Homeಕರ್ನಾಟಕಚಾ.ನಗರ ಜಿಲ್ಲೆ: ಬಿಜೆಪಿಗೆ ಗೇಟ್‌ ಪಾಸ್ ಸಿಕ್ಕಿದ್ದೇಕೆ? ಕಾಂಗ್ರೆಸ್ ಗೆಲುವಿನ ಗುಟ್ಟೇನು?

ಚಾ.ನಗರ ಜಿಲ್ಲೆ: ಬಿಜೆಪಿಗೆ ಗೇಟ್‌ ಪಾಸ್ ಸಿಕ್ಕಿದ್ದೇಕೆ? ಕಾಂಗ್ರೆಸ್ ಗೆಲುವಿನ ಗುಟ್ಟೇನು?

- Advertisement -
- Advertisement -

ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಭದ್ರ ನೆಲೆ. ಇಲ್ಲಿ ದಲಿತರು, ಲಿಂಗಾಯತರು, ಉಪ್ಪಾರ ಶೆಟ್ಟರು ಗಣನೀಯವಾಗಿದ್ದಾರೆ. ಇಂತಹ ನೆಲದಲ್ಲಿ ಬಿಜೆಪಿ ನೆಲೆ ಕಾಣಲು ಹೆಣಗಾಡುತ್ತಿದೆ. ಆದರೆ ರಾಜಕೀಯ ಏರಿಳಿತಗಳಲ್ಲಿ 2018ರಲ್ಲಿ ಬಿಜೆಪಿ ಗೆದ್ದುಕೊಂಡಿದ್ದ ಒಂದು ಸ್ಥಾನವೂ ಈ ಚುನಾವಣೆಯಲ್ಲಿ ಕೈತಪ್ಪಿದೆ.

ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಆದ ಪಲ್ಲಟಗಳ ಪೈಕಿ, ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರಿಕೊಂಡಿಕೊಂಡಿದ್ದೂ ಒಂದು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತಮ್ಮನ್ನು ಕಡೆಗಣಿಸಿದೆ ಎಂಬ ಬೇಸರದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಇತ್ತು ಬಿಜೆಪಿ ಸೇರಿಕೊಂಡ ಪ್ರಸಾದ್, ನಂತರದ ನಂಜನಗೂಡು ಉಪಚುನಾವಣೆಯಲ್ಲಿ ಸೋತಿದ್ದರು. ಚಾಮರಾಜನಗರ ಸಂಸದರಾಗಿ ಕೆಲಸ ಮಾಡಿದ ಅವರಿಗೆ ನಂಜನಗೂಡು ಉಪಚುನಾವಣೆಯ ಸೋಲು ಎಡಬಿಡದೆ ಕಾಡಿತು. ಅದಕ್ಕೆ ಅವರು ಪ್ರತ್ಯುತ್ತರವನ್ನೂ ನೀಡಿದರು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರನ್ನು ಮಣಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ (ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ) ಕಾಂಗ್ರೆಸ್ ಎರಡಲ್ಲಿ ಗೆಲುವು ಪಡೆಯಿತು. ಒಂದರಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಬಿಎಸ್‌ಪಿಯಿಂದ ಗೆದ್ದಿದ್ದ ಎನ್‌.ಮಹೇಶ್ ಅವರು ಆಪರೇಷನ್ ಕಮಲದ ಸಮಯದಲ್ಲಿ ಪಕ್ಷದ ಹೈಕಮಾಂಡ್‌ ನಿರ್ಧಾರವನ್ನು ಕಡೆಗಣಿಸಿ ಬಿಜೆಪಿಯನ್ನು ಬೆಂಬಲಿಸಿದರು. ಕೊನೆಗೆ ಪಕ್ಷದಿಂದ ಉಚ್ಛಾಟಿತರಾದರು. ಏಕೈಕ ಶಾಸಕರಾಗಿದ್ದ ಕಾರಣ ಪಕ್ಷಾಂತರ ನಿಷೇಧ ಕಾನೂನಿನ ನಿಯಮಗಳು ಅವರಿಗೆ ಅನ್ವಯವಾಗಲಿಲ್ಲ. ಅಧಿಕೃತವಾಗಿ ಬಿಜೆಪಿ ಸೇರಿಕೊಂಡ ಮಹೇಶ್‌ ಅವರಿಂದಾಗಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಇತ್ತೆಂದೇ ಹೇಳಬಹುದು. ಆದರೆ ಇದ್ದ ಎರಡು ಸ್ಥಾನವನ್ನೂ (ಕೊಳ್ಳೇಗಾಲ, ಗುಂಡ್ಲಪೇಟೆ) ಬಿಜೆಪಿ ಕಳೆದುಕೊಂಡರೆ ಮೂರರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಒಂದು ಸ್ಥಾನ (ಹನೂರು) ಜೆಡಿಎಸ್ ಪಾಲಾಗಿದೆ. ಈ ಪಲ್ಲಟಕ್ಕೆ ಕಾರಣವೇನು?

ಚಾಮರಾಜನಗರ ಕ್ಷೇತ್ರ

ಚಾಮರಾಜನಗರ ಒಂದು ಕಾಲಕ್ಕೆ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಹಿಡಿತದಲ್ಲಿತ್ತು. ಆದರೆ ಪುಟ್ಟರಂಗಶೆಟ್ಟರು ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ, ಇಲ್ಲಿ ಗಣನೀಯವಾಗಿರುವ ಉಪ್ಪಾರ ಸಮುದಾಯದ ಮತಗಳು ಸಂಘಟಿತವಾದವು. ಹೀಗಾಗಿ ಶೆಟ್ಟರು ಕಾಂಗ್ರೆಸ್‌ನ ವಿಜಯಪತಾಕೆಯನ್ನು ಹಾರಿಸುತ್ತ ಬಂದಿದ್ದರು.  ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದರು. ಇಂತಹ ಶೆಟ್ಟರಿಗೆ ಈ ಬಾರಿ ಟಫ್‌ ಫೈಟ್‌ ಎದುರಾಯಿತು. ವಿ.ಸೋಮಣ್ಣನವರನ್ನು ವರುಣಾ ಜೊತೆಗೆ ಚಾಮರಾಜನಗರದಲ್ಲಿಯೂ ನಿಲ್ಲಿಸಲಾಯಿತು. ಇದರ ಹಿಂದೆ ಬಿಜೆಪಿ ಜಾತಿ ಲೆಕ್ಕಾಚಾರವನ್ನು ಹಾಕಿತ್ತು.

ಅಂದಾಜಿನ ಪ್ರಕಾರ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಉಪ್ಪಾರರು ಸಮಬಲ ಹೊಂದಿದ್ದಾರೆ. 50 ಸಾವಿರಕ್ಕೂ ಪರಿಶಿಷ್ಟ ಜಾತಿ (ಹೊಲೆಯರು, ಮಾದಿಗರು, ಭೋವಿ, ಲಂಬಾಣಿ ಇತ್ಯಾದಿ) ಮತದಾರರು ಇದ್ದು ನಿರ್ಣಾಯಕವಾಗಿದ್ದಾರೆ. ಮತ್ತೊಂದು ಅಂದಾಜಿನ ಪ್ರಕಾರ ಲಿಂಗಾಯತರು ಸುಮಾರು 50 ಸಾವಿರ, ಉಪ್ಪಾರರು ಸುಮಾರು 30 ಸಾವಿರ, ಪರಿಶಿಷ್ಟ ಪಂಗಡ (ನಾಯಕರು) ಮುತ್ತು ಮುಸ್ಲಿಮರು ತಲಾ 20,000, ಕುರುಬರು 8,000 ಮತದಾರರು ಇದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ದಲಿತರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ಸೋಮಣ್ಣ ಮತ್ತು ಪುಟ್ಟರಂಗಶೆಟ್ಟರ ಫಲಿತಾಂಶ ನಿರ್ಧಾರವಾಗಿತ್ತು. ಬಿಎಸ್‌ಪಿಯಿಂದ ಹೋರಾಟಗಾರ ಹ.ರ.ಮಹೇಶ್ ಇಲ್ಲಿ ಕಣಕ್ಕಿಳಿದಿದ್ದರು. ಬಿಎಸ್‌ಪಿ ಹೆಚ್ಚಿನ ಮಟ್ಟದ ಮತಗಳನ್ನು ಒಡೆದರೆ ಪುಟ್ಟರಂಗಶೆಟ್ಟರಿಗೆ ಗೆಲುವು ಕಷ್ಟವೆಂದು ಹೇಳಲಾಗಿತ್ತು. ಆದರೆ ಆಡಳಿತ ವಿರೋಧಿ ಅಲೆ, ಸೋಮಣ್ಣ ಹೊರಗಿನಿಂದ ಬಂದವರೆಂಬ ಭಾವನೆ ಮತದಾರರಲ್ಲಿ ಬಲವಾಯಿತು. ಲಿಂಗಾಯತೇತರ ಮತಗಳು ಸ್ಥಳೀಯ ನಾಯಕ ಪುಟ್ಟರಂಗ ಶೆಟ್ಟರ ಪರವಾಗಿ ಸಂಘಟಿತವಾದವು. ಜೊತೆಗೆ ಸ್ಥಳೀಯವಾಗಿ ಬಿಜೆಪಿ ಮುಖಂಡರಲ್ಲಿ ಬಿರುಕುಗಳು ಚುನಾವಣಾ ಪೂರ್ವದಲ್ಲಿಯೇ ಮೂಡಿದ್ದವು. ಸೋಮಣ್ಣ ಇಲ್ಲಿಗೆ ಬಂದರೆ ನಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆಂದು ಸ್ಥಳೀಯ ಬಿಜೆಪಿ ಮುಖಂಡರು ಭಾವಿಸಿದರೆಂದೇ ಕ್ಷೇತ್ರದ ಜನತೆ ಹೇಳುತ್ತಾರೆ. ಅಷ್ಟಾಗಿಯೂ ಪೈಪೋಟಿ ನೀಡಲು ಯತ್ನಿಸಿದ ಸೋಮಣ್ಣನವರು 7,533 ಮತಗಳ ಅಂತರದಲ್ಲಿ ಸೋಲುಂಡರು.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜನಗರ: ಪುಟ್ಟರಂಗಶೆಟ್ಟಿ-ಸೋಮಣ್ಣ ಸೆಣಸಾಟದಲ್ಲಿ ಬಿಎಸ್‌ಪಿ ಪಾತ್ರ ನಿರ್ಣಾಯಕ

ಕೊಳ್ಳೇಗಾಲ ಎಸ್‌ಸಿ ಮೀಸಲು ಕ್ಷೇತ್ರ

ಸತತ ಸೋಲುಗಳಿಂದ ಕಂಗೆಟ್ಟಿದ್ದ ಎನ್‌.ಮಹೇಶ್ ಚಳವಳಿಯ ಮೂಲಕ ಬಂದವರು. ಹೀಗಾಗಿ ಅವರ ಮೇಲೆ 2018ರ ಚುನಾವಣೆಯಲ್ಲಿ ಅನುಕಂಪವಿತ್ತು. ಚಾಮರಾಜನಗರ ಭಾಗದಲ್ಲಿ ಬಿಎಸ್‌ಪಿ ಒಂದಿಷ್ಟು ನೆಲೆ ಕಂಡುಕೊಳ್ಳಲು ಮಹೇಶ್ ಕಾರಣವಾಗಿದ್ದರು. ಆದರೆ ಅವರು ಸಿದ್ಧಾಂತವನ್ನು ಬದಲಿಸಿದರು. ಆಪರೇಷನ್ ಕಮಲದ ವೇಳೆ ಬಿಜೆಪಿಯನ್ನು ಬೆಂಬಲಿಸಿದರು. ನಂತರ ಪಕ್ಷದಿಂದ ಉಚ್ಛಾಟಿಸಿದಾಗ ಬಿಜೆಪಿ ಸೇರಿಕೊಂಡರು. ಡಾ.ಬಿ.ಆರ್‌.ಅಂಬೇಡ್ಕರ್‌ ಎನ್ನುತ್ತಿದ್ದವರು, ವಿ.ಡಿ.ಸಾವರ್ಕರ್‌ ಜಪ ಮಾಡಿದರು. ಬಹುತ್ವ ಸಿದ್ಧಾಂತವನ್ನು ಮರೆತು ಹಿಂದುತ್ವದತ್ತ ಹೊರಳಿದ್ದನ್ನು ಕ್ಷೇತ್ರದ ಜನತೆ ಮರೆಯಲಿಲ್ಲ. ಚುನಾವಣೆ ಪ್ರಚಾರಕ್ಕೆ ಹೋದ ಬಹುತೇಕ ಕಡೆ ಅವರು ಮುಖಭಂಗ ಅನುಭವಿಸಿದರು. ಇವರು ನಂಬಿಕೆಗೆ ಅನರ್ಹರು, ದಲಿತರನ್ನು ಕಡೆಗಣಿಸಿ ಸವರ್ಣೀಯರನ್ನು ಓಲೈಕೆ ಮಾಡಲು ಮುಂದಾಗಿದ್ದಾರೆಂಬ ಸಂದೇಶ ದಲಿತರಲ್ಲಿ ರವಾನೆಯಾಗಿತ್ತು. ಭೀಮವಾದಕ್ಕಾಗಿ ಹೋರಾಡಿದ್ದ ಮಹೇಶ್‌, ಅದೇ ಭೀಮವಾದದ ಪಡೆಯಿಂದ ಸೋಲುಂಡಿದ್ದು ಕಾಲದ ಪಲ್ಲಟಗಳೊಂದು. ಒಂದು ರೀತಿಯಲ್ಲಿ ಹೇಳುವುದಾದರೆ ಇದು ಸಿದ್ಧಾಂತದ ಗೆಲುವು ಮತ್ತು ಸೋಲಿನ ಸ್ಪರ್ಧೆಯಾಗಿತ್ತು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ.ಆರ್‌.ಕೃಷ್ಣಮೂರ್ತಿಯವರು ಸಜ್ಜನ ರಾಜಕಾರಣಿ. ಆದರೆ ಸತತ ಸೋಲುಗಳಿಂದ ಕಂಗೆಟ್ಟಿದ್ದರು. 2018ರಲ್ಲಿ ಎನ್‌.ಮಹೇಶ್‌ ಅವರ ಮೇಲಿದ್ದ ಅನುಕಂಪ 2023ರಲ್ಲಿ ಕೃಷ್ಣಮೂರ್ತಿಯವರತ್ತ ತಿರುಗಿತ್ತು. ಮತ್ತೊಂದೆಡೆ ಬಿಎಸ್‌ಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು, ಹೈಕಮಾಂಡ್‌ ಆದೇಶದಂತೆ ಕಾಂಗ್ರೆಸ್ ಬೆಂಬಲಿಸಿದರು. ಇದೆಲ್ಲದರ ಕಾರಣ, ಎನ್‌.ಮಹೇಶ್‌ 59,519 ಮತಗಳ ಅಂತರದಲ್ಲಿ ಸೋಲುಕಂಡರು.

ಇದನ್ನೂ ಓದಿರಿ: ಕೊಳ್ಳೇಗಾಲ: ಪ್ರಚಾರ ವೇಳೆ ಹಲವೆಡೆ ಎನ್.ಮಹೇಶ್ ವಿರುದ್ಧ ಮತದಾರರ ಧಿಕ್ಕಾರ

ಗುಂಡ್ಲುಪೇಟೆ ಕ್ಷೇತ್ರ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಹಿರಿಯ ರಾಜಕಾರಣಿ, ದಿವಂಗತ ಎಚ್.ಎಸ್‌.ಮಹದೇವ ಪ್ರಸಾದ್. ಐದು ಬಾರಿ ಶಾಸಕರಾಗಿದ್ದ ಮಹದೇವ ಪ್ರಸಾದ್‌ ಅವರು ವಿಧಾನಸಭಾ ಸದಸ್ಯರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರ ಹಾಗೂ ಜಿಲ್ಲೆಗೆ ಮಾಡಿರುವ ಕೆಲಸಗಳನ್ನು ಇಲ್ಲಿನ ಜನ ಈಗ ಸ್ಮರಿಸುತ್ತಾರೆ. ಆದರೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಅವರ ಹಠಾತ್ ನಿಧನದ ಬಳಿಕ ಅನೇಕ ಪಲ್ಲಟಗಳು ಕ್ಷೇತ್ರದಲ್ಲಾಗಿದ್ದವು.

2017ರಲ್ಲಿ ನಡೆದ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಅನುಕಂಪದ ಅಲೆಯ ಕಾರಣ ಗೀತಾ ಅವರು ಗೆದ್ದರು. ಆದರೆ ಮಹದೇವ ಪ್ರಸಾದ್ ಕುಟುಂಬದೆದುರು ಮೂರು ಬಾರಿ ಸೋಲು ಕಂಡಿದ್ದ ಬಿಜೆಪಿಯ ಸಿ.ಎಸ್.ನಿರಂಜನಕುಮಾರ್ ಅವರಿಗೆ 2018ರ ವಿಧಾನಸಭಾ ಚುನಾವಣೆ ಕೈ ಹಿಡಿಯಿತು. ಕಾಂಗ್ರೆಸ್ಸಿನ ಮತಗಳು ಹಲವು ಕಾರಣಗಳಿಗೆ ಚದುರಿ ಹೋಗಿ ನಿರಂಜನ್ ಮೊದಲ ಬಾರಿಗೆ ಗೆಲುವಿನ ನಗೆಬೀರಿದರು. 2018ರ ಚುನಾವಣೆಯಲ್ಲಿ ನಿರಂಜನ್ ಅವರಿಗೆ ಅನುಕಂಪದ ಮತಗಳು ಬಿದ್ದವು.

ನಿರಂಜನ್ ಅವರೇನೋ ಗೆದ್ದರು. ಆದರೆ ಆನಂತರದಲ್ಲಿ ಕ್ಷೇತ್ರದಲ್ಲಿ ಸವಾಲುಗಳನ್ನು ಪಕ್ಷದೊಳಗೆಯೇ ಎದುರಿಸುವಂತಾಯಿತು. ಚಾಮುಲ್‌ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿಯೊಳಗಿನ ಬೇಗುದಿ ಹೊರಬಿದ್ದಿತ್ತು. ಮೈಸೂರು–ಚಾಮರಾನಗರ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನಿಲ್‌ ಅವರು ಪಕ್ಷದ ಬೆಂಬಲಿತರಾಗಿ ಚಾಮುಲ್‌ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಬಯಸಿದ್ದರು. ಇದಕ್ಕೆ ನಿರಂಜನಕುಮಾರ್‌ ಸಮ್ಮತಿ ಇರಲಿಲ್ಲ. ತನಗೆ ಟಿಕೆಟ್‌ ಸಿಗಲಿಲ್ಲ ಎಂದು ಸ್ವತಂತ್ರವಾಗಿ ಸ್ಪರ್ಧಿಸಿ ಸುನಿಲ್‌ ಗೆದ್ದು ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಸುನಿಲ್ ಮತ್ತು ನಿರಂಜನ್ ಬಣಗಳ ನಡುವಿನ ಗುದ್ದಾಟ ಟಿಕೆಟ್ ಹಂಚಿಕೆಯ ವೇಳೆಗೆ ಮತ್ತೆ ಮುನ್ನೆಲೆಗೆ ಬಂದಿತು. ಸುನಿಲ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಮತ್ತೆ ನಿರಂಜನ್‌ಗೆ ಮಣೆ ಹಾಕಿದ್ದರಿಂದ ಪಕ್ಷೇತರವಾಗಿ ಕಣಕ್ಕೆ ಧುಮುಕಿದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಡಬೂರು ಮಂಜುನಾಥ್‌ ಅವರೂ ಬಿಜೆಪಿಯಲ್ಲಿದ್ದವರು. ನಿರಂಜನ ಗೆಲುವಿಗೆ 2018ರಲ್ಲಿ ಶ್ರಮಿಸಿದ್ದರು. ಆದರೆ ನಿರಂಜನ್ ಜೊತೆಯಲ್ಲಿ ಇವರ ಸಂಬಂಧವೂ ಹಳಸಿತ್ತು. ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ, ಸುನಿಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನಿರಂಜನ್ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು.

ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಗೆದ್ದಿರುವ ಎಚ್‌.ಎಂ.ಗಣೇಶಪ್ರಸಾದ್‌ ಅವರು ಮಹದೇವ್ ಪ್ರಸಾದ್- ಗೀತಾ ಮಹದೇವಪ್ರಸಾದ್ ಅವರ ಪುತ್ರ. 2018ರ ಚುನಾವಣೆಯಲ್ಲಿ ನಿರಂಜನ್ ವಿರುದ್ಧ ತಮ್ಮ ತಾಯಿ ಸೋತ ನಂತರ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತೆ ಬಲಪಡಿಸುವ ಕೆಲಸವನ್ನು ಗಣೇಶ್ ಮಾಡಿದ್ದರು. ದಾನ- ಧರ್ಮದಲ್ಲಿ ಗಣೇಶ್ ಎತ್ತಿದ ಕೈ. ದುಡ್ಡಿಗೆ ಆಸೆ ಬೀಳುವವರಲ್ಲ ಎಂಬ ಇಮೇಜ್‌ ಇವರಿಗಿತ್ತು. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವು ನೀಡಿದ ಕೀರ್ತಿ ಗಣೇಶ್‌ಗೆ ಸಲ್ಲುತ್ತದೆ‌. ಯಾರಾದರೂ ಕಷ್ಟವೆಂದು ಹೋದರೆ ಕೈಲಾದಷ್ಟು ಹಣವನ್ನು ಕೈಗಿಡುವ ಮೂಲಕ ಜನಮನ್ನಣೆ ಗಳಿಸುತ್ತಿದ್ದರು. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಉದಾರವಾಗಿ ಕೊಡುಗೆ ನೀಡಿದ್ದರು. ಇದೇ ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಅವರು ಕಳೆದ ಐದು ವರ್ಷಗಳಿಂದ ಅಖಾಡದಲ್ಲಿ ತಾಲೀಮು ನಡೆಸಿದ್ದರು. ಬಿಜೆಪಿಯೊಳಗಿನ ಒಡಕು ಮತ್ತು ಕಾಂಗ್ರೆಸ್ಸಿನತ್ತ ಸಾಂಪ್ರದಾಯಿಕ ಮತಗಳು ಮರಳಿದ ಕಾರಣ 36,675 ಮತಗಳ ಅಂತರದಲ್ಲಿ ಗಣೇಶ್ ಗೆದ್ದಿದ್ದಾರೆ.

ಇದನ್ನೂ ಓದಿರಿ: ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

ಹನೂರು ಕ್ಷೇತ್ರ

ಕುಟುಂಬ ಪ್ರತಿಷ್ಠೆಯ ಕಣವಾಗಿದ್ದ ಹನೂರಿನಲ್ಲಿ ಮತದಾರರು ಈ ಭಾರಿ ತನ್ನ ನಿಲುವನ್ನು ಬದಲಿಸಿದ್ದಾರೆ. ರಾಜೂಗೌಡ ಮತ್ತು ನಾಗಪ್ಪ ಕುಟುಂಬವಷ್ಟೇ ದಶಕಗಳ ಕಾಲ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದವು. ಈಗಲೂ ಅಷ್ಟೇ ಎರಡು ಕುಟುಂಬಗಳ ನಡುವೆಯೇ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಹಂಚಿಕೆಯಾಗಿತ್ತು. ಒಂದು ಕಾಲಕ್ಕೆ ಹನೂರು ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಭದ್ರಕೋಟೆಯಾಗಿತ್ತು. ಆದರೆ ನಾಗಪ್ಪನವರು ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ಬಳಿಕ, ಅವರ ಪತ್ನಿ ಪರಿಮಳಾ ನಾಗಪ್ಪ ಸತತವಾಗಿ ಪಕ್ಷ ನಿಷ್ಠೆಯನ್ನು ಬದಲಿಸುತ್ತಾ ಬಂದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು

ಇಲ್ಲಿ ಜಾತಿ ಸಮೀಕರಣಕ್ಕಿಂತ ಎರಡು ಕುಟುಂಬಗಳ ಪ್ರತಿಷ್ಠೆಯೇ ಚುನಾವಣಾ ಫಲಿತಾಂಶದ ಫ್ಯಾಕ್ಟರ್ ಆಗಿತ್ತು. ಆದರೆ ಜೆಡಿಎಸ್ಸಿನಲ್ಲಿ ಸಕ್ರಿಯವಾಗಿದ್ದ, ಕಳೆದ ಚುನಾವಣೆಯಲ್ಲಿ ಸೋತಿಸುವ ರಿಯಲ್ ಎಸ್ಟೇಟ್ ಉದ್ಯಮಿ, ಕುರುಬ ಸಮುದಾಯದ ಎಂ.ಆರ್.ಮಂಜುನಾಥ್ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಸುತ್ತಾಡಿದ್ದರು. ಕೊರೊನಾ ಸಮಯದಲ್ಲಿ ಒಂದಿಷ್ಟು ಕಾಣೆಯಾಗಿದ್ದು ಬಿಟ್ಟರೆ, ಮಂಜುನಾಥ್ ತನ್ನದೇ ಕಾರ್ಯಕರ್ತರನ್ನು ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಅಭ್ಯರ್ಥಿಯಾಗಿದ್ದರು. 2018ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲು ಮಂಜುನಾಥ್ ಪ್ರವೇಶ ಕಾರಣವಾಗಿತ್ತು. ಈ ಬಾರಿಯೂ ಮಂಜುನಾಥ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು ಭಾರೀ ಪರಿಣಾಮವನ್ನು ಬೀರಿದೆ. ಸತತವಾಗಿ ಗೆಲ್ಲುತ್ತಾ ಬಂದಿದ್ದ ರಾಜೂಗೌಡ ಅವರ ಪುತ್ರ ಕಾಂಗ್ರೆಸ್ಸಿನ ಆರ್‌.ನರೇಂದ್ರ, ನಾಗಪ್ಪ ಅವರ ಪುತ್ರ ಪ್ರೀತನ್ ನಾಗಪ್ಪ ಇಬ್ಬರಿಗೂ ಪಾಠ ಕಲಿಸಿ ಗೆದ್ದು ಬೀಗಿದ್ದಾರೆ.

ರಾಜೂಗೌಡರ ಪುತ್ರ ಆರ್.ನರೇಂದ್ರ ಅವರು ಕಾಂಗ್ರೆಸ್ಸಿನಿಂದ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಬಿಟ್ಟರೆ, ಉಳಿದೆರಡು ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪಗಳಿದ್ದವು. ಎರಡು ಕುಟುಂಬಗಳೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದನ್ನು ಗಮನಿಸಿರುವ ಮತದಾರರು ಬೇಸತ್ತು ಈ ಬಾರಿ ಜೆಡಿಎಸ್‌ನ ಎಂ.ಆರ್‌.ಮಂಜುನಾಥ್ ಅವರಿಗೆ ಜೈ ಎಂದಿದ್ದಾರೆ. ಹೀಗಾಗಿ 17,654 ಮತಗಳಿಂದ ಗೆದ್ದಿದ್ದಾರೆ.

ಬೆಂಗಳೂರಿನಲ್ಲಿ ವೈದ್ಯರಾಗಿರುವ ಪ್ರೀತನ್ ನಾಗಪ್ಪ (ಎಚ್.ನಾಗಪ್ಪ ಅವರ ಪುತ್ರ) ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆಂಬ ಆರೋಪಗಳಿದ್ದವು. ಇದು ಪ್ರೀತನ್ ಮೇಲೆ ಗುಮಾನಿ ಹೆಚ್ಚಿಸಲು ಕಾರಣವಾಯಿತು. ಇಂಥವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರ ಜೊತೆಗೆ ಬಿಜೆಪಿಯಿಂದ ಇನ್ನು ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದರು. ಅದರಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದವರು ಡಾ.ಎಸ್.ದತ್ತೇಶ್‌ ಕುಮಾರ್‌.

ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ದತ್ತೇಶ್ ಮೂಲತಃ ಉದ್ಯಮಿ, ಕೊಳ್ಳೇಗಾಲದಲ್ಲಿರುವ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. 2013ರಲ್ಲಿ ನರೇಂದ್ರ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ, 13,258 ಮತ ಗಳಿಸಿ, ಮೂರನೇ ಸ್ಥಾನದಲ್ಲಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪ್ರೀತನ್ ಅವರಿಗೆ ಪಕ್ಷ ಮಣೆ ಹಾಕಿತು. ನಂತರದಲ್ಲಿ ದತ್ತೇಶ್ ಪಕ್ಷ ಸಂಘಟನೆಯತ್ತ ಗಮನ ಹರಿಸಿದರು. ಜಿಲ್ಲಾ ಉಪಾಧ್ಯಕ್ಷ ಸ್ಥಾನವೂ ಅವರಿಗೆ ದೊರಕಿತು. ಇನ್ನೇನು ಟಿಕೆಟ್ ಸಿಗುತ್ತದೆ ಎಂಬ ಉತ್ಸಾಹದಲ್ಲಿದ್ದಾಗ ಮತ್ತೆ ನಾಗಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿತು.

ಇದರಿಂದ ಸಿಟ್ಟಿಗೆದ್ದ ದತ್ತೇಶ್, ಪಕ್ಷ ತೊರೆದು ಕಾಂಗ್ರೆಸ್ ಸೇರುವ ಸೂಚನೆಗಳು ದೊರೆತ್ತಿದ್ದವು. ಆದರೆ ಅಂತಿಮವಾಗಿ ಬಿಜೆಪಿಯಲ್ಲೇ ಉಳಿದು, ಕೆಲಸ ಮಾಡುವುದಾಗಿ ತಿಳಿಸಿದ್ದರು. ದತ್ತೇಶ್ ಅವರಂತೆಯೇ ಉದ್ಯಮಿಗಳಾದ ವೆಂಕಟೇಶ್‌, ನಿಶಾಂತ್‌ ಟಿಕೆಟ್‌ಗಾಗಿ ಪೈಪೋಟಿ ನೀಡಿದ್ದರು. ಒಂದೇ ವೇಳೆ ಪ್ರೀತನ್ ಗೆದ್ದರೆ, ಮತ್ತೆ ನಾಗಪ್ಪ ಕುಟುಂಬ ಮೇಲುಗೈ ಸಾಧಿಸುತ್ತದೆ ಎಂಬ ಭಯ ಇತರ ಬಿಜೆಪಿ ಮುಖಂಡರಿಗೆ ಇದ್ದರೆ ಒಳೇಟುಗಳು ಬೀಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿತ್ತು. ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಇದೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ.

ಇದನ್ನೂ ಓದಿರಿ: ಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...