Homeಮುಖಪುಟಬಿಜೆಪಿಯ ವಾಷಿಂಗ್ ಮೆಷಿನ್‌ನಲ್ಲಿ ಸ್ವಚ್ಚಗೊಂಡವರ ಪಟ್ಟಿ ಸೇರಿದ ಅಜಿತ್ ಪವಾರ್!

ಬಿಜೆಪಿಯ ವಾಷಿಂಗ್ ಮೆಷಿನ್‌ನಲ್ಲಿ ಸ್ವಚ್ಚಗೊಂಡವರ ಪಟ್ಟಿ ಸೇರಿದ ಅಜಿತ್ ಪವಾರ್!

ಅಜಿತ್ ಪವಾರ್ ಜೊತೆ ಹೋಗಿರುವ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ, ಛಗನ್ ಭುಜಬಲ್, ಹಸನ್ ಮುಶ್ರೀಫ್ ರವರ ಮೇಲೆಯೂ ಭ್ರಷ್ಟಾಚಾರ, ಭೂಗತ ಪಾತಕಿಗಳೊಂದಿಗಿನ ಸಂಬಂಧದ ಆರೋಪಗಳಿವೆ.

- Advertisement -
- Advertisement -

ಇತರ ಪಕ್ಷಗಳಲ್ಲಿರುವ ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳನ್ನು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ. ಆದರೆ ಅವರು ಬಿಜೆಪಿ ಸೇರಿದರೆ ಸ್ವಚ್ಛವಾಗಿಬಿಡುತ್ತಾರೆ. ಅಂದರೆ ಬಿಜೆಪಿ ವಾಷಿಂಗ್ ಮೆಷಿನ್ ಅಲ್ಲವೇ ಎಂದು ಹಲವಾರು ವಿರೋಧ ಪಕ್ಷದ ನಾಯಕರು ವ್ಯಂಗ್ಯವಾಗಿದ್ದರು. ಅಂತಹ ವಾಷಿಂಗ್‌ ಮೆಷಿನ್‌ನಲ್ಲಿ ಮೊನ್ನೆವರೆಗೂ ಎನ್‌ಸಿಪಿ ಮುಖಂಡರಾಗಿದ್ದ, ಸದ್ಯ ಬಿಜೆಪಿಗೆ ಬೆಂಬಲ ನೀಡಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಮಿಂದು ಎದ್ದಿದ್ದಾರೆ.

ಅಜಿತ್ ಪವಾರ್ ಅವರು ಈ ಹಿಂದೆ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ನೀರಾವರಿ ಯೋಜನೆಗಳಲ್ಲಿ 50 ಸಾವಿರ ಕೋಟಿ ರೂಗಳ ಅಕ್ರಮ ಎಸಗಿದ್ದಾರೆ ಎಂಬ ಪ್ರಕರಣ ಎದುರಿಸುತ್ತಿದ್ದರು. ಮಹಾರಾಷ್ಟ್ರ ಎಸಿಬಿಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭಿಸಿತ್ತು. 2019ರಲ್ಲಿ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದಲ್ಲೇ ಎಸಿಬಿ ಅವರಿಗೆ ಕ್ಲೀನ್ ಚಿಟ್ ನೀಡಿತು. ಆದರೆ ನ್ಯಾಯಾಲಯವು ಇನ್ನೂ ವರದಿಯನ್ನು ಅಂಗೀಕರಿಸಿಲ್ಲ. ಅಷ್ಟರಲ್ಲಿ ಅಜಿತ್ ಪವಾರ್ ಸರ್ಕಾರದಿಂದ ಹೊರಬಂದು ಮಹಾವಿಕಾಸ್ ಅಘಾಡಿ ಜೊತೆಗೆ ನಿಂತರು. ಆಗ ಬಿಜೆಪಿ ನಾಯಕರು ಆ ನೀರಾವರಿ ಹಗರಣದ ಮರು ತನಿಖೆಗೆ ಒತ್ತಾಯಿಸಿದರು.

ಆರ್ಥಿಕ ಅಪರಾಧಗಳ ವಿಭಾಗವು ಅಜಿತ್ ಪವಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ನೀಡಿದ ಸಾಲದಲ್ಲಿನ ಅಕ್ರಮಗಳ ಆರೋಪಗಳ ತನಿಖೆ ನಡೆಸುತ್ತಿದೆ. ಇದೇ ಆರೋಪಗಳ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆಯ ತನಿಖೆಗೆ ಇಡಿ ಪ್ರಕರಣವನ್ನೂ ದಾಖಲಿಸಿದೆ. ಆದರೆ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ ಮತ್ತು ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಆರ್ಥಿಕ ಅಪರಾಧಗಳ ವಿಭಾಗವು ಪ್ರಕರಣದ ಮುಚ್ಚುವ ವರದಿಯನ್ನು ಸಲ್ಲಿಸಿತ್ತು. ಆದರೆ  ED 2020 ರಲ್ಲಿ ಆ ನಿಲುವನ್ನು ವಿರೋಧಿಸಿತ್ತು. ಆದರೆ ಅದರ ಹಸ್ತಕ್ಷೇಪವನ್ನು ವಿಶೇಷ ನ್ಯಾಯಾಲಯವು ತಿರಸ್ಕರಿಸಿತು. 2022 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ, ಆರ್ಥಿಕ ಅಪರಾಧಗಳ ವಿಭಾಗವು ತನ್ನ ನಿಲುವನ್ನು ಬದಲಾಯಿಸಿ ಅಜಿತ್ ಪವಾರ್ ವಿರುದ್ಧ ತನಿಖೆಯನ್ನು ಮುಂದುವರಿಸಲು ನಿರ್ಧರಿಸಿತ್ತು.

ಅಜಿತ್ ಪವಾರ್ ಅವರ ಜೊತೆ ಹೋಗಿರುವ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ, ಛಗನ್ ಭುಜಬಲ್, ಹಸನ್ ಮುಶ್ರೀಫ್ ರವರ ಮೇಲೆಯೂ ಗಂಭೀರ ಭ್ರಷ್ಟಾಚಾರ, ಭೂಗತ ಪಾತಕಿಗಳೊಂದಿಗಿನ ಸಂಬಂಧದ ಆರೋಪಗಳಿವೆ. ಆ ಪ್ರಕರಣಗಳನ್ನು ಮುಚ್ಚಿಹಾಕುವುದಾಗಿ ಬಿಜೆಪಿ ಭರವಸೆ ನೀಡಿದೆ. ಆ ಕಾರಣಕ್ಕಾಗಿ ಅಜಿತ್ ಪವಾರ್ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಬಿಜೆಪಿಯ ವಾಷಿಂಗ್ ಮೆಷಿನ್ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇಂದು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಹಲವಾರು ಬೆಂಬಲ ನೀಡಿದ್ದಾರೆ. ಅವರು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಅವರೆಲ್ಲರಿಗೂ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.

ಅಜಿತ್ ಪವಾರ್ ಮಾತ್ರವಲ್ಲದೇ ಹತ್ತಾರು ಪ್ರಭಾವಿ ವಿರೋಧ ಪಕ್ಷಗಳ ಮುಖಂಡರು ತಮ್ಮ ಮೇಲಿನ ಪ್ರಕರಣಗಳ ಕಾರಣಕ್ಕಾಗಿ ಬಿಜೆಪಿ ಸೇರಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.

ನಾರಾಯಣ ರಾಣೆ

ಇವರು ಶಿವಸೇನೆಯಿಂದ ರಾಜಕೀಯ ಆರಂಭಿಸಿ ಕಾಂಗ್ರೆಸ್‌ ಪಕ್ಷದಿಂದ ಮಹಾರಾಷ್ಟ್ರದ ಸಿಎಂ ಆಗಿದ್ದವರು. 300 ಕೋಟಿ ರೂ ಭ್ರಷ್ಟಾಚಾರದಲ್ಲಿ ಅವರ ಹೆಸರು ಕೇಳಿಬಂದಿತ್ತು. ಅಲ್ಲದೆ ನೂರಾರು ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಜೈಲಿಗೆ ಕಳಿಸುವುದಾಗಿ 2014 ರಲ್ಲಿ ಘೋಷಿಸಿದ್ದರು.  ಆದರೆ ಬಿಜೆಪಿ ಸೇರಿದ ನಾರಾಯಣ ರಾಣೆಯವರಿಗೆ ಕಳೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೇಂದ್ರ ಎಂಎಸ್‌ಎಂಇ ಸಚಿವ ಸ್ಥಾನ ನೀಡಲಾಗಿದೆ! ತದನಂತರ ಅವರನ್ನು ವಿಚಾರಣೆ ಮಾಡುವ ಧೈರ್ಯವನ್ನು ಯಾವುದೇ ಸಂಸ್ಥೆಗಳು ತೋರಿಲ್ಲ.

ಬಿ.ಎಸ್ ಯಡಿಯೂರಪ್ಪ

ಬಿಜೆಪಿಯ ಉನ್ನತ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2011ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದರು. ಅಕ್ರಮ ಡಿನೋಟಿಫಿಕೇಶನ್ ಮಾಡಿದ ಆರೋಪ ಅವರ ಮೇಲಿದೆ. ಕೆಲ ಆರೋಪಗಳಿಂದ ಹೊರಬಂದ ಅವರು ಬಿಜೆಪಿ ವಿರುದ್ಧ ಸಿಡಿದೆದ್ದು 2012ರಲ್ಲಿ ಕೆಜೆಪಿ ಎಂಬ ಪಕ್ಷ ಸ್ಥಾಪಿಸಿದರು. ಆಗ ಬಿಜೆಪಿ ಅವರ ವಿರುದ್ಧ ಭಾರೀ ಆರೋಪ ಮಾಡಿತ್ತು. ಆದರೆ 2014 ರಲ್ಲಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದರು. ತದನಂತರ ಆಪರೇಷನ್ ಕಮಲ ನಡೆಸಿ ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾದರು. ಅವರನ್ನು ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನಿಸಿದರು. ಈಗ ಅವರು ವಿರುದ್ಧ IT, ED, CBI ತನಿಖೆ ನಡೆಯುತ್ತಿಲ್ಲ.

ಸುವೇಂಧು ಅಧಿಕಾರಿ

2016 ರಲ್ಲಿ ಪಶ್ಚಿಮ ಬಂಗಾಳದ ನಾರದ ನ್ಯೂಸ್‌ನ ಸಿಇಒ, ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ಸ್ ನಡೆಸಿದ ಸ್ಟಿಂಗ್ ಕಾರ್ಯಾಚರಣೆಯ ವಿಡಿಯೋವನ್ನು ಬಿಜೆಪಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿತ್ತು. ಇದರಲ್ಲಿ, ಪತ್ರಕರ್ತ ಸ್ಯಾಮ್ಯುಯೆಲ್ಸ್‌ ತನ್ನನ್ನು ಉದ್ಯಮಿ ಎಂದು ಬಿಂಬಿಸಿಕೊಂಡು, 11 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರಿಗೆ ಹಣ ನೀಡುವುದನ್ನು ಸೆರೆ ಹಿಡಿದಿದ್ದರು. ಅದರಲ್ಲಿ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಪ್ರಮುಖರು. ಇದು ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ 2017ರಲ್ಲಿ ಮುಕುಲ್ ರಾಯ್ ಬಿಜೆಪಿ ಸೇರಿದರೆ, 2020 ಸುವೇಂದು ಅಧಿಕಾರಿ ಬಿಜೆಪಿ ಸೇರಿದರು. ಸದ್ಯ ಸುವೆಂಧು ಅಧಿಕಾರಿ ಅವರು ಬಂಗಾಳದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಯಥಾಪ್ರಕಾರ ಅವರ ಮೇಲೆ ಯಾವುದೇ ತನಿಖೆ ನಡೆಯುತ್ತಿಲ್ಲ.

ಲಂಚ ಪಡೆದು ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದವರು ಬಿಜೆಪಿ ಸೇರ್ಪಡೆ: ಧೃವ್ ರಾಠೀ ಟ್ವೀಟ್ ವೈರಲ್

ಮುಕುಲ್ ರಾಯ್

ಶಾರದ ಚಿಟ್ ಫಂಡ್ ಹಗರಣದಲ್ಲಿ ಬಂಗಾಳದ ಆಗಿನ ಟಿಎಂಸಿ ನಾಯಕ ಮುಕುಲ್ ರಾಯ್ ಹೆಸರು ಕೇಳಿಬಂದಿತ್ತು. ನಂತರ ಅವರು 2017ರಲ್ಲಿ ಬಿಜೆಪಿ ಸೇರಿ ಆರೋಪ ಮುಕ್ತರಾದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆದರು. ಪಕ್ಷದಲ್ಲಿ ತಮಗೆ ಮಾನ್ಯತೆಯಿಲ್ಲ ಎಂದು ಆರೋಪಿಸಿ 2021ರಲ್ಲಿ ಅವರು ಮತ್ತೆ ಟಿಎಂಸಿಗೆ ಮರಳಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ

ಹಿಮಂತ ಬಿಸ್ವಾ ಶರ್ಮಾ 2014ರವರೆಗೂ ಕಾಂಗ್ರೆಸ್‌ನಲ್ಲಿದ್ದರು. ಆಗ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿದ್ದರು ಮತ್ತು ಬಿಜೆಪಿಯಿಂದ ಭಾರೀ ಟೀಕೆ ಎದುರಿಸಿದ್ದರು. ಸೂಕ್ತ ‘ಸ್ಥಾನಮಾನ’ ಸಿಗದ ಕಾರಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಈಗ ಅಸ್ಸಾಂನ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಮೇಲಿನ ಭ್ರಷ್ಟಾಚಾರದ ಆರೋಪ ಕಸದ ಬುಟ್ಟಿ ಸೇರಿದೆ.

ನರೇಶ್ ಅಗರ್‌ವಾಲ್

ನರೇಶ್ ಅಗರ್‌ವಾಲ್ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರು. ಅದಕ್ಕೂ ಮುನ್ನ ಅವರು ಕಾಂಗ್ರೆಸ್ ಮತ್ತು ಬಿಎಸ್‌ಪಿಯಲ್ಲಿದ್ದವರು. ಇವರ ವಿರುದ್ಧ ಹಲವಾರು ಕ್ರಿಮಿನಲ್ ಆರೋಪಗಳಿದ್ದವು. ಮಹಿಳೆಯರು ಕುರಿತು ತುಚ್ಛವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಬಿಜೆಪಿ ಇವರನ್ನು ವಿರೋಧಿಸುತ್ತಿತ್ತು. ಆದರೆ 2018 ರಲ್ಲಿ ಸಮಾಜವಾದಿ ಪಕ್ಷ ರಾಜ್ಯಸಭೆಗೆ ಇವರಿಗೆ ಟಿಕೆಟ್ ನಿರಾಕರಿಸಿದ ತಕ್ಷಣ ಅವರು ಬಿಜೆಪಿ ಸೇರಿದರು. ಈಗ ಸ್ವಚ್ಛವಾಗಿಬಿಟ್ಟ ಕಾರಣ ಅವರ ಮೇಲಿನ ಆರೋಪಗಳು ಕಣ್ಮರೆಯಾಗಿವೆ.

ಭಾವನ ಗವಾಲಿ

ಇವರು ಐದು ಬಾರಿ ಸಂಸದರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಇವರ ವಿರುದ್ಧ ತನಿಖೆ ನಡೆಸುತ್ತಿದೆ. ಆದರೆ ಅವರು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಅಲ್ಲದೆ ಪಕ್ಷದ ಚೀಫ್ ವಿಪ್ ಆಗಿದ್ದಾರೆ. ಅವರು ಇಡಿ ತನಿಖೆಗೆ ಸತತ 5 ಬಾರಿ ಗೈರು ಹಾಜರಾಗಿದ್ದಾರೆ. ಆದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಇಡಿ ಹೆದರುತ್ತಿದೆ!

ಯಶವಂತ ಜಾಧವ್ ಮತ್ತು ಯಾಮಿನಿ ಜಾಧವ್

ಯಶವಂತ ಜಾಧವ್ ಮುಂಬೈನ ಬಿಎಂಸಿಯ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯರಾಗಿದ್ದಾರೆ. ಈ ದಂಪತಿಗಳ ಮೇಲೆ ಫೆಮ ಪ್ರಕರಣದಲ್ಲಿ ಇಡಿ ತನಿಖೆ ನಡೆಸುತ್ತಿತ್ತು. ಆದರೆ ಇವರಿಬ್ಬರು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿದರು. ತನಿಖೆ ಮೂಲೆಗೆ ಸೇರಿದೆ.

ಪ್ರತಾಪ್ ಸರ್‌ನಾಯಕ್

ಅಕ್ರಮ ಹಣ ಸಂಗ್ರಹಣೆ ಆರೋಪದಲ್ಲಿ ಇಡಿ ಇವರ ಮೇಲೆ ದಾಳಿ ನಡೆಸಿತ್ತು. ಅವರು ಏಕನಾಥ್ ಶಿಂಧೆ ಬಣ ಸೇರಿ ಬಚವಾಗಿದ್ದಾರೆ.

ಮೊನಿರುಲ್ ಇಸ್ಲಾಂ

ಟಿಎಂಸಿಯ ಶಾಸಕ ಮೊನಿರುಲ್ ಇಸ್ಲಾಂ ಮೂರು ಕೊಲೆಯ ಆರೋಪಿ.. ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2019 ಜೂನ್ 05 ರಂದು ಬಿಜೆಪಿ ಸೇರಿದರು. ಅವರ ಮೇಲಿನ ತನಿಖೆ ನಿಷ್ಕ್ರಿಯವಾಯಿತು.

ಅನಿಲ್ ಶರ್ಮಾ

ಹಿಮಾಚಲ ಪ್ರದೇಶದ ಅನಿಲ್ ಶರ್ಮಾ ಕಾಂಗ್ರೆಸ್ ಮತ್ತು ಹಿಮಾಚಲ್ ವಿಕಾಸ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಟಿಲಿಕಾಂ ಹಗರಣದಲ್ಲಿ ಸಿಲುಕಿಕೊಂಡ ನಂತರ ಕಾಂಗ್ರೆಸ್ ಅವರನ್ನು ಉಚ್ಛಾಟಿಸಿತು. 2017ರಲ್ಲಿ ಬಿಜೆಪಿ ಸೇರಿ ಸಮಸ್ಯೆ ಬಗೆಹರಿಸಿಕೊಂಡರು ಮತ್ತು ಸಚಿವರು ಸಹ ಆಗಿದ್ದರು.

ಇಟಾಲಾ ರಾಜೇಂದರ್

ತೆಲಂಗಾಣದ ಟಿಆರ್‌ಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು ಹಣಕಾಸು ಮತ್ತು ಆರೋಗ್ಯ ಇಲಾಖೆಯ ಸಚಿವರಾಗಿದ್ದರು. ಇವರ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಟಿಆರ್‌ಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಅವರ ಮೇಲಿನ ತನಿಖೆ ನಿಂತು ಹೋಗಿದೆ.

ನಾಲ್ವರು ಟಿಡಿಪಿ ಸಂಸದರು ಬಿಜೆಪಿಗೆ

2018ರ ನವೆಂಬರ್‌ನಲ್ಲಿ ಬಿಜೆಪಿ ಸಂಸದ ಮತ್ತು ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಅವರು ಟಿಡಿಪಿ ರಾಜ್ಯಸಭಾ ಸಂಸದರಾದ ಸಿ ಎಂ ರಮೇಶ್ ಮತ್ತು ವೈ ಎಸ್ ಚೌದರಿ ಅವರನ್ನು “ಆಂಧ್ರ ಮಲ್ಯಾಸ್” ಎಂದು ಕರೆದು ರಾಜ್ಯಸಭಾ ನೈತಿಕ ಸಮಿತಿಗೆ ಪತ್ರ ಬರೆದು, ಅವರ ವಿರುದ್ಧ “ಸೂಕ್ತ ಕ್ರಮ” ವನ್ನು ಪ್ರಾರಂಭಿಸುವಂತೆ ಕೋರಿದ್ದರು. ಆ ನಾಲ್ವರು ಸಂಸದರು ಸಹ ಸಿಬಿಐ, ಇಡಿ, ಐಟಿ ತನಿಖೆಗಳನ್ನು ಎದುರಿಸುತ್ತಿದ್ದರು. ಮರು ವರ್ಷ 2019 ರಲ್ಲಿ ಆ ಆಂಧ್ರ ಮಲ್ಯಗಳ ಜೊತೆ ಇನ್ನಿಬ್ಬರು ಸಂಸದರು ಸಹ ಬಿಜೆಪಿ ಸೇರಿದರು! ಅವರ ಮೇಲಿನ ತನಿಖೆಗಳು ಮಾಯವಾದವು.

ಕೃಪಶಂಕರ್ ಸಿಂಗ್

ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿದ್ದ ಕೃಪಶಂಕರ್ ಸಿಂಗ್ ಅವರನ್ನು ಹಲವಾರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಈ ಹಿಂದೆ ಗುರಿಯಾಗಿಸಿತ್ತು. ಅವರು ಬಿಜೆಪಿ ಸೇರಿ ಆರೋಪ ಮುಕ್ತರಾಗಿದ್ದಾರೆ.

ಮುನಿರತ್ನ ನಾಯ್ಡು

ಕರ್ನಾಟಕದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಇವರು ಕಾಂಗ್ರೆಸ್ ಶಾಸಕರಾಗಿದ್ದರು. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ಜನರ ವೋಟರ್ ಐಡಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಇವರ ವಿರುದ್ಧ ಭಾರೀ ಹೋರಾಟ ನಡೆಸಿತ್ತು. 2019 ರಲ್ಲಿ ಅವರು ಬಿಜೆಪಿ ಸೇರಿದರು. ನಂತರ ಶಾಸಕರಾಗಿದ್ದಾರೆ. ಅವರ ಮೇಲಿನ ತನಿಖೆ ನಿಂತು ಹೋಗಿದೆ.

ಇಲ್ಲಿ ಹೆಸರಿಸಿರುವುದು ಕೆಲವರಷ್ಟೆ.. ಈ ರೀತಿ ನೂರಾರು ನಾಯಕರು ಬಿಜೆಪಿ ಸೇರಿ ಆರೋಪಮುಕ್ತರಾಗಿರುವ ಇತಿಹಾಸವಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹತ್ತಾರು ಶಾಸಕರು ಒಮ್ಮೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಲ್ಲದೆ ತಾವು ಸಚಿವರಾಗಿದ್ದಾರೆ.

ಈ ವಿಚಾರದಲ್ಲಿ ಬಿಜೆಪಿ ಎರಡು ರೀತಿಯಲ್ಲಿ ವ್ಯವಹರಿಸುತ್ತಾ ಬಂದಿದೆ. ಒಂದು, ಹಗರಣದಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಪಕ್ಷಕ್ಕೆ ಆಹ್ವಾನಿಸಿ ಅವರಿಗೆ ತಮ್ಮ ಪ್ರಭಾವ ಮತ್ತು ಅಧಿಕಾರ ಬಳಸಿ ಕ್ಲಿನ್ ಚಿಟ್ ನೀಡಲಾಗುತ್ತದೆ. ಒಂದುವೇಳೆ ಅವರು ಪಕ್ಷಕ್ಕೆ ಬರದಿದ್ದರೆ ಅಂಥವರ ಮೇಲೆ ಐ.ಟಿ ದಾಳಿ, ಇ.ಡಿ ದಾಳಿ ರೀತಿಯಲ್ಲಿ ಬೆದರಿಕೆ ಒಡ್ಡಿ, ಸಿಬಿಐ ತನಿಖೆಯ ಗುಮ್ಮ ತೋರಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಅಪ್ರಜಾತಾಂತ್ರಿಕ ನಡೆ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಕೇವಲ ಭ್ರಷ್ಟಾಚಾರಿಗಳನ್ನು ಮಾತ್ರವಲ್ಲ ಕ್ರಿಮಿನಲ್‌ಗಳು, ಅತ್ಯಾಚಾರ ಆರೋಪ ಹೊತ್ತವರು ಸಹ ಬಿಜೆಪಿ ಸೇರಿ ಪಾವನರಾಗುತ್ತಿದ್ದಾರೆ. ಕಪಿಲ್ ಗುರ್ಜರ್ ಎಂಬಾತ ಸಿಎಎ ಹೋರಾಟಗಾರರ ಮೇಲೆ ಗುಂಡು ಹಾರಿಸಿದಾತ. 30 ಡಿಸೆಂಬರ್ 2020ರಂದು ಬಿಜೆಪಿ ಸೇರಿದ.. ಕಪಿಲ್ ಮಿಶ್ರಾ ಆಪ್‌ನಲ್ಲಿದ್ದಾಗ ನರೇಂದ್ರ ಮೋದಿಯವರನ್ನು ಫೇಕು ಎಂದು ಕರೆದಿದ್ದ. ಈಗ ಆತ ಬಿಜೆಪಿ ವಕ್ತಾರ!

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 121 ರಾಜಕೀಯ ಮುಖಂಡರ ಮೇಲೆ ಇಡಿ ದಾಳಿ ನಡೆಸಲಾಗಿದೆ. ಅದರಲ್ಲಿ 115 ಜನರು ವಿರೋಧ ಪಕ್ಷಗಳಿಗೆ ಸೇರಿದವರು. ಅಂದರೆ ಶೇ.95% ವಿಪಕ್ಷಗಳ ಮುಖಂಡರೆ ಆಗಿದ್ದಾರೆ.

ಬಿಜೆಪಿ ವಾಷಿಂಗ್ ಮೆಷಿನ್‌ ಆಗಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ “ನಮ್ಮಲ್ಲಿಗೆ ಬರುವವರು ಹಲವು ಗುಣ ದೋಷಗಳನ್ನು ಹೊಂದಿರುತ್ತಾರೆ. ನಮ್ಮಲ್ಲಿ ಬಂದ ತಕ್ಷಣ ಅವು ಕಡಿಮೆಯಾಗುತ್ತವೆ. ಏಕೆಂದರೆ ನಮ್ಮ ಸಂಘಟನಾ ಪದ್ದತಿ ಹಾಗಿದೆ” ಎಂದು ಉತ್ತರಿಸಿದ್ದರು. ಅದಕ್ಕೆ “ಆಗಿದ್ದರೆ ಜೈಲು ವ್ಯವಸ್ಥೆ ಏಕೆ ಬೇಕು? ಎಲ್ಲಾ ಆರೋಪಿಗಳನ್ನು ಬಿಜೆಪಿಗೆ ಕಳಿಸಿಬಿಡಬಹುದಲ್ಲ” ಎಂದು ಎನ್‌ಡಿಟಿವಿಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ವ್ಯಂಗ್ಯವಾಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಎನ್‌ಸಿಪಿಯಲ್ಲಿ ಪರಸ್ಪರ ಉಚ್ಚಾಟನೆ ಪರ್ವ: ಪ್ರಫುಲ್‌ ಪಟೇಲ್ ಹಾಗೂ ಸುನೀಲ್ ತಟ್ಕರೆ ಉಚ್ಚಾಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...