Homeಕರ್ನಾಟಕಗಂಗಾವತಿ: ಹೆರಿಗೆ ಮಾಡುವುದಕ್ಕೆ ಲಂಚ, ಲೈಂಗಿಕ ಕಿರುಕುಳದ ಆರೋಪ; ಕನಿಷ್ಟ ತನಿಖೆಯಾದರೂ ಇಲ್ಲವೇಕೆ?

ಗಂಗಾವತಿ: ಹೆರಿಗೆ ಮಾಡುವುದಕ್ಕೆ ಲಂಚ, ಲೈಂಗಿಕ ಕಿರುಕುಳದ ಆರೋಪ; ಕನಿಷ್ಟ ತನಿಖೆಯಾದರೂ ಇಲ್ಲವೇಕೆ?

- Advertisement -
- Advertisement -

ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿ, ಜಾರಿಗೊಳಿಸಲು ಮುಂದಾಗಿದೆ. ಜನರು ಇದರ ಅನುಕೂಲ ಪಡೆಯುತ್ತಿದ್ದಂತೆ ಕೆಲವರು ಅದನ್ನು ಬಿಟ್ಟಿ ಭಾಗ್ಯ, ಜನ ಸೋಮಾರಿಯಾಗುತ್ತಾರೆ ಎಂದು ಕುಹಕವಾಡುತ್ತಿದ್ದಾರೆ. ಆದರೆ ಅವರು ಕಡೆಗಣಿಸುವ ವಿಚಾರವೆಂದರೆ ಯಾವುದೇ ಬಡ ಅಥವಾ ಮಧ್ಯಮ ವರ್ಗದ ಕುಟುಂಬದ ಸದಸ್ಯರೊಬ್ಬರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಆ ಕುಟುಂಬ ಜೀವಮಾನ ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆಂಬುದು. ಕೆಲವರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಜೀವ ಉಳಿಸಿಕೊಳ್ಳಬೇಕಾದ ಸ್ಥಿತಿ ಇದೆ. ಗಂಭೀರ ಸ್ಥಿತಿಗಳಲ್ಲಿ ಹಣಕಾಸಿನ ಸಮಸ್ಯೆ ಎಂದು ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ವಾಪಸ್ ಬದುಕಿ ಬರುವ ಭರವಸೆಯೇ ಇಲ್ಲ ಎಂಬ ಪರಿಸ್ಥಿತಿಯೂ ಹಲವೆಡೆಯಿದೆ. ಆದರೂ ಬಡವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದಾರೆ. ಅಂತಹ ಸರ್ಕಾರಿ ಆಸ್ಪತ್ರೆಗಳಲ್ಲಿಯೂ 8-10 ಸಾವಿರ ಲಂಚ ಕೇಳುತ್ತಾರೆ ಎಂದರೆ ಬಡವರು ಎಲ್ಲಿಂದ ಹಣ ತರಬೇಕು?

ರಾಮನಗರ ಜಿಲ್ಲೆಯ ಬಿಡದಿ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಡಿಸ್ಚಾರ್ಜ್‌ಗಾಗಿ 6 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ವೈದ್ಯರಾದ ಶಶಿಕಲಾ, ಐಶ್ವರ್ಯ ಎಂಬುವವರು ಸಸ್ಪೆಂಡ್ ಆಗಿದ್ದರು. ಲಿಂಗಸಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ 5 ಸಾವಿರ ಲಂಚ ಕೇಳಿದ್ದ ನರ್ಸ್‌ಗಳು ಅಮಾನತ್ತಾಗಿದ್ದರು. ’ತಾಯಿ ಕಾರ್ಡ್’ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಕಾರಣ ತುಮಕೂರಿನಲ್ಲಿ ತಾಯಿ-ಮಗು ಸಾವನ್ನಪ್ಪಿದ ಕಾರಣ ವೈದ್ಯರನ್ನು ಸಸ್ಪೆಂಡ್ ಮಾಡಿದ್ದು ವರದಿಯಾಗಿದೆ. ಆದರೆ ಗಂಗಾವತಿ ತಾಲ್ಲೂಕು ವೈದ್ಯಾಧಿಕಾರಿ ಮತ್ತು ಕೊಪ್ಪಳ ಜಿಲ್ಲಾ ಸರ್ಜನ್ ಇನ್‌ಚಾರ್ಜ್ ಕೂಡ ಆಗಿರುವ ಡಾ. ಈಶ್ವರ ಸವಡಿಯವರು ’ಪ್ರತಿ ಹೆರಿಗೆಗೆ 8-10 ಸಾವಿರ ಲಂಚ ಕೇಳುತ್ತಾರೆ; ರೋಗಿಗಳಿಗೆ ನೀಡುವ ಹಾಲು, ಬ್ರೆಡ್ ಎಲ್ಲಾ ಸೇರಿದಂತೆ ಆಸ್ಪತ್ರೆಯ ಅವಶ್ಯಕ ವಸ್ತುಗಳ ಗುತ್ತಿಗೆ ನೀಡಲು ಕಮಿಷನ್ ಪಡೆಯುತ್ತಿದ್ದಾರೆ; ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ ಬರಬೇಕೆಂಬ ನಿಯಮವಿದ್ದರೂ 15 ದಿನಕ್ಕೊಮ್ಮೆ ಮಾತ್ರ ಬರುತ್ತಾರೆ; ಖಾಸಗಿ ಕ್ಲಿನಿಕ್ ನಡೆಸುತ್ತಾ ಕಾನೂನುಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್ ಮಾಡಿ ಭ್ರೂಣ ಹತ್ಯೆ ಮಾಡುತ್ತಿದ್ದಾರೆ; ಗಂಗಾವತಿ ಸರ್ಕಾರಿ ಆಸ್ಪತ್ರೆಯ 8 ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ’ ಹೀಗೆ ಸಾಲು ಸಾಲು ಆರೋಪಗಳು ಅವರ ಮೇಲಿವೆ. ಹೀಗಿದ್ದರೂ ಅವರನ್ನು ಸಸ್ಪೆಂಡ್ ಮಾಡುವುದು ಇರಲಿ ಕನಿಷ್ಟ ಒಂದು ಇಲಾಖಾ ತನಿಖೆ ಸಹ ನಡೆಸಲಾಗಿಲ್ಲ ಎಂದರೆ ಅವರು ಎಷ್ಟು ಪ್ರಭಾವಶಾಲಿಯಾಗಿರಬಹುದು ನೀವೇ ಊಹಿಸಿ.

8 ಮಹಿಳಾ ಉದ್ಯೋಗಿಗಳಿಂದ ಲೈಂಗಿಕ ಕಿರುಕುಳದ ಆರೋಪ

’ಗಂಗಾವತಿ ತಾಲ್ಲೂಕು ಆಸ್ಪತ್ರೆಯ ಮಹಿಳಾ ಉದ್ಯೋಗಿ ನಾಗಮ್ಮ ಎಂಬುವವರು 31.07.2021ರಲ್ಲಿ, ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿಯಿಂದಾಗುತ್ತಿರುವ ನಿರಂತರ ಲೈಂಗಿಕ ಕಿರುಕುಳದ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳು, ಡಿಎಚ್‌ಓ, ಶಾಸಕರು, ಮಹಿಳಾ ಆಯೋಗ ಸೇರಿ ಹಲವರಿಗೆ ಎರಡನೇ ಪತ್ರ ಬರೆದಿದ್ದರು. 2019ರಿಂದಲೇ ಆತ ಕಿರುಕುಳ ನೀಡುತ್ತಿದ್ದು, ಸಹಕರಿಸದಿದ್ದರೆ ಹೆಚ್ಚಿನ ಕೆಲಸದ ಒತ್ತಡ ಹಾಕುವುದು, ಬೆದರಿಕೆ ಹಾಕುವುದು ಮಾಡುತ್ತಿದ್ದಾನೆ ಎಂದು ದೂರಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆನಂತರ ಒಂದು ವರ್ಷದ ನಂತರ 20.07.2022ರಂದು 8 ಮಹಿಳಾ ಸಿಬ್ಬಂದಿಗಳು ಡಾ.ಈಶ್ವರ ಸವಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದರು. ಪ್ರಕರಣ ಅಷ್ಟು ಗಂಭೀರವಾಗಿದ್ದರೂ ಸಹ ಜಿಲ್ಲಾಧಿಕಾರಿಗಳು, ಡಿಎಚ್‌ಓ ಸೇರಿದಂತೆ ಇತರರು ತನಿಖೆ ನಡೆಸಿ ಕಾನೂನುಕ್ರಮ ಕೈಗೊಳ್ಳಿ ಎಂದು ಪತ್ರ ಬರೆದರೆ ವಿನಃ ಸವಡಿ ವಿರುದ್ಧ ಕ್ರಮ ಕೈಗೊಳ್ಳಲು ಯಾರೂ ಮುಂದಾಗಲಿಲ್ಲ. ಏಕೆಂದರೆ ಭಾರೀ ಹಣವಂತರಾದ ಡಾ.ಈಶ್ವರ ಸವಡಿ ಸಾಕಷ್ಟು ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ’ ಎನ್ನುತ್ತಾರೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಎಚ್ ಪೂಜಾರ್‌ರವರು.

ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಶರಣಗೌಡ ಕೇಸರಹಟ್ಟಿ, ಭೀಮ್ ಆರ್ಮಿ ಕೊಪ್ಪಳದ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ, ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್ ಸೇರಿದಂತೆ ಹಲವು ಹೋರಾಟಗಾರರು ಆರೋಗ್ಯ ಇಲಾಖೆ, ಜಿಲ್ಲಾಧಿಕಾರಿಗಳು, ಲೋಕಾಯುಕ್ತ ಸೇರಿದಂತೆ ಹಲವೆಡೆ ಈಶ್ವರ ಸವಡಿಯವರ ವಿರುದ್ಧ ಸಾಲು ಸಾಲು ದೂರು ನೀಡಿದ್ದಾರೆ. ಇಲ್ಲಿಯೂ ಸಹ ಆಯಾಯ ಇಲಾಖೆಗಳು ಕ್ರಮ ತೆಗೆದುಕೊಳ್ಳುವಂತೆ ಪತ್ರ ಬರೆದಿವೆಯೇ ಹೊರತು ಆರೋಪಿಯನ್ನು ಕರೆಸಿ ಮಾತನಾಡಿಸುವ ಗೋಜಿಗೂ ಹೋಗಿಲ್ಲ.

ಲಂಚ ಕೊಡದಿದ್ದರೆ ಹೆರಿಗೆ ಮಾಡಿಸುವುದಿಲ್ಲ!

ಕಳೆದ ಮೇ 9ರಂದು ಕುಷ್ಟಗಿ ತಾಲ್ಲೂಕಿನ ತಾವರಗೇರ ಊರಿನ ಹುಲಗಪ್ಪ ಬೊಮ್ಮನಹಳ್ಳಿ ಎಂಬುವವರು ತಮ್ಮ ಪತ್ನಿ ತುಂಬು ಗರ್ಭಿಣಿ ರೇಣುಕಮ್ಮಳನ್ನು ಹೆರಿಗೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿವಿಧ ಪರೀಕ್ಷೆ ನಡೆಸಿದ ಡಾ. ಈಶ್ವರ ಸವಡಿ, “ನಿನ್ನ ಹೆಂಡತಿಗೆ ಆಪರೇಷನ್ ಮೂಲಕ ಹೆರಿಗೆ ಮಾಡಬೇಕು. ಅದಕ್ಕೆ 15 ರಿಂದ 30 ಸಾವಿರ ಖರ್ಚಾಗುತ್ತದೆ” ಎಂದು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ’ನಮ್ಮಲ್ಲಿ ಹಣವಿಲ್ಲ, ನಾವು ಬಡವರು’ ಎಂದರೆ “ಕನಿಷ್ಠ 10 ಸಾವಿರ ಆದ್ರೂ ಕೊಟ್ಟರೆ ಮಾತ್ರ ಆಪರೇಷನ್ ಮಾಡುವೆ” ಎಂದು ಹೇಳಿ ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ. ಅಂತಹ ಸಂಕಷ್ಟದ ಸಮಯದಲ್ಲಿ ರಾತ್ರಿ 8 ಗಂಟೆ ಸಮಯದಲ್ಲಿ ಅನಿವಾರ್ಯವಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೆರಿಗೆ ಮಾಡಿಸಬೇಕಾಯಿತು. ತಡವಾದ್ದರಿಂದ ಮಗು ಮತ್ತು ತಾಯಿ ಆರೋಗ್ಯದಲ್ಲಿ ವ್ಯತ್ಯಯವಾಯಿತು. ಇದಕ್ಕೆ ಈಶ್ವರ ಸವಡಿಯವರೇ ಕಾರಣ ಎಂದು 18.05.2023ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.

ಎಂದಿನಂತೆ ಕೊಪ್ಪಳ ಜಿಲ್ಲಾಧಿಕಾರಿಗಳು 23.05.2023ರಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕಾಟಾಚಾರಕ್ಕೆಂಬಂತೆ ಪತ್ರ ಬರೆದು ಡಾ.ಈಶ್ವರ ಸವಡಿಯವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ. ಆದರೆ ತನಿಖೆ ಮಾಡುವ ಧೈರ್ಯವಿಲ್ಲದ ಡಿಎಚ್‌ಓ ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ಆಕ್ರೋಶಿತರಾದ ಜಿಲ್ಲೆಯ ಜನಪರ ಸಂಘಟನೆಯ ಮುಖಂಡರು ಸೀದಾ ಬೆಂಗಳೂರಿಗೆ ಬಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್‌ರವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ’5 ವರ್ಷಗಳಿಂದ ಜನರು ಈ ಒಬ್ಬ ವ್ಯಕ್ತಿಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ, ನೀವಾದರೂ ಆತನ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಂಡು ನ್ಯಾಯ ಕೊಡಿ’ ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಖಾತೆ ಮಾಡಿಕೊಡಲು 1 ಕೋಟಿ ಲಂಚ: ಪ್ರಶ್ನಿಸಿ RTI ಅರ್ಜಿ ಹಾಕಿದ ಹೋರಾಟಗಾರರಿಗೆ ಜೀವ ಬೆದರಿಕೆ ಆರೋಪ

ಈ ಕುರಿತು ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿದ ಗಂಗಾವತಿಯ ಹೋರಾಟಗಾರರಾದ ಜೆ.ಭಾರಧ್ವಾಜ್‌ರವರು “ತಾಲ್ಲೂಕು ವೈದ್ಯಾಧಿಕಾರಿ ಈಶ್ವರ ಸವಡಿಯ ವಿರುದ್ಧ ಹತ್ತಾರು ಆರೋಪಗಳು ಪದೇಪದೇ ಕೇಳಿಬರುತ್ತಿವೆ. ಬಿಜೆಪಿಯ ಪ್ರಭಾವಿ ರಾಜಕಾರಣಿಗಳ ಸಖ್ಯದಿಂದ ಅವರು ತಮ್ಮ ಮೇಲೆ ಯಾವುದೇ ಕ್ರಮ ಜರುಗಿಸದಂತೆ ನೋಡಿಕೊಂಡಿದ್ದರು. ಈಗ ಸರ್ಕಾರ ಬದಲಾಗುತ್ತಲೇ ಕಾಂಗ್ರೆಸ್ ರಾಜಕಾರಣಿಗಳ ಸಖ್ಯ ಬೆಳೆಸಿಕೊಳ್ಳಲು ಮುಂದಾಗಿದ್ದಾರೆಯೇ ಹೊರತು ತಮ್ಮ ಅಕ್ರಮಗಳನ್ನು ನಿಲ್ಲಿಸಿಲ್ಲ. ಈ ಸರ್ಕಾರವಾದರೂ ಆತನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದರು.

ಡಿ.ಎಚ್ ಪೂಜಾರ್‌ರವರು ಮಾತನಾಡಿ, “ಕೊಪ್ಪಳ ಜಿಲ್ಲೆಯಲ್ಲಿ ಆತನ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಧೈರ್ಯ ಯಾರಿಗೂ ಇಲ್ಲ. ಆರೋಗ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗಳು ಮಾತ್ರ ಆ ಕೆಲಸ ಮಾಡಬಲ್ಲರು. ಅವರೊಂದಿಗೆ ವಿವರವಾಗಿ ಚರ್ಚಿಸಿ ಎಲ್ಲಾ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅವರು ನಮಗೆ ನ್ಯಾಯ ಕೊಡಿಸುತ್ತಾರೆಂಬ ವಿಶ್ವಾಸವಿದೆ. ಇಲ್ಲದಿದ್ದರೆ ಹೋರಾಟವೇ ನಮ್ಮ ಹಾದಿಯಾಗಲಿದೆ” ಎಂದರು.

ಆರೋಪಗಳಲ್ಲಿ ಯಾವುದೇ ಹುರಳಿಲ್ಲ – ಡಾ.ಈಶ್ವರ ಸವಡಿ

ತಮ್ಮ ಮೇಲಿರುವ ಆರೋಪಗಳ ಕುರಿತು ಮಾತನಾಡಿದ ಡಾ.ಈಶ್ವರ ಸವಡಿಯವರು, “ನನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳು ಸುಳ್ಳು. ಕುಷ್ಟಗಿಯವರಿಗೆ ಕೊಪ್ಪಳ ಹತ್ತಿರವಾಗುತ್ತದೆ. ಅವರೇಕೆ ಗಂಗಾವತಿ ಆಸ್ಪತ್ರೆಗೆ ಬರುತ್ತಾರೆ? ಅವರು ನಮ್ಮ ಆಸ್ಪತ್ರೆಗೆ ಬಾರದೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇನ್ನು ಲೈಂಗಿಕ ಕಿರುಕುಳದ ಆರೋಪಕ್ಕೆ ತನಿಖೆ ನಡೆದಿದ್ದು, ಮೆಹಬೂಬ ಪಾಷ ಎಂಬುವವರು ಸುಳ್ಳು ದೂರು ಬರೆದುಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ನನಗೆ ಕ್ಲಿನ್ ಚಿಟ್ ನೀಡಲಾಗಿದೆ” ಎಂದರು.

ಇದೊಂದೇ ತಾಲ್ಲೂಕಿನ ಸಮಸ್ಯೆಯಲ್ಲ

ಗಂಗಾವತಿ ತಾಲ್ಲೂಕಿನಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ರಾಜ್ಯದ ಹಲವು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಪರಿಸ್ಥಿತಿ ಇದೇ ಆಗಿದೆ. ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಬಂದರೂ ಕೆಲವರು ಸಹಿ ಮಾಡಿ ತಮ್ಮತಮ್ಮ ಖಾಸಗೀ ಕ್ಲಿನಿಕ್‌ಗಳಿಗೆ ಹೊರಟುಹೋಗುತ್ತಾರೆ. ಖಾಸಗಿ ಪ್ರಾಕ್ಟಿಸ್ ಮಾಡುತ್ತಿಲ್ಲವೆಂದು ಸರ್ಕಾರದಿಂದ ಭತ್ಯೆ ಬೇರೆ ಪಡೆಯುತ್ತಾರೆ. ಆಸ್ಪತ್ರೆಯಲ್ಲಿ ಇರುವ ಒಬ್ಬರು ಇಬ್ಬರು ವೈದ್ಯರು ಸಹ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವುದಿಲ್ಲ. ತಮ್ಮದೇ ಖಾಸಗಿ ಕ್ಲಿನಿಕ್‌ಗೆ ಬನ್ನಿ ಎನ್ನುತ್ತಾರೆ. ಪ್ರಶ್ನಿಸಿದರೆ ಕೇಸ್ ಹಾಕುತ್ತೇವೆಂದು ಬೆದರಿಸುತ್ತಾರೆ. ಲಂಚದ ಬಗ್ಗೆಯಂತೂ ಹೇಳುವುದೇ ಬೇಡ. ಇವೆಲ್ಲದರ ನಡುವೆಯ ಕೆಲ ವೈದ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಒಟ್ಟಾರೆ ಸರ್ಕಾರಿ ಆರೋಗ್ಯ ವ್ಯವಸ್ಥೆಯೂ ದುಸ್ಥಿತಿಯಲ್ಲಿದೆ. ತಮಗೆ ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತೆ ವೈದ್ಯರು ಮತ್ತು ಸಿಬ್ಬಂದಿ ವರ್ತಿಸುತ್ತಿದ್ದಾರೆ.

ಇದೆಲ್ಲಕ್ಕೂ ಒಂದು ಸಣ್ಣ ಪರಿಹಾರದ ರೂಪದಲ್ಲಿ 2016ರಲ್ಲಿ ರಮೇಶ್ ಕುಮಾರ್‌ರವರು ಆರೋಗ್ಯ ಸಚಿವರಾಗಿದ್ದಾಗ ಕೆಪಿಎಂಇ ಕಾಯ್ದೆ ತರುವ ಚರ್ಚೆ ಮಾಡಿದ್ದರು. ಆದರೆ ವೈದ್ಯರು ಆ ಕಾಯ್ದೆಯ ಮೇಲೆ ಮುಗಿಬಿದ್ದ ಕಾರಣ ಸರ್ಕಾರ ಅದನ್ನು ಜಾರಿಗೊಳಿಸಲಿಲ್ಲ. ಯಾವುದೇ ಸಮರ್ಪಕ ಕ್ರಮ ತೆಗೆದುಕೊಳ್ಳದ ಪರಿಣಾಮ ಇಂದು ಆರೋಗ್ಯವೆಂಬುದು ಬಡವರು ಮತ್ತು ಮಧ್ಯಮ ವರ್ಗದ ಕೈಗೆಟುಕದ ದುಬಾರಿ ಸೇವೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ನೂತನ ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್‌ರವರ ಮೇಲೆ ಅಪಾರ ನಿರೀಕ್ಷೆಗಳಿವೆ. ಅವರಾದರೂ ಖಾಸಗಿ ಆರೋಗ್ಯ ಲಾಬಿಗೆ ಮಣಿಯದೇ ತುಕ್ಕು ಹಿಡಿಯುತ್ತಿರುವ ಸರ್ಕಾರಿ ಆರೋಗ್ಯ ವ್ಯವಸ್ಥೆಗೆ ನಿಜವಾದ ಅರ್ಥದಲ್ಲಿ ಕಾಯಕಲ್ಪ ನೀಡಬೇಕಾಗಿದೆ. ಅದು ಸರ್ಕಾರ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳಷ್ಟೇ ಪ್ರಾಮುಖ್ಯತೆ ಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...