ಫಾರಿನ್ ಹೊಲೆಯ

ಕಥೆ

| ಹನುಮಂತ ಹಾಲಿಗೇರಿ |

ಅವತ್ತು ಕ್ಯಾಮರೂನ್ ಬಂದ ಎರಡನೇ ದಿನ ಅನ್ಸುತ್ತೆ. ಹಿತವಾದ ಸಂಜೆ. ಮನೋಹರ ಅವತ್ತು ಲ್ಯಾಪ್‍ಟಾಪಿನ ಮೂತಿಗೆ ತನ್ನ ಮೂತಿ ಸಿಗಿಸಿಕೊಂಡು ಲೋಕವೇ ತನ್ನ ಮೇಲೆ ಬಿದ್ದವರ ಹಾಗೆ ಕುಂತಿದ್ದ. “ಹಾಯ್ ಡ್ಯೂಡ್, ವೇರ್ ಇಸ್ ಬೀಫ್ ಹೋಟೆಲ್ ಇನ್ ದಿಸ್ ಸಿಟಿ?” ಅನ್ನೋ ಇಂಗ್ಲೀಷ್ ಶಬ್ದಗುಚ್ಚವೊಂದು ಕಿವಿ ಮೇಲೆ ಅಪ್ಪಳಿಸುತ್ತಿದ್ದಂತೆಯೇ ಗಾಬರಿಯಿಂದ ತಲೆ ಮೇಲೆ ಎತ್ತಿದ.

ಎದುರಿನಲ್ಲಿ ಆರಡಿ ಎತ್ತರದ ತೆಳು ಗುಲಾಬಿ ಬಣ್ಣದ, ಹರ್ಕುಮುರ್ಕು ಕೆಂಚಗೂದಲಿನ, ಮೊಣಕಾಲುಗಂಟ ಬರ್ಮುಡಾ, ಬನಿಯನ್ನಿನಂತೆ ಟೀಶರ್ಟ್‍ವೊಂದನ್ನು ಧರಿಸಿದ್ದ ಕ್ಯಾಮರೂನ್  ನಿಂತಿದ್ದ.

ಮನೋಹರ ಒಮ್ಮೆಲೆ ದಂಗಾಗಿ ಅಕ್ಕಪಕ್ಕ ನೋಡಿದ. ಪಕ್ಕದ ಚೇಂಬರಿನಲ್ಲಿ ಸವಿತಾ ಜೋಷಿ, ರಮಾಕಾಂತ ಹಿರೇಮಠ ಮತ್ತಿತರರು ಕಾಣಲಿಲ್ಲ. ಸ್ವಲ್ಪ ಸಮಾಧಾನವಾಯಿತು. ಒಮ್ಮೆಲೆ ಏನು ಹೇಳಬೇಕೆಂಬುದು ಗೊತ್ತಾಗದೆ “ಸರ್, ಐ ಡೊಂಟ್ ನೋ ಸರ್” ಅಂದ. “ಇಲ್ಲ ಹೋದಸಲ ಬಂದಿದ್ನಲ್ಲ, ಜೇಕ್ ಹೇಳಿದ್ದಾನೆ. ಇಲ್ಲೆ ಎಲ್ಲೋ ಸಿಗುತ್ತೆ ಅಂತ. ಪ್ಲೀಸ್ ನನಗೆ ತಡೆದುಕೊಳ್ಳಲಿಕ್ಕೆ ಆಗ್ತಿಲ್ಲ. ದಯವಿಟ್ಟು ಪತ್ತೆ ಹಚ್ಚು. ನಾನು ಬೀಫ್ ತಿನ್ನಲೇಬೇಕು” ಅಂದ ಕ್ಯಾಮರೂನ್ ಮೊಬೈಲಿನಲ್ಲಿ ತನ್ನ ಬೆರಳಾಡಿಸುತ್ತಾ ನಿಂತುಕೊಂಡ.

ಮನೋಹರನಿಗೆ ಅವನನ್ನು ಹಿಡಿದು ಜಾಡಿಸಿ ಒದ್ದಬಿಡಬೇಕು ಅಂತ ಅನಿಸ್ತು. ಗುಮ್ಮಗೈ ಮಾಡಿ ಟೇಬಲ್ ಕುಟ್ಟಿದ. ಮುಂಗೈ ಮುರಿದಂತಾಗಿ “ಆಂ..” ಅಂತ ನರಳಿದ. ಆತನನ್ನು ಕರೆದು ಮುಖಕ್ಕೆ ಉಗಿದಂತೆ `ನನ್ನ ಕೈಲಿ ಹುಡುಕಕ್ಕೆ ಆಗಲ್ಲ’ ಅಂತ ಹೇಳಬೇಕೆನಿಸಿತು. ಆದರೆ, ಡೈರೆಕ್ಟರ್ ಮಾಂಕ್ಳೆ ಅವರು “ನಮ್ಮ ಫಂಡರ್ ಆತ. ನಮ್ಮ ಎನ್‍ಜಿಓ ಪ್ರೊಜೆಕ್ಟ್ ಗಳನ್ನು ಮಾನಿಟರಿಂಗ್ ಮಾಡಲು ಬಂದಿದ್ದಾನೆ. ಅವನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಅಂವ ನಮಗ ಫುಲ್ ಮಾರ್ಕ್ಸ್ ಕೊಡ್ತಾನೆ. ಇಂವ ಕೊಡೋ ಮಾರ್ಕ್ಸ್ ಆಧರಿಸಿ ಮುಂದಿನ ವರ್ಷವೂ ನಮಗೆ ಫಂಡ್ ಬರುತ್ತೆ. ಇಲ್ಲದಿದ್ದರೆ ನಾವೆಲ್ಲ ಮನೆಗೆ ಹೋಗಬೇಕಾಗುತ್ತೆ” ಅಂತ ಮೊದಲೇ ದಿನವೇ ಹೇಳಿದ್ದು ನೆನಪಾಯಿತು.

ಕಳೆದ ಒಂದು ವಾರದಿಂದ ಅವನನ್ನು ಕರೆದುಕೊಂಡು ಹುಬ್ಬಳಿ, ಧಾರವಾಡ, ಕಲಘಟಗಿ, ಮುಂಡಗೋಡ್ ಸುತ್ತಲಿನ ಹಳ್ಳಿಗಳಿಗೆ ಸುತ್ತಾಡಿದ್ದಾಯ್ತು. ಆಗಿನಿಂದಲೂ ಅವನದು ಒಂದೇ ಬೇಡಿಕೆ “ನನಗೆ ಬೀಫ್ ತಿನ್ಲಾರದೇ ನಾಲಿಗೆ ಕೆಟ್ಟು ಕೆರ ಹಿಡಿದಿದೆ. ದಯವಿಟ್ಟು ಬೀಫ್ ತಿನ್ನಿಸು” ಅಂತ ಗೋಗರೆಯುತ್ತಿದ್ದ.

ಆತ ಈ ಫೌಂಡೇಶನ್ನಿನ ಇಂಟರನ್ಯಾಷನಲ್ ಕ್ಲೈಂಟ್ ಆದ ಕಾರಣ, ಆತನ ಬೇಡಿಕೆಯನ್ನು ತೆಗೆದು ಹಾಕುವಂತಿಲ್ಲ. ಆದರೆ, ಹುಬ್ಬಳ್ಳಿಯಲ್ಲಿ ಬೀಫ್ ಅಂಗಡಿ ಎಲ್ಲಿದೆ ಎಂಬುದು ಮನೋಹರನಿಗೂ ಗೊತ್ತಿರಲಿಲ್ಲ. ಮನೋಹರ ಲಿಂಗಾಯತನಾದರೂ ಕೂಡ ಒಮ್ಮೊಮ್ಮೆ ಮಾಂಸಾಹಾರ ಸೇವಿಸುತ್ತಿದ್ದ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಹತ್ತಿರ ತಳ್ಳು ಗಾಡಿಯಲ್ಲಿನ ಚಿಕನ್ ಕಬಾಬ್, ಮಟನ್ ಬಿರಿಯಾನಿ ತಿನ್ನುವ ರೂಢಿ ಇಟ್ಟುಕೊಂಡಿದ್ದ. ಎನ್‍ಜಿಓ ಕೆಲಸದ ನಿಮಿತ್ತ ಶಿವಮೊಗ್ಗ ಕಡೆ ಹೋದಾಗ ಒಂದೆರಡು ಬಾರಿ ಪೋರ್ಕ್ ಸಹ ತಿಂದಿದ್ದ.

ಹುಬ್ಬಳಿಯ ದುರ್ಗದ ಬೈಲ್ ಕಡೆ ಮುಸ್ಲಿಂ ಸ್ಲಂಗಳಲ್ಲಿ ಬೀಫ್ ಹೋಟೇಲ್‍ಗಳು ಇರುವುದು ಗೊತ್ತಿದ್ದರೂ ಆತ ಯಾವತ್ತು ಆ ಕಡೆ ಹೋದವನಲ್ಲ. ಅವನಿಗೆ ಗೋವಿನ ಮೇಲೆ ಅಂಥ ಭಕ್ತಿ ಇರದೇ ಇದ್ದರೂ ಗೋಮಾಂಸ ತಿನ್ನುವುದನ್ನು ಮಾತ್ರ ಯಾವತ್ತು ಕಲ್ಪಿಸಿಕೊಂಡಿರಲಿಲ್ಲ.

ಒಂದು ನಿರ್ಧಾರಕ್ಕೆ ಬಂದ ಮನೋಹರ ತನ್ನ ಬೇಗುದಿಯನ್ನು ಬಾಸ್ ಮುಂದೆ ಹೇಳಬೇಕೆಂದುಕೊಂಡ. `ಆ ಬಿಳಿ ಹಂದಿಗೆ ಬೀಫ್ ತಿನ್ನಿಸಲು ನನ್ನ ಕೈಲಿ ಆಗುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿ ಬಂದರಾಯಿತು ಎಂದುಕೊಂಡು ಪ್ರೋಗ್ರಾಮ್ ಮ್ಯಾನೇಜರ್ ಕುಲಕರ್ಣಿ ಚೆಂಬರಿನೊಳಕ್ಕೆ ಹೋದ. ಆದರೆ ಅಲ್ಲಿ ಆದದ್ದೆ ಬೇರೆ. “ಬನ್ನಿ ಮನೋಹರ, ನಾನು ನಿಮಗ ಕಾಯ್ತಿದ್ದೆ. ಆ ಕ್ಯಾಮರೂನ್ ಒಂದೇ ಸವನೇ ಬೀಫ್ ಬೀಫ್ ಅಂತಿದ್ದಾನೆ. ಒಂದ್ಸಲ ಅವನಿಗೆ ಬೀಫ್ ತಿನ್ನಿಸು ಮಾರಾಯ” ಎಂದು ಯಾವುದೇ ಭಾವಾವೇಶಕ್ಕೆ ಒಳಗಾಗದೇ ಹೇಳಿಬಿಟ್ಟಿದ್ದರು ಕುಲಕರ್ಣಿ. ಈತ ಪಿಳಿಪಿಳಿ ಅವರ ಮುಖವನ್ನೇ ನೋಡಿದ.

“ಹಂಗ್ಯಾಕ ನೋಡ್ತಿರಿ ಮನೋಹರ, ನೋಡಿ ನಾನು ಬ್ರಾಹ್ಮಣ. ನಾನೇ ಹೇಳ್ತಾ ಇದೀನಿ, ಏನ್ ಮಾಡಾಕು ಆಗೂದಿಲ್ಲ. ನಾವೆಲ್ಲ ಕಾರ್ಪೋರೇಟ್ ಪ್ರಪಂಚ ಅನ್ನೋ ಹೊಳಿಯಾಗ ಬಿದ್ದಬಿಟ್ಟಿವಿ. ಬದುಕಬೇಕಂದ್ರ ಕೈಕಾಲ ಆಡಸ್ಲೇಬೇಕು. ನಾವು ಗೋವು ಹಾವು ಅನ್ಕೊಂಡು ಕುಂತ್ರ ಮನಿಗೆ ಹೋಗಬೇಕಾಕೈತ್ರಿ” ಎಂದಿದ್ದರು.

ಮನೋಹರ ಅವತ್ತು ವೆಂಕಟಾಪುರಕ್ಕೆ ಕ್ಯಾಮರೂನ್‍ನನ್ನು ಕರೆದುಕೊಂಡು ಪೆÇ್ರಜೆಕ್ಟ್ ಮಾನಿಟರಿಂಗ್‍ಗಾಗಿ ಹೋದ. ಆ ಹಳ್ಳಿಯ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕ್ಯಾಮರೂನ್ ಸಂಸ್ಥೆ ಮೈಕ್ರೊ ಫೈನಾನ್ಸ್ ಮಾಡಿತ್ತು. ಅಲ್ಲಿಗೆ ಹೋಗುವಾಗಲೇ `ಇವತ್ತು ಸಂಜೆ ಬೀಫ್ ಊಟ ಮಾಡಿಸಲೇಬೇಕು’ ಎಂದು ಕಂಡೀಶನ್ ಹಾಕಿಬಿಟ್ಟಿದ್ದ ಕ್ಯಾಮರೂನ್.

ವೆಂಕಟಾಪುರದಲ್ಲಿ ದೊಡ್ಡದೊಂದು ವೆಂಕಟೇಶ್ವರನ ಗುಡಿಯಿದೆ. ಆ ವೆಂಕಟೇಶ್ವರನ ಗುಡಿಯಲ್ಲೇ ಹಳ್ಳಿಯವರು ಮೀಟಿಂಗ್ ಇಟ್ಟುಕೊಂಡಿದ್ದರು. ಹಳ್ಳಿಯಲ್ಲಿ ದೇವರ ದನಗಳು ಅಂತ ಇರ್ತವೆ, ಅಂದ್ರೆ ದೇವರಿಗೆ ಬಿಟ್ಟ ದನಗಳು ಅಂತ ಅರ್ಥ. ಅಂಥ ದನಗಳನ್ನು ದೇವಸ್ಥಾನದ ಮುಂದೆಯೇ ಕಟ್ಟಿದ್ದರು. ಅವತ್ತು ಮೀಟಿಂಗ್ ಬರುವ ಜನರೆಲ್ಲ ಆ ಹಸುಗಳ ಕೆಚ್ಚಲನ್ನು ಮುಟ್ಟಿ ನಮಸ್ಕರಿಸಿದ ನಂತರ ಮೀಟಿಂಗ್‍ಗಾಗಿ ಹಾಸಿದ್ದ ಗುಡಾರ್ ಮೇಲೆ ಬಂದು ಕೂಡ್ರುತ್ತಿದ್ದರು.

ದೇವಸ್ಥಾನಕ್ಕೆ ಬರುತ್ತಿದ್ದ ಹೆಂಗಸರು ಕೂಡ ದೇವರ ದರ್ಶನ ಮುಗಿದ ನಂತರ ಆ ಗೋವುಗಳ ಕೆಚ್ಚಲನ್ನು ಮುಟ್ಟಿ ನಮಸ್ಕರಿಸಿ ಮನೆಗೆ ಮರಳುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕ್ಯಾಮರೂನ್ ಮನೋಹರನ ಕಡೆ ಪ್ರಶ್ನಾರ್ಥಕವಾಗಿ ನೋಡಿದ. ಇನ್ನು ಸಭೆ ಆರಂಭವಾಗುವುದಕ್ಕೆ ಸಮಯವಿತ್ತು. ಹೇಗೋ ಕ್ಯಾಮರೂನ್ ಬೀಫ್ ಬೀಫ್ ಅಂತ ಬಡಕೊಳ್ಳುತ್ತಿದ್ದನಲ್ಲ. ಅದರ ಹುಚ್ಚನ್ನಾದರೂ ಬಿಡಿಸಬಹುದೆಂದು ಮನೋಹರ ತನಗೆ ತಿಳಿದಿದ್ದನ್ನೆಲ್ಲ ಇಂಗ್ಲೀಷ್‍ನಲ್ಲಿ ಹೇಳತೊಡಗಿದ.

ಪುರಾಣ ಪುಣ್ಯ ಕಥೆಗಳಲ್ಲಿ ಗೋವಿನ ಸ್ಥಾನ. ಪುಣ್ಯಕೋಟಿಯೊಂದಿಗಿನ ಕೃಷ್ಣಗೊಲ್ಲನ ಸಂಬಂಧ, ಬೇಡಿದ್ದನ್ನು ಕೊಡುವ ಕಾಮಧೇನು ಎಂಬ ನಂಬಿಕೆಗಳನ್ನೆಲ್ಲ ಹೇಳಿ ಮುಗಿಸಿದ.

“ಓಹ್! ಒಂದು ಪ್ರಾಣಿಯ ಸುತ್ತ ಎಷ್ಟೊಂದು ಕಥೆಗಳನ್ನು ಕಟ್ಟಿಕೊಂಡಿದ್ದೀರಾ? ನೀವು ಭಾರತೀಯರೇ ಹೀಗೆ ಎಲ್ಲದಕ್ಕೂ ಒಂದೊಂದು ಕಥೆ ಕಟ್ಟಿಕೊಂಡಿರ್ತೀರಿ” ಎಂದು ಕ್ಯಾಮರೂನ್ ಹುಬ್ಬು ಹಾರಿಸಿದ.

“ಇವು ನನ್ನ ನಿನ್ನಂಥವರಿಗೆ ಕಥೆಗಳೆಣಿಸಬಹುದು. ಆದರೆ, ನಿನಗೆ ಗೊತ್ತಿರಲಿ. ಇಂಡಿಯನ್ ರೂರಲ್ ಎಕನಾಮಿಕ್ಸ್ ನಿಂತಿರುವುದೇ ಒಂದು ಕೃಷಿ ಮತ್ತು ಇನ್ನೊಂದು ಪಶು ಸಾಕಾಣಿಕೆಯ ಮೇಲೆ” ಎಂದ ಮನೋಹರ

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ

ಸುಟ್ಟರೆ ನೊಸಲಿಗೆ ವಿಭೂತಿಯಾದೆ

ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ

ನೀನಾರಿಗಾದೆಯೋ ಎಲೆ ಮಾನವ

ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ

ಮೇಲ್ಗೇಣೆಯ ಕಡಿದರೆ ಬೆಣ್ಣೆಯಾದೆ

ಮೇಳದ ತುಪ್ಪವೂ ನಾನಾದೆ ಕಾಸಿದರೆ

ನೀನಾರಿಗಾದೆಯೋ ಎಲೆ ಮಾನವ

ಹರಿ ಹರಿ ಗೋವು ನಾನು?

ಅನ್ನುವ ಪೂರ್ತಿ ತತ್ವಪದವನ್ನು ಹೇಳಿ ಅದರ ಅರ್ಥವನ್ನು ವಿಶ್ಲೇಷಿಸಿದ. ಮನೆಗೆ ಬೇಕಾದ ಹಾಲು ಹೈನು, ಹೊಲಕ್ಕೆ ಬೇಕಾದ ಗೊಬ್ಬರ ಉಳುಮೆಗೆ ಬೇಕಾದ ಎತ್ತು ಎಲ್ಲವನ್ನು ಒಂದು ಹಸು ಕೊಡುವುದರಿಂದ ಇಡೀ ಭಾರತದ ಗ್ರಾಮೀಣ ಆರ್ಥಿಕತೆಯೇ ಹಸು ಸಾಕಾಣಿಕೆ ಮೇಲೆ ನಿಂತಿದೆ ಎಂಬುದನ್ನು ಮತ್ತೊಮ್ಮೆ ಮನದಟ್ಟು ಮಾಡಿದ.

“ಹಾಗಾದರೆ, ಭಾರತದ ಹಳ್ಳಿಗಳಲ್ಲಿ ಗೋಮಾಂಸವನ್ನು ತಿನ್ನುವುದೇ ಇಲ್ಲವೇ?” ಕ್ಯಾಮರೂನ್ ಆಶ್ಚರ್ಯದಿಂದ ಕೇಳಿದ.

“ಸತ್ತ ದನಗಳನ್ನು ಮಾತ್ರ ತಿನ್ನುವ ಒಂದು ಸಮುದಾಯವಿದೆ. ಅದೇ ನಾನ್ ಟಚೆಬಲ್ಸ್ ಅಂತ ಹೇಳ್ತಾರಲ್ಲ ಅವರು. ಅವರಿಗೆ ನಾವು ಹೊಲೆಯರು ಅಂತೀವಿ” ಅಂದ ಮನೋಹರ.

ಅಷ್ಟಕ್ಕೆ ಸುಮ್ನಾಗದೇ ಸಿಕ್ಕಿದ್ದೆ ಚಾನ್ಸ್ ಎಂದು ಕ್ಯಾಮರೂನ್ ಕಡೆ ಕೆಣಕುವಂತೆ ನೋಡಿ, “ಅಂದ್ರೆ ಹೊಲಸು ತಿನ್ನೋ ಜನ ಅಂತ”.

ಕ್ಯಾಮರೂನ್ ಮುಖ ಊದಿಕೊಂಡಿತು. “ಅಲ್ಲ ಮಾರಾಯ, ಗೋವು ಜೀವಂತವಿದ್ದಾಗ ಪವಿತ್ರ ಅಂತೀರಿ. ಸತ್ತ ಮೇಲೆ ಅದ್ಹೇಗೆ ಹೊಲಸಾಗ್ತದೆ?”

“ಅಲ್ಲ ಸರ್, ನಾವು ಗೋವನ್ನು ಪೂಜೆ ಮಾಡ್ತೀವಿ. ಅದನ್ನು ಹೇಗೆ ತಿನ್ನೋದು ನೀವೇ ವಿಚಾರ ಮಾಡಿ?”

“ಅಲ್ಲ ಮಾರಾಯ, ಮೊನ್ನೆ ಕುರಿಡಿಕೇರಿಗೆ ಹೋದಾಗ ಅಲ್ಲೊಂದು ರೈತರ ಕಣದಲ್ಲಿ ಭತ್ತದ ಕಾಳಿನ ಗುಂಪಿ ಹಾಕಿ ಪೂಜೆ ಮಾಡ್ತಿದ್ರು. ಆಮ್ಯಾಲೆ ಮನೆಗೆ ತಿನ್ನೋಕೆ ಅಂತ ಚೀಲಕ ತುಂಬಕೊಂಡ್ರು. ಹಾಗೆ ಪೂಜೆ ಮಾಡೋದನ್ನೆಲ್ಲ ತಿನ್ನಬಾರದು ಅಂದ್ರೆ ಮನುಷ್ಯ ಬದುಕಲಿಕ್ಕಾಗುತ್ತಾ” ಎಂದು ಕ್ಯಾಮರೂನ್ ಸಹಜವಾಗಿ ಕೇಳಿದ.

ನಿಜ ಹೇಳಬೆಕೆಂದರೆ ಇದಕ್ಕೆ ಮನೋಹರನ ಬಳಿ ಸ್ಪಷ್ಟವಾದ ಉತ್ತರ ಇರಲಿಲ್ಲ. ಆತ “ನಮ್ಮ ಧರ್ಮ, ನಮ್ಮ ಆಚರಣೆಗಳು ನಿಮಗೆ ಅರ್ಥ ಆಗೋದಿಲ್ಲ ಬಿಡಿ” ಎಂದು ಮಾತು ಬದಲಿಸಿದ್ದ.ಅಷ್ಟರಲ್ಲಿ ಸಭೆ ಆರಂಭವಾಗಿದ್ದರಿಂದ ಇವರು ಚರ್ಚೆಯನ್ನು ಮೊಟಕುಗೊಳಿಸಬೇಕಾಯ್ತು.

ಸಭೆ ಮುಗಿಯುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಸಭೆ ಮುಗಿದ ಮೇಲೆ ಅಲ್ಲಿ ಕಟ್ಟಿದ್ದ ಗೋವುಗಳ ಕೆಚ್ಚಲನ್ನು ಮುಟ್ಟಿ ನಮಸ್ಕರಿಸಿ ಎಲ್ಲರೂ ಹೊರ ಬಂದರು. ಮನೋಹರನೂ ಹಾಗೆ ಮಾಡಿದ್ದರಿಂದ ಕ್ಯಾಮರೋನ್ ಸಹ ಗೋವಿನ ಕೆಚ್ಚಲನ್ನು ಮುಟ್ಟಿ ನಮಸ್ಕರಿಸುತ್ತಾ ಹೊರ ಬಂದ. ಅಲ್ಲೆ ಪಕ್ಕದಲ್ಲೇ ಎಮ್ಮೆಗಳನ್ನು ಸಹ ಕಟ್ಟಿದ್ದರು. ಕ್ಯಾಮರೂನ್ ಅಲ್ಲಿಗೂ ಹೋಗಿ ಎಮ್ಮೆಗಳ ಕೆಚ್ಚಲು ಮುಟ್ಟಿ ನಮಸ್ಕರಿಸಿದಾಗ ನೋಡಿದ ಊರ ಜನ ಜೋರಾಗಿ ನಕ್ಕರು. ಮನೋಹರನಿಗೆ ಒಂಥರಾ ಆಯಿತು.

ಆತ ಅವನನ್ನು ಎಳೆದುಕೊಂಡು ಬಂದು ಕಾರು ಹತ್ತಿಸಿದ.

“ನೀವು ಎಮ್ಮೆಗೆ ನಮಸ್ಕಾರ ಮಾಡಬಾರದಿತ್ತು. ಊರ ಜನ ಎಲ್ಲ ನೋಡಿ ನಕ್ಕರು.”

“ಅರೆ ಅದ್ಹೇಗೆ ದೇವರಲ್ಲ ಮನು? ಗೋವು ಏನು ಕೊಡುತ್ತೆ ಅದೆಲ್ಲವನ್ನು ಎಮ್ಮೆನೂ ಕೊಡುತ್ತೆ. ಅದನ್ಯಾಕೆ ಪೂಜೆ ಮಾಡಲ್ಲ ನೀವು?”

“ನಮಗೆ ಹಿಂದೂಗಳಿಗೆ ಎಮ್ಮೆ ಪೂಜ್ಯನೀಯವಲ್ಲ. ಎಮ್ಮೆ ಪೂಜಿಸುವಂತೆ ನಮ್ಮ ಯಾವ ಧರ್ಮ ಶಾಸ್ತ್ರಗಳು ಹೇಳುವುದಿಲ್ಲ” ಎಂದು ಹೇಳಿ ಸುಮ್ಮನಾದ.

ಧಾರವಾಡಕ್ಕೆ ಮರಳುವ ಧಾರಿಯಲ್ಲಿ ಮಠವೊಂದರಲ್ಲಿ ಸಂಜೆಯ ಪೂಜೆ ನಡೆಯುತ್ತಿತ್ತು. ಈ ಕಡೆ ಬಂದಾಗಲೆಲ್ಲ ಮಠಕ್ಕೆ ಭೇಟಿ ನೀಡುವುದು ಮನೋಹರನಿಗೆ ರೂಢಿ. ಅವತ್ತು ಕೂಡ ಮನೋಹರ ಮಠದ ಆವರಣದಲ್ಲಿ ಕಾರು ಪಾರ್ಕ್ ಮಾಡಿದ.

ಮಠದ ಹೊರಗಡೆಯ ಆವರಣದಲ್ಲಿನ ಕೃಷ್ಣ ಮಠದಲ್ಲಿ ಪೂಜೆಗೆ ತಯಾರಿ ನಡೆದಿತ್ತು. ಸ್ವಾಮೀಜಿಯ ಶಿಷ್ಯಂದಿರು ಮಠದ ಆವರಣದಲ್ಲಿ ಕಟ್ಟಲಾಗಿರುವ ಹತ್ತಾರು ದೇಶಿ ಹಸುಗಳ ಕೆಚ್ಚಲನ್ನು ಅಲುಗಾಡಿಸುತ್ತಾ ಅದರ ಕೆಳಗೆ ಪಾತ್ರೆಯನ್ನು ಹಿಡಿದಿದ್ದರು. ಕೆಚ್ಚಲಿಗೆ ಬೆರಳು ತಾಗಿಸುತ್ತಾ ಒಂದೇ ಸಮನೆ ಘರ್ಷಿಸುತ್ತಿದ್ದರು. ಈ ಕಿರಿಕಿರಿಯಿಂದ ಹೆದರಿದಂತೆ ಮುಖ ಮಾಡಿದ್ದ ಒಂದೆರಡು ಹಸುಗಳು ತಪತಪನೆ ಹೆಂಡಿ ಹಾಕಿದವು.

ಸ್ವಾಮೀಜಿ ಶಿಷ್ಯರು ಖುಷಿಯಿಂದ ಆ ಹೆಂಡಿಯನ್ನು ತಮ್ಮ ಬೆಳ್ಳಿ ಪಾತ್ರೆಗೆ ತುಂಬಿಕೊಂಡು ಚಿತ್ತಾರದ ಬಟ್ಟೆಯನ್ನು ಅದರ ಮೇಲೆ ಮುಚ್ಚಿಕೊಂಡರು. ಸಿಕ್ಕಷ್ಟು ಹಸುವಿನ ಮೂತ್ರವನ್ನು ಹಿಡಿದುಕೊಂಡು ಮೂತ್ರ ಮತ್ತು ಸಗಣಿ ಪಾತ್ರೆಯನ್ನು ಒಳಕ್ಕೆ ಒಯ್ದರು.

ಇದೆಲ್ಲವನ್ನು ವಿಧೇಯ ವಿದ್ಯಾರ್ಥಿಯಂತೆ ತದೇಕ ಚಿತ್ತದಿಂದ ನೋಡುತ್ತಿದ್ದ ಕ್ಯಾಮರೂನ್ ಇದೆಲ್ಲ ಏನು ಎನ್ನುವಂತೆ ಮನೋಹರನ ಕಡೆಗೆ ನೋಡಿದ.

“ಪೂಜೆಯಾದ ಮೇಲೆ ಗೋಮೂತ್ರವನ್ನು ಅಲ್ಲಿ ನೆರೆದಿರುವ ಭಕ್ತಾಧಿಗಳಿಗೆ ತೀರ್ಥವಾಗಿ ಕೊಡ್ತಾರೆ. ಸರ್ವರೋಗಗಳನ್ನು ಗುಣಪಡಿಸುವ ಶಕ್ತಿ ಗೋಮೂತ್ರದಲ್ಲಿದೆ. ಕ್ಯಾನ್ಸರ್ ಕೂಡ ಗುಣಪಡಿಸಬಹುದು” ಎಂದು ಮನೋಹರ ಹೇಳಿದ.

ಕ್ಯಾಮರೂನ್ ಒಮ್ಮೇಲೆ ಗಂಭೀರನಾದ. `ಈ ದೇಶದ ಮನಸ್ಥಿತಿಯೇ ತನಗೆ ಅರ್ಥವಾಗುತ್ತಿಲ್ಲ’ ಎಂದು ತನ್ನಲ್ಲೇ ತಾನು ಗೊಣಗಿಕೊಂಡ. `ಗೋಮಾಂಸ ತಿನ್ನುವವರನ್ನು ಹೊಲೆಯನೆಂದು, ಕೆಳಜಾತಿಯನೆಂದು ಕರೆಯುವ ಇವರು, ಗೋವಿನ ಮಲ-ಮೂತ್ರ ಸೇವನೆ ಮಾಡುವವವರು ಮೇಲ್ಜಾತಿಯವರು ಹೇಗಾಗ್ತಾರೆ’ ಎಂದು ತನ್ನಲ್ಲಿ ತಾನು ಸಿಡಿಮಿಡಿಗೊಂಡ.

ಅಷ್ಟರಲ್ಲಿ ಪೂಜೆ ಪ್ರಾರಂಭವಾಯಿತು. ಪೂಜೆಯ ಕೊನೆಯಲ್ಲಿ ಎಲ್ಲರಿಗೂ ಒಂದು ದ್ರವ ಪದಾರ್ಥವನ್ನು ಸಿಂಪಡಿಸಲಾಯಿತು. ಅದು ಕ್ಯಾಮರೂನ್ ತುಟಿಗೂ ಸಿಡಿದಿದ್ದರಿಂದ ಆತ ಅದನ್ನು ನಾಲಿಗೆಯಿಂದ ಒಳಗೆಳೆದುಕೊಂಡು ರುಚಿ ನೋಡಿದ. ಒಗರು ಒಗರಾಗಿದ್ದರಿಂದ ಅವನ ಮುಖ ತನ್ನಿಂದ ತಾನೆ ಕಿವುಚಿಕೊಂಡಿತು. ಅಷ್ಟೊತ್ತಿಗೆ ಅಲ್ಲಿಗೆ ಸ್ವಾಮೀಜಿ ಬಂದು ಅಲ್ಲೇ ಇದ್ದ ಸಿಂಹಾಸನದಲ್ಲಿ ಕುಳಿತರು. ಅವರ ಕೈಯಲ್ಲಿದ್ದ ಬೆಳ್ಳಿಲೋಟದಲ್ಲಿ ಗೋಮೂತ್ರವಿತ್ತು. ತಮ್ಮ ಪಾದಗಳಿಗೆ ನಮಸ್ಕರಿಸಿದ ಎಲ್ಲರಿಗೂ ಗೋಮೂತ್ರವನ್ನು ಅವರು ತೀರ್ಥವಾಗಿ ನೀಡಿದರು. ಮನೋಹರ ಸ್ವಾಮೀಜಿಗೆ ಅಡ್ಡಬಿದ್ದು ತೀರ್ಥ ಸ್ವೀಕರಿಸಿದ. ಆದರೆ  ಕ್ಯಾಮರೂನ್ ಮಾತ್ರ ಈ ಸಲ ಎದ್ದು ಹೊರಗೆ ಬಂದುಬಿಟ್ಟಿದ್ದ.

ಅಲ್ಲೇ ಗೇಟಿನ ಹತ್ತಿರದ ಮಳಿಗೆಯಲ್ಲಿ ಮಾರಲಾಗುತ್ತಿದ್ದ ಗೋಮೂತ್ರದ ಬಾಟಲಿಗಳೆರಡನ್ನು ಖರೀದಿಸಿದ ಮನೋಹರ ಎಚ್ಚರದಿಂದ ಅವುಗಳನ್ನು ಬ್ಯಾಗಲ್ಲಿಟ್ಟುಕೊಂಡು ಕಾರು ಚಲಾಯಿಸತೊಡಗಿದ.

“ನೀನು ನಾನ್ ವೆಜ್ ತಿನ್ನುವುದಿಲ್ಲವೇ?” ಕ್ಯಾಮರೂನ್ ಪ್ರಶ್ನಿಸಿದ.

“ಹಂಗೇನಿಲ್ಲ, ನಾನು ಚಿಕನ್, ಮಟನ್ ತಿಂತೀನಿ. ನಮ್ಮ ಜಾತಿಯವರು ಮಾಂಸ ತಿನ್ನಲ್ಲ. ಆದ್ರೆ ಬಾಯಿ ರುಚಿ ಕೇಳಬೇಕಲ್ಲ. ನಾನು ಆಗಾಗ ತಿಂತೀನಿ. ಆದ್ರೆ ಮನೆಯವರಿಗೆ ಗೊತ್ತಾಗಲ್ಲ. ಗೊತ್ತಾದ್ರೆ ಸ್ನಾನ ಮಾಡಿ ಅಂತ ಜೀವ ತಿಂತಾರೆ. ಸ್ನಾನ ಮಾಡಿಬಿಟ್ಟರೆ ಮುಗಿದು ಬಿಡ್ತು. ಹಹ್ಹಹ್ಹಹ…..” ಎಂದು ಮನೋಹರ ವಿಚಿತ್ರವಾಗಿ ನಗಾಡಿದ.

“ಅಲ್ಲಯ್ಯ ಮನು. ತಿಂದದ್ದು ಹೊಟ್ಟೆಯೊಳಗಡೆನೆ ಇರುತ್ತೆ. ಮೇಲೆ ಸ್ನಾನ ಮಾಡಿದರೆ ಅದ್ಹೇಗೆ ಕ್ಲೀನ್ ಆಗಿ ಬಿಡ್ತೀಯಪ್ಪ ನೀನು” ಕ್ಯಾಮರೂನ್ ಅಸಹನೆಯಿಂದ ಕೇಳಿದ,

“ಅದೊಂದು ನಂಬಿಕೆ ಸರ್. ಗೋವು ಹೇಗೆ ಪವಿತ್ರವೋ ಹಾಗೆ ನಮ್ಮಂಥ ಹಿಂದೂಗಳಿಗೆ ನೀರು ಕೂಡ ಪವಿತ್ರ. ಗಂಗೆ ಎಲ್ಲ ಪಾಪಗಳನ್ನು ತೊಳೀತಾಳೆ ಅನ್ನೋ ನಂಬಿಕೆ ನಮ್ಮ ಧರ್ಮದಲ್ಲಿದೆ” ಎಂದು ಮನೋಹರ ಸಮಜಾಯಿಸಿ ನೀಡಿದ.

“ಭಾರೀ ಇದೀರಾ ಕಣಪ್ಪ ನೀವು ಇಂಡಿಯನ್ಸು. ಚೆನ್ನಾಗಿ ತಿಂದು ಪಾಪ ಮಾಡೋದು. ಆಮೇಲೆ ಸ್ನಾನ ಮಾಡಿ ಪಾಪ ತೊಳೆದುಕೊಳ್ಳೋದು. ಒಳ್ಳೆ ಐಡಿಯಾ ಇದು” ಅಂದ ಕ್ಯಾಮರೂನ್ ವ್ಯಂಗ್ಯವಾಗಿ ನಕ್ಕು ಚುಚ್ಚಲು ನೋಡಿದ.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮನೋಹರ ಹುಳ್ಳಹುಳ್ಳಗೆ ನಕ್ಕ.

ಅಷ್ಟೊತ್ತಿಗೆ ಹುಬ್ಬಳ್ಳಿ ಬಂದಿತ್ತು.

“ಒಂದು ರಿಕ್ವೆಸ್ಟ್ ಸರ್”, ಮನೋಹರ ಧೀನನಾಗಿ ನೋಡುತ್ತಾ ಕೇಳಿದ. ಕ್ಯಾಮರೂನ್ ಏನು ಎಂಬಂತೆ ಮುಖ ನೋಡಿದ.

“ಸರ್, ಇಲ್ಲಿ ಬೀಫ್ ಹೋಟೆಲ್ ಎಲ್ಲಿವೆಯೋ ಗೊತ್ತಿಲ್ಲ. ಒಂದೊಳ್ಳೆ ಮಟನ್ ಹೊಟೇಲ್ ಇದೆ ಸರ್. ಅಲ್ಲಿಗೆ ಬೇಕಾದ್ರೆ ಕರ್ಕೊಂಡು ಹೋಗ್ತಿನಿ. ಇಬ್ರು ಹೊಟ್ಟೆ ತುಂಬಾ ಊಟ ಮಾಡೋಣ”

“ಸಾರಿ ಕಣಯ್ಯ, ಇಂಡಿಯಾದಲ್ಲಿ ಬೀಫ್ ಅಡುಗೇನಾ ಚೇನ್ನಾಗಿ ಮಾಡ್ತಾರೆ ಅಂತ ಅಮೇರಿಕಾದಲ್ಲೆಲ್ಲ ಮಾತಾಡ್ತಾರೆ. ಅದೇನೇನೋ ಮಸಾಲೆ ಹಾಕಿ ಮಾಡಿದರೆ ಘಂ ಅಂತಿರುತ್ತಂತೆ. ಒಂದೇಒಂದು ಸಲ ತಿನಿಸು ಸಾಕು. ಆಮೇಲೆ ನಿನಗೆ ಕಿರಿಕಿರಿ ಮಾಡಲ್ಲ.”

‘ಇಂವ ಏನ್ ಮಾಡಿದ್ರು ಬಿಡವವನಲ್ಲ’ ಎಂದು ಬೇಸರದಿಂದ ದುರ್ಗದ ಬೈಲ್ ಹತ್ತಿರದ ಮುಸ್ಲಿಮರ ಹೊಟೇಲ್‍ವೊಂದರ ಮುಂದೆ ನಿಲ್ಲಿಸಿದ. ಅಲ್ಲಿನ ಬೋರ್ಡ್ ಮೇಲೆ ಸ್ ನಂಬರ್ ಊಟ ಅಂತ ಬರೆದಿತ್ತು.

ಆ ಹೊಟೇಲಿನಲ್ಲಿ ಜನವೋ ಜನ. ಕೇವಲ ಮುಸ್ಲಿಮರಷ್ಟೆ ಅಲ್ಲದೇ ಹಿಂದೂಗಳು ಕೂಡ ಊಟಕ್ಕೆ ಬಂದಿದ್ದರು. ಅದರಲ್ಲೊಂದಿಬ್ಬರು ಮನೋಹರನನ್ನು ನೋಡಿಯೂ ನೋಡದಂತೆ ಮುಖ ತಪ್ಪಿಸಿಕೊಂಡರು. ಅರೆರೆ, ಜನ ಎಷ್ಟೊಂದು ಬದಲಾಗಿದ್ದರಲ್ವಾ ಅಂತ ಮೊದಲ ಸಲ ಮನೋಹರನಿಗೆ ಅನ್ನಿಸಿತು.

ಆ ಹೊಟೇಲ್ ಒಂಥರಾ ವಾಸ್ನೆ. ಮಾಂಸವನ್ನು ಕುದಿಸಿ ಕುದಿಸಿ ಅದರ ಎಸೆನ್ಸ್ ಗಟ್ಟಿ ಮಾಡಿದಾಗ ಬರುತ್ತಲ್ಲಾ ಅಂಥ ವಾಸ್ನೆ ಅಲ್ಲೆಲ್ಲಾ ತುಂಬಿತ್ತು. ಅದರೊಂದಿಗೆ ಅಲ್ಲಿ ಊಟಕ್ಕೆ ಕುಳಿತವರ ಬೆವರು ವಾಸ್ನೆ, ಮಸಾಲೆ ವಾಸ್ನೆ, ಎಣ್ಣೆ ಕುಡಿತದ ವಾಸ್ನೆಗಳೆಲ್ಲವೂ ಸೇರಿಕೊಂಡು ವಿಚಿತ್ರ ವಾಸ್ನಾಲೋಕವೊಂದು ಸೃಷ್ಟಿಯಾಗಿತ್ತು.

ಅಲ್ಲೆ ಒಂದು ಟೇಬಲ್ ಮೇಲೆ ಕುಳಿತಾದ ಮೇಲೆ ಕ್ಯಾಮರೂನ್ ನೀನು ಏನು ಆರ್ಡರ್ ಮಾಡ್ತಿ ಎಂದು ಮನೋಹರನಿಗೆ ಕೇಳಿದ “ನನಗೆ ಏನು ಬೇಡ ಸರ್” ಅಂದ ಮನು.

“ಯಾಕೆ ಮಾರಾಯ, ಇಲ್ಲಿ ಚಿಕನ್, ಮಟನ್ ಎಲ್ಲಾನೂ ಸಿಗುತ್ತೆ, ಯಾವುದಾದರೂ ಒಂದನ್ನು ಆರ್ಡರ್ ಮಾಡು. ನಿನ್ನನ್ನು ಮುಂದೆ ಕೂಡ್ರಿಸಿಕೊಂಡು ನಾನು ಒಬ್ಬನೇ ತಿನ್ನೋದು ಹೇಗೆ?” ಅಂದ ಕ್ಯಾಮರೂನ್.

“ಅದು ನಿಜ ಸರ್, ಆದ್ರೆ ಇಲ್ಲಿ ಎಲ್ಲಾನೂ ಒಂದೇ ಪಾತ್ರೆಯಲ್ಲಿ ಹಾಕಿ ಕೊಡ್ತಾರೆ ಸರ್?”

“ಅಂದ್ರೆ?”

“ಅಂದ್ರೆ ಈಗ ನಿಮಗೆ ಭೀಪ್ ಕೊಡ್ತಾರಲ್ವಾ, ಅದೇ ಪ್ಲೇಟಿನಲ್ಲೇ ಮಟನ್ ಕೊಡ್ತಾರೆ. ಸರಿಯಾಗಿ ಕ್ಲೀನ್ ಮಾಡ್ತಿರೋ ಇಲ್ವೋ?”

“ಇಷ್ಟೆಲ್ಲ ಹೇಳ್ತಿಯಲ್ಲ ಮಾರಾಯ, ನೀನು ತಿನ್ನೋ ಸಕ್ಕರೆಯಲ್ಲಿ, ನೀನು ತೆಗೆದುಕೊಳ್ಳೋ ಔಷಧಿಯಲ್ಲಿ ನೀನು ಧರಿಸೋ ಬೂಟು ಬೆಲ್ಟುಗಳಲ್ಲೆಲ್ಲ ಗೋವು ಇರುತ್ತೆ ಮಾರಾಯ ತಿಳ್ಕೊ” ಎಂದು ಕ್ಯಾಮರೂನ್ ಅಸಹನೆಯಿಂದ ನುಡಿದ.

“ಆದ್ರೂ ಅವನ್ನೆಲ್ಲ ಕಣ್ಣಾರೆ ಕಂಡಿಲ್ಲವಲ್ಲ ಸರ್. ಇಲ್ಲಿ ಕಣ್ಣಾರೆ ಕಂಡು ತಿಂದ್ರೆ ನಮ್ಮ ಧರ್ಮ, ದೇವರು ಕ್ಷಮಿಸಲ್ಲ ಅನ್ನೋ ಭಯ ಸರ್.”

“ಒಮ್ಮೆ ತಪ್ಪಿ ತಿಂದ್ರೆ ಏನಾಗಲ್ಲ ಮಾರಾಯ”

“ಆದ್ರೂ ಯಾಕೆ ಬೇಕು ಸರ್. ಬೀಫ್ ತಿಂದ್ರೆ ಎಂಥೆಂಥೋ ಪಾಪಗಳು ಸುತ್ತಿಕೊಳ್ತವೆ ಅಂತೆ. ಯಾಕೆ ಬೇಕು ಅಂತ ಅಷ್ಟೆ. ಅದು ಅಲ್ಲದೇ ನನಗೆ ಬೀಫ್ ಅಂದ್ರೆ ನಮ್ಮ ಮನೆಯ ಕೊಟ್ಟಿಗೆಯಲ್ಲಿರೋ ದನಗಳೇ ನೆನಪಿಗೆ ಬರ್ತವೆ.”

“ನಮ್ಮ ಮನೆಯಲ್ಲೂ ದನ ಸಾಕಿದ್ದಿವಿ ಸರ್. ಮುದ್ದಾದ ಕರುಗಳು ಎಷ್ಟು ಚಂದಾಗಿರ್ತವೆ ಗೊತ್ತಾ?” ಎಂದು ಮನೋಹರ ಭಾವುಕನಾದ.

“ನಿಮ್ಮ ಮನೆಯಲ್ಲಿ ಕುರಿ, ಕೋಳಿ ಸಾಕಿಲ್ಲವೇ?”

“ನಮ್ಮದು ರೈತ ಕುಟುಂಬ ಸರ್ ಎಲ್ಲ ಸಾಕಿದ್ದಿವಿ. 40 ಕುರಿ ಅವೆ, ಒಂದಿಪ್ಪತ್ತು ನಾಟಿಕೋಳಿ ಇರಬೇಕು” ಎಂದು ಮನೋಹರ ಉತ್ತರಿಸಿದ.

“ಹಾಗಾದರೆ, ಮಟನ್ ಚಿಕನ್ ತಿನ್ನುವಾಗ ನಿಮ್ಮ ಮನೆಯಲ್ಲಿನ ಕೋಳಿ ಕುರಿ ನೆನಪಿಗೆ ಬರೋದಿಲ್ವೆ?”

“ಕೆಲವೊಮ್ಮೆ ತುಂಬಾ ವಿಚಿತ್ರ ಪ್ರಶ್ನೆ ಕೇಳ್ತಿರಾ ಸರ್ ನೀವು? ಕೋಳಿ, ಕುರಿ ಇರೋದು ತಿನ್ನಕ್ಕೆ ಅಲ್ವಾ? ಅವನ್ನ ನಮ್ಮ ದೇಶದಲ್ಲಿ ಮೊದ್ಲಿಂದ ಯಾರು ತಕರಾರು ಮಾಡ್ದೆ ತಿನ್ನೋದ್ರಿಂದ ಇದುವರೆಗೂ ಆ ಭಾವನೇನೆ ಬಂದಿಲ್ಲ ನೋಡಿ.”

ಇವನೊಂದಿಗೆ ಮಾತು ವ್ಯರ್ಥ ಅನ್ನಿಸಿದ್ದರಿಂದ ಕ್ಯಾಮರೂನ್ ಬೀಫ್ ಕೈಮಾ, ತಂದೂರಿ ಬೀಫ್, ಮಸಾಲೆ ಬೀಫ್, ಬೀಫ್ ಬಿರಿಯಾನಿ ಹೀಗೆ ತರಾವರಿ ಬೀಫ್ ಐಟಂಗಳನ್ನೆಲ್ಲ ಆರ್ಡರ್ ಮಾಡಿದ. ಎಲ್ಲವನ್ನು ಒಂದೊಂದಾಗಿ ರುಚಿ ನೋಡೋದು ಅವನ ಬಹು ದಿನಗಳ ಕನಸು.

ಅವನು ಆರ್ಡರ್ ಮಾಡಿದ್ದೇನೋ ಒಂದೊಂದಾಗಿ ಬರತೊಡಗಿತು. ಆದರೆ ಅಷ್ಟರಲ್ಲಿ ಕೇಸರಿ ಶಾಲು ಹೆಗಲಿಗೆ ಕಟ್ಟಿಕೊಂಡಿದ್ದ ಯುವಕರ ಗುಂಪೊಂದು ಹೊಟೇಲ್ ಮೇಲೆ ದಾಳಿ ನಡೆಸಿಬಿಟ್ಟಿತು.

ಉಣ್ಣುತ್ತಿದ್ದವರ ಪ್ಲೇಟುಗಳೆಲ್ಲವೂ ಚೆಲ್ಲಾಪಿಲ್ಲಿ. ಕ್ಯಾಮರೂನ್ ಮುಂದೆ ಇದ್ದ ಪ್ಲೇಟುಗಳನ್ನು ತಮ್ಮ ಕ್ಯಾಮರಾದಲ್ಲಿ ಶೂಟಿಂಗ್ ಮಾಡಿಕೊಂಡ ಯುವಕರು, “ಹರಾಮಕೋರ ಸಾಬಿ, ಇಲ್ಲಿ ಭೀಪ್ ಮಾರೋದಲ್ಲದೇ ಫಾರಿನ್ನರಿಗೆಲ್ಲ ಬೀಫ್ ಊಟ ಹಾಕ್ತಿಯಾ? ಫಾರಿನ್‍ಲೆಲ್ಲ ನಮ್ಮ ಭಾರತ ಮರ್ಯಾದೆ ಏನಾಗಬೇಕು? ನಮ್ಮ ಗೋಮಾತೆ ಅಂದ್ರೆ ಏನು ಅನ್ಕೊಂಡಿದಿರಾ?” ಎಂದು ಅಲ್ಲಿ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲ ಛಟೀರ್ ಛಟೀರ್ ಎಂದು ಕಪಾಳ ಸೇವೆ ನೀಡತೊಡಗಿದರು.

ಮುಂದೆ ಆಗುವುದನ್ನು ಉಹಿಸಿದ ಮನೋಹರ್ ಗಾಬರಿ ಬಿದ್ದವನೆ ಕ್ಯಾಮರೂನ್‍ನನ್ನು ಎಳೆದುಕೊಂಡು ಬಂದು ಕಾರಿನಲ್ಲಿ ತುರುಕಿ ಕಾರು ಚಾಲು ಮಾಡಿಬಿಟ್ಟ.

ಕಾರು ಸ್ವಲ್ಪ ಮುಂದಕ್ಕೆ ಹೋದ ಮೇಲೆ ರಿಲಾಕ್ಸ್ ಆದ ಮನೋಹರ, “ನೋಡಿದ್ರಾ ಸರ್, ಅಂತೂ ನನ್ನ ನಂಬಿಕೆ ನಮ್ಮನ್ನು ಕಾಪಾಡಿತು.”

“ಅಂದ್ರೆ?”

“ಅಂದ್ರೆ, ನಿಮಗೆ ಗೋಮಾಂಸ ತಿನಿಸುವ ಮೂಲಕ ನಿಮ್ಮ ಪಾಪದಲ್ಲಿ ನಾನು ಕೂಡ ಪಾಲುದಾರನಾಗ್ತಾ ಇದ್ದೆ. ಈ ಪಾಪದಿಂದ ಹೇಗಪ್ಪಾ ಪಾರಾಗೋದು ಅಂತ ಚಿಂತೆ ಮಾಡ್ತಿದ್ದೆ. ಅಷ್ಟರಲ್ಲಿ ನಮ್ಮ ದೇವರು ದೊಡ್ಡವನು. ಬೀಫ್ ತಿನ್ನಲು ಬಿಡಲೇ ಇಲ್ಲ” ಎಂದು ಗಲ್ಲ ಗಲ್ಲ ಬಡಿದುಕೊಂಡ.

ಕ್ಯಾಮರೂನನಿಗೆ ಏನೂ ಮಾತಾಡಬೇಕೆನಿಸಲಿಲ್ಲ.

 

ಹನುಮಂತ ಹಾಲಿಗೇರಿ

1980ರಲ್ಲಿ ಬಾಗಲಕೋಟೆಯ ತುಳಸಿಗೇರಿಯಲ್ಲಿ ಹನುಮಂತ ಹಲಗೇರಿಯವರ ಜನನ. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಗ್ರಾಮೀಣ ಅಭಿವೃದ್ಧಿ ಪದವಿ. ಕೈಗತ್ತದ ಒಂದೆರಡು ವೃತ್ತಿಗಳ ನಂತರ ಬೆಂಗಳೂರು ಸೇರಿ ಬೆಳಗ್ಗೆ ಪೇಪರ್ ಹಾಕುತ್ತಾ ಸಂಜೆ ನಾಟಕಗಳಲ್ಲಿ ಅಭಿನಯಿಸುತ್ತಾ ಸ್ವಲ್ಪ ದಿನ ಬೀದಿ ಬದುಕು ನಡೆಸಿದ ಅವರು ವಾರ್ತಾಭಾರತಿ ಪತ್ರಿಕೆಯಲ್ಲಿ 5 ವರ್ಷ ಕೆಲಸ ಮಾಡಿದ್ದು ಬರವಣಿಗೆಯತ್ತ ಅವರನ್ನು ಗಂಭೀರವಾಗಿ ತೊಡಗಿಸಿತು. ಇದುವರೆಗೆ ಕೆಂಗುಲಾಬಿ ಕಾದಂಬರಿ, ಕತ್ತಲಗರ್ಭದ ಮಿಂಚು, ಮಠದ ಹೋರಿ ಕಥಾಸಂಕಲನಗಳು ಸೇರಿ 3 ಕೃತಿಗಳು ಪ್ರಕಟಗೊಂಡಿವೆ. ದೇವರ ಹೆಸರಲ್ಲಿ ಮತ್ತು ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕಗಳು ಅಚ್ಚಿನಲ್ಲಿವೆ. ಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪುರಸ್ಕಾರ, ಧಾರವಾಡದ ರಾಷ್ಟ್ರೀಯ ಬೇಂದ್ರೆ ಪ್ರತಿಷ್ಠಾನದಿಂದ ಬೇಂದ್ರೆಗೃಂಥ ಬಹುಮಾನ, ಬಿಎಂಟಿಸಿ ಅರಳು ಪ್ರಶಸ್ತಿ, ಹುನಗುಂದದ ಸಂಗಮ ಸಾಂಸ್ಕøತಿಕ ಸಂಸ್ಥೆಯಿಂದ ಸಂಗಮ ಕಥಾ ಪುರಸ್ಕಾರ, ಧಾರವಾಡ ಮನ್ಸೂರು ಮಠದಿಂದ ಕನಕ ಸಾಹಿತ್ಯ ಸಮ್ಮಾನದಲಿತ ಸಾಹಿತ್ಯ ಪರಿಷತ್ತಿನಿಂದ ಶ್ರೇಷ್ಠಕೃತಿ ಪುರಸ್ಕಾರ ಮತ್ತು ಕಸಾಪದಿಂದ ಮೂರುದತ್ತಿ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here