Homeಅಂಕಣಗಳುಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

- Advertisement -
- Advertisement -

ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ “ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ ನಿಮ್ಮ ಫೋನನ್ನ ಸ್ವಚ್ಛ ಮಾಡರಿ” ಅಂತ. ಅದನ್ನ ಸುಮಾರು ಒಂದು ಕೋಟಿ ಜನ ಹಾಕಿಕೊಂಡು ಅದು ತೋರಿಸಿದಂತೆ ಚೈನಾ ಆಪುಗಳನ್ನ ತಗದಾರು.

ಕೆಲವರು ಪೇಟಿ ಎಮ್ಮು, ಬಿಗ್ ಬಾಸ್ಕೆಟಿನಂಥಾ ಆಪು ತಗದು, ಒದ್ಯಾಡಿದಾರು.

ಇದರಾಗ ಜೋಕು ಏನಪಾ ಅಂದರ, ಭಾಳ ಮಂದಿ ಈ ದೇಶಪ್ರೇಮದ ಕೆಲಸಾ ಮಾಡಾಕ ತಮ್ಮ ಚೀನಾ ಫೋನು ಉಪಯೋಗ ಮಾಡಿದಾರು. ಭಾರತದಾಗ ಒಂದು ನೂರು ಫೋನು ಅದಾವು ಅಂದರ ಅದರಾಗ 70 ಫೋನು ಚೀನಾ ಕಂಪನಿವು ಅದಾವು. ಭಾಳ ಜನರಿಗೆ ತಮ್ಮ ಫೋನು ಯಾವ ದೇಶದ್ದೂ ಅಂತ ಗೊತ್ತಿರೋದಿಲ್ಲ. ಖರೇ ಹೇಳಬೇಕಂದರ, ಫ್ರೀಡಂ ಅನ್ನೋ ಕಂಪನಿ ಒಂದು ಬಿಟ್ಟರ ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಇಲ್ಲ. ಅಂದಂಗ ಮೊನ್ನೆ ನಮ್ಮ ಪಂಥ ಪ್ರಧಾನ ಸೇವಕ ಅವರು ಲೋಕಲ್ ವೋಕಲ್ ಅಂತ ಹೇಳೋ ತನಕಾ ಅಂತೂ ಇರಲಿಲ್ಲ. ಕಳೆದ ಒಂದು ವಾರದಾಗ ಯಾವುದರ ಕಂಪನಿ ಹುಟ್ಟಿಕೊಂಡಿದ್ದರ ನಮಗ ಗೊತ್ತಿಲ್ಲ ಮತ್ತ.

ಯಾಕ ಹಂಗಂತೇನಪಾ ಅಂದರ, ಅದಕ್ಕೊಂದು ಕಾರಣ ಐತಿ.

ಮೂರು ವರ್ಷದ ಹಿಂದ ಅವರು ಫ್ರಾನ್ಸಿಗೆ ಹೋಗಿದ್ದರು. ಆವಾಗ ಅವರ ಸ್ನೇಹಿತರು ಹಾಗೂ ಖಜಾಂಚಿಗಳೂ ಆದ ಆತ್ಮ ನಿರ್ಭರ ಸಹೋದರು ಬರೇ ಹತ್ತು ದಿನದಾಗ ಒಂದು ರಕ್ಷಣಾ ತಂತ್ರಜ್ಞಾನದ ಕಂಪನಿ ಹುಟ್ಟು ಹಾಕಿದರು. ಅದನ್ನ ನೋಡಿ ಇವರು ಯಾವುದೋ ಮ್ಯಾಗಿ ನೂಡಲ್ ಕಂಪನಿ ಯೊಳಗ ಕೆಲಸ ಮಾಡಿರಬೇಕು ಬಾರಲೇ ಅಂತ ಹೇಳಿ ಇವರು ಅವರಿಗೆ ಯುದ್ಧ ವಿಮಾನ ತಯಾರು ಮಾಡೋ ಕೆಲಸ ಕೊಟ್ಟರು. “ಅಯ್ಯೋ ಅದನ್ನ ಯಾಕ ಅವರಿಗೆ ಕೊಟ್ಟರಿ, ನಾವ ಮಾಡತಿದ್ದೆವಲ್ಲ. ಎಪ್ಪತ್ತು ವರ್ಷದಿಂದ ನಾವನ ವಿಮಾನ ತಯಾರು ಮಾಡಾಕ ಹತ್ತೇವಿ. ನಿಮಗೂ ಗೊತ್ತೈತೆಲ್ಲಾ” ಅಂತ ಬೆಂಗಳೂರಿನ ಎಚ್‍ಎಎಲ್ ಅನ್ನೋ ಕಂಪನಿಯವರು ಸಣ್ಣಕ ದನಿ ತಗದಿದ್ದರಂತ. ಅದಕ್ಕ ಇವರು “ಹೋಗ ಹೋಗರಿ, ಎಲ್ಲಾ ನಿಮಗ ಏನು? ಹಳಬರಿಗೆ ಅವಕಾಶ ಸಾಕು, ಹೊಸಬರಿಗೆ ಅವಕಾಶ ಇರಲಿ. ರಾಜಕೀಯದಾಗೂ ಈ ನಿಯಮ ತಂದೇವಿ, ಇನ್ನ ಯುದ್ಧ ವಿಮಾನ ತಯಾರಿಗೆ ಬಿಡತೇವೇನು” ಅಂತ ಅಂದರು. ಈಗ ಆ ಹೊಸಾ ಕಂಪನಿ ಹಳೇ ಕಂಪನಿಯ ವಜ್ಜಾ ತಡಕೊಳ್ಳಲಾರದ ಮುಚ್ಚಾಕ ಬಂದೇತಿ. ಅದು ಬ್ಯಾರೆ ವಿಷಯ.

ಇನ್ನ ನಮ್ಮವರಿಗೆ ಚೀನಾದ ಮ್ಯಾಲೆ ಕೆಂಗಣ್ಣು ಬಿಡೋ ಅಷ್ಟು ಸಿಟ್ಟು ಯಾಕ ಬಂತು? ಅದಕ್ಕ ಒಂದಿಷ್ಟು ಹಿಂದ ಹೋಗಬೇಕಾಗತೇತಿ. ನಿಮಗೆ “ಹೋಕೆ ಮಜಬೂರ ಮುಝೆ ಉಸನೆ ಭುಲಾಯಾ ಹೋಗಾ” (‘ಅನಿವಾರ್ಯವಾಗಿ ಅಕಿ ನನ್ನ ಮರತಿರಬೇಕು’) ಅನ್ನೋ ಹಾಡು ನೆನಪು ಇರಬೇಕು. ಅದು ಒಂದು ಕರೇ – ಬಿಳೇ ಹಳೇ ಹಿಂದಿ ಸಿನಿಮಾದ ಹಾಡು. ಅದರಾಗ ಭಾರತೀಯ ಸೈನಿಕರು ಹೋಗಿ ಚೀನಾದ ಮ್ಯಾಲೆ ಯುದ್ಧ ಮಾಡಿ ಗೆದ್ದು ಬರತಾರ. ಸಿನಿಮಾದಾಗ ಗೆದ್ದರು ಆದರ ಅದನ್ನ ಚೀನಾದವರು ಇನ್ನೂ ಒಪ್ಪಾಕ ತಯಾರು ಇಲ್ಲ. ಭಾರತ- ಚೀನಾ ಗಡಿ ಮೂರು ಸಾವಿರದ ಎಂಟು ನೂರು ಕಿಲೋಮಿಟರ್ ಅಂತ ನಮ್ಮ ವಿದೇಶಾಂಗ ಮಂತ್ರಿ ಅಂದಿದ್ದಕ್ಕ ಚೀನಾದವರು ಎಲ್ಲಾಸುಳ್ಳ. ಅದು ಬರೇ ಎರಡು ಸಾವಿರ ಕಿಲೋಮೀಟರ್ ಅಂತ ಹೇಳಿ ಆಟ ಗೂಟ ಜೈ ಅಂತ ಹೇಳಿ ನಮ್ಮ ಮ್ಯಾಲೆ ಜಗಳಾ ಆಡಾಕ ಬಂದಾರ. ನಮ್ಮ ಹಳ್ಳೀ ಒಳಗ ಒಂದ ಕ್ರಿಕೆಟ್ ಪಿಚ್ಚಿನ್ಯಾಗ ಸಣ್ಣ ಹುಡುಗರು ಆಡಾಕ ಹತ್ತಿದಾಗ ದೊಡ್ಡವರು ಬಂದು ಅವರ ಸ್ಟಂಪು – ಬಾಲು ಕಸಗೊಂಡರ ಹೆಂಗ ಸಣ್ಣ ಹುಡುಗರು, ಯೆಣ್ಣಾ ನೀವು ಹೋಗರಿ ಯಣ್ಣಾ, ನಾವು ಒಂದೀಟ ಆಡತೇವಿ. ನೀವು ಆಮ್ಯಾಕ ಬರೀರೆಂತ ಅಂತ ಹೇಳಿ ಅವರಿಗೆ ಆಗ್ರಹ ಮಾಡತಾರಲ್ಲಾ ಹಂಗ ನಮ್ಮ ಭಾರತೀಯರು ಅದನ್ನ ಕೇಳಿಕೊಂಡರು. ಒಂದಿಬ್ಬರು ಹೊಡದಾಡಿಕೊಂಡರು ಅಂತನೂ ಸುದ್ದಿ ಬಂದವು.

ಇದು ನಿಮಗ ರೊಮ್ಯಾಂಟಿಕ್ ಚಿತ್ರಣ ಅನ್ನಿಸಿದರ ನೀವು ಅದಕ್ಕ ಸಂಬಂಧ ಪಟ್ಟ ವಿಡಿಯೋ ಸುದ್ದಿ ನೋಡರಿ, ಅಲ್ ಜಜೀರಾ ಅವರ ವೆಬ್ ಸೈಟಿನೊಳಗ.

ಇದು ಯಾಕಪಾ ಅಂದರ ಭಾರತದ ಮಾಧ್ಯಮಗಳು ತೋರಿಸಲಾರದ್ದನ್ನ ಹೊರಗಿನವು ತೋರಿಸಿದವು. ಯಾಕಂದರ ನಮ್ಮವರು ಸುದ್ದಿ ವ್ಯಾಪಾರಸ್ಥರಾಗಿ ಬಿಟ್ಟಾರ. ಅವರು ಇನ್ನೂ ಪತ್ರಕರ್ತರಾಗಿ ಉಳದಾರ.

“ಇಲ್ಲಾ. ನಮಗೂ ಅವರಿಗೂ ಜಗಳ ಆಗಿಲ್ಲ. ಬರೇ ಒಂದಿಷ್ಟು ಮಾತು ಆಗಿದಾವು” ಅಂತ ನಮ್ಮ ಕೇಂದ್ರ ಸರಕಾರ ಹೇಳಿಕೊಂಡೇತಿ.

ಹಂಗಾರ ಅಲ್ಲಿ ಆಗಿದ್ದೇನು. ದೇಶಗಳ ನಡುವೆ ಮೂರು ಥರದ ಗೆರಿ ಇರತಾವು. ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ ಮತ್ತು ಖರೆ ಖರೆ ನಿಯಂತ್ರಣ ರೇಖೆ (ಬಾರ್ಡರು, ಎಲ್‍ಓಸಿ, ಎಲ್‍ಏಸಿ) ಚೀನಾ ಹಾಗೂ ಭಾರತದ ನಡುವೆ ಎಲ್ಲರೂ ಒಪ್ಪುವಂಥಾ ಗಡಿ ಇಲ್ಲ. ನಾವು ಒಂದು ಅಂತೇವಿ ಅವರು ಇಲ್ಲ ಅಂತಾರ. ಅವರು ಒಂದು ಅಂತಾರ ನಾವು ಇಲ್ಲಾ ಅಂತೇವಿ.

ಅಂಥಾದರಾಗ ನಮ್ಮ ದೊಡ್ಡಣ್ಣಾರು, ಬಿಳಿಮನಿ ಟ್ರಂಪಣ್ಣನವರ್ ಅವರು “ಇವರು ಇಬ್ಬರೂ ಕಿತ್ಯಾಡಾಕ ಹತ್ಯಾರು. ನಾನು ನೋಡಾ ಹತ್ತೇನಿ. ನನ್ನ ಕಡೆ ಬಂದರ ನಾ ಜಗಳಾ ಬಿಡಸತೇನಿ,” ಅಂತ ಟ್ವಿಟರಿನ್ಯಾಗ ಕಾರಿಕೊಂಡರು. ನೀವು ಬರೋದು ಬ್ಯಾಡ. ನಿಮ್ಮ ಎಲ್ಯಾಗ ಕತ್ತಿ ಸತ್ತು ಬಿದ್ದೇತಿ, ನಮ್ಮ ನೊಣಾ ಯಾಕ ಝಾಡಸಾಕ ಬರತೀರಿ ಅಂತ ಇಬ್ಬರೂ ದೂರಾದರು. ಆ ಬೆಕ್ಕಿನ ಪ್ರೀತಿಯಿಂದ ಕೊಸರಾಡಿಕೊಂಡು ಬಿಡಿಸಿಕೊಂಡರು.

ಕೆಲವರ ಪ್ರಕಾರ ಚೀನಾ ಸೈನಿಕರು ಲಡಾಖಿನ ಹತ್ತಿರ ಭಾರತದ ಗಡಿಯೊಳಗ ಸುಮಾರು ಒಂಬೈನೂರು ಚದುರ ಕಿಲೋಮೀಟರ್ ಕ್ಷೇತ್ರದೊಳಗ ಒಳಗ ಬಂದಾರ. ಚೀನಾದವರು ಅದು ನಮ್ಮದ ಜಾಗ. ಅದರಾಗ ನಾವು ಹೆಂಗ ಬೇಕಾದಂಗ ಅಡ್ಯಾಡತೇವಿ. ನೀವು ಯಾರು ಅಂತ ಹೇಳ್ಯಾರು. ಭಾರತೀಯ ಗಡಿ ರಸ್ತೆ ಸಂಸ್ಥೆಯವರು ಚೀನಾ ಪ್ರದೇಶದೊಳಗ ರಸ್ತೆ ಮಾಡಾಕ ಬಂದಾರು. ಅದು ತಪ್ಪು ಅಂತ ಹೇಳ್ಯಾರು. ಒಂದು ಸಣ್ಣ ಗ್ರಾಮ ಪಂಚಾಯಿತಿ ರಸ್ತೆ ಮಾಡೋದರಾಗ ಕಳಪೆ ಕಾಮಗಾರಿ – ಲಂಚ ಎಲ್ಲಾ ನಡೀತಾವು. ಇನ್ನ ಹಿಮಾಲಯದಾಗ ಏನು ಮಾಡತಾರ ಇವರು ಅಂತ ಯಾರೋ ಅವರಿಗೆ ಮೂಗರ್ಜಿ ಬರದಿರಬೇಕು. ಅದಕ್ಕ ಅವರು ಬ್ಯಾಡ ಹೋಗರಿ ಅಂದಿರಬೇಕು.

ಇವು ಎಲ್ಲಾ ನಡಿಯೋವ. ಇದಕ್ಕ ಯುದ್ಧಕ್ಕ ಹೋಗಲಾರದ ಹಂಗ ಒಂದ ಕಡೆ ಕುತಗೊಂಡು ಮಾತಾಡಿ ಮುಗಿಸಿಕೊಳ್ಳೋ ವಿಚಾರ ಇವು. ಇದರಾಗ ವಿಶೇಷ ಏನು ಅಂದರ ನಮ್ಮನ್ನ ಆಳುವವರ ಪ್ರತಿಕ್ರಿಯೆ.

ಪಂಥ ಪ್ರಧಾನ ಸೇವಕರು ಎಂದಿನಂತೆ ಇದರ ಬಗ್ಗೆ ಮಾತಾಡಿಲ್ಲ. ನೀವು ಯಾವ ನೆಗಟಿವ್ ವಿಷಯ ಮಾತಾಡಬಾರದು. ಸರಕಾರದ ಯಾವ ತಪ್ಪೂ ಒಪ್ಪಿಕೊಳ್ಳಬಾರದು, ಯಾವುದೇ ನಿಖರವಾದ ಆಶ್ವಾಸನೆ ಕೊಡಬಾರದು. ಯಾವಾಗಲೂ ಪಾಸಿಟಿವ್ ಆಗಿ, ಎಲ್ಲರನ್ನೂ ಹುರಿದುಂಬಿಸುವ ಮಾತಾಡಬೇಕು ಅಂತ ಅವರಿಗೆ ಚುನಾವಣ ಪಂಡಿತ ಪ್ರಶಾಂತ ಕಿಶೋರ ಹೇಳಿದ್ದರಂತ. ಅದನ್ನ ಅವರು ಚಾಚೂ ತಪ್ಪದೇ ಪಾಲಿಸತಾರ. ಹೋಗಲಿ, ಭಾರತದಲ್ಲಿ ಮೊದಲಿಗೆ ವಿದೇಶಾಂಗ ಸಚಿವನಾಗಿದ್ದು ನಂತರ ವಿದೇಶ ಮಂತ್ರಿ ಆದ ಏಕೈಕ ವ್ಯಕ್ತಿ ಜಯಶಂಕರ ಅವರೂ ಮಾತಾಡಿಲ್ಲ. ಗೃಹ ಖಾತೆ ಸಚಿವ ಅಮಿತ ಷಾ ಅವರು ಎಂಟು ವರ್ಷದ ಹಿಂದೆ ಚೀನಾ ಸೈನಿಕರು ಭಾರತವನ್ನ ಪಿಕ್ ನಿಕ್ ತಾಣ ಅಂತ ತಿಳಕೊಂಡಾರು. ತಮಗ ಬೇಕಾದಾಗ ಬಂದು, ಮಜಾ ಮಾಡಿ ಹೋಗತಾರು. ನಮ್ಮ ಸರಕಾರ ಸುಮ್ಮನೇ ಕೂಡತೇತಿ ಅಂತ ಹೇಳಿದ್ದರು. ಅದನ್ನು ಯಾರೋ ಪುಣ್ಯಾತ್ಮರು ಟ್ವಿಟರ್ ನ್ಯಾಗಿಂದ ಹೊರಗ ತಗದು ತೋರಸಾಕ ಹತ್ಯಾರು.

ಅವ್ವ ಮಾಡಿದ ಅಡಿಗಿಗೆ ಹೆಸರು ಇಡಬ್ಯಾಡ್ರಿ ಅಂತ ಒಂದು ಶಾಯರಿ ಐತಿ. ‘ನಿಮಗ ಮಾಡಾಕ ಬರತಿದ್ದರ ಅಕೀ ಕೆಲಸ ತಪ್ಪಿಸಿ ನೀವು ಮಾಡರಿ. ಅಕಿ ಮಾಡೋ ಕೆಲಸಾ ಮಾಡೋದು ಕಷ್ಟ. ಅದಕ್ಕ ಹೆಸರು ಇಡೋದು ಸುಲಭ’ ಅಂತ.

ಹಂಗ, ಬ್ಯಾರೆದವರು ಸರಕಾರ ನಡೆಸೋವಾಗ ಟೀಕಾ ಮಾಡೋದು ವಿರೋಧ ಪಕ್ಷದವರಿಗೆ ಸುಲಭ. ಅದನ್ನ ನಂಬಿ ಜನಾ ಅವರಿಗೇ ಅಧಿಕಾರ ಕೊಟ್ಟರ ಸರಕಾರ ನಡೆಸೋದು ಕಷ್ಟ. ಆ ಶಾಯರಿ ಗೊತ್ತಿರಲಾರದವರಿಗೂ ಇದು ಗೊತ್ತಿರಬೇಕು.


ಇದನ್ನು ಓದಿ: ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...