Homeಚಳವಳಿಸಿಪಿಐ ಕಚೇರಿ ಘಾಟೆ ಭವನದ ಮೇಲೆ ರಣಹೇಡಿಗಳ ದಾಳಿ

ಸಿಪಿಐ ಕಚೇರಿ ಘಾಟೆ ಭವನದ ಮೇಲೆ ರಣಹೇಡಿಗಳ ದಾಳಿ

- Advertisement -
- Advertisement -

ಸಮಾಜದಲ್ಲಿ ಕೋಮುವಿಷದ ಬೆಂಕಿ ಹಚ್ಚಿರುವ ಸಂಘ ಪರಿವಾರವೇ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕೃತ್ಯದ ಹಿಂದೆಯೂ ಇರುವುದು ಸ್ಪಷ್ಟವಾಗಿದೆ. ಬೆಂಕಿ ಹಚ್ಚಿದ ವ್ಯಕ್ತಿಗಳ ವಿರುದ್ಧ ಮಾತ್ರವಲ್ಲ, ಬೆಂಕಿ ಹಚ್ಚಿಸಿದ ದುಷ್ಟ ಶಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಇಡೀ ವಿಶ್ವವೇ ಕ್ರಿಸ್ಮಸ್ ಆಚರಣೆಯ ಮೂಲಕ ಏಸು ಕ್ರಿಸ್ತ ಸಾರಿದ ಪ್ರೀತಿ, ಕರುಣೆ, ಸ್ನೇಹಗಳ ಸಂದೇಶವನ್ನು ಸ್ಮರಿಸುತ್ತ ಹಾಡುವ ದಿನ ಡಿಸೆಂಬರ್ 25. ಆದರೆ ಇದನ್ನು ಅಣಕಿಸುವಂತೆ ಡಿಸೆಂಬರ್ 24ರ ಮಧ್ಯರಾತ್ರಿ ಅಂದರೆ 25ರ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳು ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವೈಯಾಲಿಕಾವಲ್‍ನಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕೇಂದ್ರ ಕಚೇರಿ ಘಾಟೆ ಭವನ ಕಟ್ಟಡದ ಮೇಲೆ ಪೆಟ್ರೋಲ್, ಇತ್ಯಾದಿಗಳನ್ನು ಸುರಿದು ಅದನ್ನು ಭಸ್ಮ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಮೂಲಕ ಕಚೇರಿಯಲ್ಲಿ ತಂಗಿದ್ದ ಪಕ್ಷದ ಕಾರ್ಯಕರ್ತರ ಜೀವ ತೆಗೆಯುವ ವಿಫಲ ಪ್ರಯತ್ನ ನಡೆದಿದೆ. ಘಟನೆಯಿಂದಾಗಿ ಕಚೇರಿಯ ಆವರಣದಲ್ಲಿ ನಿಲುಗಡೆ ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಮಾಜದಲ್ಲಿ ಕೋಮುವಿಷದ ಬೆಂಕಿ ಹಚ್ಚಿರುವ ಸಂಘ ಪರಿವಾರವೇ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕೃತ್ಯದ ಹಿಂದೆಯೂ ಇರುವುದು ಸ್ಪಷ್ಟವಾಗಿದೆ.

ಡಿಸೆಂಬರ್ 24ರ ತಡರಾತ್ರಿ ಸುಮಾರು 1 ಗಂಟೆಯಿರಬಹುದು, ಎರಡು ಬೈಕ್‍ಗಳಲ್ಲಿ ಯುವಕರು ಕಚೇರಿಯ ಬಾಗಿಲಿಗೆ ಬಂದರೆಂದು ತಿಳಿದುಬಂದಿದೆ. ಎತ್ತರವಾದ ಗೇಟಿಗೆ ಬೀಗ ಹಾಕಲಾಗಿದ್ದು, ಕಾಂಪೌಂಡ್ ಹಾರಿ ಒಳನುಗ್ಗಿರುವ ಇಬ್ಬರು ಸೀದಾ ನೆಲ ಅಂತಸ್ತಿನಲ್ಲಿರುವ ಎಂ.ಎಸ್. ಕೃಷ್ಣನ್ ಸಭಾಂಗಣದ ಎದುರು ನಿಂತಿದ್ದಾರೆ. ಅದಕ್ಕೆ ಕಬ್ಬಿಣದ ಬಾಗಿಲುಗಳಿದ್ದು ಅವುಗಳನ್ನು ಮುಚ್ಚಲಾಗಿತ್ತು. ಒಳಗೆ ಕಚೇರಿಯ ಕಾವಲುಗಾರರು ನಿದ್ರಿಸುತ್ತಿದ್ದರು. ಸಭಾಂಗಣದ ಎದುರು ಹೊರಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಅವುಗಳಲ್ಲಿ ಕೆಲವು ವಾಹನಗಳ ಬ್ಯಾಟರಿಗಳ ಮೇಲೆ ಮತ್ತು ಉಳಿದ ಗಾಡಿಗಳ ಪೆಟ್ರೋಲ್ ಟ್ಯಾಂಕ್‍ಗಳ ಮೇಲೆ ಉದ್ದೇಶಪೂರ್ವಕವಾಗಿ ಪೆಟ್ರೋಲ್, ಇತ್ಯಾದಿಗಳನ್ನು ಸುರಿದ ದುಷ್ಕರ್ಮಿಗಳು ಸಭಾಂಗಣದ ದ್ವಾರದ ಮೇಲೆ ಪೆಟ್ರೋಲ್ ಎರಚಾಡಿದ್ದಾರೆ. ಬಹುಶಃ ವಾಹನಗಳಿಗೆ ಪೂರ್ಣವಾಗಿ ಪೆಟ್ರೋಲ್ ಸುರಿಯುವ ಮುನ್ನವೇ ಇನ್ನೊಬ್ಬ ಬೆಂಕಿ ಕಡ್ಡಿ ಗೀರಿದ್ದಾನೆ. ವಾಹನಗಳು ಧಗಧಗನೆ ಹೊತ್ತಿ ಉರಿಯಲು ಆರಂಭಿಸಿದಾಗ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವೆಲ್ಲವನ್ನೂ ಗೇಟ್‍ನ ಹೊರಗೆ ನಿಂತಿದ್ದ ಬೈಕ್ ಸವಾರನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಈ ಮಧ್ಯೆ ಸಭಾಂಗಣದ ಒಳಗೆ ಮಲಗಿದ್ದ ಪಕ್ಷದ ಕಚೇರಿಯ ಕಾವಲುಗಾರ ನಾರಾಯಣ, ವಾಹನಗಳು ಸುಟ್ಟ ವಾಸನೆಯಿಂದ ಎಚ್ಚರಗೊಂಡು ಮೇಲಿನ ಕಿಂಡಿಯಿಂದ ಧಗಧಗಿಸುತ್ತಿದ್ದ ಬೆಂಕಿಯ ಜ್ವಾಲೆಗಳನ್ನು ಕಂಡಿದ್ದಾರೆ. ಕೂಡಲೇ ಎದ್ದು ತಾನು ಹೊದ್ದಿದ್ದ ಕಂಬಳಿಯನ್ನು ಬೀಸುತ್ತ ಉರಿಯುತ್ತಿದ್ದ ಬೆಂಕಿಯ ಮಧ್ಯೆ ಹೊರಬಂದಿದ್ದಾರೆ. ಕುಟುಂಬದವರನ್ನು ಎಚ್ಚರಗೊಳಿಸಿ ದೊಡ್ಡ ಪೈಪ್‍ನಲ್ಲಿ ಬಿರುಸಾಗಿ ಚಿಮ್ಮುತ್ತಿದ್ದ ನೀರಿನಿಂದ ಅಗ್ನಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ. ಈ ಹೊತ್ತಿಗಾಗಲೇ ಸಭಾಂಗಣದಲ್ಲಿಟ್ಟಿದ್ದ ಕೆಲವು ಕಾಗದಪತ್ರಗಳು, ಕರಪತ್ರಗಳು ಬೆಂಕಿಗೆ ಆಹುತಿಯಾಗಿದ್ದವು. ನಾರಾಯಣ ತಮ್ಮ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿ ಜೀವಹಾನಿಯನ್ನೂ ಹೆಚ್ಚಿನ ನಷ್ಟವನ್ನೂ ತಡೆದಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದಾಗ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತಮ್ಮ ತನಿಖೆಯ ಶಾಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಘಟನೆಗೆ ಕಾರಣವೇನು? ಕಾರಣ ಯಾರು?

ಸುಮಾರು ಒಂದು ವಾರ ಕಳೆಯುತ್ತಾ ಬಂದರೂ ಈವರೆಗೂ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವ ಮಾತು ಹಾಗಿರಲಿ, ಆರೋಪಿಗಳನ್ನೇ ಪತ್ತೆ ಹಚ್ಚಿಲ್ಲ. ಆದರೆ ಈ ದುಷ್ಕೃತ್ಯಕ್ಕೆ ಸಂಘ ಪರಿವಾರವೇ ಕಾರಣ ಎಂಬುದು ಸ್ಪಷ್ಟ. ಜನವಿರೋಧಿ, ಸಂವಿಧಾನವಿರೋಧಿ, ದೇಶವಿರೋಧಿ ಸಿಎಎ ಮತ್ತು ಎನ್‍ಆರ್‍ಸಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುವುದರ ವಿರುದ್ಧ ದೇಶಾದ್ಯಂತ ಎಡಪಕ್ಷಗಳು ನಿರಂತರ ಹೋರಾಟವನ್ನು ಕೈಗೊಂಡಿವೆ. ಇದರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ಮುಂಚೂಣಿಯಲ್ಲಿದೆ. ಡಿಸೆಂಬರ್ 19ರಂದು ಎಡಪಕ್ಷಗಳು ಕರೆ ನೀಡಿದ್ದ ದೇಶವ್ಯಾಪಿ ಪ್ರತಿಭಟನೆಯು ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸೆಕ್ಷನ್ 144 ಹೇರಿಕೆಯ ನಡುವೆಯೂ ಯಶಸ್ವಿಯಾಗಿ ನಡೆಯಿತು. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಅಮಾಯಕರು ಬಲಿಯಾಗಿ ನಂತರ ನಗರದಲ್ಲಿ ಕಫ್ರ್ಯೂ ವಿಧಿಸಲಾಯಿತು. ಇಡೀ ನಗರದಲ್ಲಿ ಸ್ಮಶಾನಮೌನ ಆವರಿಸಿತ್ತು. ಗಿಜಿಗುಟ್ಟುವ ಮಂಗಳೂರು ನಗರದ ಮೇಲೆ ಕಾಶ್ಮೀರದಂತೆ ದಿಗ್ಬಂಧನ ಹೇರಲಾಯಿತು. ರಸ್ತೆಯಲ್ಲಿ ಯಾರೊಬ್ಬರೂ ಓಡಾಡದಂತಹ ಭೀಕರ ಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿತು. ಇಂತಹ ಸಂದರ್ಭದಲ್ಲಿ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ, ‘ನಾನೂ ಸೇರಿದಂತೆ ಡಿಸೆಂಬರ್ 21ರಂದು ಶಾಂತಿಯುತವಾಗಿ ಕಫ್ರ್ಯು ಉಲ್ಲಂಘಿಸಿ ಎಡಪಕ್ಷಗಳು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತವೆ’ ಎಂದು ಟ್ವೀಟ್ ಮಾಡಿದರು. ಆದರೆ ಮಂಗಳೂರಿನ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಬರುವುದೂ ಕಷ್ಟಕರವಾಗಿದ್ದರಿಂದ ಈ ಪ್ರತಿಭಟನೆಯ ಜವಾಬ್ದಾರಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷವೇ ಹೊತ್ತುಕೊಂಡಿತು. ಅಂದು ಡಿಸೆಂಬರ್ 21. ಮಂಗಳೂರು ನಗರದ ತುಂಬೆಲ್ಲಾ ಪೊಲೀಸರದ್ದೇ ಕಾರುಬಾರಾಗಿತ್ತು. ಅದೊಂದು ರಣರಂಗದಂತೆ ಭಾಸವಾಗುತ್ತಿತ್ತು. ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸೇರಿ ಜನತೆಯ ವಿರುದ್ಧ ಕಾಳಗ ನಡೆಸಿ ನೆತ್ತರ ಹೊಳೆ ಹರಿಸಿತ್ತು. ಬೆಳಿಗ್ಗೆ 7 ಗಂಟೆಯ ನಂತರ ನಗರದ ಎಲ್ಲಾ ದ್ವಾರಗಳನ್ನು ಪೊಲೀಸರು ಮುಚ್ಚಿದರು. ಪ್ರತಿಭಟನೆಗೆ ಸೇರಿಕೊಳ್ಳಲು ಖಾಸಗಿ ವಾಹನಗಳಲ್ಲಿ ಬರುತ್ತಿದ್ದ ಕಾರ್ಯಕರ್ತರನ್ನು ಅಲ್ಲಲ್ಲೇ ತಡೆಹಿಡಿಯಲಾಯಿತು. ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರೂ ಮಂಗಳೂರಿಗೆ ಆಗಮಿಸುವವರಿದ್ದರು! ಹೇಗೋ ಮಾಡಿ ಏಳೆಂಟು ಜನ ನಿಗದಿತ ಸ್ಥಳವಾದ ಗಾಂಧಿ ಪ್ರತಿಮೆಯ ಎದುರು ಸೇರಿಕೊಳ್ಳುವಲ್ಲಿ ಯಶಸ್ವಿಯಾದೆವು. ಒಂದು ಕಡೆ ಮುಖ್ಯಮಂತ್ರಿಯವರ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಮಯದಲ್ಲೇ ಮಂಗಳೂರು ನಗರದಲ್ಲಿ ಸಿಪಿಐ ಕಾರ್ಯಕರ್ತರು ಕಫ್ರ್ಯೂ ಉಲ್ಲಂಘಿಸಿ “ಕಿಲ್ಲರ್ ಯಡಿಯೂರಪ್ಪ ಗೋ ಬ್ಯಾಕ್” ಎಂಬ ಘೋಷಣೆ ಮೊಳಗಿಸುತ್ತ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದರು. ಕೆಲಕ್ಷಣಗಳ ನಂತರ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ಪ್ರತಿಭಟನೆಯು ಸ್ಮಶಾನದಂತಿದ್ದ ಮಂಗಳೂರಿನಲ್ಲಿ ಜನತೆಯ ಪ್ರತಿರೋಧದ ಕಾವು ಬತ್ತಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿತು. ಅಸಂವಿಧಾನಿಕ ಕಾನೂನುಕಟ್ಟಲೆಗಳನ್ನು ಹೇರುವ ಮೂಲಕ ಜನರನ್ನು ಬೆದರಿಸಲು ಸಾಧ್ಯವಿಲ್ಲ, ನೀವು ಕಫ್ರ್ಯೂ ಹೇರಿ ಜನರ ಪ್ರತಿಭಟನೆಯನ್ನು ಹತ್ತಿಕ್ಕಿದರೆ ನಾವು ಅದನ್ನು ಮುರಿಯುತ್ತೇವೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಯಿತು. ನೀವು ಮಾಡಿದ ಅನ್ಯಾಯಕ್ಕೆಲ್ಲಾ ನಾವು ತಲೆ ಬಾಗುವುದಿಲ್ಲ ಎಂದು ಸೂಚನೆ ಕೊಡಲಾಯಿತು. ಮಂಗಳೂರಿನಲ್ಲಿ ಇಂಟರ್‍ನೆಟ್ ನಿರ್ಬಂಧಿಸಲಾಗಿತ್ತು. ಆದರೆ ಪ್ರತಿಭಟನೆಯ ಸಂದೇಶವು ಪತ್ರಿಕೆಗಳ ಮೂಲಕ ಬಿತ್ತರವಾಯಿತು. ಸ್ಮಶಾನದಂತಿದ್ದ ಮಂಗಳೂರಿನ ನೆಲದಲ್ಲಿ ಪ್ರತಿರೋಧದ ಕಲರವ, ಇದು ಸಂಘ ಪರಿವಾರದ ಅಹಂಗೆ ಬಿದ್ದ ಪೆಟ್ಟಾಗಿತ್ತು. ಇದರ ನೇರ ಪರಿಣಾಮವೇ ನಾಲ್ಕು ದಿನಗಳ ನಂತರ ಸಿಪಿಐ ರಾಜ್ಯ ಕೇಂದ್ರ ಕಚೇರಿ ಘಾಟೇ ಭವನಕ್ಕೆ ಬೆಂಕಿ ಹಚ್ಚುವ ದುಷ್ಕøತ್ಯ!

ಹಲವು ಪ್ರಶ್ನೆಗಳು

ಪೊಲೀಸರು ಈವರೆಗೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ, ಅದರ ಸುಳಿವೂ ಕಾಣುತ್ತಿಲ್ಲ. ದುಷ್ಕರ್ಮಿಗಳೇ ಕೃತ್ಯವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದು ದೃಶ್ಯಮಾಧ್ಯಮಗಳನ್ನು ತಲುಪಿದ್ದು ಹೇಗೆ? ರಸ್ತೆಯಲ್ಲಿ ಮೂರ್ನಾಲ್ಕು ಸಿಸಿಟಿವಿ ಕ್ಯಾಮರಾಗಳಿದ್ದು ಇನ್ನೂ ಆರೋಪಿಗಳ ಸ್ಪಷ್ಟ ಚಿತ್ರಣ ಸಿಕ್ಕಿಲ್ಲವೇ? ಸ್ಥಳೀಯ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಯ ಪ್ರಕಾರ, “ಇದನ್ನು ಯಾರೋ ಎಣ್ಣೆ ಹೊಡೆದು ಮಾಡಿದ್ದಾರೆ”! ‘ಯಾರೋ ಎಣ್ಣೆ ಹೊಡೆದವನು’ ಪೂರ್ವನಿಯೋಜಿತವಾಗಿ ಬೀಗ ಜಡಿದ ಗೇಟ್‍ನ ಕಾಂಪೌಂಡ್ ಹಾರಿ ಕಚೇರಿಯೊಳಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆಯೇ? ಈ ಮಾತನ್ನು ಸಮವಸ್ತ್ರ ತೊಟ್ಟವರಿಂದ ಹೇಳಿಸಿ ದಿಕ್ಕು ತಪ್ಪಿಸುತ್ತಿರುವವರು ಯಾರು? ಆರೋಪಿಗಳು ಎಸಗಿರುವ ದುಷ್ಕøತ್ಯವನ್ನು ಗಮನಿಸಿದರೆ ಅವರ ವಿರುದ್ಧ ಪೊಲೀಸರು ಹೂಡಿರುವ ಮೊಕದ್ದಮೆಗಳು ಏನೇನೂ ಅಲ್ಲ. ಎಲ್ಲವೂ ನಾಮಕಾವಾಸ್ಥೆ ಎಂಬುದು ಗೋಚರಿಸುತ್ತಿದೆ. ಕಚೇರಿಯೊಳಗಿದ್ದ ಕಾರ್ಯಕರ್ತರನ್ನು ಭಸ್ಮ ಮಾಡುವ ಉದ್ದೇಶದಿಂದ ವಾಹನಗಳನ್ನು ಸ್ಫೋಟಿಸಲು ಇಡೀ ಕಚೇರಿಗೇ ಬೆಂಕಿಯಿಟ್ಟ ದುಷ್ಕರ್ಮಿಗಳ ವಿರುದ್ಧ ಕೇವಲ ಐಪಿಸಿ 427 (50ರೂ.ಗಳಿಗಿಂತ ಅಧಿಕ ಹಾನಿಯುಂಟು ಮಾಡುವ ಕೇಡು), 435 (ಸ್ವತ್ತಿಗೆ ಸ್ಫೋಟಕ ಬಳಸಿ ಬೆಂಕಿ ಹಚ್ಚುವುದು) ಮತ್ತು 447 (ಅಪರಾಧಿಕ ಅತಿಕ್ರಮಣ) ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಯಾರ ಪರ ವಹಿಸುತ್ತಿದ್ದಾರೆ? ಯಾಕೆ? ಅವರಿಗೆ ಸಂಘ ಪರಿವಾರದ/ ಬಿಜೆಪಿಯ ಕಚೇರಿಯಿಂದ ನಿರ್ದೇಶನವಿದ್ದರೆ ಅಚ್ಚರಿಯಿಲ್ಲ!

ಬೆಂಕಿ ಹಚ್ಚಿದ ವ್ಯಕ್ತಿಗಳ ವಿರುದ್ಧ ಮಾತ್ರವಲ್ಲ, ಬೆಂಕಿ ಹಚ್ಚಿಸಿದ ದುಷ್ಟ ಶಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಕಚೇರಿಯ ಮೇಲಿನ ದಾಳಿಗಳಿಗೆ ಹೆದರಿ, ವ್ಯಕ್ತಿಗಳನ್ನು ಕೊಲೆಗೈದರೆ ಮುದುರಿ ಹೋರಾಟದ ಸಮರಭೂಮಿಯನ್ನು ಬಿಟ್ಟು ಓಡಿಹೋಗುವ ರಣಹೇಡಿಗಳಲ್ಲ ಕಮ್ಯುನಿಸ್ಟರು. ಅಂತಹ ಹೇಡಿತನವೇನಿದ್ದರೂ ಸೈದ್ಧಾಂತಿಕವಾಗಿ ಎದುರಿಸಲಾರದ ಹಿಟ್ಲರ್‍ನ ಅನುಯಾಯಿಗಳಾದ ಸಂಘ ಪರಿವಾರದ ಸ್ವತ್ತು. ಕಚೇರಿಗಳನ್ನು, ವ್ಯಕ್ತಿಗಳನ್ನು ದಹಿಸುವುದರಿಂದ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಸಂಘ ಪರಿವಾರದ ಹೇಡಿಗಳು ಅರ್ಥಮಾಡಿಕೊಳ್ಳಬೇಕು. ಎಂದೋ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತ ಇಂದೂ ಜೀವಂತವಾಗಿದ್ದಾನೆ, ಅವನು ಕೊಟ್ಟ ಜೀವನದ ಸಂದೇಶ ಇನ್ನೂ ಹಸಿರಾಗೇ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...