ನಿಖರ ತಥ್ಯಗಳಲ್ಲ. ಆದರೆ ಭೂತಕಾಲವನ್ನು ಕೆದಕುವ ಮನುಷ್ಯನ ಆಸಕ್ತಿ ಮಾತ್ರ ಚೂರೂ ಕುಂದಿಲ್ಲ, ಇಂದಿಗೂ ಅಂತಹ ಪ್ರಯೋಗ, ಪ್ರಯತ್ನಗಳು ನಡೆಯುತ್ತಲೇ ಇವೆ. ಭೂತವಷ್ಟೇ ಅಲ್ಲ ಭವಿಷ್ಯತ್ ಕಾಲವನ್ನು ಅರಿಯುವ ಕುತೂಹಲವೂ ಮನುಷ್ಯನನ್ನು ಸದಾಕಾಲ ಶೋಧಕ್ಕೀಡು ಮಾಡಿದೆ. ಜ್ಯೋತಿಷ್ಯಶಾಸ್ತ್ರಗಳು, ಗ್ರಹ-ನಕ್ಷತ್ರಗಳ ಚಲನೆಯ ಮೂಲಕ ಭವಿಷ್ಯದಲ್ಲಿ ಇರುವ ನಿಗೂಢವನ್ನು ಭೇದಿಸುವ ಪ್ರಯತ್ನ ಮಾಡುತ್ತವೆ. ನಾಸ್ಟ್ರೋಡಾಮಸ್‌ನಿಂದ ಹಿಡಿದು ಹಲವಾರು ವಿದ್ವಾಂಸರು ಭವಿಷ್ಯದ ಅಗೋಚರವನ್ನು ಊಹಿಸುವ, ದಾಖಲಿಸುವ ಯತ್ನ ಮಾಡಿದ್ದೂ ನಮ್ಮ ಮುಂದೆ ಇದೆ. ಭೂತಕಾಲವಾಗಲಿ ಅಥವಾ ಭವಿಷ್ಯತ್ ಕಾಲವಾಗಲಿ ಎರಡೂ ಸದ್ಯ ನಮ್ಮ ಕೈಯಲ್ಲಿ ಇಲ್ಲ. ಆದರೆ ಒಂದರ ಪ್ರಭಾವ ಒಂದರ ಮೇಲೆ ಇದ್ದೇ ಇದೆ. ಭೂತ-ಭವಿಷ್ಯವನ್ನು ಬೇರ್ಪಡಿಸಿ ನೋಡಲಾಗದು. ಈ ಎರಡೂ ಅಂಶಗಳನ್ನು ಜೋಡಿಸುವ ವರ್ತಮಾನ ನಮ್ಮ ಕೈಲಿದೆ. ಅಂದರೆ ಕಾಲಪ್ರವಾಹದ ಸದ್ಯದ ಕ್ಷಣ ಮಾತ್ರ ನಮ್ಮ ಜೊತೆಗಿದೆ, ಆದರೆ ಈ ಕ್ಷಣವೂ ನಮ್ಮ ವಶದಲ್ಲಿದೆ ಎಂದು ಹೇಳುವಂತಿಲ್ಲ. ಭೂತ-ಭವಿಷ್ಯದ ಅದೃಶ್ಯ ಸರಪಳಿಯಲ್ಲಿ ಇದೂ ಕೂಡ ಬಂಧಿತವಾಗಿದೆ. ಹಾಗೆಂದ ಮಾತ್ರಕ್ಕೆ ವರ್ತಮಾನವೆಂಬುದು ಅಸಹಾಯಕವಲ್ಲ. ಅಲ್ಲಿ ನಾವಿನ್ಯಕ್ಕೆ, ಸೃಜನಕ್ಕೆ ಅವಕಾಶ ಇದ್ದೇ ಇದೆ. ಈ ಅವಕಾಶವೇ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ಇದೆಲ್ಲವೂ ಕಾಲದ ಕೈಚಳಕ.

ಬಹುಶಃ ಮುಂದಿನ ದಿನಗಳಲ್ಲಿ ಕಾಲವನ್ನು ಕೊರೊನಾ ಪೂರ್ವಕಾಲ ಹಾಗೂ ಕೊರೊನಾ ಉತ್ತರಕಾಲ ಎಂದು ವಿಂಗಡಿಸುವ ಸ್ಥಿತಿ ಬರಬಹುದು. ಖಂಡಿತವಾಗಿಯೂ ವರ್ತಮಾನದಲ್ಲಿನ ಕೊರೊನಾ ಮುಂದೆ ಭೂತಕಾಲವಾಗಿ ಎಣಿಸಲ್ಪಟ್ಟರೂ ಅದು ನಮ್ಮ ಮುಂಬರುವ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ಕೊರೊನಾ ಮನುಷ್ಯನ ಸಹಜವರ್ತನೆಗಳ ಮೇಲೆ ನಿರ್ಬಂಧ ಹೇರಿದೆ, ಹಲವಾರು ಹೊಸ ಪಾಠಗಳನ್ನು ಕಲಿಸಿದೆ. ಒಂದೊಮ್ಮೆ ಕಾಲ ನೀಡಿದ ಮುಕ್ತತೆಯನ್ನು ಇಂದು ಅದೇ ಕಾಲವೇ ಕಸಿದುಕೊಂಡಂತಿದೆ. ಪರಿಸ್ಥಿತಿ ಗಂಭೀರವಾಗಿದೆ, ಹಾಗೆಂದು ತೀರ ಹತಾಶಗೊಳ್ಳುವುದಲ್ಲ, ಎಲ್ಲ ದುರಿತಗಳು ಕೊನೆಗೊಂಡಂತೆ ಈ ಕಾಲವೂ ಸರಿಯುತ್ತದೆ. ಕಾಲದ ಬಗ್ಗೆ ಮಾತಾಡುವಾಗ ಎರಡು ರಂಜಕವಾದ ಅಂಶಗಳನ್ನು ನಾವು ಗಮನಿಸಬಹುದು. ನಾವು ನಮ್ಮ ಕೆಲಸ-ಕಾರ್ಯಗಳಲ್ಲಿ ಎಷ್ಟೊಂದು ವ್ಯಸ್ತರಾಗಿರುತ್ತೇವೆ ಅಂದರೆ ನಮಗೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು, ಸಮಯದ ಉಳಿತಾಯ ಹೇಗೆ ಮಾಡುವುದು ಎಂಬುದೇ ತಿಳಿಯದಾಗುತ್ತದೆ. ಒಮ್ಮೊಮ್ಮೆ ಇದರ ತದ್ವಿರುದ್ಧವಾದ ಸ್ಥಿತಿಯೂ ಉದ್ಭವಿಸುತ್ತದೆ, ಆಗ ಸಮಯವನ್ನು ಹೇಗೆ ಕಳೆಯುವುದು, ಈ ದುರಿತಕಾಲವನ್ನು ಹೇಗೆ ನೂಕುವುದು ಎಂಬ ಪ್ರಶ್ನೆ ಏಳುತ್ತದೆ. ನಾವು ಒಮ್ಮೊಮ್ಮೆ ಸಮಯವನ್ನು ವ್ಯಯಿಸಲೆಂದು ಟಿವ್ಹಿ, ಮೋಬೈಲ್ ಮೊರೆಹೋಗುತ್ತವೆ, ಒಮ್ಮೊಮ್ಮೆ ಟಿವ್ಹಿ, ಮೊಬೈಲ್‌ಗಳ ಬಳಕೆಯೇ ನಮ್ಮ ಕಾಲವನ್ನು, ಸಮಯವನ್ನು ಹಾಳು ಮಾಡುತ್ತದೆ. ಹಾಗೆಂದು ಎಲ್ಲರಿಗೂ ಇದು ಅನ್ವಯಿಸುವುದಿಲ್ಲ. ತಮ್ಮ ಕೆಲಸಗಳನ್ನು ಅವುಗಳ ನಿರ್ದಿಷ್ಠ ಸಮಯಕ್ಕೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಕಾಲಜ್ಞಾನಿಗಳೂ, ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಕುಶಲಕರ್ಮಿಗಳೂ ನಮ್ಮ ನಡುವೆ ಇದ್ದಾರೆ.

ನಾವು ನಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೂ ಪರವಾಗಿಲ್ಲ, ಇತರೆ ಎಲ್ಲರ ಕೆಲಸಗಳು ಮಾತ್ರ ನಮಗೆ ಸರಿಯಾದ ಸಮಯಕ್ಕೆ ಆಗಲೇಬೇಕೆಂಬ ಅಪೇಕ್ಷೆ ಇರುತ್ತದೆ. ರೈಲಿಗಾಗಿ ದಾರಿಕಾಯುತ್ತಿರುವಾಗ ರೈಲು ಎರಡು ತಾಸು ತಡವಾಗಲಿದೆ ಅಂತ ಗೊತ್ತಾದರೆ ನಮಗೆ ಅಸಮಾಧಾನವಾಗುತ್ತದೆ. ಆ ಎರಡು ತಾಸುಗಳನ್ನು ಹೇಗೆ ಕಳೆಯುವುದು ಎಂಬ ಚಿಂತೆ ಶುರುವಾಗುತ್ತದೆ, ಕಾಲಹರಣಕ್ಕೆ ಏನೋ ಒಂದು ಉಪಾಯ ಕಂಡುಕೊಳ್ಳುತ್ತೇವೆ. ಆದರೆ ದಿನಾಲೂ ತಪ್ಪದೆ ಅರ್ಧ ತಾಸು ವ್ಯಾಯಾಮ ಮಾಡುವದು ನಮ್ಮಿಂದ ಆಗುವುದಿಲ್ಲ, ಏಕೆ? ಸಮಯ ಸಿಗುತ್ತಿಲ್ಲ ಎಂಬ ನೆಪ. ಇದೆ ಅಂತ ಅಂದುಕೊಂಡರೆ ಸಮಯ ಇದೆ, ಇಲ್ಲ ಅಂತ ಭಾವಿಸಿದರೆ ಸಮಯ ಇಲ್ಲ. ಮನಸ್ಸಿದ್ದಲ್ಲಿ ಮಾರ್ಗ ಎಂದು ಹೇಳುವುದು ಸುಳ್ಳಲ್ಲ, ತನಗೆ ಇಷ್ಟವಾದ ವಿಷಯವಾಗಿದ್ದರೆ ಮನುಷ್ಯ ಹೇಗೋ ಸಮಯ ಹೊಂದಿಸಿಕೊಳ್ಳುತ್ತಾನೆ, ಬೇಡವಾದ ವಿಷಯ ಇದ್ದರೆ ದಿನವಿಡಿ ಕೆಲಸವಿಲ್ಲದೆ ಬಿದ್ದುಕೊಂಡರೂ ಸಮಯವಿಲ್ಲ ಎಂಬ ನೆಪ ಹೂಡುತ್ತಾನೆ.

ಕೊರೊನಾದ ಈ ಕಾಲದಲ್ಲಿ ನಾವೆಲ್ಲ ಸುಮಾರು ನಾಲ್ಕು ತಿಂಗಳು ಮನೆಯಲ್ಲಿದ್ದೇವೆ. ಕೆಲವು ದಿನ ವರ್ಕ ಫ್ರಮ್ ಹೋಮ್ ಇತ್ತು. ಈಗ ಅದೂ ಇಲ್ಲ. ಈಗ ಬಹುಶಃ ಎಲ್ಲರೂ ಬಿಡುವು ಮಾಡಿಕೊಂಡಿದ್ದಾರೆ ಅಥವಾ ಕಾಲವೇ ಒಂದು ಬ್ರೆಕ್ ನೀಡಿದೆ. ಮನೆಯಲ್ಲಿ ಇದ್ದುಕೊಂಡು ಬಹಳ ದಿನಗಳಿಂದ ಮಾಡಬೇಕು ಎಂದುಕೊಂಡರೂ ಮಾಡಲಾಗದೇ ಉಳಿದಿದ್ದ ಕೆಲಸಗಳನ್ನು ಮಾಡುವ ಅವಕಾಶವಿದು. ಇದನ್ನು ಎಷ್ಟು ಜನ ಸದುಪಯೋಗ ಪಡಿಸಿಕೊಂಡರು? ಕೊರೊನಾದ ಈ ಕಾಲದಲ್ಲಿ ನಾವು ಏನೇನು ಮಾಡಿದೆವು? ಅಂತಹ ಯಾವುದೇ ಕೆಲಸ ಇರದಿದ್ದಾಗಲೂ ನಾವು ನಮ್ಮ ಆಸಕ್ತಿಯ ಹಲವಾರು ವಿಷಯಗಳನ್ನು ಕಲಿತುಕೊಳ್ಳಬಹುದಿತ್ತು, ಹೊಸ ಭಾಷೆಯೊಂದನ್ನು ಕಲಿಯಬಹುದಿತ್ತು, ಫಿಟನೆಸ್ ವೃದ್ಧಿಸಿಕೊಳ್ಳಲು ಮನೆಯಲ್ಲಿಯೇ ಚೆನ್ನಾಗಿ ವ್ಯಾಯಾಮ ಮಾಡಬಹುದಿತ್ತು, ದೇಶವಿದೇಶಗಳ ಇತಿಹಾಸ, ಭೂಗೋಳ ಅರಿಯಬಹುದಿತ್ತು, ಮಹಾನ್ ಲೇಖಕರ ಕೃತಿಗಳನ್ನು ಓದಬಹುದಿತ್ತು, ಬಹಳ ಸಮಯದಿಂದ ಯೋಜಿಸಿದ್ದ ಕಾದಂಬರಿಯೊಂದನ್ನು ಬರೆದು ಮುಗಿಸಬಹುದಿತ್ತು ಎಂಬ ಹಲವು ಅಂಶಗಳ ಪಟ್ಟಿಯೇ ಸಿದ್ಧವಾಗುತ್ತದೆ. ಕುಶಲಕರ್ಮಿಗಳನ್ನು ಹೊರತುಪಡಿಸಿ, ಬಹುಶಃ ನಾವು ಯಾರೂ ಇವೆಲ್ಲವನ್ನು ಮಾಡಲಿಲ್ಲ ಅನಿಸುತ್ತದೆ. ಮೊಬೈಲ್‌ಗೆ ಅಡಿಕ್ಟ್ ಆಗಿರದೇ ಇದ್ದ ಕೆಲವರೂ ಈ ಬಿಡುವಿನ ದಿನಗಳಲ್ಲಿ ಎಂದೂ ಇಲ್ಲದಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದನ್ನು ಗಮನಿಸಿದ್ದೇನೆ. ಅತ್ಯಂತ ಚುರುಕಾಗಿದ್ದ ಕೆಲವರು ಸೋಮಾರಿಗಳಂತೆ ಹಗಲಿರುಳು ಹಾಸಿಗೆಯಲ್ಲಿ ಹೊರಳಾಡುವುದನ್ನು ನೋಡಿದ್ದೇನೆ. ಬಿಡುವಿನ ಸಮಯ ಅವರಲ್ಲಿನ ಕ್ರಿಯಾಶಕ್ತಿಯನ್ನು ನಾಶ ಮಾಡಿದೆ ಅನಿಸಿತು. ಆದರೆ ಆ ಕ್ರಿಯಾಶಕ್ತಿಯನ್ನು ಪುನಃ ಜಾಗೃತಗೊಳಿಸಬಹುದು, ಮತ್ತೆ ಆಲಸ್ಯ ಕೊಡವಿ ಎದ್ದೇಳಬಹುದು, ಇನ್ನೂ ಮಾಡದೇ ಉಳಿದಿರುವ ಕೆಲಸಗಳನ್ನು ಈಗಲೂ ಪ್ರಾರಂಭಿಸಬಹುದು, ಇನ್ನೂ ಕಾಲ ಮಿಂಚಿಲ್ಲ.

ನಾವು ಈ ಕಾಲದಲ್ಲಿ ಏನಾದರೂ ಹೊಸದನ್ನು ಮಾಡಲಿ ಬಿಡಲಿ, ಆದರೆ ಮಾಡಲೇ ಬೇಕಾದ ಅಂಶವೊಂದಿದೆ. ಬಹುಶಃ ಮನೆಯ ಸದಸ್ಯರೆಲ್ಲರೂ ಈ ದಿನಗಳಲ್ಲಿ ಒಂದುಗೂಡಿದ್ದಾರೆ. ಹೊಟ್ಟೆಪಾಡಿಗೆಂದು ಬೇರೆ ಬೇರೆ ಊರಲ್ಲಿದ್ದ ಸೋದರರೂ ಮನೆಗೆ ಮರಳಿದ್ದಾರೆ, ಮನೆಗಳು ತುಂಬಿ ತುಳುಕುತ್ತಿವೆ. ಇದು ಕುಟುಂಬದ ಮನಃಶಕ್ತಿಯನ್ನು ವೃದ್ಧಿಸುವ ಕಾಲ, ಸಹೋದರರು, ಬಂಧುಗಳು ಜೊತೆಯಾಗಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುವ, ಪ್ರೀತಿಯಿಂದ ನೋಡಿಕೊಳ್ಳುವ, ಸ್ನೇಹ ಹಂಚಿಕೊಳ್ಳುವ ಕಾಲ, ಕೂಡುಕುಟುಂಬದ ಬೇರುಗಳು ಗಟ್ಟಿಯಾಗುವ ಕಾಲ. ಮನೆಯ ಮಕ್ಕಳು ಹಿರಿಯನ್ನು ತಿಳಿದುಕೊಳ್ಳಲು, ಹಿರಿಯರು ಮನೆಯ ಎಲ್ಲ ಮಕ್ಕಳ ಮನಸ್ಸುಗಳನ್ನು ಅರಿತುಕೊಳ್ಳಲು ದೊರಕಿದ ಸುಸಂಧಿಯಿದು. ಕೊರೊನಾ ಕಾಲ ದುರಿತಕಾಲ ಎಂಬುದು ನಿಜ. ಆದರೆ ಈ ಮೂಲಕ ದೊರೆತ ಬಿಡುವಿನಿಂದಾಗಿ ಪರಿವಾರಗಳಲ್ಲಿಯ, ಸೋದರರಲ್ಲಿಯ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುವಂತಿದ್ದರೆ ಇದು ಸುಕಾಲವೇ ಹೌದು.

ಕೊರೊನಾದ ಭಯವನ್ನು ಇಮ್ಮಡಿಗೊಳಿಸುವಲ್ಲಿ ಟಿವ್ಹಿಗಳ ಪಾತ್ರವೇ ಹೆಚ್ಚು ಇದೆ. ಟಿವ್ಹಿಗಳಲ್ಲಿ ಪ್ರಸಾರವಾಗುತ್ತಿರುವ ಹಿಂಸಕ ಸುದ್ದಿಗಳು, ಅಮಾನವೀಯ ದೃಶ್ಯಗಳು ಎಂಥವರ ಮನಸ್ಸನ್ನು ಕಲಕಬಹುದು. ಇನ್ನು ಮನೆಯ ಮಕ್ಕಳು ಇದನ್ನು ಕೊರೊನಾದ ಬಿಡುವಿನ ಕಾಲವೆಂದು ಇಡೀ ದಿನ ಟಿವ್ಹಿಯ ಮುಂದೆ ಕುಳಿತರೆ ಅವರ ಮುಗ್ಧ, ನಿಶ್ಪಾಪ ಮನಸ್ಸುಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವಾಗಬಹುದು, ಅವರ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಬಹುದು. ನಾವು ಈ ದಿನಗಳಲ್ಲಿ ಮನೆಯ ಮಕ್ಕಳನ್ನು ಎದುರಿಗೆ ಕೂಡಿಸಿಕೊಂಡು ಅವರಲ್ಲಿನ ಕಲಾಗುಣಗಳನ್ನು ಪ್ರೋತ್ಸಾಹಿಸಬಹುದು, ಅವರಿಗೆ ದಿನಕ್ಕೆ ಒಂದೆರಡು ಕಥೆಗಳನ್ನು ಹೇಳಬಹುದು, ಅವರ ಮೃದುಮನವನ್ನು ಇನ್ನಷ್ಟು ಉಲ್ಲಸಿತಗೊಳಿಸುವ ಚಟುವಟಿಕೆಗಳನ್ನು ಮಾಡಬಹುದು. ಅವರಲ್ಲಿನ ಸೃಜನಶೀಲತೆಯನ್ನು, ಕ್ರಿಯಾಶೀಲತೆಯನ್ನು ಹೆಚ್ಚಿಸುವ ಉಪಾಯಗಳನ್ನು ಮಾಡಬಹುದು. ಇಂದು ಮಕ್ಕಳು ಖಂಡಿತವಾಗಿಯೂ ಶಾಲೆ, ಶಿಕ್ಷಕರು, ಗೆಳೆಯರಿಂದ ಅಗಲಿದ್ದಾರೆ, ಪುನಃ ಎಲ್ಲರನ್ನು ಸೇರುವ ಬಯಕೆ ಅವರಲ್ಲಿ ಖಂಡಿತ ಇರುತ್ತದೆ. ಬೇಗ ಶಾಲೆ ಶುರುವಾಗಬೇಕು ಎಂದು ಅವರು ಬಯಸುತ್ತಾರೆ. ಆದರೆ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಖಂಡಿತವಾಗಿಯೂ ಹಿಂದೆಮುಂದೆ ನೋಡುತ್ತಾರೆ. ಹೀಗೆ ಬದುಕೆಂಬ ವರ್ತಮಾನಕಾಲದ ಜೋಕಾಲಿ ಭೂತಕಾಲ ಹಾಗೂ ಭವಿಷ್ಯಕಾಲ ಎಂಬ ಎರಡು ಹಗ್ಗದ ತುದಿಗಳ ನಡುವೆ ಜೀಕುತ್ತಿದೆ. ಇದು ನಿರಾಶಗೊಳ್ಳುವ ಸಮಯವಲ್ಲ, ಜಾಗೃತೆಯಿಂದ ಮತ್ತೆ ಬದುಕನ್ನು ಕಟ್ಟುವ ಕಾಲ. ಕೊರೊನಾ ತಂದಿಟ್ಟ ಅವಘಢಗಳ ಜೊತೆ ಬದುಕುತ್ತ ಬಾಳು ಸಿಂಗರಿಸುವ ಹೊತ್ತು. ಅದಕ್ಕೆಂದೇ ಚಿ. ಉದಯಶಂಕರ್ ಅವರು ಬರೆದ ಈ ಸಾಲುಗಳು ಸರ್ವಕಾಲಿಕ ಸತ್ಯ ಅನಿಸುತ್ತವೆ. ನಾವು ಕಾಲಕ್ಕೆ ತಕ್ಕಂತೆ ನಡಿಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು.

– ಗಿರೀಶ ಜಕಾಪುರೆ. ಇವರು ಹೊಸತಲೆಮಾರಿನ ಕತೆಗಾರರರು, ಅನುವಾದಕರಾಗಿದ್ದು ಎರಡು ಭಿನ್ನ ಭಾಷೆಯ ಪರಂಪರೆಗಳನ್ನು ಪರಿಚಯಿಸುವ ಮತ್ತು ಬೆಸೆಯುವ ಅಂಕಣಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮೈಂದರ್ಗಿಯಲ್ಲಿ ವಾಸವಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...