Homeರಂಜನೆಕ್ರೀಡೆ22 ಗ್ರಾಂಡ್‌ಸ್ಲ್ಯಾಮ್ ದಾಖಲೆ ಸರಿಗಟ್ಟಿದ ಜೊಕೊವಿಕ್

22 ಗ್ರಾಂಡ್‌ಸ್ಲ್ಯಾಮ್ ದಾಖಲೆ ಸರಿಗಟ್ಟಿದ ಜೊಕೊವಿಕ್

- Advertisement -
- Advertisement -

ಟೆನಿಸ್ ಲೋಕದಲ್ಲಿ ರೋಜರ್ ಫೆಡರರ್, ರಫೇಲ್ ನಡಾಲ್‌ನಷ್ಟೇ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸನ್ನು ಹೊಂದಿರುವ ಮತ್ತೋರ್ವ ದಿಗ್ಗಜ ಸರ್ಬಿಯಾದ ನೋವಾಕ್ ಜೊಕೊವಿಕ್. ಆದರೆ, ಇದೇ ಜೊಕೊವಿಕ್‌ರನ್ನು ಕೊರೊನಾ ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಕಳೆದ ವರ್ಷ ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದಲೇ ಹೊರಗಿಡಲಾಗಿತ್ತು. ಬೇರೆ ಕೆಲವು ಕಾರಣಗಳಿಂದಲೂ, ಕಳೆದ ಒಂದು ವರ್ಷದಿಂದ ಟೆನಿಸ್ ಅಂಗಳದಿಂದ ಬಹುತೇಕ ಹೊರಗೇ ಉಳಿದಿದ್ದ ಜೊಕೊವಿಕ್ ಇದೀಗ ಆಸ್ಟ್ರೇಲಿಯಾ ಓಪನ್ 2023 ಪ್ರಶಸ್ತಿಗೆ ಮುತ್ತಿಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಇದರ ಜೊತೆಗೆ 22 ಗ್ರಾಂಡ್‌ಸ್ಲ್ಯಾಮ್‌ಗಳನ್ನು ಗೆಲ್ಲುವ ಮೂಲಕ ರಫೇಲ್ ನಡಾಲ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ಟೆನಿಸ್ ಅಂಗಳದಲ್ಲಿ ನೋವಾಕ್ ಜೊಕೊವಿಕ್‌ಗೆ ಕಠಿಣ ಪ್ರತಿಸ್ಪರ್ಧೆ ಒಡ್ಡುತ್ತಿರುವ ಸ್ಟೆಫಾನೊಸ್ ಸಿಟ್ಸಿಪಾಸ್ ಈ ವರ್ಷ ತನ್ನ ಮೊದಲ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಡಲಿದ್ದಾರೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಅಲ್ಲದೆ, ಒಂದು ವರ್ಷದಿಂದ ಟೆನಿಸ್ ಅಂಗಳದಿಂದ ಅಂತರ ಕಾಯ್ದುಕೊಂಡಿದ್ದ ಜೊಕೊವಿಕ್ ಮತ್ತೆ ಫಾರ್ಮ್‌ಗೆ ಬಂದು ಗೆಲ್ಲುವುದು ಕಷ್ಟ ಎಂದು ಅಂದಾಜಿಸಲಾಗಿತ್ತು. ಆದರೆ, ಕಳೆದ ಭಾನುವಾರ ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಎಲ್ಲ ವಿಮರ್ಶಕರಿಗೆ ಉತ್ತರ ನೀಡಿದ್ದಾರೆ.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಹಣಾಹಣಿಯಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಜೊಕೊವಿಕ್ 6-3, 7-6 (4), 7-6 (5) ಸೆಟ್‌ಗಳಿಂದ ಸೋಲಿಸಿದರು. ಇದರೊಂದಿಗೆ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 22ನೇ ಗ್ರಾಂಡ್‌ಸ್ಲ್ಯಾಮ್ ಗೆದ್ದ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಮೂರೇ ಸೆಟ್‌ನಲ್ಲಿ ಪಂದ್ಯ ಮುಗಿಸಿದ ಜೊಕೊವಿಕ್

ಫೈನಲ್ ಪಂದ್ಯದ ಮೊದಲ ಸೆಟ್‌ಅನ್ನು 6-3 ಅಂತರದಿಂದ ಸುಲಭವಾಗಿ ಗೆದ್ದ ನೋವಾಕ್‌ಗೆ 2ನೇ ಸುತ್ತಿನಲ್ಲಿ ಕಠಿಣ ಪೈಪೋಟಿ ಎದುರಾಯಿತು. ಅದರಲ್ಲೂ ರಿವರ್ಸ್ ಸರ್ವ್ ಮೂಲಕ ಸ್ಟೆಫಾನೊಸ್ ಸಿಟ್ಸಿಪಾಸ್ 2ನೇ ಸುತ್ತಿನಲ್ಲಿ ಹಿಡಿತ ಸಾಧಿಸಿದರು. ಪರಿಣಾಮ 7-6 ಅಂತರದಿಂದ ಕಷ್ಟ ಪಟ್ಟು ಜೊಕೊವಿಕ್ 2ನೇ ಸೆಟ್‌ಅನ್ನು ಗೆದ್ದುಕೊಂಡರು. ಇನ್ನು ಮೂರನೇ ಸೆಟ್‌ನಲ್ಲೂ ಇಬ್ಬರೂ ಪರಸ್ಪರ ಭರ್ಜರಿ ಪೈಪೋಟಿಯಿಂದ ಆಡಿದರು. ಆದರೆ ಮೂರನೇ ಸೆಟ್‌ನಲ್ಲಿ ತಮ್ಮ ಅನುಭವವನ್ನೆಲ್ಲಾ ಧಾರೆಯೆರೆದು ಆಡಿದ ನೋವಾಕ್ ಜೊಕೊವಿಕ್ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು 7-6 ಅಂತರದಿಂದ ಸೋಲಿಸಿದರು.

ಇದನ್ನೂ ಓದಿ: ಮಹಿಳಾ ಕ್ರಿಕೆಟ್ ನಡೆದು ಬಂದ ಹಾದಿ

ಈ ಮೂಲಕ 5 ಸೆಟ್ ಪಂದ್ಯವನ್ನು ಕೇವಲ ಮೂರೇ ಸೆಟ್‌ನಲ್ಲಿ ಮುಗಿಸುವ ಮೂಲಕ ಜೊಕೊವಿಕ್ ತಮ್ಮ ಎಲ್ಲ ವಿಮರ್ಶಕರ ಹುಬ್ಬೇರುವಂತೆ ಮಾಡಿದರು. ಅಲ್ಲದೆ, 2023ರ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಸದ್ಯ ಖ್ಯಾತ ಟೆನಿಸ್ ಆಟಗಾರರಾದ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ತಲಾ 22 ಗ್ರಾಂಡ್‌ಸ್ಲ್ಯಾಮ್‌ಗಳಲ್ಲಿ ಸಮಬಲ ಸಾಧಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಫ್ರೆಂಚ್ ಓಪನ್ ಆರಂಭವಾಗಲಿದ್ದು, ಇವರಿಬ್ಬರಲ್ಲಿ ಯಾರು 23ನೇ ಬಾರಿ ಕಿರೀಟ ಮುಡಿಗೇರಿಸಲಿದ್ದಾರೆ ಎಂಬುದೇ ಕುತೂಹಲ.

ಟೆನಿಸ್ ಅಂಗಳದ ವಿಶ್ವ ದಾಖಲೆ

ಟೆನಿಸ್ ಅಂಗಳದಲ್ಲಿ ಅತೀ ಹೆಚ್ಚು ಗ್ರಾಂಡ್‌ಸ್ಲ್ಯಾಮ್ ಗೆದ್ದ ವಿಶ್ವ ದಾಖಲೆ ಸೆರೆನಾ ವಿಲಿಯಮ್ಸ್ ಹೆಸರಿನಲ್ಲಿದೆ. ಅಮೆರಿಕದ ಟೆನಿಸ್ ಆಟಗಾರ್ತಿ ಒಟ್ಟು 23 ಬಾರಿ ಗ್ರಾಂಡ್‌ಸ್ಲ್ಯಾಮ್ ಟ್ರೋಫಿಗೆ ಮುತ್ತಿಕ್ಕಿದ್ದರು. ಇನ್ನು ಪುರುಷರ ವಿಭಾಗದಲ್ಲಿ ಇದೀಗ ನೋವಾಕ್ ಜೊಕೊವಿಕ್ ಹಾಗೂ ರಾಫೆಲ್ ನಡಾಲ್ 22 ಬಾರಿ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿರುವ ರೋಜರ್ ಫೆಡರರ್ 20 ಬಾರಿ ಗ್ರಾಂಡ್‌ಸ್ಲ್ಯಾಮ್ ಟ್ರೋಫಿಗೆ ಮುತ್ತಿಕ್ಕಿದ್ದರು. ಇದೀಗ ಸೆರೆನಾ ವಿಲಿಯಮ್ಸ್ ಬರೆದಿರುವ ವಿಶ್ವ ದಾಖಲೆಯನ್ನು ಸರಿಗಟ್ಟಲು ಜೊಕೊವಿಕ್ ಹಾಗೂ ನಡಾಲ್‌ಗೆ ಉತ್ತಮ ಅವಕಾಶವಿದೆ. ಈ ದಾಖಲೆ ಫ್ರೆಂಚ್ ಓಪನ್ ಮೂಲಕ ಮೂಡಿ ಬರಲಿದೆಯಾ ಕಾದು ನೋಡಬೇಕಿದೆ.

ಮಹಿಳಾ ಸಿಂಗಲ್ಸ್‌ನಲ್ಲಿ ಮೊದಲ ಗ್ರಾಂಡ್‌ಸ್ಲ್ಯಾಮ್‌ಗೆ ಮುತ್ತಿಟ್ಟ ಸಬಲೆಂಕಾ

ಬೆಲರೂಸ್‌ನ ಅರಿನಾ ಸಬಲೆಂಕಾ ಮಹಿಳಾ ಸಿಂಗಲ್ಸ್‌ನಲ್ಲಿ ಕಜಕಿಸ್ತಾನದ ಎಲೆನಾ ರಿಬಾಕಿನಾ ವಿರುದ್ಧ ಗೆಲುವು ಸಾಧಿಸುವ ಮೂಲಕ ತಮ್ಮ ಮೊದಲ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಬೆಲರೂಸ್‌ನ ಅರಿನಾ ಸಬಲೆಂಕಾ

ರೋಚಕವಾಗಿದ್ದ ಅಂತಿಮ ಹಣಾಹಣಿಯಲ್ಲಿ ರಿಬಾಕಿನಾ ವಿರುದ್ಧ ಸಬಲೆಂಕಾ 6-4, 6-3, 6-4 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದ್ದಾರೆ. ಸಬೆಲೆಂಕಾ ಗ್ರಾಂಡ್‌ಸ್ಲ್ಯಾಮ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವುದು ಇದೇ ಮೊದಲು. ಮೊದಲ ಪ್ರಯತ್ನದಲ್ಲೇ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ತಾರೆಯಾಗಿ ಅವರು ಹೊರಹೊಮ್ಮಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಆಸ್ಟ್ರೇಲಿಯಾ ಓಪನ್‌ನಲ್ಲಿ ರಷ್ಯಾ ಮತ್ತು ಬೆಲರೂಸ್ ಆಟಗಾರರಿಗೆ ಯಾವುದೇ ರಾಷ್ಟ್ರೀಯ ಮಾನ್ಯತೆ ನೀಡಿರಲಿಲ್ಲ. ಹೀಗಾಗಿ ಗ್ರಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ತಟಸ್ಥ ಆಟಗಾರ್ತಿ ಎಂಬ ವಿಶೇಷ ದಾಖಲೆಯೂ ಇದೀಗ ಅರಿನಾ ಸಬಲೆಂಕಾ ಪಾಲಾಗಿದೆ.

ಸಾನಿಯಾ ಮಿರ್ಜಾಗೆ ನಿರಾಸೆ

ಆಸ್ಟ್ರೇಲಿಯಾ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ ಸ್ಪರ್ಧಿಸಿತ್ತು. ಅಲ್ಲದೆ, ಅಜೇಯ ಓಟದ ಮೂಲಕ ಈ ಜೋಡಿ ಫೈನಲ್ ಪ್ರವೇಶಿಸಿತ್ತು. ಇಬ್ಬರೂ ಕಳೆದ ಎರಡು ವರ್ಷದಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ ಈ ವರ್ಷ ಪ್ರಶಸ್ತಿ ಗ್ಯಾರಂಟಿ ಎಂದೇ ಭಾವಿಸಲಾಗಿತ್ತು.

ಆದರೆ, ಈ ಜೋಡಿ ಲೂಯೀನಾ ಸ್ಟೆಫಾನಿ, ರಪೇಲ್ ಮಾಟೋಸ್ ಜೋಡಿಯ ವಿರುದ್ಧ 7-6, 6-2 ಅಂತರದಲ್ಲಿ ಸೋಲೊಪ್ಪುವ ಮೂಲಕ ನಿರಾಸೆ ಅನುಭವಿಸಿದೆ.

ಮೊದಲ ಸೆಟ್‌ನಲ್ಲಿ ಸಾನಿಯಾ-ಬೋಪ್ಪಣ್ಣ ಜೋಡಿ ಪ್ರಬಲ ಪೈಪೋಟಿ ಒಡ್ಡಿತ್ತು. ಹೀಗಾಗಿ ಮೊದಲ ಸೆಟ್ 6-6 ಅಂತರದಲ್ಲಿ ಸಮಬಲವಾಗಿತ್ತು. ಆದರೆ, ಟೈಬ್ರೇಕರ್‌ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಲೂಯೀನಾ ಸ್ಟೆಫಾನಿ, ರಪೇಲ್ ಮಾಟೋಸ್ ಜೋಡಿ ಗೆಲುವು ಸಾಧಿಸಿತು. ಇನ್ನು ಎರಡನೇ ಸೆಟ್‌ನಲ್ಲಿ ಸಾನಿಯಾ-ಬೋಪಣ್ಣ ಜೋಡಿ ಗೆಲ್ಲುವ ಉತ್ಸಾಹವನ್ನೂ ತೋರಿಸದೆ ನೀರಸ ಪ್ರದರ್ಶನ ನೀಡುವ ಮೂಲಕ ನಿರಾಸೆ ಅನುಭವಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...