HomeUncategorizedHijab | ಹಿಜಾಬ್‌ ಅರ್ಜಿ ವಿಚಾರಣೆ ಪ್ರಾರಂಭ: ಸಂವಿಧಾನ ನನಗೆ ಭಗವದ್‌ಗೀತೆಗಿಂತ ಮೇಲೆ: ನ್ಯಾಯಮೂರ್ತಿ ಕೃಷ್ಣ...

Hijab | ಹಿಜಾಬ್‌ ಅರ್ಜಿ ವಿಚಾರಣೆ ಪ್ರಾರಂಭ: ಸಂವಿಧಾನ ನನಗೆ ಭಗವದ್‌ಗೀತೆಗಿಂತ ಮೇಲೆ: ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್

ಹಿಜಾಬ್‌ ಧರಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ನಡೆದ ವಾದಗಳಸಂಕ್ಷಿಪ್ತ ವಿವರಣೆ

- Advertisement -
- Advertisement -

ಉಡುಪಿ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನೀಡುವಂತೆ ಕೋರಿ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ನಡೆಸುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ.

ಹಿಜಾಬ್ ಧರಿಸಿದ ಏಕೈಕ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕ ತಾರತಮ್ಯ ಮಾಡುತ್ತಿವೆ ಎಂದು ಅರ್ಜಿದಾರ ವಿದ್ಯಾರ್ಥಿಗಳು ವಾದಿಸಿದ್ದಾರೆ.

ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, “ಎಲ್ಲಾ ಭಾವನೆಗಳನ್ನು ಬದಿಗಿರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಸಂವಿಧಾನ ನನಗೆ ಭಗವತ್‌ ಗೀತೆಗಿಂತ ಮೇಲೆ. ನಾನು ಸಂವಿಧಾನಕ್ಕೆ ನೀಡಿರುವ ಪ್ರಮಾಣ ವಚನಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಶಮ್ ಫಾರೂಕ್ ಸಲ್ಲಿಸಿರುವ ಅರ್ಜಿಯಲ್ಲಿ ಸಂವಿಧಾನದ 14 ಮತ್ತು 25ನೇ ವಿಧಿಯಡಿ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿರುವ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಸರ್ಕಾರದ ಪರವಾಗಿ ವಾದಿಸುತ್ತಿದ್ದು, ವಿದ್ಯಾರ್ಥಿನಿಯರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್‌ ಮತ್ತು ಮೊಹಮ್ಮದ್ ತಾಹೀರ್‌ ವಾದಿಸುತ್ತಿದ್ದಾರೆ.

ಸರ್ಕಾರದ ಪರವಾರಿ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ, “ಶೈಕ್ಷಣಿಕ ಸಂಸ್ಥೆಯಲ್ಲಿ ಹಿಜಾಬ್‌ ಧರಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಿ. ಸಕಾರವು ಕಾಲೇಜು ಅಭಿವೃದ್ದಿ ಮಂಡಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿದ್ದೇವೆ” ಎಂದು ಹೇಳಿದ್ದಾರೆ.

ಈಗ ಎರಡು ತಿಂಗಳವರೆಗೆ ಯಥಾಸ್ಥಿತಿ ಕಾಪಾಡಿ ಎಂದು ವಕೀಲ ದೇವದತ್‌ ಅವರು ಹೇಳಿದ್ದು, “ಹಿಜಾಬ್‌ ಧರಿಸುವುದು ಇದು ಇಸ್ಲಾಮ್‌ ಧರ್ಮದ ಸಂಪ್ರದಾಯ. ನಮ್ಮ ಮೊದಲ ಕೋರಿಕೆ, ಶಿರವಸ್ತ್ರ ಅಥವಾ ಹಿಜಾಬ್‌ ಧರಿಸುವುದು. ಪವಿತ್ರ ಕುರಾನ್‌ ಪ್ರಕಾರ ಇದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ” ಎಂದು ಹೇಳಿದ್ದಾರೆ.

“ಎರಡನೆ ಮನವಿ, ಇಷ್ಟವಿರುವ ಬಟ್ಟೆ ಧರಿಸುವುದು ಸಂವಿಧಾನದ 19(ಎ) ಅಡಿ ನೀಡಿರುವುದಾಗಿದ್ದು 19(6) ಅಡಿ ಮಾತ್ರವೇ ಅದನ್ನು ನಿರ್ಬಂಧಿಸಬಹುದು. ಅಭಿವ್ಯಕ್ತಿಯ ಸ್ವಾತಂತ್ರ್ಯವು ಏನನ್ನು ಧರಿಸಬಹುದು ಎನ್ನುವುದನ್ನು ಒಳಗೊಳ್ಳುತ್ತದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಖಾಸಗಿ ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು. ವಸ್ತ್ರಧರಿಸುವ ಹಕ್ಕು ಇದರಡಿಯೇ ಬರುತ್ತದೆ” ಎಂದು ವಾದಿಸಿದ್ದಾರೆ.

ಈ ಮಧ್ಯೆ ಅರ್ಜಿದಾರರ ಪರವಾಗಿರುವ ವಕೀಲ ತಾಹಿರ್‌ ಅವರು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಓದಿದ್ದಾರೆ. ಇದೇ ವೇಳೆ ನ್ಯಾಯಾಲಯವು ನ್ಯಾಯಮೂರ್ತಿಗಳಿಗೆ ನೀಡಲಾದ ಗ್ರಂಥಾಲಯದಿಂದ ತಂದ ಕುರಾನ್‌ನ ಪ್ರತಿಯು ಅಧಿಕೃತ ಪ್ರತಿಯೇ ಎಂದು ಖಚಿತಪಡಿಸಿಕೊಳ್ಳಲು ಮುಂದಾಯಿತು.

“ಸರ್ಕಾರದ ಆದೇಶವು ಕರ್ನಾಟಕ ಶಿಕ್ಷಣ ನಿಯಮಾವಳಿಗಳ ವ್ಯಾಪ್ತಿಯ ಅಚೆಗಿದೆ. ಹಾಗಾಗಿ ಅದು ಇಂತಹ ಆದೇಶ ಹೊರಡಿಸುವ ವ್ಯಾಪ್ತಿಯನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ಈ ಹಿಂದಿನ ಅದೇಶವೊಂದನ್ನು ನ್ಯಾಯಾಲಯದ ಮುಂದಿರಿಸಿದ ಅವರು, “ಸರ್ಕಾರವು ಯಾವುದು ಧರ್ಮದ ಅಗತ್ಯ ಅಚಾರ, ಯಾವುದಲ್ಲ ಎನ್ನುವುದನ್ನು ಹೇಳಲಾಗದು. ಅದು ನ್ಯಾಯಾಂಗದ ಪರಿಮಿತಿಗೆ ಬರುವಂಥದ್ದು. ಈ ಹಿಂದಿನ ಆದೇಶದಂತೆ, ಇಲ್ಲಿ ಪರೀಕ್ಷೆ ಎಂದರೆ, ಅಂತಹ ಆಚರಣೆಯನ್ನು ಧರ್ಮದಿಂದ ಹೊರಗಿಟ್ಟರೆ ಆಗ ಅಂತಹ ಧರ್ಮದ ಮೂಲರಚನೆಯಲ್ಲಿ ವ್ಯತ್ಯಾಸವಾಗುತ್ತದೆಯೇ ಎನ್ನುವುದು. ಧಾರ್ಮಿಕ ಆಚರಣೆಗಳನ್ನು ಧಾರ್ಮಿಕ ಅಧಿಕಾರದಿಂದ ಹೊರತಾದ ಜಾತ್ಯತೀತ ತತ್ವಗಳಿಂದ ಪರೀಕ್ಷಿಸಲಾಗದು. ಹಾಗಾಗಿ, ಧರ್ಮಕ್ಕೆ ಏನು ಅಗತ್ಯ ಏನಲ್ಲ ಎನ್ನುವುದನ್ನು ನಮ್ಮ ಜಾತ್ಯತೀತ ಆಲೋಚನೆಗಳು ನಿರ್ಧರಿಸಲಾಗದು” ಎಂದು ಹೇಳಿದ್ದಾರೆ.

“ಋತುಮತಿಯಾದ ನಂತರ ಹೆಣ್ಣು ತನ್ನ ಮುಖ ಹಾಗೂ ಕೈಗಳನ್ನು ಅಪರಿಚಿತರಿಗೆ ತೋರಿಸುವುದು ಸರಿಯಲ್ಲ” ಎಂದು ಕೇರಳ ಹೈಕೋರ್ಟ್‌ ತೀರ್ಪಿನಲ್ಲಿರುವ ಹದೀಸ್‌ ಒಂದನ್ನು ದೇವದತ್‌ ಕಾಮತ್ ಉಲ್ಲೇಖಿಸಿದ್ದಾರೆ.

‘‘ಕರ್ನಾಟಕ ಸರ್ಕಾರದ ಆದೇಶವು ಕೇರಳ ಹೈಕೋರ್ಟ್‌ನ ತೀರ್ಪಿನಲ್ಲಿ ಹೇಳಿರುವಂತೆ ಧರ್ಮಕ್ಕೆ ಯಾವುದು ಅಗತ್ಯವಲ್ಲ ಎನ್ನುವ ಅಂಶದಿಂದ ಕೂಡಿದ್ದು ಹಿಜಾಬ್‌ ಅಗತ್ಯವಲ್ಲ ಎನ್ನುತ್ತದೆ. ಆದರೆ, ಈ ತೀರ್ಪು ಇದಕ್ಕೆ ಅನ್ವಯವಾಗದು. ಏಕೆ ಅನ್ವಯವಾಗುವುದಿಲ್ಲ ಎಂದರೆ ಅದು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಬಗ್ಗೆ ಅಗಿರಲಿಲ್ಲ. ಬದಲಿಗೆ ಖಾಸಗಿ ಕ್ರಿಶ್ಚಿಯನ್‌ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ್ದಾಗಿತ್ತು” ಎಂದು ವಾದಿಸಿದ್ದಾರೆ.

ಈ ವೇಳೆ ವಕೀಲ ಕಾಳೀಶ್ವರಮ್‌ ರಾಜ್‌ ಅವರಿಂದ ಮಧ್ಯಪ್ರವೇಶ ಕೋರಿ ಮನವಿ ಮಾಡಿದ್ದಾರೆ. ತಾವು ಅಗತ್ಯವಿರುವ ಧಾರ್ಮಿಕ ಆಚರಣೆಗಳ ಬಗ್ಗೆ ಬರೆದಿರುವುದಾಗಿ ಮಾಹಿತಿ ನೀಡಿದ್ದು. ತನ್ನ ವಾದಕ್ಕೆ ಹದಿನೈದು ನಿಮಿಷ ಅವಕಾಶ ಕಲ್ಪಿಸಲು ಕೋರಿಕೆ ಸಲ್ಲಿಸಿದ್ದಾರೆ.

ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿರುವುದರಿಂದ ತಾನು ವಿಚಾರಣೆಯನ್ನು ಆಲಿಸುತ್ತಿರುವುದಾಗಿ ಕಾಳೀಶ್ವರಮ್‌ ರಾಜ್ ಹೇಳಿದ್ದಾರೆ. ಅವರ ವಾದ ಮಂಡಲಿಸಲು ನ್ಯಾಯಮೂರ್ತಿ ದೀಕ್ಷಿತ್ ಅವರು ಅನುಮತಿ ನೀಡಿದ್ದು, ವಿಚಾರಣೆಯನ್ನು ಮೂರು ಗಂಟೆಗೆ ಮುಂದೂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....