Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

ಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

- Advertisement -
- Advertisement -

ಕನ್ನಡದಲ್ಲಿ ಪ್ರತಿವರ್ಷ ನೂರಾರು ಅನುವಾದ ಕೃತಿಗಳು ಪ್ರಕಟವಾಗುತ್ತವೆ. ಹೆಚ್ಚಿನವು ಕಥೆ ಕಾದಂಬರಿ ಕಾವ್ಯಗಳು. ವಿಚಾರಸಾಹಿತ್ಯ, ಚರಿತ್ರೆ, ಆತ್ಮಕಥನ, ಪ್ರವಾಸಕಥನಗಳು ಕಡಿಮೆ. ಹೀಗಿರುತ್ತ ಯುವಲೇಖಕ ಆರ್.ಕೆ. ಆಕರ್ಷ, ಭೂಮಂಡಲದ ಗಾಯವೆನಿಸಿಕೊಂಡಿರುವ ಪ್ಯಾಲಸ್ತೇನಿಗೆ ಸಂಬಂಧಿಸಿದ ಅನುಭವ ಕಥನವೊಂದನ್ನು ಅನುವಾದಿಸಿರುವುದು ವಿಶಿಷ್ಟವಾಗಿದೆ. ಇದು ಏಶ್ಯಾ-ಆಫ್ರಿಕಾದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಖ್ಯಾತರಾಗಿರುವ ಕೆನಡಾದ ಲೇಖಕ ಸಿಂಟಿಯೊ ಅವರ ‘ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ ಕೃತಿಯ ತರ್ಜುಮೆ. ‘ನಾನು ಅರೆಬಿಕ್‌ನಲ್ಲಿ ಪ್ರೀತಿಸುತ್ತೇನೆ’ ‘ನಾನೀಗ ಸೈರನ್ನುಗಳಿಗೆ ಹೆದರುವುದಿಲ್ಲ’ ‘ನಿಮ್ಮದೇ ಮುಳ್ಳುಗಳನ್ನು ನಿಮ್ಮ ಕೈಯಿಂದ ಕಿತ್ತುಕೊಳ್ಳುತ್ತ’ ಮೊದಲಾದ ಎಂಟು ಅಧ್ಯಾಯಗಳುಳ್ಳ ಪುಸ್ತಕವಿದು. ಪ್ರತಿ ಅಧ್ಯಾಯವೂ ಒಬ್ಬೊಬ್ಬ ಪ್ಯಾಲಸ್ತೇನಿ ಹೋರಾಟಗಾರ-ಲೇಖಕರನ್ನು ಭೇಟಿಯಾಗಿ ನಡೆಸಲಾದ ಮಾತುಕತೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕಗಳು ಆಕ್ರಮಣಕಾರಿ ರಾಜಕೀಯ ಧೋರಣೆಯ ಫಲವಾಗಿ ಲೋಕದ ಕಣ್ಣಲ್ಲಿ ಉಗ್ರಗಾಮಿಗಳಾಗಿರುವ, ಆದರೆ ತಮ್ಮ ಪೂರ್ವಜರಿಂದ ಬಂದ ಜಮೀನು ಮನೆ ತೋಟ ಗ್ರಂಥಭಂಡಾರಗಳನ್ನು ಕಳೆದುಕೊಂಡು, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಜನರ ದುಃಖದುಮ್ಮಾನಗಳ ಅನುಭವ ಮತ್ತು ಚಿಂತನೆಯನ್ನು ಇಲ್ಲಿರುವ ಕಥನವು ಒಳಗೊಂಡಿದೆ. ಇದನ್ನು ಓದುತ್ತಿದ್ದರೆ ಸಾಹಿತ್ಯಕ ತಾತ್ವಿಕ ರಾಜಕೀಯ ತತ್ವಗಳ ಕಿಡಿಗಳೇ ತುಂಬಿದ ಕೊಂಡದಲ್ಲಿ ಹಾಯುವಂತಹ ಅನುಭವವಾಗುತ್ತದೆ.

ನಾನು ಇಸ್ರೇಲ್ ಮತ್ತು ಪ್ಯಾಲೆಸ್ತೇನಿನ ಪ್ರವಾಸ ಮಾಡಿದ್ದೆ. ರಾಜಕೀಯ ಚರ್ಚೆ ಮಾಡುವುದಕ್ಕೆಂದೇ ಇರುವ ಕಾಫಿಕ್ಲಬ್ಬುಗಳನ್ನು ಬೆತ್ಲೆಹೆಂನಲ್ಲಿ ನೋಡಿದ್ದೆ. ಪಶ್ಚಿಮದಂಡೆಯ ಹೆಬ್ರೋನ್ ಜೆರಿಕಾ ಮೊದಲಾದ ಪಟ್ಟಣಗಳಲ್ಲಿ ತಿರುಗಾಡುವಾಗ, ಪ್ಯಾಲಸ್ಟೇನಿಯರ ಊರುಗಳನ್ನು ಬೆಟ್ಟತೋಟಗಳನ್ನು ಒತ್ತುವರಿ ಮಾಡುತ್ತ ಇಸ್ರೇಲಿ ಸರ್ಕಾರವು ಯಹೂದಿಗಳಿಗೆ ಮನೆಗಳನ್ನು ಕಟ್ಟಿಕೊಡುವುದನ್ನು, ಬೃಹತ್ ಗೋಡೆಗಳನ್ನು ನಿರ್ಮಿಸುವುದನ್ನು ಗಮನಿಸಿದ್ದೆ. ಆದರೆ ಅಲ್ಲಿನ ಹೋರಾಟಗಳ ಬಗ್ಗೆ ನೇರವಾಗಿ ಯಾರೊಟ್ಟಿಗೂ ಮಾತಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಈ ಪುಸ್ತಕವು ನನ್ನ ತಿರುಗಾಟದ ಕೊರತೆಗಳನ್ನು ತುಂಬಿಕೊಡುವ ಸಮೃದ್ಧ ಅನುಭವ ನೀಡಿತು. ಇಸ್ರೇಲಿನ ಸೈನಿಕರ ನಿಷ್ಠುರ ತಪಾಸಣೆಯಲ್ಲಿ ಒಂದೇ ಊರಲ್ಲಿರುವ ಬೇರೆಬೇರೆ ಭಾಗಗಳಿಗೆ ಹೋಗಲು ಚೆಕ್‌ಪಾಯಿಂಟುಗಳನ್ನು ದಾಟುವ ಕಷ್ಟವನ್ನು ಕುರಿತ ಇಲ್ಲಿನ ಭಾಗಗಳು ಪ್ರವಾಸಿಗರಾಗಿ ಹೋಗುವ ಎಲ್ಲರ ಅನುಭವಕ್ಕೂ ಬರುತ್ತವೆ. ಆದರೆ ಪ್ಯಾಲೆಸ್ತೇನಿಯರಿಗೆ ಈ ಅಪಮಾನಜನಕ ದಾಟುವಿಕೆ ನಿತ್ಯದ ಅನುಭವವಾಗಿದೆ.

ನೋವು ಹೋರಾಟ ಸಾವು ಹೊರದಬ್ಬುವಿಕೆ ಅನಾಥಪ್ರಜ್ಞೆಗಳ ಅಗ್ನಿಪರ್ವತದಂತಿರುವ ಸಂಘರ್ಷಮಯ ಪ್ರದೇಶದಲ್ಲಿ ಸಾಹಿತ್ಯದಂತಹ ಕಲೆಯೊಂದು ಏನು ಮಾಡಬಲ್ಲದು ಎಂಬುದಕ್ಕೆ, ಈ ಕೃತಿಯಲ್ಲಿರುವ ದಾಖಲೆ ಮಾತುಕತೆ ವಿಶ್ಲೇಷಣೆ ವ್ಯಾಖ್ಯಾನಗಳು ಸಾಕ್ಷಿಯಂತಿವೆ. ಪ್ಯಾಲೆಸ್ತೇನಿ ಲೇಖಕರು ಹೇಳಿಕೊಂಡಿರುವ ಅನುಭವಗಳು ಮೈಜುಂ ಅನಿಸುವಂತಿವೆ. ಒಮ್ಮೆ ಕವಿ ಮೊಹಮ್ಮದ ಕುರ್ದ್ ಅವರು ತಮ್ಮ ಮೂಲಮನೆಯನ್ನು ಯಹೂದಿ ಆಕ್ರಮಣಕಾರರಿಂದ ಕಳೆದುಕೊಂಡ ಅನುಭವದ ಆಧಾರದಲ್ಲಿ ನಿರ್ಮಿಸಿದ ‘ಮೈ ನೈಬರ್‌ಹುಡ್’ ಸಾಕ್ಷ್ಯಚಿತ್ರದೊಂದಿಗೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ. ಅವರಿಗೆ ರೈಲನ್ನು ನಡುನಡುವೆ ನಿಲ್ಲಿಸಿ ಸೈನಿಕರಿಂದ ತಪಾಸಣೆಗೆ ಒಳಗಾಗದೆ ಪಯಣ ಮಾಡುವುದರ ಅನುಭವವು ಹೊಸತೆನಿಸುತ್ತದೆ. ನಿತ್ಯವೂ ಪ್ರತಿಭಟನ ಘೋಷಣೆ ಹಾಕುತ್ತ ವಿಮೋಚನ ಚಳವಳಿ ನಡೆಸುತ್ತಿರುವ ಪ್ಯಾಲೆಸ್ತೇನಿಯರು ಎಷ್ಟೆಲ್ಲ ಸಣ್ಣಪುಟ್ಟ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೂಡ ಇದು ಮನದಟ್ಟುಮಾಡುತ್ತದೆ.

 

ಆಕರ್ಷ ರಮೇಶ ಕಮಲ

ಈ ಕೃತಿಯಲ್ಲಿ ಧೀಮಂತರಾದ ಲೇಖಕಿಯರ ಜತೆಗಿನ ಮಾತುಕತೆಗಳಂತೂ ಉಜ್ವಲವಾಗಿವೆ. ಹೋರಾಟದ ಗರ್ಭದಲ್ಲಿರುವ ಸಾಮಾನ್ಯ ಜನ ರೂಪಕಗಳಲ್ಲಿ ಮಾತಾಡುವ ಕವಿಗಳಾಗಿರುತ್ತಾರೆ. ಹೋರಾಟಗಾರರು ದಾರ್ಶನಿಕರಾಗಿರುತ್ತಾರೆ ಮತ್ತು ಲೇಖಕರು ರಾಜಕೀಯ ಪ್ರಜ್ಞೆಯುಳ್ಳವರಾಗಿರುತ್ತಾರೆ ಎಂಬುದನ್ನು ಇಲ್ಲಿನ ಮಾತುಕತೆಗಳು ಸೂಚಿಸುತ್ತವೆ. ಲೇಖಕ ಸಿಂಟಿಯೊ, ಪ್ಯಾಲಸ್ತೇನಿಯರ ಹೋರಾಟ ಮತ್ತು ಸಾಹಿತ್ಯಗಳ ಬಗ್ಗೆ ಸಹಾನುಭೂತಿ ಉಳ್ಳವರು. ಆದರೂ ಇಸ್ರೇಲಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೇಕದ ಅವಾಸ್ತವಿಕ ವಾದಗಳ ಬಗ್ಗೆ ಭಿನ್ನಮತವುಳ್ಳವರು. ಹೀಗಾಗಿ ಇದೊಂದು ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನವಿರುವ ಕೃತಿ ಕೂಡ ಆಗಿದೆ.

ಹೊಸಕಾಲದ ತರುಣ-ತರುಣಿಯರಲ್ಲಿ ಮತೀಯ ರಾಜಕಾರಣಕ್ಕೆ ಒಲಿದವರು ಸಾಕಷ್ಟು ಜನರಿದ್ದಾರೆ. ಯಾವುದೇ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ನಿರಾಕರಿಸುತ್ತ ಭೋಗವಾದವನ್ನೇ ನಂಬಿದವರೂ ಇದ್ದಾರೆ. ಆದರೆ ಇಂಜಿನಿಯರಿಂಗ್ ಪದವೀಧರರಾದ ಆಕರ್ಷ ಅವರಂತೆ ಕೆಲವರು, ನಾಡಿನ ಮತ್ತು ದೇಶದ ನೋವುಗಳಿಗೆ ಮಿಡಿಯುವವರೂ ಇದ್ದಾರೆ. ಅನುವಾದಕ್ಕೆ ಈ ಕೃತಿಯ ಆಯ್ಕೆಯೇ ಅವರ ಕಾಳಜಿಯನ್ನು ಲೋಕದೃಷ್ಟಿಯನ್ನು ಕಾಣಿಸುತ್ತದೆ. ತಾಯಿ ಎಂ.ಆರ್. ಕಮಲ ಕನ್ನಡಿಗರಿಗೆ ಅಮೆರಿಕದ ಆಫ್ರಿಕನರ ಹೋರಾಟಗಳ ಕಥನಗಳನ್ನು ಕೊಟ್ಟಿದ್ದರು. ಅವರ ಮಗ ಜಗತ್ತಿನ ಇನ್ನೊಂದು ಭೂಭಾಗದ ಹೋರಾಟದ ಕಥನವನ್ನು ಕೊಟ್ಟಿದ್ದಾರೆ.

ಬರಿಯ ನೆನಪಲ್ಲ
ಮೂಲ: ಪೇ ನೋ ಹೀಡ್ ಟು ದಿ ರಾಕೆಟ್ಸ್
ಲೇಖಕ: ಮಾಸೆಲ್ಲೊ ಟಿ ಸಿಂಟಿಯೊ
ಅನು: ಆಕರ್ಷ ರಮೇಶ್ ಕಮಲ
ಕಥನ ಪ್ರಕಾಶನ, ಬೆಂಗಳೂರು, 2021, ಬೆಲೆ: 225

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...