Homeಕರ್ನಾಟಕಧರ್ಮಸ್ಥಳದ "ನಿರ್ಭಯಾ" ಅತ್ಯಾಚಾರ-ಕೊಲೆ ಕೇಸ್: ಆರೋಪಿ ಸಂತೋಷ್ ರಾವ್ ನಿರ್ದೋಷಿ; ಅಸಲಿ ಅಪರಾಧಿಗಳನ್ನೇಕೆ ಹಿಡಿಯಲಾಗುತ್ತಿಲ್ಲ?!

ಧರ್ಮಸ್ಥಳದ “ನಿರ್ಭಯಾ” ಅತ್ಯಾಚಾರ-ಕೊಲೆ ಕೇಸ್: ಆರೋಪಿ ಸಂತೋಷ್ ರಾವ್ ನಿರ್ದೋಷಿ; ಅಸಲಿ ಅಪರಾಧಿಗಳನ್ನೇಕೆ ಹಿಡಿಯಲಾಗುತ್ತಿಲ್ಲ?!

- Advertisement -
- Advertisement -

ಧರ್ಮಸ್ಥಳದ “ದೇವ” ಸನ್ನಿಧಿಯಲ್ಲಿ ಹತ್ತೂವರೆ ವರ್ಷದ ಹಿಂದೆ ಬರ್ಬರ-ಹೇಯ-ಅಮಾನುಷವಾಗಿ ಅತ್ಯಾಚಾರ-ಕೊಲೆಗೆ ಈಡಾದ ಅಮಾಯಕ ಹುಡುಗಿ ಸೌಜನ್ಯಳ ತಲ್ಲಣದ ನೆನಪುಗಳು ಈಗ ಮತ್ತೆ ನಾಡಿನ ಜನಮಾನಸದಲ್ಲಿ ಮೂಡಿ ಕಾಡತೊಡಗಿದೆ! ಕಳೆದ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ಪ್ರಮುಖ ಆರೋಪಿಯೆಂದು ಸಿಬಿಐ ಪೊಲೀಸರು ಹೇಳಿದ್ದ ಕಾರ್ಕಳದ ಕುಕ್ಕುಂದೂರು ಗ್ರಾಮದ ಸಂತೋಷ್ ರಾವ್ ನಿರ್ದೋಷಿಯೆಂದು ಸಾರಿ ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆ ದಶಕದಿಂದ ನೈಜ ರೇಪಿಸ್ಟ್‌ಗಳನ್ನು ಬಚಾವು ಮಾಡಲು “ಪ್ರತಿಷ್ಠಿತರು” ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದ್ದಾರೆಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿಬಿಟ್ಟಿದೆ. ಆರಂಭದಿಂದಲೂ ಸಂತೋಷ್ ರಾವ್ ಅತ್ಯಾಚಾರ-ಕೊಲೆ ಮಾಡಿರಬಹುದೆಂಬ ಅನುಮಾನ ಸೌಜನ್ಯರ ತಾಯ್ತಂದೆಯಾದಿಯಾಗಿ ಯಾರಿಗೂ ಇರಲೇಯಿಲ್ಲ.

ಬಡತನ-ಅಸಹಾಯಕತೆಯ ಆರೋಪಿ ಪರವಾಗಿ ಉಚಿತವಾಗಿ ವಕಾಲತ್ತು ನಡೆಸಿದ್ದ ನ್ಯಾಯವಾದಿ ಮೋಹಿತ್ ಕುಮಾರ್-ಆರೋಪಿ ಅತ್ಯಾಚಾರ ಮಾಡಿರುವ ಬಗ್ಗೆ ವೈದ್ಯಕೀಯ ವರದಿಗಳಿಲ್ಲ; ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂಬಿತ್ಯಾದಿ ಲೋಪಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಬೆಂಗಳೂರಿನ 51ನೇ ಹೆಚ್ಚುವರಿ ನ್ಯಾಯಾಲಯದ (ಸಿಬಿಐ ವಿಶೇಷ ನ್ಯಾಯಾಲಯ) ನ್ಯಾಯಮೂರ್ತಿ ಸಿ.ಬಿ.ಸಂತೋಷ್ ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿನ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಅಲ್ಲಿಗೆ ಪ್ರಪಂಚಕ್ಕೇ ಧರ್ಮ-ನ್ಯಾಯ ನೀಡುವ ಪ್ರಭಾವಿ “ಧರ್ಮ ವ್ಯಾಪಾರಿ” ಪರಿವಾರ ಸೌಜನ್ಯ ಕೇಸನ್ನು ಯೋಜನಾಬದ್ಧವಾಗಿ ಹಳ್ಳ ಹಿಡಿಸಿದೆ ಎಂಬ ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದಶಕದ ಹಿಂದಿನ ಮಹಾ ಪಾತಕ!

ಹತ್ತೂವರೆ ವರ್ಷದ ಹಿಂದೆ ನಡೆದ ಘನಘೋರ ಪಾತಕವದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಸೌಜನ್ಯ ಗೌಡ ಎಂದಿನಂತೆ ಅಂದು (9-10-2012) ಕಾಲೇಜಿಗೆ ಹೋಗಿ ಮನೆಗೆ ಬರುತ್ತಿದ್ದಳು. ಮಧ್ಯಾಹ್ನದ 4.30ರ ಹೊತ್ತಿಗೆ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಬಸ್‌ನಿಂದ ಇಳಿದ ಸೌಜನ್ಯ ಇದ್ದಕ್ಕಿದ್ದಂತೆ ಕಾಡುದಾರಿಯಲ್ಲಿ ಕಣ್ಮರೆಯಾಗುತ್ತಾಳೆ. ರಾತ್ರಿಯಾದರೂ ಮನೆಸೇರದ ಹುಡುಗಿಗಾಗಿ ಹೆತ್ತವರು ಮತ್ತು ಊರಿನ 300-500 ಜನರು ರಾತ್ರಿ ಎರಡರ ತನಕ ಇಡೀ ಕಾಡುಮೇಡಲ್ಲಿ ಹುಡುಕಾಡುತ್ತಾರೆ. ಹದಿನೇಳರ ಹರೆಯದ ಪುಟ್ಟ ಮಗುವಿನ ಸುಳಿವು ಮಾತ್ರ ಸಿಗುವುದಿಲ್ಲ.

ಮರುದಿನ ಮತ್ತೆ ಸೌಜನ್ಯಳಿಗಾಗಿ ಹುಡುಕಾಟ ನಡೆಯುತ್ತದೆ; ನೇತ್ರಾವತಿ ನದಿ ದಡದ ಕಾಡಿನ ಮರದ ಬೇರಿನ ಮೇಲೆ ಬೆತ್ತಲೆ ಹೆಣವಾಗಿ ಕಾಣಿಸುತ್ತಾಳೆ! ಆಕೆಯ ದೇಹದ ತುಂಬೆಲ್ಲ ಕಚ್ಚಿದ ಗಾಯವಾಗಿತ್ತು; ಒಂದು ಸ್ತನದ ಮೇಲೆ ಹಲ್ಲಿನ ಕಲೆ ಮೂಡಿದ್ದು ಎದ್ದು ಕಾಣಿಸುತ್ತಿತ್ತು; ವೀರ್ಯ ಪರೀಕ್ಷೆ ವಿಫಲ ಮಾಡುವ ಉದ್ದೇಶದಿಂದ ಮರ್ಮಾಂಗಕ್ಕೆ ಮಣ್ಣು ತುಂಬಲಾಗಿತ್ತು! ಆಕೆಗೆ ಚಿತ್ರಹಿಂಸೆ ಕೊಟ್ಟು ಕೊಂದಿರುವ ಸಕಲ ಸಂಕೇತಗಳೂ ಕಣ್ಣಿಗೆ ರಾಚುತ್ತಿತ್ತು! ಹತ್ತಿರದಲ್ಲೇ ಸೌಜನ್ಯಳ ಪುಸ್ತಕ-ಪಟ್ಟಿಗಳಿದ್ದ ಬ್ಯಾಗ್ ಮತ್ತು ಕೊಡೆ ಬಿದ್ದಿರುತ್ತದೆ. ಒಂದು ಚಪ್ಪಲಿ ಸಿಗುತ್ತದೆ. ಒಳ ಉಡುಪು ಅಲ್ಲೆಲ್ಲೂ ಇರುವುದಿಲ್ಲ. ಸೌಜನ್ಯ ನಾಪತ್ತೆಯಾಗಿದ್ದ ಮಧ್ಯಾಹ್ನದಿಂದ ಮರುದಿನ ಬೆಳಗಿನ ಜಾವದವರೆಗೆ ಧರ್ಮಸ್ಥಳ-ಉಜಿರೆ ಪರಿಸರದಲ್ಲಿ ಧಾರಾಕಾರ ಮಳೆ ಸುರಿದಿರುತ್ತದೆ. ಆದರೆ ಸೌಜನ್ಯಳ ಮೃತ ಶರೀರ, ಬ್ಯಾಗ್, ಪುಸ್ತಕ-ಪಟ್ಟಿಗಳ್ಯಾವುದೂ ಒಂಚೂರೂ ಒದ್ದೆಯಾಗಿರುವುದಿಲ್ಲ! ಸಾಯುವಾಗ ಹೊರಳಾಡಿದ ಗುರುತುಗಳಾವುದೂ ಸುತ್ತಲಿನ ನೆಲದಲ್ಲಿ ಕಾಣಿಸುವುದಿಲ್ಲ. ಸಾಂದರ್ಭಿಕ ಸಾಕ್ಷ್ಯಗಳು ಇದು ಬೆಟ್ಟದಲ್ಲಾದ ರೇಪ್-ಮರ್ಡರ್ ಅಲ್ಲ; ಎಲ್ಲೋ ಕಟ್ಟಡದಲ್ಲಿ ದೌರ್ಜನ್ಯ-ಹಲ್ಲೆ-ಕೊಲೆ ನಡೆಸಿದ ಪಾತಕಿಗಳು ಮೃತದೇಹವನ್ನು ಕಾಡಿಗೆ ತಂದು ಎಸೆದು ಪರಾರಿಯಾಗಿದ್ದಾರೆ ಎಂಬುದನ್ನು ಸಾರಿಸಾರಿ ಹೇಳುತ್ತಿತ್ತು!

ಬೆಳ್ತಂಗಡಿ ತಾಲೂಕಿನ ಜನರಿಗೆ “ದೇವದೂತರ” ಪರಿವಾರದ ಪುಂಡ ಕುಲಕಂಠೀರವರ ಮೇಲೆ ಸಂಶಯ ಮೂಡುತ್ತದೆ. ಧರ್ಮಸ್ಥಳ ಪರಿಸರದಲ್ಲಿ ನಡೆದ ನೂರಾರು ಹೆಣ್ಣುಗಳ ಅಸಹಜ ಸಾವು, ದೇವದೂತರ ಎದುರುಹಾಕಿಕೊಂಡಿದ್ದ ಶಿಕ್ಷಕಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದ “ಇತಿಹಾಸ” ಅರಿತಿದ್ದ ಬೆಳ್ತಂಗಡಿಯ ಸಾವಿರಾರ ಮಂದಿ ಪೊಲೀಸ್ ಠಾಣೆಗೆ ಮುತ್ತಿಗೆಹಾಕಿ ಸೌಜನ್ಯ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸತೊಡಗಿದರು. ಹೇಗೋ ಹೆಣಗಿ ಗುಂಪು ಚದುರಿಸಿದ ಪೊಲೀಸರು ತನಿಖೆಯ ಪ್ರಹಸನ ಪ್ರಾರಂಭಿಸಿದ್ದರು. ಸೌಜನ್ಯ ಶವ ಪತ್ತೆಯಾದ ಮರುದಿನ (11-10-2012) ಧರ್ಮಸ್ಥಳದ ಗೊಮ್ಮಟ ಬೆಟ್ಟದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಅಂಡಲೆಯುತ್ತಿದ್ದ ಕಾರ್ಕಳದ ಸಂತೋಷ್ ರಾವ್‌ನನ್ನು ಯುವಕರ ತಂಡವೊಂದು ಈತನೆ ರೇಪ್-ಮರ್ಡರ್ ಮಾಡಿದ್ದಾನೆ ಎಂದು ಪೊಲೀಸರಿಗೆ ಒಪ್ಪಿಸುತ್ತಾರೆ.

ನಿಷ್ಪಾಪಿ ಸಂತೋಷ್ ರಾವ್ ಫಿಕ್ಸ್!

ಬೆಳ್ತಂಗಡಿ ಪೊಲೀಸರು “ಯಾರದೋ” ನಿರ್ದೇಶನದಂತೆ ಸಂತೋಷ್ ರಾವ್‌ನನ್ನು ಕೇಸಿನಲ್ಲಿ ಫಿಕ್ಸ್ ಮಾಡುವ ಪೂರ್ವಯೋಜನೆಯಂತೆ ಸುಳ್ಳು ಸಾಕ್ಷ್ಯ ಸಂಗ್ರಹದಲ್ಲಿ ತೊಡಗುತ್ತಾರೆಯೇ ಹೊರತು ಪ್ರಾಮಾಣಿಕ ತನಿಖೆಗೆ ಮಾಡುವುದೇ ಇಲ್ಲ. ತನಿಖಾಧಿರಿಕಾಯಾಗಿದ್ದ ಯೋಗೀಶ್ ಸೌಜನ್ಯಳ ಮನೆಯಿಂದ ಆಕೆಯ ಬೇರೆ ಒಳ ಉಡುಪು ತಂದು ಕಾಡಿನಲ್ಲಿ ಸಿಕ್ಕಿದೆ ಎಂದು ಮಹಜರು ಮಾಡುತ್ತಾರೆ; ಆರೋಪಿ ಸಂತೋಷ್ ರಾವ್‌ರನ್ನು ಸೌಜನ್ಯಳ ಶವ ಸಿಕ್ಕಿದ ಪ್ರದೇಶಕ್ಕೆ ಕರೆದುಕೊಂಡುಹೋಗಿ ಅಲ್ಲಿ ಹೋಗೊ, ಇಲ್ಲಿ ಬಾ, ಹಾಗೆ ಮಾಡು, ಹೀಗೆ ಮಾಡು ಎಂದು ಹೇಳಿಮಾಡಿಸಿ ವೀಡಿಯೋ ಸಾಕ್ಷ್ಯ ಸಿದ್ದಪಡಿಸಿದ್ದಾರೆ ಎಂದು ಹೋರಾಟಗಾರರು ಮತ್ತು ಸೌಜನ್ಯ ಕುಟುಂಬಸ್ಥರು ಆರೋಪಿಸುತ್ತಾರೆ. ಆ ನಂತರ ಅಂದಿನ ಸದಾನಂದ ಗೌಡರ ಬಿಜೆಪಿ ಸರಕಾರ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡುತ್ತದೆ. ಸಿಐಡಿ ಪೊಲೀಸರೂ ಸಹ ಬೆಳ್ತಂಗಡಿ ಪೊಲೀಸರ ಜಾಡಿನಲ್ಲಿಯೇ ಸಾಗುತ್ತ, ಪಾಪದ ಸಂತೋಷ್ ರಾವ್ ಸುತ್ತಲೇ ಕೇಸು ಗಿರಕಿ ಹೊಡೆಯುವಂತೆ ಮಾಡುತ್ತಾ ನಿಜವಾದ ಅಪರಾಧಿಗಳ ರಕ್ಷಣೆಯ “ತನಿಖೆ” ಮಾಡುತ್ತಾರೆ.

ಪಾಪಿಗಳು ಯಾರು?!

ಈ ಭೀಭತ್ಸ ಅತ್ಯಾಚಾರ-ಕೊಲೆ ಪ್ರಕರಣದ ದಿಕ್ಕುತಪ್ಪಿಸಿ “ಯಾರನ್ನೋ” ಕಾಪಾಡುವ ಕತೆ ಕಟ್ಟಲಾಗುತ್ತಿರುವುದು ಬೆಳ್ತಂಗಡಿ ಜನರಿಗೆ ಅರ್ಥವಾಗುವುದಕ್ಕೆ ತಡವಾಗಲಿಲ್ಲ. ಬೆಳ್ತಂಗಡಿಯಲ್ಲಿ ಹಿಂದೆಂದೂ ಕಂಡುಕೇಳರಿಯದ ಹತ್ತಾರು ಸಾವಿರ ಜನಸಾಗರ ಸೇರಿ ಆ ಪಾಪದ ಪೋರಿಯ ಸಾವಿಗೆ ನ್ಯಾಯ ಕೇಳಿತು; ನೋಡುನೋಡುತ್ತಿದ್ದಂತೆ ಪ್ರತಿಭಟನೆ ಇಡೀ ರಾಜ್ಯ ವ್ಯಾಪಿಸಿ ದೇಶ ಮಟ್ಟದಲ್ಲಿ ಸಂಚಲನ ಮೂಡಿಸಿತು. ಸ್ಥಳೀಯ ಹಿಂದುತ್ವವಾದಿ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ, ಕೇಮಾರು ಮಠದ ಈಶ ವಿಠಲ ದಾಸ ಸ್ವಾಮಿ, ಸಿಪಿಎಮ್ ಪಕ್ಷ ಮತ್ತು ಜನವಾದಿ ಮಹಿಳಾ ಸಂಘಟನೆ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಮುಂತಾದ ಸಂಘಟನೆಗಳು ಮೇಲಿಂದಮೇಲೆ ಹಲವು ಹೋರಾಟ, ಧರಣಿ, ಪ್ರತಿಭಟನಾ ಸಭೆ ನಡೆಸಿ ತನಿಖೆಯ ಕಣ್ಕಟ್ಟು ಬಿಟ್ಟು ನಿಜವಾದ ಪಾತಕಿಗಳನ್ನು ಬಂಧಿಸುವಂತೆ ಒತ್ತಾಯಿಸಿದವು; ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದವು. ಅಂದು ಶಾಸಕರಾಗಿದ್ದ ವಸಂತ ಬಂಗೇರರ ಒತ್ತಡದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಸನ್ನು ಸಿಬಿಐಗೇನೊ ವಹಿಸಿದ್ದರು. ಆದರೆ ಇವತ್ತಿಗೂ ನ್ಯಾಯ ಎಂಬುದು ಬಿಸಿಲ್ಗುದುರೆ ಆಗಿಯೇ ಇದೆ!

ಮೋಹಿತ್ ಕುಮಾರ್, ನವೀನ್ ಕುಮಾರ್

ಹತ್ತು ವರ್ಷದಲ್ಲಿ ಸೌಜನ್ಯ ಪ್ರಕರಣ ಹತ್ತಾರು ಆಯಾಮ ಪಡೆದಿದೆ. ಸ್ಥಳೀಯ ಪೊಲೀಸರಿಂದ ರಾಜ್ಯದ ಸಿಐಡಿ, ದೇಶದ ಅತ್ಯುನ್ನತ್ತ ಸಿಬಿಐ ಏಜೆನ್ಸಿಗಳು ಒಂದೇ ನಮೂನೆಯ ತನಿಖೆ ನಡೆಸಿವೆ; ನಿರಪರಾದಿ ಸಂತೋಷ್ ರಾವ್ ಬದುಕನ್ನು ಬರ್ಬಾದ್ ಮಾಡಿವೆ. ಸಿಬಿಐ ಜನರ ವಿಶ್ವಾಸಕ್ಕೆ ದ್ರೋಹ ಮಾಡಿದ್ದೇಕೆ? ಸಿಐಡಿ ದಿಕ್ಕು ತಪ್ಪಿಸಿದ್ದ ತನಿಖೆಯನ್ನೇಕೆ ಸಿಬಿಐ ಹಳಿಗೆ ತರಿಸುವ ಖಾಕಿ ಬದ್ಧತೆ ತೋರಿಸಲಿಲ್ಲ? ದಿಲ್ಲಿಯ ನಿರ್ಭಯಾ ಪ್ರಕರಣದ ತ್ವರಿತ-ನಿಷ್ಪಕ್ಷಪಾತ ತನಿಖೆ ನಡೆದು ಆರೋಪಿಗಳಿಗೆ ಗಲ್ಲು ಶಿಕ್ಷೆಯೂ ಆಯಿತು. ಅದಕ್ಕಿಂತಲೂ ಘೋರವಾದ “ಧರ್ಮಸ್ಥಳದ ನಿರ್ಭಯಾ” ಪ್ರಕರಣದಲ್ಲೇಕೆ ನ್ಯಾಯ ಸಿಗುತ್ತಿಲ್ಲ? ಸಂತೋಷ್ ರಾವ್ ಅಪರಾಧಿಯಲ್ಲ ಎಂದಾದರೆ ಸೌಜನ್ಯಳನ್ನು ತಿಂದು ಕೊಂದು ಹಾಕಿದ್ದು ಯಾರು? ಎಂಬ ಸಹಜ ಪ್ರಶ್ನೆಗಳೀಗ ಎದ್ದಿವೆ. ಆದರೆ ಈ ಪ್ರಶ್ನೆಗಳ ಉತ್ತರಕ್ಕಾಗಿ ತ್ರಾಸು ಪಟ್ಟುಕೊಂಡು ತಡಕಾಡಬೇಕಾದ ಪ್ರಮೇಯವಿಲ್ಲ; ದೆಹಲಿ ನಿರ್ಭಯಾ ಪ್ರಕರಣದ ಆರೋಪಿಗಳು ತೀರಾ ದುರ್ಬಲರು; ರಾಜಕೀಯ ಮುಂದಾಳುಗಳ-ದೇವಮಾನವರ ಕೃಪಾರ್ಶೀರ್ವಾದ ಇಲ್ಲದವರಾಗಿದ್ದರು. ಆದರೆ ಸೌಜನ್ಯ ಕೇಸ್ ಹಿಂದೆ ದಿಲ್ಲಿ ಬಿಜೆಪಿ ಸರಕಾರವನ್ನೇ ಪ್ರಭಾವಿಸಬಲ್ಲ ಪ್ರಬಲ “ಕರ್ಮಾ”ಧಿಕಾರಿ ಪರಿವಾರವಿದೆ ಎಂದು ಬೆಳ್ತಂಗಡಿಯ ಮಂದಿ, ಹೋರಾಟಗಾರರು ಮತ್ತು ಸೌಜನ್ಯಳ ಹೆತ್ತವರು ಹೇಳುತ್ತಾರೆ.

ದೇವದೂತರ ಪರಿವಾರಿಗರು!

ಸೌಜನ್ಯಳ ತಂದೆ ಚಂದ್ರಪ್ಪ ಗೌಡ ವಿಚಾರಣೆಯ ಒಂದು ಹಂತದಲ್ಲಿ- ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ಧೀರಜ್ ಜೈನ್- ಇವರುಗಳು ತನ್ನ ಮಗಳ ಅತ್ಯಾಚಾರ-ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯಿದೆ; ಈ ಮೂವರು ಕೃತ್ಯ ನಡೆದ ಸ್ಥಳದಲ್ಲಿದ್ದರು. ಇವರನ್ನು ರಕ್ಷಿಸಲು ಸಿಬಿಐ ಸಂತೋಷ್ ರಾವ್ ಅಪರಾಧಿ ಎಂಬಂತೆ ಬಿಂಬಿಸುತ್ತಿದೆ. ಈ ಜೈನ್ ತ್ರಯರ ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಿಐ ನ್ಯಾಯಾಲಯದ ಮೊರೆಹೋಗಿದ್ದರು. ವಿಚಾರಣೆಗೆ ಮೊದಲೇ ಈ ಆರೋಪಿಗಳು ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ತಂದುಕೊಂಡರು. ಆ ಬಳಿಕೆ ಸಿಬಿಐ ಸೌಜನ್ಯಳ ತಂದೆ ಹೆಸರಿಸಿದ್ದವರ ಉಸಾಬರಿಗೆ ಹೋಗಲಿಲ್ಲ. ಮೂವರೂ ಧರ್ಮಸ್ಥಳದ ಧರ್ಮಾಧಿಕಾರಿ-ರಾಜ್ಯಸಭೆಯ ನಾಮನಿರ್ದೇಶಿತ ಸಂಸದ ವೀರೇಂದ್ರ ಹಗ್ಗಡೆ ಆಪ್ತ ಪರಿವಾರದವರೆಂಬುದು ಗಮನಾರ್ಹ! ತಮಾಷೆಯೆಂದರೆ, ಧರ್ಮಸ್ಥಳ ಸಂಸ್ಥಾನದ ಪರಿವಾರಕ್ಕೆ ಸೇರಿದ ಯುವಕರು ಹಿಡಿದುಕೊಟ್ಟ ಪಾಪದ ಸಂತೋಷ್ ರಾವ್‌ನನ್ನು ಆರೋಪಿ ಮಾಡಿ ಹತ್ತಾರು ವರ್ಷ ಕಾಡಿದ ಸಿಬಿಐ, ಖುದ್ದು ಹತ್ಯೆಗೀಡಾದ ಹುಡುಗಿಯ ತಂದೆಯೇ ತನಗಿಂಥವರ ಮೇಲೆ ಸಂಶಯವಿದೆ ಎಂದು ಹೇಳಿದರೂ ಕೈಕಟ್ಟಿಕೊಂಡು ಕೂರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸೌಜನ್ಯ ಕೇಸಿಗೆ ನ್ಯಾಯಸಿಗುವುದಾದರೂ ಹೇಗೆ? ಎಂದು ಬೆಳ್ತಂಗಡಿಯ ಮಂದಿ ಅಲವತ್ತುಕೊಳ್ಳುತ್ತಾರೆ.

ಇದನ್ನೂ ಓದಿ: ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಈ ನಡುವೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಗೋಪಾಲ ಗೌಡ, ರವಿ ಪೂಜಾರಿ ಮತ್ತು ವಾರಿಜ ಆಚಾರ್ತಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ; ಸಂತೋಷ್ ರಾವ್‌ನನ್ನು ಜೈಲಿನಲ್ಲೇ ಕೊಲೆ ಮಾಡಿ ನಿಜವಾದ ಆರೋಪಿಗಳನ್ನು ರಕ್ಷಿಸುವ ಹುನ್ನಾರವೂ ನಡೆದಿತ್ತು. ಆದರೆ ಜೈಲು ಅಧಿಕಾರಿಗಳ ಸಕಾಲಿಕ ಮಧ್ಯಪ್ರವೇಶದಿಂದ ಆ ಪಾತಕ ತಪ್ಪಿತು ಎಂದು ಸುಳ್ಳು ಪ್ರಕರಣವೊಂದರಲ್ಲಿ ಅದೇ ಜೈಲಿನಲ್ಲಿದ್ದ ಪತ್ರಕರ್ತರೊಬ್ಬರು ಹೇಳುತ್ತಾರೆ. ಈಗ ಪ್ರಕರಣದ ಮರು ತನಿಖೆಗೆ ಒತ್ತಾಯ ಶುರುವಾಗಿದೆ. ಸಂತೋಷ್ ರಾವ್ ನಿರಪರಾಧಿಯೆಂದು ತೀರ್ಪು ಬಂದಿರುವುದರಿಂದ ಹೋರಾಟಗಾರರಿಗೆ ಮೊದಲ ಜಯ ದೊರೆತಂತಾಗಿದೆ; ನಾವು ಹಿಂದೆ ಕೆಲವರ ವಿರುದ್ಧ ಸಿಬಿಐಗೆ ದೂರು ಕೊಟ್ಟಿದ್ದವು; ಆದರೆ ಆ ಆರೋಪಿಗಳ ಸಮರ್ಪಕ ತನಿಖೆ ಆಗಲೇ ಇಲ್ಲ. ಇನ್ನಾದರೂ ಪ್ರಕರಣದ ಮರುತನಿಖೆ ನಿಷ್ಠುರವಾಗಿ ನಡೆಯುವಂತಾಗಬೇಕು; ನಾವು ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಮಾವ ವಿಠಲ ಗೌಡ ಹೇಳುತ್ತಾರೆ.

ಸೌಜನ್ಯಳ ಸಾವಿಗೆ ಸಿದ್ದು ಸರಕಾರ-2ರಲ್ಲಾದರೂ ನ್ಯಾಯ ಸಿಗಬಹುದೆ ಎಂಬ ನಿರೀಕ್ಷೆ ಬೆಳ್ತಂಗಡಿಯವರದಷ್ಟೇ ಅಲ್ಲ, ಇಡೀ ರಾಜ್ಯದ ಜನರದ್ದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...