Homeಕರ್ನಾಟಕನಾಲ್ಕೂ ಹತ್ಯೆಗಳನ್ನು ಬೆಸೆಯುತ್ತಿರುವ ಕೊಂಡಿ ಒಂದಿದೆ!

ನಾಲ್ಕೂ ಹತ್ಯೆಗಳನ್ನು ಬೆಸೆಯುತ್ತಿರುವ ಕೊಂಡಿ ಒಂದಿದೆ!

- Advertisement -
- Advertisement -

ಗೌರಿ ಲಂಕೇಶರನ್ನು ಕೊಂದ ತಂಡವೇ ಅದಕ್ಕೂ ಮೊದಲು ಮೂರು ಜನ ಬರಹಗಾರರು-ವೈಚಾರಿಕರನ್ನು – ನರೇಂದ್ರ ದಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲ್ಬುರ್ಗಿ – ಕೊಂದಿತ್ತು ಎಂಬುದು ಈಗ ಹಲವು ತನಿಖೆಗಳಿಂದ ಸಾಬೀತಾಗಿದೆ. ಗೌರಿ ಪ್ರಕರಣದಲ್ಲಿ ಕರ್ನಾಟಕದ ತನಿಖಾದಳ ನಡೆಸಿದ ತನಿಖೆಯೇ ಮಹಾರಾಷ್ಟ್ರದ ಎರಡು ಕೊಲೆಗಳ ತನಿಖೆಯಲ್ಲೂ ಲೀಡ್ ನೀಡಿದ್ದು, ಹಲವು ಬಂಧನಗಳಿಗೆ ಎಡೆ ಮಾಡಿಕೊಟ್ಟಿದ್ದು ಮತ್ತು ತಪ್ಪುದಾರಿ ಹಿಡಿದಿದ್ದ ಅಲ್ಲಿನ ತನಿಖೆಗಳನ್ನು ಸರಿದಾರಿಗೆ ತಂದದ್ದು ಸುಮಾರು ಒಂದು ವರ್ಷ ಹಳೆಯ ಸುದ್ದಿ.

ಎಲ್ಲಕ್ಕಿಂತಲೂ ಅತ್ಯಂತ ಗೋಜಲು ತನಿಖೆ ಆಗಿರುವುದು ದಭೋಲ್ಕರ್ ಅವರ ಪ್ರಕರಣದಲ್ಲಿ. ಸಿಬಿಐ ದಭೊಲ್ಕರ್ ಅವರನ್ನು ಸಾರಂಗ ಅಕೋಳ್ಕರ್ ಮತ್ತು ವಿನಯ ಪವಾರ್ ಎಂಬಿಬ್ಬರು ಸನಾತನ ಸಂಸ್ಥೆಯ ಸಾಧಕರು ಗುಂಡಿಟ್ಟರು, ಅವರಿಗೆ ಪುಣೆಯ ವೈದ್ಯ ಸನಾತನ ಸಾಧಕ ಡಾ. ವೀರೇಂದ್ರ ತಾವ್ಡೆ ನೇತೃತ್ವ ವಹಿಸಿದ್ದ ಎಂದು ಆರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಡಾ. ತಾವ್ಡೆ ಮಾತ್ರ ಬಂಧಿಸಲಾಗಿತ್ತು. ಆದರೆ ಗೌರಿ ಕೊಲೆ ತನಿಖೆ ಇದನ್ನು ತಲೆಕೆಳಗು ಮಾಡಿತು. ಗೌರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶರದ ಕಲಸ್ಕರ್‍ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಆತ ನರೇಂದ್ರ ದಭೋಲ್ಕರ್ ಅವರಿಗೆ ಔರಂಗಾಬಾದ್‍ನ ಸಚಿನ್ ಅಂದುರೆಯ ಒಡಗೂಡಿ ಗುಂಡಿಟ್ಟಿದ್ದಾಗಿ ಹೇಳಿದ. ಅಲ್ಲಿಗೆ ದಭೋಲ್ಕರ್ ಪ್ರಕರಣದ ಆರೋಪಪಟ್ಟಿಯೇ ತಲೆಕೆಳಗಾಯಿತು. ಶರದ್ ಕಲಸ್ಕರ್ ಮತ್ತು ಸೂರ್ಯವಂಶಿ ಎಂಬ ಮೆಕಾನಿಕ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಈ ಗುಂಪಿನ ರೂಪುರೇಖೆಗಳನ್ನು ಬೆಳಕಿಗೆ ಹಿಡಿಯುತ್ತವೆ. ಶರದ್ ಕಲಸ್ಕರ್ ಪಿಸ್ತೂಲುಗಳ ಜವಾಬ್ದಾರಿ ವಹಿಸಿದ್ದರೆ, ಸೂರ್ಯವಂಶಿ ಕೃತ್ಯಕ್ಕೆ ಅಗತ್ಯ ಬೇಕಾದ ಬೈಕುಗಳನ್ನು ಕಳ್ಳತನ ಮಾಡಿಕೊಡುವ ಜವಾಬ್ದಾರಿ ಹೊತ್ತಿದ್ದ. ನಾಲ್ಕೂ ಕೊಲೆಗಳಲ್ಲಿ ಇವರೀರ್ವರೂ ಈ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮೊದಲಿಗೆ 2013ರಲ್ಲಿ ನಡೆದ ದಭೋಲ್ಕರ್ ಅವರ ಕೊಲೆಯಲ್ಲಿ ಕಲಸ್ಕರ್ ಒಂದು ಹೆಜ್ಜೆ ಮುಂದೆ ಹೋಗಿ ಶೂಟರ್ ಸಹ ಆಗಿದ್ದ. ಆತ ಅತ್ಯಂತ ಚಿತ್ರವತ್ತಾಗಿ ವರ್ಣಿಸುತ್ತಾನೆ. ತಾನು ಬೈಕ್ ಚಾಲಕನಾಗಿದ್ದು, ಹಿಂದೆ ಕೂತಿದ್ದ ಸಚಿನ್ ಅಂದುರೆ ಇಳಿದು ದಭೋಲ್ಕರ್ ಅವರತ್ತ ಗುಂಡು ಹೊಡೆಯುತ್ತಾನೆ, ಅವರು ಕುಸಿದು ಬೀಳುತ್ತಾರೆ. ಆದರೆ ಛಾನ್ಸ್ ತೆಗೆದುಕೊಳ್ಳುವುದು ಬೇಡ ಎಂದು ಕಲಸ್ಕರ್ ಸಹ ಕುಸಿದು ಬಿದ್ದ ಅವರತ್ತ ಗುಂಡು ತೂರುತ್ತಾನೆ – ಅವರ ಕಣ್ಣಿನ ಮೇಲ್ಭಾಗದ ಹಣೆಗೆ ಮತ್ತು ಎದೆಗೆ. ನಂತರ ಇಬ್ಬರೂ ಪರಾರಿಯಾಗುತ್ತಾರೆ. ಇದೇ ಆಧಾರದಲ್ಲಿ ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಕಲ್ಬುರ್ಗಿ ಅವರ ಕುಟುಂಬವು ಸುಪ್ರೀಂಕೋರ್ಟ್‍ನಲ್ಲಿ ತನಿಖೆಯ ಪ್ರಗತಿಯ ಬಗ್ಗೆ ಅಸಮಾಧಾನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಾಲ್ಕೂ ಕೊಲೆಗಳನ್ನೂ ಒಂದೇ ತಂಡ ಮಾಡಿದ್ದರೆ, ಎಲ್ಲ ಪ್ರಕರಣಗಳ ತನಿಖೆ ಒಟ್ಟು ಮಾಡಿ ಕೇಂದ್ರದ ಏಜೆನ್ಸಿಯೊಂದು ನಡೆಸಬೇಕಲ್ಲವೇ, ಏಕೆ ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬಾರದೆಂದು ಕೋರ್ಟ್ ಪ್ರಶ್ನಿಸಿತ್ತು.

ಗೌರಿ ಹತ್ಯೆಯ ಆರೋಪಪಟ್ಟಿ ಈ ಕೊಲೆಗಡುಕರ ತಂಡ ರಚನೆಯಾದುದರ ಬಗ್ಗೆ ಕೂಲಂಕಷವಾಗಿ ದಾಖಲಿಸುತ್ತದೆ. ಈ ಹಿಂದೆ ಸನಾತನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಕಾರ್ಯಕರ್ತರು ಈ ಸಂಘಟನೆಗಳನ್ನು ತೊರೆದು, ಅವರಂತೆಯೇ ಉಗ್ರ ಹಿಂದುತ್ವ ಮತ್ತು ಅದಕ್ಕಾಗಿ ಹಿಂಸೆಗೆ ತಯಾರಿರುವ ಕೆಲವರನ್ನು ಒಟ್ಟುಗೂಡಿಸಿ ಒಂದು ಸಭೆ ನಡೆಸುತ್ತಾರೆ, 2011ರಲ್ಲಿ. ಈ ಸಭೆ ಮತ್ತು ಇಡೀ ತಂಡದ ನೇತೃತ್ವ ವಹಿಸಿದ್ದವನು ಪುಣೆಯ ಡಾ. ವೀರೇಂದ್ರ ತಾವ್ಡೆ. ಈ ಸಭೆಯಲ್ಲಿ ಭಾಗಿಯಾಗಿದ್ದ ಇತರೆ ಪ್ರಮುಖರು ಅಮೋಲ ಕಾಳೆ, ಅಮಿತ್ ದೇಗ್ವೇಕರ್, ಶರದ್ ಕಲಸ್ಕರ್, ಸಚಿನ್ ಅಂದುರೆ ಮತ್ತಿತರರು. ಇವರೆಲ್ಲರೂ ಈಗ ಬಂಧಿತರು. ಈ ಗೂಂಪಿಗೆ ಸೈದ್ಧಾಂತಿಕ ತಳಹದಿ ಹಾಕಲು, ಇವರನ್ನು ಮೋಟಿವೇಟ್ ಮಾಡಲು ಈ ಸಭೆಯಲ್ಲಿ ಛೋಟೆ ಮಹಾತ್ಮಾ, ಬಡೆ ಮಹಾತ್ಮಾ ಮತ್ತು ಬಾಬಾಜಿ ಎಂಬ ಮೂವರು ಹಿರಿಯರು ಸಹ ಪಾಲ್ಗೊಳ್ಳುತ್ತಾರೆ. ಇವರನ್ನು ಈಗ 2007ರ ಅಜ್ಮೇರ್ ದರ್ಗ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸುರೇಶ ನಾಯರ್, ರಾಮಜಿ ಕಲಸಂಗ್ರಾ ಮತ್ತು ಸಂದೀಪ್ ಡಾಂಗೆ ಎಂದು ಗುರುತಿಸಲಾಗಿದೆ.

ಈ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಸನಾತನ ಸಂಸ್ಥೆಯ ಸ್ಥಾಪಕರಾದ ಡಾ. ಜಯಂತ ಬಾಲಾಜಿ ಅಥಾವಳೆ ಅವರು ರಚಿಸಿದ ಕ್ಷತ್ರಧರ್ಮ ಸಾಧನಾ ಎಂಬ ಕೃತಿಯ ಆಶಯದಂತೆ, ಹಿಂದೂ ರಾಷ್ಟ್ರ ನಿರ್ಮಿಸಲು ಅಡ್ಡಿಯಾಗಿರುವ “ದುರ್ಜನರನ್ನು” ಕೊಲ್ಲುತ್ತಾ ಸಾಗಬೇಕು ಎಂದು ತೀರ್ಮಾನಿಸಲಾಯಿತು. ಯಾರು ದುರ್ಜನರು? ಕ್ಷತ್ರಧರ್ಮ ಸಾಧನಾ ಪುಸ್ತಕವು ಹೀಗೆ ದುರ್ಜನರನ್ನು ಪಟ್ಟಿಮಾಡುತ್ತದೆ: ಮೊದಲಿಗೆ ನಾಸ್ತಿಕರು, ಎರಡನೆಯದು ಇತರೆ ಧರ್ಮೀಯರು, ಮೂರು ಹಿಂದೂಗಳಾಗಿದ್ದೂ ಹಿಂದೂ ಧರ್ಮ ವಿರೋಧಿಗಳು. ಇವರಲ್ಲಿ ಮೂರನೆಯ ಬಗೆ ಹಿಂದೂರಾಷ್ಟ್ರ ಸ್ಥಾಪನೆಗೆ ಅತಿ ಅಪಾಯಕಾರಿ ಎಂದು ಇವರನ್ನು ಕೊಲ್ಲುತ್ತಾ ಸಾಗುವ ನಿರ್ಣಯ ಆಗುತ್ತದೆ. ಈ ಸರಣಿಯ ಮೊದಲ ಕೊಲೆಯೆ ನರೇಂದ್ರ ದಭೋಲ್ಕರ್ ಅವರದು. ಈ ಕೊಲೆ ಮಾಡಿದ್ದು ತಾನು ಮತ್ತು ಸಚಿನ್ ಅಂದುರೆ ಎಂದು ಕಲಸ್ಕರ್ ಒಪ್ಪಿಕೊಂಡಿರುವುದು. ಇದಾದನಂತರ ಗೋವಿಂದ ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಕೊಲೆಗಳು ನಡೆದವು. ಕಲ್ಬುರ್ಗಿ ಅವರ ಕೊಲೆಯವರೆಗೂ ಈ ತಂಡದ ನಾಯಕತ್ವ ವಹಿಸಿದ್ದವನು ಡಾ. ತಾವ್ಡೆ. ಆದರೆ ಜೂನ್ 2016ರಲ್ಲಿ ದಭೋಲ್ಕರ್ ಹತ್ಯೆಯ ತನಿಖೆ ನಡೆಸುತ್ತಿದ್ದ ಸಿಬಿಐ ಡಾ. ತಾವ್ಡೆಯನ್ನು ಬಂಧಿಸುತ್ತದೆ. ಆದರೆ ಆತನನ್ನು ಎಷ್ಟೇ ತನಿಖೆಗೊಳಪಡಿಸಿದರೂ ಆತನ ಸಹಚರರ ಬಗ್ಗೆ ಒಂದಿನಿತೂ ಮಾಹಿತಿ ದೊರೆಯುವುದಿಲ್ಲ. ಈ ಮಧ್ಯೆ ಈ ತಂಡದ ನೇತೃತ್ವ ವಹಿಸಿದ್ದ ಅಮೋಲ್ ಕಾಳೆಗೆ ಜೊತೆಯಾದವನು ಅಮಿತ್ ದೇಗ್ವೇಕರ್. ಪಿಸ್ತೂಲಿನ ನಿರ್ವಹಣೆ ಎಂದಿನಂತೆ ಶರದ್ ಕಲಸ್ಕರ್. 2015ರ ಕಲ್ಬುರ್ಗಿ ಕೊಲೆಯ ನಂತರ ಕಲಸ್ಕರ್ ಬೆಳಗಾವಿಗೇ ಶಿಫ್ಟ್ ಆಗಿದ್ದ, ಅಲ್ಲಿ ತಾನೇ ಸ್ವತಃ ನಾಡಪಿಸ್ತೂಲನ್ನು ತಯಾರಿಸುವ ಪ್ರಯತ್ನ ಸಹ ನಡೆಸಿದ್ದ. ಅಮೋಲ ಕಾಲೆಯ ನೇತೃತ್ವದ ಗುಂಪು ಗೌರಿಯ ಕೊಲೆ ಮಾಡಿತಲ್ಲದೆ ಪ್ರೊ. ಭಗವಾನ್ ಅವರ ಕೊಲೆಗೆ ಸಂಚು ರೂಪಿಸಿತ್ತು.

ಇದಲ್ಲದೆ ನಾಲ್ಕೂ ಕೊಲೆಗಳನ್ನು ಹಣೆಯುವುದು ಹತ್ಯೆಗೆ ಬಳಸಿದ ಬಂದೂಕು. ಒಂದು ಪಿಸ್ತೂಲು ನಾಲ್ಕೂ ಕೊಲೆಗಳಲ್ಲಿ ಬಳಕೆಯಾಗಿದೆ. ದಭೊಲ್ಕರ್ ಮತ್ತು ಪನ್ಸಾರೆ ಕೊಲೆಗಳಲ್ಲಿ ಎರಡು ಪಿಸ್ತೂಲುಗಳನ್ನು ಬಳಸಲಾಗಿದ್ದು, ಎರಡನೆಯ ಪಿಸ್ತೂಲು ಎರಡೂ ಕೊಲೆಗಳಲ್ಲಿ ಬಳಕೆಯಾಗಿದೆ. ಅಲ್ಲಿಗೆ ಈ ನಾಲ್ಕೂ ಕೊಲೆಗಳನ್ನು ಈ ಎರಡು ಪಿಸ್ತೂಲುಗಳನ್ನು ಹೊಂದಿದ್ದವರೇ ಮಾಡಿದ್ದಾರೆ ಎಂಬುದು ಸ್ಪಷ್ಟ. ಈಗ ಸಿಬಿಐ, ಕರ್ನಾಟಕ ಮತ್ತು ಮಹಾರಾಷ್ಟ್ರ ಪೋಲೀಸರು ಬೆನ್ನು ಬಿದ್ದಿರುವುದು ಈ ಎರಡು ಪಿಸ್ತೂಲುಗಳನ್ನು ಪತ್ತೆ ಮಾಡಲು. ಒಂದೊಮ್ಮೆ ಈ ಪಿಸ್ತೂಲುಗಳನ್ನು ಪತ್ತೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯವು ಈ ಪಿಸ್ತೂಲುಗಳಿಂದಲೇ ಈ ನಾಲ್ವರನ್ನೂ ಕೊಂದ ಗುಂಡುಗಳು ಹಾರಿದವು ಎಂದು ವರದಿ ನೀಡಿದರೆ ಕೇಸು ಬಿಗಿಯಾಗುತ್ತವೆ. ಈ ಪಿಸ್ತೂಲುಗಳು ಈಗ ಎಲ್ಲಿವೆ?

ಅದನ್ನೂ ಶರದ್ ಕಲಸ್ಕರನೇ ಹೇಳಿದ್ದಾನೆ. ಮೇ-ಜೂನ್ 2018ರಲ್ಲಿ ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೇಕರ್ ಬಂಧನವಾಗುತ್ತಿದ್ದಂತೆ, ಉಳಿದವರು ಆತಂಕಕ್ಕೀಡಾಗುತ್ತಾರೆ, ವಿಶೇಷವಾಗಿ ಪಿಸ್ತೂಲುಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಕಲಸ್ಕರ್. ಹೀಗಿರಲು ಹಿಂದೂ ಜನಜಾಗೃತಿ ಸಮಿತಿಯ ಅಂಗ ಸಂಸ್ಥೆಯೇ ಆದ ಹಿಂದೂ ವಿಧಿಧಿನ್ಯ ಪರಿಷದ್‍ನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಈ ನಾಲ್ಕೂ ಕೊಲೆ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳ ಅಡ್ವೋಕೇಟ್ ಆಗಿದ್ದ ಸಂಜೀವ ಪುಣಲೇಕರ್ ತನ್ನನ್ನು ಆತನ ಕಛೇರಿಗೆ ಕರೆದು ಹತ್ಯೆಗಳಿಗೆ ಬಳಸಿದ ಪಿಸ್ತೂಲುಗಳನ್ನು ನಾಶಪಡಿಸಲು ಆದೇಶಿಸಿದ್ದಾಗಿ ಕಲಸ್ಕರ್ ಹೇಳಿಕೆ ನೀಡಿದ್ದಾನೆ. ಇದರಂತೆ ಪ್ರಕರಣದ ಮತ್ತೊಬ್ಬ ಆರೋಪಿ ವೈಭವ ರಾವತ್‍ನ ಒಡಗೂಡಿ ಜುಲೈ 23, 2018ರಂದು ರಾತ್ರಿ ಸುಮಾರು 9:30 ಗಂಟೆಗೆ ಮುಂಬೈ ಬಳಿಯ ಉಲ್ಹಾಸ್ ನದಿಯ ವಾಸೈಕ್ರೀಕ್‍ಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲಿಂದ ಐದು ಪಿಸ್ತೂಲುಗಳನ್ನು ಬಿಡಿಭಾಗಗಳಾಗಿ ಬೇರ್ಪಡಿಸಿ ಎಸೆದುದಾಗಿ ಹೇಳಿಕೆ ನೀಡಿದ್ದಾನೆ. ಈ ಐದು ಪಿಸ್ತೂಲುಗಳಲ್ಲಿ ಹತ್ಯೆಗಳಿಗೆ ಬಳಸಲಾದ ಎರಡು ಪಿಸ್ತೂಲುಗಳೂ ಸೇರಿವೆ.

ಈ ಘಟನೆ ನಡೆದು ಸುಮಾರು ಒಂದು ವರ್ಷ ಸಂದಿದೆ. ಆದರೆ ಏಜೆನ್ಸಿಗಳಿಗೆ ಈಗಲೂ ಪಿಸ್ತೂಲುಗಳ ಈ ಬಿಡಿ ಭಾಗಗಳು ಈ ಕ್ರೀಕ್‍ನ ತಳದಲ್ಲಿ ಹುದುಗಿರಬಹುದೆಂಬ ಆಶಾವಾದ. ಮಧ್ಯಪ್ರಾಚ್ಯ ಮೂಲದ ಕಂಪೆನಿಯೊಂದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ನದಿಯ ತಳವನ್ನು ಕೆದಕಿ, ಪಿಸ್ತೂಲಿನ ಬಿಡಿ ಭಾಗಗಳಿದ್ದರೆ ಹೆಕ್ಕಿ ಕೊಡುವುದಾಗಿ ಹೇಳಿದ್ದು ಈ ಕಂಪೆನಿಗೆ ಈ ರೀತಿ ಪಿಸ್ತೂಲನ್ನು ಸಮುದ್ರದಿಂದಲೂ ಹೆಕ್ಕಿ ತಂದ ಇತಿಹಾಸವಿದೆ. ಪಿಸ್ತೂಲುಗಳು ಕಬ್ಬಿಣದಿಂದ ಮಾಡಿರುವುದರಿಂದ ಅವು ಭಾರವಾಗಿದ್ದು, ನೀರಿನಲ್ಲಿ ಕೊಚ್ಚಿಹೋಗದೆ ನದಿಯ ತಳದಲ್ಲಿ ಹೋಗಿ ನಿಧಾನಕ್ಕೆ ಹುದುಗಿಹೋಗಿರಬಹುದೆಂಬುದು ಅಂದಾಜು. ಈ ಕಂಪೆನಿಯು ಸೇತುವೆಯ ಬಳಿಯಿಂದ ಒಂದು ಸುತ್ತಳತೆಯನ್ನು ಸರ್ಚ್ ಏರಿಯಾ ಎಂದು ಗುರುತಿಸಿಕೊಂಡು ತಂತ್ರಜ್ಞಾನದ ಸಹಾಯದಿಂದ ಈ ಭಾಗದ ನದಿತಳದ 100 ಅಡಿ ಆಳದವರೆಗೂ ಒಂದು ಪ್ರೊಫೈಲ್ ಅನ್ನು ಸೃಷ್ಟಿಸಿ, ಅನುಮಾನ ಬಂದ ಜಾಗೆಯಲ್ಲಿ ಹೂಳೆತ್ತುವಂತೆ ನದಿತಳವನ್ನು ಬಗೆದು ದಡದ ಮೇಲೆ ಹಾಕಿ ಈ ಭಾಗಗಳಿಗಾಗಿ ತಡಕಾಡುತ್ತದೆ. ಈ ಇಡೀ ಪ್ರಕ್ರಿಯೆಗೆ ಒಂದು ಕೋಟಿಗೂ ಹೆಚ್ಚು ವ್ಯಯವಾಗುವ ನಿರೀಕ್ಷೆ ಇದೆ. ಈ ಖರ್ಚನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಭರಿಸಲು ಒಪ್ಪಿಕೊಂಡಿವೆ. ಈ ಕೆಲಸ ಬಹುಶಃ ಈ ತಿಂಗಳಾಂತ್ಯದ ವೇಳೆಗೆ ಶುರುವಾಗಲಿದೆ. ಪಿಸ್ತೂಲಿನ ಈ ಬಿಡಿ ಭಾಗಗಳು ದೊರೆತರೆ ಈ ನಾಲ್ಕು ಕೊಲೆ ಪ್ರಕರಣಗಳ ಬಂಧ ಇನ್ನೂ ಬಿಗಿಯಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...