Homeಮುಖಪುಟಕರಡು ಮಾರ್ಗಸೂಚಿಗೆ ಭಾರೀ ವಿರೋಧ: ಮೀಸಲಾತಿ ರದ್ದುಪಡಿಸಲ್ಲ ಎಂದ ಯುಜಿಸಿ ಅಧ್ಯಕ್ಷ

ಕರಡು ಮಾರ್ಗಸೂಚಿಗೆ ಭಾರೀ ವಿರೋಧ: ಮೀಸಲಾತಿ ರದ್ದುಪಡಿಸಲ್ಲ ಎಂದ ಯುಜಿಸಿ ಅಧ್ಯಕ್ಷ

- Advertisement -
- Advertisement -

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಸಾಕಷ್ಟು ಅಭ್ಯರ್ಥಿಗಳು ದೊರಕದಿದ್ದರೆ, ಅಂತಹ ಹುದ್ದೆಗಳನ್ನು ‘ಮೀಸಲು ರಹಿತ’ ಎಂದು ಘೋಷಿಸಬಹುದು ಎಂಬ ಪ್ರಸ್ತಾವನೆಯ ಕರಡು ಮಾರ್ಗಸೂಚಿಯನ್ನು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಮುಂದಿಟ್ಟಿದೆ.

ಸಾಮಾನ್ಯವಾಗಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹುದ್ದೆಗಳನ್ನು ಇತರ ವರ್ಗಗಳ ಅಭ್ಯರ್ಥಿಗಳಿಗೆ ನೀಡಲಾಗುವುದಿಲ್ಲ. ಆದರೆ, ಎ ದರ್ಜೆ ಹುದ್ದೆಗಳು ಅತ್ಯಂತ ಪ್ರಮುಖವಾದ್ದರಿಂದ, ಅವುಗಳಿಗೆ ಅಭ್ಯರ್ಥಿಗಳು ಸಿಗದಿದ್ದರೆ. ಅದನ್ನು ‘ಮೀಸಲಾತಿ ರಹಿತ’ ಎಂದು ಘೋಷಿಸಬಹುದು. ಸಾರ್ವಜನಿಕ ಹಿತಾಸಕ್ತಿಯಿಂದ ಎ ದರ್ಜೆ ಹುದ್ದೆಗಳನ್ನು ಖಾಲಿ ಬಿಡುವಂತಿಲ್ಲ ಎಂದು ಯುಜಿಸಿ ಕರಡು ಮಾರ್ಗಸೂಚಿ ಹೇಳಿದೆ.

ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ವಿಶ್ವವಿದ್ಯಾನಿಲಯದ ಕಾರ್ಯನಿರ್ವಾಹಕ ಮಂಡಳಿ ನೇಮಕಾತಿ ಮಾಡಿಕೊಳ್ಳಬಹುದು. ಆದರೆ, ಗ್ರೂಪ್ ಎ ಹುದ್ದೆಗಳಿಗೆ ಶಿಕ್ಷಣ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಮೀಸಲಾತಿ ತೆಗೆದು ಹಾಕಲು ಪ್ರಸ್ತಾಪಿಸುವ ಯುಜಿಸಿಯ ಮಾರ್ಗಸೂಚಿ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇತರ ಸ್ವಾಯತ್ತ ಸಂಸ್ಥೆಗಳಿಗೆ ಮತ್ತು ಕೇಂದ್ರ ಸರ್ಕಾರ ಅಥವಾ ಭಾರತದ ಏಕೀಕೃತ ನಿಧಿಯಿಂದ ಅನುದಾನವನ್ನು ಪಡೆಯುವವರಿಗೆ ಅನ್ವಯಿಸಲಿದೆ.

ಒಂದು ವಿಶ್ವವಿದ್ಯಾಲಯದಲ್ಲಿ ಎ ದರ್ಜೆಯ ಮೀಸಲು ಹುದ್ದೆ ಖಾಲಿಯಿದ್ದು, ಅದಕ್ಕೆ ಮೀಸಲು ವರ್ಗದ ಅಭ್ಯರ್ಥಿ ಸಿಗದಿದ್ದರೆ ಅಂತಹ ವಿಶ್ವವಿದ್ಯಾಲಯ ಆ ಹುದ್ದೆಯನ್ನು ಮೀಸಲು ರಹಿತ ಎಂದು ಘೋಷಿಸಿ, ಇತರ ವರ್ಗದ ಅಭ್ಯರ್ಥಿಗಳ ನೇಮಕಕ್ಕೆ ಪ್ರಸ್ತಾವನೆ ಕಳಿಸಬಹುದು.

ಪ್ರಸ್ತಾವನೆ ಸಲ್ಲಿಸುವ ವೇಳೆ, ಹುದ್ದೆಯ ಪದನಾಮ, ವೇತನ ಮಟ್ಟ, ಸೇವಾ ವಲಯ, ಜವಬ್ದಾರಿ ಮತ್ತು ಕಾರ್ಯಗಳು, ಶೈಕ್ಷಣಿಕ ಅರ್ಹತೆ, ಹುದ್ದೆ ತುಂಬಲು ಮಾಡಿದ ಪ್ರಯತ್ನ, ಹುದ್ದೆಯನ್ನು ಖಾಲಿ ಬಿಡದಿರಲು ಕಾರಣ, ಮೀಸಲು ರಹಿತವೆಂದು ಘೋಷಿಸಲು ಸ್ಪಷ್ಟನೆ ಮತ್ತು ಇತ್ಯಾದಿ ಮಾಹಿತಿಗಳನ್ನು ಆಯಾ ವಿಶ್ವವಿದ್ಯಾಲಯ ಒದಗಿಸಬೇಕು ಎಂದು ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಯುಜಿಸಿ ಕರಡು ಮಾರ್ಗಸೂಚಿಗಳಿಗೆ ಆಕ್ಷೇಪ:

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತ ಸರ್ಕಾರದ ಮೀಸಲಾತಿ ನೀತಿಯ ಅನುಷ್ಠಾನಕ್ಕೆ 52 ಪುಟಗಳ ಕರಡು ಮಾರ್ಗಸೂಚಿಯನ್ನು ಪ್ರಕಟಿಸಿದ್ದ ಯುಜಿಸಿ, ಅದನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಟ್ಟಿತ್ತು. ಜನವರಿ 28ಕ್ಕೆ ಅಭಿಪ್ರಾಯ ತಿಳಿಸಲು ಕೊನೆಯ ದಿನವಾಗಿತ್ತು. ಈ ಕರಡು ಮಾರ್ಗಸೂಚಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ವಿಶ್ವವಿದ್ಯಾನಿಲಯಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹುದ್ದೆಗಳಿಗೆ ಮೀಸಲಾತಿ ಕೊನೆಗೊಳ್ಳಬೇಕು ಎಂದು ಮೋದಿ ಸರ್ಕಾರದ ಯುಜಿಸಿ ಇದೀಗ ಅಧಿಸೂಚನೆಯನ್ನು ಹೊರಡಿಸಿದೆ. ಬಿಜೆಪಿ ಯುವಕರ ಉದ್ಯೋಗ ಕಿತ್ತುಕೊಳ್ಳುವುದರಲ್ಲಿ ನಿರತವಾಗಿದೆ” ಎಂದು ಕಿಡಿಕಾರಿದ್ದಾರೆ.

ಸಿಪಿಐ ಪಾಲಿಟ್‌ ಬ್ಯೂರೋ ಸದಸ್ಯ ಸೀತಾರಾಮ್‌ ಯೆಚೂರಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಮನುವಾದದ ಉತ್ತೇಜನ, ಆದಿವಾಸಿ, ದಲಿತ ವಿರೋಧಿ ಸಮಾಜ ನಿರ್ಮಾನಕ್ಕೆ ಮೋದಿ ಸರ್ಕಾರ ಹೆಜ್ಜೆಯಿಟ್ಟಿದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಸಿಗದ ಹುದ್ದೆಗಳ ಮೀಸಲಾತಿ ತೆಗೆದು ಹಾಕುವ ಮೂಲಕ ಜಾತಿ ಆಧಾರಿತ ದಬ್ಬಾಳಿಕೆ ಮುಂದುವರೆಸಲು ಮುಂದಾಗಿದೆ. ಈ ಕರಡನ್ನು ವಾಪಾಸ್‌ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಕೆಲವು ವರ್ಷಗಳ ಹಿಂದೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೀಸಲಾತಿಯನ್ನು ಪರಿಶೀಲಿಸುವ ಬಗ್ಗೆ ಮಾತನಾಡಿದ್ದರು. ಈಗ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ನೀಡಿರುವ ಮೀಸಲಾತಿಯನ್ನು ಕೊನೆಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಯುಜಿಸಿಯ ಈ ಪ್ರಸ್ತಾವನೆಯು ಮೋಹನ್ ಭಾಗವತ್ ಅವರ ಆಶಯಗಳಿಗೆ ಅನುಗುಣವಾಗಿದೆ ಮತ್ತು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜನರಿಗೆ ಸ್ಪಷ್ಟವಾಗಿ ಅನ್ಯಾಯವಾಗಿದೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ಹೇಳಿದ್ದಾರೆ.

ಇತ್ತೀಚೆಗೆ ಜನನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದಾಗ, ರಾಹುಲ್ ಗಾಂಧಿ ದೇಶಕ್ಕೆ ‘ನೈಜ ನ್ಯಾಯ’ ಬೇಕು ಮತ್ತು ‘ಸಾಂಕೇತಿಕ ರಾಜಕೀಯ’ ಅಲ್ಲ ಎಂದು ಹೇಳಿದ್ದರು. ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ವಿಷಯದಲ್ಲಿ ಮೋದಿ ಸರ್ಕಾರ ಕೇವಲ ‘ಸಾಂಕೇತಿಕ ರಾಜಕಾರಣ’ ಮಾಡುತ್ತಿದೆ. ಯುಜಿಸಿಯ ಈ ಪ್ರಸ್ತಾವನೆಯ ಮೂಲಕ ಅವರ ನಿಜವಾದ ಉದ್ದೇಶ ಏನು ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಅನ್ಯಾಯ ಮತ್ತು ಬಾಬಾ ಸಾಹೇಬರ ಸಂವಿಧಾನದ ಮೇಲಿನ ನಿರಂತರ ದಾಳಿಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಈ ಪ್ರಸ್ತಾಪವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮೀಸಲಾತಿ ರದ್ದುಪಡಿಸಲ್ಲ ಎಂದು ಯುಜಿಸಿ ಅಧ್ಯಕ್ಷ : 

ಕರಡು ಮಾರ್ಗಸೂಚಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, “ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯ ಪರಿಣಾಮಕಾರಿ ಜಾರಿಗೆ ಕರಡು ಮಾರ್ಗಸೂಚಿ ಪ್ರಕಟಿಸಲಾಗಿದೆ. ಅಲ್ಲದೆ, ಯಾವುದೇ ಮೀಸಲಾತಿ ರದ್ದುಪಡಿಸುವ ಉದ್ದೇಶವಿಲ್ಲ. ಇದು ಕೇವಲ ಕರಡು ಮಾರ್ಗಸೂಚಿಯಾಗಿದ್ದು, ಇದೇ ಅಂತಿಮವಲ್ಲ ಎಂದಿದ್ದಾರೆ. ಮಾರ್ಗಸೂಚಿಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಡಲಾಗಿತ್ತು. ಈ ವರ್ಷದ ಜನವರಿ 28ಕ್ಕೆ ಅಭಿಪ್ರಾಯ ಸಲ್ಲಿಸಲು ಕೊನೆಯ ದಿನವಾಗಿತ್ತು” ಎಂದಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ...