‘ಕೇರಳದ ಮಲಪ್ಪುರಂ ಜಿಲ್ಲಾಧಿಕಾರಿ ರಾಣಿ ಸೋಯಮೋಯ್ ಅವರು ಏಕೆ ಮೇಕಪ್ ಮಾಡಿಕೊಳ್ಳುವುದಿಲ್ಲ’ ಎಂಬ ಬರಹವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೋಯಮೋಯ್ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಇದೆಂದು ಬರಹವನ್ನು ಸಾಕಷ್ಟು ವೈರಲ್ ಮಾಡಲಾಗುತ್ತಿದೆ. ಮೊದಲು ಮಲೆಯಾಳಂನಲ್ಲಿ ಬಂದ ಈ ಬರಹ, ನಂತರ ಇಂಗ್ಲಿಷ್‌ಗೆ, ಈಗ ಕನ್ನಡಕ್ಕೂ ಅನುವಾದವಾಗಿದೆ. ಆ ಪೋಸ್ಟ್ ಈ ಕೆಳಗಿನಂತಿದೆ:
ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ…
ಕೇರಳ ರಾಜ್ಯದ ಜಿಲ್ಲಾಧಿಕಾರಿ ಕೈಗಡಿಯಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಭರಣವನ್ನು ಧರಿಸಿರಲಿಲ್ಲ. ಬಹುತೇಕ ಮಕ್ಕಳಿಗೆ ಅಚ್ಚರಿಯ ವಿಷಯವೆಂದರೆ ಅವರು ಮುಖಕ್ಕೆ ಪೌಡರ್ ಕೂಡ ಬಳಸಿರಲಿಲ್ಲ.
ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.
ಪ್ರ: ನಿಮ್ಮ ಹೆಸರೇನು?
ನನ್ನ ಹೆಸರು ರಾಣಿ. ಸೋಯಾಮೊಯ್ ನನ್ನ ಕುಟುಂಬದ ಹೆಸರು. ನಾನು ಜಾರ್ಖಂಡ್ ಮೂಲದವಳು.
ಒಬ್ಬ ತೆಳ್ಳಗಿನ ಹುಡುಗಿ ಪ್ರೇಕ್ಷಕರಿಂದ ಎದ್ದು ನಿಂತಳು.
“ಮೇಡಂ, ನಿಮ್ಮ ಮುಖಕ್ಕೆ ಮೇಕಪ್ ಏಕೆ ಬಳಸಬಾರದು?”
ಡಿಸ್ಟ್ರಿಕ್ಟ್ ಕಲೆಕ್ಟರ್ ಮುಖ ಇದ್ದಕ್ಕಿದ್ದಂತೆ ವಿವರ್ಣವಾಯಿತು. ತೆಳುವಾದ ಹಣೆಯ ಮೇಲೆ ಬೆವರು ಹರಿಯಿತು. ಮುಖದಲ್ಲಿನ ನಗು ಮರೆಯಾಯಿತು. ಸಭಿಕರು ಇದ್ದಕ್ಕಿದ್ದಂತೆ ಮೌನವಾದರು. ಟೇಬಲ್ ಮೇಲಿದ್ದ ನೀರಿನ ಬಾಟಲಿಯನ್ನು ತೆರೆದು ಸ್ವಲ್ಪ ಕುಡಿದು, ಮಗುವಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ನಂತರ ನಿಧಾನವಾಗಿ ಮಾತನಾಡತೊಡಗಿದರು.
ನಾನು ಹುಟ್ಟಿದ್ದು ಜಾರ್ಖಂಡ್ ರಾಜ್ಯದ ಬುಡಕಟ್ಟು ಪ್ರದೇಶದಲ್ಲಿ. ನಾನು ಹುಟ್ಟಿದ್ದು ಕೊಡೆರ್ಮಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ “ಮೈಕಾ” ಗಣಿಗಳಿಂದ ತುಂಬಿದ ಸಣ್ಣ ಗುಡಿಸಲಿನಲ್ಲಿ. ನನ್ನ ತಂದೆ ಮತ್ತು ತಾಯಿ ಗಣಿಗಾರರಾಗಿದ್ದರು. ನನಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು. ಮಳೆ ಬಂದರೆ ಸೋರುವ ಪುಟ್ಟ ಗುಡಿಸಲಿನಲ್ಲಿ ವಾಸ. ಬೇರೆ ಕೆಲಸ ಸಿಗದ ಕಾರಣ ನನ್ನ ತಂದೆ-ತಾಯಿ ಗಣಿಗಳಲ್ಲಿ ಅತ್ಯಲ್ಪ ಸಂಬಳಕ್ಕೆ ದುಡಿಯುತ್ತಿದ್ದರು. ಇದು ತುಂಬಾ ಗೊಂದಲಮಯ ಕೆಲಸವಾಗಿತ್ತು.
ನಾನು ನಾಲ್ಕು ವರ್ಷದವಳಾಗಿದ್ದಾಗ, ನನ್ನ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ವಿವಿಧ ಕಾಯಿಲೆಗಳಿಂದ ಹಾಸಿಗೆ ಹಿಡಿದರು. ಗಣಿಗಳಲ್ಲಿನ ಮಾರಣಾಂತಿಕ ಮೈಕಾ ಧೂಳನ್ನು ಆಘ್ರಾಣಿಸುವ ಮೂಲಕ ಈ ರೋಗವು ಉಂಟಾಗುತ್ತದೆ ಎಂದು ಅವರು ಆ ಸಮಯದಲ್ಲಿ ತಿಳಿದಿರಲಿಲ್ಲ. ನಾನು ಐದು ವರ್ಷದವಳಾಗಿದ್ದಾಗ, ನನ್ನ ಸಹೋದರರು ಅನಾರೋಗ್ಯದಿಂದ ನಿಧನರಾದರು.
ಒಂದು ಸಣ್ಣ ನಿಟ್ಟುಸಿರಿನೊಂದಿಗೆ ಕಲೆಕ್ಟರ್ ಮಾತು ನಿಲ್ಲಿಸಿ ಕಣ್ಣೀರಿನಿಂದ ತುಂಬಿದ ಕಣ್ಣುಗಳನ್ನು ಮುಚ್ಚಿದರು.
ಒಂದು ವರ್ಷದ ನಂತರ ನನ್ನ ತಂಗಿಯೂ ಗಣಿ ಕೆಲಸಕ್ಕೆ ಹೋಗತೊಡಗಿದಳು. ಸ್ವಲ್ಪ ಚೇತರಿಸಿಕೊಂಡ ತಕ್ಷಣ ನಾನು ಅಪ್ಪ, ಅಮ್ಮ, ತಂಗಿ ಸೇರಿ ದುಡಿದು ಕೊಂಚ ಬದುಕುವ ಹಂತಕ್ಕೆ ಬಂದೆವು. ಆದರೆ ವಿಧಿ ಇನ್ನೊಂದು ರೂಪದಲ್ಲಿ ನಮ್ಮನ್ನು ಕಾಡಲಾರಂಭಿಸಿತ್ತು. ಒಂದು ದಿನ ನಾನು ವಿಪರೀತ ಜ್ವರದಿಂದ ಕೆಲಸಕ್ಕೆ ಹೋಗದೆ ಇದ್ದಾಗ ಇದ್ದಕ್ಕಿದ್ದಂತೆ ಮಳೆ ಬಂತು. ಗಣಿ ತಳದಲ್ಲಿ ಕಾರ್ಮಿಕರ ಮುಂದೆ ಗಣಿ ಕುಸಿದು ನೂರಾರು ಜನರು ಸತ್ತರು. ಅವರಲ್ಲಿ ನನ್ನ ತಂದೆ, ತಾಯಿ ಮತ್ತು ಸಹೋದರಿ ಕೂಡಾ. ಸಭಿಕರೆಲ್ಲರೂ ಉಸಿರಾಡುವುದನ್ನೂ ಮರೆತರು. ಹಲವರ ಕಣ್ಣಲ್ಲಿ ನೀರು ತುಂಬಿತ್ತು.
ನನಗೆ ಕೇವಲ ಆರು ವರ್ಷ ಎಂದು ನಾನು ನೆನಪಿಸಿಕೊಳ್ಳಬೇಕು. ಕೊನೆಗೆ ನಾನು ಸರ್ಕಾರಿ ಮಂದಿರಕ್ಕೆ ಬಂದೆ. ಅಲ್ಲಿ ನಾನು ಶಿಕ್ಷಣ ಪಡೆದೆ. ನನ್ನ ಹಳ್ಳಿಯಿಂದ ವರ್ಣಮಾಲೆ ಕಲಿತ ಮೊದಲಿಗಳು ನಾನು. ಅಂತಿಮವಾಗಿ ಇಲ್ಲಿ ನಿಮ್ಮ ಮುಂದೆ ಜಿಲ್ಲಾಧಿಕಾರಿ ಆಗದ್ದೇನೆ. ನಾನು ಮೇಕಪ್ ಮಾಡದಿರುವುದಕ್ಕೂ ಇದಕ್ಕೂ ಏನು ಸಂಬಂಧ ಎಂದು ನೀವು ಆಶ್ಚರ್ಯ ಪಡಬಹುದು. ಆ ದಿನಗಳಲ್ಲಿ ಕತ್ತಲೆಯಲ್ಲಿ ತೆವಳುತ್ತಾ ನಾನು ಸಂಗ್ರಹಿಸಿದ ಸಂಪೂರ್ಣ ಮೈಕಾವನ್ನು ಮೇಕಪ್ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ ಎಂದು ನನಗೆ ಆಗ ಅರಿವಾಯಿತು.
ಮೈಕಾ ಫ್ಲೋರೋಸೆಂಟ್ ಸಿಲಿಕೇಟ್ ಖನಿಜದ ಮೊದಲ ವಿಧವಾಗಿದೆ. ಅನೇಕ ದೊಡ್ಡ ಕಾಸ್ಮೆಟಿಕ್ ಕಂಪನಿಗಳು ನೀಡುವ ಖನಿಜ ಮೇಕಪ್ ಗಳಲ್ಲಿ, ಬಹು-ಬಣ್ಣದ ಮೈಕಾ ಅತ್ಯಂತ ವರ್ಣರಂಜಿತವಾಗಿದೆ, ಅದು ನಿಮ್ಮ ತ್ವಚೆಯನ್ನು 20,000 ಚಿಕ್ಕ ಮಕ್ಕಳ ಪ್ರಾಣವನ್ನು ಪಣಕ್ಕಿಡುವಂತೆ ಮಾಡುತ್ತದೆ. ಗುಲಾಬಿಯ ಮೃದುತ್ವವು ನಿಮ್ಮ ಕೆನ್ನೆಗಳ ಮೇಲೆ ಅವರ ಸುಟ್ಟ ಕನಸುಗಳು, ಅವರ ಛಿದ್ರಗೊಂಡ ಜೀವನ ಮತ್ತು ಕಲ್ಲುಗಳ ನಡುವೆ ಪುಡಿಮಾಡಿದ ಮಾಂಸ ಮತ್ತು ರಕ್ತದೊಂದಿಗೆ ಹರಡುತ್ತದೆ. ಲಕ್ಷಾಂತರ ಡಾಲರ್ ಮೌಲ್ಯದ ಮೈಕಾವನ್ನು ಇನ್ನೂ ಮಗುವಿನ ಕೈಗಳಿಂದ ಗಣಿಗಳಿಂದ ಎತ್ತಿಕೊಳ್ಳಲಾಗುತ್ತದೆ. ನಮ್ಮ ಸೌಂದರ್ಯವನ್ನು ಹೆಚ್ಚಿಸಲು.
ಈಗ ನೀನು ಹೇಳು. ನನ್ನ ಮುಖದ ಮೇಲೆ ನಾನು ಮೇಕಪ್ ಅನ್ನು ಹೇಗೆ ಮಾಡಿಕೊಳ್ಳಲಿ? ಹಸಿವಿನಿಂದ ಸಾವಿಗೀಡಾದ ನನ್ನ ಸಹೋದರರ ನೆನಪಿಗಾಗಿ ನಾನು ಹೇಗೆ ಹೊಟ್ಟೆ ತುಂಬ ತಿನ್ನಲಿ? ಸದಾ ಹರಿದ ಬಟ್ಟೆ ತೊಡುತಿದ್ದ ಅಮ್ಮನ ನೆನಪಿಗಾಗಿ ದುಬಾರಿ ಬೆಲೆಯ ರೇಷ್ಮೆ ಬಟ್ಟೆ ತೊಡುವುದು ಹೇಗೆ?
ಒಂದು ಸಣ್ಣ ನಗುವನ್ನು ತುಂಬಿಕೊಂಡು ಬಾಯಿ ತೆರೆಯದೆ ತಲೆಯೆತ್ತಿ ಆಕೆ ಹೊರನಡೆಯುತ್ತಿದ್ದಂತೆ ಇಡೀ ಸಭಿಕರೇ ತಿಳಿಯದಂತೆ ಎದ್ದು ನಿಂತರು. ಅವರ ಮುಖದ ಮೇಕಪ್ ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಬಿಸಿ ಕಣ್ಣೀರಿನಲ್ಲಿ ನೆನೆಯಲು ಪ್ರಾರಂಭಿಸಿತು.
ಜಾರ್ಖಂಡ್‌ನಲ್ಲಿ ಇನ್ನೂ ಅತ್ಯುನ್ನತ ಗುಣಮಟ್ಟದ ಮೈಕಾವನ್ನು ಗಣಿಗಾರಿಕೆ ಮಾಡಲಾಗುತ್ತದೆ. 20,000 ಕ್ಕೂ ಹೆಚ್ಚು ಚಿಕ್ಕ ಮಕ್ಕಳು ಶಾಲೆಗೆ ಹೋಗದೆ ಅಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಭೂಕುಸಿತದಿಂದ ಮತ್ತು ಕೆಲವರು ರೋಗದಿಂದ ಹೂತುಹೋಗಿದ್ದಾರೆ.
(ಮಲಯಾಳಂನಿಂದ ಅನುವಾದಿಸಲಾಗಿದೆ…)
***
ಈ ಫೋಸ್ಟ್‌ಅನ್ನ ವ್ಯಾಪಕವಾಗಿ ಹಂಚಿಕೊಂಡಿರುವುದನ್ನು ನೋಡಲು ‘ಇಲ್ಲಿ ಕ್ಲಿಕ್’ ಮಾಡಿ.
ಇದನ್ನು ಹಲವಾರು ಮಾಧ್ಯಮಗಳು ಸಹ ಸುದ್ದಿ ಮಾಡಿವೆ. ಅವುಗಳನ್ನು ಈ ಕೆಳಗೆ ನೋಡಬಹುದು.
https://dailynewscatcher.com/rani-soyamoyi-ias/
https://mymorningtea.in/rani-soyamoyi-ias/
ಫ್ಯಾಕ್ಟ್‌ಚೆಕ್: ಮಲಪ್ಪುರಂ ಜಿಲ್ಲಾಧಿಕಾರಿಗಳ ವಿವರಗಳನ್ನು ಗೂಗಲ್‌ನಲ್ಲಿ ಹುಡಿಕಿದಾಗ ಆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿಗಳ ಪಟ್ಟಿಗಳಲ್ಲಿ ರಾಣಿ ಸೋಯಮೋಯ್ ಎಂಬ ಹೆಸರಿನ ಜಿಲ್ಲಾಧಿಕಾರಿ ಸಿಗಲಿಲ್ಲ. ಅಂತಹ ಅಧಿಕಾರಿಯ ಬಗ್ಗೆ ಯಾವುದೇ ದಾಖಲೆಯೂ ಸಿಕ್ಕಿಲ್ಲ. ಈ ಕುರಿತು ಫ್ಯಾಕ್ಟ್ಲಿ, ಏನ್‌ಸುದ್ದಿ ಡಾಟ್‌ಕಾಮ್, ನ್ಯೂಸ್ ಮೀಟರ್ ವೆಬ್‌ಸೈಟ್‌ಗಳು ಫ್ಯಾಕ್ಟ್‌ಚೆಕ್ ಮಾಡಿವೆ.
ಇನ್ನಷ್ಟು ಹುಡುಕಿದಾಗ ಇದು ಒಂದು ಕಾಲ್ಪನಿಕ ಕಥೆಯಾಗಿದ್ದು, ಹಕೀಮ್ ಮೊರೆ ಬರೆದ ಮಲಯಾಳಂ ಸಣ್ಣ ಕಥೆಗಳ ಸಂಕಲನದಲ್ಲಿ ಈ ಭಾಗವಿರುವುದು ತಿಳಿದುಬಂದಿದೆ. ಆದರೆ 2020ರಿಂದಲೂ ಈ ಭಾಗವನ್ನು ನೈಜ ಘಟನೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
‘ನ್ಯೂಸ್‌ಮೀಟರ್’ ವೆಬ್‌ಸೈಟ್ ಈ ಬರಹದ ಕಥಾ ಸಂಕಲನದ ಭಾಗವನ್ನು ಹುಡುಕಿದೆ. ಈ ಕಥೆಯನ್ನು ಹಕೀಮ್ ಮೊರೆಯೂರು ಬರೆದಿದ್ದು “ಹೊಳೆಯುವ ಮುಖಗಳು” ಎಂದು ಕಥೆಗೆ ಹೆಸರಿಡಲಾಗಿದೆ. ಮೊರೆಯೂರು ಮಲಪ್ಪುರಂ ಮೂಲದವರಾಗಿದ್ದು, “ರಾಣಿ ಸೋಯಮೋಯ್ ಎಂಬ ನೈಜ ವೈಕ್ತಿ ಇಲ್ಲ, ನನ್ನ ಕಥೆಯಲ್ಲಿ ಬರುವ ಕಾಲ್ಪನಿಕ ಪಾತ್ರವಾಗಿದೆ” ಎಂದು ಅವರು ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಕೀಂ ಮೊರೆಯೂರ್ ಫೇಸ್‌ಬುಕ್‌ನಲ್ಲಿ ಈ ರೀತಿಯ ಸ್ಪಷ್ಟನೆ ನೀಡಿದ್ದು, “ಮೂರು ಹೆಂಗಸರು- ಎಂಬ ನನ್ನ ಕಥಾ ಸಂಕಲನದಿಂದ ಈ ಭಾಗವನ್ನು ಆಯ್ದುಕೊಂಡು ಅನೇಕ ಜನರು ಹಂಚಿಕೊಂಡಿದ್ದಾರೆ. ಕೆಲವು ಮಹಿಳೆಯರ ಚಿತ್ರಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಅದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಎಂದು ನನಗೆ ತಿಳಿದಿದೆ. ಇದು ಕೇವಲ ಕಾಲ್ಪನಿಕ ಕಥೆಯಾಗಿದೆ. ರಾಣಿ ಸೋಯಮೋಯ್ ಎಂಬ ನನ್ನ ಕಥಾ ನಾಯಕಿ ನಿಜವಾದ ವ್ಯಕ್ತಿ ಎಂದು ಅನೇಕ ಜನರು ಭಾವಿಸುತ್ತಾರೆ. ಈ ವಿಷಯದಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗೆ ನಾನು ಜವಾಬ್ದಾರನಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಈಗ ವೈರಲ್ ಆಗುತ್ತಿರುವ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಳಸಲಾದಂತಹ ಫೋಟೊ ಐಎಎಸ್ ಅಧಿಕಾರಿ ಶೈನಾಮೋಲ್ ಅವರದ್ದಾಗಿದೆ. ಅವರ ಫೋಟೊವನ್ನು ಶೈನಾಮೋಲ್ ಅವರ ಫೇಸ್ ಬುಕ್ ಪೇಜ್ ನಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಹೇಳಲಾಗುತ್ತಿರುವ ರಾಣಿ ಸೋಯಮೊಯ್ ಎಂಬವರು ನೈಜ ವ್ಯಕ್ತಿಯಲ್ಲ. ಸೋಯಮೊಯ್ ಎಂಬವರು ಮೈಕಾ ಗಣಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಹಾದಿಯು ಕಾಲ್ಪನಿಕವಾಗಿದೆ. ಆ ಫೋಟೊ ಮತ್ತು ಆ ಕಥೆಗೆ ಯಾವುದೇ ಸಂಬಂಧವಿಲ್ಲ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್ ಕಾರ್ಡ್’!
🙏🏼🙏🏼🙏🏼