ಹೊಸ ಟ್ವಿಸ್ಟ್: ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಸೋನಿಯಾ ಭೇಟಿಯಾಗಿದ್ದೇಕೆ?

0

ಇದೊಂದ್ ಥರಾ ಪತ್ತೇದಾರಿ ಪಿಚ್ಚರ್ ರೂಪ ಪಡೆಯುತ್ತಿದೆ. ಭಿನ್ನಮತದ ಗುಂಪಿನಲ್ಲಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ಬಿಟಿಎಂ ಲೇ ಔಟ್ ಶಾಸಕ ರಾಮಲಿಂಗಾರೆಡ್ಡಿ ಅವರ ಪುತ್ರಿ, ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾರೆಡ್ಡಿ ಒಂದು ತಾಸಿನ ಹಿಂದೆ ದೆಹಲಿಯಲ್ಲಿ ಕಾಣಿಸಿಕೊಂಡರು.

ಹಳದಿ ಚಹೂಡಿದಾರ್ ತೊಟ್ಟಿದ್ದ ಅವರು ಕಾಂಗ್ರೆಸ್‍ನ ಉನ್ನತ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸ ಇರುವ ಎದುರಿನ ಲೇನ್‍ನಿಂದ ಕಾರ್ ಹತ್ತಿ ವಾಪಸ್ ಹೋಗುತ್ತಿದ್ದ ವಿಶುವಲ್ಸ್ ಬಂದಿದೆ. ಅಲ್ಲಿ ಯಾರೋ ಕನ್ನಡ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಸುನಗುತ್ತ ಉತ್ತರಿಸಿದ ಸೌಮ್ಯಾರೆಡ್ಡಿ, ಏನಿಲ್ಲ ಸುಮ್ಮನೇ ದೆಹಲಿಗೆ ಬಂದಿದ್ದೆ ಎಂದು ಅವಸರವಾಗಿ ಕಾರ್ ಹತ್ತಿದ್ದರಲ್ಲೇ ಒಂದು ಏನೋ ಮಹತ್ತರ ಮೆಸೆಜ್ ಇದೆ.

ರಾಮಲಿಂಗಾರೆಡ್ಡಿ ಮತ್ತು ಅವರ ಸಹಚರರಾದ ಎಸ್‍ಟಿ ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಇವರೆಲ್ಲರ ಅಸಮಾಧಾನ, ಇವರ ಬೇಡಿಕೆಗಳ ಸಂದೇಶವನ್ನು ಹೊತ್ತೊಯ್ದ ಸಂದೇಶವನ್ನು ಸೌಮ್ಯಾರೆಡ್ಡಿ ನೇರ ಸೋನಿಯಾ ಮೇಡಂಗೆ ತಲುಪಿಸಿ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ವಿಶ್ವಾಸ ಕಳೆದುಕೊಂಡಿರುವ ರಾಮಲಿಂಗಾರೆಡ್ಡಿ ತಮ್ಮ ದೆಹಲಿಯ ಸಂಪರ್ಕಗಳ ನೆರವು ಪಡೆದು ನೇರ ಸೋನಿಯಾರಿಗೆ ತಮ್ಮ ಅಳಲನ್ನು ತಲುಪಿಸಿದ್ದಾರೆ. ಈಗಲೂ ಕಾಂಗ್ರೆಸ್ ಬಗ್ಗೆ ಅವರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬುದೇನೂ ಗುಟ್ಟಲ್ಲ. ಆ ಕಾರಣಕ್ಕೆ ಅವರು ಮುಂಬೈಗೆ ಹೋಗಿಲ್ಲ.

ಎಐಸಿಸಿಯ ಮಹಿಳಾ ವಿಭಾಗದ ಸೆಕ್ರೆಟರಿ ಸುಷ್ಮಿತಾದೇವ್ ಅವರು ಈ ಭೇಟಿ ಏರ್ಪಡಿಸಿದ್ದೂ ಪಕ್ಕಾ ಆಗಿದೆ. ಸೌಮ್ಯಾರೆಡ್ಡಿ ಮಂದಹಾಸದಲ್ಲಿ ಕಾರ್ ಏರಿದ್ದು ನೋಡಿದರೆ ಸೋನಿಯಾ ಗಾಂಧಿ ನೇರ ರಾಮಲಿಂಗಾರೆಡ್ಡಿ ಜೊತೆ ಫೋನಿನಲ್ಲಿ ಮಾತಾಡಿ ಒಂದು ಇತ್ಯರ್ಥಕ್ಕೆ ಬಂದು ರೆಡ್ಡಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುತ್ತಿದೆ. ಅಥವಾ ಸೌಮ್ಯ ಇತ್ತ ದೆಹಲಿ ಬಿಟ್ಟು ಬೆಂಗಳೂರು ಕಡೆ ಹೊರಟ ಸ್ವಲ್ಪೇ ಹೊತ್ತಿನಲ್ಲಿ ಮುಂಬೈ ಕಡೆ ಹೊರಟಿದ್ದ ಡಿ ಕೆ ಶಿವಕುಮಾರ್ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ದೆಹಲಿ ಕಡೆ ಪ್ರಯಾಣ ಆರಂಭಿಸಿದ್ದಾರೆ. ಅಲ್ಲಿ ಅವರು ಸೋನಿಯಾರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗಿ ಸೋನಿಯಾ ಗಾಂಧಿಯವರಿಗೆ ರಾಜ್ಯ ರಾಜಕಾರಣದ ಒಟ್ಟೂ ಚಿತ್ರಣ, ಸರ್ಕಾರ ಉಳಿಸಿಕೊಳ್ಳುವ ಯತ್ನಗಳ ಬಗ್ಗೆ ವಿವರಿಸಲಿದ್ದಾರೆ ಎಂಬ ಮಾಹಿತಿ ಇದೆ.

ಸುಷ್ಮಿತಾ ದೇವ್

ನಿನ್ನೆ ಮಲ್ಲಿಕಾರ್ಜುನ ಖರ್ಗೆ ರಾಮಲಿಂಗಾರೆಡ್ಡಿಯವರನ್ನು ಭೇಟಿಯಾದಾಗ, ‘ನಾನು ತೋಡಿಕೊಂಡ ಅಳಲಿಗೆ ನಿಮ್ಮ ನಾಯಕರು ಸ್ಪಂದಿಸಲೇ ಇಲ್ಲವಲ್ಲ ಖರ್ಗೆ ಸಾಹೇಬರೇ. ಸಿದ್ದರಾಮಯ್ಯ ಸಾಹೇಬರು ಫೋನ್ ಮಾಡಿದ್ದರೆ ಸಾಕಿತ್ತಲ್ಲ? ನಾನು ಸದನಕ್ಕೆ ರಾಜಿನಾಮೆ ನೀಡಿದ್ದೇನೆ, ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ. ಸದ್ಯಕ್ಕೆ ತೀರ್ಮಾನ ಬದಲಿಸುವುದು ಕಷ್ಟ’ ಎಂದಿದ್ದನ್ನು ಇಲ್ಲಿ ಗಮನಿಸಬೇಕು. ಅಂದರೆ ರೆಡ್ಡಿ ಮತ್ತು ಇತರ ಮೂವರು ಬೆಂಗಳೂರು ಶಾಸಕರು ಪಕ್ಷದ ಮೇಲೆ ಪ್ರೆಶರ್ ಹಾಕಲು ಈ ತಂತ್ರ ಮಾಡಿದ್ದಾರೆ ಎನ್ನುವುದು.

ಹೀಗಾಗಿ ಸೋನಿಯಾ ಭೇಟಿಯ ಪರಿಣಮ ಏನಾಗಬಹುದು? ರಾಮಲಿಂಗಾರೆಡ್ಡಿ ಮತ್ತು ತಂಡ ( 4 ಪ್ಲಸ್ ಸೌಮ್ಯಾರೆಡ್ಡಿ, ಅಂದರೆ ಐದು ಜನ) ನಿಲುವು ಬದಲಿಸಿ ವಾಪಸ್ ಕಾಗ್ರಸ್‍ಗೆ ಬರಬಹುದೇ?

ಈ ಹೊತ್ತಿಗೇ ಸ್ಪೀಕರ್ ರಮೇಶಕುಮಾರ್ ಅವರ ಕಚೇರಿಗೆ ರಾಜಿನಾಮೆ ಸಲ್ಲಿಸಿದವರಿಗೆ ನಾಳೆ ಬಂದು ರಾಜಿನಾಮೆಯ ಕಾರಣದ ವಿವರಣೆ ನೀಡುವಂತೆ ಸೂಚಿಸಿದ್ದಾರಂತೆ. ಈಗ ಮುಂಬೈಯಲ್ಲಿರುವ ಶಾಸಕರು ಸಂಕಟದಲ್ಲಿದ್ದಾರೆ. ಸ್ಪೀಕರ್ ಆಹ್ವಾನ ತಿರಸ್ಕರಿಸಿದರೆ ಅವರ ರಾಜೀನಾಮೆ ಅಂಗೀಕಾರಕ್ಕೇ ತೊಡಕಾಗಬಹುದು.

ಇದೆಲ್ಲದರ ನಡುವೆ ಹಣ ಮತ್ತು ಅಧಿಕಾರದ ಬಲ ಇರುವ ಬಿಜೆಪಿ ತೆರೆಮರೆಯಲ್ಲಿ ಕಾರ್ಯಚರಣೆ ನಡೆಸುತ್ತಿದೆ. ನಮಗೆ ಸಿಕ್ಕ ಮಾಹಿತಿ ಪ್ರಕಾರ, ಆರು ತಿಂಗಳ ನಂತರ ಹೊಸ ಚುನಾವಣೆ ನಡೆದರೆ ದೊಡ್ಡ ಲಾಭ ಎಂದು ಬಿಜೆಪಿ ಹೈಕಮಾಂಡ್ ಲೆಕ್ಕ ಹಾಕಿದೆ ಎನ್ನಲಾಗಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here