Homeಕರ್ನಾಟಕಬ್ರಿಟಿಷರಿಗೆ ನೆಹರೂ ಕ್ಷಮಾಪಣಾ ಪತ್ರ ಬರೆದಿದ್ದರೆ?: ಅಜಿತ್‌ ಹನುಮಕ್ಕನವರ್‌‌ ಹೇಳಿದ ಹಸಿಹಸಿ ಸುಳ್ಳು

ಬ್ರಿಟಿಷರಿಗೆ ನೆಹರೂ ಕ್ಷಮಾಪಣಾ ಪತ್ರ ಬರೆದಿದ್ದರೆ?: ಅಜಿತ್‌ ಹನುಮಕ್ಕನವರ್‌‌ ಹೇಳಿದ ಹಸಿಹಸಿ ಸುಳ್ಳು

“ನಾಭಾ ಜೈಲು ಸೇರಿದ ನೆಹರೂ ಕ್ಷಮಾಪಣಾ ಬರೆದು 14 ದಿನಗಳಲ್ಲೇ ಹೊರಗೆ ಬಂದಿದ್ದರು” ಎಂದು ಅಜಿತ್‌ ಹೇಳಿರುವುದಕ್ಕೆ ಯಾವುದೇ ಆಧಾರವಿಲ್ಲ

- Advertisement -
- Advertisement -

ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದ ವಿ.ಡಿ.ಸಾವರ್ಕರ್ ಆಗಾಗ್ಗೆ ಟೀಕೆಗೆ ಒಳಗಾಗುತ್ತಾರೆ. ‘ಬ್ರಿಟಿಷರಿಗೆ ಸತತವಾಗಿ ಕ್ಷಮಾಪಣಾ ಪತ್ರಗಳನ್ನು ಬರೆದ ವ್ಯಕ್ತಿಯನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವುದು ಸರಿಯಲ್ಲ’ ಎಂಬ ಚರ್ಚೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾದವು. “ಮಹಾತ್ಮ ಗಾಂಧೀಜಿಯವರ ಸಲಹೆಯನ್ನು ಪಡೆದು ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದರು” ಎಂಬ ಸುಳ್ಳನ್ನು ಸಂಘಪರಿವಾರ ತೇಲಿಬಿಟ್ಟಿತ್ತು. ಇದಾದ ನಂತರ ನೆಹರೂ ಅವರ ಹೆಸರನ್ನು ‘ಕ್ಷಮಾಪಣಾ’ ರಾಜಕೀಯಕ್ಕೆ ಎಳೆದುತರಲಾಗಿದೆ.

“ನಾಭಾ ಜೈಲಿಗೆ ಸೇರಿದ ನೆಹರೂ ಅವರು ಕ್ಷಮಾಪಣಾ ಪತ್ರವನ್ನು ಬರೆದು ಹದಿನಾಲ್ಕನೇ ದಿನಕ್ಕೇ ಜೈಲಿನಿಂದ ಹೊರಬಂದರು” ಎಂಬ ವಿಚಾರವನ್ನು ತೇಲಿಬಿಡಲಾಗಿದೆ. ಸುವರ್ಣ ಟಿ.ವಿ.ಯ ನಿರೂಪಕ ಅಜಿತ್ ಹನುಮಕ್ಕನವರ್‌ ಇತ್ತೀಚೆಗೆ ಸಂವಾದವೊಂದರಲ್ಲಿ ಆಡಿದ ಮಾತುಗಳು ಇದೇ ರೀತಿಯಲ್ಲಿ ಇದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹ ಅವರಿಗಿಂತಲೂ ಒಂದು ಪಟ್ಟು ಹೆಚ್ಚು ಎಂಬಂತೆ ಸಾವರ್ಕರ್‌ ಪರ ಮಾತನಾಡಿದ್ದ ಅಜಿತ್‌, “ನಾಭಾ ಜೈಲಿಗೆ ಜವಹರಲಾಲ್‌ ನೆಹರೂ ಅವರನ್ನು ಹಾಕಿರುತ್ತಾರೆ. ಅವರ ತಂದೆ ಮೋತಿಲಾಲ್ ನೆಹರೂ ಅವರಿಗೆ ಮೂರು ದಿನಗಳ ನಂತರ ಗೊತ್ತಾಗುತ್ತದೆ. ನೇರವಾಗಿ ಭಾರತದ ವೈಸರಾಯ್‌ಗೆ ಕರೆ ಮಾಡಿದ ಮೋತಿಲಾಲ್‌‌, ತನ್ನ ಮಗನ ಬಗ್ಗೆ ವಿಚಾರಿಸಿದರು. ನಾಭಾ ಜೈಲಿನಲ್ಲಿ ನೆಹರೂ ಇರುವುದನ್ನು ತಿಳಿದುಕೊಂಡರು. ನೆಹರೂ ಅವರಿದ್ದ ಕೊಠಡಿ 12*25 ಇತ್ತಂತೆ. ಬ್ರಿಟಿಷರು ಭಾರತದಲ್ಲಿ ಇರುವಷ್ಟು ದಿನ ನಾನು ನಾಭಾ ಜೈಲಿನ ಕಡೆ ನಾನು ಬರುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟು ಹದಿನಾಲ್ಕನೇ ದಿನಕ್ಕೆ ನೆಹರೂ ಹೊರಗೆ ಬರುತ್ತಾರೆ” ಎನ್ನುತ್ತಾರೆ. ಹೊಸ ವಿಷಯವನ್ನು ಕೇಳಿದ ಕಾಂಗ್ರೆಸ್ ಕಾರ್ಯಕರ್ತ ಗೊಂದಲಕ್ಕೆ ಒಳಗಾಗುವುದನ್ನು ಈ ವಿಡಿಯೊದಲ್ಲಿ ನೋಡಬಹುದು.

ಪತ್ರಕರ್ತ ಅಜಿತ್ ಹನುಮಕ್ಕನವರ್‌‌ ಈ ರೀತಿ ಮಾತನಾಡಿರುವ ವಿಡಿಯೊ ತುಣುಕನ್ನು ಕಳೆದೆರಡು ತಿಂಗಳಿಂದ ಬಿಜೆಪಿ ಬೆಂಬಲಿಗರು, ಸಂಘಪರಿವಾರವನ್ನು ಬೆಂಬಲಿಸುವ ನಕಲಿ ಫೇಸ್‌ಬುಕ್‌ ಖಾತೆದಾರರು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸಾವರ್ಕರ್‌ ಕ್ಷಮಾಪಣಾ ಪತ್ರದ ಸಂಗತಿಯನ್ನು ಯಾರಾದರೂ ಪ್ರಸ್ತಾಪಿಸಿದ ಕೂಡಲೇ ನೆಹರೂ ಅವರೂ ಕ್ಷಮೆ ಕೇಳಿದ್ದರು ಎಂಬ ವಾದವನ್ನು ಮಂಡಿಸಲಾಗುತ್ತಿದೆ. (ಸೆಪ್ಟೆಂಬರ್‌ 9ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ವಿಡಿಯೊ ತುಣುಕನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ.)

“ಜವಾಹರಲಾಲ್ ನೆಹರೂ ಅವರು ಜೈಲಿನಿಂದ ಹೊರಬರಲು ಬ್ರಿಟಿಷ್ ಆಡಳಿತದ ಮುಂದೆ ತಮ್ಮದೇ ಆದ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ನಿಮಗೆ ತಿಳಿದಿದೆಯೇ?” ಎಂದು ವಾದಿಸುವ ಪೋಸ್ಟ್‌ಗಳ ಮೂಲ ಯಾವುದು ಎಂಬುದನ್ನು ಗಮನಿಸಬೇಕು. 1923ರಲ್ಲಿ ಪಂಜಾಬ್‌ನ ಆಗಿನ ರಾಜಪ್ರಭುತ್ವದ ನಾಭಾದಲ್ಲಿ ನೆಹರೂ ಅವರು ಜೈಲಿನಲ್ಲಿ ಇದ್ದದ್ದನ್ನು ಇಲ್ಲಿ ಉಲ್ಲೇಖಿಸಲಾಗುತ್ತಿದೆ.

ಈಗ ಈ ಘಟನೆಯ ಬಗ್ಗೆ ಸರಿಯಾಗಿ ತಿಳಿಯಲು ಯಾವುದೇ ರಹಸ್ಯ ದಾಖಲೆಗಳನ್ನು ಉತ್ಖನನ ಮಾಡಬೇಕಿಲ್ಲ ಅಥವಾ ಕೆಲವು ರಹಸ್ಯ ‘ದಾಖಲೆ’ಗಳನ್ನು ಸಂಶೋಧಿಸಬೇಕಿಲ್ಲ. ಇದನ್ನು ನೆಹರೂ ಅವರ ಆತ್ಮಚರಿತ್ರೆಯಲ್ಲಿ, ನೆಹರೂ ಅವರ ಕುರಿತ ಜೀವನ ಚರಿತ್ರೆಗಳಲ್ಲಿ ಕಾಣಬಹುದು ಎಂದು ‘ರೆಡಿಫ್‌.ಕಾಂ’ (rediff.com) ಮಾಡಿದ ವರದಿ ಚರ್ಚಿಸುತ್ತದೆ. ರಾಜಕೀಯ ಬರಹಗಾರ ಉತ್ಕರ್ಷ್ ಮಿಶ್ರಾ ಅವರು ಬರೆದಿರುವ ವರದಿಯು ಅನೇಕ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿದೆ.

ಉತ್ಕರ್ಷ್ ಮಿಶ್ರಾ ಬರಹದಿಂದ ಆಯ್ದ ಅಂಶಗಳು

ಇಲ್ಲಿ ಉಲ್ಲೇಖಿಸಿರುವ ಘಟನೆಯು 1923ರಲ್ಲಿ ನಡೆದಿದೆ. ‘ಗುರುದ್ವಾರಗಳ ನಿಯಂತ್ರಣ ಮತ್ತು ಕಾರ್ಯಾಚರಣೆ’ಯಲ್ಲಿ ಮೂಲಭೂತ ಸುಧಾರಣೆಗಳನ್ನು ತರಲು ಯತ್ನಿಸುತ್ತಿದ್ದ ಬ್ರಿಟಿಷ್ ಸರ್ಕಾರದ ವಿರುದ್ಧ ಪಂಜಾಬ್‌ನಲ್ಲಿ ‘ಅಕಾಲಿ ಚಳವಳಿ’ ಆ ಸಮಯದಲ್ಲಿ ತೀವ್ರವಾಗಿತ್ತು.

ನೆಹರೂ ಅವರ ಜೀವನಚರಿತ್ರೆಕಾರ ಮೈಕೆಲ್ ಬ್ರೆಚರ್ ಅಂದಿನ ಪರಿಸ್ಥಿತಿಯನ್ನು ಈ ಕೆಳಗಿನಂತೆ ವಿವರಿಸುತ್ತಾರೆ: “…ಪಟಿಯಾಲದ ಮಹಾರಾಜರ ಜೊತೆಗಿನ ದೀರ್ಘಕಾಲದ ಜಗಳದ ನಂತರ ಬ್ರಿಟಿಷರ ಒತ್ತಡದಿಂದಾಗಿ ನಾಭದ ಮಹಾರಾಜರು 1923ರ ಮಧ್ಯದಲ್ಲಿ ಅಧಿಕಾರ ತ್ಯಜಿಸುತ್ತಾರೆ. ಅಕಾಲಿಗಳು ಇದರಿಂದ ಸಿಟ್ಟಿಗೆದ್ದರು. ಅಧಿಕಾರ ಕಳೆದುಕೊಂಡ ರಾಜನನ್ನು ಮತ್ತೆ ಸಿಂಹಾಸನದಲ್ಲಿ ಕೂರಿಸಲು ಹೋರಾಟವನ್ನು ಪ್ರಾರಂಭಿಸಿದರು. ನಾಭಾದ ರಾಜಧಾನಿ ಜೈತೋಗೆ ಜಾಥಾ ಹಮ್ಮಿಕೊಳ್ಳುವ ಮಟ್ಟಿಗೆ ಹೋರಾಟ ತೀವ್ರವಾಯಿತು. ಪ್ರತಿಭಟನಾ ಸಭೆಗಳನ್ನು ನಡೆಸಲಾಯಿತು.”

“ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡುವುದಾಗಿ ಅಕಾಲಿಗಳು ಘೋಷಿಸಿದರು. ತಮ್ಮ ಚಳವಳಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರು” ಎಂದು ಬ್ರೆಚರ್ ಹೇಳುತ್ತಾರೆ.

ನೆಹರೂ ಅವರ ಕುರಿತು ಬರೆದಿರುವ ಮತ್ತೊಬ್ಬ ಜೀವನ ಚರಿತ್ರಾಕಾರರಾದ ಸರ್ವಪಲ್ಲಿ ಗೋಪಾಲ್, “… ಗಾಂಧಿಯವರ ಅಸಹಕಾರ ಚಳವಳಿಯ ನಾಯಕತ್ವದಿಂದ ಪ್ರಭಾವಿತರಾದ ಸಿಖ್ಖರು ಅಹಿಂಸಾ ಪ್ರತಿಜ್ಞೆ ಮಾಡಿದರು. ತೀವ್ರ ಪ್ರಚೋದನೆಯ ಹೊರತಾಗಿಯೂ ಅವರು ತಮ್ಮ ವಾಗ್ದಾನವನ್ನು ಅನುಸರಿಸಿದರು” ಎನ್ನುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ನೆಹರೂ ಅವರನ್ನು ಜೈತೋಗೆ ಬರುವಂತೆ ಆಹ್ವಾನಿಸಲಾಯಿತು. ಅದನ್ನು ನೆಹರೂ ಸಂತೋಷದಿಂದ ಒಪ್ಪಿಕೊಂಡರು. ಅವರೊಂದಿಗೆ ಕಾಂಗ್ರೆಸ್ ಮುಖಂಡರಾದ ಎ.ಟಿ.ಗಿದ್ವಾನಿ ಮತ್ತು ಕೆ.ಸಂತಾನಂ ಹಾಜರಿದ್ದರು.

ನೆಹರೂ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಹೇಳುತ್ತಾರೆ: “ಜೈತೋಗೆ ಆಗಮಿಸಿದ ನಂತರ, ಜಾಥಾವನ್ನು ಪೊಲೀಸರು ತಡೆದರು. ಆಂಗ್ಲ ಅಧಿಕಾರಿಗಳು ಸಹಿ ಹಾಕಿದ್ದ ಆದೇಶವನ್ನು ತಕ್ಷಣವೇ ನನಗೆ ನೀಡಲಾಯಿತು. ನಾಭಾ ಪ್ರದೇಶವನ್ನು ಪ್ರವೇಶಿಸದಂತೆ ಮತ್ತು ನಾನು ಈಗಾಗಲೇ ಪ್ರವೇಶಿಸಿದ್ದರೆ ತಕ್ಷಣ ಅಲ್ಲಿಂದ ವಾಪಸ್‌‌ ಹೊರಡುವಂತೆ ಸೂಚಿಸಲಾಗಿತ್ತು.”

ಈ ಜನನಾಯಕರು ಸರ್ಕಾರಿ ಆದೇಶವನ್ನು ಅನುಸರಿಸಲು ನಿರಾಕರಿಸಿದಾಗ, ಅವರನ್ನು ತಕ್ಷಣವೇ ಬಂಧಿಸಿ, ಜೈಲಿಗೆ ಕರೆದೊಯ್ಯಲಾಯಿತು. ನಾಭಾ ಜೈಲಿನ ಸ್ಥಿತಿಯು ಭೀಕರವಾಗಿತ್ತು ಎಂದು ಹೇಳಲು ಗೃಹ ಇಲಾಖೆಯ ಅಂದಿನ ವಿಶೇಷ ಆಯುಕ್ತರ ಟಿಪ್ಪಣಿಯನ್ನು ಗೋಪಾಲ್ ಉಲ್ಲೇಖಿಸುತ್ತಾರೆ.

ನೆಹರೂ ತಮ್ಮ ಆತ್ಮಕಥೆಯಲ್ಲಿ ತಾವು ಮತ್ತು ತಮ್ಮ ಜೊತೆಗಾರರು ಎದುರಿಸಿದ ವಿಚಾರಣೆಯನ್ನು ವಿವರಿಸಿದ್ದಾರೆ. “ನಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಬೇಕೆಂದು ನಾವು ಬಯಸಿದಲ್ಲಿ ವಿಷಾದ ವ್ಯಕ್ತಪಡಿಸಿ ನಾಭಾದಿಂದ ದೂರವಿರುವಂತಹ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾಪವನ್ನು ನೀಡಲಾಗಿತ್ತು” ಎಂದು ಅವರು ಹೇಳುತ್ತಾರೆ.

ಈ ಪ್ರಸ್ತಾಪವನ್ನು ನಿರಾಕರಿಸಿದ ನೆಹರೂ ಅವರು “ಆಡಳಿತಕಾರರೇ ನಮ್ಮಲ್ಲಿ ಕ್ಷಮೆಯಾಚಿಸಬೇಕು” ಎಂದಿದ್ದರು.

ವಿಚಾರಣೆಯ ಸ್ವರೂಪ ಮತ್ತು ಅದು ತನ್ನ ಮಗನಿಗೆ ಉಂಟುಮಾಡುವ ತೊಂದರೆಯನ್ನು ಕಂಡು ಮೋತಿಲಾಲ್ ನೆಹರೂ ಅಸಮಾಧಾನಗೊಂಡರು. ಅವರು ನಾಭಕ್ಕೆ ಹೊರಟು ಜವಹರಲಾಲ್‌ರನ್ನು ನೋಡುವುದಾಗಿ ವೈಸರಾಯರಿಗೆ ಪತ್ರ ಬರೆದರು. ನಾಭಾ ಆಡಳಿತ ವರ್ಗ ಮೋತಿಲಾಲ್‌ ಅವರಿಗೆ ಅನುಮತಿ ನೀಡಲು ನಿರಾಕರಿಸಿತು. ಆದರೆ ಭಾರತ ಸರ್ಕಾರವು, “ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಜವಾಹರಲಾಲ್ ನೆಹರೂ ಅವರನ್ನು ಭೇಟಿಯಾದ ತಕ್ಷಣ ರಾಜ್ಯವನ್ನು ತೊರೆಯುವುದಾಗಿ ಮೋತಿಲಾಲ್ ಅವರು ಭರವಸೆ ನೀಡಿದ ನಂತರವೇ ನಾಭಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು” ಎಂದು ಆದೇಶಿಸಿತು.

ಈ ಕುರಿತು ಗೋಪಾಲ್ ಹೀಗೆ ಬರೆಯುತ್ತಾರೆ: “ಮೋತಿಲಾಲ್ ಸ್ವಾಭಾವಿಕವಾಗಿ ಅಂತಹ ಯಾವುದೇ ಒಪ್ಪಂದಗಳನ್ನು ನೀಡಲು ನಿರಾಕರಿಸಿದರು. ಜವಾಹರಲಾಲ್ ಅವರನ್ನು ಭೇಟಿಯಾಗದೆ … [ರಾಜ್ಯವನ್ನು ತೊರೆದರು]”.

ಆದಾಗ್ಯೂ ಸರ್ಕಾರವು ನಂತರ ಷರತ್ತುಗಳನ್ನು ಭಾಗಶಃ ಮಾರ್ಪಡಿಸಿತು. ವಿಚಾರಣೆಯ ಮುಕ್ತಾಯದ ತನಕ ಮೋತಿಲಾಲ್ ಅವರಿಗೆ ಅವಕಾಶ ನೀಡಿತು. ಗೋಪಾಲ್ ಅವರ ಪ್ರಕಾರ, “ಇನ್ನೂ ಹೆಚ್ಚಿನ ಬೇಡಿಕೆಯಿತ್ತು, ಆದರೆ ಮೋತಿಲಾಲ್ ಅವರ ಆತಂಕ ತೀವ್ರವಾಗಿತ್ತು … ಅವರು ಈ ನಿರ್ಬಂಧಗಳನ್ನು ಪಾಲಿಸಲು ಒಪ್ಪಿಕೊಂಡರು ಮತ್ತು ನಾಭಕ್ಕೆ ಮರಳಿದರು”.

ಮೋತಿಲಾಲರ ಭೇಟಿ ಮಗನಿಗೆ ಇಷ್ಟವಾಗಲಿಲ್ಲ. ತನ್ನ ತಂದೆಯ ಮಧ್ಯ ಪ್ರವೇಶದಿಂದಾಗಿ ನೆಹರೂ ಅವರಿಗೆ ಕಿರಿಕಿರಿ ಉಂಟಾಯಿತು ಎಂದು ಗೋಪಾಲ್ ಬರೆಯುತ್ತಾರೆ.

“ಅಲಹಾಬಾದ್‌ಗೆ ಹಿಂತಿರುಗಬೇಕು. ನನ್ನ ಬಗ್ಗೆ ಚಿಂತಿಸಬಾರದು” ಎಂದು ನೆಹರೂ ಅವರು ಬೇಡಿಕೊಂಡರೆಂದು ಆತ್ಮಚರಿತ್ರೆ ಹೇಳುತ್ತದೆ. ಮೋತಿಲಾಲ್ ಇದನ್ನು ಪಾಲಿಸಿದರು. ಆದರೆ ತುಂಬಾ ಅಸಮಾಧಾನಗೊಂಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ನೆಹರೂ ಮತ್ತು ಅವರ ಇಬ್ಬರು ಕಾಂಗ್ರೆಸ್ ನಾಯಕರಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಅದೇ ಸಂಜೆ ಶಿಕ್ಷೆಯನ್ನು ಅಮಾನತುಗೊಳಿಸಲಾಯಿತು. ಮೂವರನ್ನು ನಾಭಾದಿಂದ ಹೊರಹಾಕಲಾಯಿತು. “ನಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ಬಿಡುಗಡೆ ಮಾಡಲಾಯಿತು” ಎಂದು ನೆಹರೂ ಬರೆಯುತ್ತಾರೆ.

ಈ ಘಟನೆಯನ್ನು ಆಧರಿಸಿ ಪಿತೂರಿ ಸಿದ್ಧಾಂತವನ್ನು ರಚಿಸಲಾಗಿದೆ ಎಂದು ಉತ್ಕರ್ಷ್ ಅಭಿಪ್ರಾಯಪಡುತ್ತಾರೆ. “ಮೋತಿಲಾಲ್ ಅವರು ತಮ್ಮ ಮಗನ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೆಲವು ತಂತಿಗಳನ್ನು ಕಳಿಸಿದ್ದಾರೆ’ ಅಥವಾ ‘‘ನೆಹರೂ ನಾಭಾಕ್ಕೆ ಮತ್ತೆ ಹಿಂತಿರುಗಿ ಬರುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ” ಎಂದು ಪಿತೂರಿ ಸಿದ್ಧಾಂತ ರೂಪಿಸಲಾಗಿದೆ. ಸುಳ್ಳುಗಳನ್ನು ಹೊಸೆಯುವವರು ಈ ನಿರ್ದಿಷ್ಟ ಭಾಗವನ್ನು ತಿರುಚಲು ಬಳಸುತ್ತಾರೆ.

ನೆಹರೂ ಅವರು 1930ರ ದಶಕದ ಆರಂಭದಲ್ಲಿ, ಜೈಲಿನಲ್ಲಿರುವಾಗಲೇ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದಾರೆ ಎಂಬುದನ್ನು ಗಮನಿಸಬೇಕು. ಅವರೇ ಸ್ವತಃ ವಿವರಿಸಿದಂತೆ, “ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆದೇಶ ಅಥವಾ ತೀರ್ಪುಗಳ ಪ್ರತಿಗಳನ್ನು ಅವರಿಗೆ ಎಂದಿಗೂ ನೀಡಲಾಗಿಲ್ಲ. ಆದ್ದರಿಂದ ಈ ವಿವರಗಳ ಬಗ್ಗೆ ಖಚಿತವಾಗಿಲ್ಲ. ಆದರೆ ಶಿಕ್ಷೆಯನ್ನು ಅಮಾನತುಗೊಳಿಸುವ ಆದೇಶವು ‘ಯಾವುದೇ ಷರತ್ತುಗಳನ್ನು ಲಗತ್ತಿಸದೆ’ ಬಂದಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಹಾಗಾಗಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ರಹಸ್ಯ ಒಪ್ಪಂದಗಳೇನಾದರೂ ಆಗಿದ್ದರೆ ಸ್ವಾತಂತ್ರ್ಯ ಪೂರ್ವದಲ್ಲೇ ಬರೆದ ತಮ್ಮ ಆತ್ಮಚರಿತ್ರೆಯಲ್ಲಿ ಈ ಘಟನೆಯನ್ನು ನೆಹರೂ ಅವರೇಕೆ ಉಲ್ಲೇಖಿಸುತ್ತಿದ್ದರು? (ಅದು ರಹಸ್ಯ ಒಪ್ಪಂದದ ಉಲ್ಲಂಘಿಸಿದಂತೆ ಅಲ್ಲವೇ?)

ಶಿಕ್ಷೆಯನ್ನು ಅಮಾನತುಗೊಳಿಸಲು ಮೋತಿಲಾಲ್ ತಮ್ಮ ಪ್ರಭಾವವನ್ನು ಬಳಸಿದ್ದಾರೆ ಎಂಬ ಪ್ರತಿಪಾದನೆಯು ಕೇವಲ ಊಹೆಯಷ್ಟೇ. ಮೋತಿಲಾಲ್ ಅವರು ಅಲಹಾಬಾದ್‌ಗೆ ಹಿಂದಿರುಗಿದ ನಂತರ ಜೈಲಿನಲ್ಲಿದ್ದ ಜವಾಹರಲಾಲ್‌ಗೆ ಪತ್ರ ಬರೆಯುತ್ತಾರೆ. “ನಿನ್ನೆಯ ನನ್ನ ಭೇಟಿಯು ನಿಮಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ. ಬದಲಿಗೆ ನಿಮ್ಮ ಸಂತೋಷದ ಜೈಲು ಜೀವನದ ಅವಧಿಯನ್ನು ಕದಡಿತು ಎಂದು ತಿಳಿದು ನನಗೆ ನೋವಾಯಿತು. ದಯವಿಟ್ಟು ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನೀನು ಜೈಲಿನಲ್ಲಿ ಇರುವಂತೆಯೇ ನಾನು ಜೈಲಿನ ಹೊರಗೆ ಸಂತೋಷವಾಗಿದ್ದೇನೆ” ಎಂದಿರುತ್ತಾರೆ.

ಮೋತಿಲಾಲ್ ತನ್ನ ಮಗನಿಗೆ ಸಹಾಯ ಮಾಡಲು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಈ ಪತ್ರವು ಸ್ಪಷ್ಟವಾಗಿ ಸೂಚಿಸುತ್ತದೆ. ಎರಡನೆಯದಾಗಿ ನೆಹರೂ ಏನನ್ನೂ ಬಯಸಲಿಲ್ಲ ಎಂಬುದು ಇಲ್ಲಿ ತಿಳಿಯುತ್ತಿದೆ. ಹೀಗಾಗಿ “ಜವಾಹರಲಾಲ್‌ ನೆಹರೂ ಜೈಲಿನಿಂದ ಹೊರಬರಲು ಕ್ಷಮಾಪಣಾ ಪತ್ರವನ್ನು ಬರೆದರು, ಅವರ ತಂದೆ ಮೋತಿಲಾಲ್‌ ಅವರು ಕ್ಷಮಾಪಣೆಯನ್ನು ಸಲ್ಲಿಸಿದರು” ಎಂಬ ವಿಚಾರಕ್ಕೆ ಯಾವುದೇ ಅರ್ಥವಿಲ್ಲ.

ಇದನ್ನೂ ಓದಿರಿ: ಶಾಸಕರ ಖರೀದಿಗೆ ಯತ್ನ: ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ಗೆ ಸಮನ್ಸ್

ಆದರೆ ಶಿಕ್ಷೆಯನ್ನು ಏಕೆ ಅಮಾನತುಗೊಳಿಸಲಾಗಿದೆ?

ನಾಭಾ ಅಧಿಕಾರಿ ವಿಲ್ಸನ್ ಜಾನ್‌ಸ್ಟನ್ ಮತ್ತು ಭಾರತ ಸರ್ಕಾರದ ನಡುವಿನ ಪತ್ರವ್ಯವಹಾರದಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಇದನ್ನು ಜೀವನಚರಿತ್ರಾಕಾರ ಗೋಪಾಲ್ ಉಲ್ಲೇಖಿಸಿದ್ದಾರೆ.

ನೆಹರೂ ಅವರಿಗೆ ಶಿಕ್ಷೆಯನ್ನು ನೀಡಬೇಕೆಂದು ಜಾನ್‌ಸ್ಟನ್ ಬಯಸಿದಾಗ, “ಅಕಾಲಿಗಳಿಗೆ ಒಂದು, ಕಾಂಗ್ರೆಸ್ಸಿಗರಿಗೆ ಇನ್ನೊಂದು ಕಾನೂನು” ಎಂದು ‘ನಿಷ್ಠಾವಂತರು’ ಭಾವಿಸಬಾರದು ಎಂದು ಸರ್ಕಾರ ಚಿಂತಿಸಿತು.

ನೆಹರೂ ಅವರು ತೀರ್ಪಿನ ಪ್ರತಿಗಳನ್ನು ಮತ್ತು ಅವುಗಳನ್ನು ಪ್ರಶ್ನಿಸಲು ಆದೇಶಗಳನ್ನು ಕೇಳಿದರೂ, ಅವುಗಳನ್ನು ಎಂದಿಗೂ ಒದಗಿಸಲಿಲ್ಲ. ಏತನ್ಮಧ್ಯೆ, ನೆಹರೂ ಮತ್ತು ನಾಭಾದಲ್ಲಿನ ಅವರ ಜೈಲು ಸಹಚರರು ಟೈಫಾಯಿಡ್‌ ಅನುಭವಿಸಿದರು. ನೆಹರೂ ಅವರು ಹಿಂದಿರುಗಿದ ನಂತರ ಪ್ರಾಂತೀಯ ಕಾಂಗ್ರೆಸ್‌ನ ಅಧ್ಯಕ್ಷರಾದರು.

ಚಿಂತಕ ಶಿವಸುಂದರ್‌ ಅವರು ಈ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಸಾವರ್ಕರ್‌ ಬರೆದಿರುವ ಆರು ಪತ್ರಗಳೂ ಸಾರ್ವಜನಿಕವಾಗಿ ಲಭ್ಯವಿವೆ. ಆರ್‌ಎಸ್‌ಎಸ್‌ ಆಗಲೀ, ಜೀವನ ಚರಿತ್ರಾಕಾರರಾಗಲೀ ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ನೆಹರೂ ಜೀವನಚರಿತ್ರಾಕಾರರ ಕೃತಿಗಳಲ್ಲಾಗಿರಬಹುದು, ನೆಹರೂ ಬರಹಗಳಲ್ಲಾಗಿರಬಹುದು- ಎಲ್ಲಾದರೂ ಇಂತಹದೊಂದು ಕ್ಷಮಾಪಣಾ ಪತ್ರದ ದಾಖಲೆ ಇದ್ದರೆ ಬಿಡುಗಡೆ ಮಾಡಬೇಕು. ಇಲ್ಲದೆ ಇರುವ ಇತಿಹಾಸಕ್ಕೆ ಪ್ರತಿಕ್ರಿಯೆ ನೀಡುವುದಾದರೂ ಹೇಗೆ? ‘ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಪಾತ್ರ’ ಎಂಬ ವಿಷಯವನ್ನು ಹುಡುಕಲು ಸಾಧ್ಯವೇ? ಇಲ್ಲದೆ ಇರುವುದನ್ನು ಹೇಗೆ ಹೇಳಲಿ? ನೆಹರೂ ಅವರಷ್ಟು ಜೈಲು ವಾಸವನ್ನು ಆರ್‌ಎಸ್‌ಎಸ್‌ನವರು ಯಾರೂ ಅನುಭವಿಸಿಲ್ಲ. ನೆಹರೂ ಅವರ ಕುರಿತು ವಿಮರ್ಶಾತ್ಮಕವಾಗಿ ನೋಡಲು ಸಾಕಷ್ಟು ವಿಷಯಗಳಿವೆ. ಆದರೆ ಈ ರೀತಿಯಲ್ಲಿ ಆಪಾದಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕಾಲಾಪಾಣಿ ಶಿಕ್ಷೆ ಸಾವರ್ಕರ್ ಮಾತ್ರ ಅನುಭವಿಸಿದ್ದಾರಾ…?
    ಕಾಲಾಪಾಣಿ ಶಿಕ್ಷೆ ಅನುಭವಿಸಿದ್ದವರೆಲ್ಲರೂ ಕ್ಷಮಾಪಣೆ ಕೇಳಿದ್ದಾರಾ. ಕ್ಷಮಾಪಣೆ ಕೇಳಿದ್ದರೆ ಭಗತ್ ಸಿಂಗ್ ಗಲ್ಲು ಶಿಕ್ಷೆ ಆಗುತ್ತಿರಲಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...