Homeಕರ್ನಾಟಕಸಮುದಾಯ ಬೆಸೆಯುವ ‘ಕೊಡವ ಹಾಕಿ ಹಬ್ಬ’ಕ್ಕೆ ದಿನಗಣನೆ; ‘ಅಪ್ಪಚೆಟ್ಟೋಳಂಡ’ ಕುಟುಂಬದಿಂದ ಆತಿಥ್ಯ

ಸಮುದಾಯ ಬೆಸೆಯುವ ‘ಕೊಡವ ಹಾಕಿ ಹಬ್ಬ’ಕ್ಕೆ ದಿನಗಣನೆ; ‘ಅಪ್ಪಚೆಟ್ಟೋಳಂಡ’ ಕುಟುಂಬದಿಂದ ಆತಿಥ್ಯ

- Advertisement -
- Advertisement -

ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ, ಮಂಜು, ಮಳೆ ಮತ್ತು ವೀರ ಯೋಧರಿಗೆ ಹೆಸರಾದ ಕೊಡಗು ಜಿಲ್ಲೆ ಹಾಕಿಗೂ ಸುಪ್ರಸಿದ್ಧ. ಮುಖ್ಯವಾಗಿ ಇಲ್ಲಿ ಹಾಕಿ ಎಂಬುದು ಕೇವಲ ಕ್ರೀಡೆಯಲ್ಲ; ಕೊಡವ ಸಮುದಾಯವನ್ನು ಬೆಸೆಯುವ ಸಾಧನ.

ಕೊಡಗಿಗೂ ಹಾಕಿಗೂ ಅವಿನಾಭಾವ ಸಂಬಂಧ. ಕೊಡಗು ಜಿಲ್ಲೆಯನ್ನು ಭಾರತೀಯ ಹಾಕಿಯ ತೊಟ್ಟಿಲು ಎಂದೂ ಬಣ್ಣಿಸಲಾಗುತ್ತದೆ. 50ಕ್ಕೂ ಹೆಚ್ಚು ಕೊಡವರು ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಅವರಲ್ಲಿ 16 ಮಂದಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಇಂತಹ ಕೊಡಗಿನಲ್ಲಿ ಮಾರ್ಚ್, ಏಪ್ರಿಲ್‌, ಮೇ ಬಂತೆಂದರೆ ಹಾಕಿ ಕ್ರೀಡೆಯ ಸಡಗರ ಮನೆಮಾಡುತ್ತದೆ. ‘ಕೊಡವ ಹಾಕಿ ಹಬ್ಬ’ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ವಿಶೇಷವೆಂದರೆ ಕೊಡವ ಕುಟುಂಬಗಳ ನಡುವೆ ನಡೆಯುವ ಸೌದಾರ್ಹಯುತ ಟೂರ್ನಿ ಇದಾಗಿದೆ. ಬಹುಶಃ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ಇಂತಹ ಹಾಕಿ ಟೂರ್ನಿ ಮತ್ತೆಲ್ಲೂ ಇರಲಾರದು.

ಪ್ರಪಂಚದ ಅತಿ ದೊಡ್ಡ ಸ್ಪರ್ಧೆ ಎಂದೇ ಪರಿಗಣಿಸಲ್ಪಟ್ಟಿರುವ ಈ ಹಾಕಿ ಹಬ್ಬವು ಗಿನ್ನಿಸ್‌ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಗಲು ನಿರ್ದೇಶಿಸಲ್ಪಟ್ಟಿದೆ. ಗಿನೆಸ್ ದಾಖಲೆಗಳ ಪುಸ್ತಕಕ್ಕೆ ಭಾರತೀಯ ಪರ್ಯಾಯವಾಗಿರುವ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈಗಾಗಲೇ ಉಲ್ಲೇಖಗೊಂಡಿದೆ. ಇಂತಹ ಅದ್ಭುತ ಕ್ಷಣಕ್ಕೆ ಮಾರ್ಚ್ 18ರಂದು ನಾಪೊಕ್ಲುವಿನಲ್ಲಿ ಚಾಲನೆ ನೀಡಲಾಗುತ್ತಿದೆ. ಏಪ್ರಿಲ್‌ 9ರವರೆಗೆ ಟೂರ್ನಿ ನಡೆಯಲಿದೆ.

ಪ್ರತಿ ವರ್ಷ ಒಂದೊಂದು ಕೊಡವ ಕುಟುಂಬ ಆತಿಥ್ಯ ವಹಿಸಿ ನಡೆಸಿಕೊಂಡು ಬರುತ್ತಿರುವ ‘ಕೊಡವ ಹಾಕಿ ಹಬ್ಬ’ದ ಜವಾಬ್ದಾರಿಯನ್ನು ಈ ವರ್ಷ ‘ಅಪ್ಪಚೆಟ್ಟೋಳಂಡ’ ಫ್ಯಾಮಿಲಿ ವಹಿಸಿಕೊಂಡಿದೆ. ಯಾವ ಕುಟುಂಬ ಟೂರ್ನಿಯ ಮುಂದಾಳತ್ವ ವಹಿಸಿರುತ್ತದೆಯೋ ಈ ಕುಟುಂಬದ ಹೆಸರಲ್ಲಿ ಕಪ್‌ ನೀಡಲಾಗುತ್ತದೆ.

ಕೊಡವ ಕುಟುಂಬಗಳನ್ನು ಬೆಸೆಯುವ ವಿನೂತನ ಹಬ್ಬವಿದು

ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಹಾಗೂ ಪ್ರಥಮ ದರ್ಜೆಯ ಹಾಕಿ ಆಟದ ತೀರ್ಪುಗಾರರಾಗಿದ್ದ ಪಾಂಡಂಡ ಕುಟ್ಟಪ್ಪ- ಕಾಶಿ ಸಹೋದರರ ಕನಸಿನ ಕೂಸಾಗಿ ಕೊಡವ ಹಾಕಿ ಕಪ್‌ 1997ರಲ್ಲಿ ಆರಂಭವಾಯಿತು. ವಿರಾಜಪೇಟೆಯ ಸಮೀಪದ ಕರಡ ಗ್ರಾಮದ ಮೈದಾನದಲ್ಲಿ ನಡೆದ ‘ಪಾಡಂಡ ಕಪ್’ ಎಂದು ಕರೆಯಲ್ಪಟ್ಟ ಈ ಟೂರ್ನಿಯಲ್ಲಿ 60 ಕುಟುಂಬಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯ ಪ್ರಪ್ರಥಮ ಉದ್ಘಾಟನಾ ಸಮಾರಂಭದ ಆರ್ಥಿಕ ವೆಚ್ಚವನ್ನು ಕುಟ್ಟಪ್ಪನವರೇ ಭರಿಸಿದರು. ನಂತರದ ವರ್ಷಗಳಲ್ಲಿ 250-300ಕ್ಕೂ ಹೆಚ್ಚು ಕುಟುಂಬಗಳು ಈ ಹಬ್ಬದಲ್ಲಿ ಭಾಗವಹಿಸುತ್ತಾ ಬಂದಿವೆ.

ವರ್ಷದಿಂದ ವರ್ಷಕ್ಕೆ ಈ ಹಾಕಿ ಹಬ್ಬದಲ್ಲಿ ಪಾಲ್ಗೊಳ್ಳುವ ಕೊಡವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ ಹೊರಗಿರುವ ಕೊಡವ ಸದಸ್ಯರೂ ತಮ್ಮ ಕುಟುಂಬದ ಆಟದಲ್ಲಿ ಭಾಗವಹಿಸಲು ತಮ್ಮ ನೌಕರಿಗೆ ರಜೆಯಿತ್ತು ಬರುತ್ತಾರೆ. ಹಬ್ಬದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕೊಡವರ ವಿವಿಧ ನೃತ್ಯ ಮತ್ತು ಕೋಲಾಟಗಳಿಂದ ಕೂಡಿರುತ್ತದೆ.

ಪಾಂಡಂಡ, ಕೋಡಿರ, ಬಲ್ಲಚಂಡ, ಚೆಪ್ಪುಡಿರ, ನೆಲ್ಲಮಕ್ಕಡ, ಚೆಕ್ಕೆರ, ಕಲಿಯಂಡ, ಮಾಳೆಯಂಡ, ಬಿದ್ದಂಡ,  ಕಳ್ಳಿಚಂಡ, ಮಂಡೇಟಿರ, ಅಳಮೇಂಗಡ, ಮಂಡೇಪಂಡ, ಮನೆಯಪಂಡ, ಮಚ್ಚಾಮಾಡ, ಐಚೆಟ್ಟಿರ, ಮಾದಂಡ ಮೊದಲಾದ ಕೊಡವ ಕುಟುಂಬಗಳು ಈವರೆಗಿನ ಕೊಡವ ಹಾಕಿ ಟೂರ್ನಿಗಳ ಆತಿಥ್ಯ ವಹಿಸಿವೆ. ಪ್ರತಿ ವರ್ಷ ಟೂರ್ನಿ ಮುಗಿದ ನಂತರ ಮುಂದಿನ ವರ್ಷದ ಆತಿಥ್ಯವನ್ನು ಯಾರು ವಹಿಸಬೇಕೆಂಬ ನಿರ್ಣಯ ಮಾಡಲಾಗುತ್ತದೆ.

ಕರಡ, ಕಡಂಗ, ಕಾಕೋಟುಪರಂಬು, ಪೊನ್ನಂಪೇಟೆ, ಅಮ್ಮತ್ತಿ, ಹುದಿಕೇರಿ, ನಾಪ್ಲೊಕ್ಲು, ಮಾದಾಪುರ, ಮಡಿಕೇರಿ, ಬಾಳುಗೋಡು ಮೊದಲಾದ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ. ಕೂತಂಡ, ನೆಲ್ಲಮಕ್ಕಳ, ಚೆಪ್ಪುಡಿರ, ಕೋಣೇರಿರ, ಮಚ್ಚಾಮಾಡ, ಅಂಜಪರವಂಡ, ಮುಕ್ಕಾಟಿರ, ಕಲಿಯಂಡ ಇತರ ಕುಟುಂಬಗಳು ಟೂರ್ನಿಯಲ್ಲಿ ಕಪ್‌ ಗೆದ್ದಿವೆ.

ಈ ಟೂರ್ನಿಯ ವಿಶೇಷವೆಂದರೆ ಒಂದು ತಂಡದ ಆಟಗಾರರೆಲ್ಲರೂ ಒಂದೇ ಮನೆತನಕ್ಕೆ ಸೇರಿದವರಾಗಿರಬೇಕು; ಪ್ರತಿಯೊಬ್ಬರೂ ಆಟದ ಸಂಪೂರ್ಣ ಪೋಷಾಕು ಪರಿಕರಗಳನ್ನು ಧರಿಸಿರಬೇಕು; ಸ್ತ್ರೀಯರೂ ಆಟದಲ್ಲಿ ಭಾಗವಹಿಸಬಹುದು; ವಿವಾಹಿತ ಮಹಿಳೆಯರು ತಾವು ತವರು ಮನೆತನವನ್ನು ಪ್ರತಿನಿಧಿಸಬೇಕೋ ಅಥವಾ ಗಂಡನ ಮನೆಯನ್ನು ಪ್ರತಿನಿಧಿಸಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿರುತ್ತದೆ.

ಕೋವಿಡ್ ಬಿಕ್ಕಟ್ಟಿನ ನಂತರ ಸಂಭ್ರಮ

ಕೋವಿಡ್‌ ಮತ್ತು ಪ್ರಾಕೃತಿಕ ಬಿಕ್ಕಟ್ಟಿನಿಂದ ನಲುಗು ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೊಡವ ಹಾಕಿ ಉತ್ಸವ ಆಯೋಜನೆಯಾಗಿರಲಿಲ್ಲ. ಅಂತೂ ಮತ್ತೆ ಸಂಭ್ರಮ ಮನೆ ಮಾಡಿದೆ. ‘ಅಪ್ಪಚೆಟ್ಟೋಳಂಡ ಹಾಕಿ ಕಪ್‌’ಗೆ ಸೆಣಸಾಡಲು 336 ತಂಡಗಳು ಪಾಲ್ಗೊಳ್ಳುತ್ತಿವೆ. 22 ವರ್ಷಗಳ ಇತಿಹಾಸವಿರುವ ಈ ಟೂರ್ನಿಗೆ ದಿನಗಣನೆ ಆರಂಭವಾಗಲಿದ್ದು ಮಾರ್ಚ್ 18ರಿಂದ ಕೊಡಗು ಜಿಲ್ಲೆಯ ನಾಪೊಕ್ಲು ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಇದನ್ನೂ ಓದಿರಿ: ಇದು ಕ್ರಿಕೆಟ್ ಪಂದ್ಯವೋ ರಾಜಕೀಯ ರ್‍ಯಾಲಿಯೋ?: ಬಿಜೆಪಿಯವರೇ ಟಿಕೆಟ್‌ ಖರೀದಿಸಿದ ಕಥೆ!

ಎಲ್ಲಾ ಕೊಡವ ಕುಟುಂಬಗಳು ಇದರಲ್ಲಿ ಭಾಗಿಯಾಗುವಂತೆ ಅಪ್ಪಚೆಟ್ಟೋಳಂಡ ಫ್ಯಾಮಿಲಿ ಆಹ್ವಾನ ನೀಡಿದೆ. ಕರ್ನಾಟಕ ಸರ್ಕಾರದ ಸಹಕಾರವೂ ಈ ಟೂರ್ನಿಗಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದ್ದು ಕರ್ನಾಟಕ ಸರ್ಕಾರ 1 ಕೋಟಿ ರೂ. ಮಂಜೂರು ಮಾಡಿದೆ. ಸನ್‌ಫ್ಯೂರ್‌ ಸಂಸ್ಥೆ ಪ್ರಾಯೋಜಕತ್ವ ವಹಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಸಂಘಸಂಸ್ಥೆಗಳು, ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ.

ಮಾರ್ಚ್ 18ರಂದು ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ. ನಾಪೊಕ್ಲುವಿನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ ವ್ಯಾಪ್ತಿಗೆ ಸೇರಿದ ಜನರಲ್ ಕೆ.ಎಸ್.ತಿಮ್ಮಯ್ಯ ತಾಲ್ಲೂಕು ಕ್ರೀಡಾಂಗಣದ 3 ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

“ಪ್ರವಾಹ ಮತ್ತು ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಎದುರಾದ ನಾಲ್ಕು ವರ್ಷಗಳ ವಿರಾಮದ ನಂತರ, ಕೊಡವ ಹಾಕಿ ಉತ್ಸವವು ನಡೆಯುತ್ತಿದ್ದು ಹಿಂದೆಂದಿಗಿಂತಲೂ ಉತ್ತಮವಾಗಿರುತ್ತದೆ ಎಂದು ತಿಳಿಸಲು ನಾವು ಉತ್ಸುಕರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಟೂರ್ನಿಯು ಅದ್ಭುತವಾಗಿ ಆಯೋಜನೆಗೊಂಡಿದೆ ಎಂದು ಭರವಸೆ ನೀಡುತ್ತೇವೆ. ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ” ಎಂದು  ಅಪ್ಪಚೆಟ್ಟೋಳಂಡ ಹಾಕಿ ಹಬ್ಬದ ಕನ್ವೀನರ್‌ ಮನು ಮುತ್ತಪ್ಪ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್‌ ನಿರ್ಬಂಧ

0
ದೇಶದಲ್ಲೇ ಭಾರೀ ಸುದ್ದಿಯಾಗಿರುವ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ...