Homeಮುಖಪುಟಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರಕ್ಕೆ ಟ್ವಿಟರ್‌ನಲ್ಲಿ ನಿರ್ಬಂಧ

ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರಕ್ಕೆ ಟ್ವಿಟರ್‌ನಲ್ಲಿ ನಿರ್ಬಂಧ

- Advertisement -
- Advertisement -

2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದ ಲಿಂಕ್‌ಅನ್ನು ಭಾರತದಲ್ಲಿ ಟ್ವಿಟರ್‌ ಸಂಸ್ಥೆ ನಿರ್ಬಂಧಿಸಿದೆ. “ನಾನು ಮಾಡಿರುವ ಪೋಸ್ಟ್ ಅನ್ನು ಕಾನೂನು ಬಾಧ್ಯತೆಗಳನ್ನು ಉಲ್ಲೇಖಿಸಿ ಟ್ವಿಟರ್ ಅಳಿಸಿ ಹಾಕಿದೆ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಶನಿವಾರ ಹೇಳಿದ್ದಾರೆ.

ಸಾಕ್ಷ್ಯಚಿತ್ರದ ಯೂಟ್ಯೂಬ್ ಲಿಂಕ್‌ನೊಂದಿಗೆ ಒ’ಬ್ರಿಯಾನ್ ಗುರುವಾರ ಟ್ವೀಟ್ ಮಾಡಿದ್ದರು. ‌“ಆಳವಾದ ಸಂಶೋಧನೆಯಿಂದ ಕೂಡಿದ ಈ ಸಾಕ್ಷ್ಯಾಚಿತ್ರ ನಮ್ಮನ್ನು ತಣ್ಣಗಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಪಸಂಖ್ಯಾತರ ಮೇಲೆ ಇರುವ ದ್ವೇಷವನ್ನು ಇದು ತೋರಿಸುತ್ತದೆ” ಎಂದು ಅವರು ಟ್ವೀಟ್‌ ಮಾಡಿದ್ದರು.

ಆದಾಗ್ಯೂ, ಟ್ವಿಟರ್ ಸಂಸ್ಥೆಯು, “ಭಾರತದಲ್ಲಿನ ಬಳಕೆದಾರರಿಗೆ ಪೋಸ್ಟ್ ಅನ್ನು ತಡೆಹಿಡಿದಿದೆ, ಕಾನೂನು ಬೇಡಿಕೆಯ ಪ್ರತಿಕ್ರಿಯೆಯಾಗಿ ಈ ಕ್ರಮ ಜರುಗಿಸಲಾಗಿದೆ” ಎಂದು ಹೇಳಿದೆ.

ಟಿಎಂಸಿ ಸಂಸದರಿಗೆ ಶನಿವಾರ ಟ್ವಿಟ್ಟರ್‌ನಿಂದ ಒಂದು ಇ-ಮೇಲ್ ಬಂದಿದೆ. “ಭಾರತದ ಸ್ಥಳೀಯ ಕಾನೂನುಗಳ ಬಾಧ್ಯತೆಗಳನ್ನು ಅನುಸರಿಸುವ ಸಲುವಾಗಿ ಭಾರತದಲ್ಲಿ ಟ್ವೀಟ್ ಅನ್ನು ತಡೆಹಿಡಿಯಲಾಗಿದೆ” ಎಂದು ಇಮೇಲ್ ಮೂಲಕ ತಿಳಿಸಿದೆ. ಪೋಸ್ಟ್ ದೇಶದ ಹೊರಗೆ ಲಭ್ಯವಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದು ಸೆನ್ಸಾರ್‌ಶಿಪ್‌ನ ನಿದರ್ಶನವಾಗಿದೆ ಎಂದು ಓ’ಬ್ರೇನ್ ಆರೋಪಿಸಿದ್ದಾರೆ. ಟ್ವಿಟರ್‌‌ ಉಲ್ಲೇಖಿಸಿದ ಕಾರಣವನ್ನು ದುರ್ಬಲ ಎಂದು ವಿವರಿಸಿದರು. “ಪ್ರತಿಪಕ್ಷಗಳು ಸರಿಯಾದ ಹೋರಾಟವನ್ನು ಮುಂದುವರೆಸುತ್ತವೆ” ಎಂದು ಎಚ್ಚರಿಸಿದ್ದಾರೆ.

ಜನವರಿ 17 ರಂದು, ‘ಭಾರತ: ಮೋದಿ ಪ್ರಶ್ನೆ’ ಸಾಕ್ಷ್ಯಾಚಿತ್ರದ ಎರಡು ಭಾಗಗಳ ಮೊದಲ ಸಂಚಿಕೆ ಬಿಡುಗಡೆಯಾಯಿತು.

2002ರ ಗುಜರಾತ್ ಗಲಭೆಯ ವಿಚಾರಣೆಗೆ ಬ್ರಿಟನ್ ಸರ್ಕಾರ ಕಳುಹಿಸಿದ ತಂಡವೊಂದು, “ಹಿಂಸಾಚಾರಕ್ಕೆ ಕಾರಣ ಅವತ್ತಿನ ಅಲ್ಲಿಯ ಭಯದ ವಾತಾವರಣ. ಹಾಗಾಗಿ ಆ ಪರಿಸ್ಥಿತಿಗೆ ರಾಜ್ಯದ ಅವತ್ತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ನೇರ ಹೊಣೆ” ಎಂದು ಉಲ್ಲೇಖಿಸಿರುವ ಬಿಬಿಸಿ ಸಾಕ್ಷ್ಯಚಿತ್ರ ಮಂಗಳವಾರ ಬಿಡುಗಡೆಯಾಗಿತ್ತು.

ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರವರಿ ಮತ್ತು ಮಾರ್ಚ್‌ ಸಮಯದಲ್ಲಿ ಹಿಂದೂ ಯಾತ್ರಾರ್ಥಿಗಳು ತುಂಬಿದ್ದ ಪ್ಯಾಸೆಂಜರ್ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿದ ನಂತರ ಗುಜರಾತ್‌ನಲ್ಲಿ ದೊಡ್ಡ ಪ್ರಮಾಣದ ಕೋಮುಗಲಭೆ ಭುಗಿಲೆದ್ದಿತ್ತು. ಗಲಭೆಯಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ. ಈ ಗಲಭೆಯನ್ನು ತಡೆಯಲು ಸರ್ಕಾರ ಪ್ರಯತ್ನ ಮಾಡಿಲ್ಲ ಎಂಬ ಆರೋಪವನ್ನು ಮೋದಿ ಅಲ್ಲಗಳೆದಿದ್ದಾರೆ.

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಈ ಹಿಂಸಾಚಾರವನ್ನು ತಡೆಯಲು ಗುಜರಾತ್ ಪೊಲೀಸರಿಗೆ ಕಾರ್ಯನಿರ್ವಹಿಸದಂತೆ ಮೋದಿ ತಡೆದಿದ್ದಾರೆ ಎಂದು ಬ್ರಿಟಿಷ್ ತನಿಖಾ ತಂಡ ಆರೋಪಿಸಿದೆ ಎಂದು ಬಿಬಿಸಿ ತನ್ನ ಸಾಕ್ಷ್ಯಚಿತ್ರದಲ್ಲಿ ಹೇಳಿಕೊಂಡಿದೆ.

ಆದಾಗ್ಯೂ, ಹಿಂಸಾಚಾರದ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿ ಅಂತಿಮ ವರದಿ ನೀಡಿದೆ. ಈ ವರದಿಯು, 2012ರ ಫೆಬ್ರವರಿ ನಲ್ಲಿ ಮೋದಿ ಮತ್ತು ಇತರ 63 ಜನರ ವಿರುದ್ಧ ವಿಚಾರಣೆ ಮಾಡಬಹುದಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ. 2013 ರಲ್ಲಿ ತಂಡದ ವರದಿಯನ್ನು ಮ್ಯಾಜಿಸ್ಟ್ರೇಟ್ ಒಪ್ಪಿಕೊಂಡರು.

ಕಳೆದ ವರ್ಷ ಜೂನ್ 24 ರಂದು, ಎಸ್‌ಐಟಿ ವರದಿಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಫೆಬ್ರವರಿ 28, 2002ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಗುಂಪೊಂದು ಕಲ್ಲು ತೂರಾಟ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದಾಗ 69 ಜನರು ಸಾವಿಗೀಡಾದರು, ಅದರಲ್ಲಿ ಎಹ್ಸಾನ್ ಜಾಫ್ರಿ ಕೂಡ ಒಬ್ಬರಾಗಿದ್ದಾರೆ.

ಮಂಗಳವಾರ ಬಿಡುಗಡೆಯಾದ BBC ಸಾಕ್ಷ್ಯಚಿತ್ರವು ಮಾಜಿ ಹಿರಿಯ ರಾಜತಾಂತ್ರಿಕ ಸಂದರ್ಶನವನ್ನು ಒಳಗೊಂಡಿದೆ. ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಕಳುಹಿಸಿದ ತನಿಖಾಧಿಕಾರಿಗಳಲ್ಲಿ ಒಬ್ಬರು, “ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತು ಯೋಜಿಸಿದೆ” ಎಂದು ಹೇಳಿದ್ದಾರೆ.

“ವಿಎಚ್‌ಪಿ ಮತ್ತು ಅದರ ಮಿತ್ರಪಕ್ಷಗಳು, ರಾಜ್ಯ ಸರ್ಕಾರವು ಸೃಷ್ಟಿಸಿದ ಭಯದ ವಾತಾವರಣವಿಲ್ಲದೆ ಇಷ್ಟು ಹಾನಿಯನ್ನುಂಟುಮಾಡಲು ಸಾಧ್ಯವಿಲ್ಲ” ಎಂದು ಬ್ರಿಟಿಷ್ ಸರ್ಕಾರದ ತನಿಖಾ ತಂಡದ ವರದಿಯು ಹೇಳಿತ್ತು.

ಫೆಬ್ರವರಿ 27, 2002ರಂದು ಮೋದಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಗಲಭೆಯಲ್ಲಿ ಮಧ್ಯಪ್ರವೇಶಿಸದಂತೆ ಅವರಿಗೆ ಆದೇಶಿಸಿದ್ದಾರೆ ಎಂದು “ವಿಶ್ವಾಸಾರ್ಹ ಸಂಪರ್ಕಗಳನ್ನು” ತಂಡವು ಉಲ್ಲೇಖಿಸಿದೆ ಎಂದು ಸಾಕ್ಷ್ಯಚಿತ್ರವು ಹೇಳಿಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...