Homeರಾಷ್ಟ್ರೀಯಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

ಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

- Advertisement -
- Advertisement -

ಒಂದು – ನನ್ನ ಒಬ್ಬ ಮಿತ್ರ ಹೇಳಿದ ಘಟನೆ. ಅವನು ಮೊದಲ ಸಲ ಮುಂಬಯಿಗೆ ಹೋಗಿದ್ದಾಗ ಅವನಿಗಿದ್ದ ಒಂದು ಆಸೆ; ಮಲ್ಟಿಪ್ಲೆಕ್ಸ್‍ನಲ್ಲಿ ಒಂದು ಸಿನೆಮಾ ನೋಡಬೇಕು ಅಂತ. ಆಯ್ತು ಹೋದ, ಯಾವುದೋ ಒಂದು ದೊಡ್ಡ ಹೀರೋನ ಚಿತ್ರದ ಟಿಕೆಟ್ ತೊಗೊಂಡು, ಒಂದು ಹಾಲ್‍ನಲ್ಲಿ ಕುಳಿತ. ಅಲ್ಲಿ ಆ ದೊಡ್ಡ ಹೀರೋನ ಸಿನಿಮಾ ಶುರುವಾಗುವ ಬದಲಿಗೆ ಯಾವುದೋ ಸಾಕ್ಷಚಿತ್ರ ಶುರುವಾಯಿತು. ಆಯಿತು, ಕೆಲನಿಮಿಷ ಇದನ್ನು ತೋರಿಸಿ ಸಿನೆಮಾ ಶುರು ಮಾಡ್ತಾರೆ ಎಂದು ಕುಳಿತವನಿಗೆ ತಾನು ತಪ್ಪಾಗಿ ಬೇರೊಂದು ಹಾಲ್‍ಗೆ ಬಂದಿದ್ದೇನೆ ಎಂದು ತಿಳಿಯುವಷ್ಟರಲ್ಲಿ ತುಂಬಾ ತಡವಾಗಿತ್ತು.

“ಥೋ, ಅದ್ಹೆಂತದೋ ಮುಂಬಯಿಯಲ್ಲಿ ಇಲಿ ಹಿಡಿಯುವವರ ಚಿತ್ರ ಇತ್ತು ಮಾರಾಯಾ, ಒಂದು ಇಲಿ ಹೊಡೆದುಕೊಟ್ಟರೆ ಇಂತಿಷ್ಟು ರೂಪಾಯಿ ಕೊಡ್ತಾರೆಂತೆ, ದಿನಾ ರಾತ್ರಿ 12 ಗಂಟೆ ನಂತರ ಇವರೆಲ್ಲಾ ಕೆಲಸ ಶುರು ಹಚ್ಕೋತಾರೆ, ಹೆಂಗೆ ಹಿಡಿತಾರೆ ಗೊತ್ತಾ ಇಲೀನಾ, ಅವರ ಜೀವನ ಹೆಂಗಿರುತ್ತೆ ಗೊತ್ತಾ…” ಎಂದೆಲ್ಲಾ ಅವನು ಆ ಚಿತ್ರದ ಬಗ್ಗೆ ಸವಿಸ್ತಾರವಾಗಿ ಕಣ್ಣುಮುಂದೆ ಬರುವಂತೆ ಆ ಘಟನೆಯಾದ ಐದಾರು ವರ್ಷಗಳ ನಂತರವೂ ನಿನ್ನೆಯೇ ನೋಡಿದ ಸಿನೆಮಾದಂತೆ ಹೇಳುತ್ತಿದ್ದ; ಅದರೊಂದಿಗೆ ಎಂಥಾ ಡಬ್ಬಾ ಸಿನೆಮಾ, ಹೀರೋನ ಸಿನೆಮಾ ನೋಡೋಕ್ ಹೋಗಿ ಅದನ್ನು ನೋಡಬೇಕಾಯಿತು ಎನ್ನುವ ಕಡುಬೇಸರವನ್ನೂ ವ್ಯಕ್ತಪಡಿಸುತ್ತಿದ್ದ.

ಎರಡು – ಮುಂಬಯಿಯಲ್ಲಿ ಪಂಡಿತ್ ಪ್ರದೀಪ್ ಚಟರ್ಜಿಯವರ ಬಳಿ ಹಿಂದುಸ್ತಾನಿ ಸಂಗೀತ ಕಲಿಯುತ್ತಿದ್ದೆ. ನನ್ನ ಜೊತೆಗೆ ಕಲಿಯುತ್ತಿದ್ದ ಒಬ್ಬ ಶಿಷ್ಯೆ ಏನೋ ಹೇಳುತ್ತ “ಅವರು (ಒಬ್ಬ ಹಿಂದುಸ್ತಾನಿ ಗಾಯಕರನ್ನು ಹೆಸರಿಸಿ) ಹಾಡೋದು ನಮಗೆ ಅರ್ಥಾನೇ ಆಗೋಲ್ಲ” ಎಂದು ಬಿಟ್ಟಳು. ಅದನ್ನು ಕೇಳಿ ಸಿಟ್ಟಿಗೆದ್ದ ನಮ್ಮ ಗುರುಗಳು “ಏನ್ರೀ, ಯಾರದೋ ಮನೆಗೆ ಹೋದಾಗ, ಅಲ್ಲಿ ಒಳ್ಳೇ ಊಟ ಬಡಿಸಿದ ಮೇಲೆ, ಅದನ್ನು ಹೇಗೆ ಮಾಡಿದ್ರು, ಯಾವ್ಯಾವ ಪದಾರ್ಥಗಳನ್ನು ಹಾಕಿದ್ರು ಅಂತಾ ತಿಳಕೊಳ್ಳೋಕೆ ಹೋಗ್ತೀರಾ? ಆ ಊಟ ಎಂಜಾಯ್ ಮಾಡೋಕೆ ಅದೆಲ್ಲಾ ತಿಳಿಯೋದು ಅವಶ್ಯಕವಾ? ಅವೆಲ್ಲಾ ಏನೂ ತಿಳಿಯದೇ ಊಟ ಮಾಡಿದ್ರೆ ಸಮಾಧಾನ ಆಗಲ್ವಾ?… ಇಂಥಾ ಮಾತುಗಳು (ಆ ಶಿಷ್ಯೆ ಕೇಳಿದ್ದು) ನಿಮ್ಮ ಬಾಯಿಂದ ಬರಲೇಬಾರದು.” ಎಂದರು.
ಮೂರು – ಮನೆಯಲ್ಲಿ ಟಿವಿ ಆನ್ ಆಗಿತ್ತು, ಟೊರಂಟೀನೋನ ಕಿಲ್ ಬಿಲ್ 1 ಚಿತ್ರ ಬರುತ್ತಿತ್ತು. ಯಾರೂ ನೋಡುತ್ತಿರಲಿಲ್ಲ. ಆ ಚಿತ್ರದಲ್ಲಿ ವಿವಿಕಾ ಫಾಕ್ಸ್‍ಳನ್ನು ಕೊಲ್ಲುವ ಉದ್ದೇಶದಿಂದ ಊಮಾ ಥರ್ಮನ್ ಬಂದಾಗ ಹೊಡೆದಾಟದ ದೃಶ್ಯವೊಂದಿದೆ. ಏನೋ ಮಾಡುತ್ತಿದ್ದ ನನ್ನ ಅಮ್ಮ ಆ ದೃಶ್ಯವನ್ನು ನೋಡುತ್ತ ನಿಂತುಬಿಟ್ಟರು, “ಇದೇನಿದು, ಹೆಂಗೆ ಹೊಡೆದಾಡ್ತಾರೆ, ಓಹ್, ಸುಮ್ಮನಾದ್ರಲ್ಲ, ಹೊಡೆದಾಟ ಮುಗಿಸಿದ್ರಾ, ಓ… ಆ ಮಗು ಬಂತು ಅಂತ ಸುಮ್ಮನಾದ್ರಾ, ಅಯ್ತೋ ಆ ಮಗು ಹೋದ ಕೂಡಲೇ ಮತ್ತೇ ಶುರುಮಾಡಿಬಿಟ್ರಲ್ಲ…ಹಾಹಹಾಹಾ…” ಜೀವನದಲ್ಲಿ ಎಂದು ಹೊಡೆದಾಟದ ಸಿನೆಮಾಗಳನ್ನು ನೋಡದ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅಷ್ಟರಲ್ಲಿ ಕಲಾತ್ಮಕ ಸಿನೆಮಾಗಳನ್ನು ನೋಡುವ ಅಭಿರುಚಿ ಹೊಂದಿರುವ ಅಪ್ಪ ಅದನ್ನು ನೋಡಿ, “ಇದೇನು, ಮಕ್ಕಳ ತರಾ ಹೊಡೆದಾಟದ ಸಿನೆಮಾ ನೋಡ್ತೀರಿ…” ಎಂದು ಗದರಿಸಿದರು.
ನಾಲ್ಕು – ಹಲವಾರು ಬಾರಿ ಕೇಳಿದ್ದು; ಆವಯ್ಯನ ಸಿನೆಮಾಗಳು ಅರ್ಥಾನೇ ಆಗಲ್ಲ..
ಐದು – “ಗಾಡ್‍ಫಾದರ್ ಚಿತ್ರವನ್ನು ಮೊದಲ ಸಲ ನೋಡಿದಾಗ ಏನೂ ತಿಳೀಲಿಲ್ಲ, ಎರಡನೇ ಸಲ ನೋಡಿದಾಗಲೂ ತಿಳಿಯಲಿಲ್ಲ, ಆನಂತರ ಗಾಡ್‍ಫಾದರ್ ಪುಸ್ತಕ ಓದಿ ಸಿನೆಮಾ ನೋಡಿದೆ; ಎಂತಹ ಅದ್ಭುತ ಸಿನೆಮಾ” ಒಬ್ಬ ಗೆಳೆಯ ಹೇಳಿದ್ದು.
ರೋಮನ್ ಪೋಲನ್ಸ್ಕಿ ಅವರ ಅತ್ಯಂತ ಸುಪ್ರಸಿದ್ಧ ಸಿನೆಮಾ ರೋಸ್‍ಮೇರಿ’ಸ್ ಬೇಬಿ ಯನ್ನು ಮತ್ತು ಸ್ಟ್ಯಾನ್ಲಿ ಕ್ಯುಬರಿಕ್ ಅವರ ಶೈನಿಂಗ್ ಚಿತ್ರಗಳನ್ನು ಹೇಗೆ ಅರ್ಥೈಸಬೇಕು?
ದಕ್ಷಿಣ ಭಾರತದ ಸ್ಟಾರ್‍ಗಳ ಅಭಿಮಾನಿಗಳು ಆಯಾ ಸ್ಟಾರ್‍ನ ಎಲ್ಲಾ ಸಿನೆಮಾಗಳನ್ನು ಆನಂದಿಸುತ್ತಾರಾ? ಹೇಗೆ?
ಒಂದು ಸಿನೆಮಾ ಅನ್ನು ಆನಂದಿಸಲು ಅರ್ಥ ಮಾಡಿಕೊಳ್ಳಲೇಬೇಕೆ?


ಸುಲಭ ಉತ್ತರಗಳಿಲ್ಲ.

ಸಿನೆಮಾಗಳು ಮತ್ತು ಆ ಸಿನೆಮಾಗಳನ್ನು ಆಸ್ವಾದಿಸುವುದು ವೈಯಕ್ತಿಕ ಅಭಿರುಚಿಗಳೊಂದಿಗೆ ಆಯಾ ಪ್ರದೇಶದ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಕೂಡ ಅವಲಂಬಿಸಿರುತ್ತದೆ. ಹಲವಾರು ಸಿನೆಮಾಗಳು ಸರ್ವಕಾಲದಲ್ಲೂ ಪ್ರಸ್ತುತವಾಗಿದ್ದರೆ ಕೆಲವು ಸಿನೆಮಾಗಳನ್ನು ಕೇವಲ ಒಂದು ದಶಕದ ನಂತರ ನೋಡಲಾಗುವುದಿಲ್ಲ. ಹೌದು ಸಿನೆಮಾಗೂ ಮತ್ತು ಕಲೆಯ ಇತರ ಪ್ರಕಾರಗಳಿಗೂ ಖಂಡಿತವಾಗಿಯೂ ವ್ಯತ್ಯಾಸಗಳಿವೆ. ಒಂದು ಮಾಡರ್ನ್ ಪೇಂಟಿಂಗ್‍ಗೂ ಒಂದು ‘ಕಲಾತ್ಮಕ’(ನಾನು ತುಂಬಾ ದ್ವೇಷಿಸುವ ಪದ) ಚಿತ್ರಕ್ಕೂ ಸಾಮ್ಯತೆಗಳಿವೆಯೆ? ಅವೆರಡನ್ನೂ ಹೋಲಿಸಬಹದಾ? ಅನೇಕರು ಮಾಡರ್ನ್ ಪೇಂಟಿಂಗ್ ಎಂದಕೂಡಲೇ ಮೂಗು ಮುರಿಯುತ್ತಾರೆ; ಸುಮ್ಮನೇ ಏನೋ ಗೀರಿದ್ದು ಎಂದುಕೊಳ್ಳುತ್ತಾರೆ (ಅನೇಕ ಕವಿತೆಗಳಿಗೂ ಇದೇ ತೆರನಾದ ಅಭಿಪ್ರಾಯ ಬಂದಿದ್ದನ್ನು ಕೇಳಿದ್ದೇವೆ.) ಆ ಪೇಂಟಿಂಗ್‍ಅನ್ನು ಅರ್ಥಮಾಡಿಕೊಳ್ಳಲೇಬೇಕಾ? ಒಂದು ಅದ್ಭುತ ಪೇಂಟಿಂಗ್ ನಮ್ಮನ್ನು ಅದನ್ನೇ ನೋಡುತ್ತ ಕೆಲಸಮಯ ನಿಲ್ಲಿಸಿದರೆ ಸಾಕಲ್ಲವೇ? ಪೇಂಟಿಂಗ್‍ನ ಯಾವ ಜ್ಞಾನವೂ ಇಲ್ಲದ ಒಬ್ಬನ ಎದುರಿಗೆ ಒಂದು ಅದ್ಭುತವೆಂದು ಪರಿಗಣಿಸಲಾದ ಪೇಂಟಿಂಗ್ ಮತ್ತು ಇನ್ನೊಂದು ಕೆಟ್ಟ ಪೇಂಟಿಂಗ್ ತಂದಿಟ್ಟರೆ ಅವನು ಯಾವ ಪೇಂಟಿಂಗ್ ಅನ್ನು ನೋಡುತ್ತಾನೆ? ಅವನು ಎರಡೂ ಪೇಂಟಿಂಗ್‍ಗಳನ್ನು ಇಷ್ಟಪಡದೇ ಹೋದರೂ ಅವೆರಡರಲ್ಲಿ ಆ ಅದ್ಭುತವಾದ ಕಲೆಯ ಕೆಲಸದ ಎದುರಿಗೆ ಖಂಡಿತವಾಗಿಯೂ ಹೆಚ್ಚು ಸಮಯ ಕಳೆಯುತ್ತಾನೆ. ಅವನು ಏಕೆ ಆ ಅದ್ಭುತ ಕಲಾಕೃತಿಯನ್ನು ಹೆಚ್ಚು ಸಮಯ ನೋಡುತ್ತ ನಿಂತ ಎನ್ನುವುದು ವಿಶ್ಲೇಷಣೆಯನ್ನು ವಿಮರ್ಶಕರೆಂದು ಕರೆದುಕೊಳ್ಳುವವರ ಕೆಲಸ.
ಒಂದು ಕಲಾಕೃತಿ, ಸಂಗೀತ ಅಥವಾ ಉತ್ಕøಷ್ಟ ಅಡುಗೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಆಸ್ವಾದಿಸಬಹುದಾದರೆ, ಅದು ಸಿನೆಮಾಗೆ ಅನ್ವಯವಾಗುವುದೇ?

ಇಲಿಗಳನ್ನು ಕೊಲ್ಲುವವರ ಚಿತ್ರವನ್ನು ನೋಡಿದ ಆ ಗೆಳೆಯನಿಗೆ ಆ ಚಿತ್ರ ಅಷ್ಟೊಂದು ತಟ್ಟಿದ್ದರೂ (ಐದಾರೂ ವರ್ಷಗಳ ನಂತರವೂ ನೆನಪಿಟ್ಟುಕೊಂಡು ಅಷ್ಟೊಂದು ಉತ್ಸಾಹದಿಂದ ಮಾತನಾಡುತ್ತಾನೆ ಎಂದರೆ) ಅವನ ಬೇಸರ ತಣಿದಿದ್ದಿಲ್ಲ. ಆಗ ಅವನನ್ನು ಪೂರ್ವಗ್ರಹಪೀಡಿತನೆಂದು ಕರೆಯಬಹುದಲ್ಲವೇ? ಒಂದು ಚಿತ್ರ ನಮ್ಮನ್ನು ಆಳವಾಗಿ ತಟ್ಟಿದರೆ ಸಾಕಲ್ಲವೇ? ಆದರೆ ಒಂದು ಚಿತ್ರದಲ್ಲಿ ಏನಾಗುತ್ತದೆ ಎನ್ನುವುದು ತಿಳಿಯದೇ ಆ ಚಿತ್ರ ನೋಡುಗನಿಗೆ ತಟ್ಟಬಲ್ಲದೇ? ಹೌದು ಮತ್ತು ಇಲ್ಲ. ಟಾರ್ಕೊವ್‍ಸ್ಕಿ ಅವರ ಸ್ಟಾಕರ್ ಎನ್ನವ ಚಿತ್ರಗಳಿಗೆ ಅರ್ಥವಾಗಲೇಬೇಕು ಎನ್ನುವ ಷರತ್ತುಗಳಿಲ್ಲ. ಆದರೆ ಈ ಹಿಂದೆಯೇ ಹೇಳಿದಂತೆ ಚಲನಚಿತ್ರ ರಚನೆ/ಚಿತ್ರಕಥೆ ಬರಹ ಎನ್ನುವುದು ಒಂದು ಸಂಕೀರ್ಣ ಕಲೆ. ಬರಹಗಾರನು ಅಥವಾ ನಿರ್ದೇಶಕನು ಮಾಡಿದ ತಪ್ಪಿನಿಂದ ನೋಡುಗನಿಗೆ ಚಿತ್ರ ಅಥವಾ ಕತೆಯು ಅರ್ಥವಾಗದಿದ್ದಲ್ಲಿ ಇದು ಅನ್ವಯಿಸುವುದಿಲ್ಲ.

ಇನ್ನು ಕೆಲವು ಸಲ ನಮ್ಮ ನಮ್ಮ ಸಾಮಾಜಿಕ ಕಾರಣಗಳಿಂದಾಗಿಯೋ ಅಥವಾ ವೈಯಕ್ತಿಕ ಕಾರಣಗಳಿಂದಾಗಿಯೋ, ಆಯಾ ಪ್ರದೇಶಗಳಲ್ಲಿ ಅಂತಹ ವಿಷಯಗಳು ಮುನ್ನೆಲೆಗೆ ಬಾರದ ಕಾರಣಗಳಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಒಂದು ಒಳ್ಳೆಯ ಚಿತ್ರವೂ ಇಷ್ಟವಾಗದೇ ಹೋಗಬಹುದು.

ಇವೆಲ್ಲವುಗಳೂ ಇನ್ನೊಂದು ಮೂಲಭೂತ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಅಂತಿಮವಾಗಿ ಕಲೆಯ ಉದ್ದೇಶವಾದರೂ ಏನು? ಮನರಂಜನೆ ಎಂದರೇನು? ಮೇಲೆ ಹೆಸರಿಸಿದ ಸೈಕಾಲಾಜಿಕಲ್ ಹಾರರ್ ಚಿತ್ರವಾದ ಶೈನಿಂಗ್ ಮತ್ತು ರೋಸ್‍ಮೆರಿ’ಸ್ ಬೇಬಿ ಚಿತ್ರಗಳು ನಮಗೆ ಮನರಂಜನೆ ನೀಡುತ್ತವೆಯೇ? ಆ ಚಿತ್ರಗಳನ್ನು ನೋಡಿದ ನಂತರ ನಮ್ಮ ಮನದಲ್ಲಿ ಉಳಿಯುವ ಭಾವನೆಗಳಾದರೂ ಯಾವುವು? ಒಂದು ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ನಮ್ಮನ್ನು ಹಿಡಿದಿಟ್ಟುಕೊಂಡರೆ ಆ ಚಿತ್ರ ನಮಗೆ ಮನರಂಜನೆ ನೀಡಿದಂತೆಯೇ? ಕೆಲವು ಸಲ ಕೆಟ್ಟ ಚಿತ್ರಗಳೂ ನಮ್ಮನ್ನು ನೋಡಿಸಿಕೊಂಡು ಹೋಗುತ್ತವೆ, ಚಿತ್ರ ನೋಡಿದ ನಂತರ ಇದನ್ಯಾಕೆ ನೋಡಿದೆ ಎನ್ನುವ ಸಿಟ್ಟು ಮಾತ್ರ ಉಳಿದಿರುತ್ತೆ. ಹಾಗಾದರೆ ಏನು ಮನರಂಜನೆಯ ಅರ್ಥ? ಸುಖಾಂತದ ಕಥೆಗಳಷ್ಟೇ ಮನರಂಜನೆ ಎಂದಂತೂ ಯಾರೂ ಹೇಳುವುದಿಲ್ಲ. ದುರಂತ ಕಥೆಗಳನ್ನೂ ಅಷ್ಟೇ ಆಸ್ವಾದಿಸುತ್ತೇವೆ.

ಈ ಪ್ರಶ್ನೆಗಳಿಗೆ ಹಲವಾರು ಉತ್ತರಗಳಿರಬಹುದು; ನನಗೆ ನೆನಪಾಗುವುದು ಲಂಕೇಶ್ ಹೇಳುತ್ತಿದ್ದ ಪದ, ವಾಸನೆ. ಕೆಟ್ಟ ಸಿನೆಮಾಗಳ ವಾಸನೆ ಕೆಟ್ಟದಾಗಿರುತ್ತೆ, ಅವುಗಳ ವಾಸನೆ ಕಂಡುಹಿಡಿಯಲು ನಾವು ಚಿತ್ರ ನೋಡಲೇಬೇಕಂತಿಲ್ಲ, ಅದಕ್ಕೂ ಮುಂಚೆಯೇ ವಾಸನೆ ಹೊಡೆಯುತ್ತವೆ. ಒಳ್ಳೇ ಚಿತ್ರಗಳು ಅರ್ಥವಾಗದಿದ್ದರೂ ವಾಸನೆ ಚೆನ್ನಾಗಿತ್ತು ಎಂದರೆ ಸಂತೋಷಪಡುವ. ಸದ್ಯಕ್ಕೆ ವಾಸನೆಯೊಂದಿಗೆ ಮುಗಿಸುತ್ತೇನೆ; ಮುಂದೆ ನೋಡುವ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...